‘ನೋ, ಥ್ಯಾಂಕ್ಸ್’ ಎಂದೆ..

ಏಪ್ರಿಲ್ 23 ಷೇಕ್ಸ್ ಪಿಯರ್ ಹುಟ್ಟಿದ ಮತ್ತು ಇಲ್ಲವಾದ ದಿನ.

ಈ ಸಂದರ್ಭದಲ್ಲಿ ‘ಅವಧಿ’ಯ ಪರಿಚಿತ ಬರಹಗಾರ, ಲಿಬ್ಯಾದಲ್ಲಿ ಸಾಕಷ್ಟು ವರ್ಷ ಅಧ್ಯಾಪನ ಮಾಡಿದ, ಆ ಕುರಿತು ಪ್ರವಾಸ ಕಥನವನ್ನೂ ಬರೆದಿರುವ ಉದಯ ಇಟಗಿ ಅವರ ಹೊಸ ಮಾಲೆಯನ್ನು ಪ್ರಕಟಿಸುತ್ತಿದ್ದೇವೆ 

ಉದಯ್ ಇಟಗಿ

ನಿನ್ನೆಯ ಸಂಚಿಕೆಯಿಂದ…

ಇದಾಗಿ ಒಂದು ವರ್ಷಕ್ಕೆ ಅವನಿಂದ ಪತ್ರವೊಂದು ಬಂತು. ಅದರಲ್ಲಿ ಬರೀತಿದೇನಿ ಅಂದ. ಕಾಮಿಡಿ ಅಂದ. ಟ್ರ್ಯಾಜಿಡಿ ಅಂದ. ಹಿಸ್ಟರಿ ಅಂದ. ಟ್ರ್ಯಾಜಿಕ್-ಕಾಮಿಡಿ ಅಂದ. ಕಾಮಿಕ್-ಟ್ರ್ಯಾಜಿಡಿ ಅಂದ. ಇನ್ನೂ ಏನೇನೋ ಅಂದ. ಏನಾದ್ರು ಬರ್ಕೋಂಡು ಸಾಯ್ಲಿ! ಇದರಲ್ಲಾದರು ದುಡ್ಡುಗಿಡ್ಡು ಬರುತ್ತಾ? ಅಂದುಕೊಂಡೆ. ಆದರೆ ಪತ್ರದಲ್ಲಿ ಅದರ ಬಗ್ಗೆ ಪ್ರಸ್ತಾಪವೇ ಇರಲಿಲ್ಲ! ಕೊನೆಯಲ್ಲಿ ಲಂಡನ್ನಿಗೆ ಬಾ ಎಂದು ಬರೆದಿದ್ದ.

ಅವನ ಕರೆಯ ಮೇರೆಗೆ ಒಂದು ಬೇಸಿಗೆಯ ದಿನ ನಾನು ಲಂಡನ್ನಿಗೆ ಹೋದೆ. ನನಗೇಕೋ ಮೊದಲ ನೋಟದಲ್ಲಿಯೇ ಲಂಡನ್ ಬೇಸರ ತರಿಸಿತು.

A cold place and a dirty, London town

The people smelled

But they were grey ghosts all the same

ಅದರ ಥಳಕು ಬಳುಕಿನೊಳಗೆ ನೈಜತೆ ಕಳಕೊಂಡು ಸತ್ತ ನಗರದಂತೆ ಭಾಸವಾಯಿತು. ಅಲ್ಲಿ ಬೀಳುತ್ತಿದ್ದ ಹಿಮ ಹಿಮವಾಗಿರಲಿಲ್ಲ. ಬೀಸುತ್ತಿದ್ದ ತಂಗಾಳಿ ತಂಗಾಳಿಯಾಗಿರಲಿಲ್ಲ. ಅಲ್ಲಿ ಮನುಷ್ಯರಿಗಿಂತ ಅವರ ನೆರಳುಗಳೇ ಹೆಚ್ಚು ಸುಳಿದಾಡುತ್ತಿದ್ದವು. ಅವರಿಗೆ ತಲೆ ಉಪಯೋಗಿಸಿ ಗೊತ್ತಿತ್ತೇ ಹೊರತು ನಾನು ಒಮ್ಮೆಯೂ ಅವರು ಹೃದಯವನ್ನು ಉಪಯೋಗಿಸಿದ್ದನ್ನು ನೋಡಲಿಲ್ಲ. ಒಟ್ಟಿನಲ್ಲಿ ಲಂಡನ್, ಲಂಡನ್ ಆಗಿ ಉಳಿದಿರಲಿಲ್ಲ. ಅದೊಂದು ಜೀವಂತ ಸ್ಮಶಾನವಾಗಿತ್ತು. ಅಲ್ಲಿ ಸತ್ತವರು ಮಾತ್ರ ಬದುಕುತ್ತಿದ್ದರು.

London is a living a grave yard, I say

London is where all the dead people live

It was all unreality London

Let me die if I lie!

ಅಷ್ಟೇ ಅಲ್ಲ, ನನ್ನ ಅಮ್ಮ ಯಾವಾಗ್ಲೂ ಹೇಳೋಳು; ಲಂಡನ್ನಿನ್ನ ಹೆಂಗಸರು ಸೂಳೆಯರು ಮತ್ತು ಗಂಡಸರು ಕಚ್ಚೆಹರಕರು ಎಂದು. ಆದರೆ ನಾನು ಲಂಡನ್ನಿನಲ್ಲಿ ಯಾವ ಸೂಳೆಯನ್ನೂ ನೋಡಲಿಲ್ಲ. ಲಂಡನ್ ನನ್ನನ್ನು ಯಾವ ರೀತಿಯೂ ಆಕರ್ಷಿಸಲಿಲ್ಲ. ನನಗೆ ಲಂಡನ್ನಿಗಿಂತ ನಮ್ಮೂರೇ ಚೆಂದ ಎನಿಸಿತು!

ಅಂದು ನಾವಿಬ್ಬರು ಜಗತ್ಪ್ರಸಿದ್ಧ ಲಂಡನ್ ಸೇತುವೆಯ ಮೇಲೆ ನಿಂತಿದ್ದವು. ಕೆಳಗೆ ಥೇಮ್ಸ್ ನದಿ ಪ್ರಶಾಂತವಾಗಿ ಹರಿಯುತ್ತಿತ್ತು. ಇದ್ದಕ್ಕಿದ್ದಂತೆ ಅವನು “ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ?  (Shall I compare thee to a summer’s day?)” ಎಂದ ಕೇಳಿದ. ಅವನ ದನಿಯಲ್ಲಿ ಪ್ರೀತಿಯಿತ್ತೆ? ಛೇಡಿಕೆಯಿತ್ತೆ? ಕೀಟಲೆಯಿತ್ತೆ? ನಿವೇದನೆಯಿತ್ತೇ? ಅರ್ಪಣೆಯಿತ್ತೆ? ನಾನು ಅದ್ಯಾವದನ್ನು ಗಮನಿಸಲಿಲ್ಲ. ಸುಮ್ಮನೆ “ನೋ, ಥ್ಯಾಂಕ್ಸ್” ಎಂದೆ.

ಆಗ ಅವನ ಮುಖ ನೋಡಬೇಕಿತ್ತು. ಒಮ್ಮೆ ಸುಮ್ಮನೆ ಮುಗುಳ್ನಕ್ಕ. ಮುಗುಳ್ನಗೆಯ ಸರದಾರ; ನನ್ನ ಗಂಡ. ನಾನವನನ್ನು “ಸರ್ ಸ್ಮೈಲ್” ಎಂದೇ ಕರೆಯುತ್ತಿದ್ದೆ. ಅವನು ಇನ್ಯಾವುದರಲ್ಲೂ ಹೇಳಿಕೊಳ್ಳುವಂತಿರಲಿಲ್ಲ, ಮುಗುಳ್ನಗುವುದೊಂದನ್ನು ಬಿಟ್ಟು. ಅವನು ಯಾವತ್ತೂ ದೊಡ್ಡದಾಗಿ ನಗುತ್ತಿರಲಿಲ್ಲ. ಬಾಯಿಬಿಟ್ಟರೆ ಎರಡು ಮುರುಕಲು ಕರಿಹಲ್ಲು ಯಾರಿಗಾದರೂ ಕಂಡಾವೆಂಬ ಭಯ! ಆದರೆ ಅವನ ತರಾನೇ ಯಾರಿಗಾದರೂ ಕರಿಹಲ್ಲುಗಳಿದ್ದವರೊಂದಿಗೆ ನಗಲು ಯಾವ ಭಯವೂ ಇರಲಿಲ್ಲ. “ಈ ಮುರುಕಲು ಕರಿಹಲ್ಲುಗಳು ನಿನಗ್ಹೇಗೆ ಬಂದವು?” ಎಂದು ಒಮ್ಮೆ ಕೇಳಿದ್ದೆ. “ನಾನು ಚಿಕ್ಕವನಿದ್ದಾಗ ಸಕ್ಕರೆ ಮಿಠಾಯಿ ತುಂಬಾ ತಿಂತಿದ್ದೆ. ಅದಕ್ಕೆ ಹೀಗಾದವು” ಅಂದ.

ಪಾಪ, ಸಿಹಿತಿನಿಸುಗಳೆಂದರೆ ಪಂಚಪ್ರಾಣ ಅವನಿಗೆ! ಬಾಯಿ ಚಪಲ, ಯಾವಾಗಲೂ ಬರಿ ಬಾದಾಮಿ ಕಜ್ಜಾಯ, ಶುಂಠಿ ಬ್ರೆಡ್ಡು, ಇಲ್ಲವೆ ಬಿಸ್ಕಿಟ್ ಗಳನ್ನೇ ತಿಂತಿದ್ದ. ಆದರೆ ಸಕ್ಕರೆ ಮೊದಲಿನಿಂದಲೂ ಅವನ ದೇಹಕ್ಕೆ ಒಗ್ಗಿಬರಲಿಲ್ಲ. ಏಕೆಂದರೆ ಅವನ ರಕ್ತದಲ್ಲಿದ್ದದ್ದು ಬರಿ ಉಪ್ಪು! ಉಪ್ಪು ಮತ್ತು ಸಕ್ಕರೆ ಹೇಗೆ ಒಂದಾದಾವು?

Am I right? Yes, I am. Let me die if I lie.

ಈ ಮೊದಲೇ ಹೇಳಿದಂಗೆ ಷೇಕ್ಸ್ ಪಿಯರ್ ಯಾವತ್ತೂ ಸೀದಾ ಸಾದಾ ಮಾತಾಡುತ್ತಿರಲಿಲ್ಲ. ಏನಾದರು ಹೇಳಬೇಕೆಂದರೆ ಸುತ್ತಿ ಬಳಸಿ ಹೇಳುತ್ತಿದ್ದ. ಅದೇನೋ ಮೆಟಫರ್-ಗಿಟಫರ್ ಅಂತಾರಲ್ಲ ಅದರಲ್ಲಿ ಹೇಳುತ್ತಿದ್ದ. ಮನೆಯಲ್ಲೂ ಅಷ್ಟೆ ಅವನು ಮಾತಾಡುತ್ತಿದ್ದೆಲ್ಲ ರೂಪಕಗಳಲ್ಲೇ! ಹುಚ್ಚುಕವಿ, ಅವನು ಬದುಕಿದ್ದೇ ರೂಪಕಗಳ ಜೊತೆ. ನನಗೋ ಒಂದೊಂದು ಸಾರಿ ಅವನೇನು ಹೇಳುತ್ತಿದ್ದಾನೆಂದು ಅರ್ಥವಾಗದೆ ರೋಸಿಹೋಗುತ್ತಿತ್ತು. ಅದೇನದು ಬಿಡಿಸಿ ಹೇಳಬಾರದೆ? ಎಂದು ರೇಗಿದರೆ ಅದು “ಮೆಟಫರ್; ಹಾಗೆಲ್ಲಾ ಬಿಡಿಸಿ ಹೇಳಬಾರದು” ಎನ್ನುತ್ತಲೇ “ಮೆಟಫರ್ ಅಂದ್ರೆ ಏನು ಗೊತ್ತಾ? ಒಂದು ವಸ್ತುವಿನ ಬಗ್ಗೆ ಹೇಳೋದು-ಇದು ಅದಲ್ಲ, ಬೇರೇನೋ ಅನ್ನೋದು! ಬಿಡಿಸಿ ಹೇಳಬೇಕೆಂದರೆ ಅವೆಲ್ಲಾ ದೊಡ್ಡ ದೊಡ್ಡ ಹೊಗಳಿಕೆಯ ಮಾತುಗಳು, ಇಲ್ಲಾ ಬೈಗುಳಗಳು ಅಷ್ಟೆ!” ಎಂದು ಎಲ್ಲವನ್ನೂ ಬಿಡಿಸಿ ಹೇಳಿದ್ದ.

ಈ ಮೆಟಫರುಗಳ ಜೊತೆಗಿದ್ದ ತಿಕ್ಕಲು ಷೇಕ್ಸ್ ಪಿಯರ್ ಜೊತೆ ಬದುಕಿದ್ದ ನನ್ನ ಪಾಡು ಯಾರಿಗೂ ಬೇಡ. ಅವನ ಅಪ್ಪ ಷೇಕ್ಸ್ ಪಿಯರ್ ಇನ್ನೂ ತಿಕ್ಕಲು. ಅವನು ಬದುಕಿದ್ದೇ ವೈನ್ ಬಾಟಲಿನಲ್ಲಿ. ಒಂದು ಕ್ರಿಸ್ಮಸ್ ದಿನ ಕುಡಿದು ಕಣ್ಣೀರಿಡುತ್ತಾ ನಮ್ಮನ್ನೆಲ್ಲಾ ಕೇಳಿದ: “ಈ ಕ್ರಿಸ್ಮಸ್ ಗೆ ನನಗೊಂದು ಬಿಳಿಮೋಡದ ತುಂಡು ತಂದು ಕೊಡಿ.” ಇಂಥ ಕ್ರಿಸ್ಮಸ್ ಉಡುಗೊರೆಯನ್ನು ಎಲ್ಲಿಂದ ತರುವುದು ಎಂದು ನಾನು ಪಿಳಿಪಿಳಿ ಕಣ್ಣುಬಿಟ್ಟೆ. ಆದರೆ ನನ್ನ ಮಾವನ ಹೆಂಡತಿ ಮೇರಿ ಥಟ್ಟನೆದ್ದು ಹೂದೋಟಕ್ಕೆ ಹೋದಳು. ಅದೇ ಆಗ ಬಿದ್ದ ಮಂಜನ್ನು ಬೊಗಸೆ ತುಂಬ ತಂದಳು. ಮುದುಕ ಜಾನ್ ಷೇಕ್ಸ್ ಪಿಯರ್ ಅಳು ನಿಲ್ಲಿಸಿದ. ಆ ‘ಮೋಡದ ತುಂಡಿ’ಗೆ ಮುತ್ತಿಕ್ಕಿ ಮಂಜು ಕರಗುವ ಮುನ್ನ ಮಗುವಿನ ಥರ ನಿದ್ದೆ ಹೋದ. ಇಂಥ ಹುಚ್ಚನ ಮಗ ಈ ಷೇಕ್ಸ್ ಪಿಯರ್.

My husband.

Sour Mr. Shakespeare!

ಷೇಕ್ಸ್ ಪಿಯರ್  ತಿಕ್ಕಲಷ್ಟೇ ಅಲ್ಲ ಮಹಾನ್ ಸುಳ್ಳುಗಾರ ಕೂಡ ಆಗಿದ್ದ. ಬಾಯಿ ಬಿಟ್ಟರೆ ಸಾಕು: ಬರೀ ಸುಳ್ಳು, ಕಲ್ಪನೆ, ಭ್ರಮೆ. ನನ್ನ ಗಂಡ ಒಬ್ಬನೆ ಅಲ್ಲ: ಪ್ರಪಂಚದ ಎಲ್ಲ ಕವಿಗಳು, ಲೇಖಕರೆಲ್ಲಾ ಮಹಾನ್ ಸುಳ್ಳುಗಾರರೇ! ಹಾಗೆಂದೇ ಅವರಿಗೆ ದೊಡ್ಡ ದೊಡ್ಡ ಕೃತಿಗಳನ್ನು ರಚಿಸಲು ಸಾಧ್ಯವಾಗೋದು. ಅವೆಲ್ಲಾ ಬರೀ ಕಲ್ಪನೆ, ಭ್ರಮೆ, ಸುಳ್ಳಿನ ಕಂತೆಗಳು ಅಷ್ಟೇ.

ಇನ್ನು ಈ ಜನಾನೋ ಮೊದಲೇ ಅರೆಹುಚ್ಚರು. ಕೇಳಬೇಕಲ್ಲ? ಅವನ್ನೆಲ್ಲಾ ಸತ್ಯ ಅನ್ಕೊಂಡು ಮುಗಿಬಿದ್ದು ಓದುತ್ತಾರೆ. ಓದಿ ಓದಿ ಪೂರ್ಣ ಹುಚ್ಚರಾಗುತ್ತಾರೆ. ಅವರು ಏನೋ ಬರೀತಾರೆ. ಇವರೇನೋ ಓದ್ತಾರೆ. ಓದಿದ ಮೇಲೆ ಸುಮ್ಮನಿರದೆ ಇದು ಚೆನ್ನಾಗಿದೆ, ಇದನ್ನೋದು ಅಂತಾ ಮತ್ತೊಬ್ಬರಿಗೆ ಹೇಳೋದು. ಅವರೂ ಹುಚ್ಚರಾಗೋದಲ್ಲದೆ ಬೇರೆಯವರನ್ನೂ ಹುಚ್ಚರನ್ನಾಗಿ ಮಾಡ್ತಾರೆ! ಅದಕ್ಕೆ ನಾನ್ಯಾವತ್ತೂ ಯಾವ ಪುಸ್ತಕಾನೂ ಓದೋಕೆ ಹೋಗಲಿಲ್ಲ ಬೈಬಲ್ ಒಂದನ್ನು ಬಿಟ್ಟು! ಎಲ್ಲೀವರೆಗೂ ಓದೋರು ಇರ್ತಾರೋ ಅಲ್ಲೀವರೆಗೂ ಇವರು ಬರೀತಾನೆ ಇರ್ತಾರೆ. ಬರೆದು ಬರೆದು ಗುಡ್ಡೆ ಹಾಕ್ತಾರೆ. ಕೊನೆಗೆ ಒಂದಿಷ್ಟು ದುಡ್ಡು, ಬಹುಮಾನ ಅಂತಾ ತಗೊಳ್ತಾರೆ. ಅದು ಬಿಟ್ರೆ ಮತ್ಯಾವ ಮೂರು ಕಾಸಿನ ಪ್ರಯೋಜನಾನೂ ಇಲ್ಲ ಅವರಿಂದ! ಸುಳ್ಳುಗಾರರಿಗೆ ತಾನೆ ಈ ಜಗತ್ತಿನಲ್ಲಿ ಗೌರವ, ಮನ್ನಣೆ, ಬಹುಮಾನ ಎಲ್ಲಾ!

ಸಾಲದ್ದಕ್ಕೆ ಒಂದೊಂದು ಸಾರಿ ಏನೇನೋ ಬರೆದು ಯಾರ್ಯಾರನ್ನೋ ಘಾಸಿಗೊಳಿಸಿಬಿಡುತ್ತಾರೆ. ಇಲ್ಲ ವಿವಾದ ಹುಟ್ಟುಹಾಕುತ್ತಾರೆ, ಆ ವಿವಾದಗಳು ಭುಗಿಲೇಳುತ್ತಿದ್ದಂತೆ ನಾನು ಆ ಅರ್ಥದಲ್ಲಿ ಬರೆದಿಲ್ಲ, ನೀವು ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿದ್ದೀರಿ ಹಾಗೆ ಹೀಗೆ ಅಂತಾ ಬೊಗಳೆ ಬಿಡ್ತಾರೆ. ಸಮಜಾಯಿಸಿ ಕೊಡುತ್ತಾರೆ. ಇಂಥವರನ್ನೆಲ್ಲಾ ಓದೋ ಬದಲು ಸುಮ್ಮನಿರೋದೆ ವಾಸಿ! ಅದಕ್ಕೇ ನಾನು ಯಾರನ್ನೂ ಓದೋಕ್ಕೆ ಹೋಗಲ್ಲಾ ಅಂತಾ ಹೇಳಿದ್ದು.

। ಉಳಿದದ್ದು ನಾಳೆಗೆ ।

‍ಲೇಖಕರು Avadhi Admin

April 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Lalitha Siddabasavaiah

    ಶೇಕ್ಸ್‌ಪಿಯರ್‌ ಮತ್ತು ಅವನ ಹೆಂಡತಿ ‌ಇಬ್ಬರನ್ನೂ ಅದ್ದದ್ದಿ ಜಾಲಾಡುತ್ತಿದ್ದೀರ :):):):)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: