ಅಶೋಕ ವಧ೯ನ್ ಬೆಂಗಳೂರು ದಾರಿಯಲ್ಲಿ 1 – ವಿಸ್ತಾರಧಾಮ…

ವಿಸ್ಟಾ ಡೋಂ/ ವಿಸ್ತಾರಧಾಮ/ ವಿಸ್ತೃತ ಡುಮ್ಮ

ಅಶೋಕ ವಧ೯ನ್

ವಿಸ್ತೃತ ಡುಮ್ಮ ಅರ್ಥಾತ್ ವಿಸ್ಟಾ ಡೋಂ ರೈಲಿನ ಪ್ರಯಾಣಾನುಭವಕ್ಕಾಗಿ ನಾವಿಬ್ಬರು ಬೆಂಗಳೂರಯಾನ ನಿಕ್ಕಿ ಮಾಡಿದ್ದೆವು. ನಾನಾದರೋ ವಾರ ಮುಂಚೆ, ಬೆಳ್ಳಂ ಬೆಳೀಗ್ಗೆ ನಿಲ್ದಾಣಕ್ಕೆ ಧಾವಿಸಿ, ಅರ್ಜಿ ನಮೂನೆ ತುಂಬಿ, ಸರತಿ ಸಾಲು ಹಿಡಿದು, ನಗದು ಕೊಟ್ಟು… ಎಂದೆಲ್ಲಾ ಮಾಡುವವ. ಅಭಯ ಅವಕಾಶ ಕೊಡಲಿಲ್ಲ. ಆತ ಹತ್ತು ದಿನ ಮುಂದಾಗಿಯೇ ಮತ್ತು ಬೆಂಗಳೂರಿನಲ್ಲಿದ್ದಂತೇ ಕರಸ್ತಲದ ಇಷ್ಟಲಿಂಗವನ್ನು (ಚರವಾಣಿ) ನಮ್ಮ ಜಾತಕ (ಆಧಾರ್) ಮತ್ತು ಯುಕ್ತ ಪಾವತಿಗಳ ಸಹಿತ ಅರ್ಚಿಸಿ, ೨೩-೧೨-೨೧ರ ಸ್ಥಳಾಕಾಂಕ್ಷಿಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿ ಸ್ಥಾಪಿಸಿಬಿಟ್ಟ.

ಆ ದಿನಗಳು ಕ್ರಿಸ್ಮಸ್ ಹಾಗೂ ಹೊಸ ವರ್ಷದ ನಿರೀಕ್ಷೆಯ ದಿನಗಳಾದ್ದಕ್ಕೆ, ನಾವು ಪರ್ಯಾಯ ವ್ಯವಸ್ಥೆ (ಬಸ್) ಯೋಚಿಸುವಂತಾಗುವಾಗ ಅದೃಷ್ಟ ಒಲಿದಿತ್ತು. ವಿಸ್ಟಾಡೋಂನ ಎರಡನೇ ಭೋಗಿಯಲ್ಲಿ (ವಿ-೨) ನಮಗೆ ಮೂರು ಮತ್ತು ನಾಲ್ಕನೇ ಆಸನಗಳು ಸಿಕ್ಕಿದ ಸೂಚನೆ ಬಂತು. ಮತ್ತೆ ಕೇಳಬೇಕೇ, ದಿನ ಬಂದದ್ದೇ ಬಾಲ್ಯದಲ್ಲಿ ಸಿನಿಮಾ ಟೆಂಟ್ “ನಮೋ ವೆಂಕಟೇಶಾ…” ಹಾಡುವುದಕ್ಕೆ ಮುಂಚೆಯೇ ಕೂರಲು ಗೋಣಿ ಹಿಡಿದು (೧೯೬೫ರ ಸುಮಾರಿಗೆ) ಓಡಿದ ಕಾತರದಲ್ಲೇ ಕಂಕನಾಡಿ ನಿಲ್ದಾಣಕ್ಕೆ ಧಾವಿಸಿದ್ದೆವು.

ರೈಲ್ವೇ ಜಾಲತಾಣ ಅಂದು ಘೋಷಿಸಿಕೊಂಡಂತೆ ಹನ್ನೊಂದೂವರೆ ಗಂಟೆಗೆ ಹೊರಡಲಿದ್ದ ರೈಲಿಗೆ, ಗಂಟೆ ಮುಂಚಿತವಾಗಿಯೇ ತಲಪಿದ್ದೆವು. ವಿಚಿತ್ರ ಎಂದರೆ, ಆ ರೈಲು – ಕಾರವಾರ – ಯಶವಂತಪುರ ರೈಲು, ನಮಗಿಂತಲೂ ಮೊದಲೇ ಅಲ್ಲಿ ಬಂದು ವಿಶ್ರಮಿಸಿತ್ತು!

[ಟೀಕೆ – ೧: ಕೊಂಕಣ ರೈಲು ಮಾರ್ಗದ ಒಟ್ಟಾರೆ ಹರಿವು ಉತ್ತರ – ದಕ್ಷಿಣಕ್ಕಿದೆ. ಆದರೆ ಕಂಕನಾಡಿ ನಿಲ್ದಾಣದ ಆಯವೇ ಪೂರ್ವ ಪಶ್ಚಿಮವಾಗಿ ಚಾಚಿಕೊಂಡಿದೆ. ಅದಕ್ಕೆ ಸರಿಯಾಗಿ ಪಡೀಲಿನಿಂದ ದೀರ್ಘ ತಿರುವು ತೆಗೆದುಕೊಂಡು ಬರುವ ರೈಲಿನ ಎಂಜಿನ್ನು ಬೆಂಗಳೂರು ದಿಕ್ಕಿಗೆ, ಅಂದರೆ ಪಶ್ಚಿಮ – ಪೂರ್ವದ ಓಟಕ್ಕಾಗುವಾಗ ಸ್ಥಾನ ಬದಲಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅಷ್ಟಕ್ಕಾಗಿ ಇಡಿಯ ರೈಲು ಒಂದು ಗಂಟೆಗೂ ಮಿಕ್ಕು ಅಲ್ಲಿ ಸಮಯ ಕಳೆಯುವುದು ಕಾರವಾರದಿಂದ ಬಂದ ಯಾತ್ರಿಗಳಿಗೂ ಮುಂದಿನ ಯಾನಾವಧಿಗೂ ಮಾಡುವ ಅನ್ಯಾಯ. ಬೆಂಗಳೂರು ಮೀಟರ್ ಗೇಜ್ ನಿರ್ಮಾಣ, ಮುಂದೆ ಬ್ರಾಡ್ ಗೇಜ್ ಪರಿವರ್ತನೆಗಳನ್ನು ನೋಡುತ್ತಲೇ ಬಂದವ ನಾನು. ಆ ಎಲ್ಲ ವೆಚ್ಚ ಹಾಗೂ ಶ್ರಮಗಳ ಲೆಕ್ಕದಲ್ಲಿ ಇಲ್ಲಿ ಯಾವತ್ತೂ ಓಡುವ ಗಾಡಿಗಳ ಸಂಖ್ಯೆ ಕಡಿಮೆ. ಇದು ಖಾಸಗಿ ಬಸ್ಸುಗಳ ಹುನ್ನಾರ ಮತ್ತು ಮಲಬಾರ್ ರೈಲ್ವೇ ವಿಭಾಗದ ಮಲತಾಯಿ ಧೋರಣೆ ಎನ್ನುವುದನ್ನೂ ನಾನು ನಂಬಲರ್ಹವಾಗಿಯೇ ಕೇಳಿದ್ದೇನೆ. ಹೆಚ್ಚು ವಿವರಗಳಿಗಿಳಿಯದೆ ಒಂದೇ ವಾಕ್ಯದಲ್ಲಿ ಮುಗಿಸುತ್ತೇನೆ – ಪ್ರಸ್ತುತ ಯಾನದಲ್ಲೂ ಬೆಂಗಳೂರಿನವರೆಗೂ ಈ ವಿಳಂಬ ದ್ರೋಹವನ್ನು ನಾವು ಅನುಭವಿಸಿದ್ದೇವೆ.]

ಕಾರವಾರ – ಬೆಂಗಳೂರು ಹಗಲ ರೈಲಿನಲ್ಲಿ ಹದಿಮೂರು ಭೋಗಿಗಳಿದ್ದವು. ಅವುಗಳಲ್ಲಿ ಕೇವಲ ಎರಡು ಮಾತ್ರ ವಿಸ್ತೃತ ಡುಮ್ಮಗಳು. ಮಂಗಳೂರಿನವರೆಗೆ ಅವು ಸಾಲಿನ ಕೊನೆಯಲ್ಲಿದ್ದವು, ಇಲ್ಲಿ ನಮ್ಮ ಕಣ್ಣೆದುರೇ ಇಂಜಿನ್ ದಿಕ್ಕು ಬದಲಾಯಿಸಿದ ಮೇಲೆ ಮೊದಲ ಸ್ಥಾನವನ್ನೇ ಪಡೆದವು. ಆದರೆ ಆ ಭೋಗಿಗಳ ವೈಶಿಷ್ಟ್ಯವೆಂದೇ ಪ್ರಚುರಿಸುವ ಒಂದು ಕೊನೆಯ ಪೂರ್ಣ ಕನ್ನಡಿಗೋಡೆ ಅರ್ಥಾತ್ ಪಾರದರ್ಶಕತೆಗೆ ಎದುರು ಇಂಜಿನ್ನಿನ ಬೆನ್ನು ಮತ್ತು ಹಿಂದೆ ಇನ್ನೊಂದೇ ಭೋಗಿಯ ಮುಸುಡಷ್ಟೇ ದಕ್ಕುತ್ತದೆ.

ಕಾರವಾರದಿಂದ ಮಂಗಳೂರಿಗೆ ಬಂದಾಗಿದ್ದಂತೆ ಒಟ್ಟಾರೆ ರೈಲಿನ ಕೊನೆಯಲ್ಲಿದ್ದಿದ್ದರೆ ಇತ್ತ ಸುಬ್ರಹ್ಮಣ್ಯದವರೆಗೂ (ಅಲ್ಲಿ ಹೆಚ್ಚಿನ ನೂಕುಬಲ ಕೊಡಲು ಹಿಂದಕ್ಕೂ ಒಂದು ಇಂಜಿನ್ ಸೇರಿಕೊಳ್ಳುತ್ತದೆ. ಸಕಲೇಶಪುರದಲ್ಲಿ ಅದು ಕಳಚಿಕೊಂಡ ಮೇಲೆ) ಬೆಂಗಳೂರಿನವರೆಗೂ ಪ್ರವಾಸಿಗಳು ೧೮೦ ಡಿಗ್ರಿ ದೃಶ್ಯವನ್ನಾದರೂ ಅನುಭವಿಸಬಹುದಿತ್ತು.

ಉಳಿದಂತೆಯೂ ಆ ಭೋಗಿಯಲ್ಲಿ ವಿಸ್ತೃತ ದೃಶ್ಯಕ್ಕೊದಗಿಸಿರುವ ಸವಲತ್ತುಗಳ ಪ್ರಯೋಜನ, ವೈಭವೋಪೇತ ಬಹುಮಹಡಿ ವಸತಿಗಳಲ್ಲಿ ಒಬ್ಬ ವ್ಯಕ್ತಿಗೆ ಸಿಕ್ಕಷ್ಟೇ ಲಭ್ಯ. ಬಿಡಿಸಿ ಹೇಳುತ್ತೇನೆ, ನಮ್ಮನೆ ಹಿತ್ತಿಲ ಭವ್ಯ ೨೬ ಮಾಳಿಗೆಗಳ ಮೌರಿಷ್ಕಾ ಪ್ಯಾಲೇಸನ್ನೇ ನೋಡಿ: ಯಾವುದೋ ಮಾಳಿಗೆಯ ಸಣ್ಣ ತುಣುಕಿನ (ಒಂದು ಮನೆ) ಸಣ್ಣ ತುಣುಕಿನಲ್ಲಿ (ಕಿಟಕಿ/ಬಾಲ್ಕನಿ) ಸಿಕ್ಕುವ ಸೀಮಿತ ನೋಟ.) ಹಿಡಿದವರ ಉದಾಹರಣೆಯನ್ನೇ ಅಂದಾಜಿಸಿ. ಅಂದರೆ, ಹೊರಗಿನ ನೋಟಕ್ಕೆ ಭೋಗಿಯ ಮೇಲ್ಚಪ್ಪರದಲ್ಲೂ ದೊಡ್ಡ ದೊಡ್ಡ ಪಾರದರ್ಶಕ ಕಂಡಿಗಳನ್ನೇನೋ ಕೊಟ್ಟಿದ್ದಾರೆ. ಅವು ಬೋಳು ಆಕಾಶವೀಕ್ಷಣೆಗಷ್ಟೇ ಒದಗುತ್ತವೆ, ಇದ್ದದ್ದರಲ್ಲಿ ಸ್ವಲ್ಪ ಲಾಭ – ಇತರ ಭೋಗಿಗಳಂತೆ ಇಲ್ಲೂ ಮಗ್ಗುಲಿನ ಗೋಡೆಗಳಲ್ಲಿರುವ ಪಾರದರ್ಶಕ ಕಂಡಿಗಳು. ಆದರೆ ಇದೂ ಹೆಚ್ಚಲ್ಲ ಎನ್ನುವುದಕ್ಕೆ ಸಣ್ಣ ಸೋದಾಹರಣ ಸ್ಪಷ್ಟೀಕರಣ ಕೊಡಬೇಕು.

ಲಕ್ಷದ್ವೀಪದಲ್ಲಿ ಒಂದೆಡೆ, ನೀರ ಆಳದ ಹವಳದ ಹಂಬು ಮತ್ತು ಜೀವ ವೈವಿಧ್ಯವನ್ನು ಕಾಣಿಸಲು ವಿಶೇಷ ದರದಲ್ಲಿ ಗಾಜಿನ ತಳದ ದೋಣಿ ಸವಾರಿ ಕೊಡುತ್ತಾರೆ. ನಾವು ಅರೆ ಮನಸ್ಸಿನಲ್ಲೇ ಅದನ್ನೇರಿದ್ದೆವು. ಆದರೆ ಅಲ್ಲಿ ದೋಣಿ ತಳದ ಪಾರದರ್ಶಕತೆಗೆ ಭೂತಗನ್ನಡಿಯ ಸಾಮರ್ಥ್ಯವೂ ಇದ್ದುದರಿಂದ ಅನುಭವ ರೋಮಾಂಚನಕಾರೀಯಾಗಿತ್ತು. (ನೋಡಿ: https://www.athreebook.com/2010/05/blog-post_22.html#more) ವಿಸ್ತೃತ ಡುಮ್ಮನಲ್ಲಿ ಅದು ಇರಲಿಲ್ಲ.

ವಿ.ಡುಮ್ಮನ ಎರಡೂ ಭೋಗಿಗಳು ಹವಾನಿಯಂತ್ರಿತವಾದ್ದರಿಂದ ನಮಗೆ ಕನ್ನಡಿ ಬಿಟ್ಟು ದೃಶ್ಯವಿಲ್ಲ. ಅದು ತಿಳಿದೂ ಅವನ್ನು ಪ್ರತಿಫಲನ ನಿರೋಧಿಯಾಗಿ ರೂಪಿಸದಿರುವುದು ಅನ್ಯಾಯ. ರೈಲಿನೋಟದಲ್ಲಿ ಕಾಡು, ಅಕ್ಕಪಕ್ಕದ ದರೆಗಳು ಹಳಿಗಳನ್ನು ಸಮೀಪಿಸಿದಲ್ಲೆಲ್ಲ ನಮಗೆ ದಕ್ಕುತ್ತಿದ್ದದ್ದು ನಮ್ಮದೇ ಪ್ರತಿಫಲನಗಳು ಮಾತ್ರ! ಇದನ್ನು ಸರಿಯಾಗಿ ತಿಳಿದುಕೊಳ್ಳಲು ಲಗತ್ತಿಸಿದ ಕೆಲವು ಪಟ ಹಾಗೂ ವಿಡಿಯೋ ತುಣುಕುಗಳನ್ನೇ ನೋಡಿಕೊಳ್ಳಿ.

ಸಾಲದ್ದಕ್ಕೆ ಆ ಕನ್ನಡಿಗಳ ಮೇಲೆ ಕವಿದಿದ್ದ ಗೀಚು ಗಾಯ, ದೂಳು “ರಾಯರ ಕುದುರೆ ಕತ್ತೆಯಾದ” ಕತೆಯನ್ನೇ ನೆನಪಿಗೆ ತಂದಿತು. ಸಾಮಾನ್ಯ ಭೋಗಿಗಳಲ್ಲಾದರೋ ನಾವು ಬಯಸಿದಾಗ ಕಿಟಕಿಯ ಕನ್ನಡಿಯನ್ನು ಸರಿಸಿ, ಕತ್ತೋ ಕೈಗಳನ್ನೋ ತುಸು ಹೊರಚಾಚಿಯಾದರೂ ನೋಟ, ಪಟ ಸಂಗ್ರಹಿಸಬಹುದಿತ್ತು ಎಂಬ ಕೊರಗು ಉದ್ದಕ್ಕೂ ಕಾಡುತ್ತಲೇ ಇತ್ತು. ಹಾಗೂ ದಕ್ಕಿದ ಕೆಲವೇ ನೋಟ ಮತ್ತು ಪಟಗಳಾದರೂ (ಅನಧಿಕೃತವಾಗಿ) ಓಡುವ ರೈಲಿನ ಬಾಗಿಲ ಕಂಡಿ ತೆರೆದಿಟ್ಟು, ಅಂಚಿನಲ್ಲಿ ನಿಂತೋ ತುಸು ಹೊರ ಬಾಗಿಯೋ ಸಂಗ್ರಹಿಸಿದವಾಗಿವೆ.

[ಟೀಕೆ: ೨ ಇವೆಲ್ಲ ದೊಡ್ಡ ಮಾಡುವ ಸಂಗತಿಗಳೇ ಎಂದು ಕೆಲವರಿಗಾದರೂ ಅನ್ನಿಸೀತು. ಅಂಥವರು ಈ ರೈಲಿನ ಟಿಕೆಟ್ ದರಗಳ ಮೇಲೆ ಕಣ್ಣಾಡಿಸಲೇಬೇಕು. ಸಾಮಾನ್ಯ ಭೋಗಿ ರೂ ೧೫೫, ಚೇರ್ ಕಾರ್ ರೂ ೬೪೫. ಇವೆರಡಕ್ಕೂ ಹಿರಿಯ ನಾಗರಿಕ ಮತ್ತು ಮಹಿಳಾ ರಿಯಾಯ್ತಿಗಳು ಲಭ್ಯ. ಎಲ್ಲ ರಿಯಾಯ್ತಿಗಳನ್ನೂ ಮನ್ನ ಮಾಡಿದ ವಿಸ್ತೃತ ಡುಮ್ಮನಿಗೆ – ೧೩೯೫. ಅದರ ಮೇಲೆ ಪ್ರವಾಸಿಗಳಿಗೆ ಆತಂಕ ಹುಟ್ಟಿಸಿ, ಬೇಡಿಕೆ ಹೆಚ್ಚಿಸಿಕೊಳ್ಳಲು ‘ವೇಟಿಂಗ್ ಲಿಸ್ಟಿ’ನ ನಾಟಕ. ಹಿಂದಿನದವರೆಗೂ ನಮ್ಮನ್ನದು ವೇಟಿಂಗ್ ಲಿಸ್ಟಿನಲ್ಲಿ ಉಳಿಸಿತ್ತು. ಪ್ರಯಾಣದಂದು ಎರಡು ಭೋಗಿಗಳು ಭರ್ತಿಯಾಗಿರಲೇ ಇಲ್ಲ! ಇರಲಿ, ರೈಲ್ವೇಗಾದರೂ ಇದು ಲಾಭಕರವೇ ಎಂದು ಯೋಚಿಸಿದರೆ, ಅಲ್ಲೂ ನಿರಾಶೆಯೇ ಕಾಡಿತು. ಚೇರ್ ಕಾರಿನ ಒಂದು ಭೋಗಿ ೧೪೪ ಮಂದಿಗೆ ಅವಕಾಶ ಕೊಟ್ಟರೆ ಡುಮ್ಮನಲ್ಲಿ ಕೇವಲ ೪೪! ಚೇರ್ ಕಾರ್ ಭರ್ತಿಯಾದರೆ ರೂ ೯೨,೮೮೦, ಡುಮ್ಮನಾದರೆ – ರೂ ೬೧,೩೮೦ ರೈಲ್ವೇ ಆದಾಯ!]

ಯಾತ್ರಿಕರಿಗೆ ಪ್ರಚಾರದಲ್ಲಿ, ಇಲಾಖೆಗೆ ನಷ್ಟ ಮತ್ತು ಸಾರ್ವಜನಿಕ ಹಣದ ವ್ಯರ್ಥಹೂಡಿಕೆಗೆ ಹೆಸರು – ವಿಸ್ತೃತ ಡುಮ್ಮ (= blown out of proportion ಎನ್ನುವ ಅರ್ಥದಲ್ಲಿ).

| ಮುಂದುವರೆಯುವುದು |

‍ಲೇಖಕರು Admin

February 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: