ಅಶ್ವಿನಿ ನೋಡಿದ ‘ಕಣಿವೆಯ ಹಾಡು’

ಅಶ್ವಿನಿ

**

ತೊ. ನಂಜುಂಡಸ್ವಾಮಿ ಅವರ ನೆನಪಿನಲ್ಲಿ ನೀಡಲಾದ ಎರಡನೇ ವರ್ಷದ ಪ್ರಶಸ್ತಿಗೆ ಖ್ಯಾತ ಕಥೆ, ನಾಟಕ ಮತ್ತು ಕಾದಂಬರಿಕಾರರಾದ ಹೂಲಿ ಶೇಖರ್ ಅವರು ಭಾಜನರಾದರು. ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ಈ ಸಮಾರಂಭದಲ್ಲಿ ಸಾಣೆಹಳ್ಳಿ ಹಳ್ಳಿ ಮಠದ ಶ್ರೀ. ಶಿವಕುಮಾರ ಪಂಡಿತಾರಾಧ್ಯ ಸ್ವಾಮೀಜಿಗಳು, ಖ್ಯಾತ ಹೃದ್ರೋಗ ತಜ್ಞರಾದ ಡಾ. ಸಿ ಎನ್ ಮಂಜುನಾಥ್, ರಂಗಭೂಮಿ ಮತ್ತು ಕಿರುತೆರೆಯ ನಿರ್ದೇಶಕ ಬಿ.ಸುರೇಶ್, ರಂಗಸಂಘಟಕ ಶ್ರೀನಿವಾಸ್ ಜಿ ಕಪ್ಪಣ್ಣ ಇವರುಗಳು ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ನಂತರ ಮೈಸೂರಿನ ನಟನ ತಂಡದಿಂದ ‘ಕಣಿವೆಯ ಹಾಡು’ ನಾಟಕವನ್ನು ಪ್ರದರ್ಶಿಸಲಾಯಿತು. ಸಾಕಷ್ಟು ದಿನಗಳಿಂದ ನಾನು ನೋಡಲೇಬೇಕು ಎಂದು ಕಾಯುತ್ತಿದ್ದ ನಾಟಕ ‘ಕಣಿವೆಯ ಹಾಡು’. ಈ ನಾಟಕದ ಕುರಿತು, ದಿಶಾ ರಮೇಶ್ ಮತ್ತು ಮೇಘ ಸಮೀರಾ ಅವರ ಅಭಿನಯವನ್ನು ಕುರಿತು ರಂಗಭೂಮಿಯ ಅನೇಕರಿಂದ ಮೆಚ್ಚುಗೆಯ ಮಾತುಗಳನ್ನು ಕೇಳಿದ್ದು ; ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುತ್ತಮ ವಿಮರ್ಶೆಯನ್ನು ಓದಿದ್ದು ಇದಕ್ಕೆ ಕಾರಣ. ಇಂದು ಈ ನಾಟಕವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳದೆ ನೋಡಲೇಬೇಕು ಎಂದು ನಿರ್ಧಾರ ಮಾಡಿದ್ದೆ. ನಾಟಕದ ನಂತರ ಮಾತು ತೋಚದ, ಮೂಕವಿಸ್ಮಿತ ಸ್ಥಿತಿಯಲ್ಲಿ ನಾನಿದ್ದೆ ಎಂದರೆ ತಪ್ಪಲ್ಲ.

ಅಜ್ಜ ಮತ್ತು ಮೊಮ್ಮಗಳ ಬಾಂಧವ್ಯವನ್ನು ನಾಟಕ ಅದ್ಭುತವಾಗಿ ಕಟ್ಟಿಕೊಡುತ್ತದೆ. ಅವರ ಪ್ರೀತಿ ಮತ್ತು ತಿಕ್ಕಾಟಗಳು, ಜಗಳ, ವಾದ, ಹಠ ಹಾಗೆಯೇ ಅವರ ಅಪಾರ ಪ್ರೀತಿಯನ್ನು ಮನಮುಟ್ಟುವಂತೆ ಬಿಂಬಿಸುತ್ತದೆ. ಅಜ್ಜ ಮತ್ತು ಮೊಮ್ಮಗಳ ಭಾವನಾತ್ಮಕ ತೊಳಲಾಟವನ್ನು ಜನರಿಗೆ ತಲುಪಿಸುವಲ್ಲಿ ನಾಟಕ ಯಶಸ್ವಿಯಾಗುತ್ತದೆ. ತಲೆಮಾರುಗಳ ನಡುವಿನ ವ್ಯತ್ಯಾಸ, ಅಂತರ ಮತ್ತು ಆ ಕಾರಣಕ್ಕೆ ಸೃಷ್ಟಿಯಾಗುವ ಹತ್ತಾರು ಮುಂಗೋಪ ಜಗಳಗಳು, ಆದರೆ ಅದೆಲ್ಲವನ್ನೂ ಮೀರಿ ಮೌನವಾಗಿ ಹರಿಯುವ ಪ್ರೀತಿಯ ನದಿ ಅವರಿಬ್ಬರನ್ನು ಬೆಸೆಯುತ್ತದೆ.

ತನ್ನ ಭವಿಷ್ಯದ ಕನಸು, ತನ್ನ ಬದುಕನ್ನು ಕಟ್ಟಿಕೊಳ್ಳುವ ಬಯಕೆ, ಹೆಸರುವಾಸಿ ಗಾಯಕಿಯಾಗಬೇಕು ಎನ್ನುವ ಬಯಕೆ ವೆರೋನಿಕಾಳದ್ದು. ಮೊಮ್ಮಗಳ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿಯ ಕಾರಣಕ್ಕೆ ಅವಳು ಕಣಿವೆಯನ್ನು ಬಿಟ್ಟು ಎಲ್ಲಿಗೂ ಹೋಗಲು ಅನುಮತಿ ನೀಡದಿರುವ ಮನಸ್ಸು ತಾತ ಬಕ್ಸ್ ನದ್ದು. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡಿರುವ ಬಕ್ಸ್ ಗೆ ಇರುವುದು ವೆರೋನಿಕ ಮಾತ್ರ. ಮತ್ತು ಅವಳು ಎಷ್ಟೇ ದೊಡ್ಡವಳಾದರೂ ಇನ್ನೂ ಪುಟ್ಟ ಹುಡುಗಿ ಎನ್ನುವ ಸಹಜ ಕಾಳಜಿ. ಕಣಿವೆಯ ಹೊರಗಿನ ಪ್ರಪಂಚ ತನ್ನ ಮೊಮ್ಮಗಳನ್ನು ಎಲ್ಲಿ ಬಲಿ ತೆಗೆದುಕೊಂಡು ಬಿಡುವುದೋ ಎನ್ನುವ ಭಯ. ತನ್ನ ಕನಸಿನ ಹಾದಿಯಲ್ಲಿ ಹೋಗಿ ಬಿಟ್ಟರೆ, ತಾತನ ಮನಸ್ಸಿಗೆ ನೋವಾಗುವುದೇನೋ ಎನ್ನುವ ಕಾಳಜಿ ಮೊಮ್ಮಗಳದ್ದು. ಅದೆಷ್ಟು ಭಾವಗಳು!!!

ಪ್ರತಿಯೊಬ್ಬ ತಂದೆ ತಾಯಿ, ಅಜ್ಜ ಅಜ್ಜಿ, ಬಕ್ಸ್ ಪಾತ್ರದಲ್ಲಿ ತಮ್ಮನ್ನು ತಾವು ಕಂಡುಕೊಂಡರೆ ಆಶ್ಚರ್ಯವೇನಲ್ಲ. ಹಾಗೆಯೇ ಇಂದಿನ ಯುವತಿಯರು ವೆರೋನಿಕ ಪಾತ್ರದಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವುದು ಸಹಜ. ಇವರಿಬ್ಬರ ಸಂಘರ್ಷದ ಹಿಂದೆ ಸ್ಪಷ್ಟವಾಗಿ ಕಾಣುವುದು ಒಬ್ಬರಿಗೆ ಮತ್ತೊಬ್ಬರ ಮೇಲಿರುವ ಅಪಾರ ಪ್ರೀತಿ ಮಾತ್ರ. ‘ನೀನು ನನ್ನ ಹಾಡನ್ನು ಸಾಯಿಸಿಬಿಟ್ಟೆ ಅಜ್ಜ’ ಎಂದು ವೆರೋನಿಕ ಕಣ್ಣೀರಾದಾಗ ಸಭಿಕರ ಕಣ್ಣಾಲಿಗಳು ತುಂಬಿ ಬಂದದ್ದು ಸತ್ಯ. ಸದಾ ಹಾಡುವ, ಉತ್ಸಾಹದ ಚಿಲುಮೆಯಂತಿರುವ ವೆರೋನಿಕ ಮೌನಿಯಾದಾಗ ಅದೇನೋ ಹೇಳಲು ಸಾಧ್ಯವಾಗದ ಸಂಕಟ. ಕೊನೆಗೂ ತಾತ ಬಕ್ಸ್ ವೆರೋನಿಕಾಳ ತಲೆಯ ಮೇಲೆ ಕೈ ಇಟ್ಟು” ನಿನಗೆ ಎಲ್ಲವೂ ಒಳ್ಳೆಯದಾಗಲಿ” ಎಂದು ಹರಸಿ ಅವಳ ಕನಸಿನ ಹಾದಿಯಲ್ಲಿ ಸಾಗಲು ಕಳುಹಿಸಿ ಕೊಡುವಾಗ ಪ್ರೇಕ್ಷಕರಿಗೆ ಚಪ್ಪಾಳೆ ಹೊಡೆಯದೇ ಇರಲು ಸಾಧ್ಯವಾಗಲೇ ಇಲ್ಲ.

ದಿಶಾ ರಮೇಶ ಅವರ ಅಭಿನಯವನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ ಇಲ್ಲ. ಎಲ್ಲ ಉಪಮೆಗಳು ಸೋತಂತೆ ಭಾಸವಾಗುತ್ತದೆ. ಹಾಡು ಹೇಳುತ್ತಾ, ನೃತ್ಯ ಮಾಡುತ್ತಾ ಅಭಿನಯಿಸುವುದು ಸುಲಭದ ಮಾತಲ್ಲ. ನಾಟಕದ ಪ್ರಾರಂಭದಿಂದ ಅಂತ್ಯದವರೆಗೂ ವೇದಿಕೆಯ ಮೇಲೇ ಇದ್ದು; ಉಚ್ಚ ಸ್ವರದಲ್ಲಿ ಹಾಡಿ, ನೃತ್ಯ ಮಾಡಿ, ಮುಂದಿನ ಕ್ಷಣವೇ ಸಂಭಾಷಣೆಯನ್ನು ಹೇಳುವ ದಿಶಾ ಪ್ರತಿಭೆಯ ಸಾಗರ. ತುಂಟಾಟಿಕೆಯ ಸನ್ನಿವೇಶಗಳಲ್ಲಿ ಪ್ರೇಕ್ಷಕರನ್ನು ನಗಿಸಿ, ಹಾಡುಗಳು ನಾಟಕದ ನಂತರವೂ ಕಿವಿಯಲ್ಲಿ ರಿಂಗಣಿಸುವಂತೆ ಹಾಡಿ, ಭಾವನಾತ್ಮಕ ಸನ್ನಿವೇಶಗಳಲ್ಲಿ ಕಣ್ಣಾಲಿಗಳು ತುಂಬಿ ಬರುವಂತೆ ಅಭಿನಯಿಸಿದ ದಿಶಾ ರಂಗಭೂಮಿಯ ಆಸ್ತಿ. ದಿಶಾ ಅಭಿನಯಿಸಲೇ ಇಲ್ಲ. ಅವರೇ ವೆರೋನಿಕ ಆಗಿಬಿಟ್ಟಿದ್ದರು ಎನ್ನುವುದು ಸತ್ಯ.

ಮೇಘ ಸಮೀರಾ ಅವರ ಅಭಿನಯವು ಅಷ್ಟೇ ಸಹಜ. 30ರ ಪ್ರಾಯದ ಹುಡುಗ 70ರ ಅಜ್ಜನೇ ಆಗಿಬಿಟ್ಟಿದ್ದರು. ಸ್ವರ್ಗದಲ್ಲಿರುವ ಬೆಟ್ಟಿಯ ಜೊತೆಗಿನ ಸಂಭಾಷಣೆ ನಡೆಸುವ ಸಂದರ್ಭಗಳಲ್ಲಿ, ಪರಂಗಿಯ ಅಧಿಕಾರಿಯನ್ನು ಕಲ್ಪಿಸಿಕೊಂಡು ಅವರ ಬಳಿ ಕೆಲಸ ಯಾಚಿಸುವ ಸನ್ನಿವೇಶದಲ್ಲಿ ಅವರ ಅಭಿನಯ ಮನೋಜ್ಞ. ಒಟ್ಟಿನಲ್ಲಿ ಇವರಿಬ್ಬರೂ ಪ್ರೇಕ್ಷಕರ ಕೈಹಿಡಿದು ಕಣಿವೆಯ ಸುತ್ತ ಪ್ರಯಾಣಿಸಿ ಬದುಕಿನ ದರ್ಶನ ಮಾಡಿಸುತ್ತಾರೆ.
ನಾಟಕ ಪ್ರಾರಂಭದಿಂದ ಅಂತ್ಯದವರೆಗೂ ಎಲ್ಲಿಯೂ ತನ್ನ ವೇಗವನ್ನು ಕಳೆದುಕೊಳ್ಳದೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದಕ್ಕೆ ನಾಟಕದ ನಿರ್ದೇಶಕರಾದ ಶ್ರೀಪಾದ್ ಭಟ್ ರವರು ಅಭಿನಂದನಾರ್ಹರು.

ನಿಮ್ಮ ಊರುಗಳಲ್ಲಿ ಈ ನಾಟಕದ ಪ್ರದರ್ಶನ ನಡೆದಾಗ, ತಪ್ಪದೇ ವೀಕ್ಷಿಸಿ ಎಂದಷ್ಟೇ ಹೇಳಬಲ್ಲೆ. ತೊ.ನಂ ಅವರ ನೆನಪಿನ ಕಾರ್ಯಕ್ರಮಕ್ಕೆ ಈ ನಾಟಕವನ್ನು ಆಯ್ಕೆ ಮಾಡಿ, ಅದನ್ನು ವೀಕ್ಷಿಸುವ ಅವಕಾಶವನ್ನು ಒದಗಿಸಿಕೊಟ್ಟ ನನ್ನ ಅಪ್ಪ ಗುಂಡಣ್ಣನಿಗೆ ಶರಣು.

‍ಲೇಖಕರು avadhi

February 11, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: