ಅವಳಿನ್ನೂ…
ಮಾಲತಿ ಗೋರೆಬೈಲ್
ಅವಳಿನ್ನೂ ಮೀಯುತ್ತಲೇ ಇದ್ದಾಳೆ
ಉಡಿಯೊಳಗೆ ಒತ್ತಿಕೊಂಡು
ಮುದ್ದಿಡುವ ಹಂಬಲಕ್ಕೆ ಕಟಿಬಿದ್ದು
ಹಲುಬುವಿಕೆ ಹೆಚ್ಚಾಗಿದೆ….
ಝಗಮಗಿಸುವ ಸೌಂದರ್ಯದಲ್ಲಿ
ಸತ್ತುಬಿದ್ದಿರುವ ಕಳೆಯ
ಹುಡುಕಾಟಕ್ಕಾಗಿ ವಿಪರೀತ ಬಡಬಡಿಕೆ
ತಿಂಗಳ ಸ್ರಾವದ ನೋವಿಗೂ
ಹುಚ್ಚು ಭ್ರಮೆ,
ಅಂಡ ಪಿಂಡವಾಗುವ ಮುಹೂರ್ತಕ್ಕಾಗಿ
ಕಾಣದ ದೇವರಿಗೂ ಹರಕೆ, ಬಲಿ

ಉಸಿರುಗರೆಯದ ಬಸಿರಿನ ಸುತ್ತ
ಪ್ರಶ್ನೆಗಳ ಕರಾಳ ಪ್ರವಾಹ
ಒಡಲ ಉರಿಗೆ ಯಾವ ಮದ್ದೂ ತಾಕುತ್ತಿಲ್ಲ
ಹಾದಿ ಡೊಂಕಾಗಿದ್ದವರಿಗೂ
ನೆಟ್ಟಗಾಗುವ ಎಲ್ಲವೂ
ಅವಳ ಗಟ್ಟಿತನಕ್ಕೆ ಸವಾಲು ಹಾಕಿವೆ
ಮಹಡಿ-ಮನೆ ಸುಖ ಸಂತೃಪ್ತಿ
ಕಣ್ಣಮುಂದೆ ಕತ್ತಲ ಗೋರಿ
ಇರಲಿ,
ಜಗ್ಗುವಿಕೆಗೇ ಬಿಲ್ಲು ಈಡು ಹಾಯುತ್ತದೆ
ಸಾವರಿಸಿಕೊಳ್ಳುತ್ತಿದ್ದಾಳೆ
ಅದೆಂತಹುದೋ ಮಂತ್ರಗಾಳಿ ಸೋಕಿ
ಉದರ ನಕ್ಕೀತೆಂದು
ಮತ್ತೆ ಮುಟ್ಟಾಗುತ್ತಲೇ ಇದ್ದಾಳೆ
ಅವಳಿನ್ನೂ ಮೀಯುತ್ತಲೇ ಇದ್ದಾಳೆ..
ನಿಮಗೆ ಇವೂ ಇಷ್ಟವಾಗಬಹುದು…





0 Comments