ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅರಿವೇ ಇಲ್ಲದೇ ಅವಳೀಗ ತಾಯಾಗಿದ್ದಾಳೆ!’ – ರೂಪ ಹಾಸನ್ ಕವಿತೆ

ಆವಿರ್ಭಾವ

ರೂಪ ಹಾಸನ

ಅದು ಬಳ್ಳಿಯಂತೆ

ಕಾಲಿಗೆ ತೊಡರುತ್ತಾ

ಭಯದಂತೆ

ಎದೆಯೊತ್ತಿ ಉಸಿರುಗಟ್ಟಿಸುತ್ತಾ

ಅತ್ತ ತಿರುಗಿದರೆ ಅತ್ತ

ಇತ್ತ ತಿರುಗಿದರೆ ಇತ್ತ

ಎತ್ತಲೆತ್ತಲೂ ಬೆಂಬತ್ತುತ್ತಿತ್ತು.

.

ಕೂರಲೂ ನಿಲ್ಲಲೂ ಬಿಡದೇ

ಹಠ ಹಿಡಿದ ಮಗುವಿನಂತೆ

ಜೀವ ಹಿಂಡುತ್ತಿತ್ತು.

ಪ್ರೀತಿಯಿಂದ ಮೃದುವಾಗಿ

ಕಾತರದಿಂದ ರೂಕ್ಷವಾಗಿ ತಬ್ಬುತ್ತಿತ್ತು

ಇಂಚಿಂಚೂ ವ್ಯಾಪಿಸುತ್ತಾ

ಜ್ವಾಲೆಯಂತೆ ಹಬ್ಬುತ್ತಿತ್ತು

.

ಅವಳು……

ಆ ನೋವನ್ನು

ಪ್ರೀತಿಯಿಂದ ಆಪೋಷಿಸಿಬಿಟ್ಟಳು!

ಅದು ರಕ್ತದ ಕಣಕಣದಲ್ಲೂ

ಸೇರಿಹೋಯಿತು

ಕಣ್ಣಿನೊಳಗಿನ ನೋಟದಂತೆ

ಈಗ ಅವಳೊಳಗೆ

ನೋವು ಬೀಜವಾಗಿ ಊರಿ

ಮೆಲ್ಲಗೆ ಮೊಳಕೆಯೊಡೆದು

ನರನರಗಳನ್ನೂ ಬಳ್ಳಿಯಂತೆ

ಹೆಣೆದು ಬೀಗುವಾಗ

ಅವಳು ಫಲತುಂಬಿ

ಆವಿರ್ಭವಿಸಿ ತೊನೆಯುತ್ತಾಳೆ.

.

ಹಠಮಾರಿ ಕಂದನಿಗೆ ಊಡಿಸುತ್ತಾಳೆ

ಮಡಿಲೊಳಗಿಟ್ಟು ಆಡಿಸುತ್ತಾಳೆ.

ಅರಿವೇ ಇಲ್ಲದೇ

ಅವಳೀಗ ತಾಯಾಗಿದ್ದಾಳೆ!

 

‍ಲೇಖಕರು G

22 December, 2012

6 Comments

  1. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.

    ತಾಯ್ತನದ ಸಂಭ್ರಮದ ಕವಿತೆ ಸೊಗಸಾಗಿದೆ.

  2. Mohan V Kollegal

    ಚೆನ್ನಾಗಿದೆ ಕವಿತೆ… ತಾಯ್ತನವನ್ನು ಒಟ್ಟಾಗಿ ಹಿಡಿಯಲು ಪ್ರಯತ್ನಿಸಿದ್ದೀರಿ… 🙂

  3. arun joladkudligi

    ಹೆಣ್ಣಿನೊಳಗಣ ತಾಯಿ ರೂಪಾಂತರದ ಬೆಸುಗೆಯನ್ನು ಚೆನ್ನಾಗಿ ಹಿಡಿದಿದ್ದೀರಿ.ಕವಿತೆ ಆಪ್ತವೆನ್ನಿಸಿತು.

  4. somashekar

    ತಾಯಿಯಾಗುವ ಪ್ರಕ್ರಿಯೆ ಹೇಳುವ ಕವಿತೆಯ ಆರಂಭದಲ್ಲೆ ‘ಹಠ ಹಿಡಿದ ಮಗುವಿನಂತೆ’ ಪ್ರಯೋಗ ಹೇಗೆ ಸರಿಹೊಂದುವುದೊ ತಿಳಿಯುತ್ತಿಲ್ಲ.

  5. rupa hassan

    ellarigu dhanyavaadagalu. edu tayiyaguva prakriye alla. novige tayiyaaguva prakriye.

  6. somashekar

    ನೋವಿಗೆ ತಾಯಿಯಾಗುವುದು ಅನ್ನುತ್ತೀರಿ, ತಾಯಿಯಾಗುವ ಪ್ರಕ್ರಿಯೆ ಅಲ್ಲ ಅನ್ನುತ್ತೀರಿ. ‘ಗಳಿಗೆ ಬಟ್ಟಲ ತಿರುವು’ಗಳಲ್ಲಿ ದಾರಿತಪ್ಪುವ ಸಮಯವೆಂದರೆ ಇದೇ ಇರಬೇಕು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading