ಅಶೋಕ ವಧ೯ನ್ ಬೆಂಗಳೂರು ದಾರಿಯಲ್ಲಿ – 2

ವಿಸ್ತಾರ ಧಾಮದೊಳಗಿನ ಅನ್ಯ ರಂಗುಗಳು

ಅಶೋಕ ವಧ೯ನ್

ವಿಸ್ಟಾ ಡೋಂ ಒಳಗೆ ಇಕ್ಕೆಲಗಳಲ್ಲಿ ಜೋಡಿ ತಿರುಗುವ (ಪೂರ್ಣ ಸುತ್ತು ಹಾಕುವಂತವು) ಆಸನಗಳಿವೆ. ಕಾರವಾರದಿಂದ ಬಂದ ಲೆಕ್ಕದಲ್ಲಿ ನಮ್ಮ ಭೋಗಿ (ವಿ-೨) ಮೊದಲು ಸಿಕ್ಕಿತು ಮತ್ತು ಒಳಗೆ ಆಸನಗಳು (೩,೪) ಬಲಸಾಲಿನ ಕೊನೆಯಲ್ಲಿತ್ತು. ಇಂಜಿನ್ ದಿಕ್ಕು ಬದಲಿಸಿ ಜೋಡಿಕೊಂಡ ಮೇಲೆ ನಾವದನ್ನು ರೂಢಿಗತ ವ್ಯವಸ್ಥೆಯಂತೆ ’ರೈಟ್ ಅಬೌಟ್ ಟರ್ನ್’ ಮಾಡಿಸಿದೆವು. ಆಗ ಬಲಬದಿಗೆ ಕುಳಿತ ದೇವಕಿಗೆ ಮಗ್ಗುಲಿನಲ್ಲಿ ಕಿಟಕಿ, ನನಗೆದುರಿಗೆ ಬೋಳು ಗೋಡೆ.

ರೈಲು ಹೊರಟ ಮೇಲೆ ಮತ್ತೆ ತಿರುಗಿಸಿ ಇಬ್ಬರೂ ಕಿಟಕಿಮುಖಿಗಳಾದೆವು. ಎದುರಿನ ಬೋಳುಗೋಡೆಯ ಎತ್ತರದಲ್ಲಿ ಹವಾನಿಯಂತ್ರಕದ ಒಂದು ಕಂಡಿಯಿತ್ತು. ಸ್ವಲ್ಪ ಮುಂದುವರಿದಾಗ ಥಂಡಿ ವಾಯುಪ್ರಹಾರ ನೇರ ನನ್ನ ಕಿವಿಗಾಗುವುದನ್ನು ನಿವಾರಿಸಲು ಮತ್ತೆ ಆಸನವನ್ನು ತುಸುವೇ ಓರೆ ಮಾಡಿಕೊಂಡೆವು. ಉಳಿದಂತೆ ಪ್ರಯಾಣವನ್ನು ಬಹುತೇಕ ಸುಖಾಸೀನರಾಗಿ ಮುಗಿಸಿದೆವು.ಸಾಮಾನ್ಯ ಭೋಗಿಗಳಂತೆ ಇಲ್ಲಿ ಆಸನದ ಕೆಳಗೆ ಅಥವಾ ಮೇಲೆ ನಮ್ಮ ಸಾಮಾನು ಸರಂಜಾಮುಗಳನ್ನು ಇಡುವ ವ್ಯವಸ್ಥೆಯಿಲ್ಲ.

ಬದಲಿಗೆ ನಮ್ಮೆದುರಿನ ಬೋಳುಗೋಡೆಯಾಚೆ ಧಾರಾಳ ಶೆಲ್ಫುಗಳನ್ನು ಮಾಡಿಟ್ಟಿದ್ದಾರೆ. ನಮ್ಮದು ಸಣ್ಣ ಹೊರೆ ಮತ್ತು ಆಸನಗಳ ಪಾದಮೂಲದ ಸ್ಥಳ ಧಾರಾಳವಿದ್ದುದಕ್ಕೆ ಅಲ್ಲಿಡಲಿಲ್ಲ. ಅದರಿಂದಾಚೆಗೆ ಇತರ ಭೋಗಿಗಳಂತೇ ಕೈತೊಳೆ ತೊಟ್ಟಿ, ಕಕ್ಕೂಸ್, ಹೊರದ್ವಾರ ಮತ್ತು ಇನ್ನೊಂದು ಭೋಗಿಗೆ ಸಂಪರ್ಕ ಸೇತುಗಳಿದ್ದವು. ಎರಡೂ ಭೋಗಿಗಳ ವಿರುದ್ಧ ಕೊನೆಗಳಲ್ಲಿ ಸಣ್ಣ ಸಿಟೌಟಿನಂತ ಸ್ಥಳ ಮತ್ತೆ ಇಲಾಖೆಯೇ (ಕಂತ್ರಾಟು ಕೊಟ್ಟು) ನಡೆಸುವ ಪುಟ್ಟ ಪ್ಯಾಂಟ್ರಿ ಅರ್ಥಾತ್ ಆಹಾರ ಕಟ್ಟೆಯ ಸೌಕರ್ಯವಿತ್ತು. (ಉಚಿತವಲ್ಲ. ಆದರೆ ದುಬಾರಿಯೂ ಅಲ್ಲ)

ಸದ್ಯ ಎರಡೂ ಭೋಗಿಗಳಿಗಾಗಿ ಒಂದೇ ಪ್ಯಾಂಟ್ರಿ ಚಾಲ್ತಿಯಲ್ಲಿತ್ತು ಮತ್ತು ಸಮರ್ಥವಾಗಿಯೂ ಎಲ್ಲರನ್ನೂ ಉಪಚರಿಸಿತು. ನಮ್ಮೆರಡು ಭೋಗಿಗಳಿಗೆ ಓರ್ವ ಗಾರ್ಡ್, ಪ್ಯಾಂಟ್ರಿ ಜನ ಸೇರಿ ಮೂರೋ ನಾಲ್ಕೋ ಸಹಾಯಕರೂ ಇದ್ದರು. ಹಾಗಾಗಿ ನಮಗೆ ಕಡಿಮೆ ಭಾಗ್ಯವಂತರ ‘ಸಂಸರ್ಗದೋಷ’ (?), ಕಳ್ಳ ಅಥವಾ ಪುಂಡರ ಭಯ ಇರಲಿಲ್ಲ. ನಮ್ಮಿಂದ ಎರಡು ವಾರಗಳ ಹಿಂದೆ ಸೊಸೆ ಮತ್ತು ಮೊಮ್ಮಗು (ಐದರ ಪ್ರಾಯ) ಇದರಲ್ಲೇ ಬಂದು ಹೋಗಿದ್ದರು.

ಪುಟ್ಟವಳು ಗಾಡಿ ಹೊರಡುತ್ತಿದ್ದಂತೆ ಎರಡೂ ಭೋಗಿಗಳ ಉದ್ದಗಲಕ್ಕೆ ಧಾರಾಳ ಓಡಾಡಿ ಇದ್ದ ಎಲ್ಲ ಮಕ್ಕಳನ್ನು ಸಂಘಟಿಸಿ, ಎಂಟೊಂಬತ್ತು ಗಂಟೆಗಳ ಪ್ರಯಾಣಾವಧಿಯಲ್ಲಿ ಅದು ವಿಸ್ಟಾಡೋಂ ಹೋಗಿ ವಿಹಾರಧಾಮವೇ ಆಗಿತ್ತಂತೆ! ಪ್ರಸ್ತುತ ನಮ್ಮ ಪ್ರಯಾಣದುದ್ದಕ್ಕೆ ನಾವು ಕನಿಷ್ಠ ಹತ್ತು ಸಲವಾದರೂ ಹೇಳಿಕೊಂಡೆವು “ಆಭಾ ನಮ್ಮ ಜೊತೆಗೂ ಇರಬೇಕಿತ್ತು”! ಪರಿಷ್ಕೃತ ವೇಳಾಪಟ್ಟಿಗೆ ನಿಷ್ಠವಾಗಿಯೇ ರೈಲು ಮಂಗಳೂರು ಬಿಟ್ಟಿತ್ತು. ಅದರ ಮಟ್ಟಸ ಓಟದಲ್ಲಿ ಸಣ್ಣ ತೂಗಾಟಕ್ಕೆ ಕಿಟಕಿ ಪರದೆಯ ಸಪುರ ಸರಪಳಿಗಳು ಲಯಬದ್ಧವಾಗಿ ಗೋಡೆ ತಟ್ಟುತ್ತಿದ್ದದ್ದು ಆಕರ್ಷಕವಾಗಿತ್ತು. (ವಿಡಿಯೋದಲ್ಲೂ ಕೇಳಬಹುದು) ಯಾತ್ರಿಗಳೆಲ್ಲ ಆಸನಗಳನ್ನು ಅವರ ಕುಶಿವಾಸೀ ತಿರುಗಿಸಿಕೊಂಡು ಪಟ್ಟಾಂಗ, ವೀಕ್ಷಣೆ, ಕಣ್ಣುತೂಗುವುದು ನಡೆಸಿದ್ದರು.

ನಮ್ಮ ನಾಲಗೆ ಚಪಲ ಕೆರಳಿಸುವಂತೆ ಪ್ಯಾಂಟ್ರಿಯ ಬಿಸಿ ಡಬ್ಬಿಯೊಳಗಿಂದ ಸಮೋಸಾ, ಚಾ, ಕಾಫಿ ಮೆರವಣಿಗೆ ನಡೆದಿತ್ತು. ದೇವಕಿಯ ಲಗಾಮು ಕಳಚಿ, ನಾನೊಂದು ಪ್ಲೇಟ್ ಸಮೋಸಾ (ಎರಡು ತುಣುಕಿತ್ತು) ಕೊಂಡರೂ ಅರ್ಧ ಖಾಲಿ ಮಾಡಿದ್ದು ಅವಳೇ! ಊಟದ ಸಮಯಕ್ಕಾಗುವಾಗ ರೈಲು ಘಟ್ಟವೇರುವ ಆರಂಭ ಬಿಂದು, ಅಂದರೆ ‘ಸುಬ್ರಹ್ಮಣ್ಯ ರೋಡ್’ ನಿಲ್ದಾಣ ಮುಟ್ಟಿತ್ತು. ನಾವಿಬ್ಬರು ಸಸ್ಯಾಹಾರಿ ಪಲಾವಿನಲ್ಲಿ ಹೊಟ್ಟೆ ಪಾಡು ಮುಗಿಸಿಕೊಂಡೆವು.

ಸುಬ್ರಹ್ಮಣ್ಯದಲ್ಲೂ ರೈಲಿಗೆ ಬಿಡುವೋ ಬಿಡುವು. ಸುಮ್ಮನೇ ಕೂರಲಾಗದ ನಾನು ಪ್ಲ್ಯಾಟ್ ಫಾರಂನ ಈ ತುದಿಯಿಂದ ಆ ತುದಿಗೆ ಕಾಲಾಡಿಸುತ್ತಿದ್ದೆ. ಮೊದಲು ರೈಲಿಗೆ ಹಿಂದಿನಿಂದೊಂದು ಹೆಚ್ಚುವರಿ ಇಂಜಿನ್ ಸೇರಿಕೊಂಡದ್ದು ಕಂಡೆ. ಅದು ಸಕಲೇಶಪುರದವರೆಗೆ ಗಾಡಿಗೆ ನೂಕುಬಲವನ್ನು ಕೊಡುವುದು ನನಗೆ ತಿಳಿದಿತ್ತು. ತಿಳಿಯದ್ದು ಇನ್ನೊಂದು – ಇಂಜಿನ್ನಿನ ಎದುರಿನ ಎರಡೂ ಚಕ್ರಗಳಿಗೆ ತಗುಲಿದಂತಿದ್ದ ಪುಟ್ಟ ಟಾಂಕುಗಳಿಗೆ ಮರಳು ತುಂಬುವುದು.

ಡಬ್ಬಿಯಿಂದ ಮರಳು ಏರು ದಾರಿಯ ಉದ್ದಕ್ಕೂ ತೆಳುವಾಗಿ ಹಳಿಗುದುರಿ, ಚಕ್ರಕ್ಕೆ ಕಚ್ಚಿ (grip) ಉರುಳಲು ಸಹಾಯ ಮಾಡುತ್ತದಂತೆ! ಮತ್ತೂ ಸ್ವಲ್ಪ ಸಮಯ ಕಳೆದಾಗ, ಘಟ್ಟದಲ್ಲೆಲ್ಲೋ ಕಾರ್ಯ ನಿರತವಾಗಿದ್ದ ರೈಲೊಂದು ಇಳಿದು ಬಂತು. ಅದರ ಮೂರು ನಾಲ್ಕು ತೆರೆದ ಭೋಗಿಗಳಲ್ಲಿ ಕ್ರೇನು ಮುಂತಾದ ಭಾರೀ ಸಲಕರಣೆಗಳ ಜೋಡಣೆಯೂ ಇತ್ತು. (ಹೋಗುತ್ತಾ ಅದು ಸರಿ ಪಡಿಸಿದ ಹಳೆಯ ಭೂಕುಸಿತದ ಒಂದು ವಲಯ ನಮಗೂ ನೋಡ ಸಿಕ್ಕಿತು.)

ಅನಂತರ ನಮ್ಮ ಗಾಡಿ ಜೈಕಾರ ಹಾಕಿ, ಬೆಟ್ಟ ಸಾಲಿನ ಮೂಲೆ ಮೊಡಕುಗಳನ್ನು ಹುಡುಕುವಂತೆ, ಕಣಿವೆ ಝರಿಗಳನ್ನು ಇಣುಕುವಂತೆ, ಬೆಟ್ಟದ ಅಂಚಿನಲ್ಲಿ, ಗವಿಯ ಆಳದಲ್ಲಿ, ಮಹಾಸೇತುವಿನ ಮೇಳದಲ್ಲಿ ಎಂದು ಅಂಕಾಡೊಂಕಿ ಮಲಗಿದ್ದ ಹಳಿಜೋಡಿಯ ಮೇಲೆ ಬಿಜಯಂಗೈಯಿತು. ಬ್ರಿಟಿಷರು ಮಾಡಿದ್ದಲ್ವೇ? ಹಾಸನ-ಮಂಗಳೂರು ರೈಲ್ವೇ ಯೋಜನೆ ನೀಲನಕ್ಷೆಯಲ್ಲಿದ್ದ ಕಾಲಕ್ಕೆ (೧೯೬೦ರ ದಶಕ), ಘಟ್ಟ ವಿಭಾಗವನ್ನು ಉತ್ತರಿಸುವಲ್ಲಿ ಎರಡು ಆಯ್ಕೆಗಳೆದುರಾದವಂತೆ. ಅದರಲ್ಲಿ ಕಡಿಮೆ ವೆಚ್ಚದ ಚಾರ್ಮಾಡಿ ಕಣಿವೆಯನ್ನು ಬಿಟ್ಟು, ಶಿರಾಡಿ ಆಯ್ದುಕೊಳ್ಳುವಲ್ಲಿ ಆಡಳಿತ – ಕಂತ್ರಾಟುದಾರರ ದುಷ್ಟಕೂಟದ (ಲಾಬಿ) ಪ್ರಭಾವದ ಕುರಿತು ನಂಬಲರ್ಹವಾದ ಕತೆಯನ್ನು ಈಚೆಗೆ ಪ್ರಸಾದ್ ರಕ್ಷಿದಿಯವರು ಹೇಳಿದರು. ಅದೇನೇ ಇರಲಿ, ೧೯೭೪ರ ಸುಮಾರಿಗೆ ಮೀಟರ್ ಗೇಜ್ ಹಳಿ-ಹಾಸುವ ಕೆಲಸ ಶಿರಾಡಿ ಶ್ರೇಣಿಯ ಮಗ್ಗುಲಿನಲ್ಲಿ ನಡೆದಿತ್ತು.

ಆಗ ತಾನೇ ಮಂಗಳೂರಿನಲ್ಲಿ ಪುಸ್ತಕ ವ್ಯಾಪಾರಿಯಾಗಿ ನಿಂತಿದ್ದ ನಾನು, ರಜಾದಿನದಲ್ಲಿ ಸಣ್ಣ ಮಿತ್ರಬಳಗದೊಡನೆ ಇಲ್ಲಿಗೆ ಬಂದು, ನಡೆದು ನೋಡಿದ್ದೆ. (ನೋಡಿ: ನಡೆದು ನೋಡೈ… https://www.athreebook.com/2012/12/blog-post_14.html#more) ಯೋಜನೆ ಪೂರೈಸಿದಂದು ನಮ್ಮ ಇನ್ನೊಂದು ಬಳಗ, ರೈಲೊಂದರ ಎಂಜಿನ್ ಮುಂಭಾಗದಲ್ಲೇ ನಿಂತುಕೊಂಡು ಘಟ್ಟ ಹಾಯ್ದದ್ದೂ ಇದೆ. ಮತ್ತೂ ಹೆಚ್ಚಿನ ಅನುಭವಕ್ಕೆ ಸಿರಿಬಾಗಿಲಿನಿಂದ ಎಡಕುಮೇರಿವರೆಗೆ ದಿನವಿಡೀ ಎನ್ನುವಂತೆ ರೈಲ್ವೇ ಹಳಿಯ ಮೇಲೇ ಚಾರಣಿಸಿದ್ದಂತೂ (ನೋಡಿ: https://www.athreebook.com/2012/12/blog-post_28.html) ಅವಿಸ್ಮರಣೀಯ.

ಈ ವಲಯದ ಮತ್ತೂ ಹಲವು ಸಾಹಸಗಳು ಮತ್ತು ರೈಲ್ವೇ ಪ್ರಯಾಣಗಳೆಲ್ಲದರ ನೆನಪಿನ ಮೊತ್ತ ನನ್ನನ್ನು ಸುಮ್ಮನೇ ಆಸನ ಬಿಸಿ ಮಾಡಲು ಬಿಡಲಿಲ್ಲ. ಎದುರಿನ ಸಿಟೌಟಿಗೆ ಹೋಗಿ, ಹತ್ತೆಂಟು ಮಂದಿಯೊಂದಿಗೆ ತಿಣುಕಾಡಿ, ಬಾಗಿಲಲ್ಲಿ ನಿಂತು, ಸ್ವಲ್ಪ ನೇತು ಚಂದ, ಚಿತ್ರ ದಾಖಲಿಸಿಕೊಳ್ಳುತ್ತಿದ್ದೆ. ಅಲ್ಲೇ ತೂಕಡಿಸಿಕೊಂಡಿದ್ದ ಗಾರ್ಡನ್ನು ಸಣ್ಣದಾಗಿ ಮಾತಾಡಿಸಿದೆ.

ಕೆಲವು ವರ್ಷಗಳಿಂದ ಈ ದಾರಿಯಲ್ಲಿ ಡೂಟಿ ಮಾಡಿಕೊಂಡಿರುವ ಆತನ ಬಳಿ ಈ ದಾರಿಯ ರೋಮಾಂಚಕ ಕತೆಗಳಿಗೆ ಕೆದಕಿದೆ. ಅದಕ್ಕೆ ಪೀಠಿಕೆಯಾಗಿ ನನ್ನ ಈ ವಲಯದ ಸುತ್ತಾಟಗಳ ಸಣ್ಣ ಪರಿಚಯವನ್ನೂ ಕೊಟ್ಟೆ. ಪುಣ್ಯಾತ್ಮನ ಒಂದೇ ಮಾತು ನನ್ನನ್ನು ನಿರಾಶಾ ಕಣಿವೆಯ ಆಳಕ್ಕೆ ಕೆಡೆದಿತ್ತು -“ಅಯ್ಯೋ! ಅಂದ್ರೇ ಈ ಮಾರ್ಗ ಬ್ರಿಟಿಷ್ ನಿರ್ಮಾಣದ್ದಲ್ವೇ”!! ಮೂರು ಗಂಟೆಯ ಸುಮಾರಿಗೆ ಸಕಲೇಶಪುರ ತಲಪಿದೆವು. ಆ ಮೇಲಂತೂ ರೈಲ್ವೇಯ ನಿಧಾನದ್ರೋಹ ವಿಪರೀತವೇ ಇತ್ತು.

ಎಂಟೂವರೆಯ ಸುಮಾರಿಗೆ ಯಶವಂತಪುರದಲ್ಲಿ ರೈಲಿಳಿವಾಗ ಮಗ – ಅಭಯ ಕಾದಿದ್ದು, ನಮ್ಮ ಪ್ರಯಾಣ ಸುಖಕ್ಕೇನೂ ಕೊರತೆಯಾಗದಂತೆ ಮನೆ ಸೇರಿಸಿದ. ಈ ಯಾನದ ಮುಖ್ಯ ಲಕ್ಷ್ಯ – ವಿಸ್ಟಾ ಡೋಂ, ದೊಡ್ಡ ಭ್ರಮೆಯಾಗಿ ಕಳಚಿಬಿದ್ದದ್ದನ್ನು ಎರಡು ಕಂತಿನಲ್ಲಿ ಕೇಳಿದ ನಿಮ್ಮ ತಾಳ್ಮೆಗೆ, ಹೇಳದುಳಿದ ಇನ್ನು ಎರಡು ಅಮುಖ್ಯ ಪ್ರಸಂಗಗಳನ್ನು (ಒಂದು ವಿರಸ ಮತ್ತೊಂದು ಸರಸ) ಕಿರಿದರಲ್ಲಿ ಕೊರೆದು ಮುಗಿಸಿಬಿಡುತ್ತೇನೆ.

ಮಂಗಳೂರಿನಲ್ಲಿ ರೈಲೇರಿದಾಗ ನಮಗೆ ಕಾಯ್ದಿರಿಸಿದ ಆಸನಗಳ ಮೇಲೆ (೩,೪) ಉಡುಪಿಯಿಂದಲೇ ಬಂದಿದ್ದ ತರುಣ ತಾಯಿ, ಏಳೆಂಟರ ಪ್ರಾಯದ ಮಗನೊಡನೆ ಕುಳಿತಿದ್ದರು. ಅದಕ್ಕೆ ಮುಖ ಮಾಡಿದ ೫,೬ರ ಆಸನ ಜೋಡಿಯ ಮೇಲೆ ಆಕೆಯ ಗಂಡನೂ ಇದ್ದ. ನಾವು ಸೌಮ್ಯವಾಗಿಯೇ ಟಿಕೆಟ್ ತೋರಿಸಿ “ಇದು ನಮ್ಮ ಸೀಟ್…” ಎನ್ನುತ್ತಿದ್ದಂತೇ ತಾಯಿ ಸಹಜವಾಗಿ “ಸರಿ ಸರಿ..” ಎನ್ನುತ್ತಾ ಹುಡುಗನನ್ನು ಎಳೆದುಕೊಳ್ಳುತ್ತ ಎದುರು ಆಸನ ಜೋಡಿಗೆ ಹೋದರು.

ಹುಡುಗ ತುಸು ಕೊಸರಾಡಿಯೇ ಆಸನ ಬದಲಿಸಿದರೂ ಎರಡೂ ಕಾಲುಗಳನ್ನೆತ್ತಿ ನಮ್ಮ ಆಸನದ ಮೇಲಿಟ್ಟ. ನಾವು ಆತನ ಬಾಲಬುದ್ಧಿಗಷ್ಟೇ ಹುಸಿ ಮುನಿಸು ತೋರಿಸಿದೆವು. ತಾಯಿ ದೀನವಾಗಿ ಅವನ ಕಾಲುಗಳನ್ನು ಕೆಳಗೆಳೆದು, ಕೈ ಚೀಲದಿಂದ ಟಿಷ್ಯೂ ತೆಗೆದು ಆತನ ಕೈಯಲ್ಲಿ ಕೊಟ್ಟು, ಸೀಟ್ ಒರೆಸಲು ಮತ್ತು ನಮ್ಮ ಕ್ಷಮೆ ಕೇಳಲು ಒತ್ತಾಯಿಸಿದರು. ನಾವೂ ಅಷ್ಟೇ ಸಹಜವಾಗಿ “ಅಯ್ಯೋ ಬಿಡಿ ಸಣ್ಣವನು…” ಎನ್ನುತ್ತ ಕುಳಿತೆವು. ಆದರೆ ಮುಂದಿನ ಕೆಲವೇ ಸಮಯದಲ್ಲಿ ಆ ಬಾಲಕನ ವರ್ತನೆಯಲ್ಲಿ ಬುದ್ಧಿ ಮಾಂದ್ಯತೆ ಇದ್ದದ್ದು ನಮ್ಮರಿವಿಗೆ ಬಂದಾಗ, ನಾವು ಹುಸಿಮುನಿಸೂ ತೋರಬಾರದಿತ್ತು ಎಂದನ್ನಿಸಿತ್ತು, ಬಿಡಿ. ಆದರೆ ಅವರದೇ ಇನ್ನೊಂದು ಕತೆ ರೈಲು ಹೊರಟ ಮೇಲೆ ನಿಧಾನಕ್ಕೆ ಬಿಡಿಸಿಕೊಂಡಿತು. ಅವರು ಬೆಂಗಳೂರಿನ ‘ಕಲ್ಚರ್ಡ್ ದಂಪತಿ’, ವಾರಾಂತ್ಯದ ಬಿಡುವಿನಲ್ಲಿ ಮಗು ಸಮೇತ ಉಡುಪಿ ನೋಡಿ ವಾಪಾಸು ಹೊರಟವರು.

ವಿಸ್ತೃತ ಡುಮ್ಮನ ಟಿಕೆಟ್ ವಿತರಣಾ ಗೊಂದಲದಲ್ಲಿ ಇವರಿಗೆ ೫,೬ ಮತ್ತು ತುಸು ಆಚೆಗೆ ೧೫,೧೬ರ ಜೋಡಿಯಲ್ಲಿ ಒಂದು ಆಸನ ಸಿಕ್ಕಿದ್ದವು. ಗಂಡನಿದ್ದಲ್ಲಿ ಇನ್ನೊಂದಕ್ಕೆ ಜನ ಇರಲಿಲ್ಲ. ಮಂಗಳೂರು ಬಿಟ್ಟು ಅರ್ಧ ಒಂದು ಗಂಟೆಯ ಮೇಲೆ ಗಂಡ, ತನ್ನ ಹೆಂಡತಿ ಮಗನ (೫,೬) ಬೆನ್ನಿಗಿದ್ದ ಆಸನದಲ್ಲಿದ್ದ ತುಸು ಹೆಚ್ಚು ಪ್ರಾಯದ ಇನ್ನೊಂದು ದಂಪತಿಯೊಡನೆ ಪ್ರಾರ್ಥಿಸಿ, ಆಸನ ವಿನಿಮಯ ಮಾಡಿಕೊಂಡ.

ಈ ಮೊದಲೇ ಪ್ಯಾಂಟ್ರಿಯಾತ, ಪ್ರತಿಯೊಂದೂ ಆಸನದ ಬಳಿ ಬಂದು ಮಧ್ಯಾಹ್ನದ ಊಟದ ಬಗ್ಗೆ ವಿಚಾರಿಸಿ, ಬರೆದುಕೊಂಡು ಹೋಗಿದ್ದ. ಅದಕ್ಕೆ ಸರಿಯಾಗಿ ಊಟದ ವೇಳೆಗೆ ತರುಣ ಬರೆಸಿದ್ದ ಮಾಂಸಯುಕ್ತ ಪಲಾವನ್ನು ಅನಂತರ ೧೫,೧೬ಕ್ಕೆ ಬಂದಿದ್ದ ಜೋಡಿಗೆ ಕೊಡಲು ಹೋಗಿದ್ದ. ಪ್ರಾಯದ ದಂಪತಿ ಸಸ್ಯಾಹಾರಿಗಳು. ಆ ಗಂಡಸು (ಬಹುಶಃ ಆ ಊಟದ ಕಟ್ಟನ್ನು ಮುಟ್ಟಲೂ ಇಲ್ಲ ಆದರೂ) ಇಲ್ಲಿಗೆ ಬಂದು ತುಸು ಕೆರಳಿದ ಧ್ವನಿಯಲ್ಲೇ ತರುಣನ ಬಳಿ ದೂರಿಕೊಂಡ. ಈತ ಅದನ್ನು ಹಗುರವಾಗಿ ಗ್ರಹಿಸದೆ “What is your mess…” ಎಂದು ಫೂತ್ಕರಿಸಿದ.

ಆಚೆಯವನ ಧ್ವನಿ ಏರಿತು. ಇವನದ್ದೂ ಏರಿತು. ತರುಣನ ಹೆಂಡತಿ ಸಮಾಧಾನಿಸಲು ಧ್ವನಿ ತೆಗೆದಳು. ಆಚೆ ಗಂಡಸು ಪುರುಷಾಂಕಾರದಲ್ಲಿ ಅವಳ ಮೇಲೆ ವಾಗ್ದಾಳಿ ನಡೆಸಿದ. ತರುಣ ಬಿಟ್ಟಾನೇ, “respect the ladies…” ಹೂಂಕಾರದೊಡನೆ ಸಮರಕ್ಕೇ ಸಜ್ಜಾದ. ಇಡಿಯ ಭೋಗಿಯ ಮಂದಿ, ದೂರದಲ್ಲೇ ಉಳಿದ ಗಾರ್ಡ್ ಕೇವಲ ‘ಆತ್ಮಪ್ರತಿಷ್ಠೆಯ ಮನಸ್ತಾಪಕ್ಕೆ ಮದ್ದೇನು’ ಎಂದು ಅರಿಯದೆ, ಬೆಪ್ಪಾಗಿ ಮೌನವಾಗಿದ್ದರು. ಅದೃಷ್ಟಕ್ಕೆ ಬುದ್ಧಿ ಮಾಂದ್ಯ ಹುಡುಗ ಹೆದರಿ, ಭೋರಿಟ್ಟು ಅಳ ತೊಡಗಿದ. ಈಗ ತಾಯಿ ಜಾಗೃತಳಾಗಿ ಗಂಡನನ್ನು ಸಮಾಧಾನಿಸುವ ಅನಿವಾರ್ಯತೆಗೆ ಇಳಿದಳು, ಹೊಡೆದಾಟ ತಪ್ಪಿತು.

ತರುಣ ನಾನ್ ವೆಜ್ ಪಲಾವ್ ಹಿಡಿದು ೧೫,೧೬ಕ್ಕೇ ಹೋದ. ಪ್ರಾಯದ ದಂಪತಿ ಅವರ ಹಕ್ಕಿನ ಆಸನದಲ್ಲೇ ವೆಜ್ ಪಲಾವಿನೊಡನೆ (ಶಾಶ್ವತವಾಗಿ?) ನೆಲೆಸಿದರು. (ಯಶವಂತ ಪುರದಲ್ಲಿ) ಎಲ್ಲರೂ ಇಳಿವ ಕಾಲಕ್ಕೆ, ಈ ಹೆಂಗಸು ವಿಷಾದದ ಇಳಿದನಿಯಲ್ಲಿ ದೇವಕಿಯಲ್ಲಿ ಉಸುರಿದಳು “ಕೃಷ್ಣ ದರ್ಶನದೊಡನೆ ವೀಕೆಂಡ್ ಎಂಜಾಯ್ ಮಾಡಣಾಂತ ಬಂದಿದ್ವಿ”! ಊಟ ಬುಕ್ ಮಾಡುವಾತ ನಮಗೆ “ವೆಜ್ ಅಥವಾ ನಾನ್ ವೆಜ್ ನಲ್ಲಿ ಎರಡೇ ಐಟಂ – ಪಲಾವ್ ಮತ್ತು ಗೀ ರೈಸ್” ಎಂದಿದ್ದ.

ಬಹುತೇಕ ಹೋಟೆಲ್ಲುಗಳ ‘ಅನ್ನ’ ಅಂದರೆ ಕುದಿನೀರಿಗದ್ದಿದ ಅಕ್ಕಿ. ಹಾಗಾಗಿ ನಾವು ‘ವೆಜ್ ಪಲಾವ್’ ಪಡೆದಿದ್ದೆವು. ಅದನ್ನೂ ಕಷ್ಟದಲ್ಲಿ ಹೊಟ್ಟೆ ಸೇರಿಸಿ, “ಗಂಟಲಿಗೊಂದಿಷ್ಟು ಮಜ್ಜಿಗೆ ಮೊಸರೋ ಸಿಕ್ಕಿದ್ದರೆ…” ಎಂದು ಗೊಣಗಿಕೊಂಡೆವು. ಅದು ಓಣಿಯಾಚೆಗೆ (ಆಸನ ೧,೨) ಕುಳಿತ ಇನ್ನೋರ್ವ ತರುಣ ದಂಪತಿಯನ್ನು ತಟ್ಟಿತು. ಅವರು ಹಿಂದಿನ ನಿಲ್ದಾಣದಲ್ಲೇ ಜಾಣತನದಿಂದ ಸಂಗ್ರಹಿಸಿದ್ದ ಮೊಸರಿನ ಪ್ಯಾಕೇಟಿನಲ್ಲಿ, ಹೆಚ್ಚುವರಿಯಾಗಿ ಉಳಿದಿದ್ದ ಒಂದನ್ನು ನಮಗೆ ಒತ್ತಾಯಪೂರ್ವಕವಾಗಿಯೇ ದಾನ ಮಾಡಿದರು! (ನಿಜಕ್ಕೂ ಪುಣ್ಯ ಕಟ್ಟಿಕೊಂಡರು!) ಹಾಗೆ ಕುದುರಿದ ಸ್ನೇಹಾಚಾರದಲ್ಲಿ, ಆ ತರುಣ ಹೋಂಡಾ ಕಂಪೆನಿಯ ಬೆಂಗಳೂರು ವಲಯ ವರಿಷ್ಠ, ಅಪ್ಪಟ ಕನ್ನಡಿಗ ಎಂದು ತಿಳಿಯಿತು. ಅವರ ಕಂಪೆನಿಯ ಹಕ್ಕಿನ ರಜೆಯಲ್ಲಿ.

ಡುಮ್ಮ ಮತ್ತು ಘಾಟಿಯ ಅನುಭವಕ್ಕಾಗಿ ಮಂಗಳೂರಿಗೆ ಬಂದು ಮರಳುತ್ತಿದ್ದರು. ನಮ್ಮ ಸುತ್ತಾಟದ ಅನುಭವವನ್ನು ವಿಚಾರಿಸಿಕೊಳ್ಳುವುದರೊಡನೆ ಆತನಿಗೆ ನನ್ನ ಜಾಲತಾಣದ ವಿಚಾರ ಕುತೂಹಲ ಹುಟ್ಟಿಸಿತು, ಅಲ್ಲೇ ಕರತಲದ ಮಾಯಾಯಂತ್ರದಲ್ಲಿ (ಚರವಾಣಿ) ಇಣುಕಿದರು. ಮತ್ತೆ ಅದರ ಆಕರ್ಷಣೆಯಲ್ಲಿ ಬೆಂಗಳೂರು ತಲಪುವುದರೊಳಗೆ ನನ್ನ ಕೆಲವು ಕಥನಗಳನ್ನು ಓದಿ, ನನಗೇ ಉದ್ಧರಿಸಿ ಹೇಳಿ, ಹೆಚ್ಚಿನ ಅಭಿಮಾನವನ್ನೇ ತೋರಿದರು. ಈಗ ಪ್ರೀತಿ ತೋರಿಸುವುದು ನನ್ನ ಸರದಿ.

ಯಶವಂತಪುರ ಹತ್ತಿರ ಬರುತ್ತಿದ್ದಂತೆ, ಅಲ್ಲಿ ಅಭಯ ಕಾರು ಸಮೇತ ಕಾಯುತ್ತಿರುವ ಸಂದೇಶ ಬರುತ್ತಿದ್ದಂತೆ, ನನಗೆ ಈ ದಂಪತಿ ಬಗ್ಗೆ ಕಾಳಜಿ ಹೆಚ್ಚಿತು. ವಿಚಾರಿಸಿದೆ, ಆಶ್ಚರ್ಯಕರವಾಗಿ ಅವರ ಮನೆಯೂ ಅಭಯನ ಮನೆಯ ದಾರಿಯಲ್ಲೇ ಇತ್ತು. ಮತ್ತೆ ವಿಳಂಬಿಸದೇ “ಹಾಗಿದ್ದರೆ ನೀವು ಇನ್ನೇನೋ ಹುಡುಕಬೇಡಿ, ನಮ್ಮ ಕಾರಿಗೇ ಬನ್ನಿ, ಮನೆಗೇ ಬಿಟ್ಟು ಹೋಗುತ್ತೇವೆ…” ಎಂದು ಅವರಿಗೆ ತಪ್ಪಿಸಿಕೊಳ್ಳಲು ಅವಕಾಶವಿಲ್ಲದಂತೆ, ಮಾತಿಗಿಳಿದಿದ್ದೆ. ‘ಹೋಂಡಾ ಕಂಪೆನಿಯ ಬಾಸ್’ ಕಿರು ನಗೆ ಕೊಟ್ಟು, ವಿನಯಪೂರ್ವಕವಾಗಿಯೇ ಹೇಳಿದರು “ಇಲ್ಲ, ನಮ್ಮ ಡ್ರೈವರ್ ಕೂಡಾ ಯಶವಂತಪುರದಲ್ಲಿ ಕಾದಿದ್ದಾನೆ”!

| ಮುಂದುವರಿಯಲಿದೆ |

‍ಲೇಖಕರು Admin

February 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: