'ಅದೇ ಪ್ರೇಮ ಅದೇ ಮೋಸ' – ಶಮ್ಮಿ ಸಂಜೀವ್ ಕವಿತೆ

ಶಮ್ಮಿ ಸಂಜೀವ್


ಇಲ್ಲಿ
ಇಂಗುತ್ತದೆ
ರಕ್ತವು
ಕಂಬನಿಯೂ
ಮತ್ತೆ ಇಬ್ಬನಿಯೂ…
 
ಕರಗುತ್ತದೆ
ಉಕ್ಕು ಹೃದಯಗಳು
ಮಂಜು ಹೊದ್ದ ಮನಸುಗಳು
ಮತ್ತು ಕನಸುಗಳು…
 
ಸುತ್ತಿದಲ್ಲೆ ಸುತ್ತಿ ಸುತ್ತಿ
ಸತ್ತ ಸತ್ತೆಯ ನೋಡಿ
ತೆವಳುತ್ತಿದೆ
 
ಬಲಿಷ್ಟ ಹೆಜ್ಜೆಗಳಡಿಯಲ್ಲಿ
ಸಿಲುಕಿದ ಮೂಳೆ ಚಕ್ಕಳ
ಅಂಟಿದ ಚರ್ಮ
ನವೆಯುತ್ತಿದೆ
 
ಮಣ್ಣ ಕಣದಲ್ಲೂ
ಮರೆತ ಇತಿಹಾಸ
ಮತ್ತೆ ಮತ್ತೆ ಮರುಕಳಿಸಿ
ನರಳುತ್ತದೆ
 
ಅದೇ ಪ್ರೇಮ ಅದೇ ಮೋಸ
ಅದೇ ದಾಹ, ಅದೇ ಕೂಗು
 
ಭ್ರಮೆಯೊಂದು ಹಾಳುಬಿದ್ದ
ಬ್ರಹ್ಮಾಂಡವನ್ನಾವರಿಸಿದೆ
 
ಮಗು…
ನನ್ನ ಮನದೊಳಗಿನ ಮಗು
ನಗುತ್ತಿದೆ
ಅಂದು ನೀನು ಹೀಗಿದ್ದೆ..
ಇಂದೂ ಹೀಗೆ….?
ಸಂತೈಸಿಕೋ….!!
ಇದು ವಿಕಾಸವಾದ!!

2
 
ನಿನ್ನ ತಲೆಗೆ ಮುಡಿಸದೆ ಉಳಿದ ಹೊಗಳಿಕೆಯ
ಮುಳ್ಳಿನ ಕಿರೀಟ ಅದು
ಪ್ರೇಮದ ಸ್ಥಾಯಿ ಭಾವ ನನ್ನೊಳಗೆ
ಚೂರು ಉಳಕೊಂಡಿದೆ
ನಿನ್ನ ಒಳಗಿನ ಬರಹಗಳು ಸತ್ತು
ವರುಷಗಳೇ ಕಳೆಯಿತು
ಮತ್ತೆ ಬರೆದದ್ದೆಲ್ಲಾ ಅಕ್ಷರ ಹಾದರ
ಸುತ್ತ ಸಮಾಜದ ಹತ್ತು ಅನಿಷ್ಟಗಳು
ನಿನ್ನ ಪ್ರೇಯಸಿಯ ರೂಪಕದಲ್ಲಿ
ನನ್ನೊಳಗೆ ಉಳಕೊಂಡಿದೆ
ಕಣ್ಣು ತೆರೆದು ನೋಡು
ಅಸಂಬದ್ಧ ಅನ್ನಿಸಿದ ಎಲ್ಲದಕ್ಕೂ
ನನ್ನ ಉರಿದ ಒಡಲ ಲೆಕ್ಕಾಚಾರದ
ಗಣಿತ
ಮತ್ತೆ ಬಯಲಾದ ನನ್ನ
ನಿನ್ನ ಬರಹಗಳಲ್ಲಿ
ಚಿಂತನೆಯಲ್ಲಿ
ಕೆದಕಿ ಕೆದಕಿ
ಕಟ್ಟುಗಳಲ್ಲಿ ಬಂಧಿಸದಿರು
ವ್ಯಭಿಚರಿಸದಿರು
ನಾನು ಸಲಿಲ ನೀರ ಸಾಗರ
ನನ್ನ ಮೈಯ ಮಾಂಸವ ಕಿತ್ತು
ನಿನ್ನ ಅತಿರೇಕಗಳಿಗೆ ಕೊಟ್ಟ ಕಾಲ
ಕೊನೆಯಾಯಿತು
ಇನ್ನೂ ಉಳಿದದ್ದು
ನಿನ್ನ ಅರೆಬರೆ ಸುಟ್ಟ
ಆತ್ಮರತಿ,ಖತಿ
ನನ್ನ ಸಮ್ಮಾನ
ಮತ್ತು
ಭುಜಗಳ ಮೇಲೆ ನಿಂತ
ಆತ್ಮವಿಶ್ವಾಸ!!
 

‍ಲೇಖಕರು G

September 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಡಾ.ಶಿವಾನಂದ ಕುಬಸದ

    ಕವಿತೆ ಚೆನ್ನಾಗಿದೆ….
    “…..ಮತ್ತೆ ಬರೆದದ್ದೆಲ್ಲಾ ಅಕ್ಷರ ಹಾದರ
    ಸುತ್ತ ಸಮಾಜದ ಹತ್ತು ಅನಿಷ್ಟಗಳು
    ನಿನ್ನ ಪ್ರೇಯಸಿಯ ರೂಪಕದಲ್ಲಿ
    ನನ್ನೊಳಗೆ ಉಳಕೊಂಡಿದೆ….”
    ಇಷ್ಟವಾದ ಸಾಲುಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: