ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಮೋದ ಮುತಾಲಿಕ ಅನುವಾದಿತ ಕವಿತೆ- ಅಲಿನ್ ದೊರೆಯ ಮಗಳು…

ಮೂಲ :  Thomas Campbell.
 ಕನ್ನಡಕ್ಕೆ :  ಪ್ರಮೋದ ಮುತಾಲಿಕ.

ಅಂಗಲಾಚಿದ ಮೇಲ್ನಾಡಿಗೆ ಹೊರಟಿದ್ದ
ಸರದಾರನೊಬ್ಬ, ‘ತಡ ಮಾಡಬೇಡ ನಾವಿಕನೆ
ತಲುಪಿಸು ನಮ್ಮನು ಕೊಲ್ಲಿಯ ಆ ಬದಿಗೆ
ನೀಡುವೆ ನಿನಗೆ ಚಿನ್ನ ಕೈ ತುಂಬ ‘

‘ಭೋರ್ಗರೆವ  ಈ ನೀರಿನಲಿ, ಈ ಕತ್ತಲಿನಲಿ
ಕೊಲ್ಲಿ ದಾಟಬೇಕೆನ್ನುವವ ಯಾರಪ್ಪ ನೀ?’ ಎನಲು
‘ ಅಪ್ರಸ್ತುತ ಅದು. ಆದರೂ ಕೇಳು -ಸರದಾರ ನಾನು
ಆ ನಡುಗಡ್ಡೆಯ, ಅಲಿನ್ ದೊರೆಯ ಮಗಳಿವಳು

ಓಡುತ್ತಲೇ ಇದ್ದೇವೆ ಮೂರು ದಿನಗಳಿಂದ ನಾವು
ಹಿಂದೆ ಹಿಂದೆ ಇವಳ ತಂದೆಯ ಯೋಧರು
ಸಿಕ್ಕರೆ ನಾವಿಲ್ಲಿ ಪೊದೆಗಳಾಗುವವು ಕೆಂಪು
ನನ್ನ ರಕ್ತದಿ

ನಮ್ಮ ಹಿಂದೆಯೇ ಇದ್ದಾರವರು ಕುದುರೆ
ಸವಾರರಾಗಿ. ಸಿಕ್ಕರವರಿಗೆ ನಮ್ಮ ಸುಳಿವು
ನನ್ನ ಸುಂದರ ಅರಗಿಣಿಗೆ ಯಾರಾಶ್ರಯ
ಅವಳ ಪ್ರಿಯಕರನ ಕೊಚ್ಚಿದಮೇಲೆ?’

ಕರಗಿದ ನಾವಿಕ ಮನದಾಳದ ಮಾತಿಗೆ.
‘ಸಿದ್ಧ ನಾ, ಬೇಡ ಯೋಚನೆ. ಹೊರಡೋಣ.
ನೀ ನೀಡುವ ಚಿನ್ನಕ್ಕಲ್ಲ
ಈ ಮುಗ್ಧ ಸುಂದರಿಗಾಗಿ

ನಂಬಿ ನನ್ನ :ಈ ಅಮಾಯಕ ಮಗು
ಇರದಿನ್ನ ತೊಂದರೆಯಲಿ ಕ್ಷಣಮಾತ್ರವೂ
ಇರಲಿ ತೆರೆಗಳಾರ್ಭಟ ಆಗಸದೆತ್ತರಕೆ
ದಾಟಿಸುವೆ ನಿಮ್ಮನು ಕೊಲ್ಲಿಯ ‘ಎಂದ.

ಭೀಷಣವಾಯ್ತು ಬಿರುಗಾಳಿ
ನೀರ ದೆವ್ವಿನ ಕಿರುಚಾಟ
ಮುಖಗಂಟು ಹಾಕಿತು ಕೋಪಿಷ್ಠ ಆಕಾಶ
ಕಪ್ಪಾದವು ಮೂವರ ಮುಖಗಳೂ.

ಇದಕ್ಕೂ ಮಿಗಿಲು ಗಾಳಿಯ ಆರ್ಭಟ
ರಾತ್ರಿ ಭಯಾನಕ  ಆಗುತ್ತಿದ್ದಂತೆ
ಆಯ್ತು ಇನ್ನೂ ಹತ್ತಿರ ಕುದುರೆಗಳ ಖರಪುಟ
ಶಬ್ದ ಯೋಧರ ಬರುವಿಕೆಗೆ.

‘ಬೇಗ.. ಬೇಗ ‘ ಕೂಗಿದಳು ದೊರೆ ಮಗಳು
‘ಪ್ರಚಂಡ ಬಿರುಗಾಳಿ ಸಹಿಸೇನು
ಸಹಿಸೇನು ಅಗಸದ ಕೋಪ ತಾಪ
ತಂದೆಯ ಕೋಪವ ಸಹಿಸೆನು ‘

ಹೊರಟಿತ್ತು ದೋಣಿ ನೆಲದ ಬಿರುಗಾಳಿಯಿಂದ
ಬಿರುಗಾಳಿಯ ನೀರಿಗೆ.
ಓಹ! ಸೋತಿತು ಮಾನವ ಶಕ್ತಿ
ಸುತ್ತಿತು ನೀರು ದೋಣಿಯ.

ನುಗ್ಗಿಸಿದ ನಾವಿಕ ದೋಣಿಯ ಇನ್ನೂ
ರಭಸದಿ ರಾಚುವ ನೀರ ಮಧ್ಯೆ. ತಲುಪಿದ
ಅಲಿನ್ ದೊರೆ ಮರಣಾಂತಿಕ ದಡಕೆ.
ಕರಗಿ ಸಿಟ್ಟು ಕ್ಷಣದಿ ಆದನಾತ ಶೋಕ ಮುದ್ದೆ.

ಉಕ್ಕೇರುವ ಅಲೆಗಳ ಮಧ್ಯೆ
ಕಂಡಿತಾತನಿಗೆ ಆತನ ಕೂಸು!
ಸುಂದರ ಕೈಯೊಂದು ಚಾಚಿತ್ತು ಸಹಾಯಕೆ
ಇನ್ನೊಂದು ಪ್ರಿಯಕರನ ಸುತ್ತು.

‘ಬಾ ಬಾ ಮಗಳೇ, ಬಾ ಮಗಳೇ..’ಅಂಗಲಾಚಿದ
ಅಲಿನ್.’ಬಾ ಹೊರಗೆ ಈ ಬಿರುಗಾಳಿ ನೀರಿಂದ
ಬಾ ಮಗಳೇ, ಕ್ಷಮಿಸೇನು ನಿನ್ನ ದೊರೆಯನು
ಬಾ ಮಗಳೇ, ಬಾ ನನ್ನ ಕೂಸೆ….’

ವ್ಯರ್ಥವಾಯಿತು ದೊರೆಯ ಪ್ರಲಾಪ.
ರಭಸದಿ  ನುಗ್ಗಿದ ತೆರೆಗಳು
ಮುಳುಗಿಸಿದವನ ಕೂಸನ್ನ
ಉಳಿಯಿತಾತನಿಗೆ ಕೊನೆಯಿಲ್ಲದ ಶೋಕ !

‍ಲೇಖಕರು Admin

6 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading