ಅವರು ‘ಅಲ್ಲಮಪ್ರಭು ಬೆಟ್ಟದೂರ’..

ಶಿಷ್ಯನ ನೆನೆದು ಬಂದ ಗುರುಗಳು…

ಸಿದ್ಧರಾಮ ಕೂಡ್ಲಿಗಿ

ಬೆಳಿಗ್ಗೆ ಕಾಲೇಜಿನಲ್ಲಿದ್ದಾಗ ಕೊಪ್ಪಳದಿಂದ ಫೋನ್ ಬಂತು. ಅದು ನನ್ನ ಗುರುಗಳ ಪತ್ನಿಯದು. ” ಸಿದ್ರಾಮ ಅವರೆ ನಿಮ್ ಸರ್ ಕೊಟ್ಟೂರಿಗೆ ಬಂದಾರ, ನಿಮ್ಮನ್ನ ಭಾಳ ನೆನಸಕತ್ತಾರ, ನಿಮ್ಮ ಕಡೆ ಬರಬೇಕಂದಾರ ” ಎಂದರು.

ನನಗೋ ಹಿಡಿಸಲಾರದ ಹಿಗ್ಗು. ನಾನು ಪಿಯುಸಿಯಲ್ಲಿದ್ದಾಗ ನನಗೆ ಕಲಿಸಿದ ಗುರುಗಳು ನನ್ನ ಮನೆಗೆ ಬರುವುದೆಂದರೆ ಅದಕ್ಕಿಂತ ಭಾಗ್ಯ ಯಾವುದಿದೆ ಎಂದು. ” ಆಗಲಿ ಅಕ್ಕಾರ ಅವ್ರಿಗೆ ಫೋನ್ ಮಾಡ್ತೀನ್ರಿ ” ಎಂದು ಹೇಳಿ ಗುರುಗಳಿಗೆ ಫೋನಾಯಿಸಿದೆ. ಕೊಟ್ಟೂರಿನಿಂದ ಬರಾಕತ್ತೀನಿ, ಅಲ್ಲಿ ಎಲ್ಲಿ ಬರಬೇಕು ಹೇಳ್ರಿ ” ಎಂದರು. ನಾನು ತಿಳಿಸಿದೆ. ಅವರು ಬಂದ ನಂತರ ಫೋನ ಮಾಡಿದರು. ಹೋಗಿ ಗುರುಗಳನ್ನು ಮನೆಗೆ ಕರೆತಂದೆ.

ಬರುವಾಗ ಅವರು ನನಗಾಗಿ ಹಣ್ಣುಗಳು, ಖಾರ ತಂದಿದ್ದರು. ಅವರ ಪ್ರೀತಿಗೆ ಮೂಕನಾದೆ. “ಖಾರ ಇಷ್ಟೊಂದು ತಂದೀರಲ್ಲ ಸರ್, ನಾನಿರೋದು ಒಬ್ಬನೇ ಏನ್ಮಾಡಲಿ ಇದನ್ನ ಹೆಂಗ ಖರ್ಚು ಮಾಡ್ಲಿ ?” ಎಂದೆ. “ಉಪ್ಪಿಟ್ಟನ್ಯಾಗ ಹಾಕ್ಕೊಂಡ್ ತಿನ್ರಿ” ಎಂದು ನಕ್ಕರು. ನಾನೂ ನಕ್ಕೆ. ಅವರೇ ಕೊಪ್ಪಳದ ಬಂಡಾಯ ಸಾಹಿತಿ, ಕವಿ, ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರ ಅವರು.

ಮನೆಗೆ ಬಂದ ನಂತರ ಕ್ಷೇಮ ಸಮಾಚಾರ ನಡೆಯಿತು. ಅತ್ಯಂತ ಸರಳ ವ್ಯಕ್ತಿಯಾದ ನನ್ನ ಗುರುಗಳು ಮಾತನಾಡುತ್ತಲೇ ಇದ್ದರು. “ಊಟ ಮಾಡ್ಕೊಂಡ ಬಂದೀನಿ” ಎಂದರು. ಆದರೂ ಅವರನ್ನು ಉಪಚರಿಸಿದೆ. ಖುಷಿಯಾದರು. ಸಾಹಿತ್ಯ, ರಾಜಕೀಯದ ಬಗ್ಗೆ ಮಾತನಾಡಿದೆವು. ನನ್ನ ಫೋಟೊಗ್ರಫಿ ಬಗ್ಗೆ ಕೇಳಿದರು. “ನೀನು ತೆಗೆದ ಫೋಟೊ ಎಲ್ಲ ನನಗ ವಾಟ್ಸಪ್ ಗೆ ಕಳ್ಸು” ಎಂದರು. “ಆಯ್ತು ಸರ್” ಎಂದೆ. “ಸ್ವಲ್ಪ ರೆಸ್ಟ್ ಮಾಡ್ತೀನಪಾ ” ಎಂದರು. ಬೇಡವೆಂದರೂ ಕೇಳದೆ ” ಥಣ್ಣಗೈತಿ ” ಎಂದು ಬರಿ ನೆಲದ ಮೇಲೆಯೇ ವಿಶ್ರಾಂತಿ ಪಡೆದರು.

ಚೆನ್ನಾಗಿ ನಿದ್ದೆ ಮಾಡಿ ಎದ್ದ ಗುರುಗಳು, “ಛೊಲೋ ನಿದ್ದಿ ಆತಪಾ” ಎಂದು, ಮನೆಯವರೆಲ್ಲರ ಕುರಿತು ವಿಚಾರಿಸಿದರು. ಮೊದಲಿನಿಂದಲೂ ನಮ್ಮ ಕುಟುಂಬದ ಬಗ್ಗೆ ಅಪಾರ ಕಾಳಜಿ, ಪ್ರೀತಿ ಇರುವ ಗುರುಗಳು. ಎಲ್ಲವನ್ನೂ ಹೇಳಿದೆ. ಕೇಳಿ ಖುಷಿಪಟ್ಟರು. “ಅಪೂರ್ವ, ಆಕಾಶ ಎಲ್ಲದಾರ ಏನ್ಮಾಡಕತ್ತಾರ ?” ಎಂದು ಕೇಳಿದರು. ಮನೆಯಾಕೆಗೆ ಫೋನ್ ಮಾಡಿ ಗುರುಗಳು ಬಂದಿರುವ ವಿಷಯ ತಿಳಿಸಿದೆ. ಗುರುಗಳ ಜೊತೆಗೆ ಮಾತನಾಡಿಸಿದೆ.

ಮನೆಯಲ್ಲಿ ಮಂಡಕ್ಕಿ ಖಾರ ಇದ್ದವು, ಇಬ್ಬರೂ ಸೇವನೆ ಮಾಡಿದೆವು. ಚಹಾ ಮಾಡಿದೆ, ಕುಡಿದ ನಂತರ ಇದ್ದು ಹೋಗಿ ಎಂದು ಹೇಳಿದರೂ ಕೇಳದೆ “ಇಲ್ಲ ಇಲ್ಲ ಮತ್ತ ಬರ್ತೀನಿ” ಎಂದರು. ನಾನು ಕ್ಲಿಕ್ಕಿಸಿದ ಫೋಟೊಗಳ ಕ್ಯಾಲೆಂಡರ್ ನ್ನು ಅವರಿಗೆ ಕೊಟ್ಟೆ. ನೋಡಿ ಸಂತೋಷಪಟ್ಟರು. ನಾನು ಕಾರು ತೆಗೆದುಕೊಂಡದ್ದು ಹೇಳಿದೆ. ಖುಷಿಪಟ್ಟರು. “ಇಲ್ಲಿ ಕೂಡ್ರಿ ಸರ್ ನಿಮ್ ಫೋಟೊ ತೆಗೀತೀನಿ” ಎಂದೆ. ಮಗುವಿನಂತೆ ಕುಳಿತು ಪೋಸ್ ಕೊಟ್ಟರು. ನಂತರ ಬಸ್ ನಿಲ್ದಾಣದವರೆಗೆ ಕಾರಿನಲ್ಲಿ ಕರೆದೊಯ್ದು, ಬಸ್ ಹತ್ತಿಸಿದೆ. ಭಾರವಾದ ಮನಸಿನಿಂದ ಮನೆಗೆ ಬಂದೆ.

ನಾನು ಸ್ವಲ್ಪವಾದರೂ ಯಾವುದೇ ವಿಚಾರಗಳನ್ನು ಕ್ರಮಬದ್ಧವಾಗಿ, ಸ್ಪಷ್ಟವಾಗಿ ಮಾತನಾಡಲಾದರೂ, ಬರೆಯಲಾದರೂ ಕಲಿತಿದ್ದರೆ ಅದು ಅವರಿಂದ. ಹೊಸ ವಿಚಾರಗಳು, ಆಲೋಚನೆಗಳು, ಪ್ರಗತಿಪರ ವಿಚಾರಧಾರೆಗಳು ಅವರಿಂದಲೇ ನಾನು ಪ್ರಭಾವಿತಗೊಂಡದ್ದು. ಅವರ ತರಗತಿಯೆಂದರೆ ನನಗೆ ಅಚ್ಚುಮೆಚ್ಚಿನದಾಗಿತ್ತು. ನಾನು ಬರೆದ ಕವನಗಳನ್ನು ಅವರ ಬಳಿ ತೋರಿಸುತ್ತಿದ್ದೆ, ಅವರು ಮಾರ್ಗದರ್ಶನ ನೀಡುತ್ತಿದ್ದರು. ಹೊಸ ರೀತಿಯ ಬರವಣಿಗೆಗೆ ಪ್ರೋತ್ಸಾಹಿಸುತ್ತಿದ್ದರು. ಅಷ್ಟೇ ಪ್ರೀತಿ, ಕಾಳಜಿ ಅವರಲ್ಲಿತ್ತು. ಮನೆಗೆ ಹೋದರೆ ಉಪಚರಿಸದೆ ಕಳಿಸುತ್ತಿರಲಿಲ್ಲ. ಒಂದೇ ಕುಟುಂಬದ ಭಾವ ನಮ್ಮ ಅವರ ಮನೆಯ ಮಧ್ಯೆ ಇತ್ತು.

ನನ್ನ ತಂದೆಯವರೊಂದಿಗೂ ಗುರುಗಳದ್ದು ಮೊದಲಿನಿಂದಲೂ ಒಡನಾಟ. ಯಾವುದೇ ಗೋಷ್ಠಿ, ಚರ್ಚೆ, ಸಭೆಗಳಿದ್ದರೂ ಬರಲಿಕ್ಕೆ ಹೇಳುತ್ತಿದ್ದರು. ನಾನು ವೃತ್ತಿಯ ನಿಮಿತ್ಯ ಬೇರೆ ಊರಿಗೆ ಬಂದ ನಂತರ ಅವರೊಂದಿಗಿನ ಒಡನಾಟ ಕಡಿಮೆಯಾಯಿತಾದರೂ. ಆಗಾಗ ಫೋನ್ ಮಾಡಿ ಮಾತನಾಡುತ್ತಿದ್ದರು. ಇದೀಗ ತುಂಬಾ ವರ್ಷಗಳ ನಂತರ ನೆನಪಿಸಿಕೊಂಡು ಮನೆಗೆ ಬಂದದ್ದು ನನಗೆ ಮತ್ತಷ್ಟು ಚೈತನ್ಯ ಬಂದಂತಾಯಿತು. ಅವರ ಪ್ರೀತಿಗೆ ನಾನು ಮಾತು ಬಾರದೆ ಮೂಕನಂತಾಗಿಬಿಟ್ಟೆ.

ಗುರು-ಶಿಷ್ಯರ ಬಾಂಧವ್ಯವೇ ಅಂತಹದ್ದು. ಶಿಷ್ಯನ ಏಳಿಗೆಯನ್ನು ಕಂಡು ಸಂಭ್ರಮಿಸುವವರೇ ನಿಜವಾದ ಶಿಕ್ಷಕರು. ಆ ಗುಣ ನನ್ನ ಗುರುಗಳಲ್ಲಿದೆ.

ನನ್ನ ಮನೆಗೆ ಬಂದು ಹೋದ ಅವರ ಪ್ರೀತಿಗೆ, ಹಾರೈಕೆಗಳಿಗೆ ನನ್ನ ಸಾವಿರ ನಮನಗಳು.

ಮರೆತಿದ್ದೆ : ಗುರುಗಳ ಬಳಿ ಕಲಿತದ್ದು ನಾನಷ್ಟೇ ಅಲ್ಲ, ನನ್ನ ಮಗಳೂ ಅವರ ಶಿಷ್ಯಳೇ. ತಂದೆ ಮಗಳಿಗೆ ಕಲಿಸಿದ ಗುರುಗಳು. ಇದಕ್ಕಿಂತ ನನಗೆ ಬೇರೆ ಹೆಮ್ಮೆ ಏನಿದೆ ?

‍ಲೇಖಕರು avadhi

June 9, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: