'ಎಂದೂ ಮುಗಿಯದ ಸಿನಿಮಾದ ಕಥೆ…' – ಸ್ವರ್ಣ

ಸ್ವರ್ಣ ಎನ್ ಪಿ

ಊರಿಗೆ ಬಂದ ನೆಂಟರನ್ನು ತಮ್ಮೂರಿನ ಥಿಯೇಟರುಗಳಿಗೆ ಕರೆದೊಯ್ದು ಸಿನೆಮಾ ತೋರಿಸುವುದು ಕೆಲ ದಶಕಗಳ ಮುಂಚಿನವರೆಗೂ ಅರಿಶಿನ ಕುಂಕುಮ ಕೊಡುವ ರಿವಾಜಿನಷ್ಟೇ ಪ್ರಮುಖ ಪಧ್ಧತಿಯಾಗಿತ್ತು . ಫಸ್ಟ್ ಶೋ ಎಂದು ಕರೆಯಲ್ಪಡುತ್ತಿದ್ದ ಸಂಜೆಯ ಶೋಗೆ ಮಧ್ಯಾಹ್ನ ಬೇಗ ಊಟ ಮುಗಿಸಿ , ಮುಸುರೆ ತೊಳೆದು , ಚಿಲ್ಟಾರಿಗಳಿಗೆಂದು ಒಂದಷ್ಟು ಕುರುಕುಲನ್ನು ಬ್ಯಾಗಿಗೆ ತುಂಬಿಸಿ, ಸಕುಟುಂಬ ಸಪರಿವಾರ ಸಮೇತ ಅಥವಾ ಬರೀ ಹೆಂಗಸರ ಗುಂಪು ಬಹು ಬಾರಿ ನಡೆದೇ ಥಿಯೇಟರಿನವರೆಗಿನ ದೂರವನ್ನು ಕ್ರಮಿಸುತ್ತಿತ್ತು . ಇದು ಬಹುಪಾಲು ಮಧ್ಯಮ ವರ್ಗದ ಮನೆಗಳಲ್ಲಿ ಬೇಸಿಗೆ ರಜೆಯಲ್ಲಿ ಖಾಯಂ ಕಂಡು ಬರುತ್ತಿದ್ದ ಸೀನು.
ಇನ್ನು ಆ ಸಿನೆಮಾ ಮಂದಿರ (ಅಲ್ಲೂ ದೇವರಿದ್ದಾರೆ, ಕ್ಷೀರಾಭಿಷೇಕ ನಡೆಯುತ್ತೆ , ಹೂವಿನ ಅಲಂಕಾರವಾಗುತ್ತೆ ಕೆಲ ಬಾರಿ ಪ್ರಸಾದ ವಿತರಣೆಯಾಗಿದ್ದೂ ಉಂಟು ಹಾಗಾಗಿ ಅದು ಸಾಕ್ಷಾತ್ ಮಂದಿರವೇ !) ತಲುಪಿ ಬಡಿದಾಡಿ ಟಿಕೆಟ್ ಗಿಟ್ಟಿಸಿದ ಮೇಲೆ ಟಿಕೆಟ್ ಚೆಕ್ ಮಾಡೋನ ಹತ್ತಿರ ಇರುತ್ತಿದ್ದ ಸಾಮಾನ್ಯ ಜಗಳ, ನಾಲ್ಕು ಮಕ್ಕಳಿದ್ದರೆ ಎರಡಕ್ಕೋ ಅಬ್ಬಬ್ಬಾ ಅಂದ್ರೆ ಮೂರಕ್ಕೋ ಟಿಕೆಟ್ ತೆಗೆದು ಮಿಕ್ಕವು ಸಣ್ಣವು ಅವ್ವನ್ನು ಹಾಗೇ ಬಿಡು ಕಾಲ ಮೇಲೆ ಕೂತು ಸಿನೆಮಾ ನೋಡ್ತವೆ ಎಂಬುದು ಅಮ್ಮಂದಿರ ಥಿಯರಿ . ಟಿಕೆಟಪ್ಪನೂ ಕಡಿಮೆ ಇರಲಿಲ್ಲ “ಇನ್ನೊಂದ್ ನಾಲ್ಕ್ ವರ್ಷ ಹೋದ್ರೆ ಮದುವಿ ಮಾಡ್ತಿ ಸಣ್ಣಾವ ಅಂತಿಯಲವ್ವ ” ಅಂತ ಸಿನೆಮಾ ಡೈಲಾಗ್ ಹೊಡೆಯೋನು. ಜಗಳ ಮುಗಿದು ಮಕ್ಕಳನ್ನು ಸಂಭಾಳಿಸಿ ತವರು , ತಾಳಿ , ಮುತ್ತೈದೆಯೋ, ಗಾಳಿ , ಗಂಡು , ಗಜವೋ … ಸಿನೆಮಾಗಳನ್ನು ನೋಡಿ , ಅಗತ್ಯಬಿದ್ದಲ್ಲಿ ಒಂದಷ್ಟು ಕಣ್ಣೀರು ಸುರಿಸಿ , ಮಧ್ಯಂತರದಲ್ಲಿ ಮನೆಯ ತಿಂಡಿ ಬೇಡವೆಂದು ರಗಳೆ ತೆಗೆದ ಮಕ್ಕಳಿಗೆ ಥಿಯೇಟರ್ನಲ್ಲೆ ಬಾರಿಸಿ , ಕೊನೆಗೊಮ್ಮೆ ‘ಶುಭಂ’ ಬೋರ್ಡು ಕಾಣಿಸಿದಾಗ ವಿಜಯಶಾಲಿ ಹೆಂಗಸರು ರಾತ್ರಿ ಊಟದ ಹೊತ್ತಿಗೆ ಮತ್ತೆ ನಡೆದು ಮನೆ ಸೇರುತ್ತಿದ್ದರು .

ಹೀಗೆ ನಡೆದು , ಜಗಳಾಡಿ, ಮಂದಿರಗಳಂತ ಥಿಯೇಟರ್ ಗಳನ್ನು ಕಂಡ ಕೊನೆಯ ಪೀಳಿಗೆ ನಮ್ಮದು. ಈಗೇನಿದ್ದರೂ ಬುಕ್ ಮಾಡಿ ಅಲ್ಲಿ ಹೋಗಿ ಟಿಕೆಟ್ ತೊಗೊಳೋದು. ಮನೆಯ ಕುರುಕುಲು ಥಿಯೇಟರ್ ನವನಿಗೂ ಬೇಡ ಮಕ್ಕಳಿಗೂ ಬೇಡ ! ‘೨೦೦ ರೂಪಾಯಿ ಕೊಟ್ಟು ಜೋಳದರಳು ತಿನ್ನೋದಾ?’ ಅಂದ್ರೆ ಹೌದು ಅಂತಾರೆ ಮತ್ತು ತಂದೆ ತಾಯಿ ಕೂಡ ಅದನ್ನು ಕೊಳ್ಳುತ್ತೇವೆ . ಕಾಲಾಯ ತಸ್ಮೈ ..! ಇರಲಿ ಇದು ಹೊಸತು ಹಳತರ ನಡುವೆ ಕೊಂಡಿಯಾಗಿರುವ ನಮ್ಮಂಥವರ ಪಾಡು. ಆದರೆ ಇಲ್ಲಿ ನಾ ಹೇಳ ಹೊರಟಿದ್ದು ಇದನ್ನಲ್ಲ. ಕೆಲವು ಸಿನೆಮಾಗಳ ಬಗ್ಗೆ . ಇವು ಹಿಟ್ ಸಿನೆಮಾಗಳಾಗಿರಬಹುದು ಅಥವಾ ಅಂತಾ ಕಾಸು ಕಂಡಿರದ ಸಿನೆಮಾಗಳು ಆಗಿರಬಹುದುದು . ಆದರೆ ಇಂದಿಗೂ ಇವು ಟಿ.ವಿ.ಯಲ್ಲಿ ಬರುತ್ತಾ ಇದ್ದರೆ ಸ್ವಲ್ಪ ಹೊತ್ತು ಇವನ್ನು ನೋಡುತ್ತೇವೆ. ಇಲ್ಲಿರುವುದು ಅಂಥಾ ಕೆಲ ಸಿನೆಮಾಗಳ ನನ್ನ ಪಟ್ಟಿ.
ಪೌರಾಣಿಕ ಮತ್ತು ಐತಿಹಾಸಿಕ ಸಿನೆಮಾಗಳೆಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಡಾಕ್ಟರ್ ರಾಜ್ಕುಮಾರ್. ನಮ್ಮೂರಲ್ಲಿ “ಏನ್ ಹೆಸರೇಳ್ತಿಯಲ್ಲ ಅಣ್ಣಾವ್ರು ಅನ್ನು ” ಎನ್ನುವಷ್ಟು ಮರ್ಯಾದೆ. ಮಯೂರ , ಬಭ್ರುವಾಹನ , ಭಕ್ತ ಪ್ರಹ್ಲಾದ, ಭಕ್ತ ಕುಂಬಾರ… ಇನ್ನೂ ಎಷ್ಟೋ ಸಿನೆಮಾಗಳು ಈಗ ಬಂದರೂ ಒಂದರ್ಧ ಗಂಟೆಯಾದರೂ ರಿಮೋಟ್ ಒತ್ತದಂತೆ ತಡೆಯುತ್ತವೆ .

ಟಿ.ವಿ. ಇಲ್ಲದ ಕಾಲದಲ್ಲಿ ತೆರಿಗೆ ವಿನಾಯಿತಿ ಇದ್ದರೆ ಬಯಲುಸೀಮೆ ಜನ ತೆಲುಗು ಸಿನೆಮಾನೂ ನೋಡ್ತಿದ್ವಿ . ಹಾಗೆ ನೋಡಿದ ಚಿತ್ರ ಲವಕುಶ . ಬಹುಶಃ ನಾನು ನೋಡಿದ ಏನ್.ಟಿ.ಆರ್. ಅಭಿನಯದ ಏಕೈಕ ಚಿತ್ರ. ಹೆಸರೇ ಹೇಳುವಂತೆ ಇದು ರಾಮ ಪುತ್ರರಾದ ಲವ ಕುಶರ ಕಥೆ ,ಸೀತಾರಾಮರ ದಾಂಪತ್ಯ ಪ್ರೇಮದ ಕಥೆಯೂ ಕೂಡ. ಈ ಸಿನೆಮಾದಲ್ಲೊಂದು ಚಂದದ ದೃಶ್ಯ ಇದೆ : ರಾಮ ಅಶ್ವಮೇಧ ಮಾಡುತ್ತಿದ್ದಾನೆ ಎಂಬ ವಿಷಯ ವಾಲ್ಮೀಕಿ ಆಶ್ರಮದಲ್ಲಿನ ಸೀತೆಗೆ ತಿಳಿದಿದೆ. ಪತ್ನಿ ಇಲ್ಲದೇ ಯಜ್ಞವಿಲ್ಲ ಎಂಬ ಶಾಸ್ತ್ರವೂ ವೈದೇಹಿಗೆ ಗೊತ್ತು. ಹಾಗಾದರೆ ರಾಮ ಮತ್ತೆ ಮದುವೆಯಾದನೆ ? ಪ್ರಶ್ನೆಯಲ್ಲಿ ಬೆಂದು ಚಡಪಡಿಸುತ್ತಾಳೆ ಜಾನಕಿ. ನೆರವಿಗೆ ಬಂದ ವಾಲ್ಮೀಕಿ ಮಹರ್ಷಿಗಳು ಆಕೆಯನ್ನು ಯೋಗ ಮಾರ್ಗದಲ್ಲಿ ಅಯೋಧ್ಯೆಗೆ ಕಳಿಸುತ್ತಾರೆ. ಅಲ್ಲಿ ಸೀತೆ ಕಾಣುವುದೇನು ? ಯಾಗ ಶಾಲೆಯಲ್ಲಿ ಸೀತೆಯ ಸುಂದರ ಸುವರ್ಣ ಪುತ್ಥಳಿ ಇದೆ. ಅದರ ಮಡಿಲಲ್ಲಿ ತಲೆ ಇಟ್ಟು ಗೋಳಿಡುತ್ತಿದ್ದಾನೆ ಸೀತಾರಾಮ. ಪುತ್ಥಳಿಗೆ ತಿಲಕ ತಿದ್ದಿ , ಪತಿಯ ನೆತ್ತಿ ನೇವರಿಸಿ ಹೊರಟು ಹೋಗುತ್ತಾಳೆ ಮೈಥಿಲಿ. ಸ್ಪರ್ಶಕ್ಕೆ ಎಚ್ಚರಗೊಂಡ ರಾಜರಾಮ ಮತ್ತೆ ಅಳುತ್ತಾನೆ , ಬೊಂಬೆಗೆ ಪತ್ನಿ ತಿದ್ದಿದ ತಿಲಕಕಂಡು ಪುಳಕಿತನಾಗಿ ಮತ್ತೆ ಅಳುತ್ತಾನೆ . ಹೆಂಡತಿ ತಿದ್ದುವ ತಿಲಕದ ಶೈಲಿಯೂ ಗಂಡನಿಗೆ ತಿಳಿದಿರುವುದು ಎಷ್ಟು ರೋಮ್ಯಾಂಟಿಕ್ ! ಈ ಸಿನೆಮಾದಲ್ಲಿನ ಅಂಜಲಿ ದೇವಿಯವರ ನಟನೆಯೂ ಸೊಗಸಾಗಿದೆ.
ಇನ್ನು ಎರಡನೆಯ ರೀತಿಯ ಸಿನೆಮಾಗಳಲ್ಲಿ ಆಡಂಬರವಿಲ್ಲ. ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ..’ ಎನ್ನುವ ಅಬ್ಬರವಿಲ್ಲ. ಯಾವುದೋ ತಂತಿಯನ್ನು ಮೀಟಿ ನಾದ ಹೊಮ್ಮಿಸುವ ಚಿತ್ರಗಳು . ಹಾಲು ಜೇನು , ಹೊಸಬೆಳಕು , ಕಾಮನಬಿಲ್ಲು , ಬಂಗಾರದ ಮನುಷ್ಯ , ಮುದುಡಿದ ತಾವರೆ ಅರಳಿತು, ಇಬ್ಬನಿ ಕರಗಿತು , ಬಾಡದ ಹೂ, ನೋಡಿ ಸ್ವಾಮಿ ನಾವಿರೋದೆ ಹೀಗೆ …ಮನಸಿರುವ ತನಕ , ಕನಸಿರುವ ತನಕ ಈ ಲಿಸ್ಟ್ ಬೆಳೆಯುತ್ತಲೇ ಇರುತ್ತದೆ. ಹಾಲು ಜೇನು , ಬಂಗಾರದ ಮನುಷ್ಯ ನೋಡುವಾಗಲೆಲ್ಲ ಈ ಪಾತ್ರ ರಾಜ್ಕುಮಾರ್ ಬಿಟ್ಟು ಬೇರೆಯವರು ಮಾಡಿದ್ದರೆ ಹೀಗಿರುತ್ತಿತ್ತಾ ? ಎಂಬ ಪ್ರಶ್ನೆ ಎದಿರಾಗಿದೆ. ನನ್ನಮಟ್ಟಿಗೆ ಈ ಪಟ್ಟಿಗೆ ಸೇರಲೇ ಬೇಕಾದ ಎರಡು ಸಿನೆಮಾಗಳು ವಿ. ಮನೋಹರ್ ಅವರ ಓ ಮಲ್ಲಿಗೆ ಮತ್ತು ಮದುವೆ. ಇವೆರಡು ಎಷ್ಟು ಕಾಸು ಕಂಡವೋ ಗೊತ್ತಿಲ್ಲ ಆದರೆ ತೆಲುಗಿಗೂ ಹೋಗಿ ಅಲ್ಲಿ ಹಿಟ್ ಎನಿಸಿಕೊಂಡವು . ಓ ಮಲ್ಲಿಗೆಯ ಸಂಗೀತ ಸಾಹಿತ್ಯ ಇಂದಿಗೂ ಕೇಳಿಸಿಕೊಳ್ಳುತ್ತದೆ . ಹೃಷಿಕೇಶ್ ಮುಖರ್ಜಿಯವರ ಆನಂದ್ , ಅಭಿಮಾನ್ ಕೂಡ ಇಂಥಹುದೇ ಸಿನೆಮಾಗಳು . ತೆಲುಗಿನ ಕೆ.ವಿಶ್ವನಾಥ್ ನಿರ್ದೇಶನದ ಸಿನೆಮಾಗಳು ಕೂಡ ಇಂತಹುದೇ ಸಿನೆಮಾಗಳೆಂಬುವುದು ನನ್ನ ಅಂದಾಜು . ಶಂಕರಾ ಭರಣಂ, ಸ್ವಾತಿ ಮುತ್ಯಂ , ಸ್ವರ್ಣ ಕಮಲಂ … ತಮಿಳಿನ ಕೆ. ಬಾಲಚಂದರ್ , ಮಣಿರತ್ನಂ ಚಿತ್ರಗಳು …. ಬೇಜಾರಾದಾಗಲೆಲ್ಲಾ ಇವುಗಳಲ್ಲೊಂದು ಸಿನೆಮಾ ನೋಡುವವರಿದ್ದಾರೆ . ಈ ಚಿತ್ರಗಳಲ್ಲಿ ಅಲ್ಲಲ್ಲಿ ಮೆಲೋಡ್ರಾಮವಿದೆ ,ಕಣ್ಣೀರಿದೆ , ಹಾಸ್ಯವಿದೆ , ಸಂಗೀತ ಸಾಹಿತ್ಯ ಇಂದಿಗೂ ಜನರ ನೆನಪಿನಲ್ಲಿದೆ.
ಮತ್ತೂ ಒಂದು ರೀತಿಯ ಸಿನೆಮಾಗಳೂ ಪಟ್ಟಿಯಲ್ಲಿವೆ ಅಲ್ಲಿ ಹಿಂದಿನ ಸಿನೆಮಾಗಳಲ್ಲಿದ್ದಷ್ಟು ಮೇಲೋಡ್ರಾಮ ಇಲ್ಲ ನವಿರಾದ ಹಾಸ್ಯವಿದೆ . ಗಣೇಶನ ಮದುವೆ , ಯಾರಿಗೂ ಹೇಳ್ಬೇಡಿ , ಹೆಂಡ್ತಿಗೆಳ್ಬೇಡಿ…. ಯಾರಿಗೂ ಹೇಳ್ಬೇಡಿಯ ‘ಚೆನ್ನಾಗ್ ಹೇಳಿದ್ರಿ ‘ ಅನ್ನೋದು ಇಂದಿಗೂ ಫೇಮಸ್ ಡೈಲಾಗ್ . ಅನಂತ್ ನಾಗ್ ಮತ್ತು ಫಣಿರಾಮಚಂದ್ರ ಅವರು ಗಣೇಶ ಸೀರಿಸ್ ನಲ್ಲಿ ಮಾಡಿದ ಮೋಡಿದ್ದರು. ಈ ಚಿತ್ರಗಳು ಸಾಮಾನ್ಯವಾಗಿ ಎಲ್ಲ ಚಿತ್ರಪ್ರೇಮಿಗಳ ಮೆಚ್ಚಿನ ಚಿತ್ರಗಳಲ್ಲೊಂದಾಗಿರುತ್ತವೆ . ಇವು ಕನ್ನಡದ ಚಿತ್ರಗಳಾದರೆ ಹಿಂದಿಯ ಹೃಷಿಕೇಶ್ ಮುಖರ್ಜಿಯವರ ಎಷ್ಟೋ ಚಿತ್ರಗಳು ಈ ಸಾಲಿಗೆ ಬರುತ್ತವೆ . ಬಾವರ್ಚಿ , ಚುಪ್ಕೆ ಚುಪ್ಕೆ ಅದರಲ್ಲಿ ಕೆಲವು.
ಮೊನ್ನೆ ಕನ್ನಡಾಭಿಮಾನಿ ಗೆಳೆಯರೊಬ್ಬರು ಇತ್ತೀಚಿನ ಸಿನೆಮಾವೊಂದಕ್ಕೆ ಹೋಗಿ ಬಂದು “ಆ ಬೇಜಾರಿಂದ ಹೊರಬರೋಕೆ ಅಣ್ಣಾವ್ರ ಸಿನೆಮಾ ನೋಡಿದೆ ” ಅಂದ್ರು. ಹಾಗಂತ ಇಂದಿನ ಎಲ್ಲಾ ಸಿನೆಮಾಗಳು ಕೆಟ್ಟವು ಎಂಬ ಅಭಿಪ್ರಾಯ ನನ್ನದಲ್ಲ . ಬಹುಶಃ ವಯಸಿನ ಒಂದು ಹಂತದಲ್ಲಿ ಬಂದ ಸಿನೆಮಾಗಳು ನಮಗೆ ಎಂದಿಗೂ ಹೆಚ್ಚು ಆಪ್ತವಾಗುತ್ತವೆ . ಎಂದೂ ಮುಗಿಯದ ಸಿನೆಮಾ ಪಟ್ಟಿಗೆ ಇದು ಖಂಡಿತಾ ಕೊನೆಯಲ್ಲ.
 

‍ಲೇಖಕರು G

July 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Narendra

    Recent kannada filmgala bagge swalpa appreciate maadi mddam! namma hale mindset na swalpa hosa gaalige odduvudu kooda mukhya!

    ಪ್ರತಿಕ್ರಿಯೆ
  2. Jayaram

    ರಾಜಕುಮಾರ್ ಅನಂತನಾಗ್ ರಮೇಶ್ ಹೀಗೆ ಕೆಲವರು ಸೀರಿಯಸ್ ಪಾತ್ರದಷ್ಟೇ ಹಾಸ್ಯದಲ್ಲೂ ರೈಸುತ್ತಿದ್ದರು. ಈಗಿನ ಹಾಸ್ಯ ನೋಡೋಕ್ಕಾಗಲ್ಲ.
    ಒಳ್ಳೆಯ ಬರಹ..ಥ್ಯಾಂಕ್ಸ್.

    ಪ್ರತಿಕ್ರಿಯೆ
  3. bhuvaneshwari h.c

    ನವಿರಾದ ನಿರೂಪಣೆ,ಮನಮುಟ್ಟುವ ಬರಹ, ಪ್ರಾಮಾಣಿಕ ಅನಿಸಿಕೆ…ತುಂಬಾ ಇಷ್ಟವಾಯ್ತು ಸ್ವರ್ಣ.
    `ಮಧ್ಯಮ ವರ್ಗದವರ ತಾಜಾ ತಾಜಾ ಅನುಭವ ಅಂದಿನ ಸಿನಿಪಯಣ’ ಎಂದರೆ ಖಂಡಿತ ತಪ್ಪಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: