Mr ಅಕ್ಷಯ್.. ಹೆಂಡತಿಯ ಜೊತೆ ಏಕಿಲ್ಲ ಎಂದು ಕೇಳಬಾರದಿತ್ತೆ ?!

ಹೆಂಡತಿಯನ್ನು ಜೊತೆಗಿಟ್ಟುಕೊಳ್ಳಲಿಲ್ಲ ಏಕೆ ಎಂದು ಕೇಳಬಾರದಿತ್ತೆ ಅಕ್ಷಯ್ ?!

ಮಿ.ಮೋದಿ ನೀವಿನ್ನೂ ದೇಶದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ!

ಬಾಲಿವುಡ್‌ನ ಖ್ಯಾತ ನಟ ಅಕ್ಷಯ್‌ಕುಮಾರ್ ಸುಮಾರು ಒಂದೂವರೆ ತಾಸಿಗೂ ಹೆಚ್ಚಿನ ಕಾಲ ದೇಶದ ಪ್ರಧಾನಿ ನರೇಂದ್ರಮೋದಿ ಅವರನ್ನು ಸಂದರ್ಶನ ನಡೆಸಿದ್ದನ್ನು ನೋಡಿದೆ.

ಅದು ರೆಕಾರ್ಡೆಡ್ ಅಗಿದ್ದರಿಂದ ಎಡಿಟ್ ಮಾಡಲಾದ, ಅಗತ್ಯ,ಅನಗತ್ಯ ಸಂಗತಿಗಳನ್ನು ಜೋಡಿಸಿದ, ಕತ್ತರಿಸಿದ ಸಿದ್ದಮಾದರಿ ಸಂದರ್ಶನ ಇದಾಗಿತ್ತು ಎಂಬುದನ್ನು ಪತ್ರಕರ್ತನಾದ ನನಗೆ ತಿಳಿಯಲು ಕಷ್ಟವೇನಾಗಲಿಲ್ಲ. ಕಳೆದ 5 ವರ್ಷಗಳ ಕಾಲ ಪತ್ರಕರ್ತರನ್ನು ಎದುರುಗೊಳ್ಳದ ಪ್ರಧಾನಿಗಳು ಸಲೀಸಾಗಿ ನಟ ಅಕ್ಷಯ್‌ಕುಮಾರ್ ಜೊತೆ ಹಸಿರು ಹುಲ್ಲು ಹಾಸಿನ ಮೇಲೆ ನಿರರ್ಗಳ ಮಾತುಗಳನ್ನಾಡುತ್ತಾ ನಡೆದಾಡಿದ್ದರು.

ಪ್ರಧಾನಿಯಾಗಿ ಐದು ವರ್ಷಗಳ ಕಾಲ ಪತ್ರಿಕಾ ಸಂದರ್ಶನಗಳನ್ನು ಕೊಡದೆ. ಪತ್ರಕರ್ತರನ್ನು ಮುಖಾ-ಮುಖಿಯಾಗದೆ , ಸಾಂಪ್ರದಾಯಿಕ ಪತ್ರಿಕಾಗೋಷ್ಟಿಗಳನ್ನು ನಡೆಸದೆ ಅಂತರ ಕಾಯ್ದುಕೊಂಡಿದ್ದ ಪ್ರಧಾನಿಗಳು ತಮ್ಮ ಐದು ವರ್ಷದ ಅಧಿಕಾರವಧಿ ಮುಗಿಯಲು ಇನ್ನೇನು ೨೮ ದಿನಗಳಿರುವಾಗ ನಟನೊಬ್ಬನಿಗೆ ಸುರ್ದೀರ್ಘ ಸಂದರ್ಶನವನ್ನು ನೀಡಿದ್ದು ನನಗೆ ಸಮಾಧಾನವಾದರೂ ಈ ಸಂದರ್ಶನ ರಾಜಕೀಯೇತರವಾಗಿ ಕೇವಲ ಖಾಸಗಿ ಸಂಗತಿಗಳಿಗೆ ಸೀಮಿತವಾಗಿ ನಡೆದದ್ದು ನಿರಾಶೆಯನ್ನೂ ತಂದಿತ್ತು.

ನನ್ನ ಪ್ರಧಾನಿ ಇಂದಾದರೂ ಮಾತನಾಡುತ್ತಾರೆ. ಕೊಟ್ಟು ಮಾತು, ಈಡೇರಿದ ಭರವಸೆ, ಮಾಡಿದ ಜನಪರ ಕಾರ್ಯಗಳನ್ನು ದಾರ್ಷ್ಟ್ಯದಿಂದ ಜನರ ಮುಂದಿಡುತ್ತಾರೆ. ರಾಜಕೀಯ ಎದುರಾಳಿಗಳನ್ನು ತಮ್ಮ ಕೆಲಸ , ಸಾಧನೆಗಳಿಂದಲೆ ಕಟ್ಟಹಾಕುತ್ತಾರೆ ಎಂಬ ನಿರೀಕ್ಷೆ ಕೊನೆಗೂ ನಿರಾಶೆಯೊಂದಿಗೆ ಪರ್ಯಾವಸನಗೊಂಡಿತು.

ಇದನ್ನೊಂದು ಸಂದರ್ಶನ ಎನ್ನಬೇಕೇ ಅಥವಾ ಓರ್ವ ಖ್ಯಾತ ನಟನ ಜೊತೆ ಪ್ರಧಾನಿಗಳು ನಡೆಸಿದ ಲೋಕಾಭಿರಾಮ ಮಾತುಕತೆ ಎನ್ನಬಹುದೇ? , ಅಕ್ಷಯ್ ಪತ್ರಕರ್ತನಲ್ಲ, ಆತನೊಬ್ಬ ನಟ. ಪತ್ರಕರ್ತನಿಗೂ ನಟನಿಗೂ ಬಹಳಷ್ಟು ವ್ಯತ್ಯಾಸವಿರುತ್ತದೆ. ಒಂದು ದೇಶದ ಪ್ರಧಾನಿ ನಟನಿಗೆ ಸಂದರ್ಶನ ಕೊಡುವುದಕ್ಕೂ ಓರ್ವ ವೃತ್ತಿಪರ ಪತ್ರಕರ್ತನಿಗೆ ಸಂದರ್ಶನ ಕೊಡುವುದಕ್ಕೂ ಬಹಳಷ್ಟು ವ್ಯತ್ಯಾಸವಿರುತ್ತದೆ. ಇಡೀ ಸಂದರ್ಶನವನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ ನನಗೆ ಅಲ್ಲಿ ಓರ್ವ ವೃತ್ತಿಪರ ಪತ್ರಕರ್ತನಾಗಲಿ, ಜವಾಬ್ದಾರಿ ಸ್ಥಾನದಲ್ಲಿದ್ದ ಈ ದೇಶದ ಪ್ರಧಾನಿಯಾಗಲಿ ಕಾಣಸಿಗಲಿಲ್ಲ.

ಹಿಂದುಳಿದ ವರ್ಗದ ಸಾಮಾನ್ಯ ಕುಟುಂಬದಿಂದ ಬಂದ ಮೋದಿ ಪ್ರಧಾನಿ ಪಟ್ಟದವರೆಗು ಸವೆಸಿದ ಹಾದಿ ಸುಲಭದ್ದಲ್ಲ. ಈ ದೇಶದ ಜಾತಿ ಸಂರಚನೆಯಲ್ಲಿ ಹಿಂದುಳಿದ ವರ್ಗದ ನರೇಂದ್ರ ಮೋದಿ ಅವರು ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಗೆ ಏರಿದ್ದು ಪ್ರಜಾಪ್ರಭುತ್ವದ ಕೊಡುಗೆ. ಇಂತಹ ಮೋದಿಯ ಜೀವನ ಚಿತ್ರಣವನ್ನು ಈ ದೇಶ ಪರಿಚಯ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಮೋದಿಯ ಬದುಕು , ಯಾತ್ರೆ, ರಾಜಕೀಯ ಈಗಾಗಲೆ ದೇಶಕ್ಕೆ ಪರಿಚಿತಗೊಂಡು ಒಂದೂವರೆ ದಶಕಗಳೇ ಕಳೆದಿವೆ. ಅಗೋಚರ ನರೇಂದ್ರ ಮೋದಿ ಗುಜರಾತ್ ನ ಮುಖ್ಯಮಂತ್ರಿಯಾದ ಬೆನ್ನೆಲ್ಲೆ ಅವರ ಮುಖ, ಮನಸ್ಸು ಎಲ್ಲವೂ ದೇಶಕ್ಕಷ್ಟೆ ಅಲ್ಲ ಇಡೀ ಜಗತ್ತಿಗೆ ಗೊತ್ತಾಗಿ ಹೋಗಲು ಹೆಚ್ಚು ದಿನ ಬೇಕಾಗಿರಲಿಲ್ಲ.

ಸ್ವತಂತ್ರ ಭಾರತದಲ್ಲಿ ಮನುಷ್ಯರ ರಕ್ತ ತರ್ಪಣಗೈದೆ ಅಧಿಕಾರ ರಾಜಕಾರಣದ ಚರಿತ್ರೆ ಮೈದಳೆದ್ದು ನರೇಂದ್ರ ಮೋದಿ ಅವರ ಕಾಲಘಟ್ಟದ ದಾಖಲೆ ಎಂಬುದನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ತನ್ನ ಕೋಟ್ ಗೆ ಚಿನ್ನದ ನೂಲು ಹೆಣೆದು ಕೊಂಡಾಗಲೆ ಅವರ ಅಭಿರುಚಿ ಪರಿಚಯವಾಗಿದೆ. ಪತ್ರಕರ್ತರನ್ನು ದೂರವಿಟ್ಟು ಪ್ರಾಯೋಜಿತ ಪ್ರಚಾರದಲ್ಲಿ ಮುಳುಗುತ್ತಾ ಬಂದ ಮೋದಿ ಅವರ ಪರಿಚಯದಲ್ಲಿ ಹೊಸತೇನಿರಲು ಸಾಧ್ಯ?

2007 ಅವತ್ತಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಸಿಎನ್‌ಎನ್ -ಐಬಿಎನ್ ಗಾಗಿ ಖ್ಯಾತ ಪತ್ರಕರ್ತ ಕರಣ್‌ಥಾಪರ್ ಸಂದರ್ಶನ ನಡೆಸುವಾಗ ಗೋದ್ರಾಗಲಭೆಯ ಕುರಿತಾದ ಪ್ರಶ್ನೆಗಳಿಗೆ ಕನಲಿ ಹೋದ ಮೋದಿ ಅವರು ಸಂದರ್ಶನವನ್ನು ಅರ್ಧಕ್ಕೆ ನಿಲ್ಲಿಸಿ ವಾಕ್ ಔಟ್ ಮಾಡಿದರು. ಇದನ್ನು ಇಡೀ ಜಗತ್ತು ನೋಡಿತು. ಅದೇ ಮೋದಿ ದೇಶದ ಪ್ರಧಾನಿಯಾಗಿ ಐದು ವರ್ಷ ಕಳೆದಿದ್ದಾರೆ. ಈ ಅವಧಿಯಲ್ಲಿ ಅವರು ಸಾಂಪ್ರದಾಯಿಕ ಪತ್ರಿಕಾಗೋಷ್ಟಿಗಳನ್ನು ನಡೆಸಿದ . ಪತ್ರಕರ್ತರನ್ನು ಮುಖಾ-ಮುಖಿಯಾಗಿ ಜನರ ಪ್ರಶ್ನೆಗಳಿಗೆ ಉತ್ತರಿಸಿದ,ದೇಶದ ಸಮಸ್ಯೆಗಳನ್ನು ಅರಿತುಕೊಳ್ಳುವ ಸನ್ನಿವೇಶಗಳನ್ನು ಕಾಣಲು ಸಾಧ್ಯವಾಗಲಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾಧ್ಯಮಗಳು ಜನರ ಮತ್ತು ಸರ್ಕಾರದ ನಡುವಿನ ಸೇತುವೆ ಎಂಬ ಪರಿಕಲ್ಪನೆಯನ್ನೆ ಇಲ್ಲವಾಗಿಸಿದ ಮೋದಿ ಕೇವಲ ಮಾತನಾಡುತ್ತಾ ಹೋದರು. ಅಧಿಕಾರವಧಿ ಉದ್ದಕ್ಕೂ ಪ್ರಶ್ನೆಗಳನ್ನು ಕೇಳುವ , ಜನ ಮಾತನ್ನು ಆಲಿಸದೆ ಇರುವ ಪ್ರಜ್ಞಾಪೂರ್ವಕ ಗುಣವನ್ನು ಅಳವಡಿಸಿಕೊಂಡು ಬಂದರು.

ನಾನು ಅಮಿತಾಬ್ ಜೊತೆ ‘ಪಾ’ ಸಿನಿಮಾ ನೋಡಿದ್ದೆ, ಮಮತಾದೀದಿ ಕುರ್ತಾ ಕಳಿಸುತ್ತಾರೆ , ಬಾಂಗ್ಲಾದ ಪ್ರಧಾನಿ ಹಸೀನಾ ಅವರು ಬೆಂಗಾಲಿ ಸಿಹಿ ಕಳುಹಿಸುತ್ತಾರೆ ನನಗೆ, ಅಮ್ಮ ದುಡ್ಡು ಕೊಡುತ್ತಾರೆ. ನನಗೆ ಜ್ಯೊತಿಕಲಾಶ್ ಚಲ್ಕೆಯಂಥ ಹಳೆ ಹಾಡುಗಳು ಇಷ್ಟ..ದಿನಕ್ಕೆ ಮೂರು ಗಂಟೆ ನಿದ್ದೆ ಮಾಡುತ್ತೇನೆ, ಅರ್ಧತೋಳಿನ ಕುರ್ತಾ ಇಷ್ಟ …… ಸಂದರ್ಶನದುದ್ದಕ್ಕೂ ಮೋದಿ ಅವರ ಖಾಸಗಿ ಸಂಗತಿಗಳು ಹೊರ ಬೀಳುತ್ತಾ ಹೋಗುತ್ತವೆ. ಅಮ್ಮನನ್ನು ಯಾಕೆ ಜೊತೆಗಿಟ್ಟುಕೊಂಡಿಲ್ಲ ಎಂದು ಕೇಳುವ ಅಕ್ಷಯ್ ಅಪ್ಪಿತಪ್ಪಿಯೂ ಮೋದಿ ಅವರ ವೈವಾಹಿಕ ಬದುಕನ್ನು ಕೆದಕಲಾರರು. ಹೆಂಡತಿಯನ್ನು ಯಾಕೆ ಜೊತೆಗಿಟ್ಟುಕೊಂಡಿಲ್ಲ ಎಂದು ಒಂದು ಮಾತನ್ನು ಕೇಳಲಿಲ್ಲ.

ರಾಜಕೀಯವನ್ನು ಹೊರತುಪಡಿಸಿದ ಸಂಗತಿಗಳನ್ನು ಕೇಳುತ್ತೇನೆ-ಹೇಳುತ್ತೇನೆ ಎಂದು ಪರಸ್ಪರ ಒಡಂಬಡಿಕೆ ಮಾಡಿಕೊಳ್ಳುವ ಅಕ್ಷಯ್ ಮತ್ತು ಮೋದಿ ಅವರುಗಳು ಅಸಲಿ ಸಂದರ್ಶನವನ್ನು ಮರೆತ ಮಳ್ಳಾಟದಲ್ಲಿ ತೊಡಗುತ್ತಾರೆ. ಅಕ್ಷಯ್ ಕುಮಾರ್ ಗೆ ಅಮ್ಮನಂತೆ ಹೆಂಡತಿಯೂ ರಾಜಕೀಯೇತರ ವಿಷಯ ಎಂಬ ಪರಿಜ್ಞಾನ ಇಲ್ಲದೆ ಹೋದದ್ದು ಈ ಆಟಕ್ಕೆ ಸಾಕ್ಷಿ. ಅಥವಾ ಬೆಂಗಾಲಿ ಸ್ವೀಟ್ ಇಷ್ಟವಾಗುವಂತೆಯೂ, ಕುರ್ತಾ ತೊಡುವಷ್ಟು ಶಿಸ್ತಿನ ಸಂಗತಿಯಷ್ಟೇ ಮದುವೆ,. ಹೆಂಡತಿ ವಿಷಯಗಳು ಮುಖ್ಯವಾಗಿರುತ್ತವೆ. ಅದನ್ನು ಸಂದರ್ಶನಕಾರ ಕೇಳದಿದ್ದರೂ ತಾನು ಹೇಳಬೇಕು ಎಂದು ಮೋದಿಗಾದರು ಅನಿಸಲಿಲ್ಲ ಏಕೆ?

ಅಲ್ಲಾವುದ್ದೀನ್ ದೀಪವೊಂದು ಸಿಕ್ಕು ಅದರಲ್ಲಿ ಮಾಂತ್ರಿಕನೊಬ್ಬ ಬಂದು ವರ ಕೊಡಲು ಸಿದ್ದನಾದರೆ ಏನು ವರ ಕೇಳುತ್ತೀರ ಎಂದು ಅಕ್ಷಯ್ ಕೇಳುವ ಪ್ರಶ್ನೆಗೆ ಯಾರೋ ಮಾಯಾವಿ ಬರುತ್ತಾನೆ, ನಮ್ಮ ಬದುಕು ಬದಲಿಸುತ್ತಾನೆ ಎಂದು ನಾವು ಮಕ್ಕಳಿಗೆ ಕಲಿಸುವುದನ್ನು ನಿಲ್ಲಿಸಬೇಕು ಪರಿಶ್ರಮವೇ ಯಶಸ್ಸಿನ ದಾರಿ ಎನ್ನುವುದನ್ನು ಕಲಿಸಿಕೊಡಬೇಕು ಎಂದು ಉತ್ತರಿಸುವ ಮೋದಿಯೊಳಗೆ ವಿವೇಕವೊಂದು ಇಣುಕಿ ಹೋಗುತ್ತದೆ ನಿಜ, ಆದರೆ ಈ ದೇಶದ ಪ್ರಧಾನಿಗೆ ಇಂತಹದ್ದೊಂದು ಪ್ರಶ್ನೆ ಕೇಳುವಲ್ಲಿ ಅಕ್ಷಯ್ ಕುಮಾರನಲ್ಲಿ ಪರಮ ಅವಿವೇಕಿಯೊಬ್ಬನಿರುವುದು ಬಯಲಾಗಿ ಹೋಗುತ್ತದೆ.

ಒಂದು ಕೋಣೆಯಲ್ಲಿ ಇಬ್ಬರು ವ್ಯಕ್ತಿಗಳು ಕುಳಿತು ಖಾಸಗಿಯಾಗಿ ಹರಟಬಹುದಾದ ಸಂಗತಿಗಳನ್ನು ಆತ್ಮವಂಚನೆಯೊಂದಿಗೆ ಬಯಲಿನಲ್ಲಿ ನಿಂತು ಆಡಿಕೊಂಡಿದ್ದು, ಅದನ್ನು ದೇಶದ ಉನ್ನತವಿಚಾರಧಾರೆ ಎಂಬಂತೆ ನಮ್ಮ ಮಾಧ್ಯಮಗಳು ಪ್ರಸಾರ ಮಾಡಿದ್ದು, ನಮ್ಮ ದೇಶದ ಮಾಧ್ಯಮ ಘನತೆಯ ದಿವಾಳಿತನವನ್ನು ಸಾರುತ್ತದೆ. ಏಕೆಂದರೆ ಐದು ವರ್ಷ ಆಳಿದ ಪ್ರಧಾನಿ ತನ್ನ ಅವಧಿಯ ಕಾರ್ಯ. ಕ್ಷಮತೆ, ಸಾಧನೆಗಳನ್ನು ಜನರ ಮುಂದಿಡಬೇಕಿತ್ತು. ವಿಪಕ್ಷಗಳ ಟೀಕೆ ,ಟಿಪ್ಪಣಿಗಳಿಗೆ ಎದುರಾಗಿ ನಿಂತು ಮಾತಾಡಬೇಕಿತ್ತು. ಅದಾಗಲಿಲ್ಲ. ಇದನ್ನೆ ನಮ್ಮ ಮಾಧ್ಯಮಗಳು ನಿತ್ಯ ಕೇಳಬೇಕಿತ್ತು ಅದಾಗಲಿಲ್ಲ. ಮೋದಿ ಎಂದಿಗೂ ಮಾತನಾಡಲಾರದಷ್ಟು ಮುಖವಿಲ್ಲದಂತಾಗಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ನನ್ನ ನೆಚ್ಚಿನ ನಟ. ಚಿತ್ರರಂಗಕ್ಕೆ ಕಾಲಿಟ್ಟ ಆತನ ಆರಂಭದ ದಿನಗಳಲ್ಲಿ ಆತನ ಚಿತ್ರಗಳು ಅಷ್ಟೇನೂ ನನಗೆ ಇಷ್ಟವಾಗುತ್ತಿರಲಿಲ್ಲ. ಆದರೆ ಕಳೆದ ಒಂದು ದಶಕದಿಂದೀಚೆಗೆ ಆತನ ಅಭಿನಯದ ಅನೇಕ ಚಿತ್ರಗಳು ನನಗೆ ಇಷ್ಟವಾದವು. ಆಕ್ಷನ್ ಓರಿಯಂಟೆಡ್ ಗೆ ಸೀಮಿತವಾಗಿದ್ದ ಅಕ್ಷಯ್ ‘ಹೇರಾಪೇರಿ,’ ದೇ ಧನ್ ಧನಾಧನ್ , Tees mar khan, katta mitta, ನಂತಹ ಪಕ್ಕಾ ಕಾಮಿಡಿ ಚಿತ್ರಗಳಿಂದ ಆತನ ಪ್ರತಿಭೆಯ ಇನ್ನೊಂದು ಮಗ್ಗಲು ಗೊತ್ತಾಯಿತು. Aitraaz , Baby , OMG, AAN, KHAKEE ಭಾರತ ಸರ್ಕಾರದ ಸ್ವಚ್ಛಭಾರತ್ ಯೋಜನೆಯಿಂದ ಪ್ರೇರಿತಗೊಂಡ TIOLAT EK PREM KATHA, PADMAN ನಂತಹ ಹಲವಾರು ಸಿನಿಮಾಗಳು ಅಕ್ಷಯ್ ಅವರಲ್ಲಿನ ವೃತ್ತಿಬದ್ದತೆ ಮತ್ತು ಅಭಿನಯ ನನ್ನನ್ನು ಇನ್ನಷ್ಟು ಅಭಿಮಾನಗೊಳ್ಳುವಂತೆ ಮಾಡಿತ್ತು.

ಅಕ್ಷಯ್ ಓರ್ವ ಪರಿಪೂರ್ಣ ನಟ. ಆತನ ರಾಜಕೀಯ ಒಲವು-ನಿಲುವುಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ಬಹುಶಃ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿರಲಿಲ್ಲ. ಈತನ ಇತ್ತೀಚಿನ ಸಿನಿಮಾಗಳನ್ನು ಮತ್ತೆ ಮತ್ತೆ ನೋಡಲು ಆತನಲ್ಲಿನ ಕಸುಬುದಾರಿಕೆ ಮತ್ತು ಆತ ಆಯ್ದುಕೊಳ್ಳುತ್ತಿದ್ದ ಕಥಾವಸ್ತು ಮುಖ್ಯಕಾರಣ. ಇಂತಹ ಅಕ್ಷಯ್ ಕುಮಾರನ ಲೆಟೆಸ್ಟ್ ಪ್ಲಾಪ್ ಸಿನಿಮಾವೆಂದರೆ ನೆನ್ನೆ ನೋಡಿದ ಬಿಜೆಪಿ ನಿರ್ಮಾಣದ
” AKSHAY interview Shri Narendra modi ek Documentary ”

ಅಕ್ಷಯ್ ಜಾಗದಲ್ಲಿ ಪ್ರಣವ್‌ರಾಯ್, ಕರಣ್ ಥಾಪರ್, ರವೀಶ್‌ಕುಮಾರ್ ರಾಜ್‌ದೀಪ್‌ಸರ್ ದೇಸಾಯಿ,ರಾಹುಲ್ ಕನ್ವಾಲ್, ಬರ್ಖಾದತ್ ರಂತಹ ವೃತ್ತಿಪರ ಪತ್ರಕರ್ತರಿದ್ದದ್ದರೆ ಬಹುಶಃ ದೇಶ ಕಳೆದ ಐದು ವರ್ಷಗಳಿಂದ ಕೇಳುತ್ತಿರುವ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿತ್ತು.

ಪಿ.ಸಾಯಿನಾಥ್ ರೊಂದಿಗೆ ಮೋದಿ ಮಾತಾಡಿದ್ದಿದ್ದರೆ ಈ ದೇಶದ ರೈತರ ಬದುಕಿನ ಪರಿಚಯವಾದರೂ ಕಣ್ತರೆಸುತ್ತಿತ್ತು.

ವಿಪರ್ಯಾಸವೆಂದರೆ ಇಲ್ಲಿ ಪತ್ರಕರ್ತ ನಟನಾಗಬಹುದು, ನಟನೊಬ್ಬ ಪತ್ರಕರ್ತನ ನಾಗಿ ಭಕ್ತಿ ತೋರಬಹುದು, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಲಾಗದೆ ಇಳಿದು ಹೋಗುವ ಎಲ್ಲಾ ತಯಾರಿ ನಡೆಸಿಕೊಂಡಿರುವ ದಟ್ಟ ಸೂಚನೆ ಕಾಣುತ್ತಿದೆ. , ಅಕ್ಷಯ್ ಕುಮಾರ್ ಸಂದರ್ಶನ ಮೋದಿ ಅಧಿಕಾರದಿಂದ ನಿರ್ಗಮನದ ವಿದಾಯ ಸ್ತುತಿಯಂತೆ ಕಾಣುತ್ತಿದೆ. ಗುಡ್ ಬೈ ಮಿ.ಮೋದಿ. ದೇಶದ ಪ್ರಶ್ನೆಗಳಿಗೆ ನೀವಿನ್ನೂ ಉತ್ತರ ಕೊಟ್ಟಿಲ್ಲ.

‍ಲೇಖಕರು avadhi

April 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: