ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರಾಮ ಆದ ಮೇಲೆ ಹಾಲಿನ ಚೀಟಿ ಹರಿದು ಹಾಕು..

ಶಿವಶಂಕರ ಬಣಗಾರ

ನಾನು ಸಿದ್ಧಗಂಗಾ ಮಠದಲ್ಲಿ ಓದದೇ ಹೋಗಿದ್ದರೆ ಇಂದು ಬೀದಿಯಲ್ಲಿ ಕೂಲಿಕಾರನಾಗಿರಬೇಕಾಗಿತ್ತು.

ನನಗೆ ಮುದ್ದಿ ಬುದ್ದಿ ಕೊಟ್ಟ ಆ ಅದಮ್ಯ ಚೇತನ ಇಂದು ಕಣ್ಮರೆಯಾಗಿದೆ.
ಹೃದಯ ಭಾರವಾಗಿದೆ.
ಈಚೆಗೆ ಆಸ್ಪತ್ರೆಗೆ ಸೇರಿದಂದಿನಿಂದ ಅವರು ಚೇತರಿಸಿಕೊಳ್ಳಲೆಂದು ನಿತ್ಯವೂ ಪಾರ್ಥನೆಗೈಯ್ದಿದ್ದು ಸುಳ್ಳಲ್ಲ.

ನನ್ನಂತಹ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ ನೀಡಿ ಶಿಕ್ಷಣ ಕೊಟ್ಟು ಇಂದು ಮಾನವಂತ ಬದುಕನ್ನು ಸಾಗಿಸಲು ಅವರು ಪಟ್ಟ ಶ್ರಮ ವರ್ಣಿಸಲು ಪದಗಳು ನಿಲುಕುವುದಿಲ್ಲ.

1982 ರಿಂದ 1986 ರವರೆಗೆ ಸಿದ್ದಗಂಗಾ ಮಠದಲ್ಲಿ ಹಿರಿಯ ಮಾಧ್ಯಮಿಕ, ಪ್ರೌಢಶಿಕ್ಷಣ ಮುಗಿಸಿದ ನಾನು ಕಾರಣಾಂತರಗಳಿಂದ ಮಠ ತೊರೆಯಬೇಕಾಯಿತು. ಬಯಲುಸೀಮೆಯಿಂದ ಅದರಲ್ಲೂ ಬಿಸಿಲನಾಡಿನಿಂದ ಹೋದ ನನಗೆ ಆರಂಭದಲ್ಲಿ ರಾಗಿಮುದ್ದೆ ತಿಂದು ರಕ್ತಬೇಧಿಯಾಗಿತ್ತು. ಆ ಸಂದರ್ಭದಲ್ಲಿ ಸ್ವಾಮೀಜಿಯವರನ್ನು ಭೇಟಿಯಾದೆ.

ಬುದ್ದಿ ಹೊಟ್ಟೆನೋವು ರಕ್ತ ಬೇಧಿ ಎಂದು ಹೇಳಿಕೊಂಡು ಊರಿಗೆ ಹೋಗುತ್ತೇನೆ ಎಂದು ಹೇಳಿದಾಗ ಅವರು ಮಾತಾಡಿದ್ದು … ‘’ ಖಾಯಿಲೆ ತೊಂದ್ರೆ ಬಂದ್ರೆ ಊರಿಗೆ ಹೋದ್ರೆ ಹೆಂಗಪ್ಪ. ಮಠದಲ್ಲಿ ವೈದ್ಯರಿದ್ದಾರೆ. ತೋರಿಸಿಕೊ ಹಾಲಿನ ಚೀಟಿ ಕೊಡ್ತೇನೆ 4 ದಿನ ಹಾಲು ಅನ್ನ ಊಟ ಮಾಡು ಎಲ್ಲಾ ಸರಿ ಹೋಗುತ್ತೆ. ಊರಿಗೆ ಹೋಗೋ ವಿಚಾರ ಕೈಬಿಡು ಅಲ್ಲಿ ನಿನ್ನ ತಂದೆ ತಾಯಿ ಕಷ್ಟ ಎಂದು ಇಲ್ಲಿ ಬಿಟ್ಟಿದ್ದಾರೆ ಮತ್ತೆ ಅಲ್ಲಿಗೆ ಹೋಗಿ ತೊಂದ್ರೆ ಕೊಡಬೇಡ… ನೀನು ಅರಾಮ ಆದ ಮೇಲೆ ನಿನಗೆ ಕೊಟ್ಟ ಹಾಲಿನ ಚೀಟಿಯನ್ನು ಹರಿದು ಹಾಕು ‘’ ಎಂದು ಹತ್ತಿರ ಕರೆದು ಬಾಚಿಕೊಂಡು ಮುದ್ದಾಡಿದ ಕ್ಷಣಗಳನ್ನು ನೆನೆಸಿಕೊಂಡರೆ ಕಣ್ತೇವಗೊಳ್ಳುತ್ತದೆ. ಅವರ ಮಾತೃ ಹೃದಯಿ ಮಾತುಗಳಿಂದ ಮೊದಲೇ ಅಧೀರನಾಗಿದ್ದ ನಾನು ಅವರ ಮಾತುಗಳಿಂದ ಚೇತರಿಸಿಕೊಂಡೆ.

ಮಠ ತೊರೆದ ನಂತರ ಎಸ್ ಎಸ್ ಎಲ್ ಸಿಯನ್ನು ಹುಟ್ಟೂರು ಆದ ಮರಿಯಮ್ಮನಹಳ್ಳಿಯಲ್ಲಿ ಮಾಡಿದೆ. ಅದಾದ ಮೇಲೆ ನಾಲ್ಕೈದು ವರ್ಷಗಳ ಹಿಂದೆ ನಾನು ಉದಯವಾಣಿಯಲ್ಲಿ ವರದಿಗಾರನಾಗಿದ್ದಾಗ ಮಠಕ್ಕೆ ಭೇಟಿಕೊಟ್ಟು ಬುದ್ದಿಗಳಿಗೆ ನಮಸ್ಕರಿಸಿ ನಾನು ಮಠದ ಹಳೆಯ ವಿದ್ಯಾರ್ಥಿ ಬುದ್ದಿ ಎಂದೆ. ಏನು ಮಾಡ್ಕೊಂಡಿದಿಯಾ, ಯಾವ ವರ್ಷ ಓದಿದ್ದು ಎಂದೆಲ್ಲಾ ಕೇಳಿದ್ರು ಪತ್ರಕರ್ತನಾಗಿದಿನಿ ಎಂದೆ. ಜೊತೆಗೆ ಜಾಹಿರಾತು ಸಂಸ್ಥೆಯೊಂದನ್ನು ನಡೆಸುತ್ತಿದ್ದೀನಿ ಬುದ್ದಿ ಅಂದೆ. ಪತ್ರಕರ್ತ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಸ್ವಹಿತಾಸಕ್ತಿಗಿಂತ ಜನಸಾಮಾನ್ಯರ ನೋವು ಸಂಕಷ್ಟಗಳಿಗೆ ದನಿಯಾಗಬೇಕು ಹೆದರಿಸೋದು ಬೆದರಿಸಿ ಸಮಾಜದ ಕಂಟಕಪ್ರಾಯನಾಗಬಾರದು. ಓದಿದ ಮಠಕ್ಕೆ ತಂದೆ ತಾಯಿಗಳಿಗೆ ಹೆಸರು ತರುವಂತಾಗಬೇಕೆಂದು ಹಿತನುಡಿಗಳನ್ನಾಡಿ ಆಶೀರ್ವಾದ ಮಾಡಿ ಕಳುಹಿಸಿದ್ದರು ಅದೇ ಭೇಟಿ ಕೊನೆಯಾಯ್ತು.

ಇಂದಿಗೂ ನಾನು ಬೆಳಗಾಗೆದ್ದು ನಿತ್ಯ ಸ್ಮರಣೆಮಾಡಿಕೊಳ್ಳುವೆ. ಅಲ್ಲಿ ನಾನು ಮತ್ತು ನಮ್ಮ ಅಣ್ಣ ಓದದೇ ಹೋಗಿದ್ದರೆ ಇಂದು ಬೀದಿಯಲ್ಲಿ ಐಸ್ಕ್ಯಾಂಡಿ ಮಾರುತ್ತಲೋ… ಕೂಲಿಕಾರನಾಗಿಯೋ ಇರಬೇಕಿತ್ತು. ನನ್ನಂತಹ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕಿಗೆ ದಾರಿ ಮಾಡಿದ ಆ ದಿವ್ಯ ಚೇತನಕ್ಕೆ ಚಿರಶಾಂತಿ ದೊರಕಲೆಂದು ಹಂಪಿ ವಿರೂಪಾಕ್ಷನಲ್ಲಿ ಬೇಡುವೆ.

‍ಲೇಖಕರು avadhi

22 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading