ಅವರೇ ‘ಸಂಧ್ಯಾರಾಣಿ’ ಮೇಡಂ..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. 

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ಅವಧಿಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ಹರಿವುನಿರ್ಮಾಣಗೊಂಡ ಕಥನವೂ ಅವಧಿಯಲ್ಲಿಯೇ ಪ್ರಕಟವಾಗಿತ್ತು. 

ಈ ಜೀವನವೇ ಒಂದು ನದಿಯಂತೆ, ಎಲ್ಲಿ ತಿರುವುಗಳೋ ಬರುವುದೋ, ಎಲ್ಲಿ ಜಲಪಾತದಂತೆ ಆಳಕ್ಕೆ ಜಿಗಿಯಬೇಕಾಗುವುದೋ ಯಾವುದಕ್ಕೂ ಸ್ಪಷ್ಟತೆ ಇಲ್ಲಾ. ಇಕ್ಕೆಲಗಳ ನಡುವೆ ಹರಿವು ಸಾಗಿಸಿದಂತೆ ಸಾಗಬೇಕು. ಕಳೆದ ವಾರ ಅಂಕಣ ಬರೆಯಲಾಗಲಿಲ್ಲಾ.

ಜೀವನದ ಓಟಕ್ಕೆ ಆರೋಗ್ಯ ಸಣ್ಣದೊಂದು ಬ್ರೇಕ್ ನೀಡಿ, ವಿಷಮ ಸ್ಥಿತಿಯ ಉಚ್ಛ್ರಾಯ ಸ್ಥಿತಿಯನ್ನು ಹಾಗೇ ಪರಿಚಯಿಸಿ, ಸಾವಿನ ಸನಿಹಕೆ ಜಸ್ಟ್ ಹಾಗೇ ಕ್ವಿಕ್ ಟ್ರಿಪ್ ಮಾಡ್ಸಿ, ಹಾಯ್ ಹೇಳಿ, ನಿನ್ ಕೆಲ್ಸ ಮುಂದುವರೆಸಿಕೋ ಅಂತ ಹೇಳಿ ಕಳಿಸಿತು. ಆ ಕಾರಣದಿಂದಾಗಿ ಒಂದು ವಾರ ಚಕ್ಕರ್ ಹಾಕಿರುವುದಕ್ಕೆ ಕ್ಷಮಿಸಿ ಬಿಡಿ.

ಇನ್ನು ಅಂಕಣ ಮುಂದುವರೆಸೋಣ

ಮೊದಲ ಎಳೆಯಾಗಿ ಮೂಡಿ ಬಂದ ಕತೆಗೆ ಇನ್ನೊಂದು ಮಿತಿಯೂ ಸೇರಿಕೊಂಡಿತು. ಅದು ಬಜೆಟ್. ‘ಹರಿವು’ ಸಿನೆಮಾ ಮಾಡಿ ಅದಾಗಲೇ ಮೂರು ವರ್ಷ ಕಳೆದಿತ್ತು. ಇದರ ಮಧ್ಯೆ ಒಂದು ಸಿನೆಮಾ ಮುಹೂರ್ತ ಆಗಿ ನಿಂತಿತ್ತು. ಇನ್ನೊಂದು ಮುಹೂರ್ತದವರೆಗೂ ಬಂದು ನಿಂತಿತ್ತು. ಮತ್ತೆ ಹೊಸ ನಿರ್ಮಾಪಕರು ಸಿಗುತ್ತಾರೋ ಇಲ್ಲವೋ ಗೊತ್ತಿಲ್ಲಾ. ಹಾಗಿರೋವಾಗ ಈ ಕಥೆಗೆ ನಿರ್ಮಾಪಕರು ಸಿಗುತ್ತಾರೋ ಇಲ್ಲವೋ ಎಂಬ ಆಲೋಚನೆ ಬಂದು, ಈ ಕಥೆಯನ್ನು ಆದಷ್ಟು ಕಡಿಮೆ ಬಜೆಟ್ಟಿನಲ್ಲಿ ಒಂದೆರೆಡು ಲೊಕೇಷನ್ ಅಲ್ಲಿ ನಡೆಯುವಂತೆ ಬರೆದುಕೊಂಡು ಸಿನೆಮಾ ಕತೆ ಮಾಡುವ ಎಂದು. 

ಈ ಕತೆ ಬರೆಯುವುದಕ್ಕೆ ಒಂದು ಮೂಲ ಪ್ರಶ್ನೆ ಉದ್ಭವವಾಯಿತು. ಈ ಕತೆಯನ್ನು ಬರೆಯುವವರು ಯಾರು? ಇದಕ್ಕೂ ಮೊದಲು ನನ್ನ ಚಿತ್ರಕತೆಗಳನ್ನು ನಾನೇ ಬರೆದು ಅದನ್ನು ನನ್ನ ಗುರುಗಳ ಬಳಿ, ಒಂದಿಬ್ಬರು ಸ್ನೇಹಿತರ ಬಳಿ ತಿದ್ದಿಸಿಕೊಳ್ಳುತ್ತಿದ್ದೆ. ಆದರೆ ಈ ಕತೆ ಅಷ್ಟು ಸುಲಭವಾಗಿ ಬರೆಯಬಹುದಾದ ಕತೆ ಆಗಿರಲಿಲ್ಲ. ಇಲ್ಲಿ ಕತೆಯಲ್ಲಿ ಸಂಪೂರ್ಣವಾಗಿ ಹೆಣ್ತನವನ್ನು ಕಟ್ಟಿಕೊಡಬೇಕಿತ್ತು.

ನಾನು ಎಷ್ಟೇ ಚರ್ಚೆ, ಸಂಶೋಧನೆ, ಓದು, ಒಡನಾಟ ಮಾಡಿದರೂ ಕೂಡ ಈ ಕಥೆಯೊಳಗೆ ಹೆಣ್ತನವನ್ನು ಕಟ್ಟಿಕೊಡುವುದು ಅಷ್ಟು ಸುಲಭವಲ್ಲ. ಮತ್ತು ಬೇರೆ ಕೆಲವು ಮಹಿಳಾ ಕೇಂದ್ರಿತ ಸಿನೆಮಾಗಳ ಕುರಿತಂತೆ ಬಂದಿರುವ ವಿಮರ್ಶೆಗಳು, ಅಭಿಪ್ರಾಯಗಳು ಹಾಗೂ ಚರ್ಚೆಗಳನ್ನು ಗಮನಿಸಿದ್ದ ನನಗೆ, ಸೂಕ್ಷ್ಮ ಪ್ರೇಕ್ಷಕ ಯಾವ ಯಾವ ಕೋನದಲ್ಲೆಲ್ಲಾ ಸಿನೆಮಾನ ಬಿಡಿಸಿ ನೋಡುತ್ತಾನೆ ಎಂಬ ಅಂದಾಜು ಇದ್ದಿದ್ದರಿಂದ, ಈ ಕಥೆಯನ್ನು ನಾನೇ ಬರೆಯುವ ದುಸ್ಸಾಹಸಕ್ಕೆ ಇಳಿಯುವುದು ಬೇಡ ಎಂದು ನಿರ್ಧರಿಸಿದೆ. 

ಸರಿ! ನಾನು ಬರೆಯೋದಿಲ್ಲಾ. ಬೇರೆ ಯಾರ ಕೈಲಿ ಬರೆಸೋದು? ನಾನು ಓದಿರುವ ಲೇಖಕಿಯರ ಅವರ ಬರವಣಿಗೆಗಳೆನ್ನೆಲ್ಲಾ ಮೆಲುಕು ಹಾಕುತ್ತಾ, ಇವರಾಗಬಹುದಾ? ಅವರಾಗಬಹುದಾ? ಎಂದು ಮನಸಿನಲ್ಲೇ ಅಂದಾಜಿಸುತ್ತಾ, ನನಗೆ ಯಾರು ಸರಿ ಹೊಂದಬಹುದು ಎಂದು  ಲೆಕ್ಕಾಚಾರ ಶುರು ಮಾಡಿದೆ. ಇಲ್ಲಿ ಲೆಕ್ಕಾಚಾರ ಎಂಬ ಪದವನ್ನು ನಿರ್ಧಿಷ್ಟವಾಗಿಯೇ ಬಳಸಿದ್ದೇನೆ.

ಯಾರಿಗೇ ಆಗಲಿ ಕತೆಯನ್ನು ಬರೆದುಕೊಡಿ ಎಂದು ಕೇಳುವುದರ ಜೊತೆಗೆ ದೊಡ್ಡ ಮಟ್ಟದಲ್ಲಿ ಇಲ್ಲವಾದರು ಕನಿಷ್ಠ ಗೌರವಧನ ಕೊಡಬೇಕಾಗುತ್ತದೆ. ಆದರೆ ಈ ಕತೆಯ ಎಳೆ ಹುಟ್ಟಿದ ದಿನಗಳಲ್ಲಿ, ನನಗೆ ಮನೆ ಬಾಡಿಗೆ ಕಟ್ಟಲೂ ಕೂಡ ದುಸ್ಥರವಾದ ದಿನಗಳಾಗಿತ್ತು.

ಯಾವುದೋ ಸಣ್ಣ ಪುಟ್ಟ ಡಾಕ್ಯುಮೆಂಟರಿ ಮಾಡಲು ಹೋಗಿ, ಹಣ ಉಳಿಕೆಗಿಂತ ಕೈಯಿಂದಲೇ ಖರ್ಚು ಮಾಡಿ ಮುಗಿಸುವ ಪರಿಸ್ಥಿತಿ ತಂದಿರಿಸಿಕೊಂಡಿದ್ದೆ. ಸ್ನೇಹಿತರ ಸಿನೆಮಾ ಒಂದಕ್ಕೆ ಕಲಾ ನಿರ್ದೇಶನ ವಿಭಾಗದಲ್ಲಿ ಸಲಹೆ ನೀಡುವ ಕೆಲಸ ಮಾಡುತ್ತಿದ್ದರಿಂದ ಗಾಡಿ ಓಡಾಟ ಟೀ ತಿಂಡಿ ಖರ್ಚುಗಳಿಗೆ ಹೇಗೋ ಸರಿ ಹೋಗುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿ ನಾನಿರುವಾಗ, ನಿರ್ಮಾಪಕರು ಸಿಗುತ್ತಾರೆ ಎಂಬ ಯಾವ ಭರವಸೆಯೂ ಇಲ್ಲದ ದಿನಗಳಲ್ಲಿ, ಹಣವಿಲ್ಲ ಕತೆ ಬರೆದುಕೊಡಿ ಎಂದು ಯಾರನ್ನು ಕೇಳುವುದೋ ಎಂಬ ಪ್ರಶ್ನೆ ಬೃಹತ್ತಾಗಿ ಕಂಡಿತ್ತು.

ಹಣ ಒಂದು ಮುಖ್ಯವಾದ ಅಂಶವೇ ಆದರೂ ಸಹ, ಅದಕ್ಕಿಂತ ಮುಖ್ಯವಾಗಿ ನನಗೆ ಕತೆ ಬರೆದುಕೊಡುವ ಲೇಖಕಿಯೊಂದಿಗೆ ಮುಕ್ತವಾಗಿ ಮಾತನಾಡಿ ಚರ್ಚಿಸುವ ಹೊಂದಾಣಿಕೆ ಬೇಕಿತ್ತು. ಇದು ಕೇವಲ ಕತೆಯಾಗಿ ಬರೆದರಷ್ಟೇ ಸಾಕಾಗುವುದಿಲ್ಲ. ಆ ಕತೆಯೊಳಗೆ ಒಂದು ಭಾವ ತುಂಬಿಕೊಳ್ಳಬೇಕು, ನಿರೂಪಣೆಯಲ್ಲಿ ಪ್ರಯೋಗಗಳನ್ನು ಮಾಡಬೇಕಿತ್ತು. ನನ್ನ ತಲೆಯಲ್ಲಿರುವ ಹುಚ್ಚಾಲೋಚನೆಗಳನ್ನು ನಂಬುವಂತಹ ಲೇಖಕಿ ನನಗೆ ಬೇಕಿದ್ದುದು. ಒಂದು ವಾರ-ಹತ್ತು ದಿನಗಳು ಸಾಕಷ್ಟು ತಲೆ ಕೆಡಿಸಿಕೊಂಡ ನಂತರ ಆ‘ ಹೆಸರು’ ಬಲವಾಗಿ ತಲೆಯಲ್ಲಿ ಕೂತಿತು. ಅವರೇ ‘ಸಂಧ್ಯಾರಾಣಿ’ ಮೇಡಂ. 

ಸಂಧ್ಯಾರಾಣಿ ಮೇಡಂ ನನಗೆ ತುಂಬಾ ಹಳೆಯ ಪರಿಚಯವೇನೂ ಆಗಿರಲಿಲ್ಲ. ರಂಗಶಂಕರದ ‘ರಂಗ ಉಗಾದಿ’ಗೆ ಕುವೆಂಪುರವರ ಕವನವೊಂದನ್ನು ಓದುವ ಜವಾಬ್ದಾರಿ ಹಚ್ಚಿಸಿ, ಆ ಮೂಲಕ ಪರಿಚಯವಾದವರು. ಅದಕ್ಕೂ ಮೊದಲು ಅವರ ಲೇಖನಗಳನ್ನು, ಕವಿತೆಗಳನ್ನು ಓದಿದ್ದೆ. ಈ ಕತೆಯನ್ನು ಬರೆಯುವ ಕೆಲಸ ಅವರಿಗೆ ವಹಿಸುವ ಹಿಂದಿನ ಕಾರಣ, ಅವರು ಬರೆದಿದ್ದ ‘ಲಿಪ್ ಸ್ಟಿಕ್ ಅಂಡರ್ ಬುರ್ಖಾ’ ಕುರಿತ ಲೇಖನ.

ಆ ಲೇಖನ ಓದಿದ್ದ ನನಗೆ, ಸಂಧ್ಯಾ ಮೇಡಂರವರ ದೃಶ್ಯ ಗ್ರಹಿಕೆಯ ಮೇಲೆ ಗೌರವ ಮೂಡಿತ್ತು ಹಾಗೂ ಆ ಲೇಖನದ ಬಗ್ಗೆ ಸಾಕಷ್ಟು ಚರ್ಚೆಯೂ ಮಾಡಿದ್ದೆ. ಅದೊಂದು ಆರೋಗ್ಯಕರ ಚರ್ಚೆ, ಆ ಚರ್ಚೆಯ ಮೂಲಕ ನಾನು ಸಾಕಷ್ಟು ವಿಚಾರಗಳನ್ನು ಅರಿಯಲು ಸಾಧ್ಯವಾಗಿತ್ತು. ಆ ನಂತರದ ಪರಿಚಯ ನಮ್ಮಿಬ್ಬರ ನಡುವೆ ಸಾಕಷ್ಟು ವಿಷಯಗಳನ್ನು ಮುಕ್ತವಾಗಿ ಚರ್ಚಿಸುವಂತೆ ಮಾಡಿತ್ತು. ಎಲ್ಲಾ ವಿಷಯಗಳನ್ನು ಎಲ್ಲರೊಂದಿಗೆ ಮುಕ್ತವಾಗಿ ಚರ್ಚಿಸಲು ಸಾಧ್ಯವಾಗುವುದಿಲ್ಲ.

ಅದರಲ್ಲೂ ವಯಸ್ಸಿನ ಹಾಗೂ ಜೀವನಾನುಭವದಲ್ಲಿ ನಾನು ಅವರಿಗೆ ಯಾವ ರೀತಿಯಲ್ಲೂ ಸಮನಲ್ಲ ಎಂಬ ಎಚ್ಚರಿಕೆ ನನ್ನಲ್ಲಿ ಸದಾ ಜಾಗೃತವಾಗಿಯೇ ಇರುತ್ತಿತ್ತು. ಹಾಗಿದ್ದರೂ ಕೂಡ, ನನ್ನ ಸಂದೇಹಗಳನ್ನು ಗ್ರಹಿಕೆಗಳನ್ನು ಸಾಕಷ್ಟು ವಿವರವಾಗಿ ಚರ್ಚಿಸಿ ಗ್ರಹಿಸುವಲ್ಲಿ ಅವರು ನೆರವಾಗಿದ್ದರು. ಜೊತೆಗೆ ಅವರು ನಾಟಕಗಳನ್ನು ಬರೆದ ಅನುಭವವಿದೆ ಎಂದು ತಿಳಿದಿದ್ದರಿಂದ, ನನ್ನ ಪರಿಸ್ಥಿತಿಯನ್ನು ಯಥಾವತ್ತು ವಿವರಿಸಿ, ಕತೆ ಬರೆದುಕೊಡಿ ಎಂದು ಕೇಳುವುದು ಎಂದು ನಿಶ್ಚಯ ಮಾಡಿದೆ.

ಆದರೆ ಅದರ ಮೊದಲ ಪೀಠಿಕೆ ಹಾಕುವುದು ಹೇಗೆ? ಕಾಮದ ಕುರಿತಂತೆ ಹೆಣ್ಣಿನ ಭಾವನೆಗಳನ್ನು ಕತೆಯ ಮೂಲಕ ಬರೆದುಕೊಡಿ ಎಂದು ಕೇಳುವುದು ಹೇಗೆ? ಆ ಮೊದಲ ವಾಕ್ಯ ಹೇಗೆ ಪ್ರಾರಂಭಿಸುವುದು ಎಂಬ ಗೊಂದಲದಲ್ಲೇ ಒಂದಿಡೀ ದಿನ ಕಳೆಯಿತು.

‍ಲೇಖಕರು ಮಂಸೋರೆ

September 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: