ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳಂತೆ ಅದೆಷ್ಟೋ ….ಹೆಣ್ಣುಗಳು..

ಮಂಜುಳಾ ಕಿರುಗಾವಲು

ಒಂದೇ ಸಮನೇ ಅಳುತ್ತಾಳೆ ಅವಳು ಜೊತೆಗೆ ನಾನೂ ಕೂಡ!
ಒಡಲೊಳಗಿನ ನೋವು, ಯಾತನೆ
ಹೊರಗೆ ಹೇಳಲಾಗುತ್ತಿಲ್ಲ. ನಾಲಗೆ ತುಂಡರಿಸಿ, ಬೆನ್ನು ಮೂಳೆ ಮುರಿದು ನುಜ್ಜಾಗಿದೆ
ಬೆಚ್ಚಿಬಿದ್ದ ಎದೆಯೊಳಗೆ ಎಲ್ಲವೂ ಹೆಪ್ಪುಗಟ್ಟಿದೆ.

ಹೆಣ್ತನವ ಹೊತ್ತ ನತದೃಷ್ಟ ದೇಹ ವ್ಯಾಘ್ರಪುಂಡರ ಬಯಲಾಟಕ್ಕೆ
ಬಳಲಿ ಬೆಂಡಾಗಿದೆ
ಅಳಿದುಳಿದ ಜೀವ ತರತರನೆ ಕಂಪಿಸಿದೆ.

ನಾಲಿಗೆಯನ್ನೆ ಇರಿದಿರುವಾಗ
ನುಡಿಯುವುದಾದರೂ ಹೇಗೆ
ಯಮಯಾತನೆಯ?

ಪೋಲೀಸಪ್ಪ ಕೇಳುತ್ತಾನೆ ಏನಾಯಿತು ?
ಎನೂ ಅರಿಯದಂತೆ!
ಈಕೆಯ ಮೇಲೆ ಅತ್ಯಾಚಾರವಾಗಿದೆ ಅನ್ನೋದಕ್ಕೆ ಸಿಕ್ಕಿಲ್ಲ ಯಾವುದೇ ಪುರಾವೆ….
ಜಿನುಗುವ ರಕ್ತ, ಕಾಮದುರಿಯಲ್ಲಿ ಬೂದಿಯಾದ ಕಣ್ಣುಗಳು, ನರಳುವ ಉಸಿರು
ಅಂಗಾಂಗಗಳ ಮೇಲೆ ಹೆಪ್ಪುಗಟ್ಟಿದ ಗಂಡಾಳಿಕೆಯ ಮೊಹರುಗಳಾವು ಅವನಿಗೆ ಕಾಣುತ್ತಿಲ್ಲ.
ಬಹುಶಃ ಅವನ ಕಣ್ಣುಗಳೂ ಸತ್ತಿರಬೇಕು.

ನಿಜ ! ಅವಳಂತೆ ಅದೆಷ್ಟೋ ಕಾಡಕುಸುಮಗಳ ಮೇಲಾಗುವ ದೌರ್ಜನ್ಯ, ಅತ್ಯಾಚಾರಗಳ್ಯಾವುದಕ್ಕು ಇಲ್ಲಿ ಪುರಾವೆಗಳಿಲ್ಲ..
ಕಣ್ಣು, ಹೃದಯಗಳು .ನ್ಯಾಯ ಜಗುಲಿಗಳೆಲ್ಲಾ ಜಡಗೊಂಡಿರುತ್ತವೆ.

ಅವಳು ಸತ್ಯ ಹೇಳುವವಳಿದ್ದಳು
ಬಯಲಾಗುವ ಭಯದಲ್ಲೆ
ನಡುರಾತ್ರಿಯಲ್ಲಿ ಕಂಡು ಕಾಣದಂತೆ ಸುಟ್ಟು ಸುಡುಗಾಡು ಕಟ್ಟಿಬಿಟ್ಟರು.

ಉರಿವ ಚಿತೆಯ ಕೊರಡು ಕೊಳ್ಳಿಯ ಬೆಳಕಲ್ಲಿ ಅವರೆಲ್ಲ
ದೇಶ ಆಳುತ್ತಿದ್ದಾರೆ.
ಹಲವೆಡೆ ಸಾವಿರಾರು ಮೇಣದ ಬತ್ತಿಗಳು ಬೆಳಗಿದಷ್ಟೇ..
ಅವಳು ಮಾತ್ರ ಕತ್ತಲಲ್ಲಿ ಕರಗುತ್ತಲೆ‌ ಇದ್ದಾಳೆ.
ಅವಳಂತೆ ಅದೆಷ್ಟೋ ….ಹೆಣ್ಣುಗಳು..

‍ಲೇಖಕರು Avadhi

1 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading