ಕಾತ್ಯಾಯಿನಿ ಕುಂಜಿಬೆಟ್ಟು
ಒಂದು ಪ್ರಶ್ನಾರ್ಥಕ ಚಿಹ್ನೆಯಾಗಿಯೇ
ಸುತ್ತುತ್ತಿದ್ದೆ
ಸಣ್ಣ ಗರ್ಭದೊಳಗೆ
ಹೊರ ಬಂದದ್ದು ಕೂಡ
ಅದೇ ಸ್ಥಿತಿಯಲ್ಲಿ
ಸೊನ್ನೆಯಂಥದ್ದೇ ದೊಡ್ಡ ಗರ್ಭದೊಳಗೆ!
ಮೊದಲು ಹೊರಬಂದ ತಲೆಗೆ
ಅನಂತರದ ಮೈಯನ್ನು ಜೋಡಿಸಿದ
ಪ್ರಶ್ನಾರ್ಥಕ ಚಿಹ್ನೆಯೊಂದು ಎತ್ತಿಕೊಂಡಾಗ
ಅದುವರೆಗೂ ಒಳಗೇ ಹೊತ್ತುಕೊಂಡಿದ್ದ ಗರ್ಭಾಂಡದ
ಪ್ರಶ್ನಾರ್ಥಕ ಮುಖವು ಹೆತ್ತು
ಮಲಗಿದ್ದಲ್ಲಿಂದಲೇ ಉತ್ತರವೆಂಬಂತೆ ನಕ್ಕಿತು
ನಾನು ಬ್ರಹ್ಮಾಂಡದ ಮುಖವನ್ನು
ಹುಡುಕತೊಡಗಿದೆ

ಕವುಚಿ ಬಿದ್ದು ಹೊಟ್ಟೆಯೆಳೆಯುತ್ತಲೇ
ನೆಲವನ್ನು ಮೂಸುತ್ತ ಮೂಸುತ್ತ
ಚಲಿಸಿ ಚಲಿಸಿ ಕುಳಿತು
ತಲೆಯೂರಿದ್ದಲ್ಲಿಂದಲೇ ಉಲ್ಟವಾಗಿ ಕಾಲೂರಿ
ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಸುತ್ತಿದೆ
ಒಳಗೊಂದು ಗರ್ಭಾಂಡ ಹೊತ್ತು
ನನ್ನನ್ನು ಹೊತ್ತ ಬ್ರಹ್ಮಾಂಡದ ಮುಖ
ಹೊರಗಿತ್ತು
ನನ್ನ ಗರ್ಭಾಂಡದ ಒಳಗೂ
ಪ್ರಶ್ನಾರ್ಥಕ ಚಿಹ್ನೆಯೆ!
ಹುಟ್ಟಿದೊಡನೆಯೇ ನನ್ನ ಮುಖವನ್ನೇ ನೋಡುತ್ತದೆ
ಮತ್ತೆ ಬ್ರಹ್ಮಾಂಡದ ಮುಖವನ್ನೇ ಹುಡುಕುತ್ತದೆ
ತಲೆಯು ಮೇಲಿದ್ದರೂ ಕೆಳಗಿದ್ದರೂ
ಶಿರ್ಷಾಸನ ಹಾಕಿದರೂ ಶವಾಸನ ಹಾಕಿದರೂ
ಒಳಗೂ ಅಂಡ ಹೊರಗೂ ಅಂಡ
ಹೆಣ್ಣುಜೇಡ ಹೊತ್ತುಕೊಂಡೇ ತಿರುಗುವ ತತ್ತಿ
ಬ್ರಹ್ಮಾಂಡ
ಕಾಲಿದ್ದರೂ
ತಲೆಯಲ್ಲೇ ಇವಳ ಗರ್ಭಾಂಡದೊಳಗೆ ಹೊಕ್ಕು
ಒಳಗಿಂದ ಹೊರಬಂದು
ಅವಳ ಬ್ರಹ್ಮಾಂಡದೊಳಗೇ ಸುತ್ತುವ ಭ್ರೂಣಗಳು!
ಪ್ರಶ್ನಾರ್ಥಕ ಸಂತತಿ
ಒಳಗೊಳಗೆ ಒಳಗೆ ಒಳಗೆ
ತಲೆಯಲ್ಲೇ ಮಹಾದ್ವಾರವನ್ನು ಹುಡುಕುತ್ತ
ಬ್ರಹ್ಮಾಂಡವು ನನ್ನನ್ನು ಹೆರುವ
ಕ್ಷಣಗಳಿಗಾಗಿ
ಕಾತರದಿಂದ ಕಾಯುತ್ತಿದ್ದೇನೆ
ಅವಳ ಮುಖ ನೋಡಲು
ಬರಲಿ ಸಾವು
ನನಗದೇ ಮಹಾಹುಟ್ಟು!
ಅವಳು
ಅವಳೊಂದು ಅದ್ಭುತ!
ಬೆರಗು ನನಗೆ!
ಅದಕ್ಕೇ… ನಾನು ಅವಳ ಹಾಗೆ ಅವಳಾಗಬೇಕು!
ನಾನು
ಅವಳ ಹಾಗೆ ಅವಳಾಗಲು
ಸ್ಥಿತಪ್ರಜ್ಞಳಂತೆ ಪದ್ಮಾಸನ ಹಾಕುತ್ತೇನೆ
ನನ್ನ ಭಾವಗಳು ಕಡೆಬಾಯಲ್ಲಿ
ಜೊಲ್ಲಂತೆ ಹರಿಯತೊಡಗುತ್ತವೆ ಸ್ಥಿಮಿತತಪ್ಪಿ
ನಾನು ನನ್ನದೆಂದುಕೊಂಡಿದ್ದ ರಾಶಿರಾಶಿ ಪದಗಳು ತೊದಲುತ್ತ
ಅವಳ ವೀಣೆಯ ತಂತಿಗಳ ಮೇಲೆ
ಉದುರಿ ಉರುಳಾಡಿ ಹೊರಳಾಡಿ ಅಪಸ್ವರವೇಳುತ್ತವೆ
ಅಥ೯ವಿಲ್ಲದ್ದನ್ನು ನುಡಿಯುತ್ತದೆ ನನ್ನ ನಾಲಗೆ
ತಲೆಕೊಡವಿ ಮೈಕೊಡವಿ ಮರಳಿ ಕಣ್ಮುಚ್ಚಿ
ಧ್ಯಾನ ಮಾಡುತ್ತಿದ್ದೇನೆ ಅಂದುಕೊಂಡು
ಧ್ಯಾನ ಮಾಡುತ್ತೇನೆ
ನಾನು ಅವಳ ಹಾಗೆ ಅವಳಾಗಲು!
ಆದರೆ… ಅವಳಾಗಲೇ ಇಲ್ಲ
… ನಾನು ನಾನಾಗಿಯೇ ಉಳಿದು…
ಅವಳ ಜುಳುಜುಳು ಹರಿಯುವ
ನಾದನದಿಯ ಬಳಿ ನಾನು ನನ್ನದು
ಎಲ್ಲ ಕಳಚಿ ಬತ್ತಲಾಗುತ್ತೇನೆ… ಅವಳದ್ದೇ ಕೈಯ ವೀಣೆ… ಹೆಣ್ಣು!
ನಗ್ನತೆ ಎಂಬುದು ವೀಣೆಯ ಟೊಳ್ಳು ಸೋರೆಬುರುಡೆಯ ಒಡಲ ಒಳಗಿದೆ
ಒಳಗೆ ಕಾಲಿಯಾಗುತ್ತೇನೆ ಹೊರಗೆ ತಂತಿಯಲ್ಲಿ ಸ್ವರ ಹೊಮ್ಮಲು!

ಅವಳ ರೆಕ್ಕೆ ಬಿಚ್ಚಿದ
ಪುಸ್ತಕಪಾದಗಳಿಗೆ ಹಣೆಯೊತ್ತಿ ತಾವರೆಯಾಗುತ್ತೇನೆ
ಎದೆಯ ಕೊಳದಲ್ಲಿ ಮುಳುಗಿ ಮೇಲೆ ಬಂದಾಗ
ಬೋಳುವಿಗ್ರಹದಂತಹ ಕವನವಾಗಿರುತ್ತೇನೆ… ಅವಳದ್ದೇ ಮಗು!
ಅವಳ ವೀಣೆಯ ತುಂಬ
ಪುಟ್ಟಪುಟ್ಟ ಸ್ವರಗಳಾಗಿ ಅಂಬೆಯಿಡುತ್ತೇನೆ
ಮುಂಗೈ ಹತ್ತಿ ಗಿಳಿಮರಿಯಾಗುತ್ತೇನೆ
ಅವಳು ಮುಗುಳ್ನಗುತ್ತಾಳೆ!
ಅವಳು
ಒಂದು ಅದ್ಭುತ!
ಬೆರಗು ಈ ಆತ್ಮಕೆ…
ಆತ್ಮಗಿಳಿಗೆ!
ಏಕಾಂತ
ಮೋಡಗಳ ಹೊದಿಕೆಯೊಳಗಿಂದ ಎದ್ದು ಮೈಮುರಿದು
ಆಕಾಶದಗಲಕ್ಕೆ ಬಾಯಿಯಾಕಳಿಸುತ್ತ
ಬೆಳಕು ಮೈಯಲ್ಲಿ ಬತ್ತಲೆ ಮಗುವಂತೆ ನಿಲ್ಲುತ್ತಾನೆ ನೇಸರ
ಬೆಳಕು ತುಂಬಿದ ಅಕ್ಷಯ ಕೊಡ
ಅವನ ಕಾಯ
ಬೆಳಕು ಹರಿಸುತ್ತಲೇ ಇರುತ್ತಾನೆ
ಸಂಜೆಯವರೆಗೂ…
ಮಾತಿಲ್ಲ
ಬರೀ ಮೌನ!
ಹೂವುಗಳು ಅರಳುತ್ತವೆ
ಕೆಂಪು ನೀಲಿ ಹಳದಿ
ತುಟಿ ಎಸಳುಗಳಲ್ಲಿ ಬೆಳಕು ಹೀರುತ್ತವೆ
ಮೌನವಾಗಿ ಕಂಪು ಬೀರುತ್ತ
ಜೇನುಗಳು ಮಕರಂಧ ಹೀರಿ
ಮಧು ಸಂಗ್ರಹಿಸುತ್ತವೆ
ಮೌನವಾಗಿ
ಬೀಜಗಳು ಕಣ್ತೆರೆದು ಮೊಳಕೆಗಳ ತಲೆ ಬೆಳೆದು
ತೆನೆತೆನೆಗಳಲ್ಲಿ ಹಾಲು ಉಕ್ಕಿಸುತ್ತವೆ
ಇರುವೆಗಳು ಸಾಲು ಸಾಲು ಸರದಿಯಲ್ಲಿ
ಸೂಯ೯ನನ್ನೇ ಹೊತ್ತು ಸಾಗುತ್ತವೆ ಪಡುವಿಗೆ ಮೌನವಾಗಿ
ಈ ಎರಡು ಕಾಲ ಜೀವಿಗಳಿಗೆ ಮಾತ್ರ ಬರಿದೇ ಮೂರು ಕಾಲಗಳ
ಮಾತು ಮಾತು ಮಾತು
ಬಾಯಿ ಬ್ರಹ್ಮಾಂಡ !
ಎಲ್ಲಿದೆ ಏಕಾಂತ?
ಮಾರುದ್ದ ನಾಲಗೆ ಮೈತುಂಬ
ಈ ಮಾತುಗಳ ಸಂತೆಯಲ್ಲಿ

ಓಡಾಡುತ್ತಿವೆ ಒಡಕು ಕೊಡಗಳು
ಕತ್ತಲನ್ನೇ ಚೆಲ್ಲುತ್ತ!
ಕಾಡುವ ಜೀರುಂಡೆಗಳು!
ಜೀರ್ಜೀರ್ ಜೀಕ೯ರಿಸುವ
ಹರಿತವಾದ ತಂತಿಕೊರಳುಗಳು
ಕತ್ತಿ ಬಾಯ ಠೇಂಕಾರ
ಜೀರ್ ಜೀರ್ ಜೀರೋಗುಟ್ಟುತ್ತ
ಚೀತ್ಕಾರವನ್ನೇ ಓಂಕಾರವೆಂದುಕೊಳ್ಳುತ್ತ
ಮೈ ಒಡೆದು ಜೀವ ರುಂಡದಿಂದ ಬೇರಾಗಿ ಸಾಯುತ್ತವೆ!
ಜೀರುಂಡೆ! ಜೀವರುಂಡೆ! ರುಂಡದಲ್ಲೇ ಜೀವ!
ಜೀರ್ ಉಂಡೆ!ಜೀರಲ್ಲೇ ಜೀವದುಂಡೆ!
ಇಷ್ಟು ಚಿಕ್ಕ ದೇಹದೊಳಗೆ
ಎಲ್ಲಿಟ್ಟುಕೊಂಡಿರುತ್ತವೋ ಈ ಅಪಸ್ವರವನ್ನು!
ಈ ಹಾಂಕಾರ ಹೂಂಕಾರ ಹೇಂಕಾರ!
ಅಹಂಕಾರದ ಅಹಂ ಒಡೆದು ಹಾಹಾಕಾರ!
ಸಾವಿನ ಗುಮ್ಮನಲ್ಲೇ ಸಾಕ್ಷಾತ್ಕಾರ!
ಹೌದು!
ಏಕಾಂತದಲ್ಲಿ ನಿದ್ದೆಯಲ್ಲೇ ಮುಳುಗಿ ತೇಲಿ ಸಾಯಬೇಕು ಒಬ್ಬಳೇ !
ಚೇ! ಎಲ್ಲಿ ನೋಡಿದರಲ್ಲಿ
ಎಲುಬಿಲ್ಲದ ಹಾವು ನಾಲಗೆಗಳ ಹುತ್ತ ಬಾಯಿಗಳು!
ಬಾವಿಯೊಳಗೆ ಬಾವಿ ಬಾವಿಯೊಳಗೆ ಬಾವಿ ಬಾವಿ
ಬಾವಿಯೊಳಗೇ ಹೂತು ಹೋದ
ಕಾಯಕೊಡವ ಮೇಲಕ್ಕೆತ್ತುವವರಾರು?
ಚೆನ್ನಪ್ಪ ಚೆನ್ನೇಗೌಡ ಕುಂಬಾರ
ಮಾಡಿದ ಕೊಡನವ್ವಾ!
ಆ ಕುಂಬಾರ ಈ ಕೊಡಗಳಿಗೆಲ್ಲ
ಕಿವಿಯಗಲ ದಳಬಾಯಿ ಇಟ್ಟ
ಬಾಯಿ ಬಿಲ್ಲಿಗೆ ಮಾತು ಬಾಣ !ಹ ಹ್ಹ !
ಮೊದಲು… ನನ್ನ ವಾಚಾಳಿ ಮನಸ್ಸಿನ ಹಳವಂಡದ
ಹಂಡೆ ಬಾಯಿಗೊಂದು ಮುಚ್ಚಳ ಹುಡುಕಬೇಕು!
ಮೌನಮುಚ್ಚಳ!
ಮೊಳಗಂಟಿನ ಕೆಳಗೆ
ನೀನು ಪದೇ ಪದೇ ಹೇಳುವಂತೆ
ಮೊಳಗOಟಿನ ಕಳೆಗುಂಟೇ ನನ್ನ ಬುದ್ಧಿ?
ಓಹೋ !ಇದನ್ನು ಗುಟ್ಟಾಗಿ ಮುಚ್ಚಿಡಲೆಂದೇ
ಈ ಸೀರೆಯೇ?
ಇವತ್ತು
ಐದುಮೊಳ ಸೀರೆ ನೆರಿಗೆಯನ್ನು
ಮೊಣಗಂಟಿನವರೆಗೂ ಎತ್ತಿ
ಗಂಟಿನ ಕೆಳಗೆ ಹುಡುಕಿದೆ ನನ್ನ
ಮೆದುಳನ್ನು!
ಸಿಕ್ಕಿದ್ದೇ ಸೀಳಿ ತೆಗೆದು
ತಲೆಗೇರಿಸಿಕೊಂಡೆ… ಆಹಾ!
ಈ ಕಿರೀಟ ತಲೆಯಲ್ಲಿ ಹೊತ್ತು
ಆಳುವ ಸುಖವೇ !
ಅವನಿಗೆ ಮಾತ್ರ ಇದ್ದರೆ ಸಾಕೆ?
ಅವಳಿಗೆ ಬೇಡವೇ?
ಹೃದಯ ಎಡೆಬಿಡದೆ ಬಡಬಡ ಬಾಗಿಲು
ಬಡಿಯುವ ಸದ್ದು ಕೇಳಲಾಗುತ್ತಿಲ್ಲ ಈಗ ಕಿವಿಗೆ!
ಕಿವಿಯ ಹತ್ತಿರದಲ್ಲಿರುವುದಕ್ಕೇ ಹೀಗೆ !
ನಿನ್ನ ಆಳುವ ಸುಖಕ್ಕೆ ತಪ೯ಣ ಬಿಡುವ
ಸಾವುಡೋಲು ಈ ಹೃದಯ ! ಮೆದುಳು ಕಿವಿಗೆ ಅಂದಿತು… ಅದನ್ನು
ಮೊಣಗಂಟಿನ ಕೆಳಗೆ ಜಾರಿಸಿದೆ
ಗಂಡಿನ ಹೃದಯ ಮೊಣಗಂಟಿನ ಕೆಳಗೆ ಇರುವುದೇಕೆ? ಎಂಬ ಅರಿವಾದದ್ದೇ
ಭಾವ ಬಂಧಗಳು ದೂರವಾದವು!
ಹೃದಯ ದೂರವಾದದ್ದೇ
ಮೆದುಳು ಕಿವಿಗೆ ಇನ್ನಷ್ಟು ಹತ್ತಿರವಾಗಿಬಿಟ್ಟಿತು
ಎರಡೂ ಸೇರಿ ಸಂಚು ಮಾಡತೊಡಗಿದವು
ಅವನನ್ನು ಅಧೀನಪಡಿಸಿಕೊಂಡು
ಅವಳು ಪ್ರಧಾನಳಾಗುವುದು ಹೇಗೆ? ಎಂದು

ಬುದ್ಧಿಯು ಮಾತನಾಡತೊಡಗಿತು ಕಿವಿಯಲ್ಲಿ
ಗ೦ಡಿನ ಗುಟ್ಟು ರಟ್ಟು ಮಾಡಿತು
ಹೆಂಗಸರ ಬುದ್ಧಿ ಮೊಣಗಂಟಿನ ಕೆಳಗೆ ! ಎಂದದ್ದೇ ಅವ!
ಅವಳ ಮೆದುಳನ್ನು ಸಸಾರ ಮಾಡಿ
ಞಕಞಕ ತುಳಿದು
ಮೊಣಗಂಟಿನಿಂದ ನೆತ್ತಿಯ ಕಣ್ಣಿನವರೆಗೂ ಹಕ್ಕು ಸ್ಥಾಪಿಸಿ ಆಳಲು
ಅವಳು ಶೀಷಾ೯ಸನ ಹಾಕಿದರೂ
ಅವನನ್ನು ಆಳಲು ಆಗಲೇಬಾರದು ಎಂದು !
ಈಗ ನನ್ನ ಹೃದಯ ನನ್ನ ಮೊಣಗಂಟಿನ ಕೆಳಗೆ
ಬಡಿಯುತ್ತಿದೆ ಟಮಟಮ ತಮಟೆ!
ಇನ್ನು ನನ್ನ ಪಾದ ಮಾತ್ರ ಅವನ ಹಕ್ಕು!
ಹೆಂಗಸರ ಭಾವ ಮೊಣಗಂಟಿನ ಕೆಳಗೆ !
ಹೊಸಗಾದೆಯ ಸಿಂಹಾಸ ಗಾದಿಯ ಮೇಲೇರಿ
ತಲೆ ಮುಟ್ಟಿಕೊಂಡು ನಕ್ಕೆ
ಈಗಷ್ಟೇ ಪಟ್ಟವೇರಿದ ಮಹಾರಾಣಿಯಂತೆ!
ಅವ ಮಂಡಿಯೂರಿ ನನ್ನ ಪಾದ ಒತ್ತತೊಡಗಿದ
ಹೃದಯ ವಿಲವಿಲ ಒದ್ದಾಡತೊಡಗಿತು
ಮೆದುಳು ತೀರದಲ್ಲಿ ಬಿದ್ದ ಮೀನಂತೆ
ಬಾಯ್ ಬಾಯ್ ಬಿಟ್ಟಿತು!
ಬೆಂಕಿ!
ನನ್ನ ಹೊಟ್ಟೆಯಲ್ಲಿ ತಾಳೆಮರದಷ್ಟು
ಎತ್ತರದ ಬೆಂಕಿ ಉರಿಯುತ್ತಿದೆ!
ದುಶ್ಯಾಸನ ಎಳೆದೆಳೆದು ಹಾಕಿರುವ
ಸೀರೆಯ ಬೆಟ್ಟದೊಳಗಿಂದ
ಬೆಂಕಿಯನ್ನೇ ಸೀರೆಯಂತೆ ಸುತ್ತಿಕೊಂಡು ಎದ್ದು ನಿಂತಿದ್ದಾಳೆ ಪಾಂಚಾಲಿ!
ಭೀಮ ಅವಳ ಕುರುಳಿಗೆ ಮುಡಿಸಿರುವ ಅವನ ಕರುಳು ಕಿಸಕ್ಕನೆ ನಗುತ್ತಿದೆ…
ನನಗೆ ಕೈಗಳಿರುತ್ತಿದ್ದರೆ ನಿನ್ನ
ಸೀರೆಗಳನ್ನು ಎಳೆಯುತ್ತಲೇ
ಇರುತ್ತಿದ್ದೆ ಅನ್ನುತ್ತಿದೆ ಅಲ್ಲಿಂದಲೇ!
ಓ ಪಾಂಚಾಲೀ…ಸೀರೆಗೇ ಹೆಣ್ಣು ಮೈ ಏಕೆ ಅಂಟಿಕೊಳ್ಳಬೇಕು?
ಮೊಳಮೊಳ ಮೊಳ ಐದು ಮೊಳದ
ಸೀರೆಗಳು ಹೆಣ್ಣನ್ನು ಆರಕ್ಕೇರದಂತೆ
ಕಾಲೆಳೆದುಬಿಟ್ಟಿವೆ!
ಬಣ್ಣ ಬಣ್ಣ ಬಣ್ಣದ ಸೀರೆಗಳು
ಹೆಣ್ಣಿನ ಬದುಕಿನ ಬಣ್ಣವನ್ನೇ ಕೆಡಿಸುತ್ತಿವೆ.. ಕ್ಷಣ ಕ್ಷಣವೂ ಬಣ್ಣ ಬದಲಿಸುವ ಗೋಸುಂಬೆಗಳು ಪುರುಷ ಮಾರುಕಟ್ಟೆಯಲ್ಲಿ
ಮಾರುಮಾರು ತಲೆಮಾರುಗಳಿಂದ
ಹೆಣ್ಣಿನ ತಲೆಗಳನ್ನು
ತೆಂಗಿನಕಾಯಿಗಳಂತೆ ಮಾರುತ್ತಿವೆ
ಸೀರೆ ಉಡಿಸಿ ಬಳೆ ತೊಡಿಸಿ
ಹೃದಯವನ್ನು ಎರಡು ಹೋಳು ಮಾಡಿ
ತುರಿಮಣೆಯ ಮೇಲೆ ಕೂರಿಸಿಬಿಟ್ಟಿವೆ ಹೆಗಲು ಅಮುಕಿ…
ತಲೆಯಲ್ಲಿ ಗೋಟು ತೆಂಗಿನಕಾಯಿ
ಕಟಕಟ!

ಈ ಸೀರೆಯಲ್ಲವೇ
ಅಕ್ಕನ ಪಾದಗಳಿಗೆ ಸಂಕೋಲೆಯಾದದ್ದು?
ತಂಗಿಯ ಮುಂಗೈಗೆ
ಸರಪಳಿಯಾದದ್ದು?
ಓ ಪಾಂಚಾಲಿ… ಈ ಸೀರೆಗಳೆಂದರೆ
ನೀರೆಯನ್ನು ಸುತ್ತಿಕೊಂಡ ಬೆಂಕಿ!
ನನ್ನ ಹೊಟ್ಟೆಯಲ್ಲಿ ತಾಳೆಮರದಷ್ಟು ಎತ್ತರದ
ಬೆಂಕಿ ಉರಿಯುತ್ತಿದೆ!
ಬೆಂಕಿಸೀರೆ ಉಟ್ಟು ನಿಂತ
ಪಾಂಚಾಲಿ!
ಎದ್ದು ಎದೆಯು ಹೆತ್ತ ಕವಿತೆಗೆ
ಜೀನ್ಸ್ ಪ್ಯಾಂಟ್ ತೊಡಿಸುತ್ತೇನೆ! ಪಾಂಚಾಲಿ!ಪಾಂಡವರಿಗೆ ಸೀರೆ ಉಡಿಸುತ್ತಿದ್ದಾಳೆ!
ಕನ್ನಡಿಯಲ್ಲಿ ಶಾರದೆ ನಗುತ್ತಾಳೆ
ದೊಗಳೆ ಅಂಗಿ ಪ್ಯಾಂಟ್ ತೊಟ್ಟು!






0 Comments