ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : ಅದೂಊಊ ಕೈ ಎಲ್ಲ ಕೆಸರಾಗಿದ್ರೆ ಕೈ ತೊಳ್ಕೊಂಡು ಮೊಸರು ತಿನ್ಬೇಕು!

ಭಾಷೆಯೊಂದು ಮನುಷ್ಯನ ಬದುಕಿನ ಭಾಗವಾಗುವುದರ ಬದಲು ಬದುಕಿನ ಗತಿಯನ್ನೇ ನಿರ್ದೇಶಿಸಲು ಪ್ರಾರಂಭಿಸುತ್ತದಲ್ಲ, ಅದು ಬದುಕಿನ ದುರಂತವೇ ಸರಿ ಅನ್ನಿಸುತ್ತದೆ. ಯಾವುದೇ ದೇಶದಲ್ಲಿ ಮಾತೃಭಾಷೆಯಲ್ಲಿ ವ್ಯವಹರಿಸುವುದು, ಮಾತನಾಡುವುದು ಎಲ್ಲವೂ ಮಾಮೂಲಾಗಿದ್ದರೆ ನಾವು ಮಾತ್ರ ಭಯಂಕರ ಇಂಗ್ಲೀಷ್ ವ್ಯಾಮೋಹಿಗಳು. ಇಂಗ್ಲಿಷ್ ಬದುಕಿಗೆ ಬೇಕೇ ಬೇಕು ಅನ್ನುವುದರಲ್ಲಿ ದೂಸರಾ ಮಾತಿಲ್ಲದಿದ್ದರೂ ಇಂಗ್ಲಿಷ್ ಬಾರದವ ಬದುಕಲೇ ಅನರ್ಹ ಅನ್ನುವ ಹಾಗೆ ನೋಡುತ್ತೇವಲ್ಲ, ಅದು ನಮಗೆ ಮಾತ್ರ ಅಂಟಿದ ಖಾಯಿಲೆಯೇ ಇರಬೇಕು ಅನ್ನಿಸುತ್ತದೆ. ನಮ್ಮ ಕನ್ನಡನಾಡಿನಲ್ಲಿ ‘ಕನ್ನಡ ಉಳಿಸಿ’ … ‘ಕನ್ನಡ ನಾಡಿನಲ್ಲಿ ಕನ್ನಡಕ್ಕೇ ಆದ್ಯತೆ’ ಅಂತೆಲ್ಲ ಬರೆದಿರುವ ಗೋಡೆಬರಹಗಳನ್ನು ಓದಿದಾಗ ಅಳಬೇಕೋ, ನಗಬೇಕೋ ಗೊತ್ತಾಗದಷ್ಟು ವಿಷಾದವೆನ್ನಿಸುತ್ತದೆ. ಯಾವುದೋ ಬೇರೆ ದೇಶಕ್ಕೆ ಹೋಗಿ ನಮ್ಮ ಹಕ್ಕುಗಳಿಗೆ ಬೇಡಿಕೆ ಇಡುವ ಹಾಗೆ ನಮ್ಮ ನೆಲದಲ್ಲೇ ಬೇಡುವ ನಮ್ಮ ಮನಃಸ್ಥಿತಿ!
ಹಳ್ಳಿಗಳಲ್ಲಿ ಸರಕಾರಿ ಶಾಲೆಯಲ್ಲಿ ಏಳನೆಯ ತರಗತಿಯವರೆಗೆ ಓದಿ ಬೆಂಗಳೂರಿಗೆ ಕಾಲಿಟ್ಟ ನನ್ನಂತವರ ಬದುಕು ದೇವರಿಗೇ ಪ್ರೀತಿ. ಹಳ್ಳಿಯಲ್ಲಿ ನಾನೇ ಸಿಕ್ಕಾಪಟ್ಟೆ ಬ್ರಿಲಿಯೆಂಟ್ (?!) ಅನ್ನಿಸಿಕೊಂಡಿದ್ದಂತವಳು ಬೆಂಗಳೂರಿಗೆ ಬಂದು, ಇಂಗ್ಲಿಷ್ ಬರುವುದಿಲ್ಲ ಅನ್ನುವ ಒಂದೇ ಕಾರಣಕ್ಕೆ ಗುಂಪಿನಲ್ಲಿ ಗೋವಿಂದಿಯಾದೆನಲ್ಲ, ಅದು ಸಾಮಾನ್ಯದ ನೋವಲ್ಲ. ಇದು ಬರೀ ನನ್ನೊಬ್ಬಳ ಕಥೆಯಲ್ಲ, ಬಹುಶಃ ನನ್ನ ಜನರೇಶನ್‌ನ ಸುಮಾರು ಜನರ ಕಥೆಯೂ ಇದೇ ಆಗಿರುತ್ತದೆ. ಮೊದಲಿಗೆ ಕಿರಿಯ, ನಂತರ ಹಿರಿಯ ಸರಕಾರಿ ಶಾಲೆಗಳಲ್ಲಿ ಓದಿದ ನಾನು ಬೆಂಗಳೂರಿನಲ್ಲಿ ಇಂಗ್ಲಿಷ್ ಮೀಡಿಯಮ್ ಸ್ಕೂಲಿಗೆ ಸೇರಿದೆ. ಕನ್ನಡ ಮೀಡಿಯಮ್‌ನಲ್ಲಿ ಎರಡೆರ್ಡ್ಲ ನಾಕು … ಎರಡ್ಮೂರ್ಲ ಆರು … ಅಂತ ರಾಗವಾಗಿ ಹಾಡುತ್ತಾ ಮಗ್ಗಿ ಹೇಳುತ್ತಿದ್ದ ನನಗೆ ಟ್ವೆಲ್ವ್ ಟೂಜ಼ಾ ಟ್ವೆಂಟಿ ಫ಼ೋರ್ ಅನ್ನುವುದರಲ್ಲಿ ಕುರಿ ಕೋಣ ಬಿದ್ದು ಹೋಗುತ್ತಿತ್ತು. ಮಗ್ಗಿಯೆನ್ನುವುದರ ಕಡೆ ಗಮನ ಕಡಿಮೆಯಾಗಿ, ಭಾಷೆಯ ಕಡೆಗೆ ಜಾಸ್ತಿ ಗಮನ ಕೊಡಬೇಕಾಗಿ ಬಂದು ಕೊನೆಗೆ ಮಗ್ಗಿಯೂ ಉಳಿಯಲಿಲ್ಲ, ಭಾಷೆಯೂ ಬೆಳೆಯಲಿಲ್ಲ ಅನ್ನುವಂತ ಸ್ಥಿತಿ.
ಮುಂಚೆ ಇದ್ದ ಹಳ್ಳಿಯಲ್ಲೋ ನಮ್ಮ ಇಂಗ್ಲಿಷ್ ಮೇಷ್ಟರಿಗೇ ಸರಿಯಾಗಿ ಇಂಗ್ಲಿಷ್ ಬಾರದು. Statue ಅಂದರೆ circle ಅಂತ ಹೇಳಿಕೊಡುತ್ತಿದ್ದರು! ಅಪರೂಪಕ್ಕೆ ಅದೊಂದು ಪದದ ಅರ್ಥ ಗೊತ್ತಿದ್ದ ನಾನು statue ಅಂದರೆ ಪ್ರತಿಮೆ ಅಂತ ಅವರನ್ನು ಕರೆಕ್ಟ್ ಮಾಡಿ ಅವರಿಗೆ ಅವಮಾನವಾದಂತೆನ್ನಿಸಿ, ಅವರ ಕೆಂಗಣ್ಣಿಗೂ ಮತ್ತು ಸಹಪಾಠಿಗಳ ಮೆಚ್ಚುಗೆಗೂ ಪಾತ್ರಳಾಗಿದ್ದೆ. ಅಂಥಾ ನಾನು ಬೆಂಗಳೂರಿನ ಇಂಗ್ಲಿಷ್ ಮೀಡಿಯಮ್ ಒಳಹೊಕ್ಕಾಗ ಆದ ಅವಮಾನ, ಕೀಳರಿಮೆ ಎಲ್ಲ ನೆನೆಸಿಕೊಂಡರೆ ಅದೆಲ್ಲ ಯಾವುದೋ ಜನ್ಮದಲ್ಲಿ ನಡೆದದ್ದು ಅನ್ನಿಸಿಬಿಡುತ್ತದೆ.
ನಾನು ತುಂಬ ಉದ್ದ ಇದ್ದುದ್ದರಿಂದ ಕುಳ್ಳಾಗಿ ಕಾಣಲು ಒಂದು ಕಾಲನ್ನು ಸ್ವಲ್ಪ ಬಗ್ಗಿಸಿ ನಿಲ್ಲುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದೆ. ರಾಷ್ಟ್ರಗೀತೆ ಹಾಡುವುದಕ್ಕೆ ಸಾಲಿನಲ್ಲಿ ನಿಲ್ಲಿಸಿದಾಗಲೂ ಅದೇ ಸೊಟ್ಟಗೆ ನಿಲ್ಲುವ ಅಭ್ಯಾಸ. ಆಗ ನಮ್ಮ ಇಂಗ್ಲಿಷ್ ಟೀಚರ್ ಬಂದು don’t bend like that ಅನ್ನುವಾಗ (ಅದನ್ನು ಅಂದರು ಅಂತ ಗೊತ್ತಾಗಿದ್ದೂ ತುಂಬ ದಿನ ಕಳೆದ ಮೇಲೆ!) ನಾನು ಯಾವುದೋ ಬೇರೆ ಗ್ರಹದ ಭಾಷೆ ಆಡುತ್ತಿದ್ದಾರೆ ಅನ್ನುವಂತೆ ಅವರನ್ನೇ ನೋಡುತ್ತಾ ನಿಲ್ಲುತ್ತಿದ್ದೆ. Principal ಮತ್ತು principle ಎರಡರ ವ್ಯತ್ಯಾಸ ಗೊತ್ತಿಲ್ಲದೇ ಕೊನೆಯ ಎರಡು ಅಕ್ಷರ ಖಾಲಿ ಬಿಟ್ಟು ಮೆತ್ತಗೆ ಅಕ್ಕ-ಪಕ್ಕದವರ ಪುಸ್ತಕದ ಕಡೆ ನೋಡಿ ಕಾಪಿ ಹೊಡೆದು ತುಂಬಿಸುತ್ತಿದ್ದೆ. The ಅನ್ನು ‘ದ’ ಅಂತ ಸ್ಟೈಲಾಗಿ ಹೇಳಲು ಬಾರದ ನಾನು ‘ದಿ’ ಅಂತ ಹಳ್ಳಿಯ accent ನಲ್ಲಿ ಓದಿ ನಗೆಪಾಟಲಾಗುತ್ತಿದ್ದೆ. ಯಾರೋ ಸಂಸ್ಕೃತ ತೆಗೆದುಕೊಂಡರೆ ಜಾಸ್ತಿ ಮಾರ್ಕ್ಸ್ ಬರುತ್ತೆ, ಕನ್ನಡದ ಮೇಷ್ಟರು ಜಿಪುಣರು ಅಂದಿದ್ದು ಕೇಳಿ ಮೊದಲ ಭಾಷೆಯಾಗಿ ಸಂಸ್ಕೃತ ಆಯ್ದುಕೊಂಡ ಮೂರ್ಖಳೂ ಆಗಿದ್ದೆ. ಆ ಸಂಸ್ಕೃತವೋ ಕಬ್ಬಿಣದ ಕಡಲೆ. ಇಡೀ ಏಳು ವರ್ಷ ಓದಿದರೂ ಸಾಮಾನ್ಯ ವ್ಯಾಕರಣ ಕೂಡ ಕಲಿಯಲು ನನ್ನಿಂದ ಆಗಲಿಲ್ಲ. ಉಳಿದ ಎಲ್ಲ ಸಬ್ಜೆಕ್ಟ್‌ಗಳೂ ಇಂಗ್ಲಿಷ‌ನಲ್ಲಿರುತ್ತಿದ್ದರಿಂದ ಯಾವುದೂ ಅರ್ಥವಾಗುತ್ತಿರಲಿಲ್ಲ. ಅರ್ಥವಾಗುತ್ತಿದ್ದ ಒಂದೇ ಭಾಷೆಯೆಂದರೆ ಮೂರನೆಯ ಭಾಷೆಯಾದ ಕನ್ನಡವೊಂದೇ. ಹಾಗಾಗಿ ತಲೆಯಲ್ಲಿನ ಯಾವ ಬುದ್ಧಿವಂತಿಕೆಯೂ ಅಕ್ಷರ ರೂಪ ತಾಳದೇ ಹೋಗಿ ತಿಣುಕುತ್ತಾ ಒಂದು ಫ಼ಸ್ಟ್ ಕ್ಲಾಸ್ ತೆಗೆಯುವಷ್ಟರಲ್ಲಿ ಹಿಮಾಲಯ ಹತ್ತಿದಷ್ಟು ಸುಸ್ತಾಗುತ್ತಿದ್ದೆ.
ಮೊದಲಿಗೆ ಇಂಗ್ಲಿಷ್ ಮೀಡಿಯಮ್ ಸೇರಿದ್ದು ಎಂಟನೆಯ ಕ್ಲಾಸಿಗೆ. ಅಕ್ಕ ಪಾಪ ಹತ್ತನೆಯ ಕ್ಲಾಸು-ಕನ್ನಡ ಮೀಡಿಯಮ್ಮು. ನಾನು ಇಂಗ್ಲಿಷ್ ಮೀಡಿಯಮ್ ಸೇರಿದ ಕೂಡಲೇ ಶೇಕ್ಸ್‌ಪಿಯರ್ ಆಗಿಹೋದಂತ ಭ್ರಮೆ. ಅವತ್ತೊಂದು ದಿನ ನನಗೆ ಇವತ್ತಿಗೂ ನೆನಪಿದೆ. ತುಂಬ ನಗು ತರುವಂತ ಜೋಕುಗಳಿದ್ದರೆ ಅದನ್ನು ಬೇರೆಯವರಿಗೂ ಓದಿ ಹೇಳುವುದು ನನ್ನ ಅಭ್ಯಾಸ. ಮಯೂರದಲ್ಲಿ ಏನೋ ಒಂದು ಜೋಕ್ ಬಂದಿತ್ತು. ಅಕ್ಕ, ಅಮ್ಮನಿಗೆ ಹೇಳಬೇಕು ಅಂತ ಓದಲು ಕೂತೆ. ಆದರೆ ನಾನೀಗ ಕನ್ನಡ ಸರಸ್ವತಿ ಭಾರತಿಯಲ್ಲ, ಇಂಗ್ಲಿಷ್ ಶೇಕ್ಸ್‌ಪಿಯರ್ ಅಂತ ನನಗೇ ಅರಿವಿಲ್ಲದ ಹಾಗೆ ಒಂದು ಕೋಡು ಮೂಡಿತ್ತು. ಅದರ ಪರಿಣಾಮವಾಗಿ ನಾನು ಆ ಜೋಕನ್ನು ಇಂಗ್ಲಿಷ್ ಸ್ಟೈಲಿನಲ್ಲಿ ಹೇಳಲು ಶುರುವಿಟ್ಟುಕೊಂಡೆ! ‘ನಾಪಿತನು ಅಲ್ಲಿಗೆ ಬಂದು ಕುಳಿತಿದ್ದ ಗಿರಾಕಿಯನ್ನು ನೋಡಿ ….’ ಅಂತೇನೋ ಇದ್ದ ಜೋಕ್ ಅದು. ನಾನು ಅದನ್ನು ಓದಿದ್ದು ನ್ಯಾಪಿತಾನು ಅಲಿಗೆ ಬಾಂದು ಕುಲಿತಿದ ಗಿರಾಆಆಕಿಯನು ನ್ಯೋಡಿ ….ಅಂತ ನಮ್ಮ ಸಿನೆಮಾಗಳಲ್ಲಿ ಬ್ರಿಟಿಷ್ ಅಧಿಕಾರಿಗಳ ಬಾಯಲ್ಲಿ ಕನ್ನಡ ಮಾತಾಡಿಸುತ್ತಾರಲ್ಲ, ಆ ಥರ ಪೂರಾ ಓದಿ ಮುಗಿಸಿ ಅಮ್ಮ, ಅಕ್ಕನ ಕಡೆ ನೋಡಿದರೆ ಇಬ್ಬರೂ ಬಾಯಿಗೆ ಬಟ್ಟೆ ತುರುಕಿಕೊಂಡು ನಗು ತಡೆಯಲೆತ್ನಿಸುತ್ತಿದ್ದಾರೆ! ನಾನು ಅವಮಾನದಿಂದ ಯಾಕೆ ನಗ್ತಿದೀರಾ ಅಂತ ಪ್ರಶ್ನಿಸುವಷ್ಟರಲ್ಲಿ ಅಕ್ಕ ‘ನ್ಯಾಪಿತನು …’ ಅಂತ ನನ್ನ ಸ್ಟೈಲಿನಲ್ಲಿ ಅಣಕಿಸಲು ಶುರು ಮಾಡಿದ್ದಳು! ಆಮೇಲೆ ಇಬ್ಬರೂ ಅದನ್ನು ನೆನೆಸಿ, ನೆನೆಸಿ ಘಂಟೆಗಟ್ಟಳೆ ನಕ್ಕಿದ್ದರು. ಅವತ್ತು ಆದ ಅವಮಾನ ಇವತ್ತೂ ಹಸಿರಾಗಿದೆ. ಅಲ್ಲಿಂದ ಮುಂದೆ ನಾನು ಮತ್ತೆ ಶೇಕ್ಸ್‌ಪಿಯರ್ ಆಗುವ ಗೋಜಿಗೆ ಹೋಗಲಿಲ್ಲ.

ಈ ಒಣ ಜಂಭಕ್ಕೆ ಅವತ್ತೇ ಬೈ ಹೇಳಿದೆ. ಸುಮಾರು ವರ್ಷ ತಿಣುಕಿದ ನಂತರ ಇಂಗ್ಲೀಷಿನಲ್ಲಿ ಓದುವುದು, ಬರೆಯುವುದು ಸುಲಭವಾಯಿತಾದರೂ, ಇಂಗ್ಲಿಷಿನಲ್ಲಿ ಮಾತಾಡಬೇಕೆಂದರೆ ಜೀವ ಬಾಯಿಗೆ ಬರುತ್ತಿತ್ತು. ಕೊನೆಗೂ ಇಂಗ್ಲಿಷ್ ಮಾತಾಡಲು ಸಾಧ್ಯವಾಗಿದ್ದು ವ್ಯವಹಾರವನ್ನೆಲ್ಲ ಇಂಗ್ಲಿಷಿನಲ್ಲೇ ಮಾಡಬೇಕಾಗಿ ಬಂದ ಅನಿವಾರ್ಯ ಪರಿಸ್ಥಿತಿ ಎದುರಾದಾಗಲೇ. ಆದರೆ ಕನ್ನಡ ಮಾತನಾಡುವಾಗ ಮಾತ್ರ ಶುದ್ಧ ಕನ್ನಡದಲ್ಲೇ ಮಾತಾಡುವ ಅಭ್ಯಾಸ ಬೆಳೆಸಿಕೊಂಡೆ. ಒಂದು ಸಲ ನಮ್ಮನೆಗೆ ಕೆಲಸದವಳನ್ನು ಹುಡುಕುತ್ತಿದ್ದೆ. ಇಂಟರ್‌ವ್ಯೂಗೆ ಬಂದಾಕೆಯೊಬ್ಬಳಿಗೆ terms and conditions ವಿವರಿಸುವಾಗ ‘ತಿಂಡಿ ಕೊಡ್ತೀನಿ ಅಂತ ಭರವಸೆ ಇಲ್ಲಮ್ಮ’ ಅಂದಾಗ ಅವಳು ‘ಅದೇನಾ … ಅದೇನೋ ಅಂದ್ರಲ್ಲಾ ಭರೋಶೆ …?’ ಅಂತ ಕಣ್ಣು ಬಾಯಿ ಬಿಟ್ಟು ನಿಂತಳು. ನಾನು ‘ತಿಂಡಿ ಕೊಡ್ತೀನಿ ಅಂತ ಗ್ಯಾಂರಂಟಿ ಇಲ್ಲ ಅಂದೆ’ ಅಂತ ವಿವರಿಸಿದಾಗ ‘ಹಂಗನ್ನಿ ಮತ್ತೆ’ ಅಂತ ನನ್ನನ್ನು ಕನಿಕರದಿಂದ ನೋಡುತ್ತಾ ಹೇಳಿದ್ದಳು! ಈಗ ನಮ್ಮ ಮನೆಯ ಕೆಲಸದಾಕೆ ಯಾರಾದರೂ ಫೋನ್ ಮಾಡಿದರೆ ‘ಗುಡ್ ಮಾರ್ನಿಂಗ್ ಅಮ್ಮಾ …’ ಅಂತ ಮಾತು ಶುರು ಮಾಡುತ್ತಾರೆ!
ಮೊಮ್ಮಗನ ಪಾಂಡಿತ್ಯ ಪ್ರದರ್ಶನ ಮಾಡುವಾಗ ‘ಪಪ್ಪ ಎಲ್ಲಿ ಹೋದ್ರಪ್ಪ … ಡ್ಯಾಡಿ ಏನು ತಂದುಕೊಟ್ರು ಆಂಟಿಗೆ ಹೇಳಪ್ಪಾ’ ಅನ್ನುತ್ತಾರೆ. ತರಕಾರಿ, ಹಣ್ಣು ಮಾರುವವರು ಈಗೀಗ ಕ್ಯಾಪ್ಸಿಕಮ್, ಬ್ರಿಂಜಾಲ್, ಕುಕುಂಬರ್ ಮುಂತಾದವನ್ನೇ ಮಾರುವುದು. ಕಿತ್ತಳೆ, ಸೇಬಿಗೆ ಎಷ್ಟು ಅಂತ ವಿಚಾರಿಸಿದಾಗ ಪಾಪ ಅನ್ನುವಂತೆ ನನ್ನನ್ನು ನೋಡುತ್ತಾ ‘ಆರೆಂಜ್ ಸಿಕ್ಸ್ಟಿ ರುಪೀಸ್ ಅಮ್ಮಾ’ ಅನ್ನುತ್ತಾರೆ … ಸಧ್ಯ ಮಮ್ಮಿ ಅನ್ನುವುದಿಲ್ಲವಲ್ಲ ಅನ್ನುವುದೇ ನನಗೆ ದೊಡ್ಡ ಖುಷಿ! ಕನ್ನಡದ ಬಗ್ಗೆ ತುಂಬ ಪ್ರೀತಿಯಿದ್ದ ಮತ್ತು ಇಂಗ್ಲಿಷಿನಲ್ಲಿ ಆ ಅಂದರೆ ಠೋ ಅನ್ನಲು ಬಾರದ ನನ್ನಂತವಳು ಕನ್ನಡವನ್ನು ಇಂಗ್ಲಿಷ್ accent ನಲ್ಲಿ ಓದಲು ಪ್ರಯತ್ನಿಸಿ ನಗೆಪಾಟಲಾಗಿದ್ದು ಮತ್ತು ಈ ಕುಕುಂಬರ್, ಆರೆಂಜ್ ರೀತಿಯ ಉಳಿದ ಜನರೆಲ್ಲರ ಮನಃಸ್ಥಿತಿಗೂ ಒಂದೇ ಕಾರಣ … ನಾವು ಕೀಳರಿಮೆಗೆ ಮೇಲರಿಮೆಯ ಪರದೆ ತೊಡಿಸಿ ಜಗತ್ತಿನೆದುರು ನಿಲ್ಲಲು ಪ್ರಯತ್ನಿಸುವಾಗ ಇಂಥ ಮೂರ್ಖ ಮತ್ತು ಆಭಾಸದ ಚಟಕ್ಕೆ ಬೀಳುತ್ತೇವೆ ಅಷ್ಟೇ …
ಈ ಇಂಗ್ಲಿಷ್ ವ್ಯಾಮೋಹ ನನ್ನ ಕಾಲದಲ್ಲಿ ಮಾತ್ರವಲ್ಲ, ನನ್ನ ತಾತನ ಕಾಲದಲ್ಲೂ ಇತ್ತು. ನನ್ನ ಚಿಕ್ಕಮ್ಮ ಇಂಗ್ಲೆಂಡಿನಲ್ಲಿದ್ದಳು. ಮೂರು ವರ್ಷದ ನಂತರ ಅವಳು ಭಾರತಕ್ಕೆ ವಾಪಸ್ಸಾದಳು. ಅವಳ ಮಗನಿಗೆ ಆಗ ಮೂರು ವರ್ಷ. ಅವನು ಇಂಗ್ಲೆಂಡಿನಲ್ಲೇ ಹುಟ್ಟಿ, ಬೆಳೆದಿದ್ದರಿಂದ ಅಲ್ಲಿನ accentನಲ್ಲಿ ಇಂಗ್ಲಿಷ್‌ನಲ್ಲಿ ಮಾತಾಡುತ್ತಿದ್ದ. ನಾವು ಚಿಕ್ಕವರಿರುವಾಗಿನಿಂದ ನನ್ನ ತಾತ ಆ ರೀತಿ ನಮಗೆ ಯಾರಿಗೂ ಕೂತು ಕಥೆ ಹೇಳಿದ ನೆನಪು ಇಲ್ಲ. ಆದರೆ ನನ್ನ foreign returned ತಮ್ಮನಿಗೆ ಆ ಭಾಗ್ಯ ಲಭಿಸಿತ್ತು. ಆ ಪಾಪು ಇಂಗ್ಲಿಷ್‌ನಲ್ಲಿ ಮಾತಾಡುವುದು ತಾತನಿಗೆ ಸಿಕ್ಕಾಪಟ್ಟೆ ಥ್ರಿಲ್ ಆಗಿಹೋಗಿತ್ತು. ತಾತನ ಮನೆಯಲ್ಲಿ ಪುರಾಣದ ಕಥೆಗಳ ಕೆಲವು ಫೋಟೋಗಳನ್ನು ಫ್ರೇಮ್ ಹಾಕಿಸಿ ನೇತು ಹಾಕಿದ್ದರಲ್ಲ, ಅದರಲ್ಲಿ ಆನೆಯ ಕಾಲನ್ನು ಮೊಸಳೆಯೊಂದು ಹಿಡಿದಾಗ ವಿಷ್ಣು ಕಾಪಾಡುವಂಥ ಯಾವುದೋ ಕಥೆ ಇತ್ತು. ಪೂರ್ತಿ ಕಥೆ ಕೂಡಾ ನೆನಪಿಲ್ಲ. ಮೊಸಳೆ ಕಾಲನ್ನು ಹಿಡಿದಾಗ ಆನೆ ನಾರಾಯಣಾಆಆಆಆಆ ಅಂತ ಆರ್ತನಾದ ಮಾಡುತ್ತದೆ ಅನ್ನುವ ಕಥೆಯದು. ಆ ಕಥೆಯನ್ನು ನನ್ನ ತಾತ ನನ್ನ ತಮ್ಮನಿಗೆ ಕೂರಿಸಿಕೊಂಡು ಹೇಳಿದ್ದೂ ಹೇಳಿದ್ದೇ. ಆ ಕಥೆ ಹೇಳಿದ ಮೇಲೆ ನನ್ನ ತಮ್ಮನನ್ನು ಆನೆ ಏನಂತ ಕೂಗತ್ತೆ ಅಂತ ನಾವು ಕೇಳಿದರೆ ‘ನಾಆಆಅರಾಆಅಯನಾಆಆಆಆಅ …’ ಅಂತ ಹೇಳುತ್ತಿದ್ದ.
ನನ್ನ ತಾತನಂತೂ ಕತೆ ಹೇಳಿದ್ದಕ್ಕೂ ಸಾರ್ಥಕವಾಯ್ತು ಅನ್ನುವ ಹಾಗೆ ನಗುತ್ತಾ ಕೂತಿರುತ್ತಿದ್ದರು. ಅದು ನಮ್ಮ ಮನೆಯಲ್ಲೇ ಹೀರೋ ಆಗಿಹೋಗಿದ್ದು ಅದು ಇಂಗ್ಲಿಷ್‌ನಲ್ಲಿ ಮಾತಾಡುತ್ತೆ ಅನ್ನುವ ಒಂದೇ ಕಾರಣದಿಂದ! ನಾನಂತೂ ಅದರ ಹತ್ತಿರ ಏನಾದರೂ ಮಾತಾಡುವ ಮುಂಚೆ ಮನಸ್ಸಿನಲ್ಲಿ ಸಾವಿರ ಸಲ ರಿಹರ್ಸಲ್ ಮಾಡಿಕೊಳ್ಳುತ್ತಾ ಕೂತಿರುತ್ತಿದ್ದೆ. ಹಾಲು ಕುಡಿದ್ಯಾ ಅನ್ನಲು ‘you had milk’ ಅನ್ನಬೇಕೋ, ‘you drank milk?’ ಅನ್ನಬೇಕೋ, ‘did you have milk’ ಅನ್ನಬೇಕೋ ಅಂತೆಲ್ಲ ಅಪ್ಪನ ಹತ್ತಿರ ಹೇಳಿಸಿಕೊಂಡ ನಂತರ ತಮ್ಮನ ಎದುರು ನಿಲ್ಲುವಾಗ ಎಲ್ಲ ಮರೆತುಹೋಗಿ milk drink ? ಅಂತ ಕೇಳಿ ಬಿಡುತ್ತಿದ್ದೆ. ಅಲ್ಲಿ ಯಾರೂ ಇಲ್ಲದಿದ್ದರೂ ಅವಮಾನಿತಳಾಗಿ ಕುಗ್ಗುತ್ತಿದ್ದೆ. ಈಗ ಕೂಡಾ ಒಂದೂ ತಪ್ಪಿಲ್ಲದಂತೆ ಮಾತಾಡಬಲ್ಲೆನಾದರೂ ಸ್ಟೈಲಾಗೆಲ್ಲ ಮಾತಾಡುವುದು ಇವತ್ತಿಗೂ ನನಗೆ ಬಾರದು.
ಕನ್ನಡದವಳಾದ ನಾನು ಇಂಗ್ಲಿಷ್ ಬಾರದೇ ಪಟ್ಟ ಪಾಡು ಇದು. ಆದರೆ ನನ್ನ ಮಗ ಓದಿದ್ದೆಲ್ಲ ಇಂಗ್ಲಿಷ್ ಮೀಡಿಯಮ್‌ನಲ್ಲೇ. ಇಂಗ್ಲಿಷ್ ಬಂದೇ ಬರುತ್ತದೆ. ಆದರೆ ಕನ್ನಡ ಕೂಡಾ ಅಷ್ಟೇ ಚೆಂದಕ್ಕೆ ಕಲಿಯಬೇಕು ಅನ್ನುವ ಉದ್ದೇಶದಿಂದ ಕನ್ನಡದ ಚಂದಮಾಮ, ಬಾಲಮಿತ್ರ ತರಿಸಿ ಓದು ಅಂತ ಅವನ ಮುಂದೆ ಗುಡ್ಡೆ ಹಾಕಿದಾಗ ಅವನು ಅದನ್ನು ಉಗುರ ತುದಿಯಲ್ಲೂ ಮುಟ್ಟಲಿಲ್ಲ. ಕನ್ನಡದ ಮೇಲೆ ಹೇಗಾದರೂ ಪ್ರೀತಿ ಕಲಿಸಲೇ ಬೇಕು ಅಂತ ಪಣ ತೊಟ್ಟು ನಾನೇ ಅದನ್ನೆಲ್ಲ ಓದಿ ಓದಿ ಅವನ ತಲೆಗೆ ತುರುಕಲು ಪ್ರಯತ್ನಿಸಿ ಸೋತಿದ್ದೂ ಆಯ್ತು. ಅವನಿಗೆ ನಮ್ಮ ಭಾಷೆಯ ಮೇಲೆ ವ್ಯಾಮೋಹವಿರಲಿ, ಪ್ರೀತಿ ಕೂಡಾ ಹುಟ್ಟಲಿಲ್ಲ. ನಾನು ಬಲವಂತ ಮಾಡಿ ಅದನ್ನು ತುರುಕಲು ಹೋದಷ್ಟೂ ಅವನು ಅದರಿಂದ ವಿಮುಖನಾಗುತ್ತಾ ಹೋದ. ಕನ್ನಡಿಗನಾಗಿ ಕನ್ನಡ ನೆಟ್ಟಗೆ ಬರುವುದಿಲ್ಲವಲ್ಲ ಅಂತ ಅವಮಾನ ಆಗುವ ಸ್ಥಿತಿಯನ್ನೂ ಅವನು ಮೀರಿಬಿಟ್ಟಿದ್ದ. ಪ್ರಬಂಧ ಬರೆಯಲು ಕೊಟ್ಟರೆ ಆಡುಭಾಷೆಯಲ್ಲಿ ನಿರರ್ಗಳವಾಗಿ ಬರೆದು ಬರುತ್ತಿದ್ದ. ‘ನಾವು ಕೈಲಿ ತಿನ್ನಬೌದು, ಸಿಂಹ ಜಿಂಕೇನ ತಿಂತು …’ ಅಂತೆಲ್ಲ ಕೆಟ್ಟಾನುಕೆಟ್ಟ ಕನ್ನಡದಲ್ಲಿ ಪ್ರಬಂಧ ಬರೆಯುವುದನ್ನು ಓದುತ್ತಿದ್ದರೆ ಎದೆ ಒಡೆದಂತಾಗುತ್ತಿತ್ತು. ಅವನಿಗೆ ಸುಮಾರು ಹತ್ತು ವರ್ಷವಾಗಿದ್ದಾಗ ಕನ್ನಡದ ಪರೀಕ್ಷೆಯಲ್ಲಿ ‘ಕೈ ಕೆಸರಾದರೆ ಬಾಯಿ ಮೊಸರು’ ಅನ್ನುವುದನ್ನು ವಿಸ್ತರಿಸಿ ಬರೆಯಲು ಕೊಟ್ಟಿದ್ದರು. ನಾನು ಆತಂಕದಿಂದ ಎಲ್ಲ ಬರೆದೆಯಾ ಅಂತ ವಿಚಾರಿಸಿದಾಗ ‘ಓಓಓಓಓಓ ಎಲ್ಲ ಬರೆದೆ’ ಅಂದ. ಪರವಾಗಿಲ್ವೇ ಅಂತ ಆಶ್ಚರ್ಯ ಪಟ್ಟ ನಾನು ಈ ಗಾದೆಗೆ ಏನು ಬರೆದೆ ಅಂತ ವಿಚಾರಿಸಿದೆ. ‘ಅದೂಊಊ ಮತ್ತೆ ಕೈ ಎಲ್ಲ ಕೆಸರಾಗಿದ್ರೆ ಕೈ ತೊಳ್ಕೊಂಡು ಮೊಸರು ತಿನ್ಬೇಕು ಅಂತ ಬರೆದೆ. We must wash our hands before eating’ ಅಂದಾಗ ನನ್ನ ಸ್ಥಿತಿ ಏನಾಗಿರಬೇಕು ಊಹಿಸಿ!
ಈಗ ಒಂದು ಕಾಲಘಟ್ಟ ಬೋರಲು ಬಿದ್ದಿದೆ. ನನಗೆ ಕನ್ನಡ ಚೆನ್ನಾಗಿ ಬರುವುದರ ಬಗ್ಗೆ ಯಾವತ್ತೂ ಖುಷಿಯಿತ್ತು, ಹೆಮ್ಮೆ ಕೂಡಾ. ಇಂಗ್ಲಿಷ್ ಬರುವುದಿಲ್ಲ ಅಂತ ಮಾತ್ರ ಅವಮಾನ ಪಟ್ಟುಕೊಳ್ಳುತ್ತಿದ್ದೆ. ಈಗ ನನ್ನಂತವರ ಸಂಖ್ಯೆ ಕಡಿಮೆಯಾಗಿ ಕನ್ನಡ ಬರುವುದಿಲ್ಲ ಅಂತ ಹೇಳಿಕೊಳ್ಳಲು ಹೆಮ್ಮೆ ಪಡುವಂತ ಕಾಲಕ್ಕೆ ಬಂದು ಬಿದ್ದಿದ್ದೇವೆ.
ಮುಂದsssss …..?
 

‍ಲೇಖಕರು avadhi

8 August, 2013

ನಿಮಗೆ ಇವೂ ಇಷ್ಟವಾಗಬಹುದು…

18 Comments

  1. Naveen Sagar

    ನಿಮ್ಮ ಬರಹವನ್ನು ಪ್ರತಿವಾರವೂ ಕಾದು ಓದುವಂತಾಗಿದ್ದೇನೆ. ಪ್ರತಿ ಸಾಲೂ ಮನಸಿಗೆ ನೆನಪಿಗೆ ತುಂಬ ಸನಿಹ

  2. sunil rao

    Ha ha ha
    English vyaamohavo athava anivaaryavo gottilla…
    Nam college ge hodre 4gantegala kaala alli kannada period bitre(adralli kannadavanna tamil or english li helkodtaare) yaava shabdhavoo irolla…
    5ne class ge rural schoolalli haaki….nayapaise english barada haage maadiddaa appa…
    Puc ge seridmele naayi paadaagittu.
    Konege prayaasa pattu, oddaadkondu, english pustaka odo roodhi maadkonde, dinavoo dictionary li ondodndu hosa shabdha kaliyak shuru maadide…
    Amele ellaa sudhaarsitu…
    Amen

  3. ಅನುರಾಧಾ ನಡಹಳ್ಳಿ

    ನೀವು ನಿಮ್ಮ ಮಗನಿಗೆ ಕನ್ನಡ ಹೇಳಿಕೊಡೋಕೆ ಪ್ರಯಾಸಪಟ್ಟಿದ್ದು ಸರಿ ಭಾರತಿ. ನನ್ನ ತಂಗಿಯ ಮಕ್ಕಳಿಗೂ ಕನ್ನಡ ಸರಿಯಾಗಿ ಬರಲ್ಲ, ಅರ್ಥವೂ ಆಗಲ್ಲ. “ಅವ್ನೂ ಲಯನ್‍ನಾ ಹಂಟ್ ಮಾಡ್ದ ” – ಈರೀತಿ ವಾಕ್ಯಗಳು. ಹೈಸ್ಕೂಲ್‍ಗೆ ಹೋಗೋ ಮಗ “ಅಮ್ಮ, ಗುಡ್ಡ ಅಂದ್ರೆ?” ಅಂತ ಕೇಳುವಷ್ಟು ಭಾಷಾ-ಬಡತನ.ಎಲ್ಲಕ್ಕಿಂತ ಬೇಜಾರು ಅಂದ್ರೆ ನಾನು ನಮ್ಮ ತಾಯಿಗೇ “ಸರಿಯಾಗಿ ಕನ್ನಡದಲ್ಲಿ ಹೇಳು” ಅಂತ ಆಗಾಗ ಬಯ್ತಾ ಇರಬೇಕಾಗುತ್ತೆ. ಅವರಿಗೂ ಅನಗತ್ಯವಾಗಿ ಇಂಗ್ಲಿಷ್ ಶಬ್ದಗಳನ್ನು ಉಪಯೋಗಿಸೋ ದುರಭ್ಯಾಸ.

  4. Sandhya Bhat

    ಭಾರತಿ ಮಾ .. ಸೂಪರ್ …
    ಮೊನ್ನೆ ಮೊನ್ನೆವರೆಗೂ ಇದ್ದ ಆಕಳು , ಕಾಗೆ, ಕೆಂಪು , ನೀಲಿ , ಸೇಬು ಕಿತ್ತಳೆಗಳೆಲ್ಲ Cow, Crow, Red, Blue, Apple, Orange ಗಳಾಗಿ ಬಿಟ್ಟಿವೆ ನಮ್ಮ ಪಾಪು ಶಾಲೆಗೇ ಸೇರಿದಾಗಿನಿಂದ … !!
    ಏನ್ಮಾಡೋಣ ಹೇಳಿ .. 🙂

  5. Radhika

    ಕನ್ನಡ ಬರುವುದರ ಬಗ್ಗೆ ಹೆಮ್ಮೆ ಪಡುವ ಹಾಗೆ ಹೇಗೆ ಮಾಡುವುದು? ಯಕ್ಷ ಪ್ರಶ್ನೆ.

  6. ಸತ್ಯನಾರಾಯಣ

    ಸಿ.ಒ.ಆರ್.ಪಿ.ರೇಷನ್ ಮೇಷ್ಟ್ರು
    ಈ ತಲೆಬರಹವನ್ನು ನೋಡಿ ನಿಮಗೆ ಆಶ್ಚರ್ಯವಾಗಬಹುದು. ಸಿ.ಒ.ಆರ್.ಪಿ. ಎಂಬುದು ನಾಲ್ಕು ಹೆಸರುಗಳ ಮೊದಲ ಅಕ್ಷರಗಳೆಂದು, ರೇಷನ್ ಎಂಬುದು ಸರ್‌ನೇಮ್ ಆಗಿದ್ದಿರಬಹುದು, ಒಟ್ಟಿಗೆ ಆ ಮೇಷ್ಟ್ರಿಗೆ ಐದು ಹೆಸರುಗಳಿದ್ದಿರಬೇಕು ಎಂದುಕೊಳ್ಳಬೇಡಿ. ಕಾರ್ಪೊರೇಷನ್ ಎಂಬ ಪದವನ್ನು ಸಿ-ಒ-ಆರ್-ಪಿ-ರೇಷನ್ ಎಂದು ಉಚ್ಛರಿಸುತ್ತಿದ್ದ ಮೇಷ್ಟ್ರಿಗೆ ನಾವು ಇಟ್ಟಿದ್ದ ಅಡ್ಡ ಹೆಸರು ಇದು!
    ನಾನು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಇಂಗ್ಲೀಷ್ ಮತ್ತು ಹಿಂದಿ ವಿಷಯಗಳಿಗೆ ಮೇಷ್ಟ್ರುಗಳೇ ಇರಲಿಲ್ಲ. ಆಗ ಸಮಾಜವನ್ನು ಪಾಠ ಮಾಡುತ್ತಿದ್ದ ಡಿ.ಎಸ್.ನಿಂಗೇಗೌಡ ಎಂಬ ಮಹಾಶಯರೇ ಡೀಟೈಲ್ ಇಂಗ್ಲೀಷ್‌ನ್ನೂ ಪಾಠ ಮಾಡುತ್ತಿದ್ದರು. ಅವರು ಮಾತನಾಡುವಾಗ ತೊದಲುತ್ತಿದ್ದರು. ಇಂಗ್ಲೀಷ್‌ನಲ್ಲಿ ಅವರ ಜ್ಞಾನ ಅಷ್ಟಕ್ಕಷ್ಟೆ. ಸರಿಯಾಗಿ ಓದುವುದಕ್ಕೇ ಬರುತ್ತಿರಲಿಲ್ಲ. ಕೆಲವೊಂದು ದೀರ್ಘವಾದ ಪದಗಳನ್ನು ಮೊದಲು ಸ್ಪೆಲ್ಲಿಂಗ್ ಹೇಳಿ ನಂತರ ಉಚ್ಛಾರ ಮಾಡುತ್ತಿದ್ದರು. ಕೆಲವೊಂದು ಪದಗಳಿಗೆ ಸ್ಪೆಲ್ಲಿಂಗ್ ಮಾತ್ರ ಹೇಳಿ ಮುಂದುವರೆಯುತ್ತಿದ್ದರು. ಹೀಗೆ ಅವರು ಅರ್ಧ ಸ್ಪೆಲ್ಲಿಂಗನ್ನು ಅರ್ಧ ಪದವನ್ನು ಮಾತ್ರ ಹೇಳುತ್ತಿದ್ದ ಹಲವಾರು ಪದಗಳಲ್ಲಿ ಕಾರ್ಪೊರೇಷನ್ ಎಂಬ ಪದವೂ ಒಂದು. ಯಾವುದೋ ಪಾಠದಲ್ಲಿ ಈ ಪದ ಮೇಲಿಂದ ಮೇಲೆ ಬರುತ್ತಿತ್ತು. ಅದನ್ನು ಅವರು ಸಿ-ಒ-ಆರ್-ಪಿ-ರೇಷನ್ ಎಂದು ಯಾವಾಗಲೂ ಹೇಳುತ್ತಿದ್ದರು!
    ಈ ಬಗೆಯ ಹಲವಾರು ಬಗೆಯ ಪದಪ್ರಯೋಗಗಳನ್ನು ಅವರು ಮಾಡುತ್ತಿದ್ದರೂ ಈ ಹೆಸರೇ ಅವರಿಗೆ ಪರ್ಮನೆಂಟಾಗಿ ನೆಲೆ ನಿಲ್ಲಲು ಕಾರಣವೆಂದರೆ, ಮೊದಲ ಬಾರಿಗೆ ಈ ಪದವನ್ನು ಅವರು ಹೇಳಿದಾಗ ಇಡೀ ತರಗತಿಯೇ ಗೊಳ್ ಎಂದು ನಕ್ಕುಬಿಟ್ಟಿತ್ತು. ಅದರಿಂದ ಸಿಟ್ಟಿಗೆದ್ದ ನಿಂಗೇಗೌಡರು, ಹತ್ತಿರದಲ್ಲಿ ಕೈಗೆ ಸಿಕ್ಕ ಹೊನ್ನೇಗೌಡ ಎಂಬ ವಿದ್ಯಾರ್ಥಿಯನ್ನು ಹಿಡಿದು ಚೆನ್ನಾಗಿ ಬಡಿದಿದ್ದರು. ಎಷ್ಟರ ಮಟ್ಟಿಗೆ ಎಂದರೆ ಆತ ಚಡ್ಡಿಯಲ್ಲಿ ಹಿಂದೆ ಮತ್ತು ಮುಂದೆ ಎರಡನ್ನು ಒಟ್ಟಿಗೇ ಮಾಡಿಕೊಂಡಿದ್ದ. ಅಲ್ಲಿಂದ ಮುಂದೆ ಅವರ ಈ ರೀತಿ ಪದ ಪ್ರಯೋಗಗಳಿಗೆ ಮೌನವೇ ತರಗತಿಯ ಉತ್ತರವಾಗಿತ್ತು. ಆದರೆ ಅಂದು ಅವಮಾನಿತನಾಗಿದ್ದ ಹೊನ್ನೇಗೌಡ ಹುಡುಗರ ನಡುವೆ ಮೇಲಿಂದ ಮೇಲೆ ಅವರನ್ನು ಈ ಹೆಸರಿನಿಂದಲೇ ಸಂಬೋಧಿಸುತ್ತಿದ್ದುದರಿಂದ ಸಿ.ಒ.ಆರ್.ಪಿ.ರೇಷನ್ ಮೇಷ್ಟ್ರು ಎಂಬ ಅಡ್ಡ ಹೆಸರು ಸ್ಥಿರವಾಗಿ ನೆಲೆನಿಂತುಬಿಟ್ಟಿತ್ತು. ಇಂಗ್ಲೀಷ್ ಪಾಠ ಮಾಡುವಲ್ಲಿ ಇಷ್ಟೆಲ್ಲಾ ಅಸಮರ್ಥರಾಗಿದ್ದ ಇವರು, ಹುಡುಗರೇ ಇಲ್ಲದ್ದರಿಂದ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಜೂನಿಯರ್ ಕಾಲೇಜಿನ ಲೆಕ್ಚರರ್ ಇಂಗ್ಲೀಷ್ ಪಾಠ ಮಾಡುತ್ತೇನೆ ಎಂದಾಗ ವಿರೋಧಿಸಿದ್ದೇಕೆಂದು ಇಂದಿಗೂ ಅರ್ಥವಾಗಿಲ್ಲ.

  7. Neelanjala

    ಚೆನ್ನಾಗಿದೆ. ತರಕಾರಿ ಕತೆ ಓದುತ್ತ ನನಗೆ ಮುಂಬಯಿಗೆ ಬಂದ ಹೊಸ್ತರ ನೆನಪಾಯಿತು. ಬೆಂಗಳೂರಿನಲ್ಲಿ ರೂಡಿ ಆಗಿದ್ದ ಕ್ಯಾಪ್ಸಿಕಮ್, ಬ್ರಿಂಜಾಲ್,. . ಇತ್ಯಾದಿಗಳನ್ನು ಇಲ್ಲಿಯ ವೆಜಿಟೆಬಲ್ ಶೋಪ್ ನಲ್ಲಿ ಕೇಳಿ ಆತ ಮುಖ ಮುಖ ನೋಡಿದ್ದ. ಹಾಗಾಗಿ ಈಗೆಲ್ಲ ನಾನು ‘ಬಾಜಿ’ ತೆಗೆದು ಕೊಳ್ಳಲು ‘ಸಬ್ಜಿವಾಲ’ ನಲ್ಲಿ ಹೋಗುತ್ತೇನೆ. ಅಲ್ಲಿ ಶಿಮ್ಲಾ ಮಿರ್ಚ್, ಬೈಂಗನ್, ಕಾಕಡಿ, ಪತ್ತಾ ಗೋಬಿ, ಕೇಲಾ,ಸಂತ್ರ . . ಅನ್ನೋದನ್ನು ಮತ್ತೆ ರೂಡಿ ಮಾಡಿಕೊಂಡಿದ್ದೇನೆ.

    • N.VISWANATHA

      Madam,monneyashte Ramanagaradalli “halasina hannu”” jack fruit” aythu
      N.VISWANATHA

  8. Rj

    ಭಾರತಿಯವರೇ,ಓದಿ ಸಿಕ್ಕಾಪಟ್ಟೆ ಫ್ರೆಶ್ ಆದೆ.ಲವಲವಿಕೆಯ ಬರಹ.
    ಇಲ್ಲಿ ನೋಡಿ:
    ಇಂಗ್ಲಿಷ್ ಬರುವುದಿಲ್ಲ ಅನ್ನುವ ಒಂದೇ ಕಾರಣಕ್ಕೆ ಗುಂಪಿನಲ್ಲಿ ಗೋವಿಂದಿಯಾದೆನಲ್ಲ, ಅದು ಸಾಮಾನ್ಯದ ನೋವಲ್ಲ.
    *ಗೋವಿಂದಿ???
    ಹಹಹ..OMG. This is YOU! 🙂
    -Rj

  9. shanthi k.a.

    tumba chandada laghu haasya baraha ….Odi tumba khushiyaaytu

    • N.VISWANATHA

      Madam,kelavu amshagalu matra hasya.Ulidavu vishadaneeya
      N. VISWANATHA

  10. Ananda Prasad

    ಇಂಗ್ಲೀಷ್ ವ್ಯಾಮೋಹಕ್ಕೆ ಕಾರಣ ನಮ್ಮ ಶಿಕ್ಷಣ ನೀತಿ ಹಾಗೂ ಭಾಷಾನೀತಿ. ಸಮಾನ ಶಿಕ್ಷಣ ನೀತಿ ಅಳವಡಿಸಿದ್ದಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಹತ್ತನೇ ತರಗತಿವರೆಗೆ ಆಯಾ ರಾಜ್ಯ ಭಾಷೆಯಲ್ಲಿ ಶಿಕ್ಷಣ ನೀಡುವುದು ಕಡ್ಡಾಯ ಎಂದು ಸಂವಿಧಾನದಲ್ಲಿಯೇ ಅಳವಡಿಸಿದ್ದಿದ್ದರೆ ಭಾಷಾ ನೀತಿಯ ಬಗ್ಗೆ ಗೊಂದಲ ಇರುತ್ತಿರಲಿಲ್ಲ. ದೇಶಭಾಷೆಗಳ ಉಳಿವು ಮತ್ತು ಬೆಳವಣಿಗೆಯ ದೃಷ್ಟಿಯಿಂದ ಆಯಾ ರಾಜ್ಯ ಭಾಷೆಯ ಮಾಧ್ಯಮದಲ್ಲಿಯೇ ಹತ್ತನೆಯ ತರಗತಿವರೆಗೆ ಶಿಕ್ಷಣ ನೀಡುವುದನ್ನು ಕಡ್ಡಾಯ ಮಾಡಿ ಸಮಾನ ಶಿಕ್ಷಣ ನೀತಿಯನ್ನು ದೇಶಾದ್ಯಂತ ಜಾರಿಗೆ ತರಬೇಕಾದ ಅಗತ್ಯ ಇದೆ. ಕರ್ನಾಟಕವು ಇಂಥ ನೀತಿಯನ್ನು ರೂಪಿಸಿದ್ದರೂ ಅದನ್ನು ಹೈಕೋರ್ಟ್ ರದ್ದು ಪಡಿಸಿ ರಾಜ್ಯ ಸರಕಾರ ಇದನ್ನು ಸುಪ್ರೀಂಕೋರ್ಟಿನಲ್ಲಿ ಹಾಕಿ ಹಲವಾರು ವರ್ಷಗಳೇ ಆದರೂ ಸುಪ್ರೀಂ ಕೋರ್ಟ್ ಒಂದು ತೀರ್ಪು ನೀಡಲು ಇನ್ನೂ ಮುಹೂರ್ತ ಕೂಡಿಬಂದಿಲ್ಲ. ಇಂಥ ಮಹತ್ವದ ವಿಷಯಗಳ ಬಗ್ಗೆ ತೀರ್ಪು ನೀಡಲು ಒಂದು ಪ್ರತ್ಯೇಕ ಪೀಠ ಸ್ಥಾಪಿಸಬೇಕಾಗಿದೆ. ಇದು ದೇಶದ ಹಿತದೃಷ್ಟಿಯಿಂದ ಅಗತ್ಯ. ಮಹತ್ವದ ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟು ಶೀಘ್ರವಾಗಿ ವಿಚಾರಣೆ ನಡೆಸಿ ತೀರ್ಪು ಕೊಡುವ ವ್ಯವಸ್ಥೆ ರೂಪಿಸಬೇಕಾದ ಅಗತ್ಯ ಇದೆ. ಇದರಲ್ಲಿ ಅನಗತ್ಯ ವಿಳಂಬ ದೇಶದ್ರೋಹವೇ ಸರಿ. ಕೆಲವೊಂದು ವಿಷಯಗಳಲ್ಲಿ ಸರ್ವಜನ ಹಿತದೃಷ್ಟಿಯಿಂದ ಸರ್ಕಾರ ಕಡ್ಡಾಯ ನೀತಿಯನ್ನು ಜಾರಿಗೆ ತರುವುದು ಅಗತ್ಯ. ಶಿಕ್ಷಣದ ಭಾಷಾ ಮಾಧ್ಯಮವನ್ನು ಸರ್ವಜನ ಹಿತದೃಷ್ಟಿಯಿಂದ ಸರ್ಕಾರವೇ ನಿರ್ಧರಿಸುವುದು ಅಗತ್ಯ. ಇದನ್ನು ಪಾಲಕರ ಸ್ವಾತಂತ್ರ್ಯ ಎಂದು ಬಿಟ್ಟರೆ ಭಾಷೆ ಹಾಗೂ ಸಂಸ್ಕೃತಿ ಎರಡಕ್ಕೂ ಗಂಭೀರ ಅಪಾಯ ಇದೆ ಎಂಬುದನ್ನು ಸರ್ಕಾರ ಹಾಗೂ ನ್ಯಾಯಾಲಯಗಳು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತವೆಯೋ ಅಷ್ಟು ಒಳ್ಳೆಯದು. ನ್ಯಾಯಾಧೀಶರುಗಳು ತಮ್ಮ ಗಾಢ ನಿದ್ದೆಯಿಂದ ಎಚ್ಚತ್ತುಕೊಳ್ಳುವುದು ಇಂದಿನ ತುರ್ತು ಅಗತ್ಯ.

  11. veda

    ಕನ್ನಡ ಬರುವುದಿಲ್ಲ ಅಂತ ಹೇಳಿಕೊಳ್ಳಲು ಹೆಮ್ಮೆ ಪಡುವಂತ ಕಾಲಕ್ಕೆ ಬಂದು ಬಿದ್ದಿದ್ದೇವೆ- Howdu Bharati e matu noorakke noorarashtu sathya.Lekhana tumba ishtavaythu

  12. ಶಮ, ನಂದಿಬೆಟ್ಟ

    ಬೆಂಗಳೂರಿಗೆ ಬಂದಿದ್ದು ಓದಿಗಲ್ಲವಾದರೂ ಗುಂಪಿನಲ್ಲಿ ಗೋವಿಂದಿಯೇ.. ಅವತ್ತೂ ಇವತ್ತೂ..
    ಮತ್ತು ಕನ್ನಡವನ್ನು ತ್ರಾಸವಿಲ್ಲದೇ ತಾಸುಗಟ್ಟಲೇ ಪ್ರಾಸಬದ್ಧವಾಗಿ ಬಳಸಬಲ್ಲೆ ಅನ್ನೋದು ಹೆಮ್ಮೆಯೇ ಅವತ್ತೂ ಇವತ್ತೂ..
    ಅದ್ಭುತ ಬರಹ..

  13. N.VISWANATHA

    Baraha bahala chennagide.Nadeda ondondu amshavoo nenapide.Kannadigaru tamma bashe bekadaroo bittaru,parabashe mele jasthi olavu torisuttare embudu vishadakara.Kannadada bagge anadarane indu- nenneyadalla-anadikaladindaloo ide.
    Udaharane VISHNUVARDHANA,KRISHNADEVARAYA,CHIKKADEVARAYA ivaru kelavaru matra
    N.VISWANATHA

  14. samyuktha

    ನಕ್ಕು ನಕ್ಕು ಸಾಕಾಯ್ತು 😀
    ನನ್ನ ಕಥೆ ಕೇಳಿ….ನಾನೂ ಏಳರವರೆಗೆ ಕನ್ನಡ ಮೀಡಿಯಂ….. ನಾನು ಆರನೇ ಕ್ಲಾಸ್ ನಲ್ಲಿದಾಗ, ನನ್ನ ಜೊತೆಗಾರರೆಲ್ಲರಿಗಿಂತ ಹೆಚ್ಚು ಇಂಗ್ಲಿಷ್ ಬರುತ್ತಿದ್ದುದು ನನಗೆ….ಅದಕ್ಕೆ ಜಂಭ ಪಟ್ಟುಕೊಂಡು….. ನನ್ನ ನೆಂಟರೊಬ್ಬರ (ಅಮೆರಿಕಾದಲ್ಲಿ ಲಾ ಓದಿದವರು :P) ಬಳಿ ಒಮ್ಮೆ ಜಯಂಟ್ ವೀಲ್ ನಲ್ಲಿ ಕೂತ ನಾನು “ನನಗೆ ಭಯವಾಗುತ್ತಿದೆ” ಎಂದು ಹೇಳಲು “ಐ ಆಮ್ ಆಫ್ರೈಯಿಂಗ್” ಅಂತ ಪದೇ ಪದೇ ರಾಗ ತೆಗೆದು, ಅಂತೂ ಇಂಗ್ಲಿಷ್ ನಲ್ಲಿ ಹೊಡೆದು ಬಿಟ್ಟೆ ಅಂತ ಬೀಗಿದ್ದೆ. ನನ್ನ ಮಾತು ಕೇಳಿದ ಆಕೆಯ ಮುಖದ ಎಕ್ಸ್ಪ್ರೆಶನ್ ನನಗೀಗಲೂ ಮರೆಯಲು ಸಾಧ್ಯವಿಲ್ಲ 😀

  15. Somashekhar

    ಭಾರತಿಯವರೆ, ಎಂದಿನಂತೆ ನಿಮ್ಮ ಬರಹ ತುಂಬಾ ಚೆನ್ನಾಗಿದೆ. ನಾನು ೮ ನೇ ತರಗತಿಯಿಂದ ಇಂಗ್ಲಿಷ್ ಮೀಡಿಯಂ ನಲ್ಲಿ ಓದಿದ್ದು . ನಮ್ಮ ಊರಿನ ಸ್ಕೂಲ್ ನಲ್ಲಿ ಇಂಗ್ಲಿಷ್ ಮೀಡಿಯಂ ಇದ್ರೂ ಬಹುತೇಕ ಎಲ್ಲ ಕನ್ನಡದಲ್ಲೇ ವಿವರಿಸಿ ಇಂಗ್ಲಿಷ್ನಲ್ಲಿ ನೋಟ್ಸ್ ಕೊಡುತ್ತಿದ್ದರು. ನಾನು ಮೆಡಿಕಲ್ ಕಾಲೇಜ್ ಸೇರುವವರೆಗೂ ಇಂಗ್ಲಿಷ್ ನಲ್ಲಿ ಒಂದು ವಾಕ್ಯ ಕೂಡ ಮಾತನಾಡುತ್ತಿರಲಿಲ್ಲ. ನಾನು ಈಗ ಅಮೆರಿಕಾಗೆ ಬಂದು ಸುಮಾರು ೮ ವರ್ಷ ಆಯ್ತು. ನನ್ನ ಇಂಗ್ಲಿಷ್ ಏನು ಅದ್ಬುತವಾಗಿಲ್ಲ . ಇಲ್ಲಿಯ ಜನ ಬೇರೆ ದೇಶದಿಂದ ಬಂದಂತ ನಮ್ಮಂತವರು ಅವರ ಭಾಷೆ ಕಲಿತುಕೊಂಡು ವ್ಯವಹರಿಸುವುದನ್ನು ನೋಡಿ ಅಚ್ಚರಿ ಮತ್ತು ಖುಷಿಪಡುತ್ತಾರೆ. ಇಲ್ಲಿ ಭಾಷೆ ಒಂದು medium of communication ಅಷ್ಟೇ (ಹಾಗೆಂದು ಭಾಷೆ ಪ್ರೀತಿ ಇಲ್ಲವೆಂದಲ್ಲ). ಆದರೆ ಅದು ನಮ್ಮಲ್ಲಿ status symbol . ಇಂತಹ ಹುಚ್ಚಾಟಕ್ಕೆ ಎಲ್ಲಾದರು ಕೊನೆಯುಂಟೆ.

  16. nikhil

    superb

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading