ಇಲ್ಲಿ ಬೈಕೇ ದೇವರು, ತಿರುಗಾಡಿಗಳೇ ಭಕ್ತರು!

ರಾಧಿಕಾ ವಿಟ್ಲ

ಒಂದು ಗಾಜಿನ ಪೆಟ್ಟಿಗೆಯೊಳಗೆ ರಾಯಲ್ ಎನ್ಫೀಲ್ಡ್ ಬೈಕು. ಅದನ್ನು ಸುತ್ತು ಹಾಕಲು ರಾಶಿ ಜನ. ಇನ್ನೊಂದಿಷ್ಟು ಜನ ಅತೀವ ಭಕ್ತಿಯಿಂದ ತಾವು ತಂದ ಮದ್ಯದ ಬಾಟಲನ್ನು ಬಗ್ಗಿಸಿ ಆ ಮೂರ್ತಿಗೆ ಕುಡಿಸಿ ಕಣ್ಣಿಗೊತ್ತಿಕೊಂಡು ಭಾವಪರವಶರಾಗುತ್ತಿದ್ದರು. ಬಗೆಬಗೆಯ ಜನರು. ಬಗೆಬಗೆಯ ಭಾವ. ಆ ಮೂರ್ತಿಯ ಮುಂದೆ ಕೂತಿದ್ದ ಪುರೋಹಿತ ಮಾತ್ರ ಸ್ವಲ್ಪವೂ ವ್ಯತ್ಯಾಸವಾಗದ ಮುಖಭಾವದಲ್ಲಿ ಭಕ್ತಾದಿಗಳು ತಂದಿದ್ದನ್ನು ಮುಂದಿದ್ದ ಮೂರ್ತಿಗೆ ಅರ್ಪಣೆ ಮಾಡುತ್ತಿದ್ದ. ಇವೆಲ್ಲವನ್ನು ಅಲ್ಲೇ ನಿಂತು ನೋಡೋದೇ ಒಂದು ಮಜಾ.

ಅದು ರಾಜಸ್ಥಾನದ ಓಂ ಬನ್ನ ದೇವಸ್ಥಾನ. ಇಲ್ಲಿ ಬೈಕು ದೇವರು. ಆ ಬೈಕಿನೊಡೆಯ ಓಂ ಸಿಂಗ್ ರಾಥೋಡರ ಮೂರ್ತಿಗೆ ಪೂಜೆ. ಬನ್ನ ಎಂಬುದು ರಜಪೂತ ಯುವಕನನ್ನು ಗೌರವಪೂರ್ವಕವಾಗಿ ಕರೆಯುವ ಪದ. ಓಂ ಬನ್ನಾರ ಅರ್ ಎನ್ ಜೆ 7773 ನಂಬರಿನ ಎನ್ಫೀಲ್ಡು ಎಲ್ಲರ ಆಕರ್ಷಣೆ. ಇದ್ಯಾಕೆ ಇಲ್ಲಿ ಬಂತು. ಇದೆಂಥ ವಿಚಿತ್ರ ದೇವಸ್ಥಾನ ಎಂದು ತಿಳಿಯ ಹೊರಟರೆ ಇದರ ಹಿಂದೊಂದು ಮಜಾ ಕಥೆಯಿದೆ.

ನಮ್ಮ ಭಾರತದ ಉದ್ದಗಲಕ್ಕೂ ತಿರುಗಾಡೋದು ಖುಷಿ ಕೊಡೋದು ಇದೇ ಕಾರಣಕ್ಕೆ. ಇಲ್ಲಿ ಇಲ್ಲದ್ದು ಯಾವುದೂ ಇಲ್ಲ. ನಮ್ಮ ಜನರು ಹೇಗೆ ಅಂದ್ರೆ, ಇಲ್ಲಿ ದೇವರಿಗೂ ಆಲಯಗಳಿವೆ, ದೇವರ ವಾಹನಗಳಿಗೂ. ಮನುಷ್ಯರಿಗೂ ದೇವಾಲಯ ಇದೆ. ಅವರ ವಾಹನಕ್ಕೂ.

ಮೂರ್ನಾಲ್ಕು ವರ್ಷಗಳ ಹಿಂದೆ ರಾಜಸ್ಥಾನದ ಜೋಧಪುರದಲ್ಲಿದ್ದಾಗ ಇಂಥದ್ದೊಂದು ವಿಚಿತ್ರ ಇಂಟ್ರೆಸ್ಟಿಂಗ್ ದೇವಸ್ಥಾನ ಇರೋದು ಗೊತ್ತಾಗಿತ್ತು. ಆಗ ಅಲ್ಲಿಗೆ ಹೋಗಲಾಗಿರಲಿಲ್ಲ. ಸರಿ, ಇನ್ಯಾವತ್ತಾದ್ರು ರಾಜಸ್ಥಾನದಲ್ಲಿ ಈ ಹಾದಿಯಾಗಿ ಬಂದಾಗ  ಇಂಥದ್ದೊಂದು ಜಾಗ ಇದೆ, ಹೆಂಗಿದೆ ಅಂತ ನೋಡಬೇಕು ಅಂತ ತಲೆಯೊಳಗೆ ಬೆಚ್ಚಗೆ ಇಡಲಾಗಿತ್ತು. ಕೊನೆಗೂ ಮೊನ್ನೆ ಮೊನ್ನೆ ಅಚಾನಕ್ಕಾಗಿ ಅದೇ ಹಾದಿ ಹಿಡಿದಿದ್ದಕ್ಕೂ ಇದು ನೆನಪಾಗಿದ್ದಕ್ಕೂ ಸರಿಹೋಯ್ತು.

ನಮ್ಮ ಪ್ಲಾನು ದೆಹಲಿಯಿಂದ ಚೆನ್ನೈವರೆಗೊಂದು ರೋಡ್ ಟ್ರಿಪ್. ಎರಡು ವರ್ಷದ ಹಿಂದೊಮ್ಮೆ ಹೀಗೆ ಭಾರತದ ಪೂರ್ವ ದಿಕ್ಕಿನಿಂದ ಇಳಿದು, ಪಶ್ಚಿಮದ ಹಾದಿಯಾಗಿ ದೆಹಲಿಗೆ ಮರಳಿದ್ದೆವು. ಆದರೆ ಅದಕ್ಕೆ ಹೋಲಿಸಿದರೆ, ಇದು ಸ್ವಲ್ಪ ದೊಡ್ಡ ಪ್ಲಾನು. ನಮಗೆ ಇಂಥದ್ದೇ ದಿನ ಇಲ್ಲಿ ಎಂಬಂಥ ಯೋಚನೆ ಇರಲಿಲ್ಲ. ಹಾದಿ ಕರೆದುಕೊಂಡು ಹೋದ ಹಾಗೆ ಹೋಗೋದು. ಮುಂಗಡ ಬುಕ್ಕಿಂಗ್ ಎಲ್ಲ ಇಲ್ಲ. ಇರೋಣ ಅನಿಸಿದಲ್ಲಿ ನಿಲ್ಲೋದು, ಒಂದೆರಡು ದಿನ ಕಳೆಯೋದು, ಮತ್ತೆ ಪಯಣ, ಹೀಗೆ. ರಾಜಸ್ಥಾನದ ಒಂದೆರಡು ಜಾಗ, ಪಾಕಿಸ್ತಾನ ಗಡಿಯಲ್ಲೇ ಗುಜರಾತಿನುದ್ದಕ್ಕೂ ಸಾಗಿ, ಅರಬ್ಬೀ ಸಮುದ್ರದ ಬದಿಯಾಗಿ ಸುತ್ತಿ ಬಳಸಿ, ಇತ್ತೀಚೆಗಷ್ಟೆ ತಿಂಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ರೋರೋ ಫೆರಿ ಮೂಲಕ ಕಾರಿನ ಜೊತೆಗೆ ಸಮುದ್ರ ದಾಟಿ, ಮುಂಬೈ, ಪುಣೆ, ಕೊಲ್ಹಾಪುರ  ದಾಟಿಕೊಂಡು ನಮ್ಮ ಬೆಂಗಳೂರು ದಾರಿಯಾಗಿ ಐದಾರು ರಾಜ್ಯಗಳ ಮೂಲಕ ಡ್ರೈವ್ ಮಾಡಿಕೊಂಡು ಚೆನ್ನೈಗೆ ತಲುಪುವುದು ಎಂಬ ಪ್ಲಾನು.

ಹತ್ತಿರ ಹತ್ತಿರ ಅಂದಾಜು 5000 ಕಿಮೀ, 2 ವಾರ. ಇವಿಷ್ಟೇ ತಲೆಯಲ್ಲಿ ಇಟ್ಟುಕೊಂಡು ದೆಹಲಿ ಬಿಟ್ಟಿದ್ದೆವು. ಒಂದು ಹಿರಿ ಜೀವ, ಇನ್ನೊಂದು ಕಿರಿ ಜೀವ ನಮ್ಮಿಬ್ಬರ ಸಾಥಿ. ದೆಹಲಿಯ ಚಳಿಯಿಂದ ತಪ್ಪಿಸಿಕೊಳ್ಳಲು ಹಾಗೂ ಊರಿಗೆ ಹೋಗುವ ಖುಷಿಗೆ ಯಾವ ಸಾಹಸಕ್ಕೂ ರೆಡಿಯಾಗಿದ್ದ ಅತ್ತೆ, ತಮ್ಮ ವಯೋಸಹಜ ಆರೋಗ್ಯದ ಸಮಸ್ಯೆಗಳಿದ್ದರೂ ನಮ್ಮ ಜೊತೆಯಾಗಿದ್ದರೆ, ಹುಟ್ಟಿದಾಗಿನಿಂದ ಸದಾ ಕುಣಿಯುವ ಬಾಲದಂತೆ ನಮ್ಮ ಎಲ್ಲ ತಿರುಗಾಟದಲ್ಲೂ ತನ್ನ ವಯಸ್ಸಿಗೂ ಮೀರಿ ಸಹಕರಿಸಿಕೊಂಡು ಭರ್ಜರಿಯಾಗಿ ಎಂಜಾಯ್ ಮಾಡಿಕೊಂಡು ಎಲ್ಲವನ್ನೂ ಕುತೂಹಲದಿಂದ ನೋಡುತ್ತಾ ಜೊತೆಯಾಗುವ ಮಗರಾಯ.

ಹೀಗೆ ಹೊರಟ ನಾವು ಮೊದಲ ದಿನ ಸೂರ್ಯ ಮುಳುಗುವ ಹೊತ್ತಿಗೆ ಪಾಲಿ ದಾಟಿ ಜೋಧ್ ಪುರಕ್ಕೆ ಒಂದೈವತ್ತು ಕಿಮೀ ಇನ್ನೂ ಬಾಕಿ ಇದೆ ಅನ್ನುವಂಥ ಜಾಗದಲ್ಲಿ ರಸ್ತೆ ಬದಿಯ ಈ ಓಂ ಬನ್ನ ದೇವಸ್ಥಾನದೆದುರು ನಿಲ್ಲಿಸಿದ್ದೆವು.

‘ರಸ್ತೆ ಅಪಘಾತದಲ್ಲಿ ಮಡಿದವರ ಆತ್ಮ ಅದೇ ದಾರಿಯಲ್ಲಿ ಈಗಲೂ ಇವೆಯಂತೆ, ಮಧ್ಯರಾತ್ರಿ, ಲಿಫ್ಟು ಕೇಳಲು ಅಲ್ಲಿ ಸಿಕ್ಕಿದರೆ ಹತ್ತಿಸಿದರೆ ಅವರ ಕಥೆ ಮುಗಿದಂತೆಯೇ, ಆ ಜಾಗದಲ್ಲಿ ಮತ್ತೆ ಮತ್ತೆ ಅಪಘಾತವಾಗುವುದು ಇದಕ್ಕೇ ಅಂತೆ… ಇಂತಹ ಅಂತೆ ಕಂತೆ ಕಥೆಗಳ ಮೇಲೆ ನಮಗೆ ಎಲ್ಲಿಲ್ಲದ ಆಸಕ್ತಿ. ಇದೂ ಅಂಥದ್ದೇ ಒಂದು ಕಥೆ. ಆದರೆ ಇದು ಸ್ವಲ್ಪ ಉಲ್ಟಾ ಕಥೆ.

1988 ಡಿಸೆಂಬರ್ ತಿಂಗಳು. ಮೂವತ್ತೆರಡು ವರ್ಷಗಳ ಹಿಂದೆ, ಓಂ ಬನ್ನ ಎಂಬ ಉತ್ಸಾಹಿ ಯುವಕ ತನ್ನ ರಾಯಲ್ ಎನ್ ಫೀಲ್ಡ್ ಬೈಕಿನಲ್ಲಿ ಈ ದಾರಿಯಾಗಿ ಹೋಗುತ್ತಿದ್ದಾಗ ಮುಂದಿದ್ದ ಮರಕ್ಕೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಡುತ್ತಾರೆ. ಪೊಲೀಸರು ಇವರ ಬೈಕು ತೆಗೆದುಕೊಂಡು ಹೋಗಿ ಸ್ಟೇಷನ್ನಿನಲ್ಲಿ ಇಟ್ಟುಬಿಡುತ್ತಾರೆ. ಮಾರನೇ ದಿನ ಈ ಬೈಕು ಅಲ್ಲಿಂದ ಮಾಯ. ಅಪಘಾತದ ಸ್ಥಳದಲ್ಲಿ ಪ್ರತ್ಯಕ್ಷ! ಮತ್ತೆ ತೆಗೆದುಕೊಂಡು ಹೋಗಿ ಸ್ಟೇಷನ್ನಿನಲ್ಲಿಟ್ಟರೆ ಮತ್ತೆ ಅದೇ ಕಥೆ. ಇದೆಂಥ ವಿಚಿತ್ರ ಎಂದು ಜನ ಓಂ ಬನ್ನರನ್ನು ನಂಬತೊಡಗಿದರು. ಬೈಕನ್ನು ಅಲ್ಲಿಟ್ಟು ದೇವಸ್ಥಾನ ಕಟ್ಟಲಾಯಿತು. ಇಲ್ಲಿ ಪ್ರಾರ್ಥಿಸಿದರೆ ಯಾವುದೇ ಪ್ರಯಾಣ ಸುಖಕರ ಎಂದು ನಂಬತೊಡಗಿದರು. ಓಂ ಬನ್ನ ಈಗಲೂ ಈ ಜಾಗದಲ್ಲಿ ಯಾವುದೇ ಅಪಘಾತವಾಗದಂತೆ ಕಾಯುತ್ತಾರೆ ಎಂಬುದು ಈ ಊರಿನವರ ನಂಬಿಕೆ.

ಈ ದೇವಸ್ಥಾನ ನೋಡಿಕೊಂಡು ಸಾಲಾವಾಸ್ ಎಂಬ ಹಳ್ಳಿಯಲ್ಲಿ ಆ ರಾತ್ರಿ ಉಳಿದುಕೊಂಡಿದ್ದೆವು. ಇದು ಮೂರ್ನಾಲ್ಕು ವರ್ಷ ಮೊದಲೊಮ್ಮೆ ಉಳಿದುಕೊಂಡಿದ್ದ ಹೋಂ ಸ್ಟೇ. ಹಾಗಾಗಿ ಅದರ ಒಡೆಯ ಛೋಟಾ ರಾಮನನ್ನು ಸರಿಯಾಗಿ ಪರಿಚಯ.

‘ಅಲ್ಲ, ಜನ ಹಾಗೆ ನಂಬ್ತಾರಲ್ಲ! ನಿಜಕ್ಕೂ ಹಂಗಾಗಿದ್ಯಾ?’ ಅನ್ನುತ್ತಾ ಉತ್ತರ ಭಾರತೀಯರ ‘ಮಕ್ಕಿ ಕಾ ರೋಟಿ’ ಎಂಬ ಚಳಿಗಾಲದ ಗೆಳೆಯನನ್ನು ಮುರಿದು ಆಲೂ ಗೋಬಿಯ ಜೊತೆ ತೆಗೆದು ಬಾಯಿಗಿಡುತ್ತ ಸುಮ್ಮನೆ ಅವನನ್ನು ಕೆದಕಿದೆ.

‘ಯಾವುದು, ಆ ಬೈಕ್ ದೇವಸ್ಥಾನದ ಬಗ್ಗೆ ಕೇಳ್ತಿರೋದಾ?’ ಎಂದ. ‘ಹೂಂ’ ಅಂದೆ. ಓಂ ಬನ್ನ ಇದೇ ಊರಿನವರು. ಇದೆಲ್ಲ ಸತ್ಯ ಅಂತ ಇಲ್ಲಿಯವರ ನಂಬಿಕೆ. ಜನರು ಅಲ್ಲೊಂದು ದೇವಸ್ಥಾನ ಕಟ್ಟಿಸಿದ ಮೇಲೆ, ಆ ಜಾಗದಲ್ಲಿ ಈಗೆಲ್ಲಾ ಅಪಘಾತ ಮಾತ್ರ ನಡೆಯೋದಿಲ್ಲ ನೋಡಿ! ನಂಬೋದೋ ಬಿಡೋದೋ ಗೊತ್ತಿಲ್ಲ. ಹಿಂಗೊಂದು ಕಥೆ ಇರೋದು ಮಾತ್ರ ಸತ್ಯ. ನಮ್ಮ ಭಾರತ ಎಂಥ ಅದ್ಭುತ ದೇಶ ಅಲ್ವಾ? ಇಲ್ಲಿ ಎಲ್ಲ ಇದೆ, ಈ ಬೈಕ್ ವಿಷಯ ಬಿಡಿ, ಇಲ್ಲೇ ಹಳ್ಳಿಯೊಳಗೆ ನಾಯಿ ದೇವಸ್ಥಾನ ಇದೆ ಗೊತ್ತಾ ಎಂದ.

‘ಹೌದಾ ನಾಯಿ ದೇವಸ್ಥಾನವಾ? ಏನ್ ವಿಶೇಷ ನಾಯಿ ದೇವರದ್ದು?’ ಅಂದೆ.

ಆ ನಾಯಿ ಒಳ್ಳೆ ದಿನಗಳಂದು ಉಪವಾಸ ಮಾಡ್ತಿತ್ತು, ದಿನನಿತ್ಯ ಊರ ದೇವಸ್ಥಾನಕ್ಕೆ ಬಂದು ದೇವರಿಗೆ ನಮಸ್ಕಾರ ಮಾಡುತ್ತಿತ್ತು. ಕೇವಲ ಸಸ್ಯಾಹಾರಿ ಆಹಾರ ಮಾತ್ರ ಸೇವಿಸುತ್ತಿತ್ತು ಅಂತಾರೆ. ಅದಕ್ಕೇ ಅದು ಸತ್ತ ಮೇಲೆ, ಅದರ ಹೆಸರಲ್ಲೊಂದು ದೇವಸ್ಥಾನ ಕಟ್ಟಿಸಿದ್ದಾರೆ, ಆದರೆ, ಓಂ ಬನ್ನ ದೇವಸ್ಥಾನದ ಹಾಗೆ ಪ್ರಸಿದ್ಧಿ ಪಡೆದಿಲ್ಲ ಅಷ್ಟೇ, ಇಲ್ಲೇ ಪಕ್ಕದ ಹಳ್ಳಿಯ ದೇವಸ್ಥಾನ ಅಷ್ಟೇ ಎಂದು ನಕ್ಕ.

ನನಗೆ ಒಮ್ಮೆಲೆ, ಬಿಕಾನೇರಿನ ಕರ್ಣಿ ಮಾತಾ ದೇವಸ್ಥಾನದಲ್ಲಿ ಓಡಾಡುವ ಸಾವಿರಾರು ಇಲಿಗಳೆಂಬ ದೇವರುಗಳು, ಇನ್ಯಾವುದೋ ಜಾಗದ ವಿಸ್ಕಿ ದೇವರು, ಮತ್ಯಾವುದೋ ರಾಜ್ಯಗಳ ಮನುಷ್ಯ ದೇವರುಗಳೆಲ್ಲ ನೆನಪಾಗಿ ಇದೊಂದು ಮಜಾ ಜಗತ್ತು ಎಂಬಂತೆ ನಕ್ಕೆ.

‍ಲೇಖಕರು avadhi

January 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: