ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನ ಮೈತುಂಬ ಕವಿತೆಗಳು ಆವರಿಸಿಕೊಂಡಿವೆ..

ಭವ್ಯ ಕಬ್ಬಳಿ 

ಅವಳು, ಕಡಲಿನ ಚಿತ್ರವೊಂದನ್ನು
ಬಿಡಿಸಿಕೊಡು ಎಂದಳು
ಇವನು, ಅಮವಾಸ್ಯೆಯ ದಿನ
ಬಿಡಿಸಿದ ಚಿತ್ರದಲ್ಲಿ
ತುಂಬು ಚಂದ್ರನನ್ನೂ
ತಂದು ಕೂರಿಸಿದ
ಅವಳು, ಸುಳ್ಳು ಎಂದ ಕೂಡಲೆ
ಚಂದ್ರನನ್ನು ಅಳಿಸಿಬಿಟ್ಟ
ಈ ದಿನ “ಹುಣ್ಣಿಮೆ” ಎಂದಳು,
ಕಡಲಿನ ಚಿತ್ರ ಛಿದ್ರವಾಗಿ
ಕಡಲು ಸೇರಿತ್ತು

ಆಗಸದ ಚಂದ್ರನನ್ನೂ ಹುಡುಕದೆ,
ತೇಲಿಬರುವ ಅಲೆಗಳಲ್ಲಿ
ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು,
ಅವರಿನ್ನೂ ದಡದಲ್ಲಿ ಕುಳಿತು
ತಾರೆಗಳನೆಣಿಸುತ್ತಿದ್ದಾರೆ,
ಎಣಿಕೆ ಒಂದೇ ಆಗುವ ತನಕ
ಇಬ್ಬರೂ ಜೊತೆಯಲ್ಲೆ ಎನ್ನುವ ಭಾಷೆಯೊಂದಿಗೆ


ಅವನ ಮೈತುಂಬ
ಕವಿತೆಗಳು ಆವರಿಸಿಕೊಂಡಿವೆ

ಸುಧೀರ್ಘ ಮೌನತೊಟ್ಟ
ಕವಿಯೊಬ್ಬನನ್ನು ಮಾತನಾಡಿಸಲು
ಅವನ ಮೈತುಂಬ
ಕವಿತೆಗಳು ಆವರಿಸಿಕೊಂಡಿವೆ

ಕೆಲವು ಕಚಗುಳಿಯಿಟ್ಟು
ರಮಿಸುವ‌ ಪ್ರಯತ್ನದಲ್ಲಿ,
ಕೆಲವು ಮಾತನಾಡೆನ್ನುತ್ತ,
ಕೆಲವು ಹೆಗಲಾಗುತ್ತ,
ಕೆಲವು ಮುದ್ದಿಸೆನ್ನುತ್ತಾ,
ಕೆಲವು ಹೋಗಲಿ
ಒಮ್ಮೆ ಅತ್ತುಬಿಡು ಎನ್ನುತ್ತಾ
ಇನ್ನು ಕೆಲವು ಕವಿತೆಗಳು
ತಾವೂ ಮೌನವಾಗಿ
ಇವನ ಮಾತುಗಳಿಗಾಗಿ ಕಾಯುತ್ತಾ

ಕವಿ, ಎಲ್ಲ ಕವಿತೆಗಳಿಗೊಂದು ಕವಿತೆ ಕಟ್ಟಿ
ಜೋಗುಳ ಹಾಡಿ ಮತ್ತೆ ಮಲಗಿಸಿಬಿಟ್ಟ

ಅರೆನಿದ್ರೆಯಲ್ಲಿ ಎಚ್ಚರಗೊಂಡ‌ ಕವಿತೆಯೊಂದು,
ಕವಿಗೆ ಮಡಿಲಾಗುತ್ತದೆ,
ಈಗ ಕವಿಯ ಕಣ್ತುಂಬ ಕವಿತೆಗಳ‌ ಸರಣಿ ಒಂದರಿಂದೊಂದಾಗಿ,
ಮತ್ಯಾವುದೋ‌ ಕವಿತೆಯ ತುದಿಬೆರಳೊಂದು
ಕವಿಯ ಕಣ್ಣೊರೆಸುತ್ತದೆ

ಮೊಲೆಹಾಲುಣಿಸುತ್ತಿರುವ
ತಾಯಿಯೊಬ್ಬಳು
ಕಂದನನ್ನು ನೋಡುತ್ತಾ
ಒಮ್ಮೊಮ್ಮೆ ತಟ್ಟನೆ
ಮೌನತೊಟ್ಟು ಬಿಡುತ್ತಾಳೆ,
ಒಮ್ಮೊಮ್ಮೆ ಕವಿಯೂ…

ಹೆಸರಿಲ್ಲದ ಭಾವಗಳು ಕೆಲವಷ್ಟೆ!
ಮಾತನಾಡಬಲ್ಲ ಮೌನವೂ, ಕೆಲವರಿಗಷ್ಟೆ!
ಒಂಟಿತನವೆನ್ನುವುದು ಒಂಟಿಯೆಂದುಕೊಂಡವರಿಗಷ್ಟೆ!

‍ಲೇಖಕರು avadhi

28 May, 2018

2 Comments

  1. amith gangdhar

    Good one… Bhavya

    • Bhavya

      Thank You

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading