ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಿಜ್ಞಾನಿ ಕವಿತೆ- ನೇವರಿಕೆ…

ಅವಿಜ್ಞಾನಿ

ಈ ವಿಶಾಲವಾದ
ಮಂಚದಲ್ಲಿ ನನ್ನ ಕಾಲು
ಹಾಸಲು ಜಾಗವಿಲ್ಲ
ಕೇಳಬೇಕೆಂದರೆ
ನಿಮಗೂ ನನ್ನಂತಿನ
ತಾಳ್ಮೆ ಇರಬೇಕು

ಕಥೆಕಟ್ಟುವ ಇರಾದೆ ಏನಲ್ಲ
ಒಂದು ಘಳಿಗೆ ಗಳಿಸುವ
ಸಣ್ಣ ಹೋರಾಟ
ಹಾಗೆಯೇ
ಸುಣ್ಣ ಕುಟ್ಟಿ ಕುಟ್ಟಿ
ಹದಮಾಡಿ
ಎಲೆಗೆ ಸವರಿ
ಪುಗೆರೆ ಅಡಿಕೆ ಬೆರೆಸಿ
ಕವುಳಿಗೆ ತಾಗಿಸುತ್ತಲೇ
ಹಲ್ಲಿನಲ್ಲಿ ಇಟ್ಟುಬಿಟ್ಟಂತ
ಬಚ್ಚಿರೆಯಂತದ್ದು ಈ ಕಥೆ

ಅಗೆದದ್ದು ಉಗಿಳಿದ್ದು

ಯಾವುದಾದರೂ ಚಣ
ಕೊಂಡುಕೊಳ್ಳಬಹುದು
ನನ್ನೆಲ್ಲಾ
ಸೋಲುವ ತನವನ್ನು ಎನ್ನುವ
ಸೋಗಲಾಡಿತನ ಮೈ ಏರಿ
ಕೂತ ಮೇಲೆ
ಇನ್ನೆಂತ ಇಳಿಯಲಿಕ್ಕೆ ಉಂಟು?
ಇರುವುದೇ ಒಂದು ನಶೆ
ಉಳಿದರ್ಧ ನಿಶೆ

ಭ್ರಷ್ಟ ಆಲೋಚನೆಗಳೂ
ಮುಕ್ಕಾಂ ಹೂಡಿ
ದಾವೆ ಸಲ್ಲಿಸುವ
ಹೊತ್ತಿಗೆ
ಹರಿದ ಪಟ್ಟಾಪಟ್ಟಿಯಲ್ಲಿ
ಪಾವಳಿಯಷ್ಟೂ ನಸೀಬು
ಮಿಕ್ಕಿರುವುದಿಲ್ಲ

ಒಂದು ಅಗೋಚರ
ಸೋಲಿನಂತೆ

ಎಲ್ಲಾ ಶೂನ್ಯಗಳೂ
ನನ್ನಿಂದೆಯೇ ಸುತ್ತುವಾಗ
ಎಣಿಸಿ ಎಣಿಸಿ ಕೂಡಿಸಲು
ಅಂಕೆ ಮಿಕ್ಕಿದ್ದೆಲ್ಲಿ?
ಭರಪೂರ ಸಂತೆಯಲ್ಲಿ
ಖಾಲಿ ಭಣಗುಟ್ಟವ ಭರಣಿ
ಅಂಗಡಿಯವನಂತೆ

ಅದೆಷ್ಟು ಮಾತುಗಳು
ಗುಡಿಸಿ ಗುಡಿಸಿ ಬಿಟ್ಟಿದ್ದೇನೋ
ಮಾತಿನ ರಾಶಿಯೇ
ತುರುಕಿಬಿಡಲು ಕಿವಿಗಳ
ತಲಾಶೆ

ನೀರಿಲ್ಲದ ಕೊಳದಲ್ಲಿ
ಶಾಂತಿಯ ಗಾಲ
ಹಾಕುವ ಬಿಳಿ
ಗಡ್ಡದವನ ಗಡಿಯಾರವಾದ
ನನ್ನ ಕಾಲಿಗೆ
ಹಾಸಲು ಜಾಗವಿಲ್ಲ ಇಲ್ಲಿ

ಮತ್ತು,

ಮುಂದೆಯೂ
ದೊರಕುವ ಭರವಸೆ
ಇರುವುದಿಲ್ಲ!

‍ಲೇಖಕರು avadhi

6 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading