’ಅರೆ ನಮ್ಮ ಹುಚ್ರಾಯಪ್ಪ!’ – ಎಚ್ ಜಿ ಮಳಗಿ

ಹುಚ್ರಾಯಪ್ಪನ ಸರ್ವೀಸ್ ಕಮಿಷನ್

ಎಚ್ ಜಿ ಮಳಗಿ

ಇಂದು ಸಂಜೆ ಸಾಹಿತ್ಯ ಭವನದಲ್ಲಿ ಪ್ರ’ಕ್ಯಾತ’ರೊಬ್ಬರ ಪುಸ್ತಕ ಬಿಡುಗಡೆ ಸಮಾರಂಭವಿದ್ದುದನ್ನು ಬೆಳಿಗ್ಗೆ ಪತ್ರಿಕೆಯಲ್ಲಿ ಓದಿದಾಗ ಅವರು ನಿನ್ನೆ ರಾತ್ರಿ ಫೋನು ಮಾಡಿ ಕಾರ್ಯಕ್ರಮಕ್ಕೆ ಬರಲೇಬೇಕೆಂದು ಒತ್ತಾಯಿಸಿದ್ದು ನೆನಪಾಯಿತು. ಬೆಳಿಗ್ಗೆ ಹೋಗಿದ್ದ ಕರೆಂಟು ಬಂದಿರಲಿಲ್ಲ. ರಾತ್ರಿ ಒಂಭತ್ತಕ್ಕೆ ಬರುತ್ತದೆಂದು ಕೆಇಬಿ ಆಫೀಸಿಗೆ ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿ ಕರೆಂಟು ಹೊಡೆದವರಂತೆ ಉತ್ತರಿಸಿ ಪೋನ್ ಕುಕ್ಕಿದ್ದ. ಈ ಹಾಳಾದ ಕೆಇಬಿಯವರಿಗೆ ಬಿಲ್ಲು ಪಾವತಿಸದಿದ್ದರೆ ಫ್ಯೂಸ್ ಕಿತ್ತಿಕೊಂಡು ಹೋಗಲು ಬರುತ್ತದೆ. ನೆಟ್ಟಗೆ ಕರೆಂಟ್ ಕೊಡಬೇಕೆಂದು ತಿಳಿಯುವುದಿಲ್ಲವೆಂದು ಮನಸ್ಸಿನಲ್ಲಿಯೇ ಎಲ್ಲರಿಗೂ ಕೇಳುವಂತೆ ಕೂಗಿದೆ. ಟಿವಿಯೂ ಇರಲಿಲ್ಲ. ಪತ್ನಿ ಯಾರನ್ನೋ ಮಾತನಾಡಿಸಿಕೊಂಡು ಬರುವೆನೆಂದು ಮಧ್ಯಾಹ್ನವೇ ಹೋಗಿದ್ದಳು. ಆದ್ದರಿಂದ ಅನಿವಾರ್ಯವಾಗಿ ಪುಸ್ತಕ ಬಿಡುಗಡೆ ಸಮಾರಂಭಕ್ಕಾದರೂ ಹೋಗೋಣವೆಂದು ಹೊರಟೆ.
ನನ್ನ ತೊಂಭತ್ತೇಳನೇ ಮಾಡೆಲ್ ಬಜಾಜ್ ‘ಜಾಜ್’ ಸಂಗೀತವನ್ನು ರಸ್ತೀಕರಿಗೆ ಕರುಣಿಸುತ್ತ ನನ್ನನ್ನು ಹೊತ್ತುಕೊಂಡು ಸಾಹಿತ್ಯ ಭವನದತ್ತ ಧಾವಿಸಿತು. ದಾಸನಕೊಪ್ಪ ಸರ್ಕಲ್ ದಾಟಿ ಕೆಸಿಡಿ ಸರ್ಕಲ್ಗೆ ಬರೋಹೊತ್ತಿಗೆ ನಾಕು ಸಲ ಆಫ್ ಆಗಿ ಹೆಂಡತಿಯ ಬೈಗುಳನ್ನೂ ನಾನೇ ಅದಕ್ಕೆ ಅರ್ಪಿಸಿ ಅಂತೂ ಇಂತೂ ಕೆಸಿಡಿಗೆ ಬಂದು ಮತ್ತೆ ಮುಷ್ಟರ ಹೂಡಿತು. ಸರ್ಕಲ್ನಲ್ಲಿ ಯಾಕೋ ಜನಜಂಗುಳಿ ಕೆಸಿಡಿ ಮೈದಾನದಲ್ಲಿ ಏನೋ ಗದ್ದಲ. ವಿವಿಧ ಬ್ಯಾನರುಗಳನ್ನು ಹಿಡಿದುಕೊಂಡು ನೂರಾರು ಜನ ಘೋಷಣೆ ಕೂಗುತ್ತ ಮೈದಾನದೊಳಗೆ ನುಗ್ಗುತ್ತಿದ್ದರು. ಬ್ಯಾನರ್ ನೋಡಿದೆ. ‘ಕಮಿಷನ್ ತಿಂದ ಭ್ರಷ್ಟ ಹುಚ್ರಾಯಪ್ಪಗೆ ದಿಕ್ಕಾರಾ’ ‘ದಿಕ್ಕಾರಾ ದಿಕ್ಕಾರಾ’ ಎಂದು ಬೋರ್ಡ ಹಿಡಿದುಕೊಂಡು ನೂರಾರು ಯುವಕ ಯುವತಿಯರು ಹುಚ್ರಾಯಪ್ಪನ ವಿರುದ್ಧ ಘೋಷಣೆ ಕೂಗುತ್ತ ಮೈದಾನದಲ್ಲಿ ಜಮೆಯಾಗುತ್ತಿದ್ದರು.
ಗೇಟಿನ ಹೊರಗಿನ ಒಂದು ಬದಿಗೆ ಪೆಂಡಾಲ್ ಹಾಕಿದ್ದರು. ಅಲ್ಲಿ ಹತ್ತಿಪ್ಪತ್ತು ಯುವಕ ಯುವತಿಯರು ಧರಣಿ ಕೂತಿದ್ದರು. ನಾನು ನಿಂತಲ್ಲಿಂದ ಅಲ್ಲಿ ಕೂತಿದ್ದವರು ಕಾಣುತ್ತಿದ್ದರು. ಎಲ್ಲಕ್ಕಿಂತ ಮುಂದೆ ತಲೆಗೆ ಹಸಿರು ಟವಲ್ ಹಾಕಿಕೊಂಡು ಕೂತಿದ್ದ ವ್ಯಕ್ತಿ ನನ್ನ ಗಮನ ಸೆಳೆದ.

ಅರೆ ನಮ್ಮ ಹುಚ್ರಾಯಪ್ಪ!
ಯಾರೋ ಒಂದಿಬ್ಬರು ಪೈಪೋಟಿಗೆ ಬಿದ್ದವರಂತೆ ಮೈಕನ್ನು ಕಿತ್ತುಕೊಳ್ಳುತ್ತ ಅಸಂಬದ್ಧವಾಗಿ ಏನೇನೋ ಮಾತನಾಡುತ್ತಿದ್ದರು. ಕೂತವರು, ನೆರೆದವರು ಚಪ್ಪಾಳೆ ತಟ್ಟುತ್ತಿದ್ದರು. ‘ನಮ್ಮ ಹೊಟ್ಟೀ ಮ್ಯಾಲ ಹೊಡದಾರ ಇವ್ರು. ನಮಗ ಕೆಲ್ಸಾ ಕೊಡ್ತೀನಂತ ಅಂದೌರು ಸುಮ್ನ ಕುಂತಾರ. ಅವ್ರು ಕೇಳಿದ್ದಷ್ಟು ನಾವೆಲ್ಲಾ ಕೊಟ್ಟೀವಿ. ಈಗ ಶೆಗಣೀ ತಿಂದೌರಂಗ ಮಾರೀ ಮಾಡ್ಕೊಂಡು ಹ್ಯಾಂಗ್ ಕುಂತಾರ ನೋಡ್ರೆಪಾ ನೋಡ್ರಿ!’ ಅಂತ ನೇರವಾಗಿ ಹುಚ್ರಾಯಪ್ಪನನ್ನು ನೋಡಿ ಒಬ್ಬ ಕಿರುಚಿದ. ಅವನ ಮಾತಿಗೆ ‘ಹೌದೂ ಹೌದೂ’ ಅಂತ ನೆರೆದವರೂ ಕೂಗಿದರು. ಅಲ್ಲಿಯವರೆಗೂ ಈಗಿನ ಮಹಾನ್ ನಾಯಕರಂತೆ ತೂಕಡಿಸುತ್ತಾ ಕೂತಿದ್ದ ಹುಚ್ರಾಯ ಅವರ ಕೂಗಿಗೆ ಬೆಚ್ಚಿಬಿದ್ದವನಂತೆ ಎದ್ದು ನೆಟ್ಟಗೇ ಕೂತ. ಮತ್ತೊಂದಿಬ್ಬರೂ ಮಾತನಾಡುವ ನೆವದಲ್ಲಿ ಹುಚ್ರಾಯನನ್ನು ನೇರವಾಗಿ ಬೈದರು. ಈಗ ಎದ್ದು ನಿಂತ ಹುಚ್ರಾಯಪ್ಪ ಮೈಕನ್ನು ತಾನೇ ತೆಗೆದುಕೊಂಡು ಗಂಟಲು ಸರಿಪಡಿಸಿಕೊಂಡು, ‘ನನ್ನ ಪ್ರೀತಿಯ ಸ್ನೇಇತರೇ, ಬಂದುಗಳೇ ಅಕ್ಕಮ್ಮ ತಂಗೆಮ್ಮಗಳೇ! ನೀವೇಳೋದೆಲ್ಲಾ ದಿಟವಾಗೈತೆ! ನೀವೇಳ್ದಾಂಗೆ ನಾನು ನಿಮಗೆ ಕಾಫೋರೇಸನ್ನಾಗೆ ಅಪಾಂಟ್ಮೆಂಟ್ ಕೆಲ್ಸಾ ಕೊಡುಸ್ತೀನಂತ ಏಳಿದ್ದು ದಿಟ! ಅಂಗೇ ನಿಮ್ಮ ಬೈಡೇಟಾನೆಲ್ಲಾ ತಗಂದ್ ಲಿಸ್ಟ್ ಮಾಡಿ ನಮ್ ಅಪಾಂಟಿಂಗ್ ಕಮಿಸನರ್ ತಾವಾ ಮಡಗಿದ್ದೂ ದಿಟಾ! ಸಾಹೇಬ್ರತಾವಾ ನಿಮ್ ಮ್ಯಾಟರ್ರು ಮಾತಾಡಿದ್ದೂ ದಿಟ! ನಮ್ ಸಾಏಬ್ರೂವೇ ನೋಡೋಣ ಟರೈ ಮಾಡ್ತೀನಿ ಅಂದಿದ್ರು. ಆದ್ರೇನ್ಮಾಡೋಡು ಸ್ನೇಇತರೆ, ಈ ಕೋಲ್ಟನೌರೊಂದು ಬೆಣೆ ಜಡ್ದು ಕುಂತೌರಲ್ಲಾ! ನನ್ನ ಇರುದ್ದ ಮುಗ್ದರಾದ ನಿಮ್ಮನ್ನೆಲ್ಲಾ ಎತ್ತಿಕಟ್ತಿರೋರು ಯಾರಂತ ನಂಗೆ ಗೊತ್ತೈತೆ. ಆ ಅಲ್ಕಾ ನನ್ ಮಕ್ಳು ಏನ್ ಸಾಚಾ ಔರಾ? ಔರೇನ್ ತಿಂದಿಲ್ವಂತ್ರಾ? ಸ್ನೇಇತರೆ, ನೀವ್ಯಾರೂ ಎದರ್ಕೋಬೇಕಿಲ್ಲ. ನಾನು ಉಟ್ಟಾ ಓರಾಟಗಾರ ಅಂತ ನಿಮಗೆಲ್ಲಾ ಸೆಂದಾಗಿ ಗೊತ್ತೈತೆ. ತಾಕತ್ತಿದ್ರೆ ನನ್ನ ಇಡದು ಒಳೀಕಾಕ್ಲಿ. ನಾನೂ ನಗರ ತುಂಬೆಲ್ಲಾ ಪಾದಯಾತ್ರೆ ಅಮ್ಮಿಕೊಂಡು ನಿಮ್ಗೋಳ ಪ್ರಾಬ್ನೆಮ್ಮನ್ನ ಪೇಪರು ಟಿವಿನಾಗೆ ತರತೀನಿ. ನಂ ಸಾಎಬ್ರು ದೇವ್ರಂತಾವ್ರು ಎದರ್ಕೋಬ್ಯಾಡ್ರಿ!’ ಅಂತ ವೀರಾವೇಶದಿಂದ ಭಾಷಣ ಬಿಗಿದ.
‘ಹೌದು ಹೌದು! ಇದ್ರಾಗೆ ಹುಚ್ರಾಯಪ್ಪಂದು ಏನೂ ತಪ್ಪಿಲ್ಲ!’ ಅಂತ ಹುಚ್ರಾಯಪ್ಪನ ಕೆಲ ಸಮರ್ಥಕರು ಅವನ ಬೆಂಬಲಕ್ಕೆ ನಿಂತರು.
‘ಔದು ಸ್ನೇಇತರೆ! ನಾ ನಿಮಗೆ ಮೋಸಾ ಮಾಡೋತರ ಕಾಣ್ತೀನಾ? ಇದ್ರಾಗೆ ನನ್ನ ಸ್ವಾರ್ಥ ಏನೈತೆ! ಎಲ್ಲಾ ಸರ್ವೇಸ್ ಮಾತ್ರಾ!’ ಅಂತ ತಡವರಿಸಿದರೂ ತನ್ನ ಬೆಂಬಲಕ್ಕಿದ್ದವರನ್ನು ಕೃತಜ್ಞತೆಯಿಂದ ನೋಡಿದ.
‘ಇಲ್ಲಾ ಇಲ್ಲಾ ಅದೆಲ್ಲಾ ಆಗೋದಿಲ್ಲಾ! ನಮಗೆ ನಮ್ ರೊಕ್ಕಾ ಬೇಕು!’ ಎಲ್ಲರೂ ಕೋರಸ್ನಲ್ಲಿ ಕೂಗಿದರು.
‘ನಂತಾವಾ ಎಲ್ಲೈತೆ ಅಣಾ! ನೀವುಗಳೆಲ್ಲಾ ಕೊಟ್ಟದ್ದು ಈ ಕೈಲಿ ಈಸ್ಕೊಂಡು ಅಂಗೇ ಈ ಕೈಲಿಂದ ಮ್ಯಾಗನೌರ್ಗೆಲ್ಲಾ ಅಂಚಿದಿನಿ!’ ಅಂತ ಗೋಗರೆದ. ಅವನ ಮಾತನ್ನು ಯಾರೂ ಕೇಳುವ ಸ್ಥಿತಿಯಲ್ಲಿ ಅಲ್ಲಿರಲಿಲ್ಲ. ಸಭೆಯಲ್ಲಿ ಗಲಾಟೆ ಶುರು ಆಯಿತು. ಹೊಡೆದಾಟ ಆಗುವ ಎಲ್ಲ ಲಕ್ಷಣಗಳೂ ನಿಚ್ಚಳವಾಗಿ ಗೋಚರಿಸಿದವು. ಅಲ್ಲೇ ನಿಂತಿದ್ದ ಪೋಲೀಸರೂ ಅಲರ್ಟ ಆದರು. ಹುಚ್ರಾಯಪ್ಪ ಟವೆಲನ್ನ ಮುಖದ ಮೇಲೆ ಹಾಕಿಕೊಂಡು ಮೆಲ್ಲನೇ ಅಲ್ಲಿಂದ ಜಾರಿಕೊಂಡದ್ದನ್ನು ನಾನು ನೋಡಿದೆ.
‘ಇದ್ಯಾಕ ಇಂವಾ ಹಿಂಗ್ ಮಾರಿ ಮುಚ್ಗೊಂಡು ಓಡ್ಲಕತ್ಯಾನ ಮಂಗ್ಯಾನಂತಾಂವಾ?’ ಅಂತ ಯೋಚಿಸಿ ಸ್ಕೂಟರ್ ಕಿಕ್ ಹೊಡೆದೆ. ಆಶ್ಚರ್ಯ ಒಂದೆ ಕಿಕ್ಕಿಗೆ ಸ್ಟಾರ್ಟ! ನನ್ನ ಗಾಡಿಯನ್ನು ಹುಚ್ರಾಯಪ್ಪನತ್ತ ಓಡಿಸಿದೆ. ಗಾಡಿಯನ್ನು ಅವನ ಪಕ್ಕದಲ್ಲಿ ನಿಲ್ಲಿಸಿ, ‘ಏ ಹುಚ್ರಾಯಾ ಯಾಕೋ ಓಡ್ಲಿಕತ್ತೀ? ಅಂತ ಕೂಗಿದೆ. ಅವನು ಗಾಬರಿಯಿಂದ ನನ್ನನ್ನು ನೋಡಿ ಒಂದೇ ಉಸುರಲಿ ಜಂಪ್ ಹೊಡೆದು ಗಾಡಿಯ ಮೇಲೆ ಕೂತು, ‘ಜಲ್ದೀ ಗಾಡೀ ಒಡೀರಿ ಸಾ! ಪೀಡಾಗಿ ಓಗಿ!’ ಅಂತ ಅವಸರಿಸಿದ. ನನಗೂ ಅವನ ವರ್ತನೆಯಿಂದ ಗಲಿಬಿಲಿಯಾಗಿತ್ತು. ಏನು ಯಾಕೆ ಅಂತ ತಿಳಿಯದೇ ಅವನ ವಶವತರ್ಿಯಾದಂತೆ ಗಾಡಿಯನ್ನು ತಿರುಗಿ ಮನೆಯತ್ತ ಓಡಿಸಿದೆ. ಹುಚ್ರಾಯನ ಪ್ರಭಾವವೋ ಏನೊ ಗಾಡೀ ಎಲ್ಲೂ ನಿಲ್ಲಲಿಲ್ಲ! ಗಾಡಿಯನ್ನು ಮನೆಯ ಮುಂದೆ ನಿಲ್ಲಿಸುತ್ತಿದ್ದಂತೆ ಹುಚ್ರಾಯ ಠಣ್ಣನೇ ಜಿಗಿದು ಕಂಪೌಂಡ್ ಗೇಟ್ ತಳ್ಳಿ ಒಳಗೆ ಓಡಿದ. ನನಗೆ ಆಶ್ಚರ್ಯದ ಮೇಲೆ ಆಶ್ಚರ್ಯ! ನಾನು ಮನೆಯೊಳಗೆ ಬಂದು, ‘ಏನೋ ಹುಚ್ರಾಯಾ? ಯಾಕ್ ಹಂಗ್ ಓಡಿ ಬಂದಿ? ಅಲ್ಲೆ ಕೆಸಿಡಿ ಮೈದಾನದಾಗ್ ಯಾಕ್ ಮಂದಿ ನಿನ್ನ ವಿರುದ್ಧ ಪ್ರೊಟೆಸ್ಟ ನಡೆಸ್ಯಾರ? ಏನ್ ಮಾಡಿದ್ದೀ?’ ಅಂತ ಒಂದೇ ಉಸುರಲ್ಲಿ ಪ್ರಶ್ನೆಗಳ ಬಾಣಗಳನ್ನು ಸುರಿಸಿದೆ. ಬೆವರು ಸುರಿಯುತ್ತಿದ್ದ ಮುಖವನ್ನು ಟವೆಲ್ನಿಂದ ಒರೆಸಿಕೊಳ್ಳುತ್ತ ಹುಚ್ರಾಯಪ್ಪ ಆಶ್ಚರ್ಯದಿಂದ ತನ್ನನ್ನೇ ನೋಡುತ್ತ ನಿಂತಿದ್ದ ನನ್ನ ಪತ್ನಿಯನ್ನು ನೋಡಿ ‘ಸಾರದಕ್ಕಾ ನೀರು!’ ಬೇಕೆನ್ನುವಂತೆ ಸಂಜ್ಞೆ ಮಾಡಿದ.
ಕುರ್ಚಿಯಲ್ಲಿ ಕೂತು ನೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡ ಹುಚ್ರಾಯ ನನ್ನನ್ನು ನೋಡಿ ಪೇಲವ ನಗೆ ಬೀರಿದ.
‘ಯಾಕೋ ಹುಚ್ಚಾ! ಏನಾತೋ?’ ಅಂತ ಮತ್ತೆ ಆತಂಕದಿಂದ ಕೇಳಿದೆ. ನನಗೆ ಗ್ಯಾರಂಟಿಯಾಗಿತ್ತು ಇವನು ಏನೋ ಎಡವಟ್ಟು ಮಾಡಿಕೊಂಡಿದ್ದಾನೆಂದು.
‘ನೀವೇನೇ ಏಳಿ ಸಾ! ನಮ್ ಜನಕ್ಕೆ ಕ್ರಿಯಾಕರ್ಮ ಒಂದೀಟೂ ಇಲ್ಲಾ ಸಾ!’ ಮಾತಾಡುತ್ತಿದ್ದಂತೆಯೇ ಹೆದರಿಕೆ ಮರೆಯಾಗಿ ಅವನ ಸುರಸುಂದರ ಮುಖದಲ್ಲಿ ರೋಷ ಏರುತ್ತಿತ್ತು.
‘ಯಾಕೋ ಏನಾತು? ಏನ್ಮಾಡಿದ್ರು ನಿಮ್ ಜನಾ? ಒಂಚೂರು ಛೆಂದಾಗಿ ಬೊಗಳು!’ ಅಂತ ಗದರಿಸಿದೆ. ನನಗೆ ಹುಚ್ರಾಯನ ಮೇಲೆ ಅಸಾಧ್ಯ ಸಲಿಗೆ.
‘ಅಲ್ಲಾ ಸಾ! ನಮ್ ಜನಕ್ಕೆ ಎಲ್ಪ್ ಆಗ್ನೀ ಅಂತ ನಗರಸಬೆ ಪೋರ ಕಾರ್ಮಿಕರನ್ನ ಅಪಾಯಿಂಟ್ ಮಾಡಾಕೆ ಡಿಸಿನ್ ತಗಂಡಿದ್ರು ನಮ್ ಸಾಏಬ್ರು. ಅಂಗೇ ನನ್ ಕಮಿನಿಟಿಯೌರಗೂ ಎಲ್ಪ ಆಗ್ನಿ ಅಂತ ನಾನೂ ಒಂದೀಟು ಅಪ್ನಿಕೇಸನ್ ತಂಗದ್ ಸಾಏಬ್ರ ತಾವ ಇಂಪ್ಲೂಎಂಜಾ ಮಾಡ್ಸಿ, ಪೋನ್ ಮಾಡ್ಸಿ ಅವ್ರಿವ್ರ ತಾವ ಏಳ್ಸಿ ಸಿನೆಕ್ಟ್ ಆಗಾಂಗೆ ಮಾಡ್ದೆ ಸಾ!’ ಅಂತ ಹೇಳಿ ಮತ್ತೆ ನೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡ. ನನಗೆ ಅವನ ಮಾತಿನಿಂದ ಏನೋ ವಾಸನೆ ಹೊಡೆಯಿತು. ‘ದಾಲ್ ಮೆ ಕುಚ್ಛ್ ಕಾಲಾ ಹೈ!’ ಅಂತ ಮನದಲ್ಲೇ ಅಂದುಕೊಂಡು ಅವನನ್ನು ನೋಡಿದೆ.
‘ಅಸ್ಟರಾಗೆ ಯಾವ್ನೋ ಅಬ್ಬೇಪಾರಿ ನನ್ನ ಮಗಾ ಕೋಲ್ಟನಾಗೆ ಕೇಸ್ ಆಕಿದಾ. ಕೋಲ್ಟನೌರು ಅಪಾಂಟಮೆಂಟ್ ಲಿಸ್ಟನಾಗೆ ಬಾರೀ ಬ್ರಸ್ಟಾಚಾರ ನಡದೈತೆಂದು ಟೇ ಜಡದ್ರು. ನಾನು ಪಾಪರ್ ಆಗ್ಬಿಟ್ಟೆ ಸಾ!’ ಅಂತ ಗೋಳಾಡಿದ. ನನಗೆ ಕುತೂಹಲವಾಯಿತು,
‘ಅದ್ಯಾಕೋ ನೀ ಪಾಪರ್ ಆದೀ? ನೀ ಏನ್ ರೊಕ್ಕಾಪಕ್ಕಾ ಡೀಲಿಂಗ್ ಮಾಡ್ಕೊಂಡಿದ್ದೀಯೋ ಹ್ಯಾಂಗ? ಅದೇನೋ ನಿನ್ನ ಸರ್ವೀಸ್ ಕಮಿಷನ್ಗೆ ಧಿಕ್ಕಾರಾ ಅಂತ ಆ ಮಂದಿ ಕೂಗ್ತಿದ್ರು ಅಲ್ಲೆ?’ ಅಂತ ಅವನಿಂದ ಸತ್ಯ ಬಿಡಿಸುವ ತಂತ್ರಕ್ಕೆ ಮೊರೆ ಹೋದೆ. ಅವನು ಯಥಾಪ್ರಕಾರ ‘ಕೆ ಕೆ’ ಅಂತ ಕೆನೆದು ನುಲಿದ.
‘ಅಲ್ಲಾ ಸಾ ಈ ಸರ್ವೀಸ್ ಅಂದ್ರೆ ಏನ್ಸಾ?’ ಅಂತ ಇದ್ದಕ್ಕಿದ್ದಂತೆ ವಿಷಯಾಂತರವಾದ ಅವನ ಮಾತಿನ ಧಾಟಿಗೆ ನನ್ನ ಕಿವಿ ಚುರುಕಾಗಿ ನಾನೂ ನೆಟ್ಟಗಗೆ ಕೂತು, ‘ಅದೇನೋ ಹಿಂಗ್ ಕೇಳ್ತಿ? ಸರ್ವೀಸ್ ಅಂದ್ರ ಸೇವಾ ಅಂತ ಗೊತ್ತಿಲ್ಲೇನ್ ನಿಂಗ?’
‘ಹೆ ಹೆ ಗೊತ್ತಿಲ್ದೇನ್ ಸಿವಾ? ಆದ್ರೂ ಕೇಳ್ದೆ’
‘ಹೂಂ ಏನೀಗ?’
‘ಮತ್ತೆ ಕಮಿಸನ್ ಅಂದ್ರೆ ಏನ್ ಗುರುವೇ?’ ಮತ್ತೆ ಅವನ ಪ್ರಶ್ನಾಸ್ತ್ರ.
‘ಕಮಿಷನ್ ಅಂದ್ರ ಈ ಏಪೀಎಂಸೀ ಒಳಗ ಇತರ್ಾರಲ್ಲ ದಲಾಲರು, ಔರು ರೈತರ ಕಡೀಂದ ಕೊಳ್ಳೋರ್ ಕಡೀಂದ್ ಹಿಂಗ್ ಎಲ್ಡೂ ಕಡಿಂದ ಎಳೀತಾರಲ್ಲ ಅದೋ, ಅಥ್ವಾ?’ ನಾನೂ ಕುತೂಹಲಿತನಾಗಿ ಮತ್ತೆ ಕೇಳಿದೆ.
‘ಊಂ ಊಂ ಅಂತಾದ್ದೇ ಅನ್ನಿ’
‘ಹೂಂ ಮುಂಧೇಳು?’ ನಾನು ಅವಸರಿಸಿದೆ. ಅವನು ಸಿಡಿಸಲಿರುವ ಬಾಂಬಿಗೆ ಕಿವಿತೆರೆದು ಕೂತಿದ್ದೆ.
‘ನಾನೂ ಅದೇ ಮಾಡ್ದೆ ಸಿವಾ! ಔರಗೋಳ್ಗೆ ಅಪಾಂಟಮೆಂಟ್ ಕೊಡ್ಸೋ ಸರ್ವೀಸ್ಗೆ ಕಮಿಸನ್ ತಗಂದೆ, ಎಲ್ರೂಗೂನೆ ಕಮಿಸನ್ ಅಂಚಿದೆ. ಅದೇ ಅಲ್ಲವರಾ ಸವೀಸ್ ಕಮೀಸನ್ ಅಂದ್ರೆ? ಮತ್ತಿವ್ರೇನ್ ಮಾಡ್ತಿದ್ದಾರಂತೆ ಮ್ಯಾಲ ಕೂತೌರು?’
ಪಬ್ಲಿಕ್ ಸರ್ವೀಸ್ ಕಮೀಷನ್ನಿಗೆ ಅವನು ಬರೆದ ಹೊಸ ಭಾಷ್ಯ ಕೇಳಿ ಯಥಾ ಪ್ರಕಾರ ಶವದೊಳಗಿನ ಬೇತಾಳ ಹಾರಿಹೋಗಿ ಮರದ ಮೇಲೆ ನೇತಾಡಿದಂತೆ ನನ್ನ ಮನಸ್ಸು ಹುಚ್ರಾಯಪ್ಪನ ಮುಂದೆ ಶರಣಾಗಿ ಅಯೋಮಯವಾಗಿ ನೇತಾಡತೊಡಗಿತು!
 

‍ಲೇಖಕರು G

September 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: