ಗೀತಾ ಜಿ ಹೆಗಡೆ ಕಲ್ಮನೆ
ನಾವೇನೂ ಅಷ್ಟೊಂದು ಹದಗೆಟ್ಟಿಲ್ಲ ಬಿಡಿ
ಏನೊ ಸ್ವಲ್ಪ ಅಲ್ಲಿ ಇಲ್ಲಿ ಹೊಂಡ ಓಳಿ
ಮೋರಿ ಕಲ್ಲು ಅಲ್ಲಲ್ಲಿ ಕಿತ್ತಾಕಿದ್ದು
ಅಡ್ಡಾದಿಡ್ಡಿ ಬಿದ್ದಿದ್ದು ಬಿಟ್ಟರೆ ಇನ್ನೇನಾಗಿದೆ
ಮೆಲ್ಲಗೆ ನಡೆಯಿರಿ
ತಗ್ಗು ದಿಣ್ಣೆ ನೋಡಿಕೊಂಡು.
ಇತ್ತೀಚೆಗೆ ಬೆಳಗಿನ ವಾಕಿಂಗ್ ಹೋಗುವಾಗ
ರಸ್ತೆಗಳೂ ಮಾತನಾಡುತ್ತವೆ ನನ್ನೊಂದಿಗೆ
ಉಭಯಕುಶಲೋಪರಿ ವಿಚಾರಿಸುತ್ತವೆ
ಮೊನ್ನೆ ಬಿದ್ಯಲ್ಲಾ ಏನಾಯಿತು?
ನಾನೊಬ್ಬಳೇ ಅಲ್ಲ
ಸಿಟ್ಟಿನಿಂದ ಜಡಾಯಿಸಿದಾಗ
ಹಿ…ಹಿ… ಎಂದು ನಕ್ಕು ಮತ್ತೆ ಎಡವಿಸಿತು
ಮೈಯೆಲ್ಲಾ ಧೂಳೋ ಧೂಳು
ಅದು ನಕ್ಕ ಹೊಡೆತಕ್ಕೆ
ಕಾಲುಗಳು ಕಕ್ಕಾಬಿಕ್ಕಿ.
ಹಿಡಿ ಶಾಪ ಹಾಕಿದರೇನು ಬಂತು
ಬಡಪಾಯಿ ನಾವುಗಳು ಏನು ಬಂದರೂ
ಉಂಡುಟ್ಟು ಕಂಡವರ ಹತ್ತಿರ ಸಿಕ್ಕ ಸಿಕ್ಕಲ್ಲೆಲ್ಲ
ಈಗಿನ ರಸ್ತೆ ಪುರಾಣ ಆಡಿಕೊಂಡು
ಸಮಾಧಾನ ಪಟ್ಟುಕೊಂಡು ಓಡಾಡೋದಿಲ್ವೆ
ಕೇಳಿ ಕೇಳಿ ಅದರ ಕಿವಿ ಇನ್ನೂ ಕೆಪ್ಪಾಗಿಲ್ಲ
ಮೈಯೆಲ್ಲಾ ಮತ್ತೂ ಕೆಂಪಾಗಿದೆ.
ಮೊನ್ನೆ ಮೊನ್ನೆ ಅಧಿಕಾರಿ ವರ್ಗದವರು
ಸಮೀಕ್ಷೆ ಮಾಡಿ ಹೋದರಲ್ಲಾ
ಕಾಲುವೆಯೆಲ್ಲಾ ಫುಲ್ ಕಾಂಕ್ರೀಟ್
ಇಲಿ ಹೆಗ್ಗಣಗಳ ಕಾಟ ಇಲ್ಲಾ
ಇನ್ನೇನಿದ್ದರೂ ರಸ್ತೆಯೆಲ್ಲ ನೀಟ್ ಪಾಟ್
ಪೊಳ್ಳು ಭರವಸೆ ನಂಬಿ ಹರುಷ ಉಕ್ಕಿದ್ದೇ ಉಕ್ಕಿದ್ದು
ರಸ್ತೆ ಮಾತ್ರ ಮೂರು ತಿಂಗಳಾದರೂ ಯಥಾಸ್ಥಿತಿ.
ಗಾಡಿ ಓಡಿಸುವಾಗ ಗುಂಡಿಗೆ ಡಂಕಣಕಾ ಡಂಕಣಕಾ
ಏರು ಇಳಿ ತೇಪೆ ಹಾಕಿದ್ದಲ್ಲೆಲ್ಲ ಎತ್ತಿ ಎತ್ತಿ ಹಾರು
ಆಯುಷ್ಯ ಇದ್ದರೆ ವಾಪಸ್ ಮನೆ ಸೇರು
ಇಲ್ಲವಾದರೆ ಒನ್ ನಾಟ್ ಒನ್ ಪುಂಗಿ ಊದು
ಉಸಿರು ನಿಂತರೆ ಚಟ್ಟಾ ಏರು.
ಆಹಾ! ಕೆಂಪೇಗೌಡ ಕಟ್ಟಿಸಿದ ಬೆಂಗಳೂರು ಮಹಾನಗರಿ
ಕೆತ್ತಿ ಕೆತ್ತಿ, ಕಿತ್ತು ಕಿತ್ತು ಹೈಟೆಕ್ ಸಿಟಿ ಗಬ್ಬು ಗಬ್ಬು
ಉಂಡಣ್ಣಗಳ ಹಾವಳಿ
ಉಣುವವರಿಗಿಲ್ಲ ನೆಮ್ಮದಿ
ಇದು ನಮ್ಮೂರು ಎಷ್ಟು ಚೆಂದ
ಬಿತ್ತಲ್ಲ ಅಭಿಮಾನಕ್ಕೆ ಸಮಾ… ಗುದ್ದು.
ಆಸೆ ಬಿಟ್ಟಿಲ್ಲ ಇಷ್ಟಾದರೂ ನಾವು
ಬಂತು ಬಂತು ಎಲೆಕ್ಷನ್
ಮಾಡ್ತಾರೆ ಎಲ್ಲಾ ಸಾಪ್ ಸಾಪ್
ಕೆಲಸ ಕಾರ್ಯ ಬಿಟ್ಟು ಹೋಗಿ ವೋಟಾಕು
ಅಚ್ಚೇ ದಿನ್, ಗರೀಬಿ ಹಠಾವೋ, ಸ್ವಚ್ಛ ಭಾರತ್
ಎಲ್ಲಾ ಈಡೇರಿ ನಾವು ಕೂರೊದೊಂದೇ ಬಾಕಿ
ಮುಂದೆ ಕಾಲು ಮೇಲೆ ಕಾಲು ಹಾಕಿ.
ಈಗ ಪಕ್ಕನೆ ನೆನಪಾಯಿತು
ಅಲ್ಲಾ ಇಷ್ಟೆಲ್ಲಾ ಹಂಬಲಿಸುವ ಬದಲು
ಒಮ್ಮೆ ಹವಾ ಈ ಕಡೆ ಸುಳಿದಿದ್ದರೆ
ರಸ್ತೆಯೆಲ್ಲಾ ಕ್ಲೀನೋ ಕ್ಲೀನು
ಎಲ್ಲಿ ನೋಡಿದರೂ ಲಕಾ ಲಕಾ
ನಾನಂತೂ ತಪ್ಪದೇ ರಂಗೋಲಿ ಹಾಕಿ
ಬಣ್ಣಾನೂ ತುಂಬುತ್ತಿದ್ದೆ
ಮತ್ತೆ ನಾಲ್ಕು ದಿನಕ್ಕೆ ರಸ್ತೆ ಎಕ್ಕುಟ್ಟೋದರೂ
ಪರವಾಗಿಲ್ಲವಾಗಿತ್ತು!
0 ಪ್ರತಿಕ್ರಿಯೆಗಳು