ಗಾಜಿನ ಬೂಟು
ವಿನಿ ನಾಯಕ್
ಅವಳೊಬ್ಬಳಿದ್ದಳಂತೆ
ಸಿಂಡರೆಲಾ;
ಮಿಂಚುವ ಅಂಗಿ
ಗಾಜಿನ ಬೂಟು
ತೊಟ್ಟು ಹೋದವಳಿಗೊಬ್ಬ
ರಾಜಕುಮಾರ ಸಿಕ್ಕಿದನಂತೆ.
ಕೊನೆಯಲ್ಲಿ ಸಿಂಡರೆಲಾ
ರಾಜಕುಮಾರನನ್ನು
ಮದುವೆಯಾಗಿ
ಸಾವಿರ ವರ್ಷ
ಸುಖವಾಗಿದ್ದಳಂತೆ…
ಶಾಲೆಯಿಂದ ಬಂದ
ಪುಟ್ಟ ಮಗಳು
ಕಥೆ ಹೇಳುತ್ತಿದ್ದರೆ
ಅಮ್ಮ ನಗುತ್ತಿದ್ದಳು.
ಅಮ್ಮ, ನನಗೂ ಮದುವೆ
ಮಾಡಿ ಬಿಡು
ರಾಜಕುಮಾರನೊಂದಿಗೆ,
ಶಾಲೆಯೂ ಬೇಡ
ಓದೂ ಬೇಡ
ಸಿಂಡರೆಲಾಳಂತೆ ಸಾವಿರ ವರ್ಷ
ಸುಖವಾಗಿದ್ದುಬಿಡುವೆ.
ಥಟ್ಟನೆ ಮಾತು ನಿಲ್ಲಿಸಿದಾಕೆ,
ಅಮ್ಮ ನಿನಗೂ ಮದುವೆಯಾಗಿದೆ
ನಿನಗೇಕೆ ಹರಿದ ಸೀರೆ
ಯಾಕೆ ಕಣ್ಣೀರು
ಮತ್ಯಾಕೆ ಇಷ್ಟೊಂದು
ಕೆಲಸ…!!
ಬೆರಗುಗಣ್ಣಿಂದ ತನ್ನನ್ನೇ
ದಿಟ್ಟಿಸುತ್ತ ಕುಳಿತ
ಪುಟ್ಟ ಮಗಳತ್ತ
ಪ್ರೀತಿಯುಕ್ಕಿ ಬಂದು
ಕೆನ್ನೆಗೊಂದು
ಮುತ್ತಿಕ್ಕಿದಳು.
ಸಿಂಡರೆಲಾಳದು
ಬರಿಯ ಕಥೆ ಮಗಳೆ
ಕಟ್ಟುಕಥೆ..
ರಾಜಕುಮಾರನೊಟ್ಟಿಗಿನ
ಸಾವಿರ ವರ್ಷದ ಸುಖ
ಬರಿಯ ಭ್ರಮೆಯಷ್ಟೆ.
ಮದುವೆಯಾದ ಹೆಣ್ಣುಗಳೆಲ್ಲ
ಸುಖವಾಗಿರುವುದಿಲ್ಲ.
ಸುಖವಾಗಿದ್ದವರೆಲ್ಲಾ
ಮದುವೆಯಾಗದವರೂ ಅಲ್ಲ.
ಅಂದುಕೊಂಡಷ್ಟು ಸುಸೂತ್ರವಲ್ಲ.
ಎಲ್ಲವೂ,ಎಂದಿಗೂ
ಸರಿಯಾಗುವದಿಲ್ಲ.
ಮಗಳ ಪಿಳಿ ಪಿಳಿ
ಕಣ್ಣು ನೋಡುತ್ತ
ಮತ್ತೊಮ್ಮೆ ನಕ್ಕಳು.
ಸುಖ ತುಂಬ ಚಿಕ್ಕದು
ಕ್ಷಣಿಕವೂ ಹೌದು.
ಹೊಟ್ಟೆ ತುಂಬ ಊಟ
ಪುಟ್ಟದೊಂದು ಮನೆ
ಒಂದಿಷ್ಟು ತಮಾಶೆ
ನಗುವಿನ ಗಲ ಗಲ ಸದ್ದು…
ಈ ಕ್ಷಣದ ಖುಷಿ
ಸವಿದುಬಿಡು.
ಬದುಕೆಂದರೆ
ರಾಜಕುಮಾರನೊಟ್ಟಿಗಿನ
ಅದ್ದೂರಿ ಮದುವೆಯೊಂದೇ ಅಲ್ಲ.
ಗಾಜಿನ ಬೂಟು ಹಾಕಿ
ನಡೆಯುವದು
ಸುಲಭವೂ ಅಲ್ಲ.
ಏನೋ ಅರ್ಥವಾದಂತೆ
ಎದ್ದು ನಿಂತಳು ಮಗಳು.
ಅಮ್ಮಾ ಆಟವಾಡಲು ಹೋಗಲೆ
ಎಂದವಳಿಗೆ,
ಕತ್ತಲಾಗುವದಕ್ಕೂ ಮುಂಚೆ
ಬಂದುಬಿಡು
ಝಾನ್ಸಿ ಮತ್ತೆ ಕಿತ್ತೂರಿನ
ರಾಣಿಯರ ಕಥೆ ಹೇಳುವೆ
ಎಂದಳು ಅಮ್ಮ.
ಚಿಟ್ಟೆಯಂತೆ ಕುಣಿಯುತ್ತ
ಹೋದವಳನ್ನೆ ನೋಡುತ್ತ
ಹಳೆ ಹಾಡೊoದು ಗುನುಗುತ್ತ
ಹರಿದ ಸೀರೆ
ಹೊಲಿಯತೊಡಗಿದಳು..





ಮಕ್ಕಳ ಕಲ್ಪನೆ ಅದೆಷ್ಟು ಚೆಂದ ಹಾಗೆ ಉತ್ತರಿಸುವುದು ಕಷ್ಟ. ಚೆನ್ನಾಗಿ ಬರೆದಿದ್ದೀರಾ
Thank you sangeeta 🙂
ಬಲು ಚೆನ್ನ! ಖುಶಿ ನೀದಿದ ಕವಿತೆ.
,ಬರೆಯುತ್ತಿರಿ ಹೀಗೆ ..
– ಶ್ಯಾಮಲಾ
Shyamala ma’m 🙂 dhanyavadagalu.