ಸಂಗಂ ಸಾಹಿತ್ಯದ ಅಕಮ್ ಕವಿತೆಗಳು
ಆರ್ ವಿಜಯರಾಘವನ್
ಪ್ರಾಚೀನ ತಮಿಳು ಸಂಗಂ ಕಾವ್ಯವನ್ನು ಅಕಮ್ ಮತ್ತು ಪುರಮ್ ಎಂದು ವಿಂಗಡಿಸಲಾಗಿದೆ.
ಅಕಮ್ ಪ್ರೇಮ ಕಾವ್ಯ. ಪುರಂ ಕಾವ್ಯದ ಅಡಿ ಉಳಿದೆಲ್ಲವೂ ಸೇರ್ಪಡೆಯಾಗಿವೆ.
ಇಲ್ಲಿ ಮೂರು ಅಕಮ್ ಕವಿತೆಗಳನ್ನು ಕೊಡಲಾಗಿದೆ.

ಕೊಟ್ಟ ಭಾಷೆ
ಅವನು ನಿನ್ನ ಹರಿವ ಕುರುಳ
ಪ್ರೀತಿಯಿಂದ ನೇವರಿಸಿದ, ನುಡಿದ
ಪ್ರಿಯಳೇ
ನೀನು ದೊಡ್ಡವಳಾದ ಮೇಲೆ
ನಮ್ಮ ಮನೆಗೆ ಭೂಷಣಳಾಗುವೆ
ಅವನು ಗಡ್ಡೆಗೆಣಸುಗಳು
ಅಗೆಯುವವನಿಗೆ ರತ್ನಗಳು
ದೊರೆಯುವ ಬೆಟ್ಟಗಳಿಂದ ಬಂದಿದ್ದ
ಗೆಳತೀ,
ಅವನೆಲ್ಲಿರುವನು ಈಗ ಎನ್ನವುದ
ನಾನರಿಯೆ, ಗೆಳತಿ
(ಬಾಲಕಿಯ ಗೆಳತಿ ಅವಳ ತಂದೆತಾಯಿಯರು ಹಾಗೇ ಕೇಳಿಸಿಕೊಳ್ಳುತ್ತಿರಲು ಹೇಳಿದ ಮಾತು)
ಕುರಿಂಜಿ – ಅನಾಮಿಕ

ಬೆಟ್ಟದ ನಾಡಿನ ಅಧಿಪತಿ
ಬೆಟ್ಟದ ಅತಿಶಯದ ಇಳಿಜಾರಿನಲ್ಲಿ
ಚಂಡೆದನಿಯಲ್ಲಿ
ಸುರಿವ ನೀರಝರಿ
ಇಳಿದು ಬೆಟ್ಟದಿರುಕುಗಳಲ್ಲಿ ಬೆಳೆದ
ಹಲಸಿನ ಮರಗಳೆಡೆಯಲ್ಲಿ
ಮಧುರ ಸಂಗೀತದುಲಿಯಂತೆ
ಹರಿವ ಜಲಪಾತವಿರುವ
ಬೆಟ್ಟದ ನಾಡಿನ ಅಧಿಪತಿಯೆ
ಕೇಳು
ನಿನ್ನ ಪ್ರಿಯತಮೆಯು
ನವೆದುಹೋಗುತ್ತಿದ್ದಾಳೆ
ಸಮುದ್ರದ ಚಿಪ್ಪುಗಳಿಂದ ಮಾಡಿದ
ಅವಳ ಕೈಬಳೆಗಳು ಕೃಶವಾಗುತ್ತಿರುವ
ಅವಳ ಕೈಗಳಿಂದ ಜಾರಿಬೀಳುತ್ತಿವೆ
ಅವನ್ನು ನೋಡುತ್ತ ಅವಳ ಕಣ್ಣುಗಳು
ತುಂಬಿಕೊಳ್ಳುತ್ತಲಿವೆ
ಅವಳು ನಿದ್ದೆಗೆಂದು ರೆಪ್ಪೆಗಳ ಮುಚ್ಚಿದ್ದೇ ಇಲ್ಲ
(ಗೆಳತಿ ಪ್ರಿಯಕರನಿಗೆ ಹೇಳಿದ್ದು)
ಕುರಿಂಜಿ – ಮದುರೈ ನಲ್ವೇಲಿ
ಕರುಂತೋಕ್ಕೈ ೩೬೫

ಕಾಗೆಗೊಂದು ಆಸೆಯ ಆಹ್ವಾನ
ಒಂದೂ ಕಲೆಯಿರದ
ರೆಕ್ಕೆಗಳ ಪುಟ್ಟ ಕಾಗೆಯೆ
ನಿನಗೂ ನಿನ್ನ ಪ್ರಿಯ ಸಂಗಾತಿಗೂ
ತಾಜಾ ಮಾಂಸ ಮತ್ತು ಮಾಂಸದ
ಕೊಬ್ಬನ್ನು ದಣಿವಷ್ಟು ನೀಡುತ್ತೇನೆ
ಬಂಗಾರದ ತಟ್ಟೆಯಲ್ಲಿಟ್ಟು
ಬಾ ಬಂದು ನಿನ್ನ
ಒಳ್ಳೆಯ ಶಕುನದ ಕೂಗ ಕೂಗು
ಆ ಭಲ್ಲೆಯ ಹಿಡಿದ ಯೋಧ – ಆ
ಬಿಸಿ ತಲೆಯ ಯುವಕನೊಂದಿಗೆ ಓಡಿಹೋದ
ಆ ನನ್ನ ಸುಂದರ ನೀಳಕೂದಲಿನ ಮಗಳು
ಮರಳಿ ಬರುವಂತೆ ಮನೆಗೆ
(ತಾಯಿ ಕಾಗೆಗೆ ಹೇಳಿದ ಮಾತು)
ಪಾಲೈ -ಓದಲಾಂತಾಯರ್, ಐನ್ಕುರುನೂರು
(ಅಗತ್ಯದ ಓದು: ಲವ್ ಸ್ಟಾಂಡ್ಸ್ ಅಲೋನ್ – ಅನುವಾದ ಎಂ ಎಲ್ ತಂಗಪ್ಪ, ಪೆಂಗ್ವಿನ್ ೨೦೧೦)






dhanyavaadagaLu vijaya sir..uttama anuvaada.
ಚೆನ್ನಾಗಿವೆ ಸರ್, ಅನುವಾದ ಮತ್ತು ಮೂಲಪದ್ಯಗಳೆರಡರ ಸವಿಗೂ ಶರಣು.