ಅವರು ಹಾಗೆಯೇ ವಾಪಸು ಹೋಗದೆ ‘ಶಿವಸ್ವಾಮಿ’ ಎನ್ನುವ ಪಾತ್ರವನ್ನು ನನ್ನೊಳಗೆ ಸೃಷ್ಟಿಸಿಹೋದರು..

‘ಬುಕ್ ಬ್ರಹ್ಮ’ ಹಮ್ಮಿಕೊಂಡಿದ್ದ ಕಥೆ ಹಾಗೂ ಕಾದಂಬರಿ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಿನ್ನೆ ಜರುಗಿತು.

ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಎಂ ಆರ್ ದತ್ತಾತ್ರಿ ಅವರ ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಪಡೆದಿದೆ. ಅಂಕಿತ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಕಥಾ ಸ್ಪರ್ಧೆಯ ಮೊದಲ ಬಹುಮಾನವನ್ನು ಇಂದ್ರಕುಮಾರ್ ಎಚ್ ಬಿ ಅವರ ‘ಇರದ ಇರುವಿನ ತಂಪು’ ಕಥೆ ಪಡೆದುಕೊಂಡಿದೆ

ಈ ಪೈಕಿ ಎಂ ಆರ್ ದತ್ತಾತ್ರಿ ಅವರು ತಮ್ಮ ಸಂಭ್ರಮವನ್ನು ಹೀಗೆ ಹಂಚಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿನ ಅವರ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ

ಎಂ ಆರ್ ದತ್ತಾತ್ರಿ

‘ಬುಕ್‌ ಬ್ರಹ್ಮ’ ನನ್ನನ್ನು ಹೀರೋ ಮಾಡಿಬಿಟ್ಟಿತು. ನಿನ್ನೆಯಿಂದ ನನಗೆ ಬರುತ್ತಿರುವ ಕಾಲ್‌ಗಳು ಮತ್ತು ಮೆಸೇಜ್‌ಗಳ ಸಂಖ್ಯೆಯೇ ಅದಕ್ಕೆ ಸಾಕ್ಷಿ. ಒಬ್ಬ ಕನ್ನಡ ಕಾದಂಬರಿಕಾರನನ್ನು ಅವರು ಗುರುತಿಸಿದ ಪರಿ ವಿನೂತನ. ನನ್ನ ಮಟ್ಟಿಗೆ ಬಹಳ ಖುಷಿಕೊಟ್ಟ ಸಂಗತಿ. ಬುಕ್‌ ಬ್ರಹ್ಮಕ್ಕೆ ನನ್ನ ಕೃತಜ್ಞತೆಗಳು.

ನಾನು ಇನ್ನೂ ಅನೇಕ ಕಾರಣಗಳಿಗೆ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಬೇಕು. ನಿನ್ನೆ ಬೆಳಗ್ಗೆ ಒಂದು ವಿಶೇಷ ಕಾರ್ಯಕ್ರಮವಿತ್ತು. ತಮಿಳು ಕಾದಂಬರಿಗಾರ ಚಾರು ನಿವೇದಿತಾ ಮತ್ತು ಒಡಿಯಾ ಕತೆಗಾರ್ತಿ ಪರಮಿತಾ ಸತ್ಪತಿ ತ್ರಿಪಾಠಿಯವರೊಂದಿಗೆ ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನನಗೆ ಆತ್ಮೀಯವಾಗಿದ್ದ ಕಾರ್ಯಕ್ರಮ. ನಮ್ಮ ಕನ್ನಡದ ಸಹೋದರಿ ಭಾಷೆಗಳೊಂದಿಗೆ ನಮ್ಮ ಸಾಹಿತ್ಯ ಸಂವಾದಗಳು ಕಡಿಮೆ. ಆ ನಿಟ್ಟಿನಲ್ಲಿ ಬುಕ್‌ ಬ್ರಹ್ಮದ ಈ ನಡೆಯು ಅಭಿನಂದನಾರ್ಹ. ಹೋದವರ್ಷ ಕೂಡ ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿಗಾರ ದಾಮೋದರ್ ಮೌಜೊರನ್ನು ಕರೆಸಿ ಕನ್ನಡ ಕತೆಗಾರರು ಅವರೊಂದಿಗೆ ಸಂವಾದ ನಡೆಸಲು ಬುಕ್ ಬ್ರಹ್ಮ ಆಸ್ಪದ ಮಾಡಿಕೊಟ್ಟಿತ್ತು. ಜೊತೆಗೆ, ನನಗಾದ ದೊಡ್ಡ ಲಾಭವೆಂದರೆ ಮೂವತ್ತು ಪ್ರತಿಭಾವಂತ ಕನ್ನಡ ಕತೆಗಾರರೊಂದಿಗೆ ನಾನು ಬೆರೆಯಲು ಸಾಧ್ಯವಾಗಿದ್ದು. ಬೆರೆಯಲು ಕೊಂಚ ಸಂಕೋಚದವನಾದ ನನ್ನ ಚಳಿಯನ್ನು ಈ ಸ್ನೇಹಿತರು ಬಿಡಿಸಿದರು.

ನಿನ್ನೆ ಕಾರ್ಯಕ್ರಮದಲ್ಲಿ ತಾರಿಣಿ ಶುಭದಾಯಿನಿಯವರ ಪ್ರಶ್ನೆಗಳಿಗೆ ಹೇಗೆ ಉತ್ತರಿಸಿದೆನೊ ಗೊತ್ತಿಲ್ಲ. ನಾನು ಬರವಣಿಗೆಗೆ ಸೂಕ್ತವಾದ ವ್ಯಕ್ತಿಯೇ ಹೊರತು ಮಾತಿಗಲ್ಲ. ಅದೂ, ನನ್ನೊಳಗಿನ ಬರಹಗಾರ ಕೊಂಚ ವಿಚಿತ್ರದವನು. ಬೆಳಗ್ಗೆ ನಾಲ್ಕೂವರೆಗೆ ಅಂಗಡಿ ತೆರೆದು ಮೂರುಗಂಟೆ ವ್ಯಾಪಾರ ಮಾಡಿ ಏಳೂವರೆಗೆ ಬಾಗಿಲು ಹಾಕಿದರೆ ಮತ್ತವನು ಬರುವುದು ಮರುದಿನವೇ. ಉಳಿದ ಸಮಯದಲ್ಲಿ ಅವನ್ಯಾರೋ, ನಾನ್ಯಾರೋ. ಹಾಗಾಗಿ, ಅವನು ಹೇಳಬೇಕಾಗಿದ್ದ ಒಂದೆರಡು ಮಾತುಗಳನ್ನು ಇಂದು ಬರೆದುಕೊಟ್ಟಿದ್ದಾನೆ.

ನನ್ನ ಕತೆ ಬರೆಯುವ ಕ್ರಮ ಕೂಡ ಕೊಂಚ ವಿಲಕ್ಷಣ. ಮೂರು ವರ್ಷಗಳ ಹಿಂದೆ ಒಬ್ಬರು ಹಿರಿಯರು, ಅರವತ್ತರ ಆಸುಪಾಸಿನವರು, ನನ್ನ ಕಂಪನಿಯಲ್ಲಿ ಒಂದು ಜ್ಯೂನಿಯರ್ ಪೊಸಿಷನ್ನಿಗೆ ಇಂಟರ್‌ವ್ಯೂಗೆ ಬಂದಿದ್ದಾಗ ಅವರು ಹಾಗೆಯೇ ವಾಪಸು ಹೋಗದೆ ‘ಶಿವಸ್ವಾಮಿ’ ಎನ್ನುವ ಪಾತ್ರವನ್ನು ನನ್ನೊಳಗೆ ಸೃಷ್ಟಿಸಿಹೋದರು. ಅದು ಒಳಗೇ ಬೆಳೆದು ಕಾದಂಬರಿಯಾಯಿತು. ಪ್ರಪಂಚದಲ್ಲಿ ಒಬ್ಬರನ್ನೊಬ್ಬರು ಕೊಂಡುಕೊಳ್ಳಲು ನಡೆಯುವ ಪೈಪೋಟಿ, ಒಬ್ಬರ ಬೆಲೆಯನ್ನು ಮತ್ತೊಬ್ಬರು ನಿರ್ಣಯಿಸುವುದು, ಮೌಲ್ಯ-ಅಪಮೌಲ್ಯಗಳ ನಡುವಿನ ಕಂಡೂಕಾಣದ ಗೆರೆಯ ಮೇಲೆ ನಾಜೂಕಾಗಿ ನಡೆಯುವುದು, ಬೆಲೆಗೆ ಸಿಗದವರನ್ನು ನಿರ್ದಾಕ್ಷಿಣ್ಯವಾಗಿ ಅಪಮೌಲ್ಯಗೊಳಿಸುವುದು ಇವೆಲ್ಲ ನನಗೆ ಅಲ್ಲಮನ ನುಡಿ, ’ಸಂಸಾರವೆಂಬ ಹೆಣ ಬಿದ್ದಿರೆ; ತಿನಬಂದ ನಾಯ ಜಗಳವ ನೋಡಿರೇ!’ ಪದೇಪದೇ ಕಾಡಿತು. ಬಿಡಿ,ಬಿಡಿ – ಕಾದಂಬರಿಯೇ ನಿಮ್ಮ ಕೈನಲ್ಲಿರುವಾಗ ನಾನು ಅದರ ಕುರಿತು ಹೆಚ್ಚಿಗೆ ಹೇಳಬಾರದು.

ನಿನ್ನೆಯ ಸಮಾರಂಭದಲ್ಲಿ ನನಗೆ ಅನೇಕರನ್ನು ನೆನಪಿಸಿಕೊಳ್ಳಲಾಗಲಿಲ್ಲ. ಕೊನೆಪಕ್ಷ ಇಲ್ಲಿಯಾದರೂ ಬರೆಯಬಹುದೆಂದು ಕುಳಿತಿದ್ದೇನೆ.

ಕೆಲವು ಸೃಜನಶೀಲ ಸ್ನೇಹಿತರನ್ನು ಗಳಿಸಿಕೊಳ್ಳುವ ವಿಚಾರದಲ್ಲಿ ನಾನು ಮಹಾ ಅದೃಷ್ಟಶಾಲಿ. ನನ್ನ ಕಾದಂಬರಿಗಳ ಡ್ರಾಫ್ಟ್ ಓದಿ ಸ್ನೇಹದ ಮುಲಾಜಿಲ್ಲದೆ ತಮಗನ್ನಿಸಿದ್ದನ್ನು ತಿಳಿಸುವವರು. ನನ್ನ ಸ್ನೇಹದ ಪಟ್ಟಿಯಲ್ಲಿ ಹಿರಿಯರು, ಸಮವಯಸ್ಕರರು, ಕಿರಿಯರು, ವಿವಿಧ ಚಿಂತನೆಗಳವರು ಎಲ್ಲ ಸೇರಿಹೋಗಿದ್ದಾರೆ. ಕೆಲವು ಹೆಸರುಗಳನ್ನು ನಾನು ಬರೆಯಲೇ ಬೇಕು – ಎಚ್ಚೆಸ್ವಿ, ಎಸ್ ದಿವಾಕರ್, ಕೆ ಸತ್ಯನಾರಾಯಣ, ಬಿ ಆರ್ ಲಕ್ಷ್ಮಣರಾವ್, ಡುಂಡಿರಾಜ್, ಶತಾವಧಾನಿ ಆರ್ ಗಣೇಶ್, ವಸುಧೇಂದ್ರ, ಗುರುಪ್ರಸಾದ್ ಕಾಗಿನೆಲೆ, ನಾಗರಾಜ ವಸ್ತಾರೆ, ವಿವೇಕ್ ಶಾನಭಾಗ್, ಕರ್ಕಿ ಕೃಷ್ಣಮೂರ್ತಿ, ಪ್ರಶಾಂತ್ ಭಟ್, ಜ್ಯೋತಿ ಮಹಾದೇವ್, ಮತ್ತು ನನ್ನ ಪತ್ನಿ ರೂಪಾ. ಎಸ್ ದಿವಾಕರ್ ಜೊತೆ ಮಾತನಾಡಿದ ಪ್ರತಿ ಸಂದರ್ಭದಲ್ಲಿಯೂ ಒಂದು ಹೊಸ ಪುಸ್ತಕ ತಿಳಿಯುತ್ತದೆ ಮತ್ತು ಬರವಣಿಗೆಯ ಒಂದು ಹೊಸ ತಂತ್ರ ಮನಸ್ಸಿಗೆ ಬರುತ್ತದೆ.

ಈ ಕಾದಂಬರಿಯ ನಾಯಕ ಸಿದ್ಧಗಂಗೆಯ ಮಠದ ಮರದ ನೆರಳಿನಲ್ಲಿ ಅಲ್ಲಮನನ್ನು ಅರಿಯುತ್ತಾನೆ. ನನಗೆ ಅಲ್ಲಮನನ್ನುಮನಸ್ಸಿನ ಆಳಕ್ಕೆ ಮೊದಲು ಪರಿಚಯಿಸಿದವರು ಪ್ರೊಫೆಸರ್ ಓ ಎಲ್ ನಾಗಭೂಷಣಸ್ವಾಮಿಯವರು. ನಮ್ಮ ಅಭ್ಯಾಸ ತಂಡದ ಒಂದು ಕಾರ್ಯಕ್ರಮದಲ್ಲಿ ಅಲ್ಲಮನನ್ನು ಕುರಿತಾಗಿ ಅವರ ಮಾತುಗಳು ನನ್ನನ್ನು ಸಮ್ಮೋಹಗೊಳಿಸಿತು. ಮುಂದಿನ ಮೂರು ವರ್ಷಗಳು ನಾನು ಅಲ್ಲಮನನ್ನು ಬಿಡದೆ ಓದಿದೆ. ನಾನು ಪದೇಪದೇ ಕಾಲ್ ಮಾಡಿದರೂ ಬೇಸರಗೊಳ್ಳದೆ ಅನೇಕ ವಚನಗಳನ್ನು ನನಗೆ ವಿವರಿಸಿದವರು ಹಿರಿಯರಾದ ಎಚ್ಚೆಸ್ವಿ. ಇಂಜಿನಿಯರ್ ಆದ ಕಾರಣಕ್ಕೆ ಇವರೆಲ್ಲರ ಕಾಲೇಜು ತರಗತಿಗಳಲ್ಲಿ ಕೂರಲಾಗದ ದೌರ್ಭಾಗ್ಯ ಈ ರೀತಿ ಪರಿಹಾರ ಕಂಡುಕೊಂಡಿತು. ಶ್ರೀ ಸಿದ್ದೇಶ್ವರ ಸ್ವಾಮಿಗಳ ‘ಅಲ್ಲಮ ಪ್ರಭುದೇವರ ವಚನ-ನಿರ್ವಚನ’ ನಾನು ಯೋಚಿಸುವ ಪರಿಯನ್ನೇ ಸಂಪೂರ್ಣವಾಗಿ ಬದಲಿಸಿದ ಪುಸ್ತಕ. ಅದರ ಮುಂದೆ ನನ್ನ ಈ ಕಾದಂಬರಿ ಆನೆಯ ಮುಂದೆ ಇರುವೆಯಂತೆ.

ಇನ್ನೇನು ಬರೆಯಲಿ? ನಿನ್ನೆಯಂತೂ ಇಷ್ಟೊಂದು ಹೇಳಲಾಗುತ್ತಿರಲಿಲ್ಲ. ಈ ಪ್ರಶಸ್ತಿಯು ನನಗೆ ಬಹಳ ಸಂತೋಷವನ್ನು ತಂದಿತು.

‍ಲೇಖಕರು avadhi

August 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: