ಪ್ರವರ ಕೊಟ್ಟೂರು ಕವಿತೆ- ರೈಲಿನ ಸೀಟಿ ಕೇಳುತ್ತಲೇ…

ಪ್ರವರ ಕೊಟ್ಟೂರು

ರೈಲ್ವೇ ಸ್ಟೇಷನ್ನಿನ ಮೂರನೇ ಪ್ಲಾಟ್‌ ಫಾರಮ್ಮಿನಲ್ಲಿ
ಎಲೆಗಳ ನೆಲಕ್ಕುದಿರಿಸಿ ಸುಮ್ಮನೇ
ಆಕಾಶಕ್ಕೆ ಮುಖ ಮಾಡಿ ನಿಂತ
ಬೋಳು ರೆಂಬೆಗಳ ಹರಡಿಕೊಂಡ
ಮನುಷ್ಯರ ಗಮನ ಅಷ್ಟಾಗಿ ಸೆಳೆಯದ
ಅನಾಥ ಮರವೊಂದಿದೆ

ಏರು ಬಿಸಿಲಿನ ಕಾವು ಏಳು ಕುದುರೆಗಳ
ರಥ ಕಟ್ಟಿಕೊಂಡು ಬರುವಾಗ
ಮುಖ ಸಿಂಡರಿಸದೇ, ಅದೇ ಜೋಲು ಕಣ್ಣುಗಳಲ್ಲಿ
ಸ್ವಾಗತಿಸಬೇಕು

ನೆಲಕ್ಕುದುರಿದ ತನ್ನದೇ ಎಲೆಗಳು
ಒಮ್ಮೆಯೂ ನೋಡುವುದಿಲ್ಲ ತಿರುಗಿ,
ಒಮ್ಮೆಲೇ ಬೀಸಿದ ಬಿಸಿ ಗಾಳಿಯ ಕೂಡ
ಹಗೂರ ಹಕ್ಕಿಗಳಂತೆ ಹಾರುತ್ತವೆ
ಅಲ್ವಿದಾ ಅಂತಲೂ ಹೇಳುವುದಿಲ್ಲ ಕೊನೆಗೆ

ಈ ಮರದ ಆಯಸ್ಸು?
ಅಂಧಾಜು ಎಪ್ಪತ್ತು ಇದ್ದಿರಬಹುದು
ಏಸೊಂದು ಬೇಸಿಗೆಯ ಬಿಸಿ ತಾಕಿರಬಹುದು
ಕ್ರೂರ ಚಳಿಗಾಲದ ಮಡುವಿನಲ್ಲಿ ಹೇಗೆಲ್ಲಾ ನಡುಗಿರಬಹುದು
ವಯಸ್ಸು ಏರಿದಂತೆಲ್ಲಾ
ಅಭ್ಯಾಸವೂ ಆಗುತ್ತದೆ
ಮಾಗುತ್ತದೆ ನೋವು
ಮುಂಚೆಯ ಥರ ನೋವಿಗೆ ಮುಲುಕುವುದಿಲ್ಲ
ಒಳಗೆ ಸಣ್ಣಗೆ ಕನಲುವುದಿಲ್ಲ
ಒಂದೊಂದು ನೋವಿಗೆ ಒಂದೊಂದು ಪದ್ಯ ಹೊಸೆದು
ಉದುರುವ ಎಲೆಗಳ ಕೂಡ
ಹಾರಿಬಿಡುತ್ತದೆ, ಒಂದಷ್ಟನ್ನು ಮೆಲ್ಲಗೆ
ಜಾರಿಬಿಡುತ್ತದೆ

“ಎಲ್ಲಾದರೂ ಹಾಳಾಗಿ ಹೋಗು”
ಪಾದ ಕದಲುವುದೇ ಇಲ್ಲ ಎಲ್ಲಿಗೂ
ನೆಲದ ಪದರುಗಳ ಸೋಸಿ
ನೀರು ತರಲು ಇಳಿದಿರಬಹುದು ಬೇರು.
ಮುಂಚೆಯಂತೆ ಧಮ್ಮುಗಟ್ಟಿ ಎಳೆಯಲು ಆಗುತ್ತಿಲ್ಲ
ಚೂರು ಚೂರೆ ಬೇಕಾದಷ್ಟು.

ಶುನಕಗಳು ಬರುವಾಗೆಲ್ಲಾ ಖುಷಿಯನ್ನೂ
ಹೊತ್ತು ತರುತ್ತವೆ,
ಬಾಲ ಅಲ್ಲಾಡಿಸುತ್ತಾ ಮೂಸಿ
ಆಚೀಚೆ ಎರಡು ಬಾರಿ ಓಢಾಡಿ
ಬುಡಕ್ಕೆ ಮೂತ್ರ ಮಾಡುವಾಗ
ಗಾಯಗಳು ಅಲ್ಲಲ್ಲೇ ಕೂತು ಮುಸುಕು ಮುಚ್ಚಿಕೊಂಡು ಅಳುತ್ತವೆ

ರಾತ್ರಿಯ ನಡುವೆ
ಆಗಾಗ ದೊಡ್ಡ ಗೂಬೆಯೊಂದು ಎಡ ಕೊಂಬೆಯ
ಅಂಚಿಗೆ ಕೂಡುತ್ತದೆ
ಹೆಗ್ಗಣಗಳ ಎದೆ ಬಡಿಯ ಕೇಳುವ ಸಲುವಾಗಿ
ಚೂಪು ಕೊಕ್ಕಿನಲ್ಲೇ ಇರಿಯುತ್ತದೆ
ಸೋರುತ್ತದೆ ರಕ್ತ
ಇಳಿಯುತ್ತದೆ ತೊಗಟೆಗುಂಟ
ಪ್ರತಿಬಾರಿಯೂ ಹೊಸ ಆಕಾರ ಮೂಡುತ್ತದೆ
ಅದೊಂದು ಅಪರೂಪದ ಚಿತ್ರವಾಗಿ ಕಾಣುತ್ತದೆ
ಹೆಚ್ಚುಕಡಿಮೆ ಅಲ್ಲೊಂದು ಆರ್ಟ್‌ ಗ್ಯಾಲರಿಯೇ
ಸೃಷ್ಠಿಯಾಗಿದ್ದಿರಬಹುದು

ರೈಲಿನ ಸೀಟಿ ಕೇಳುತ್ತಲೇ
ಹೆಗಲಿಗೆ ಕೈಯಿಗೆ ಲಗೇಜು, ಕಂಕುಳಲ್ಲಿ ಕೂಸುಗಳ ಹಿಡಿದುಕೊಂಡು,
ಸೀಟು ಹಿಡಿಯುವ ಅವಸರಕ್ಕೆ
ಅಲ್ಲೊಂದು ಸಡಗರ ಹುಟ್ಟಿಬಿಡುತ್ತದೆ,
ಬೋಳು ಮರ ಮುಂಚೆಯಂತೆ
ನೋಡಿ ಸುಮ್ಮನಾಗುತ್ತದೆ,
ಅಪರೂಪಕ್ಕೆ ಗಾಳಿಗೆ ಕೊಂಬೆ ಅಲುಗಿದರೆ
ಕೈ ಬೀಸಿ ಕಳಿಸಿಕೊಡುತ್ತದೆ, ಪ್ರಯಾಣಿಕರ ಜೋಪಾನವಾಗಿ

ಮುಖದ ಮೇಲೆ ಸದಾ ಗಂಟು ಕೂರಿಸಿಕೊಂಡು
ಅತ್ತಿಂದಿತ್ತ ಬಾವುಟ ಹಿಡಿದುಕೊಂಡು ಓಡಾಡುವ
ಸ್ಟೇಷನ್‌ ಮಾಸ್ತರ ಬಳಿ
ಇದಕ್ಕೆ ಸುಮಾರು ಮಾತನಾಡಲಿಕ್ಕೆ ಇರಬಹುದು,
ಹಾಳು ಮನುಷ್ಯ ಸೂಕ್ಷ್ಮತೆ ಕಳೆದುಕೊಂಡಿದ್ದಾನೆ
ಕೇಳಿಸಿಕೊಂಡಿಲ್ಲ

ರೋಸಿಕೊಂಡು ಕುಂತವರ,
ಜಗಳ ಆಡಿಕೊಂಡು ಬಂದವರ
ಪ್ರೀತಿಸಿ ಮೋಸ ಹೋದವರ,
ಕಳೆದುಕೊಂಡು ಬರ್ಬಾದು ಆದವರ ಬಿಗಿದಪ್ಪಿ
ಸಾಂತ್ವನ ಹೇಳಬೇಕು ಅಂದುಕೊಂಡರೂ
ಹಳಿಗಳ ದಿಂಬು ಮಾಡಿಕೊಂಡು
ಚಿದ್ರವಾಗಿ ನಿದಿರೆ ಹೋದವರು
ಕೇಳಿಸಿಕೊಳ್ಳುವುದಿಲ್ಲ

‍ಲೇಖಕರು Admin

February 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: