ಅವತ್ತು ಆಗಸ್ಟ್ 6, 1945

ಭಾರತಿ ಬಿ ವಿ 

ಅವತ್ತು ಆಗಸ್ಟ್ 6, 1945 –

ಸುಟೋಮು ಯಾಮಾಗುಚಿ ಅನ್ನುವ 29 ವರ್ಷದ ಯುವಕ ಹಿರೋಷಿಮಾದಿಂದ ಹುಟ್ಟೂರಾದ ನಾಗಾಸಾಕಿಗೆ ಹಿಂತಿರುಗಿ ಹೊರಟಿರುತ್ತಾರೆ. ಅವರು ಕೆಲಸ ಮಾಡುತ್ತಿದ್ದ ಮಿಟ್ಸುಬಿಷಿ ಎಂಬ ಕಂಪನಿಯು
ಒಂದು ಸಬ್ ಮೆರೀನ್‌ನ ತಯಾರಿಕೆಯ ಸಂಬಂಧವಾಗಿ ಮೂರು ತಿಂಗಳ ಪ್ರಾಜೆಕ್ಟ್ ಒಂದಕ್ಕೆ ಅವರನ್ನು ಹಿರೋಷಿಮಾಗೆ ಕಳಿಸಿರುತ್ತದೆ. ಅವತ್ತಿಗೆ ಮೂರು ತಿಂಗಳು ಮುಗಿಯುತ್ತದೆ
ಎನ್ನುವ ಖುಷಿ ಯಾಮಾಗುಚಿಗೆ. ಜಪಾನಿನ ನೇಪಲ್ಸ್ ಎಂದು ಕರೆಸಿಕೊಳ್ಳುವ ನಾಗಾಸಾಕಿ ಎಲ್ಲ ನಗರಗಳಂತಲ್ಲದೇ ಜಪಾನೀಯರು, ಚೀನೀಯರು, ಡಚ್ ಮತ್ತು ಪೋರ್ಚುಗೀಸರು ಎಲ್ಲರನ್ನೂ
ತನ್ನದಾಗಿಸಿಕೊಂಡು ವಿವಿಧ ಸಂಸ್ಕೃತಿಗಳನ್ನೊಳಗೊಂಡ ಜೀವ ತುಂಬಿಕೊಂಡಂಥ ನಗರ. ಅಲ್ಲಿನ ಕ್ಯಾಸೆಲ್ಲೊ ಎನ್ನುವ ಕೇಕ್, ಓಕುಂಚಿ ಎನ್ನುವ ಸಾಂಸ್ಕೃತಿಕ ಹಬ್ಬ, ಅಲ್ಲಿದ್ದ
ಅಪ್ಪ-ಅಮ್ಮ-ಹೆಂಡತಿ, ಹೊಸದಾಗಿ ಹುಟ್ಟಿದ್ದ ಪುಟ್ಟ ಕೂಸು ಎಲ್ಲವನ್ನೂ ಪ್ರೀತಿಸುವ ಯಾಮಾಗುಚಿಗೆ ಯಾವಾಗ ನಾಗಾಸಾಕಿಗೆ ಮರಳುತ್ತೇನೋ ಅನ್ನುವ ತಹತಹ.

ಮರುದಿನ, ಅಂದರೆ 7ನೆಯ ತಾರೀಖು ಆತ ನಾಗಾಸಾಕಿಗೆ ಹೊರಡಬೇಕಿರುತ್ತದೆ. ಹಾಗಾಗಿ ಮಿಟ್ಸುಬಿಷಿ ಆಫೀಸಿನ ವಸತಿಗೃಹದಿಂದ ಎಲ್ಲ ವಸ್ತುಗಳನ್ನೂ ಪ್ಯಾಕ್ ಮಾಡಿಕೊಂಡು
ಆಫೀಸಿಗೆ ಕೊನೆಯ ಭೇಟಿ ನೀಡಿದ ನಂತರ ಹೊರಡಬೇಕಿರುತ್ತದೆ. ಇಬ್ಬರು ಗೆಳೆಯರಾದ ಅಕಿರಾ ಇವಾನಾಗ ಮತ್ತು ಕುನಿಯೋಷಿ ಸಾಟೋ ಜೊತೆಯಲ್ಲಿರುತ್ತಾರೆ. ಆದರೆ ಒಂದಷ್ಟು ದೂರ ಬಂದ
ಮೇಲೆ ಅವರಿಗೆ ರೂಮಿನಲ್ಲಿಯೇ ಐಡೆಂಟಿಟಿ ಕಾರ್ಡ್ ಮರೆತು ಬಂದಿದ್ದು ನೆನಪಾಗುತ್ತದೆ.

ಗೆಳೆಯರಿಬ್ಬರನ್ನೂ ಮುಂದೆ ನಡೆಯುತ್ತಿರಲು ಹೇಳಿ ಅವರು ರೂಮಿಗೆ ವಾಪಸ್ಸಾಗಿ, ಅದನ್ನು ತೆಗೆದುಕೊಂಡು ಮತ್ತೆ ಹೊರಡುತ್ತಾರೆ. ಆಲೂಗಡ್ಡೆಯ ಗದ್ದೆಯ ಮೂಲಕವಾಗಿ ಬರುತ್ತಿರುವಾಗ
ಆಕಾಶದಲ್ಲಿ ಇದ್ದಕ್ಕಿದ್ದಂತೆ ವಿಮಾನವೊಂದರ ಸದ್ದು ಕೇಳಿಸುತ್ತದೆ. ತಲೆ ಎತ್ತಿ ನೋಡಿದಾಗ ವಿಮಾನದಿಂದ ಏನೋ ವಸ್ತುವೊಂದು ಕೆಳಗೆ ಬಿದ್ದಿದ್ದು ಕಾಣಿಸುತ್ತದೆ. ಅದೇನಿರಬಹುದು ಎಂದು ಯೋಚಿಸುವಾಗಲೇ ಆಕಾಶದ ತುಂಬ ಬೃಹತ್ ಬೆಳಕೊಂದು ಹರಡಿ, ಜೊತೆಗೆ ಭೀಕರ ಸದ್ದೊಂದು ಕೇಳಿಸಿ, ಹಿಂದೆಯೇ ಎದೆ ನಡುಗಿಸುವಂತ ಸ್ಫೋಟವೊಂದು ಕೇಳಿಸುತ್ತದೆ. ಮತ್ತೇನೂ ಯೋಚಿಸುವ ಮೊದಲೇ ಯಾಮಾಗುಚಿಯ ದೇಹ ತುಸು ಎತ್ತರಕ್ಕೆ ಹಾರಿ, ನಂತರ ಪ್ರಜ್ಞೆ ತಪ್ಪಿ ನೆಲಕ್ಕೆ ಅಪ್ಪಳಿಸುತ್ತದೆ.

ಹೀಗೆ ಹಿರೋಷಿಮಾದ ಮೇಲೆ “ಲಿಟಲ್ ಬಾಯ್” ಅಣುಬಾಂಬ್ ಅಪ್ಪಳಿಸಿರುತ್ತದೆ!

ಅದೆಷ್ಟೋ ಹೊತ್ತು ಜ್ಞಾನ ತಪ್ಪಿ ಬಿದ್ದಿದ್ದ ಯಾಮಾಗುಚಿಗೆ ಎಚ್ಚರವಾದಾಗ ತಾನು ಸೇತುವೆಯೊಂದರ ಮೇಲೆ ಬಿದ್ದಿರುವುದು ತಿಳಿಯುತ್ತದೆ. ಅವರ ಎಡಗಿವಿ ಸಂಪೂರ್ಣವಾಗಿ ಕಿವುಡಾಗಿರುತ್ತದೆ, ಮುಖ ಮತ್ತು ಎಡಗೈ ಸುಟ್ಟು ಹೋಗಿರುತ್ತದೆ. ನರಳುತ್ತ ಕಣ್ಣು ತೆಗೆದವರಿಗೆ ಆಗಸದ ತುಂಬ ಹರಡಿದ್ದ ಬೃಹತ್ ಅಣಬೆಯಂಥ ಹೊಗೆಯಷ್ಟೇ ಕಾಣಿಸುತ್ತದೆ. ಇದ್ದಬದ್ದ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಂಡು ಕಾಲೆಳೆಯುತ್ತ ಹೊರಟಾಗಲೇ ಅವರಿಗೆ ಪರಿಸ್ಥಿತಿಯ ಭೀಕರತೆ ಅರ್ಥವಾಗುವುದು… ರಸ್ತೆಯ ತುಂಬ ಹರಡಿ ಬಿದ್ದಿದ್ದ ಸುಟ್ಟು ಕರಕಲಾದ ಹೆಣಗಳು, ನರಳುತ್ತಾ ಗುಟುಕು ನೀರು ಬೇಡುವ ಕುಟುಕು ಜೀವದವರು ಎಲ್ಲ ಸೇರಿದ ಹಿರೋಷಿಮಾ ನರಕದಂತಿರುತ್ತದೆ … ಇಡಿಯ ಹಿರೋಷಿಮಾ ನಿರ್ನಾಮವಾಗಿರುತ್ತದೆ!

ಅದನ್ನೆಲ್ಲ ನೋಡಿಯೂ ಯಾಮಾಗುಚಿಗೆ ಅಲ್ಲಿಂದ ಪಾರಾಗಬೇಕೆನ್ನುವ ಸ್ಥೈರ್ಯ ಹುಟ್ಟುವುದು ಪುಟ್ಟ ಮಗನ ನೆನಪೊಂದರಿಂದ ಮಾತ್ರ. ಒಬ್ಬನೇ ತೂರಾಡುತ್ತ ನಡೆಯುತ್ತಾರೆ.  ಈ ಕ್ಷಣವನ್ನು ಕುರಿತು ಅವರು Raft of corpses ಎಂಬ ಕವನ ಸಂಕಲನದಲ್ಲಿ ಹೀಗೆಂದು ಹೃದಯ ನಡುಗುವಂತೆ ಬರೆಯುತ್ತಾರೆ…

ಆ ಅರೆಸುಟ್ಟ ದೇಹಗಳ ಮೇಲೆ
ಕಾಲಿಡಬಾರದೆಂದು ಅಂದುಕೊಳ್ಳುತ್ತಲೇ
ಅವುಗಳ ಮೇಲೆಯೇ ಕಾಲಿಟ್ಟೆ
ಮತ್ತು ಬೆಂದುಹೋದ ಪಕ್ಕೆಲುಬುಗಳು ಕಂಡವು,
ಅವರ ಧೈರ್ಯಕ್ಕೆ
ಹಳದಿ ಬಣ್ಣದ ಛಾಯೆಯಿತ್ತು …

ಅದೃಷ್ಟವಶಾತ್ ಸಂಜೆಯ ವೇಳೆಗೆ ಬದುಕುಳಿದ ಗೆಳೆಯರಿಬ್ಬರೂ ಕೂಡಾ ಸಿಗುತ್ತಾರೆ. ಮೂವರೂ ಹೇಗೋ ಮಾಡಿ ಮಿಟ್ಸುಬಿಷಿ ಆಫೀಸಿಗೆ ಹೋದರೆ ಅದು ಸಂಪೂರ್ಣವಾಗಿ ನೆಲಸಮವಾಗಿರುತ್ತದೆ. ಆ
ರಾತ್ರಿ ನಿರಾಶ್ರಿತರ ಶಿಬಿರವೊಂದರಲ್ಲಿ ಕಳೆಯುತ್ತಾರೆ. ಮರುದಿನ ನಾಗಾಸಾಕಿಗೆ ಹೊರಡಲಿರುವ ರೈಲನ್ನು ಹಿಡಿಯಲೇಬೇಕೆಂದು ತೀರ್ಮಾನಿಸುತ್ತಾರೆ. ನಸುಕಿನಲ್ಲಿ ಎದ್ದು ಮೂರ್ನಾಲ್ಕು ಕಿಲೋಮೀಟರ್ ದೂರವಿರುವ ರೈಲ್ವೆ ನಿಲ್ದಾಣಕ್ಕೆ ಹೋಗುವಾಗ ಪರಿಸ್ಥಿತಿ ಎದೆ ನಡುಗಿಸುವಂತೆ ಇರುತ್ತದೆ. ದಾರಿಯುದ್ದಕ್ಕೂ ಎಲ್ಲೆಲ್ಲೂ ಹೆಣಗಳು ಕಾಲಿಗೆ ತೊಡರುತ್ತವೆ. ಸುಟ್ಟು ಕರಕಲಾಗಿ ಜಠರ, ಶ್ವಾಸಕೋಶ, ಕರುಳು ಎಲ್ಲವೂ ಕರಗಿ ನೆಲಕ್ಕಂಟಿದ
ನೆಲದ ಮೇಲೆಯೇ ನಡೆಯುತ್ತಾರೆ. ದಾರಿಯಲ್ಲಿ ಸತ್ತ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ತೆವಳುತ್ತ ನಡೆಯುತ್ತಿದ್ದ ತಾಯಿ, ಹೊಸತಾಗಿ ಮದುವೆಯಾದ ವಧುವನ್ನು ಅಪ್ಪ-ಅಮ್ಮನಿಗೆ ತೋರಿಸಲು ಹೋಗುವಾಗ ಸತ್ತುಹೋದ ಹುಡುಗಿಯ ಗಂಡ ಹೀಗೆ ಎದುರಾದ ಕೆಲವೇ ಬದುಕಿದ್ದವರ ಸ್ಥಿತಿಯೂ ಭಯಾನಕವೇ. ಆದರೆ ಯಾರಿಗೆ ಯಾರು ಸಹಾಯ ಮಾಡಬೇಕು? ಎಲ್ಲರೂ ಹೀನ ಸ್ಥಿತಿಯಲ್ಲಿರುವವರೇ.

ಅಷ್ಟರಲ್ಲಿ ನದಿಯೊಂದು ಎದುರಾಗುತ್ತದೆ. ಇದ್ದ ಬದ್ದ ಎಲ್ಲ ಸೇತುವೆಗಳೂ ಮುರಿದು ಬಿದ್ದಿರುತ್ತವೆ. ಹಾಗಾಗಿ ಅದನ್ನು ದಾಟುವುದು ಹೇಗೆಂದು ಯೋಚಿಸಿ ಕೊನೆಗೆ ವಿಧಿಯಿಲ್ಲದೆ ದಡದ ತುಂಬ ಹರಡಿ ಬಿದ್ದಿದ್ದ ಕೆಲ ಹೆಣಗಳನ್ನು ಎಳೆದು ಸರಿಸಿ ದಾರಿ ಮಾಡಿಕೊಂಡು, ಕಾಲುವೆಯ ತುಂಬ ತೇಲುತ್ತಿದ್ದ “ಹೆಣಗಳ ತೆಪ್ಪದ” ಮೇಲೆಯೇ ನಡೆದು ಹೋಗಬೇಕೆಂದು ತೀರ್ಮಾನಿಸುತ್ತಾರೆ. ಆ ಸ್ಥಿತಿಯಲ್ಲಿಯೂ ಗಾಯಗೊಂಡ ಎಡಗೈಗೆ ನೀರು
ಬಿದ್ದರೆ ಕೀತು ವ್ರಣವಾಗಬಹುದೆಂಬ ಎಚ್ಚರಿಕೆ ಇತ್ತು ಎಂದು ವಿಷಾದದಿಂದ ಹೇಳುತ್ತಾ, ಆ ಭೀಭತ್ಸ ಘಳಿಗೆಯನ್ನು ಮತ್ತೆ ಸಾಯುವವರೆಗೂ ಮರೆಯಲಾಗಲೇ ಇಲ್ಲ ಎನ್ನುತ್ತಾರೆ ಯಾಮಾಗುಚಿ…

ಮಹಾನ್ ನಗರ ಹಿರೋಶಿಮಾದಲ್ಲಿ
ಧಗಧಗಿಸುತ್ತಾ, ಅಬ್ಬರಿಸುತ್ತಾ
ಈ ದಿನದ ಮುಂಜಾವು ಕಾಲಿರಿಸಿತು.
ನದಿಯಲ್ಲಿ ಮಾನವ ದೇಹಗಳ ತೆಪ್ಪವೊಂದು
ತೇಲುತ್ತಾ ನನ್ನ ದಿಕ್ಕಿಗೆ ಬಂದಿತು…

***
ಆ ಗಾಯಗಳೊಡನೆ, ನೂಕು ನುಗ್ಗಲಿನಲ್ಲಿ ಅಂತೂ  ಹೇಗೋ ಮಾಡಿ 300 ಕಿಲೋಮೀಟರ್‌ ಪ್ರಯಾಣಿಸಿ ಆಗಸ್ಟ್ 8 ರಂದು ನಾಗಾಸಾಕಿ ತಲುಪುತ್ತಾರೆ. ಅಲ್ಲಿ ಅಪಾಯದ ಸೈರನ್ ಕೂಗಿದ್ದರಿಂದ ಇಡಿಯ ನಗರದಲ್ಲಿ ಯಾರೆಂದರೆ ಯಾರೂ ಇಲ್ಲ. ರಸ್ತೆಗಳೆಲ್ಲ ಬಿಕೋ ಎನ್ನುತ್ತಿರುತ್ತವೆ. ಆದರೆ ಅಷ್ಟರಲ್ಲಾಗಲೇ ಗಾಯಗಳಲ್ಲಿ ಕೀವು ತುಂಬಿ ಯಾಮಾಗುಚಿಗೆ ಯಮಯಾತನೆ ಶುರುವಾಗಿರುತ್ತದೆ. ಹಿರೋಷಿಮಾದಲ್ಲಿ ಕೇವಲ ಪ್ರಥಮ ಚಿಕಿತ್ಸೆ ಮಾತ್ರ ದೊರಕಿರುತ್ತದಷ್ಟೇ. ಹಾಗಾಗಿ ನೇರವಾಗಿ ಮಿಟ್ಸುಬಿಷಿ ಕಂಪನಿಯ ಆಸ್ಪತ್ರೆಗೆ ಹೋಗುತ್ತಾನೆ. ಅಲ್ಲಿಯೂ ಕೂಡಾ ಡಾಕ್ಟರ್‌ಗಳು ಯಾರೂ ಇರುವುದಿಲ್ಲ. ಇದ್ದ ಒಬ್ಬನೇ ಕಣ್ಣಿನ ಡಾಕ್ಟರ್ ಪರಿಚಿತರಾದರೂ ಯಾಮಾಗುಚಿಯ ಮುಖ ಗುರುತು ಹಿಡಿಯದಷ್ಟು ಬದಲಾಗಿರುತ್ತದೆ. ಕ್ಷೀಣ ದನಿಯಲ್ಲಿ ತನ್ನನ್ನು ಪರಿಚಯಿಸಿಕೊಂಡ ಕೂಡಲೇ ಡಾಕ್ಟರ್ ಸ್ಯಾಟೋ ತಾನೇ ಚಿಕಿತ್ಸೆಗೆ ಮುಂದಾಗುತ್ತಾರೆ. “ಸಹಾಯಕ್ಕೆ ಯಾವ ದಾದಿಯೂ ಇಲ್ಲದ್ದರಿಂದ ತೆಗೆದ ಕೀವನ್ನು ಹಾಕುವ ಪ್ಯಾನ್ ಅನ್ನು ನಾನೇ ಹಿಡಿಯಬೇಕಾಯಿತು…” ಎಂದು ಯಾಮಾಗುಚಿ ನೆನಪಿಸಿಕೊಳ್ಳುತ್ತಾರೆ.

ಇಡೀ ಒಂದು ಪ್ಯಾನ್ ತುಂಬಿ ಕೀವು ನೆಲಕ್ಕೆ ಹರಿಯುತ್ತದೆ … ಯಮ ಯಾತನೆ. ಅಷ್ಟಾದ ನಂತರ ಕಣ್ಣು, ಮೂಗು, ಬಾಯಿ ಅಷ್ಟು ಬಿಟ್ಟು ಉಳಿದೆಲ್ಲ ಭಾಗಕ್ಕೆ ಬ್ಯಾಂಡೇಜ್ ಬಿಗಿಯುತ್ತಾರೆ. ನಂತರ ಕಾಲೆಳೆದುಕೊಂಡು ಮನೆಗೆ ಬಂದರೆ ಸೈರನ್ ಕೂಗಿದ್ದರಿಂದ ಮನೆಯಲ್ಲಿನ ಸದಸ್ಯರೆಲ್ಲ ರಹಸ್ಯ ನೆಲಮಾಳಿಗೆಗಳಿಗೆ ಹೋಗಿ ಅಡಗಿ ಬಿಟ್ಟಿರುತ್ತಾರೆ. ಮನೆಯಲ್ಲಿ ಯಾರೂ ಇಲ್ಲ. ಯಾಮಾಗುಚಿ ಬುದ್ದನನ್ನು ಧ್ಯಾನಿಸುತ್ತಾ, ಕೃತಜ್ಞತೆ ಸಲ್ಲಿಸುತ್ತಾ ಒಬ್ಬನೇ ಕುಳಿತು ಬಿಡುತ್ತಾನೆ. ಸುಮಾರು ಹೊತ್ತು ಕಳೆದ ನಂತರ ಎಲ್ಲರೂ ಹಿಂತಿರುಗಿದಾಗ ಅವನ ತಾಯಿ, ಹೆಂಡತಿ ಯಾರಿಗೂ ಅವನ ಗುರುತೇ ಸಿಕ್ಕುವುದಿಲ್ಲ. ಅವರೆಲ್ಲ ಯಾಮಾಗುಚಿ ಬದುಕಿರುವುದೇ ಅಸಾಧ್ಯ ಎಂದು ತೀರ್ಮಾನಿಸಿ ಆಗಿರುತ್ತದೆ. ಹಾಗಾಗಿ ದೆವ್ವವಲ್ಲ ತಾನೆ ಎಂದು ಕಾಲುಗಳನ್ನೆಲ್ಲ ಪರೀಕ್ಷಿಸುತ್ತಾರಂತೆ! ಅಂತೂ ಆ ರಾತ್ರಿಯು ಜ್ವರ, ನೋವು ಎಲ್ಲದರಲ್ಲಿ ಕಳೆಯುತ್ತದೆ.

ಮರುದಿನ, ಆಗಸ್ಟ್ 9, 1945

ಯಾಮಾಗುಚಿ ಆ ಸ್ಥಿತಿಯಲ್ಲಿ ಆಫೀಸಿಗೆ ಹೋಗಬೇಕೆಂದು ಹಠ ಹಿಡಿದು ಹೊರಡುತ್ತಾರೆ. “ಹಿರೋಷಿಮಾದ ಗತಿ ನಾಗಾಸಾಕಿಗೂ ಬಂದೀತೆಂದು ಎಚ್ಚರಿಸಲು ನಾನಲ್ಲಿಗೆ ಹೋಗಲೇ ಬೇಕಿತ್ತು” ಎನ್ನುವ ಅವರ ಮಾತು ಸ್ವಲ್ಪ ಅಸಹಜ ಎನ್ನಿಸುತ್ತದೆ. ಆ ಸ್ಥಿತಿಯಲ್ಲಿ ಅದನ್ನು ತಿಳಿಸಲು ಅವರು ಕಛೇರಿಗೆ ಹೋಗಲು ಹೇಗೆ ಸಾಧ್ಯ?! ಜೊತೆಗೆ ಮನೆಯವರಿಗೆಲ್ಲ ಗೊತ್ತಿದ್ದ ಹಿರೋಷಿಮಾದ ಬಾಂಬ್ ಧಾಳಿ, ಮಿಟ್ಸುಬಿಷಿ ಕಛೇರಿಗೆ ಗೊತ್ತಿರುವುದಿಲ್ಲವೇ?! ನನಗೆ ಅನ್ನಿಸುವುದೇನೆಂದರೆ, ಆ ಕಂಪನಿಯಲ್ಲಿದ್ದ ಹೇಳದೇ ಕೇಳದೇ ರಜೆ ಹಾಕಿದರೆ ಕೆಲಸದಿಂದ ವಜಾ ಮಾಡುವ ರೂಲ್‌ಗೆ ಹೆದರಿ ಯಾಮಾಗುಚಿ ಆಫೀಸಿಗೆ ಹೋಗಿರಬೇಕೆಂದು. ನನ್ನ ಈ
ಅನುಮಾನಕ್ಕೆ ಕಾರಣವೇನೆಂದರೆ, ಆ ನಂತರವೂ ಯಾಮಾಗುಚಿ ಅನುಮತಿ ಇಲ್ಲದೆ ಕೆಲಸಕ್ಕೆ ಗೈರುಹಾಜರಾದ ಕಾರಣಕ್ಕೆ ಕೆಲಸ ಕಳೆದುಕೊಳ್ಳುತ್ತಾರೆ. ಹಾಗಾಗಿ ತಾನು ಹೋದದ್ದು ಬಾಂಬ್ ಬಗ್ಗೆ ಎಚ್ಚರಿಸಲು ಎಂದು ಹೇಳುವ ಮಾತುಗಳನ್ನು ನನಗಂತೂ ನಂಬಲಾಗಲೇ ಇಲ್ಲ.

ಅದೇನೇ ಇರಲಿ, ಒಟ್ಟಿನಲ್ಲಿ ಯಾಮಾಗುಚಿ ಕಛೇರಿಗೆ ಹೋಗಿ ನಡೆದಿದ್ದನ್ನು ಹೇಳುವಾಗ ಅವರೆಲ್ಲ ಅವರ ಮಾತುಗಳನ್ನು ನಂಬಲೇ ಕಷ್ಟವಾಗುತ್ತಿದೆ ಎನ್ನುತ್ತಾರೆ. ಒಂದು ಬಾಂಬ್ ಇಡೀ ಊರನ್ನೇ ನೆಲಸಮ ಮಾಡುತ್ತದೆನ್ನುವುದನ್ನು ಅವರಿಂದ ನಂಬಲಾಗುವುದಿಲ್ಲ. ತಲೆಗೆ ಪೆಟ್ಟು ಬಿದ್ದು ಏನೋ ಬಡಬಡಿಸುತ್ತಿದ್ದಾರೆ ಎಂದು ತೀರ್ಮಾನಿಸುತ್ತಾರೆ. ಯಾಮಾಗುಚಿ ನಡೆದಿದ್ದನ್ನು ಮತ್ತೆ ಮತ್ತೆ ಅವರಿಗೆ ಹೇಳುತ್ತಿರುವ ಆ ಕ್ಷಣದಲ್ಲಿ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ “ಫ್ಯಾಟ್ ಮ್ಯಾನ್” ಬಾಂಬ್ ಸ್ಫೋಟಗೊಳ್ಳುತ್ತದೆ! ಯಾಮಾಗುಚಿ ಮತ್ತೆ ಅಣುಬಾಂಬ್ ಧಾಳಿಗೆ ತುತ್ತಾಗುತ್ತಾರೆ! ಇದಕ್ಕೆ ಏನೆನ್ನಬೇಕು?! ಎಂಥ ದುರಾದೃಷ್ಟ ಈತನದ್ದು ಎಂದುಕೊಳ್ಳುವಂತೆಯೂ ಇಲ್ಲ. ಏಕೆಂದರೆ ಪವಾಡ ಸದೃಶ ರೀತಿಯಲ್ಲಿ ಆತ ಪಾರಾಗಿದ್ದಾರೆ ಕೂಡಾ! ಆದರೆ ಕೇವಲ ಮೂರೇ ದಿನಗಳ ಅಂತರದಲ್ಲಿ ಎರಡು ಅಣುಬಾಂಬ್ ಧಾಳಿಗೆ ತುತ್ತಾಗುವುದೆಂದರೆ ಎಂಥ ವಿಚಿತ್ರವಲ್ಲವೇ?

ನಾಗಾಸಾಕಿ ಕೂಡಾ ಈಗ ನಿರ್ನಾಮವಾಗಿದೆ. ಯಾಮಾಗುಚಿ ತುಂಬ ಇಷ್ಟಪಡುತ್ತಿದ್ದ ಊರು ಛಿದ್ರಗೊಂಡಿದೆ. ಆ ನೋವು ಸಂಕಟದಲ್ಲೂ ಮರುದಿನ ಬದುಕುಳಿದವರನ್ನು ಹುಡುಕುತ್ತಾ ಹೊರಡುತ್ತಾರೆ. ಪರಿಚಿತರೆಲ್ಲ ಇದ್ದಕ್ಕಿದ್ದಂತೆ ಕಾಣೆಯಾಗಿರುತ್ತಾರೆ. ಇಡಿಯ ಊರಿನಲ್ಲಿ ಮತ್ತೆ ಎದುರಾಗುತ್ತದೆ ಅದೇ ಸಾವು … ನೋವು … ಹೆಣಗಳ ತೆಪ್ಪ. ಆ ದಿನ ಯಾಮಾಗುಚಿಗೆ ಅತ್ಯಂತ ನೋವಿನ ದಿನ. ಆ ಕುರಿತು ಬರೆದ ಪದ್ಯ –

ಆಗಸ್ಟ್ ಒಂಭತ್ತು.
ಅಣುಬಾಂಬ್ ಸ್ಫೋಟನೆಯ ಸ್ಥಳದ
ಹತ್ತಿರವಿರುವ ಕ್ಯಾಥೋಲಿಕ್ ಸ್ಮಶಾನದಲ್ಲಿ
ಗೋರಿಕಲ್ಲುಗಳು ಸಾಲಾಗಿ ಬಿದ್ದಿವೆ.
ಎಲ್ಲ ಕಲ್ಲುಗಳ ಮೇಲೂ
ಒಂದೇ ದಿನಾಂಕ ಕೊರೆಯಲ್ಪಟ್ಟಿದೆ,
ಆಗಸ್ಟ್ ಒಂಭತ್ತು….

ಎಂಥ ವಿಷಾದದ ಪದ್ಯವಿದು….

ಅದಾದ ನಂತರ ಅವರು ನೆಲ ಮಾಳಿಗೆಗಳಲ್ಲಿ ಅಡಗಿ ಪಾರಾಗಿ, ಬದುಕುಳಿದು ಕೆಲಸಕ್ಕೆ ಹೋದರೆ ಅಷ್ಟರಲ್ಲಾಗಲೇ ಮಿಟ್ಸುಬಿಷಿ ಕಂಪನಿಯವರು ಪೇಪರ್‌ಗಳಲ್ಲಿ ನೋಟಿಸ್ ಕೊಟ್ಟಿರುತ್ತಾರೆ “14 ದಿನಗಳಿಂತ ಹೆಚ್ಚು ದಿನ ಅನುಮತಿ ಇಲ್ಲದೇ ರಜೆ ತೆಗೆದುಕೊಂಡವರನ್ನು ಕೆಲಸದಿಂದ ವಜಾ ಮಾಡಲಾಗುವುದು” ಎಂದು. ಜೀವ ಉಳಿಸಿಕೊಳ್ಳುವುದೇ ಸಾಹಸವಾಗಿರುವಾಗ ಇನ್ನು ಪೇಪರ್ ಪ್ರಕಟಣೆ ಯಾರು ನೋಡಬೇಕಿತ್ತು…? ಹಾಗಾಗಿ ಕೆಲಸ ಹೋಗುತ್ತದೆ. ಆ ನಂತರ ಅಲ್ಲಿನ ಅಮೆರಿಕನ್ ಆಕ್ಯುಪೇಷನ್ ಟ್ರೂಪ್‌ಗಳಿಗೆ ಅನುವಾದ ಮಾಡಿಕೊಡುವ ಕೆಲಸ ಮಾಡುತ್ತಾರೆ, ಉಪಾಧ್ಯಾಯರಾಗಿ ಕೆಲಸ ಮಾಡುತ್ತಾರೆ, ಮತ್ತೂ ಹಲವಾರು ಕೆಲಸ ಮಾಡುತ್ತಾರೆ. ಎಷ್ಟೋ ವರ್ಷಗಳು ಕಳೆದ ನಂತರ ಮತ್ತೆ ಅದೇ ಮಿಟ್ಸುಬಿಷಿ ಕಂಪನಿಗೆ ಸೇರಿ 1971ನೆಯ ಇಸವಿಯವರೆಗೂ ಅಲ್ಲಿಯೇ ಕೆಲಸ ಮಾಡುತ್ತಾರೆ (ಬಹುಶಃ ಇದೇ ಕಾರಣಕ್ಕಾಗಿಯೇ ಅವರು ಕಂಪನಿಯ ಬಗ್ಗೆ ಹೇಳಿದ ಮಾತುಗಳು ಆ ಮೃದುತ್ವವನ್ನು, ಗೌಪ್ಯವನ್ನು ಪಡೆದುಕೊಂಡಿರಬೇಕು ಎನ್ನಿಸುತ್ತದೆ ನನಗೆ)

ಎರಡೂ ಅಣುಬಾಂಬ್ ಧಾಳಿಗಳಿಂದಾಗಿ 160000 ಜನ ಹಿರೋಷಿಮಾದಲ್ಲೂ, 70000 ಜನ ನಾಗಾಸಾಕಿಯಲ್ಲೂ ಸತ್ತ ನಂತರ ಜಪಾನ್ ಸರ್ಕಾರ ಆಗಸ್ಟ್ 15ರಂದು ಶರಣಾಗತಿ ಘೋಷಿಸುತ್ತದೆ. ಅದರ ಬಗ್ಗೆ ಯಾಮಾಗುಚಿ ಹೀಗೆ ಬರೆಯುತ್ತಾರೆ –

ಸಾಮ್ರಾಜ್ಯಶಾಹಿಗಳ ಯುದ್ದ ವಿರಾಮ
ಆಜ್ಞೆಯನ್ನು ರೇಡಿಯೋ ತರಂಗಗಳು
ಪ್ರಸಾರ ಮಾಡಿದವು.
ಈಗಾಗಲೇ ಹಿರೋಷಿಮಾ ಮತ್ತು ನಾಗಸಾಕಿ
ಅಣುಬಾಂಬ್ ದಾಳಿಯಿಂದ ಪಾಳುಬಿದ್ದಾಗಿದೆ,
ತುಂಬ ತಡವಾಯಿತು….

ನಿಜ, ಅಷ್ಟರಲ್ಲಿ ತುಂಬ ತಡವಾಗಿರುತ್ತದೆ. ದೇಶದೇಶಗಳ ನಡುವಿನ ರಾಜಕೀಯದ ನಡೆಗಳಲ್ಲಿ ಲಕ್ಷಾಂತರ ಜನ ನಾಗರೀಕರು ಸತ್ತಿರುತ್ತಾರೆ. ಬದುಕುಳಿದವರು ಕೂಡಾ ಆ ನಂತರ ಅನೇಕ ರೋಗಗಳೊಡನೆ ಉಳಿದ ಬದುಕು ಸವೆಸಬೇಕಾಗುತ್ತದೆ. “ಎರಡು ಬಾರಿ ಅಣುಬಾಂಬ್ ಧಾಳಿಯಲ್ಲಿ ಬದುಕುಳಿಯುವುದು ಅದೃಷ್ಟವೋ ಅಥವಾ ಆ ಮಾನಸಿಕ ಕ್ಷೋಭೆಯೊಡನೆ ಇಡೀ ಬದುಕು ಕಳೆಯಬೇಕಾಗಿ ಬಂದಿದ್ದು ನನ್ನ ದುರಾದೃಷ್ಟವೋ” ಎಂದು ವಿಷಾದಿಸುತ್ತಾರೆ. ಆದರೆ ಬದುಕುವ ಅದಮ್ಯ ಆಸೆ ಮನುಷ್ಯನಲ್ಲಿ ಅದೆಷ್ಟಿರುತ್ತದೆ ನೋಡಿ! ಛಿದ್ರವಾದ ಬದುಕನ್ನು ಕಟ್ಟಿಕೊಳ್ಳುವ survival instinct ಇರುವುದರಿಂದಲೇ ಎಲ್ಲ ಜೀವಿಗಳೂ ಮತ್ತೆ ಮತ್ತೆ ಬದುಕಿನೆಡೆಗೆ ಮೋಹಗೊಳ್ಳುತ್ತಲೇ ಇರುತ್ತವೆ. ನಾಗಾಸಾಕಿ ಅಣುಬಾಂಬ್ ಸಮಯದಲ್ಲಿ ಕೇವಲ 5 ತಿಂಗಳ ಮಗುವಾಗಿದ್ದ ಮೊದಲ ಮಗನ ನಂತರ ಯಾಮಾಗುಚಿಯ ಸಂಸಾರಕ್ಕೆ ಇಬ್ಬರು ಹೆಣ್ಣು ಮಕ್ಕಳು ಸೇರುತ್ತಾರೆ. ಇಡಿಯ ಸಂಸಾರದ 5 ಸದಸ್ಯರಿಗೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕೊನೆಯವರೆಗೂ ಕಾಡುತ್ತಲೇ ಇರುತ್ತದೆ. ಅದೆಲ್ಲದರ ನಡುವೆಯೂ ಅವರು ಬದುಕು ಕಟ್ಟಿಕೊಳ್ಳುತ್ತಾರೆ. ಮಗ 2005 ರಲ್ಲಿ ಮತ್ತು ಹೆಂಡತಿ 2008 ರಲ್ಲಿ ಕ್ಯಾನ್ಸರ್‌ನಿಂದ ಸಾಯುತ್ತಾರೆ. ಲ್ಯುಕೇಮಿಯಾದಿಂದ ಒಮ್ಮೆ ಗುಣವಾಗಿದ್ದ ಯಾಮಾಗುಚಿ ಜನವರಿ 4, 2010 ರಂದು ತಮ್ಮ 94 ನೆಯ ವರ್ಷದಲ್ಲಿ ಉದರ ಮತ್ತು ಮೂತ್ರಪಿಂಡದ
ಕ್ಯಾನ್ಸರ್‌ನಿಂದಾಗಿ ಸಾಯುತ್ತಾರೆ…

ಯಾಮಾಗುಚಿ ಅಷ್ಟೆಲ್ಲ ಅನುಭವಿಸಿದ್ದರೂ ಸುಮಾರು ಆರು ದಶಕಗಳ ಕಾಲ ಈ ಬಗ್ಗೆ ಮಾತನಾಡದೇ ಮೌನವಾಗಿ ಉಳಿಯುತ್ತಾರೆ.  ಸತ್ತವರ ಎದುರು ನಾನು ಬದುಕಿದ್ದೇನೆ ಎಂದು ಹೇಳುವುದೂ ಕ್ರೌರ್ಯವಲ್ಲವೇ ಎನ್ನುವುದು ಅವರ ವಾದ. ಕೊನೆಗೆ ಮನೆಯವರ ಒತ್ತಾಯಕ್ಕೆ ಮಣಿದು ಈ ವಿಷಯ ಜಗತ್ತಿನೆದುರು ಬಿಚ್ಚಿಡುತ್ತಾರೆ. ಆ ನಂತರವೇ ಆರು ದಶಕಗಳ ಅವರ ಮಾನಸಿಕ ಕ್ಷೋಭೆಗೊಂದು ಬಿಡುಗಡೆ ದೊರಕಿದಂತಾಗುತ್ತದೆ ಅವರಿಗೆ. 2009 ರಲ್ಲಿ “ಎರಡು ಬಾರಿ ಬದುಕುಳಿದವ” ಎಂದು ಅವರನ್ನು ಜಪಾನ್ ಸರ್ಕಾರ ಗುರುತಿಸುತ್ತದೆ. ಸಾಯುವವರೆಗೆ ಯಾಮಾಗುಚಿ ಅಣುಬಾಂಬ್ ತಯಾರಿಕೆ ಮತ್ತು ಬಳಕೆಯ ವಿರುದ್ದವಾಗಿ ಶಾಂತಿ ದೂತನಾಗಿ ಮಾತನಾಡುತ್ತಲೇ ಇರುತ್ತಾರೆ…

ನನ್ನ ಬದುಕು ಒಂದು ಮಂಜಿನ ಹನಿ
ಅಣುಬಾಂಬ್ ದಾಳಿಯಾದ
ಐವತ್ತು ವರ್ಷಗಳಾದ ನಂತರವೂ ಬದುಕಿರುವೆ
ಮತ್ತು ಈಗಲೂ ಅಣ್ವಸ್ತ್ರರಹಿತ ಜಗತ್ತಿಗಾಗಿ
ಹಂಬಲಿಸುತ್ತಲೇ ಇದ್ದೇನೆ…

***

ಈ ಲೇಖನ ಬರೆಯುವ ತಯಾರಿಯಲ್ಲಿ ನಾನು ಅನೇಕ ಸಾಕ್ಷ್ಯ ಚಿತ್ರಗಳನ್ನು ನೋಡುತ್ತಿದ್ದೆ. ಅದರಲ್ಲೊಂದರಲ್ಲಿ ಅಣುಬಾಂಬ್ ಹಾಕಿದ ಎನೋಲಾ ಗೇ ಎನ್ನುವ ಯುದ್ದ ವಿಮಾನದ ರೂವಾರಿಯಾದ ವ್ಯಾನ್ ಕರ್ಕ್ ಎಂಬುವವ – ನಾವು ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿ ನಡೆಯಿತು ಸಧ್ಯ ಅನಿರೀಕ್ಷಿತಗಳೇನೂ ಜರುಗದೇ ಸರಳವಾಗಿ ಹೂವೆತ್ತಿದಂತೆ ಬಾಂಬ್ ಹಾಕಿದೆವು ಬಾಂಬ್ ಅಂದುಕೊಂಡಂತೆ ಸ್ಫೋಟಿಸದಿದ್ದರೆ ಎಂದು ತುಂಬ ಗಾಭರಿಗೊಂಡಿದ್ದೆವು ಜಪಾನೀಯರು ಆಗ ಒಳ್ಳೆಯವರಾಗಿರಲಿಲ್ಲವಾದ್ದರಿಂದ ಬಾಂಬ್ ಹಾಕುವುದು ಅನಿವಾರ್ಯವಾಗಿತ್ತು ಏ ಅಣುಬಾಂಬ್ ಹಾಕಿದ್ದೇ ವಾಸಿ ಕಣ್ರೀ … ಇಲ್ಲವಾದರೆ ಇನ್ನೂ ಹೆಚ್ಚು ಜನ ನಾಗರೀಕರು ಸಾಯುತ್ತಿದ್ದರು ಜಪಾನೀಯರು ಬಾಂಬ್ ಹಾಕುವಂಥ ಪರಿಸ್ಥಿತಿ ತಂದಿದ್ದಕ್ಕೆ ಅವರೇ ಕ್ಷಮೆ ಬೇಡಬೇಕು 30 ಸಾವಿರ ಅಡಿಗಳ ಮೇಲಿಂದ ಬಾಂಬ್ ಹಾಕುವುದು ತುಂಬ ಕಷ್ಟದ ಕೆಲಸವಾಗಿತ್ತು ….
ಹೀಗೆ ಉದ್ದಾನುದ್ದ ಮಾತನಾಡುತ್ತಲೇ ಇದ್ದ. ನೋಡುತ್ತಿದ್ದ ನನಗೇ ಸಿಟ್ಟು ಏರುತ್ತಿತ್ತು. ಇನ್ನು ಯಾಮಾಗುಚಿ ಮತ್ತು ಅವರಂತೆ ನರಳಿದ ಜಪಾನ್ ನಾಗರೀಕರು ಇಂಥ ಮಾತನ್ನೆಲ್ಲ ಹೇಗೆ ಸಹಿಸಿಕೊಂಡರೋ ಅನ್ನಿಸಿತು. ಮಾಡಿದ ತಪ್ಪಿಗೆ ಎಂದೂ ಪಶ್ಚಾತ್ತಾಪ ಕೂಡಾ ಪಡದಿರುವುದು ಸಹಿಸಿಕೊಳ್ಳಲು ಬಲು ಕಷ್ಟ…

ಮುಗಿಸುವ ಮುನ್ನ:

ಹಿರೋಷಿಮಾ ಮತ್ತು ನಾಗಾಸಾಕಿಯ ಅಣುಬಾಂಬ್ ಧಾಳಿಯ ಘೋರ ಘಟನೆ ನಡೆದು ಇವತ್ತಿಗೆ, ಅಂದರೆ
ಆಗಸ್ಟ್ 9, 2018 ಕ್ಕೆ 73 ವರ್ಷಗಳು ಕಳೆದಿವೆ.

ಜಗತ್ತು ತನ್ನ ತಪ್ಪುಗಳಿಂದ ಹೆಚ್ಚು ಕಲಿತಂತೇನೂ ಕಾಣುತ್ತಿಲ್ಲ. ನನ್ನ ಜಾತಿ ನಿನ್ನದಕ್ಕಿಂತ ದೊಡ್ಡದು, ನನ್ನ ಧರ್ಮ ನಿನ್ನದಕ್ಕಿಂತ ಹಿರಿದು, ನನ್ನ ದೇಶ ನಿನ್ನ ದೇಶಕ್ಕಿಂತ ಪ್ರಭಾವಶಾಲಿ, ನನ್ನ ಹತ್ತಿರ ನಿನ್ನ ದೇಶಕ್ಕಿಂತ ದೊಡ್ಡ ಅಣುಬಾಂಬ್ ಇದೆ ಎಂದು ಸವಾಲೆಸೆಯುವ ಮೂರ್ಖತನ ತೋರಿಸುತ್ತಲೇ ಇರುವುದನ್ನು ಕಂಡಾಗ ಮನಸ್ಸು ಆತಂಕಕ್ಕೊಳಗಾಗುತ್ತದೆ. ದೇಶ, ಯುದ್ದ, ಸೈನಿಕರ ಬಗ್ಗೆ ತುಂಬ ಭಾವುಕವಾಗಿ ಮಾತನಾಡಿ ಸತ್ತವರನ್ನು ಹುತಾತ್ಮರನ್ನಾಗಿಸುವುದಕ್ಕಿಂತ ಮತ್ತೊಂದು ಯುದ್ದ ಎಂದೂ ಆಗದಂತೆ ತಡೆಯುವುದರಲ್ಲಿ ನಮ್ಮೆಲ್ಲರ ಪಾಲೂ ಇದೆ.

“War does not determine who is RIGHT – Only who is left ….”

‍ಲೇಖಕರು avadhi

August 9, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ರಘುನಾಥ

    ವೇಸ್ಟಲ್ಯಾಂಡ್ ನ ಡೆತ್ ಹ್ಯಾಡ್ ಅನ್ ಡನ್ ಸೋ ಮೆನಿಯ ಸಾಕ್ಷಾತ್ಕಾರ

    ಪ್ರತಿಕ್ರಿಯೆ
  2. ಜಯಲಕ್ಷ್ಮಿ ಪಾಟೀಲ್

    ಓದುತ್ತಾ ಓದುತ್ತಾ ವಿಷಾದ ಮಡುಗಟ್ಟುತ್ತದೆ ಎದೆಯಲ್ಲಿ…
    ಹೌದು War doesn’t ditermine who is right- Only who is left…
    ಬೇಕಾ ಯುದ್ಧಗಳು…?

    ಪ್ರತಿಕ್ರಿಯೆ
    • ಭಾರತಿ ಬಿ ವಿ

      ಹೌದು ಜೆಪಿ … ಬೇಕಾ ಯುದ್ದಗಳು…

      ಪ್ರತಿಕ್ರಿಯೆ
  3. Shyamala Madhav

    War doesn’t determine who is right …Only who is left – ಎಷ್ಟು ಸತ್ಯ!

    ಪ್ರತಿಕ್ರಿಯೆ
    • ಭಾರತಿ ಬಿ ವಿ

      ಮೇಡಂ ಥ್ಯಾಂಕ್ ಯೂ … ನೀವು ಓದಿದಿರಿ ಅನ್ನುವುದೇ ನನಗೆ ಖುಷಿ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: