ಅರುಣ ರಾವ್ ಕಂಡ ‘ತಾಯ್ತನ’

ಅರುಣ ರಾವ್

ತಾಯಿ ಹಾಗೂ ತಾಯಿತನ ಇವೆರಡೂ ಪ್ರಪಂಚದಲ್ಲಿ ಬೆಲೆ ಕಟ್ಟಲಾರದವು. ಅದು ಮನುಷ್ಯರಾದರೂ ಸರಿ, ಪ್ರಾಣಿಗಳಾದರೂ ಸರಿ. ಒಟ್ಟಾರೆಯಾಗಿ ತಾಯಿ ಜೀವ ತನ್ನ ಕರುಳ ಕುಡಿಗಳಿಗಾಗಿ ಸದಾ ಹಪಹಪಿಸುತ್ತಿರುತ್ತದೆ. ಇದನ್ನು ಕಣ್ಣಾರೆ ಕಂಡು ಅನುಭವಿಸುವ ಅವಕಾಶ ನನಗೆ ಒದಗಿ ಬಂತು.

ನಮ್ಮ ಮನೆಯ ಪಕ್ಕದಲ್ಲಿ ಒಂದು ಇಕ್ಕಟ್ಟಾದ  ಜಾಗವಿದೆ. ಆ ಜಾಗವೂ ಸಹ ನೋಡುವವರ ಕಣ್ಣಿಗೆ ಮುದ ನೀಡಿ, ಮನೆಯ ಸೌಂದರ್ಯವನ್ನು ಹೆಚ್ಚಿಸಲಿ ಎಂಬ ಉದ್ದೇಶದಿಂದ ಆ ಜಾಗದಲ್ಲಿ ಪೈಂಟ್ ಬಕೀಟಿನೊಳಗೆ‌ ಮಣ್ಣು ತುಂಬಿ ಗುಲಾಬಿ ಗಿಡವನ್ನು ನೆಟ್ಟಿದ್ದೆ. ಮೊದಲೇ ಹೇಳಿದಂತೆ ಅದು ಸ್ವಲ್ಪ ಇಕ್ಕಟ್ಟಾದ ಜಾಗವಾಗಿದ್ದು, ಬಕೀಟು ಮಾತ್ರ ಹಿಡಿಸುವಷ್ಟು ಸ್ಥಳವಿತ್ತು.

ಸರಿ, ಪ್ರತಿದಿನ ಆ ಗಿಡಕ್ಕೆ ನೀರನ್ನೆರೆಯುವಾಗ ಬಿಟ್ಟರೆ ಮತ್ತೆ ನಾನಾಗಲೀ, ಇತರರಾಗಲೀ ಅಲ್ಲಿ ಸುಳಿದಾಡುವ ಸಂಭವವೇ ಇರಲಿಲ್ಲ. ಗುಲಾಬಿ ಗಿಡ ನರ್ಸರಿಯಿಂದ ತಂದಾಗ ಇದ್ದ ಅಷ್ಟೂ ಮೊಗ್ಗುಗಳನ್ನು ಅರಳಿಸಿ, ಹೂವಾಗಿಸಿ ನಂತರ ತೆಪ್ಪಗಾಯಿತು. ಇದಾದ ಸುಮಾರು ಒಂದು ತಿಂಗಳಿನ ನಂತರ ಅಂದರೆ ಒಂದು ಭಾನುವಾರ ನನ್ನ  ಪತಿರಾಯರು, ‘ಈ ಗಿಡದ ಕಡೆಯಿಂದ ಏನೋ ಸದ್ದು ಬರ್ತಾ ಇದೆ. ಸಂಜೆಯ ನೀರವತೆಯಲ್ಲಿ ಸಣ್ಣದಾಗಿ ಇಲ್ಲಿಂದ ಏನೋ ಕೇಳಿಸಿದ ಹಾಗಾಯಿತು. ಏನಾದರೂ ಹುಳಗಿಳ ಬಂದು ಸೇರಿಕೊಂಡಿದೆಯೇನೋ’ ಎಂದರು.  ನನಗೂ ಅದು ಸರಿಯೆನಿಸಿತು. ಯಾವ ಹುಳವೋ, ಕೀಟವೋ ನೋಡೋಣ ಎಂದುಕೊಂಡು ಆ ಬಕಿಟನ್ನು ಇವರು ಕೊಂಚ ಸರಿಸಿದರು. 

ಆಶ್ಚರ್ಯವೆಂಬಂತೆ ಬಕೀಟಿನ ಹಿಂಬದಿಯಲ್ಲಿ ಸಿಮೆಂಟು ಚೀಲದ ನಾರುಗಳು, ತೆಂಗಿನ ನಾರು ಮತ್ತು ಹುಲ್ಲು ಕಡ್ಡಿಗಳಿಂದ ಮಾಡಿದ ಒಂದು ಚೆಂಡಿನ ‌ಗಾತ್ರದ ಉಂಡೆ ಇತ್ತು. ‘ಇದೇನಿದು ‌ಇಲ್ಲಿ ಇಷ್ಟೊಂದು ಕಸ?  ಕೆಲಸದವಳ ಕಾರುಬಾರು ನೋಡು’ ಎನ್ನುತ್ತಾ, ಆ ಉಂಡೆಯನ್ನು ಎತ್ತಿ ಈ ಕಡೆಗೆ ಇಟ್ಟರು. ಮರುಕ್ಷಣವೇ ‘ಕಿಚ್ ಕಿಚ್’ ಎಂಬ ಸದ್ದಿನೊಂದಿಗೆ ಆ ಉಂಡೆಯಿಂದ ಆಗ ತಾನೇ ಜನಿಸಿದಂತಿದ್ದ, ಇನ್ನೂ ಕಣ್ಣನ್ನೂ ಬಿಡದ, ರೋಮಗಳೂ ಮೂಡದ ಮೂರು ಮರಿಗಳು ನೆಲದ ಮೇಲೆ ಉದುರಿದವು. ‘ಇದೇನೇ ಇದು, ಇಲಿ ಇಲ್ಲಿ ಮರಿಗಳನ್ನು ಹಾಕಿಬಿಟ್ಟಿದೆ’ ಎಂದಾಗ ನನಗೂ ಆಶ್ಚರ್ಯ. ಇಬ್ಬರೂ ಬಿಟ್ಟ ಕಣ್ಣು ಬಿಟ್ಟಂತೆ ಅವುಗಳನ್ನು ನೋಡುತ್ತಿದ್ದಂತೆ, ಅಲ್ಲಿಯವರೆಗೆ ಹುಲ್ಲಿನ ಮಧ್ಯದಲ್ಲಿ ಬೆಚ್ಚಗೆ ಮಲಗಿದ್ದ ಮರಿಗಳು, ತಾರಕ ಸ್ವರದಲ್ಲಿ ಕಿಚ್ ಕಿಚ್ ಎಂದು ಅರಚಲು ಶುರು ಮಾಡಿದವು.

ನಾವಿಬ್ಬರೂ ಅಯ್ಯೊ ಮರಿಗಳಿವೆ ಎಂದು ಮೊದಲೇ ಗೊತ್ತಾಗಿದ್ದರೆ ಈ ಗೂಡಿನ ತಂಟೆಗೆ ಹೋಗುತ್ತಿರಲಿಲ್ಲ, ಪಾಪ ಮರಿಗಳು ಎಂದುಕೊಂಡು ಅವುಗಳನ್ನು ನೋಡುತ್ತಿದ್ದಂತೆಯೇ, ನಮ್ಮ ಮನೆಯ ಪಕ್ಕದ ಮನೆಯ ಕಾಂಪೌಡಿನ ಮೇಲೆ ನಮ್ಮಿಂದ ಅನತಿ ದೂರದಲ್ಲಿ ಅಳಿಲೊಂದು  ಅಲ್ಲಿಂದಿಲ್ಲಿಗೆ ಇಲ್ಲಿಂದಿಲ್ಲಿಗೆ ಎಗರುತ್ತಾ, ಕಿಚ್ ಕಿಚ್ ಎಂದು ಕಿರುಚತೊಡಗಿತು. ನಮಗೆ ಅನುಮಾನ ಬಂದು, ಉಂಡೆಯಿಂದ ಕೆಳಗೆ ಬಿದ್ದಿದ್ದ ಆ ಮರಿಗಳನ್ನು ಸೂಕ್ಷ್ಮವಾಗಿ ಗಮನಿಸಿದೆವು. ಇಲಿ ಮರಿಗಳಾದರೆ ಸಾಕಷ್ಟು ಉದ್ದವಾಗಿರುವುದಿಲ್ಲ, ಇವುಗಳು ಉದ್ದವಾಗಿದ್ದವು, ಹುಟ್ಟಿ ಒಂದು ವಾರವಾಗಿರಬಹುದೇನೋ. ಅಳಿಲಿಗಿರುವಂತೆ ಈ ಮರಿಗಳ ಬೆನ್ನ ಮೇಲೆ ಮೂರು ಪಟ್ಟೆಗಳಿರದಿದ್ದರಿಂದ ನಾವು ಮೋಸ ಹೋಗಿದ್ದವು.   ಅನುಮಾನವೇ ಇಲ್ಲ, ಅವು ಅಳಿಲಿನ ಮರಿಗಳು. 

ಇದಿಷ್ಟನ್ನೂ ಗಮನಿಸುವಷ್ಟರಲ್ಲಿ ಪಕ್ಕದ ಕಾಂಪೌಡಿನ ಮೇಲೆ ಅಮ್ಮ ಅಳಿಲಿನ ಕಿರುಚಾಟ ಮತ್ತು ಓಡಾಟ ತಾರಕಕ್ಕೇರಿತು. ‘ಅಯ್ಯೋ ಪಾಪ, ಆ ತಾಯಿ ಅಳಿಲು ತನ್ನ ಮರಿಗಳಿಗೆ ಏನಾದರೂ ಅಪಾಯವಾಗಿರಬಹುದೆಂದು ಹೆದರಿ, ಹೇಗೆ ಒದ್ದಾಡುತ್ತಾ ಇದೆ ನೋಡಿ’ ಎಂದೆ. ತಕ್ಷಣ ಪತಿರಾಯರು ಮನೆಯ ಒಳಗಿನಿಂದ ಒಂದು ಬಿಳಿ ಹಾಳೆಯನ್ನು ತಂದು, ಜೋಪಾನವಾಗಿ ಒಂದೊಂದೇ ಮರಿಯನ್ನು ಅದರ ಸಹಾಯದಿಂದ 
ಎತ್ತಿ, ಮೊದಲೇ ಅಗಲ ಮಾಡಿದ್ದ ಆ ನಾರಿನ ಉಂಡೆಯೊಳಗೆ ಹಾಕಿದರು. ನಂತರ ನಿಧಾನವಾಗಿ ಅದು ಎಲ್ಲಿತ್ತೋ ಅಲ್ಲಿಯೇ ಇಟ್ಟು ಬಿಟ್ಟರು.

ನಂತರ ನಾವಿಬ್ಬರೂ ಒಳಗೆ ಬಂದುಬಿಟ್ಟೆವು. ಏಕೆಂದರೆ ನಾವು ಅಲ್ಲಿ ಇರುವಷ್ಟು ಕಾಲವೂ ತಾಯಿ ಅಳಿಲು ಮರಿಗಳ ಬಳಿಗೆ ಬಾರದು. ನಾವು ಒಳಗೆ ಬಂದು ಕಿಟಕಿಯ ಮೂಲಕ ಇಣುಕಿ ನೋಡತೊಡಗಿದೆವು. ಮರಿಗಳ ಕಿಚ್ ಕಿಚ್ ಅಂತೂ ಅನಾಹತವಾಗಿ ಸಾಗಿತ್ತು.   
ತಾಯಿ ಅಳಿಲು ಬಳಿಗೆ ಬರುವುದೇನೋ ಎಂದು ಕಾತರದಿಂದ ಕಾಯುತ್ತಿದ್ದೆವು. ಆದರೆ ಆ ತಾಯಿಯ ಆರನೇ ಇಂದ್ರಿಯಕ್ಕೆ ನಾವು ನೋಡುತ್ತಿರುವ ವಿಷಯ ತಿಳಿದು ಹೋಯಿತೋ ಏನೋ, ಅದು ಗೂಡಿನ ಹತ್ತಿರಕ್ಕೂ ಸುಳಿಯಲಿಲ್ಲ. 

ನಾವೂ ಒಂದರ್ಧ ಗಂಟೆ ಈಗ ಬರಬಹುದು ಆಗ ಬರಬಹುದು ಎಂದು ಕಾದ ನಂತರ, ಅದಿನ್ನು ಬರುವುದಿಲ್ಲವೊ ಏನೋ, ತಾಯಿ‌ ಇಲ್ಲದ  ಮರಿಗಳ ಪಾಡೇನು? ಇನ್ನೂ ಕಣ್ಣೇ ಬಿಡದ ಕಂದಮ್ಮಗಳಿಗೆ ಏನನ್ನುಣಿಸುವುದು ಎಂದೆಲ್ಲಾ ಚಿಂತಿಸತೊಡಗಿದೆ. ಕೊನೆಗೆ ಕಡೇ ಪ್ರಯತ್ನವೆಂಬಂತೆ ಗೂಗಲ್ ಮಹಾಶಯನ ಮೊರೆ ಹೊಕ್ಕೆ. ಅದರಲ್ಲಿ ಅಳಿಲಿನ ಗೂಡು, ಅದರ ಆಹಾರ, ಸಂತಾನೋತ್ಪತ್ತಿಯ ಬಗೆಗೆ ಮಾಹಿತಿಯಿತ್ತೇ ಹೊರತು, ಕಣ್ಣೂ ಬಿಡದ ಮರಿಗಳಿಗೆ ತಿನ್ನಲು ಏನನ್ನು ಕೊಡಬಹುದು ಎಂಬುದರ ಬಗ್ಗೆ ಸುದ್ದಿಯೇ ಇಲ್ಲ. ಗೂಗಲ್ ನಿಂದ ಆದ ಲಾಭವೆಲ್ಲಾ ಒಂದೇ, ಅಳಿಲಿನ‌ ಮರಿಗಳು ತಾವು ಹುಟ್ಟಿದ ಮೂರು ವಾರಗಳವರೆಗೆ ಕಣ್ಣೇ ಬಿಡುವುದಿಲ್ಲ ಎಂಬ ಮಾಹಿತಿ ಅರಿತದ್ದು.

ಇನ್ನೇನು ಮಾಡುವುದು? ತಿನ್ನುವ ಆಸೆಗಾದರೂ ತಾಯಿ ಬರಬಹುದೇನೋ ಎಂದುಕೊಂಡು ಆ ಗೂಡಿನ ಬಳಿ ಒಂದೆರಡು ದ್ರಾಕ್ಷಿ, ಕಿತ್ತಳೆ ಹಣ್ಣಿನ‌ ತೊಳೆಗಳು ಎಲ್ಲಾ ಹಾಕಿದೆ. ಆದರೆ ಸಂಜೆಯಾದರೂ ತಾಯಿ ಅಳಿಲು ಅತ್ತ ಸುಳಿದ ಕುರುಹೇ ಕಾಣಲಿಲ್ಲ. ಹಾಕಿದ್ದ ಹಣ್ಣುಗಳು ಹಾಗೇ ಬಿದ್ದಿದ್ದವು. ಆ ರಾತ್ರಿ ಕಳೆದು ಬೆಳಕಾಯಿತು. ಎದ್ದು ದೇವರ ಮುಖ ನೋಡಿದ್ದೇ ತಡ, ಮರಿಗಳೇನಾಗಿವೆಯೋ ಎಂಬ ಆತಂಕದಿಂದ ಗುಲಾಬಿ ಗಿಡದ ಬಳಿಗೆ ದೌಡಾಯಿಸಿದೆ. ಆದರೆ ಏನಾಶ್ಚರ್ಯ! ಮರಿಗಳಿದ್ದ ಹುಲ್ಲಿನ‌ ಚೆಂಡು ಅಲ್ಲಿರಲಿಲ್ಲ. ಅದರಿಂದ ಹೊರಟ ಒಂದೆರಡು ದಾರದ, ಹುಲ್ಲಿನ ತುಣುಕುಗಳು ಅಲ್ಲಿ ಇಲ್ಲಿ ಬಿದ್ದಿದ್ದವು. ಗೂಡು ಎಲ್ಲಿ ಹೋಯಿತೆಂದು ತಲೆ ಕೆಡಿಸಿಕೊಳ್ಳುತ್ತಿದ್ದಂತೆಯೇ ಪಕ್ಕದ ಮನೆಯ ಕಿಟಕಿಯ ಸಜ್ಜೆಯ ಮೇಲೆ ಆ ಗೂಡು ಕಾಣಿಸಿತು. ಅದು ಅಲ್ಲಿಗೆ ಹೇಗೆ ಹೋಯಿತೆಂದು ಬೆರಗಾಗುವಷ್ಟರಲ್ಲೇ ಆ ಕಿಟಕಿಯ ಪಕ್ಕದ ಮತ್ತೊಂದು ಕಿಟಕಿಯ ಸಜ್ಜೆಯ ಮೇಲೆ ತಾಯಿ ಅಳಿಲು ಕುಳಿತು ತನ್ನ ಎರಡೂ ಕೈಗಳಿಂದ ಮೂಗನ್ನು ಉಜ್ಜಿಕೊಳ್ಳುತ್ತಿರುವುದನ್ನು ಕಂಡಾಗ ನನ್ನ ಮುಖದ ಮೇಲೆ ಮಂದಹಾಸವೊಂದು ಮಿಂಚಿ ಮರೆಯಾಯಿತು.

‍ಲೇಖಕರು Avadhi

April 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Raghavendra rao

    ಅಳಿಲಿನ ಅಕ್ಕರೆ ಹೃದಯಂಗಮವಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: