“ವಂಚಿಸಲೇ ಬೇಕೆಂದಿದ್ದರೆ, ನಸೀಬೇ,
ತಾಳುವಿಕೆಯ ಶಕ್ತಿಯನ್ನು ನನ್ನಿಂದ ಕಿತ್ತುಕೋ, ಆದರೆ,
ನನ್ನ ಬಾಯಾರಿಕೆಯನ್ನು ಮಾತ್ರ ನನ್ನಿಂದ ಕಸಿಯಬೇಡ ….”
ಅವರು ಬೆಂಕಿಯ ಕಾವಿನಂಥ ಕವಿತೆಗಳನ್ನು ಬರೆದರು …
ಅವರು ಜಗತ್ತನ್ನು ಬೆಚ್ಚಿ ಬೀಳಿಸುವುದಕ್ಕೆಂದೇ ಹುಟ್ಟಿದ್ದರು …
ಅವರು ಅದ್ಭುತ creativityಯ ಹೆಂಗಸಾಗಿದ್ದರು …
ಅವರು ಬದುಕು ಪೂರ್ತಿ ಚಡಪಡಿಕೆಯಲ್ಲೇ ಕಳೆದರು …
ಅವರು ಬದುಕಿರುವವರೆಗೂ ‘ಬದುಕಿದ್ದರು’ …
ಯಾಕೋ ಇಡೀ ವಾರ ಕಾಡಿದರು ಈ ಕಮಲಾ ದಾಸ್ ಅಲಿಯಾಸ್ ಮಾಧವಿ ಕುಟ್ಟಿ!
***
ಮೆರಿಲಿ ವೆಸ್ಬಾರ್ಡ್ ಬರೆದ The Love Queen of Malabar ಓದುತ್ತಾ ಕೂತೆ ಒಂದಿಷ್ಟು ಕಾಲ. ಓದುತ್ತಾ ಹೋದಂತೆ ಉಳಿದದ್ದು ನಿಟ್ಟುಸಿರು ಮತ್ತು ಅಸ್ಪಷ್ಟವಾದ, ಉತ್ತರವಿಲ್ಲದ ಒಂದಿಷ್ಟು ಪ್ರಶ್ನೆಗಳು. ತುಂಬ ಕ್ರಿಯೇಟಿವಿಟಿ ಇರುವವರು ಸದಾಕಾಲ ಚಡಪಡಿಕೆಯಲ್ಲಿರುತ್ತಾರಾ ಅಥವಾ ಆ ಚಡಪಡಿಕೆಯೇ ಅವರನ್ನು ಸದಾಕಾಲ ಏನನ್ನಾದರೂ ಹೊಸತನ್ನು ಸೃಷ್ಟಿಸುವಂತೆ ಪ್ರೇರೇಪಿಸುತ್ತದಾ? ಸಮುದ್ರದ ತಟದಲ್ಲಿ ಕೂತು, ಮರಳನ್ನು ಬಗೆ ಬಗೆದು ಒಂದು ಸಣ್ಣ ಕಪ್ಪೆ ಚಿಪ್ಪಿಗೆ ತಡಕಾಡುವಂತೆ, ಬದುಕನ್ನು ಮೊಗೆದು ಪ್ರೀತಿಯ ಹುಡುಕಾಟಕ್ಕೆ ಬಿದ್ದರಲ್ಲ … ಯಾಕೆ ಅದು ಅವರಿಗೆ ಎಂದಿಗೂ ಸಿಗಲೇ ಇಲ್ಲ? ಹಾಗಂತ ಚೂರೂ ಬೇಸರಿಸದೇ ಮತ್ತೆ ಮತ್ತೆ ಪ್ರತೀ ಹೆಜ್ಜೆಯಲ್ಲೂ ಬದುಕಿನೊಡನೆ ಕಾದಾಟಕ್ಕೆ ಬಿದ್ದವಳಂತೆ, ಅದರ ಕೊಂಬು ಹಿಡಿದು ಸೆಣೆಸಿ, ಮಣಿಸುವ ಆ ಉತ್ಸಾಹ ಉಳಿದದ್ದಾದರೂ ಹೇಗೆ? ತನ್ನ 67ನೆಯ ವಯಸ್ಸಿನಲ್ಲಿ ಕೂಡಾ ಆ ಕುಂದದ ಉತ್ಸಾಹ ಅವರಲ್ಲಿ ಉಳಿದದ್ದು ಹೇಗೆ? ಮೇಷ ರಾಶಿಯ ಹೆಂಗಸರ ಬೆಂಕಿಯೊಡನೆ ಆಟವಾಡುವಂತ ರಿಸ್ಕ್ ತೆಗೆದುಕೊಳ್ಳುವ ಗುಣ ಅವರ ಇಡೀ ಬಾಳನ್ನು ನಿರ್ದೇಶಿಸಿತಾ? ಉತ್ತರಿಸಲು ಕಮಲಾ ದಾಸ್ ಇರಬೇಕಿತ್ತು ಅಥವಾ ಕಮಲಾ ಇರುವಾಗ ನನಗೆ ಅವರ ಬಗ್ಗೆ ಈ ರೀತಿ ಕಾಡುವಂತ ಹುಚ್ಚು ಹಿಡಿಯಬೇಕಿತ್ತು ….
ಕಮಲಾ ಎಂದ ಕೂಡಲೇ ಕಣ್ಣೆದುರು ಮೊದಲು ಮೂಡುವುದು ಅವರ ಭಾವಪೂರ್ಣ ಕಣ್ಣುಗಳು (ಪ್ರೇಮಿಯೊಬ್ಬ ಅವಳ ಕಣ್ಣಲ್ಲಿ ಈಜಬೇಕು ಅನ್ನಿಸುವಂತಿದ್ದವಂತೆ ಆ ಕಣ್ಣುಗಳು!), ಗುಂಗುರು ಕೂದಲು ಮತ್ತು ರಾಜಕುಮಾರಿಯ grace … ಹಾಗೂ ಒಂದು ಕಾಲಕ್ಕೆ ತನ್ನ ಅಸಂಪ್ರದಾಯಕತೆಯಿಂದ ಜಗತ್ತನ್ನು ಬೆಚ್ಚಿ ಬೀಳಿಸಿದ್ದಾಕೆ, ಕೊನೆ ಕೊನೆಗೆ ಬುರ್ಖಾದಲ್ಲಿ ಇಡೀ ದೇಹವನ್ನು ಅಡಗಿಸಿಟ್ಟುಕೊಂಡಿದ್ದ ಚಿತ್ರಣ! ಒಂದು ಪಾತ್ರೆಯಲ್ಲಿ ತುಂಬ ನಿಗೂಢತೆ, ಅಪರೂಪದ ಪ್ರತಿಭೆ, ಸ್ವಲ್ಪ ಸುಳ್ಳು ಮತ್ತು ತುಂಬ ತಲ್ಲಣಗಳನ್ನು ಮಿಶ್ರಣ ಮಾಡಿದರೆ ಕಮಲಾ ದಾಸ್ ಹುಟ್ಟುತ್ತಾರೆ ಅನ್ನಿಸಿತು ನನಗೆ. ಸ್ವಾತಂತ್ರ ಪೂರ್ವ ಭಾರತದಲ್ಲಿ ಹುಟ್ಟಿ, ಆ ಕಾಲಕ್ಕೇ ಈ ಶತಮಾನದವಳಂತೆ ಯೋಚಿಸುತ್ತಿದ್ದ ಮತ್ತು ಮನಸ್ಸು ತಿರುಗಿದರೆ ಹತ್ತು ದಶಕಗಳ ಹಿಂದೆ ಹುಟ್ಟಿದವರಂತೆ ಕೂಡಾ ಯೋಚಿಸುತ್ತಿದ್ದ ಕಮಲಾ ನನ್ನಲ್ಲಿ ತೀವ್ರ ಕುತೂಹಲ ಮೂಡಿಸಿದರು. ಇವತ್ತಿನ ಚಿಂತನೆ ಹಾಗೂ ಮರುದಿನದ ಚಿಂತನೆಯ ಮಧ್ಯೆ 180 ಡಿಗ್ರಿ ವ್ಯತ್ಯಾಸವಿರುತ್ತಿದ್ದಂತ ಕಮಲಾ, ಅದನ್ನು ಕುರಿತು ಪ್ರಶ್ನಿಸಿದರೆ ಯಾವುದೇ ಅಳುಕಿಲ್ಲದೇ ‘ನೆನ್ನೆಗೂ ಮತ್ತು ಇವತ್ತಿಗೂ ನಾನು ಬೆಳೆದಿದ್ದೇನೆ ಅನ್ನುವುದರ ಗುರುತು ಅದು’ ಅನ್ನುತ್ತಾರೆ!
ವಿಕ್ಷಿಪ್ತರು ಆಸಕ್ತಿ ಕೆರಳಿಸುತ್ತಾರೆ … ಅಂಥ ವಿಕ್ಷಿಪ್ತೆ ಕಮಲಾ ದಾಸ್ ಬಗ್ಗೆ ಹೀಗೊಂದಿಷ್ಟು ವಿಷಯಗಳು …

ಕಮಲಾ ಹುಟ್ಟಿದ್ದು ಸಂಪ್ರದಾಯಸ್ಥ ಕೇರಳದಲ್ಲಿ 1934 ನೆಯ ಇಸವಿಯಲ್ಲಿ. ಆಕೆಗೆ 15 ವರ್ಷವಾಗಿದ್ದಾಗ ಗಣಿತದ ಪರೀಕ್ಷೆಯಲ್ಲಿ ಫೇಲ್ ಆಗಿಬಿಡುತ್ತಾರೆ. ಆಗ ಅವಳ ತಂದೆ ‘ನೀನಿನ್ನು ಓದಿದ್ದು ಸಾಕು’ ಅಂತ ಹೇಳಿ, ಫೇಲ್ ಆಗಿದ್ದಕ್ಕೆ ‘ಶಿಕ್ಷೆ’ ಕೊಡುತ್ತಾರೆ … ಆಕೆಗೆ ಮದುವೆ ಮಾಡುವ ಶಿಕ್ಷೆ! ನಿಜಕ್ಕೂ ಅದು ಒಂದು ಶಿಕ್ಷೆಯೇ ಆಗಿಬಿಟ್ಟಿದ್ದು ಅವರ ಬದುಕಿನ ದುರಂತ ಅನ್ನಬೇಕು. ಮಾಧವ ದಾಸ್ ಅನ್ನುವವರ ಜೊತೆ ಮದುವೆಯಾದಾಗ ಆಕೆಗೆ ಬರೀ 15 ವರ್ಷ ಮತ್ತು ಆತನಿಗೆ 35!! ಮದುವೆಯ ಬಗ್ಗೆ, ಗಂಡು-ಹೆಣ್ಣಿನ ದೈಹಿಕ ಸಂಬಂಧದ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲದ ಕಮಲಾಗೆ ಗಂಡನ ಜೊತೆಗಿನ ಮೊದಲ ರಾತ್ರಿ ರೇಪ್ಗೊಳಗಾದಂತೆ ಅನ್ನಿಸುತ್ತದೆ. ತುಂಬ ಚಿಕ್ಕ ವಯಸ್ಸಿನ ಕಮಲಾಗೆ ಆತನನ್ನು ದೈಹಿಕವಾಗಿ ತೆಗೆದುಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಆದರೆ ಮಾಧವ ದಾಸ್ ಪ್ರಯತ್ನ ನಿಲ್ಲಿಸಲು ಒಪ್ಪದೇ, ಮೇಲಿಂದ ಮೇಲೆ ಆಕೆಯನ್ನು ಕೂಡುವ ಪ್ರಯತ್ನ ಮಾಡುತ್ತಲೇ ಹೋಗುತ್ತಾರೆ. ಈ ಪ್ರಯತ್ನಗಳಲ್ಲಿ ಕಮಲಾ ತೀವ್ರವಾಗಿ ಗಾಯಗೊಂಡು ರಕ್ತಸ್ರಾವವಾಗಿ, ಕೊನೆಗೆ ಆಪರೇಷನ್ ಮಾಡಿಸಿಕೊಳ್ಳಬೇಕಾದ ಹಂತ ತಲುಪುತ್ತಾರೆ. ಇದನ್ನೆಲ್ಲ ಆಕೆ ತುಂಬ ಮುಕ್ತವಾಗಿ ಹೇಳಿಕೊಳ್ಳುತ್ತಾ ಹೋಗುತ್ತಾರೆ. ಎಷ್ಟು ಮುಕ್ತವೆಂದರೆ ಗಂಡನ ದೈಹಿಕ ರಚನೆಯ ಸಣ್ಣ ಪುಟ್ಟ ವಿವರಗಳ ಸಹಿತ ಹೇಳಿಕೊಳ್ಳುತ್ತಾರೆ. ಎಷ್ಟೊಂದು ಜನ ಹೇಳುತ್ತಾರೆ ಅವರು ತುಂಬ attention seeking ಇದ್ದುದರಿಂದ ಇಂತದ್ದನ್ನೆಲ್ಲ ಬರೆದುಕೊಳ್ಳಲು ಸಾಧ್ಯವಾಯಿತು. ಇಲ್ಲದಿದ್ದರೆ ಇದನ್ನೆಲ್ಲ ಹೇಳಿಕೊಳ್ಳುವ ಅಗತ್ಯವೇನಿತ್ತು ಎಂದು. ಈಗಲೂ ಎಷ್ಟೊಂದು ಜನಕ್ಕೆ ನಮ್ಮ ದೇಶದ ಎಷ್ಟೊಂದು ಹೆಂಗಸರು ಇದಕ್ಕಿಂತ ಹೀನವಾದದ್ದನ್ನೆಲ್ಲ ಅನುಭವಿಸಿಯೂ, ಹೇಳಿಕೊಳ್ಳದೇ ಮೌನದಲ್ಲಿ ಎಲ್ಲ ಹೂತುಹಾಕಿದರಲ್ಲ … ಈಕೆಯೊಬ್ಬರೇ ಇದನ್ನೆಲ್ಲ ಯಾಕೆ ಹೇಳಿಕೊಳ್ಳಬೇಕಿತ್ತು ಅಂತ ಅನ್ನಿಸಬಹುದು. ಆದರೆ, ಎಲ್ಲರ ಹಾಗೆ ಆಕೆ ಇಲ್ಲವಲ್ಲ! ಆಕೆಯ ಬರವಣಿಗೆ, ಅವರ ಕಾವ್ಯದಲ್ಲಿ ಅವರ ಅಸಾಧಾರಣತೆಯನ್ನು ನಾವು ಮೆಚ್ಚುತ್ತೇವಾದರೆ, ಇದರಲ್ಲಿ ಯಾಕೆ ಅವರು ಎಲ್ಲರಂತಿರಬೇಕು? ಅನ್ನುವ ಪ್ರಶ್ನೆ ಎದುರಾಗುತ್ತದೆ. ಒಟ್ಟಿನಲ್ಲಿ ಆಕೆ ತನ್ನ ಗಂಡನ ವಿಷಯವನ್ನು ಒಂದಿಷ್ಟೂ ಮುಚ್ಚಿಡದೆ ಎಲ್ಲ ತೆರೆಯುತ್ತಾ ಹೋಗುತ್ತಾರೆ …
ನಂತರದ ದಿನಗಳಲ್ಲಿ ತಿಳಿಯುತ್ತದೆ ಮಾಧವ ದಾಸ್ ಸಲಿಂಗಕಾಮಿ ಎಂದು. ಎಳೆಯ ತರುಣರನ್ನು ಅವರು ಕಮಲಾರೆದುರೇ ಹಾಸಿಗೆಗೆ ಕರೆದುಕೊಂಡು ಬರುತ್ತಿರುತ್ತಾರೆ. ಇದೆಲ್ಲ ಕಮಲಾರಿಗೆ ಅಸಾಧ್ಯ ಮಾನಸಿಕ ಕ್ಷೋಭೆಯನ್ನುಂಟು ಮಾಡುತ್ತದೆ. ಮುಂದೆ ಮಾಧವ ದಾಸ್ ಕಮಲಾರನ್ನು ತನ್ನ ಮೇಲಧಿಕಾರಿಗಳಿಗೆ ಪರಿಚಯಿಸಿ, ಅವರ ಜೊತೆ ಮಲಗಲು ಹೇಳುತ್ತಾರೆ. ಆ ರೀತಿಯಾಗಿ ಮಾಡಿದರೆ ತಾನು ಉದ್ಯೋಗದ ಏಣಿಯಲ್ಲಿ ಮೇಲಕ್ಕೇರಿ ಹೋಗಬಹುದು ಅನ್ನುವ ಉದ್ದೇಶದಿಂದ. ಕಮಲಾ ಅದೆಲ್ಲ ಆದೇಶವನ್ನೂ ಪಾಲಿಸುತ್ತಾರೆ. ಗಂಡನ ಒಬ್ಬ ಮೇಲಧಿಕಾರಿಗೆ ತುಂಬ ವಯಸ್ಸಾಗಿರುತ್ತದೆ. ಆತನ ಜೊತೆ ಮಲಗಲು ಗಂಡ ಹೇಳಿದಾಗ ಕಮಲಾ ಅದನ್ನೂ ಪಾಲಿಸುತ್ತಾರೆ. ಮೊದಲಿಗೆ ಅದನ್ನೊಂದು ಕರ್ತವ್ಯವೋ, ಆಜ್ಞೆಯೋ ಆಂತ ಪಾಲಿಸಲು ಹೊರಟ ಕಮಲಾ, ನಂತರ ಆ ವಯಸ್ಕನ ಜೊತೆ ಪ್ರೇಮದಲ್ಲಿ ಬಿದ್ದು ಬಿಡುತ್ತಾರೆ. ರಕ್ತ-ಮಾಂಸದ ದೇಹಸುಖದ ಮಟ್ಟ ಮೀರಿ, ಅಲ್ಲೊಂದು ಪ್ರೀತಿಯ ಸಂಬಂಧ ಹುಟ್ಟಿಕೊಳ್ಳುತ್ತದೆ. ಆತ ಕಮಲಾರನ್ನು ಗೌರವದಿಂದಲೇ ನಡೆಸಿಕೊಳ್ಳುತ್ತಾರೆ.
ಆತನ ಜೊತೆಗೆ ತುಂಬ ದಿನಗಳು ಸಂಬಂಧ ಮುಂದುವರೆಯುತ್ತದೆ. ಆದರೆ ಕೊನೆಗೊಂದು ದಿನ ಆತನಿಗೆ ವಿದಾಯ ಹೇಳುತ್ತಾರೆ. ಅದಕ್ಕೆ ಅವರು ಕೊಡುವ ಕಾರಣ ‘ನಾನು ಗಂಡನ್ನು ಆಲಂಗಿಸುವುದು ಮತ್ತು ಅವನ ಕಿವಿಯಲ್ಲಿ ಪ್ರೀತಿ ಮಾತು ಉಸುರುವುದನ್ನೇ ಬದುಕಾಗಿಸಿ ಕೊಳ್ಳಲಾರೆ. ನನ್ನ ಅಂತರಾತ್ಮದ ದನಿಯನ್ನೂ ನಾನು ಕೇಳಬೇಕಿತ್ತು’ ಅನ್ನುವುದು. ಪ್ರೇಮಕ್ಕಾಗಿ ಅಷ್ಟೆಲ್ಲ ಹಲುಬುವ ಕಮಲಾ, ಅದು ಸಿಕ್ಕ ನಂತರ ನೂರಾರು ಪ್ರೇಮ ಕವಿತೆಗಳನ್ನು ಆತನಿಗಾಗಿ ಬರೆದ ಕಮಲಾ, ಆತ ನನ್ನನ್ನು ಬೆಳೆಸಿದ ಅಂತ ಒಪ್ಪುವ ಕಮಲಾ, ಸಿಕ್ಕಿದ ಪ್ರೇಮದ ಜೊತೆಯಲ್ಲೇ ಅಂತರಾತ್ಮದ ದನಿಯನ್ನೂ ಕೇಳಬಹುದಿತ್ತಲ್ಲವೇ? ಅದಕ್ಕಾಗಿ ಸಿಕ್ಕ ಪ್ರೇಮವನ್ನು ಒದೆಯುವ ಅಗತ್ಯವೇನಿತ್ತು ಅಂತೆಲ್ಲ ಮತ್ತೆ ಪ್ರಶ್ನೆಗಳು ಮನಸ್ಸಿನಲ್ಲಿ. ಅಸಲಿಗೆ, ಆಕೆ ಏನನ್ನು ಹುಡುಕುತ್ತಿದ್ದರು ಅಥವಾ ಏನನ್ನಾದರೂ ಹುಡುಕುತ್ತಿದ್ದುದಾರೂ ನಿಜವಾ?
ಮುಂದೆ ಇದೇ ರೀತಿ ಗಂಡನಲ್ಲಿ ಸಿಗದ ಪ್ರೇಮವನ್ನು ಮತ್ತೆಲ್ಲೆಲ್ಲೋ ಹುಡುಕಿ ಹೊರಡುತ್ತಾರೆ. ‘ನಾನು ಶುದ್ಧ ವ್ಯಾಪಾರಿಯ ಥರ ವ್ಯವಹಾರಕ್ಕಿಳಿದೆ. ದೇಹವನ್ನು ಕೊಟ್ಟು ಮನಸ್ಸನ್ನು ಪಡೆಯುವ ವ್ಯಾಪಾರ …’ ಅನ್ನುತ್ತಾರೆ. ಆದರೂ ನಾನು ಬಯಸುತ್ತಿದ್ದ ಪ್ರೇಮ ನನಗೆ ಸಿಗಲೇ ಇಲ್ಲ … ಪ್ರೇಮವೆಂದರೆ ಅವನೊಡನೆಯ ಒಂದಿಷ್ಟು ಹೊತ್ತಿನ long walk, ಅವನೊಡನೆ ಊಟ ಮಾಡುವುದು, ಅವನ ಬೆರಳಿಗೆ ಬೆರಳನ್ನು ಬೆಸೆಯುವುದು ಎಲ್ಲವೂ ಅನ್ನುತ್ತಾರೆ. ಆದರೆ ಅವರನ್ನು ಬಯಸಿ ಬಂದ ನಂತರದ ಗಂಡಸರು ಆಕೆಯನ್ನಲ್ಲದೇ, ಆಕೆಯ ಇಮೇಜನ್ನು ಮಾತ್ರ ಮೆಚ್ಚುತ್ತಾರೆ, ಆಕೆಯ ಕವಿತೆಗಳನ್ನು ಮಾತ್ರ ಮೆಚ್ಚುತ್ತಾರೆ. ಆಕೆಯೊಂದಿಗೆ ಕೂಡಿದ ಕ್ಷಣಗಳಲ್ಲೂ ಅವರ ಕಿವಿಗಳಲ್ಲಿ ಆಕೆ ಕವಿತೆಯೊಂದನ್ನು ಉಸುರಲಿ ಅಂತ ಬಯಸುವಂತ ಗಂಡಸರು ಅವಳನ್ನು ಆಕರ್ಷಿಸುವುದೇ ಇಲ್ಲ. ಈ ಹುಡುಕಾಟದ ಪರಿಭ್ರಮಣದಲ್ಲಿ ಆಕೆ ಕಳೆದೇ ಹೋಗುತ್ತಾರೆ. ಇದನ್ನೆಲ್ಲ ಓದುವಾಗ ಯಾಕೋ ಖೇದವೆನ್ನಿಸಿತು … ಇಂತಹ ಹುಡುಕಾಟಕ್ಕೆ ಹೊರಟ ಯಾರೊಬ್ಬರಿಗೂ ಯಾವುದೇ ಹೊತ್ತಿಗೂ ಬೇಕಿದ್ದು ಸಿಕ್ಕಿರುವುದಿಲ್ಲ. ಕೊನೆಗೆ ಹುಡುಕಾಟವೇ ಒಂದು ದಾಹವಾಗಿ ಬಿಡುತ್ತದೆ. ಒಂದಿಷ್ಟು ದಿನಗಳ ನಂತರ ಯಾವುದಕ್ಕಾಗಿ ಈ ಹುಡುಕಾಟ ಅನ್ನುವಷ್ಟೂ ಎಳೆ ತಪ್ಪಿಹೋಗಿ ಮತ್ತಿಷ್ಟು ಗೋಜಲುಗಳ ಮಧ್ಯೆ ಕಳೆದುಹೋಗುತ್ತಾರೆ. ಕೊನೆಗೆ ಉಳಿಯುವುದು ಅಖಂಡ ವಿಷಾದ ಮತ್ತು ಒಂದಿಷ್ಟು ಸೋತ ಸಂಬಂಧಗಳ ಅಸ್ತಿ ಪಂಜರವಷ್ಟೇ. ಇದೆಲ್ಲ ಅವರಿಗೆ ಗೊತ್ತಿಲ್ಲದ್ದೇನೂ ಇರಲಾರದು. ಆದರೂ … ಆದರೂ … ಮನಸ್ಸಿನ ಗಲಿಬಿಲಿಗಳು ಹೆಚ್ಚುತ್ತಾ ಹೋದವು …

ಹೀಗೇ ವೈಯುಕ್ತಿಕ ಬದುಕು ತುಂಬ ಡೋಲಾಯಮಾನ. ಆದರೆ ಆಕೆ ಬರವಣಿಗೆಯಲ್ಲಿ ತನ್ನನ್ನು ಹೆಚ್ಚು ತೊಡಗಿಸಿ ಕೊಳ್ಳುತ್ತಾ ಹೋಗುತ್ತಾರೆ. ಅವರ 37 ನೆಯ ವಯಸ್ಸಿನಲ್ಲಿ ಅವರ ಅಂಡಾಶಯಗಳನ್ನು ತೆಗೆದುಹಾಕಿ, ಆಕೆಗೆ ಈಸ್ಟ್ರೋಜನ್ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಹೇಳಲಾಗುತ್ತದೆ. ಆ ರೀತಿಯಾದ ಚಿಕಿತ್ಸೆಗೆ ಒಳಪಟ್ಟಿದ್ದರಿಂದ ಅವರಿಗೆ ಹಾರ್ಟ್ ಅಟ್ಯಾಕ್ ಆಗುತ್ತದೆ. ತೀವ್ರ ಹಣದ ತೊಂದರೆಯಾದಾಗ ಆಕೆ ತನ್ನ ಆತ್ಮ ಚರಿತ್ರೆ ಬರೆಯಲು ತೊಡಗುತ್ತಾರೆ. ಅದನ್ನು ಬರೆದ ಕಾಲಘಟ್ಟದಲ್ಲಿ ಸಂಪ್ರದಾಯಸ್ಥ ಕೇರಳವನ್ನು ಈ ಪುಸ್ತಕ ಬೆಚ್ಚಿ ಬೀಳಿಸುತ್ತದೆ. ಆದರೆ, ಆಕೆಗೆ ಆ ನಿಮಿಷಕ್ಕೆ ಬೇಕಿದ್ದ ಹಣವನ್ನೂ ಒದಗಿಸುತ್ತದೆ. ಆಕೆಯ ಪತಿ ಅವಳು ಬರೆದಿರುವುದನ್ನೆಲ್ಲ ಓದಿದರೂ, ಯಾವುದಕ್ಕೂ ಆತನ ವಿರೋಧವಿಲ್ಲ. ಅದರಿಂದ ಬರುತ್ತಿದ್ದ ಹಣ ಮಾಧವ ದಾಸ್ಗೆ ಖುಷಿ ಕೊಡುತ್ತದೆ. ಹೆಂಡತಿಯ ಸಂಪಾದನೆ ಮಾಡಿ, ಮನೆಯ ಖರ್ಚುಗಳಲ್ಲಿ ಭಾಗಿಯಾಗುತ್ತಿರುವುದು ಆತನಿಗೆ ಬೇಕಿರುತ್ತದೆ ಅಂತ ಹೇಳುತ್ತಾರೆ ಕಮಲಾ. ನನಗೆ ಆಶ್ಚರ್ಯವೆನ್ನಿಸಿತು… ಹೆಂಡತಿಯೊಬ್ಬಳ ಪ್ರೀತಿಯ ಹುಡುಕಾಟದ ಮುಕ್ತ ಕಥೆಗಳು ಒಬ್ಬ ಭಾರತೀಯ ಗಂಡಸಿನ ಅಹಂಗೆ ತೀವ್ರ ಹೊಡೆತ. ಹಾಗಿರುವಾಗಲೂ ಆತ ಅದನ್ನೆಲ್ಲ ಸುಲಭಕ್ಕೆ ಜೀರ್ಣಿಸಿಕೊಳ್ಳುವುದಲ್ಲದೇ, ಮುಂದೆ ಆತನೇ ಆಕೆಯ ವ್ಯವಹಾರವನ್ನೂ ನಿಭಾಯಿಸಲು ನಿಲ್ಲುತ್ತಾರಲ್ಲ! ಎಂದು. ಆಕೆ ಒಂದು ಕವನದಲ್ಲಿ ಹೀಗೆ ಹೇಳುತ್ತಾರೆ …
ನನಗೆ ಬರೆಯಲು ಬಾರದಿದ್ದರೆ
ನನ್ನ ಒಂಟಿತನ, ನೋವನ್ನು ಹೇಗೆ ನಿಭಾಯಿಸುತ್ತಿದ್ದೆ?
ಎಲ್ಲವನ್ನೂ ಒಳಗೊಳಗೆ ಅದುಮಿಟ್ಟು
ಹೃದಯ ತಿಜೋರಿಯಂತೆ ಭಾರವಾಗುತ್ತಿತ್ತು;
ಅದು ನನ್ನ ಸಾವಿನ ನಂತರ ಮಾತ್ರ
ತೆರೆದುಕೊಳ್ಳುವ ಸಾಧ್ಯತೆಯಿತ್ತು ..
ಹಾಗಾಗಿದ್ದರೆ, ಆ ಬಿಡುಗಡೆ ಕೂಡ
ನನ್ನರಿವಿನ ನಿಲುಕಿಗೆ ಸಿಗದಂತಾಗುತ್ತಿತ್ತು ….
ಹೀಗೆ ಬರವಣಿಗೆ ಆಕೆಗೆ ಒಂದು ಬಿಡುಗಡೆಯ ದಾರಿಯಾಗುತ್ತಾ ಹೋಗುತ್ತದೆ. ಮನೆಯನ್ನೆಲ್ಲ ನಿಭಾಯಿಸುತ್ತಲೇ ರಾತ್ರಿ ಗಂಡ, ಮಕ್ಕಳು ಮಲಗಿದ ನಂತರ ಊಟದ ಟೇಬಲ್ ತೆರವು ಮಾಡಿ, ಟೈಪ್ರೈಟರ್ ಎದುರಿಗಿಟ್ಟು ಮಧ್ಯರಾತ್ರಿಯವರೆಗೆ ಬರವಣಿಗೆಯಲ್ಲಿ ತೊಡಗುತ್ತಾರೆ. ಮನೆಯವರೆಲ್ಲ ಸಕ್ಕರೆ ನಿದ್ರೆಯಲ್ಲಿರುವಾಗ, ಪ್ರತಿ ದಿನ ಕಮಲಾ ಬರೆಯುತ್ತಾ ಹೋಗುತ್ತಾರೆ. ‘ಗಾಯದಿಂದ ರಕ್ತ ಹರಿದಂತೆ, ನೋವಿನಿಂದ ನನ್ನಲ್ಲಿ ಕವಿತೆಗಳು ಬುಗ್ಗೆಯಾಗಿ ಹೊರಬಿದ್ದವು’ ಅನ್ನುತ್ತಾರೆ. ಹೆಂಗಸರೆಂದರೆ ಪ್ರೇಮದ ಬಗ್ಗೆ ತುಂಬ ರೊಮ್ಯಾಂಟಿಕ್ ಆಗಿ ಮಾತ್ರ ಬರೆಯಬೇಕು ಅಂತ ಜಗತ್ತು ಎದುರು ನೋಡುತ್ತದೆ … ಆಗಲೂ, ಈಗಲೂ!
ಹಾಗಿರುವಾಗ ಆಕೆ ಪ್ರೇಮದ ಬಗ್ಗೆ ದೈಹಿಕ ಮಟ್ಟದಲ್ಲಿ ಬಿಚ್ಚುಮನಸ್ಸಿನಿಂದ ಬರೆದು ಜಗತ್ತನ್ನು ಬೆಚ್ಚಿ ಬೀಳಿಸುವುದಕ್ಕೇ ಈ ರೀತಿ ಬರೆಯುತ್ತಿದ್ದಾರೋ ಅನ್ನುವ ರೀತಿಯಲ್ಲಿ ಬರೆಯ ತೊಡಗುತ್ತಾರೆ. ಪ್ರೇಮದ ಹುಡುಕಾಟದಲ್ಲಿ ತನ್ನ ಗೆಳೆಯರೊಡನೆ ಕಳೆದ ನಿಮಿಷಗಳ ಬಗ್ಗೆ ಹೇಳಿಕೊಳ್ಳುತ್ತಾ ಹೋಗುತ್ತಾರೆ. ಯಾರೋ ಒಬ್ಬ ರಾಜಕಾರಣಿಯ ಜೊತೆಗೆ ಸಖ್ಯ ಬೆಳೆಸುತ್ತಾರೆ. ಆತ ಬಾಡಿಗೆ ಕೊಲೆಗರರನ್ನು ನೇಮಿಸಿಕೊಳ್ಳುವಂತ ಮತ್ತು ಕುಖ್ಯಾತ ಸ್ಮಗ್ಲರ್ಗಳ ಜೊತೆ ಸಖ್ಯ ಹೊಂದಿರುವಂತವ. ‘ಆತನಂತ ಜೊತೆಗಾರ ಸಿಗಲೆಂದು ನಾಗದೇವರ ಮುಂದೆ ಸಾವಿರದೊಂದು ದೀಪ ಹಚ್ಚಿಟ್ಟು ಬೇಡಿದ್ದೆ’ ಅನ್ನುತ್ತಾರೆ ಕಮಲಾ! ಕಠೋರತೆಯ ಕವಚದೊಳಗಿದ್ದ ಆತನ ಆತ್ಮದೊಳಗೆ ನುಸುಳಿ, ಆತನ ಪ್ರೇಮವನ್ನು ಹೊಂದಲು ಬಯಸಿದೆ ಅನ್ನುವ ಕಮಲಾ ಬದುಕನ್ನು ಪಣಕ್ಕಿಡುವ ಶಪಥ ತೊಟ್ಟಿದ್ದರೋ ಅನ್ನಿಸಿ ಬಿಟ್ಟಿತು. ಅವನೊಡನೆಯ ಸಖ್ಯದ ದಿನಗಳನ್ನು ಮೊದ ಮೊದಲಿಗೆ ಮೆಚ್ಚುವ ಅವರು, ಸ್ವಲ್ಪವೇ ದಿನಗಳಲ್ಲಿ ಆ ಸಂಬಂಧ ಕೊನೆಗಾಣಿಸಿ ಬಿಡುತ್ತಾರೆ ….
(ಮುಂದಿನವಾರ ಲೇಖನದ ಉಳಿದ ಭಾಗ)


Very intense writeup.
Obba manushya gaalige viruddhavaagi eejabekaadare, adeshtu kathoravaagi baduku nadesirtaane alva!!
Its a strange experience…reading kamala das.
ಈಕೆಯನ್ನ ಓದಿದರೆ ನನ್ನೊಳಗಿನದನ್ನ ಈಕೆ ಅದು ಹೆ೦ಗೆ ಬಿಚ್ಚಿಟ್ಟಿದ್ದಾಳಲ್ಲಾ ಅನಿಸಿಬಿಟ್ಟಿತು….
ಭಾರತಿ, ತುಂಬಾ ಚೆನ್ನಾಗಿ ಬರೆದಿದ್ದೀರಿ. ಕಾಂಪ್ಲೆಕ್ಸ್ ವ್ಯಕ್ತಿತ್ವವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲು ಪ್ರೇರಿಪಿಸುವಂತಿದೆ ಲೇಖನ. ನಿಮ್ಮ ಬರಹ ಕುಶಿಕೊಟ್ಟಿತು.
ಕಮಲಾ ದಾಸರ ಕಾಡುವ ವ್ಯಕ್ತಿತ್ವವನ್ನು ಮನಸ್ಸಿನಲ್ಲಿ ಉಳಿಯುವಂತೆ ಮತ್ತೆ ಮತ್ತೆ ಕಾಡುವಂತೆ ಪರಿಚಯಿಸುವ ಲೇಖನ.
ಕಮಲಾ ದಾಸ್ ಅವರದು ಸದಾ ಕಾಡುವ ವ್ಯಕ್ತಿತ್ವ.. ನಾನು ಅವರ ಪುಸ್ತಕ ಮತ್ತು ಕವನಗಳನ್ನು ಓದಿದ್ದೇನೆ. ನಿಜಕ್ಕೂ ನಮ್ಮನ್ನು ಆಳವಾದ ಆಲೋಚನೆಗೆ ದೂಡುತ್ತದೆ. ಭಾರತಿ ಅಕ್ಕಾ ತುಂಬಾ ಚೆನ್ನಾಗಿ ಬರೆದಿದ್ದೀರಿ. ಮುಂದಿನ ಭಾಗಕ್ಕೆ ಕಾಯುತ್ತಿರುವೆ.
Ondolle pustakada bagge ondolle baraha….thank you….
“ಇಂತಹ ಹುಡುಕಾಟಕ್ಕೆ ಹೊರಟ ಯಾರೊಬ್ಬರಿಗೂ ಯಾವುದೇ ಹೊತ್ತಿಗೂ ಬೇಕಿದ್ದು ಸಿಕ್ಕಿರುವುದಿಲ್ಲ. ಕೊನೆಗೆ ಹುಡುಕಾಟವೇ ಒಂದು ದಾಹವಾಗಿ ಬಿಡುತ್ತದೆ. ಒಂದಿಷ್ಟು ದಿನಗಳ ನಂತರ ಯಾವುದಕ್ಕಾಗಿ ಈ ಹುಡುಕಾಟ ಅನ್ನುವಷ್ಟೂ ಎಳೆ ತಪ್ಪಿಹೋಗಿ ಮತ್ತಿಷ್ಟು ಗೋಜಲುಗಳ ಮಧ್ಯೆ ಕಳೆದುಹೋಗುತ್ತಾರೆ. ಕೊನೆಗೆ ಉಳಿಯುವುದು ಅಖಂಡ ವಿಷಾದ ಮತ್ತು ಒಂದಿಷ್ಟು ಸೋತ ಸಂಬಂಧಗಳ ಅಸ್ತಿ ಪಂಜರವಷ್ಟೇ” – ಇಷ್ಟವಾಯಿತು. ನಿಜವಾಗಿಯೂ ಬರವಣಿಗೆ ಬಿಡುಗಡೆಯ ಪ್ರಕ್ರಿಯೆಯೇ…
ಮುಸ್ಲಿಂ ಆಗಿ ಸುರಯ್ಯಾ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ರು ಅಲ್ವಾ ?
ಬಿಂದಾಸ್ ಆಗಿ ಹೇಳುವ ಈಕೆ ನನಗಿಷ್ಟ.
ಅವರ ಪಾಯಸ ಅನ್ನೋ ಕಥೆ ನನಗೆ ತುಂಬಾ ಕಾಡುತ್ತೆ.
ಅವರ ಬಗ್ಗೆ ನಿಮ್ಮದು ಒಳ್ಳೆಯ ಬರಹ ಭಾರತೀ.
ಪ್ರತಿಯೊಬ್ಬ ಹೆಂಗಸೂ ತನ್ನ ಅಂತರಾಳದಲ್ಲಿ ಬಯಸುವ ಎಲ್ಲವನ್ನೂ ಆಕೆ ಅಕ್ಷರಗಳಲ್ಲಿ ಹರಡಿದ್ದಾರೆ…ಮತ್ತು ಅದಕ್ಕಾಗಿ ಸಾಕಷ್ಟು controversy ಗೆ ಸಿಕ್ಕರೂ ಆಕೆಯ ಜೀವನಪ್ರೀತಿ ಕಿಂಚಿತ್ತೂ ಕಡೆಮೆಯಾಗಲಿಲ್ಲ. ಇಷ್ಟವಾಯಿತು ಭಾರತೀ…ಮುಂದಿನ ಕಂತಿಗೆ ಕಾಯುತ್ತಾ….
ತುಂಬಾ ಚೆನ್ನಾಗಿ ಬರೆದಿದ್ದೀರಿ.
ಕೊನೆಗೆ ಹುಡುಕಾಟವೇ ಒಂದು ದಾಹವಾಗಿ ಬಿಡುತ್ತದೆ.ಕೊನೆಗೆ ಉಳಿಯುವುದು ಅಖಂಡ ವಿಷಾದ ಮತ್ತು ಒಂದಿಷ್ಟು ಸೋತ ಸಂಬಂಧಗಳ ಅಸ್ತಿ ಪಂಜರವಷ್ಟೇ ….ನಿಜ.
ಕಮಲಾ ದಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ
ಕಮಲಾ ದಾಸ್ ಸಮಗ್ರ ಕತೆಗಳು &
ಕಮಲಾದಾಸ್ ಸಮಗ್ರ ಕಾದಂಬರಿಗಳು
ಕಮಲಾ ದಾಸ್ ಸಮಗ್ರ ಕವಿತೆಗಳು
ಸದ್ಯದಲ್ಲೆ ೪ ಸಂಪುಟಗಳಲ್ಲಿ ಹೊರ ಬರಲಿವೆ.
vibrant colour na vyaktitva odi.. ivalannu ishta padabeko bidabeko tiliyade… kadege ignore maaduvanta vyaktitva alla annisitu..chennaagi barediddeera bharati.