ಮುಳ್ಳಿರದ ಗುಲಾಬಿಗಳು
ಚೈತ್ರಾ ಹೆಗ್ಡೆ
ಮಾತು ಮುಗಿಸಿ ಹೊರಟ ಮಳೆ
ಅಂಗಳದ ತುದಿಯಲ್ಲುದುರಿದ
ಪಾರಿಜಾತಗಳ ಲಂಗದಲಿ
ತುಂಬಿಕೊಂಡು ಹೋದಂತೆ
ಸಂಜೆ ಖಾಲಿ..
ಹೆಸರಿಡಬೇಕೆ ಬಂಜೆಗತ್ತಲು
ಹೆತ್ತುಕೊಡುವ ನಿನ್ನ ನೆನಪುಗಳಿಗೆ?
ಕಲಾಯಿ ಹಾಕಿಸಿಲ್ಲ
ಹಳೆ ಪಾತ್ರೆಗಳಂತೆ ಹರಡಿಬಿದ್ದ ಕನಸುಗಳಿಗೆ..
ರೆಪ್ಪೆಗಳ ಗೋಡೆಗಂತೂ
ನಿತ್ಯ ನಡೆಯುತ್ತಿದೆ
ಕಂಬನಿಗಳ ತಣ್ಣನೆ ಗಿಲಾಯ…
*
ಅಪ್ಪ ಹೋದಲಾಗಾಯ್ತು ಲೆಕ್ಕ ಪುಸ್ತಕದ
ತುಂಬ ಮಣ್ಣು ಹೊಯ್ಸಿದ್ದು,
ಬೇಲಿ ಹಾಕಿಸಿದ್ದು, ಬೆಳೆಹುಲ್ಲು ತರಿಸಿದ್ದು,
ಹೋಗಿದ್ದು, ಬಂದಿದ್ದು
ಎಲ್ಲ ಬರೆದಿಡುತ್ತಾಳೆ ಅಮ್ಮ,
ಕೊನೆಕೊಯ್ಲಿನಲಿ ಜಗುಲಿಯಲೇ ಮಲಗಿ
ಅಡಿಕೆಗಳ ಪಹರೆ ಕಾಯುತ್ತಾಳೆ,
ಹೊಸಮನೆಗೆಂದು ಹಾದಿಬದಿಗೆ ಸರಿದಿಟ್ಟ
ಕಲ್ಲುಗಳ ಎಣಿಸುತ್ತಿರುತ್ತಾಳೆ ಬಿಡುವಿದ್ದಾಗೆಲ್ಲ;
ನೆನಪುಗಳ ಗುಡಾಖು ಹಾಕಿ ಗುಂಡಿಯೊತ್ತಿದರೆ
ಅವಳ ಲೆಕ್ಕಗಳೆಲ್ಲ ಲೆಕ್ಕ ಸಿಗದಷ್ಟು
ಕವಿತೆಗಳಾಗುತ್ತವೆಯೇ?
ಒಂದಕ್ಕೊಂದು ತಾಳೆಯಾಗದ ಹಗಲು-
ಇರುಳಿನ ಅಢಾವೆಪತ್ರಗಳು
ಇನ್ನೆಂದೂ ತೆರೆಯದಂತೆ ಮಗಚುತ್ತವೆಯೇ?
ಅವಳ ನಿರಿಗೆಯಿಲ್ಲದ ಹಣೆಯ,
ನಿಸೂರು ನಗುವ ಕಲೆಯ,
ಯಾವುದೋ ಧ್ಯಾನ ಮಿಡಿವ
ಇಡಿ ಇಡೀ ನಿದಿರೆಯ ಎಂದಿಗಾದರೂ
ಎದೆಯ ಬಿಕ್ಕುಗಳು ಬರಮಾಡಿಕೊಳ್ಳುತ್ತವೆಯೇ?
ಜೋರು ಬೇಸಿಗೆಯಲಿ ಊರು ಬಿಟ್ಟ
ಕೊಳಗಾಹಿ,
ಬಣ್ಣ ಮುಗಿದವೆಂದು ಕೈ
ತೊಳೆದುಕೊಂಡ ತೌಲಿಕ,
ವಿರಹಕೆ ನೀರುಣಿಸಿ ಹಬ್ಬಲು ಬಿಟ್ಟ
ಪ್ರೇಮಿ, ಇವರೆಲ್ಲ ನಿನ್ನ ನೆರಳ ಚೂರ
ಹೊದ್ದು ಜೀವ ತಳೆಯುತಾರೆ ಯಾಕೆ
ಕಣ್ಣ ಮುಂದೆ?
*
ಮಳೆಗಾಲ ಮುಗಿಯುತ್ತಿದ್ದಂತೆ
ಮತ್ತೆ ಕೆಲಸದವರು ಮರಳ
ಸಾಣಿಸುವ ಸದ್ದು,
ಟಾಪಿ ಕುಟ್ಟುವ ಸದ್ದು,
ಪಾಗಾರದೊಳಗೆ ಅಮ್ಮ ಹೂಕುಂಡಗಳನೆಲ್ಲ
ಪಟ್ಟಗಿಡುವ ಸದ್ದು,
ಬೀರುವುದಿದೆಯಂತೆ ಬೇರೆ
ಶಂಖಪುಷ್ಪದ ಬೀಜಗಳ,
ಹಬ್ಬಿಸುತಾಳಂತೆ
ಮಾಡಿಗೂ ಬಳ್ಳಿಗಳ,
ಇನ್ನು ನಿನ್ನ ನೆನಪುಗಳು ಕಂಪೊಡೆವ
ಸಂಜೆಯಲಿ ಮಲ್ಲಿಗೆಯ
ತಿಳಿಗಂಧವೂ ನಿಮೀಳಿತ!
ನನಗೆ ಹೇಳದೇ ಬರೆದಿಟ್ಟಿರುತ್ತಾಳೆ ಎಲ್ಲೋ
ಮನೆಗೆ ಅಪ್ಪನ ಹೆಸರನೇ ಇಡಬೇಕೆಂದು;
ಅವಳು ನೆಡುವ ಕನಸುಗಳೇ ಹೀಗೆ
ಮುಳ್ಳಿರದ ಗುಲಾಬಿಗಳಂಥವು,
ಅರಳಿ ನಿಲ್ಲುತ್ತವೆ ಬೇಲಿಯ
ಒಳಗೂ ಹೊರಗೂ
ನಿರಾಮಯವಾಗಿ…





Wonderful poem
ಹಾಗೆ ಕುಳಿತು ಅಮ್ಮನ ಸೂಕ್ಷ್ಮವಾಗಿ ಗಮನಿಸಿ ಭಾವನೆಗಳ ಬುತ್ತಿ ಕವನದಲ್ಲಿ ಹಿಡಿದಿಟ್ಟೆಯಲ್ಲೆ ಮಗಳೆ!☺ ಸೂಪರ್
Speechless
ಅದ್ಬುತ,
Wow
ಅಮ್ಮನ ಮೌನವನ್ನು ಮಾತಾಗಿಸಿದ ಬಗೆ ಚೆನ್ನಾಗಿದೆ.ಕವಿತೆಯ ರೂಪಕ ಶಕ್ತಿ ಗಮನ ಸೆಳೆಯುತ್ತದೆ.ಗಿಲಾಯ,ಕೊಳಗಾಹಿ,ತೌಲಿಕ -ಇವೆಲ್ಲ ನನಗೆ ಅಪರಿಚಿತ ಶಬ್ದಗಳು.ಆದರೂ ಕವಿತೆಯ ಭಾವ ಆಳವಾಗಿ ಮನಮುಟ್ಟುತ್ತದೆ.
Very nice
chennagide