ಅಶೋಕ ಶೆಟ್ಟರ್ ಕಾಲಂ : ಶ್ವಾನ ಪುರಾಣಂ

ಒಂದಾನೊಂದು ಕಾಲದಲ್ಲಿ ಅಂದರೆ ಇಪ್ಪತ್ತು ವರ್ಷಗಳ ಹಿಂದೆ ಆಗಿನ್ನೂ ಯುಕೇಜಿಯಲ್ಲೋ ಒಂದನೇ ತರಗತಿಯಲ್ಲೋ ಇದ್ದ ನನ್ನ ಮಗ ನಾಯಿಮರಿಯೊಂದನ್ನೆತ್ತಿಕೊಂಡು ಬಂದು “ಮಮ್ಮೀ, ಇನ್ ಮ್ಯಾಲ ಇದ ನಮ್ ಮನ್ಯಾಗ ಇರ್ತsತಿ.. ನಾಂವಿದನ್ನ ಸಾಕೂಣು” ಎಂದು ಘೋಷಿಸಿದ. ಆ ನಾಯಿಕುನ್ನಿಯನ್ನು ಅವನು ನಮ್ಮ ಯೂನಿವರ್ಸಿಟಿ ಗೆಸ್ಟ್ ಹೌಸ್ ನ ಅಡಿಗೆಯಾತನ ಮಗನಿಗೆ ಐದೋ ಹತ್ತೋ ರೂಪಾಯಿ ಕೊಟ್ಟು ತಂದಿದ್ದ. ನನ್ನಾಕೆಗೆ ಅದನ್ನು ಸಾಕಿಕೊಳ್ಳುವದು ಇಷ್ಟವಿರಲಿಲ್ಲ, ನನಗೂ ಅಷ್ಟೇ.
ಆದರೆ ಆಶೆ ಪಟ್ಟು ಅದನ್ನು ತಂದುಕೊಂಡಿದ್ದ ಮಗನಿಗೆ ನಿರಾಶೆ ಆಗಬಾರದೆಂದು ಒಪ್ಪಿದೆವು. ಆ ಮರಿಗಿನ್ನೂ ಒಂದು ತಿಂಗಳೂ ಆಗಿರಲಿಲ್ಲ. ಅದು ನಮ್ಮ ಮನೆಯಲ್ಲಿ ಪುಟುಪುಟು ಓಡಾಡಿಕೊಂಡು ನನ್ನ ಚಪ್ಪಲಿ, ಕಾಲ್ಚೀಲ ಇತ್ಯಾದಿಗಳನ್ನು ಕಡಿದು ಹಾಳುಮಾಡುತ್ತ ಬೈಸಿಕೊಳ್ಳುತ್ತ ಇತ್ತು. ಆಗ ಟಿವಿಯಲ್ಲಿ ಒಂದು ಸೀರಿಯಲ್ ಬರುತ್ತಿತ್ತು. ಅದರಲ್ಲಿ ಸೋನೂ ಎಂಬ ಬಾಲಕನ ಪಾತ್ರವೊಂದಿತ್ತು. “ಡ್ಯಾಡ್ಡೀ ಈ ನಾಯೀಮರೀಗಿ ಸೋನು ಅಂತ ಹೆಸರಿಡೂಣು?” ಎಂದು ಕೇಳಿದ ನನ್ನ ಮಗ.
ಹಾಗೆ ಅದರ ನಾಮಕರಣವಾಗಿ ಅದಕ್ಕೆ ತಿಣಿಸುವ ಉಣಿಸುವ ಅದು ಮಲಗುವ ಜಾಗವನ್ನು ಸ್ವಚ್ಛಗೊಳಿಸುವದೇ ಮೊದಲಾದ ಕೆಲಸ ಕಾರ್ಯಗಳೆಲ್ಲ ನನ್ನ ಹೆಂಡತಿಯ ಕೊರಳಿಗೆ ಬಿದ್ದು ಅವಳು ಆಗಾಗ ಗೊಣಗುತ್ತಿದ್ದಳಾದರೂ ಆ ನಾಯಿಯ ಬಗ್ಗೆ ಮಮತೆಯನ್ನೂ ಬೆಳೆಸಿಕೊಳ್ಳುತ್ತ ಹೋದಳು. ಅದರ ಮೈತೊಳೆಯುವದು, ಅದನ್ನು ಹಗಲಿನಲ್ಲೋ ರಾತ್ರಿ ಸರಹೊತ್ತಿನಲ್ಲೋ ಬಹಿರ್ದೆಸೆಗೆ ಕರೆದೊಯ್ಯುವ ಕೆಲಸ ನನ್ನದಾಯಿತು. “ಅಲಿಲಿ ಕೂಸS, ಊಟಾ ಮಾಡಿದೀ ಕೂಸS” ಎಂದು ಅದನ್ನು ಪ್ರೀತಿ ಮಾಡುವ “ಕೆಲಸ” ನನ್ನ ಮಗನದಾಯಿತು.
ಆ ನಾಯಿ ಎತ್ತರಕ್ಕೆ ಬೆಳೆಯಲಿಲ್ಲ. ಗಿಡ್ಡ ತಳಿಯಾದರೂ ಅದು ಆಗಾಗ ಸುತ್ತ ಮುತ್ತಲಿನ ಎಲ್ಲ ಪ್ರದೇಶಗಳ ದೊಡ್ಡ ದೊಡ್ಡ ಬೀದಿನಾಯಿಗಳ ಜೊತೆಗೆಲ್ಲ ಕಾಲುಕೆರೆದು ಜಗಳ ತೆಗೆದು ಅವುಗಳನ್ನು ಕಡಿದು ಅಥವಾ ಅವುಗಳಿಂದ ಕಡಿಸಿಕೊಂಡು ಮಚ್ಚು ಲಾಂಗು ಹಿಡಿದು ಹೊಡೆದಾಡಿಕೊಂಡ ರೌಡಿಗಳ ಹಾಗೆ ಮೈಯ್ಯನ್ನೆಲ್ಲ ರಕ್ತಸಿಕ್ತ ಮಾಡಿಕೊಂಡು ಮನೆಗೆ ಬರುತ್ತಿತ್ತು. ತಾನು ಆ ಅವತಾರದಲ್ಲಿ ಬಂದದ್ದನ್ನು ನಾವು ನೋಡಿದರೆ ಬೈಯ್ಯುತ್ತೇವೆಂದು ಸದ್ದುಗದ್ದಲವಿಲ್ಲದೇ ತುಡುಗೀಲೇ ಬರುತ್ತಿತ್ತಾದರೂ ಅದು ನಮಗೆ ಗೊತ್ತಾಗಿ ನಾವು ಬೈಯುವದೆಲ್ಲ ಬೈದು ಆಮೇಲೆ ಅದರ ಉಪಚಾರಕ್ಕೆ ನಿಲ್ಲುತ್ತಿದ್ದೆವು.
ಅದು ಸದಾ ಮನೆಯಲ್ಲಿ ಇರುವ ಜಾತಿಯ ನಾಯಿಗಳಂತಲ್ಲದೇ ಹೊರಗೆ ಹೋಗುವದು ಮನೆಗೆ ಬರುವದು ಮಾಡಿಕೊಂಡಿರುತ್ತಿತ್ತು. ತನ್ನ ಗೆಳೆಯರೊಂದಿಗೆ ನನ್ನ ಮಗ ಆಟವಾಡುವಲ್ಲಿಯೂ ಹೋಗುತ್ತಿತ್ತು. ಯೂನಿವರ್ಸಿಟಿ ಸ್ಟಾಫ್ ಕ್ವಾರ್ಟರ್ಸ್ ನಲ್ಲಿ ಮನೆಗೊಂದರಂತೆ ಎರಡರಂತೆ ಇದ್ದ ಗಂಡುಹುಡುಗರೆಲ್ಲ ಗಲಗಲ ಬಾಯಿಮಾಡಿಕೊಂಡು ಥರಾವರಿ ಆಟವಾಡಿಕೊಂಡಿರಬೇಕಾದರೆ ಅವರ ನಡುವೆ ನನ್ನ ಮಗನ ಬೆನ್ನು ಹಿಂದೆ ತಾನೂ ಸೇರಿಕೊಂಡು ಕಾಲ್ತೊಡಕಾಗುತ್ತಿದ್ದ ಅದನ್ನು ನನ್ನ ಮಗ ದರದರ ಎಳೆದುಕೊಂಡು ಬಂದು ಮನೆಯಲ್ಲಿ ಕಟ್ಟಿ ಹೋಗುತ್ತಿದ್ದ.
ಒಮ್ಮೆ ಅದರ ಉಡಾಳತನದಿಂದ ತಲೆ ರೋಸಿ ಹೋದ ನಾನು ಇದಿನ್ನು ಮನೆಯಲ್ಲಿರುವದೇ ಬೇಡ ಎಂದು ನನ್ನ ಮಗ ಅಳುತ್ತ ಪ್ರತಿಭಟಿಸುತ್ತಿದರೂ ಲೆಕ್ಕಿಸದೇ ಒಂದು ರಾತ್ರಿ ಅದನ್ನು ಒಂದು ಹಗ್ಗದಿಂದ ನನ್ನ ಹೀರೋಪುಕ್ ಗಾಡಿಯ ಹಿಂದೆ ಕಟ್ಟಿ ನಿಧಾನಕ್ಕೆ ಗಾಡಿ ಓಡಿಸುತ್ತ ನಮ್ಮ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರ ಕೋರ್ಟ್ ಸರ್ಕಲ್ ಬಳಿ ಇರುವ ನಗರಸಭೆ ಈಜುಕೊಳದ ಬಳಿ ಒಂದು ಗಿಡಕ್ಕೆ ಕಟ್ಟಿ ಮರಳಿ ಮನೆಗೆ ಬಂದೆ. ನನ್ನ ಮಗನಿಗೆ ನಿಜಕ್ಕೂ ಬೇಸರವಾಗಿತು. ಅದಕ್ಕೆ ಇನ್ನು ತಿಣ್ಣಿಸುವವರಾರು ಉಣ್ಣಿಸುವವರಾರು, ಅದಕ್ಕೆ ಹಸಿವಾದರೆ ಅದು ಯಾರನ್ನು ಕೇಳಬೇಕು ಎಂದೆಲ್ಲ ಮಾತನಾಡುತ್ತ ಅವನು ರೋದಿಸುತ್ತಿರಬೇಕಾದರೆ ನನಗೂ ನಾನು ಹಾಗೆ ಮಾಡಬಾರದಾಗಿತ್ತೆನ್ನಿಸತೊಡಗಿತು. ಆತನನ್ನು ನಾವು ಸಮಾಧಾನಿಸುತ್ತ ಕುಳಿತಿರಬೇಕಾದರೆ ಮನೆಯ ತಲೆಬಾಗಿಲ ಹೊರಗೆ ಬೌ ಬೌ !!! ನನ್ನ ಹೆಂಡತಿ ಅನುಮಾನದಿಂದ ಬಾಗಿಲು ತೆರೆದು ನೋಡಿದರೆ ಶ್ರೀಮಾನ್ ಸೋನೂ ಎಂಬ ನಾಯೀಮಹಾರಾಜರು ಬಾಲ ಅಲ್ಲಾಡಿಸುತ್ತ ನಿಂತಿದ್ದರು. ನನಗಂತೂ Lassie Come Home ಎಂಬ ಸಿನಿಮಾದಲ್ಲಿ ತನ್ನ ಹೊಸ ಮಾಲಿಕನಿಂದ ತಪ್ಪಿಸಿಕೊಂಡು ಬಡತನದ ಕಾರಣದಿಂದ ತನ್ನನ್ನು ಅವನಿಗೆ ಮಾರಿದವರ ಮನೆಗೇ ಅಂದರೆ ಸ್ಕಾಟ್ಲೆಂಡ್ ನಿಂದ ಯಾರ್ಕಶೈರ್ ನ ತಾನು ಬೆಳೆದ ಮನೆಗೇ ಪಡಬಾರದ ಕಷ್ಟ ಪಟ್ಟು ಮರಳಿದ ಲ್ಯಾಸ್ಸಿ ಎಂಬ ನಾಯಿಯನ್ನೇ ಕಂಡಂತಾಯಿತು. ನನ್ನ ಮಗ ಅದನ್ನು ಪರಿಪರಿಯಿಂದ ಮುದ್ದಾಡಿದ.
ನನ್ನ ಮಗನ ಕುರಿತು ಪ್ರೀತಿ, ನನ್ನ ಹೆಂಡತಿಯ ಕುರಿತು ಕಾಳಜಿ ಮತ್ತು ನನ್ನ ಕುರಿತು ಭಯ ಹೀಗೆ ತ್ರಿವಿಧ ಭಾವದಿಂದ ಅದು ಇರುತಿತ್ತು. ನನಗೆ ಕೋಪ ಬಂದರೆ ನಾನದರ ಕೊರಳ ಪಟ್ಟಿ ಹಿಡಿದು ಅದನ್ನು ಗುದ್ದುತ್ತಿದ್ದುದು ನಿಜವಾದರೂ ಅದರ ಬಗ್ಗೆ ಮಮತೆಯೂ ನನಗಿತ್ತು. ನಾನು ಸಂಜೆ ಡಿಪಾರ್ಟಮೆಂಟ್ ನಿಂದ ಮನೆಗೆ ಮರಳುವ ಹೊತ್ತಿಗೆ ಸರಿಯಾಗಿ ನನ್ನ ಮನೆ ಇದ್ದ ರಸ್ತೆಯ ತಿರುವಿಗೆ ರಿಲೇ ಆಟದಲ್ಲಿ ತನ್ನ ಟೀಮಿನ ಓಟಗಾರನಿಂದ ಕೋಲು ತೆಗೆದುಕೊಂಡು ಓಟ ಕೀಳಲು ಪೋಜಿಶನ್ ತೆಗೆದುಕೊಂಡು ನಿಲ್ಲುವ ಅಥ್ಲೀಟ್ ನ ಭಂಗಿಯಲ್ಲಿ ನಿಲ್ಲುತ್ತಿದ್ದ ಅದು ನನ್ನ ಗಾಡಿಯ ಜೊತೆ ಓಡಿ ಬಂದು ಬಾಲ ಅಲ್ಲಾಡಿಸುತ್ತ ತನ್ನ ಸಂತೋಷ ವ್ಯಕ್ತ ಪಡಿಸುತ್ತಿತ್ತು. ನಾನಾಗಲಿ ನನ್ನ ಮಗನಾಗಲಿ ಮನೆಯ ಹಿತ್ತಿಲ ಕಡೆ ಹೋದರೆ ಅದಕ್ಕೆ ಚಿಂತೆ ಇರುತ್ತಿರಲಿಲ್ಲ. ನಾವಿಬ್ಬರೂ ವೀರಾಧಿವೀರರು ಎಂದು ಅದು ಭಾವಿಸಿದಂತಿತ್ತು. ಆದರೆ ನನ್ನ ಪತ್ನಿ ಏನಾದರೂ ಮನೆಯ ಹೊರಗೋಡೆಗುಂಟ ಮುಸ್ಸಂಜೆ ಏನೋ ಕೆಲಸ ಎಂದು ಹಿತ್ತಿಲ ಕಡೆ ಹೋದಳೋ ಮುಗಿಯಿತು, ಅವಳಿಗೆ ಸಾವೇ ಕಾದಿದೆ ಏನೋ ಎಂಬಂತೆ ಒದ್ದಾಡಿ ಬಿಡಿಸಿಕೊಂಡು ಅವಳ ರಕ್ಷಣೆಗೆ ಧಾವಿಸುತ್ತಿತ್ತು. ನನ್ನ ಮಗ ಅದರ ಜೊತೆ ಇನ್ನಿಲ್ಲದ ರೀತಿಯಲ್ಲಿ ಮಂಗಾಟ ಮಾಡಿ ಅದರ ಜೀವ ತಿನ್ನುತ್ತಿದ್ದನಾದರೂ ಎಷ್ಟೇ ಕೋಪ ಬಂದರೂ ಸಹಿಸಿಕೊಳ್ಳುತ್ತಿತ್ತು.

ಆ ನಾಯಿ ಬಹಳ ಕಾಲ ಬದುಕುಳಿಯಲಿಲ್ಲ. ನನ್ನ ಮಗನ ಹತ್ತನೇ ಬರ್ಥಡೇ ಸಮಯದಲ್ಲಿ ಆರೋಗ್ಯವಾಗೇ ಇದ್ದ ಅದು ಆಮೇಲೆ ಯಾವುದೋ ಇನ್ ಫೆಕ್ಶನ್ ಕಾರಣವಾಗಿ ಸೊರಗಿಹೋಯಿತು. ಅದಕ್ಕೆ ಸಲೈನ್ ಹಚ್ಚಿಸಿ ಔಷಧ ಹಾಕಿ ಚಿಕಿತ್ಸೆ ಮಾಡಿದರೂ ಫಲಕಾರಿಯಾಗದೇ ಕೇವಲ ಐದು ವರ್ಷದ ಪ್ರಾಯದಲ್ಲೇ ಅದು ತೀರಿಹೋಯಿತು. ನಮ್ಮ ಮನೆಯಲ್ಲೂ ಮನಗಳಲ್ಲೂ ಒಂದು ಬಗೆಯ ಶೂನ್ಯ ಆವರಿಸಿಕೊಂಡಂತಾಯಿತು. ಅದನ್ನು ತುಂಬ ಹಚ್ಚಿಕೊಂಡಿದ್ದ ನನ್ನ ಹೆಂಡತಿ ತಿಂಗಳುಗಟ್ಟಲೆ ಅದರ ಸಾವಿಗೆ ದು:ಖಿಸಿದಳು. ಅದು ಮನೆಗೆ ಬರುತ್ತಿದ್ದುದು, ಮೈಸುತ್ತ ತಿರುಗಿ ಕುಳಿತುಕೊಳ್ಳುತ್ತಿದ್ದುದು, ತಾನು ಏನಾದರೂ ಮೆಲ್ಲುತ್ತಿದ್ದರೆ ಆಶೆಯಿಂದ ನೋಡುತ್ತ ಕುಳಿತು ತಾನದಕ್ಕೆ ಹಾಕದಿದ್ದರೆ ಬೌ ಎಂದು ಬೊಗಳಿ ಆಮೇಲೆ ಅಸಮಾಧಾನ ವ್ಯಕ್ತಪಡಿಸುವ ರೀತಿಯಲ್ಲಿ ಕುಂಯ್ಗುಡುತ್ತಿದ್ದುದು ಮುಂತಾದ ನೆನಪುಗಳೆಲ್ಲ ಒಮ್ಮೆ ಒದ್ದುಕೊಂಡು ಬಂದು ಅವಳು ದು:ಖಿಸುತ್ತ “ನನಗೀಗ ಸೊನೂ ಬೇಕ, ತಂದುಕೊಡ್ರಿ” ಎಂದಳು. ಸತ್ತುಹೋದ ಅದನ್ನು ನಾನೆಲ್ಲಿಂದ ತರಲಿ? ಇನ್ನು ಮುಂದೆ ನಾಯಿ ಸಾಕುವಂತಿಲ್ಲ ಎಂದು ಮಾತ್ರ ಅವಳು ಗಟ್ಟಿಯಾಗಿ ನಿರ್ಧರಿಸಿದಳು.
ಆದರೆ ನಾಯಿಗೂ ನಮಗೂ ನಂಟು ತಪ್ಪಲಿಲ್ಲ. ನಾವು ಹೊಸದಾಗಿ ಕಟ್ಟಿಸಿದ ನಮ್ಮ ಮನೆಗೆ ಬಂದ ಮೇಲೆ ನಮ್ಮ ಮನೆಯ ಸಮೀಪದಲ್ಲೇ ನನ್ನ ಹೆಂಡತಿಯ ಹಿರಿಯಕ್ಕನ ಮನೆಯೂ ಇದ್ದು ಅವರ ನಾಯಿ ಸ್ಕೂಬಿ ನಮ್ಮ ಮನೆಗೆ ನಿಯಮಿತವಾಗಿ ಬರತೊಡಗಿತು.ಮುಂಜಾನೆ ನಾವು ಹಾಕಿದ ಬ್ರೆಡ್ಡು ಬಿಸ್ಕೀಟು ತಿಂದು ತಾಸೆರಡು ತಾಸು ನಮ್ಮ ಮನೆಯಲ್ಲೇ ಪವಡಿಸಿ ಆಮೇಲೆ ಎದ್ದು ಹೋಗುತ್ತಿತ್ತು. ಅದೂ ಸದಾ ಕಾಲ ಮನೆಯ ಹೊರಗೇ ಓಡಾಡಿಕೊಂಡಿರುತ್ತಿದ್ದ ಜವಾರಿ ನಾಯಿಯಾದ್ದರಿಂದ ಒಮ್ಮೊಮ್ಮೆ ರೊಜ್ಜು ರಾಡಿ ತುಳಿದಾಡಿಕೊಂಡು ಬಂದಾಗ ನಾನು ಅದಕ್ಕೇ “ಅಲ್ಲೇ ಹೊರಗೆ ಕಟ್ಟೆಯ ಮೇಲೆ ಕುಳಿತಿರು ನಿನ್ನನ್ನು ಒಳಗೆ ಬಿಟ್ಟುಕೊಳ್ಳುವದಿಲ್ಲ” ಎನ್ನುತ್ತಿದ್ದೆ. ಅದು ಕೂಗಿ ನನ್ನ ಹೆಂಡತಿಯನ್ನು ಕರೆಯುತ್ತಿತ್ತು. ಅವಳದನ್ನು ಪರೀಕ್ಷಿಸಿ ಪರವಾಗಿಲ್ಲ ಎನ್ನಿಸಿದರೆ ಒಳಗೆ ಕರೆದುಕೊಳ್ಳುತ್ತಿದ್ದಳು. ತವರು ಮನೆಯ ನಾಯಿಯಲ್ಲವೇ ಎಂದು ನಾನೂ ಸುಮ್ಮನಾಗುತ್ತಿದ್ದೆ. ಸುಮಾರು ಹದಿನಾರು ವರ್ಷ ಬದುಕಿ ಅದು ಕಳೆದ ಜುಲೈನಲ್ಲಿ ನನ್ನ ಮಗನ ಮದುವೆಯ ಹಿಂದಿನ ದಿನ ಸತ್ತಿತು.
ಈ ಮಧ್ಯೆ “ನಾವು ಒಂದು ನಾಯಿ ಸಾಕೋಣ” ಎಂದು ನನ್ನ ಮಗ ಆಗಾಗ ಅನ್ನುವದು, “ಅದೆಲ್ಲಾ ಸಾಧ್ಯs ಇಲ್ಲ. ಎಲ್ಲೀದ ಹಚ್ಚೀ, ತಂದ ಸಾಕ್ತೀರಿ, ಆದ್ರ ಅದರ ಕೆಲಸ ಎಲ್ಲಾ ನನಗS”. ಎಂದು ನನ್ನ ಹೆಂಡತಿ ಖಡಾಖಂಡಿತವಾಗಿ ನಿರಾಕರಿಸುವದೂ, ನಾನೂ ನನ್ನ ಹೆಂಡತಿಯ ಪಕ್ಷವನ್ನೇ ವಹಿಸುವದು ನಡೆದೇ ಇತ್ತು. ನಾ ಒಂದ್ ಚಲೋ ಜಾತೀ ನಾಯಿ ತಂದs ಬಿಡ್ತsನಿ ಎಂದು ನನ್ನ ಮಗ ಅವಳನ್ನು ಹೆದರಿಸುತ್ತಲೇ ಇದ್ದ. ಮೊನ್ನೆ ಜುಲೈನಲ್ಲಿ ಅವನ ಮದುವೆ ಮಾಡಿ ಅದಾದ ಮೂರನೇ ದಿನಕ್ಕೇ ನಾನು, ನನ್ನ ಪತ್ನಿ ಮತ್ತು ಅವಳ ಕುಟುಂಬದ ಕೆಲವರು ನಮ್ಮ ಪೂರ್ವನಿರ್ಧರಿತ ಅಮರನಾಥ್ ಪ್ರವಾಸಕ್ಕೆ ತೆರಳಿದೆವು. ಜಮ್ಮು, ಶ್ರೀನಗರ್, ವೈಷ್ಣೋದೇವಿ, ಅಮರನಾಥ್, ಆಗ್ರಾ, ಮಥುರಾ, ಡೆಲ್ಲಿ, ಹರಿದ್ವಾರ್, ಋಷಿಕೇಶ್ ಎಂದೆಲ್ಲ ನಾವು ಸುತ್ತುತ್ತಿರಬೇಕಾದರೆ ಆಗ ತನ್ನ ಹನಿಮೂನ್ ನಿಂದ ಧಾರವಾಡಕ್ಕೆ ಮರಳಿದ್ದ ನಮ್ಮ ಮಗ ಫೋನ್ ಮಾಡಿ “ಮಮ್ಮೀ, ನಿನಗೊಂದ್ ಸರ್ ಪ್ರೈಜ್” ಎಂದಿದ್ದ. ನಾವು ಮನೆಗೆ ಮರಳಿದಾಗ ಆ ಸರ್ ಪ್ರೈಜ್ ಬಾಗಿಲ ಸಂದಿಯಿಂದ ಅಚ್ಚ ಕರೀ ಬಣ್ಣದ ನಾಯಿಮರಿಯೊಂದರ ರೂಪದಲ್ಲಿ ಬಾಲ ಅಲ್ಲಾಡಿಸುತ್ತ ನಮ್ಮೆಡೆಗೆ ಧಾವಿಸಿತು. ನನ್ನ ಪತ್ನಿಯ ಉತ್ಸಾಹ ಜರ್ರ್ ಎಂದು ಇಳಿದು ಹೋಗಿ “ಇದನ್ನ್ಯಾಕ ತರಾಕಹೋಗಿದ್ದ್ಯೋ ಸಾಗರ್” ಎಂದು ಅವಳು ಆಕ್ಷೇಪಿಸಿದಳು. “ಇದ ಬೆಸ್ಟ್ ನಾಯಿ ಮಮ್ಮೀ. ಲ್ಯಾಬ್ರಡಾರ್, ಎಂಟ ಸಾವಿರ ರೂಪಾಯಿ ಕೊಟ್ಟ ತಂದೇನಿ, ಭಾಳ ಶಾಣ್ಯಾ ನಾಯಿ” ಎಂದು ಅವನು ಅದರ ಗುಣಗಾಣ ಮಾಡಿದ. “ಅದಕ್ಕ ಏನ್ ಹೆಸರ ಇಟ್ಟೀಪಾ” ಎಂದೆ. ವ್ಹಿಸ್ಕಿ ಅಂದ. ಆ ಹೆಸರಿನ ಕುರಿತು ನನ್ನ ಹೆಂಡತಿ ಇನ್ನೊಂದು ರೌಂಡ್ ಆಕ್ಷೇಪವೆತ್ತಿದಳು
ಈಗ ಅದು ತನ್ನ ಆಟ,ನೋಟದಿಂದ ನನ್ನ ಹೆಂಡತಿಯನ್ನೂ ಮರುಳು ಮಾಡಿದೆ. ಲ್ಯಾಬ್ರಡರ್ ತನ್ನ ಬಕಾಸುರ ಹಸಿವಿಗೆ ಪ್ರಸಿದ್ಧ. ಆದರೆ ಅದು ಬಯಸಿದಂತೆಲ್ಲ ಹಾಕುತ್ತ ಹೋದರೆ ತಿಂದು ಅದು ಸ್ಥೂಲಕಾಯದ್ದಾದರೆ ಅದು ಹಲವು ಆರೋಗ್ಯ ಸಂಬಂಧಿ ತೊಂದರೆಗಳಿಗೆ ಆಹ್ವಾನವಿತ್ತಂತೆ. ಹೀಗಾಗಿ ಅದರ ಆಹಾರಾಭ್ಯಾಸವನ್ನು ಒಂದು ನಿಯಂತ್ರಣದಲ್ಲೇ ಇಡಬೇಕು. ಅದು ಜಾಣ ತಳಿ. ವಿಷಯಗಳನ್ನು ಬೇಗ ಗ್ರಹಿಸಿ ಕಲಿತುಕೊಳ್ಳುತ್ತದೆ. ಸ್ವಲ್ಪ ಹೈಪರ್ ಎಕ್ಟಿವ್ ಎನ್ನಬಹುದಾದ ಚಟುವಟಿಕೆ ಲ್ಯಾಬ್ರಡಾರ್ ತಳಿಯದು. ಸದಾ ಕುಟುಂಬದ ಸದಸ್ಯರ ನಡುವೇ ಇರುವದು ಅದಕ್ಕೆ ಇಷ್ಟ. ಕನಿಷ್ಟ ಒಂದು ತಾಸಾದರೂ ಅದಕ್ಕೆ ದೈಹಿಕ ಶ್ರಮ ಉಂಟಾಗುವಂತೆ ಅದನ್ನು ಬೆಳೆಸಬೇಕು. ವಾಸನೆಯನ್ನು ಗ್ರಹಿಸುವ ಅದರ ಶಕ್ತಿಗೂ ಅದು ಪ್ರಸಿದ್ಧ. ಹೀಗಾಗಿ ಅಪರಾಧಿಗಳನ್ನು, ಸ್ಫೋಟಕವಸ್ತುಗಳನ್ನು ಪತ್ತೆ ಹಚ್ಚಲು ಪೋಲೀಸ್ ಇಲಾಖೆಯಲ್ಲಿ ಬಳಕೆಯಾಗುವ ನಾಯಿ ಅದು. ಅದು ಬೊಗಳುವದು ಕಡಿಮೆ. ಕುಂಯ್ ಗುಡುವದು ಹೆಚ್ಚು.
ನಮ್ಮ ಮನೆಯ ಹೊಸ ಸದಸ್ಯನಾಗಿ ಈ ವ್ಹಿಸ್ಕಿ ಓಡಾಡಿಕೊಂಡಿದೆ. ಜಗಳ ತೆಗೆಯುತ್ತದೆ, ಮುದ್ದು ಮಾಡಲು ಬರುತ್ತದೆ, ಸಿಹಿ ಪದಾರ್ಥಗಳನ್ನು ತಿನ್ನಲು ಕೊಡಿ ಎನ್ನುತ್ತದೆ, ನನ್ನ ಪತ್ನಿಯ ಹೊಸ ವುಡ್ ಲ್ಯಾಂಡ್ ಚಪ್ಪಲಿಗಳನ್ನೂ, ನನ ಮಗ ಇಷ್ಟ ಪಟ್ಟು ತಂದುಕೊಂಡಿದ್ದ ಕೊಲ್ಲಾಪುರ್ ಚಪ್ಪಲಿಗಳನ್ನೂ, ನನ್ನ ಸ್ಲಿಪ್ಪರ್ ಗಳನ್ನೂ ಕಡಿದು ವಿರೂಪಗೊಳಿಸಿ ಬೈಸಿಕೊಂಡಿದೆ. ಸದ್ಯಕ್ಕಂತೂ ಅದಕ್ಕೂ ನನಗೂ ಒಂದು ನಂಟು ಅಂಟಿಕೊಂಡಿದೆ. ನಾನು ಅಥವಾ ಅದು ಬದುಕಿರುವ ವರೆಗೆ ಈ ನಂಟು ಜಾರಿಯಲ್ಲಿರುತ್ತದೆ.
 

‍ಲೇಖಕರು avadhi

October 9, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Rukmini Nagannavar

    ನನಗೂ ವ್ಹಿಸ್ಕಿ ತುಂಬಾ ಹಿಡಿಸಿತು ಗುರುಗಳೇ..

    ಪ್ರತಿಕ್ರಿಯೆ
  2. deepaG

    sir nim sonu vhisky bagge kelutta namm maneyallin raju mailari nenapige bandru hagu innoblu belli(cat)iddale iwar vishesha andre bere naayi bekku jote hindu mundu yochisade akhadakkilidu horaduv iwaru nayi bekkugalantirade sajati pranigalente sada antikondiruttare nannavva antoo owarige makkaliginta ondu tuttu jastine tinnisi belesuttiruv mahataayi.. nim hosa snehitanu chennagidane.. adare costly ayteno ansutte awan bele…!

    ಪ್ರತಿಕ್ರಿಯೆ
  3. Vaishali Hegde

    ಚೆನ್ನಾಗಿದೆ. ನಮ್ಮಪ್ಪ ಕೂಡ ಪರಮ ನಾಯಿಪ್ರಿಯ. ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಹಲವಾರು ತಳಿಯ ನಾಯಿಗಳು ರಾಜ್ಯವಾಳಿ ಹೋಗಿವೆ. ಆದರೂ ನಂಗೂ ನಾಯಿಗೂ ಅಷ್ಟಕ್ಕಷ್ಟೇ. ನಾಯಿಗೆರೆ ನನ್ನ ಚಿಕ್ಕತಂಗಿದೆ ಬಂದಿದೆ. ಈಗ ಪಪ್ಪನ ಮಗಳಾಗಿ ಒಂದು ಲ್ಯಾಬ್ರಡಾರ್ ಬಂದಿದೆ. “ದುಂಬಿ” ಅಂತ ಹೆಸರು. ಪಪ್ಪಾ ಬೆಳಗ್ಗೆ ವಾಕಿಂಗ್ ಹೋಗುವಾಗ ಆ ನಾಯಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕರೆದೊಯ್ಯುತ್ತಾರೆ. ಅದಕ್ಕೆ ಬಿಸಿಲಾದರೆ ಇಷ್ಟವಿಲ್ಲವಂತೆ!!! 🙂 ನಿಮಗೆ ಆ ಫೋಟೋ ಕಳಿಸುವೆ 🙂

    ಪ್ರತಿಕ್ರಿಯೆ
  4. nagraj.harapanahalli

    ನಮ್ಮ ಮನೆಯಲ್ಲೂ ಚಿನ್ನಿ ಅಂಥಾ 8 ವರ್ಷದ ನಾಯಿ ಇದೆ. ಅದಿನ್ನು ಚಿಕ್ಕ ಮರಿಯಾಗಿದ್ದಾಗ ನಮ್ಮ ಮನೆ ಕೆಲಸಕ್ಕೆ ಬರುವ ಅಜ್ಜಿ ತಂದುಕೊಟ್ಟಿತ್ತು. ಅದು ರಾಜವೈಭೋಗ ಅನುಭವಿಸಿ, ಈಗ ಪ್ರೌಢವಾಗಿದೆ. ನಾಯಿ ಪ್ರೀತಿಯ, ನಂಬಿಕೆಯ ಎಲ್ಲಾ ಅನುಭವಗಳು ನಮ್ಮವೂ ಆಗಿವೆ.

    ಪ್ರತಿಕ್ರಿಯೆ
  5. hulimane.krishnamoorthy@gmail.com

    Dear Sir,
    I just finished reading your story. I liked the simplicity of your style very much which is not so easy to achieve. I enjoyed your subtle wit all along the story – but felt sorry for Sonu. Your story reminds me of Corbett’s ‘Robin’ which is most evocative of a dog’s friendship with man or vice versa.
    As all of us know, dogs are of different types. One of our neighbours has a dog. He takes great pride in telling everybody that his dog belongs to the royal breed of Mudhol hounds. The dog does not seem to be of that pedigree either by its looks or by its traits. It is a mild dog. It bites not. It barks not. The only time it opens its mouth is when food is served to it. It always stays in its kennel – keeping itself aloof from the outer world. It is a dog as silent as a saint. We have christened it ‘St.Mudhol’ to honour its saintly qualities and to humour its owner.
    As it is a canine topic, let me add that I am very much fond of Plum’s dogs. How naughty and playful they are! One of his dogs is most ferocious- its name is Barthelomew- I think, it ‘biteth like a serpent and stingeth like an adder’.
    One may not want to have a menagerie in one’s house – yet I feel, a dog is always desirable. Now that you have got ‘whisky’-let’s drink a toast to an enduring friendship between you and the dog. Let it get all the endearments from you. And you, please continue to regale us with your stories.
    With Profound Regards,
    H.Krishnamoorthy

    ಪ್ರತಿಕ್ರಿಯೆ
    • Ashok Shettar

      Ha haa. Thank you Krishnamoorthy sir.In fact when I went about reading your comment I wished it were a little lengthier. I felt i was reading a piece of literature. St.Mudhol..,for instance..:)

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: