ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳ ಹಾಡು

ಸತ್ಯಮಂಗಲ ಮಹಾದೇವ

ಅವಳು ಈಗ ಹಾಡುವುದಿಲ್ಲ
ಮಾತು ಲಯದ ಎಲ್ಲೆ ಮೀರಿವೆ
ಎದೆಯೊಳಗಿನ ಗಾಯಗಳ ತುಂಬಾ
ಈಗ ಅವಳದೇ ನೋವಿನ ಪಲ್ಲವಿ
ಪ್ರೇಮದ ಮುಖವಾಡಗಳು ಎಳೆದ ಬಾಸುಂಡೆಗಳ
ನೇವರಿಸುತ್ತಾ ಸೋತು ಬಳಲಿದ್ದಾಳೆ.

ಅವಳು ಈಗ ಹಾಡುವುದಿಲ್ಲ
ಈ ಗಾಯಗಳ ಮೇಲೆ ಈಗ
ತಂಗಾಳಿ ಬೀಸಿದರೂ ಬೆಂದವಾಸನೆಯೇ
ಮತ್ತೆ ಮತ್ತೆ ಅವಳಿಗೆ
ನೋವಿಗೆ ಕಾರಣಗಳ ಹುಡುಕುತ್ತಾಳೆ
ಹೊಸ ನೋವು ಬೇಡವೆಂದು ಪ್ರಾರ್ಥಿಸುತ್ತಾಳೆ.

ಅವಳು ಈಗ ಹಾಡುವುದಿಲ್ಲ
ಹಸಿರಾಗಿ ಉಸಿರಾಗಿ ನಕ್ಷತ್ರವಾದವನ ನೆನೆದು
ಮರುಗುತ್ತಾಳೆ ಕಣ್ಣ ಹನಿಗಳ ತುಂಬಾ ಹಿಡಿಶಾಪ
ದೃಷ್ಟಿ ನೆಟ್ಟು ಆಗಸಕೆ ಬಾ ಎಂದು ಕರೆಯುತ್ತಾಳೆ
ನೆನ್ನೆಯ ಕನಸುಗಳ ಕೈಲಿ ಹಿಡಿಯಲು ಯತ್ನಿಸುತ್ತಾಳೆ
ಕೊರಳ ಹಾರದ ಎಲ್ಲೆಮೀರಿ ಹೋದ ಮನವ ಶಪಿಸುತ್ತಾಳೆ
ಕೊರಳ ಹಾರದ ಕಟ್ಟಳೆಗಳ ಜರಿಯುತ್ತಾಳೆ
ಹೆಣ್ಣಾಗಿದ್ದಕ್ಕೆ ಛಲದಿಂದ ಪುಟಿಯುತ್ತಾಳೆ.

 

ಅವಳು ಈಗ ಹಾಡುವ ಪ್ರಯತ್ನ ಮಾಡುತ್ತಾಳೆ
ಆಸೆಯ ಬಲೆಗಳ ಒಳಗೆ ಸಿಲುಕಿದ ರೆಕ್ಕೆಗಳಿಗೆ
ಸ್ವಾಭಿಮಾನದ ಬಣ್ಣ ಮಾಸದಂತೆ
ತನ್ನ ತೆರೆದುಕೊಂಡಿದ್ದಾಳೆ ಹೊಸ ನಾಳೆಗೆ
ಕಬ್ಬಿಗನೊಬ್ಬ ಈಗ ಹಾಡು ಹಾಡಿದಂತೆ ದೂರದಲ್ಲಿ
ಆತಂಕ ಅನುಮಾನ ಭಯ ವಿಹ್ವಲಳಾಗಿ
ಕುಸಿದು ಕೂರುತ್ತಾಳೆ
ಹಾಡಿಗೆ ಸೋತ ಮನಸ್ಸನ್ನು ಶಪಿಸುತ್ತಾ
ಸಂತೈಸುತ್ತಾ ಕಬ್ಬಿಗನ ಹೆಜ್ಜೆಗಳ ಪರೀಕ್ಷಿಸುತ್ತಾಳೆ
ಮಣ್ಣ ಸೋಸಿದಂತೆ ಸೋಸಿ ಸೋಸಿ
ಒಂದು ಪುಣ್ಯದ ಹಾಡಿಗಾಗಿ ಹಾತೊರೆಯುತ್ತಾಳೆ

ಅವಳು ಈಗ ಹಾಡುವ ಪ್ರಯತ್ನ ಮಾಡುತ್ತಾಳೆ
ಮುಖವಾಡಗಳ ಕಿತ್ತು ನೋಡುತ್ತಾಳೆ
ತನ್ನನೇ ತಾನು ಪರಿಕ್ಷಿಸಿಕೊಳ್ಳುತ್ತಾ
ಹೆಜ್ಜೆ ಹೆಜ್ಜೆಗೂ ಹೆಜ್ಜೆಗಳ ಇತಿಹಾಸವನು ಕೆದಕುತ್ತಾಳೆ
ನಗಲು ಪ್ರಯತ್ನಿಸುತ್ತಾಳೆ
ಮತ್ತೆ ತುಟಿಯಂಚಲ್ಲಿ ಗಾಯದ ನೋವು ಒಸರಿ
ವಿಷಮವಾಗಿ ಈ ಗಾಯಗಳ ಜ್ವರವೇರಿ
ಅನುಮಾನದ ಚಾದರ ಆವರಿಸುತ್ತದೆ
ಮತ್ತೆ ಹೆಣ್ಣಿನ ಛಲ ಪುಟಿಯಿತ್ತಾಳೆ
ಕಬ್ಬಿಗನ ಹೆಗಲಿಗೆ ಸ್ನೇಹದ ನಂಬಿಕೆಯ ನೊಗ ಹೊರಿಸಿ
ಜೀವದ ಹಾಡನು ಬೆಳೆಯಲು ಯತ್ನಿಸುತ್ತಿದ್ದಾಳೆ

ಅವಳು ಈಗ ಹಾಡುವ ಪ್ರಯತ್ನ ಮಾಡುತ್ತಿದ್ದಾಳೆ.
ಭರವಸೆಯ ನೊಗ ಹೊತ್ತ ಕಬ್ಬಿಗ
ಹಾಡ ಹಾಡುತ್ತಿದ್ದಾನೆ ತನ್ನೊಳಗಿನ ಕಸ ಗುಡಿಸಿ
ಅವಳ ಹಾಡಿಗೆ ಲಯದ ಒಡಲಾಗಲು
ಹೆದರುತ್ತಾನೆ ಭಯದಿಂದ ಮರುಗುತ್ತಾನೆ

ಅವಳು ಈಗ ಹಾಡುವ ಪ್ರಯತ್ನ ಮಾಡುತ್ತಿದ್ದಾಳೆ.
ಕಬ್ಬಿಗನು ಹಾಡು ಸೋಲದಂತೆ ಮತ್ತೆ ಮತ್ತೆ
ಎಚ್ಚರದ ಅಕ್ಕರಗಳ ಜೋಡಿಸುತ್ತಿದ್ದಾನೆ.

‍ಲೇಖಕರು Avadhi

3 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading