ಮಾತಿನಂಗಡಿಯಲ್ಲಿ ಮೌನ‌ ತಂದವಳು‌…


“ಇಲ್ಲಿ ಮಾತುಗಳನ್ನು ಮಾರಲಾಗುತ್ತದೆ” ಎಂದು ಬೋರ್ಡ್ ಹಾಕಿಕೊಂಡು ಆತ ಅಂಗಡಿ ತರೆದಾಗ ಅವನನ್ನು ಗೇಲಿ ಮಾಡಿದವರೇ ಹೆಚ್ಚು. ‘ಇದೆಂಥ ಹುಚ್ಚಾಟ ? ಮಾತುಗಳನ್ನು ವ್ಯಾಪಾರ ಮಾಡಲು ಬರುತ್ತದೆಯೇ ? ‘ ಎಂದು ಮೂಗು ಮುರಿದವರಿಗೇನು ಕಮ್ಮಿಯಿರಲಿಲ್ಲ. ಆರಂಭದ ದಿನಗಳಲ್ಲಿ ಇವನ ಹುನ್ನಾರ ಏನಿರಬಹುದೋ ಎಂದು ಆತನ ಅಂಗಡಿಯ ಬಳಿ ಯಾರೂ ಸುಳಿಯಲಿಲ್ಲ. ಆದರೆ ಆತನಿಗೆ ತನ್ನ ‘ಸರಕಿನ’ ಬಗ್ಗೆ ಅಚಲವಾದ ನಂಬಿಕೆ ಇತ್ತು. ಕ್ರಮೇಣ ಜನರಿಗೆ ಆ ಅಂಗಡಿಯ ಬಗ್ಗೆ ಕುತೂಹಲ ಮೂಡಲಾರಂಭಿಸಿ ಒಂದೊಂದೇ ವರ್ಗದವರು ಅಲ್ಲಿಗೆ ಬರಲಾರಂಭಿಸಿದರು.

ಅವನೆಂಥ ಮಾತಿನ ಮೋಡಿಗಾರ ಎಂಬುದು ಅರಿವಾದದ್ದೇ ಆಗ. ಅವನ ಬಳಿ ಸಾಂತ್ವನದ ಮಾತುಗಳಿದ್ದವು. ಪ್ರಚೋದನೆಯ ಮಾತುಗಳೂ ಇದ್ದವು. ಜನಗಳ ಅವಶ್ಯಕತೆಗೆ ತಕ್ಕಂತೆ ಮಾತನಾಡಬಲ್ಲ ಪ್ರತಿಭೆ ಅವನಲ್ಲಿದ್ದುದರಿಂದಲೇ ಆತ ದಿನೇದಿನೇ ಹೆಚ್ಚೆಚ್ಚು ‘ಗಿರಾಕಿ’ಗಳನ್ನು ಸೆಳೆಯಲಾರಂಭಿಸಿದ. ಎಂಥೆಂಥಾ ಮಾತುಗಳಿಗೆ ಯಾವ ಯಾವ ದರ ಎಂಬುದರ ಬೆಲೆಪಟ್ಟಿ ನಿಗದಿಪಡಿಸಿಬಿಟ್ಟ. ಆ ವಿಚಾರವಾಗಿ ಯಾರೂ ಚೌಕಾಸಿ ಮಾಡುವಂತಿರಲಿಲ್ಲ. ಉದಾಹರಣೆಗೆ ರಾಷ್ಟ್ರ ರಾಜಕಾರಣದ ಬಗ್ಗೆ ಮಾತಾಡಲು ಅರ್ಧ ಗಂಟೆಗೆ 50 ರೂಪಾಯಿ. ಅಮೇರಿಕದ ಅಧ್ಯಕ್ಷರ ಬಗ್ಗೆ ಮಾತನಾಡಲು 75 ರೂಪಾಯಿ. ಕಳೆದವಾರ ಬಿಡುಗಡೆಯಾದ ಸಿನಿಮಾ ಬಗ್ಗೆ 40 ರೂಪಾಯಿ – ಹೀಗೆ ಒಂದೊಂದು ವಿಷಯಕ್ಕೆ ಒಂದೊಂದು ದರ. ಜನರ ಅಭಿರುಚಿಗಳನ್ನೆಲ್ಲ ಕರಗತ ಮಾಡಿಕೊಂಡವನಂತೆ ಮಾತನಾಡುತ್ತಿದ್ದ ಆತ ಯಾರಿಗೂ ನಿರಾಸೆ ಮಾಡುತ್ತಿರಲಿಲ್ಲ.

ರಾಜಕಾರಣಿಗಳು ಬಂದು ಕೂತು ವಿರೋಧ ಪಕ್ಷದವರನ್ನು ಬೈದುಕೊಳ್ಳುವಾಗ ಅವರಂತೆಯೂ, ನಿರುದ್ಯೋಗಿಯೊಬ್ಬ ಆತ್ಮಹತ್ಯೆಯ ಹಾದಿ ಹಿಡಿಯುವಂತೆ ಮಾತನಾಡಿದಾಗ ಅವನಲ್ಲಿ ಆತ್ಮವಿಶ್ವಾಸ ತುಂಬುವಂತೆಯೂ, ಪಡ್ಡೆ ಹುಡುಗರು ಬಂದು ಪೋಲಿ ಜೋಕುಗಳನ್ನು ಕೇಳಿದಾಗ ಅವರಿಗೆ ಖುಷಿಯಾಗುವಂತೆಯೂ, ವೃಥಾ ಕಾಲ ಹರಣಕ್ಕಾಗಿ ಬಂದು ಹರಟುವ ಗುಂಪಿಗೂ ತೃಪ್ತಿಯಾಗುವಂತೆ, ಸಾಹಿತ್ಯಾಸಕ್ತರು ಬಂದರೆ ಅವರ ನೆಚ್ಚಿನ ಪುಸ್ತಕ ಮತ್ತು ಲೇಖಕರ ಬಗ್ಗೆ ಆಸಕ್ತಿಕರವಾಗಿಯೂ, ಲೈಂಗಿಕ ವಿಷಯಗಳ ಬಗ್ಗೆ ತಜ್ಞನಂತೆಯೂ, ಪ್ರವಾಸಿ ತಾಣಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿವರವಾಗಿಯೂ ಮಾತನಾಡಬಲ್ಲವನಾಗಿದ್ದ ಆತನ ಅಂಗಡಿಯ ವ್ಯಾಪಾರ ಲಾಭದಾಯಕವಾಗಿ ನಡೆಯತೊಡಗಿತು. ಯಾರೊಬ್ಬರೂ ಅವನ ಬಳಿ ವ್ಯಕ್ತಿಗತವಾದ ವಿಷಯಗಳನ್ನು ಮಾತಾಡುತ್ತಿರಲಿಲ್ಲ. ಯಾಂತ್ರಿಕವಾಗಿ ತಂತಮ್ಮ ನಿರೀಕ್ಷೆಗಳಿಗನುಗುಣವಾಗಿ ಮಾತ್ರ ವ್ಯವಹರಿಸುತ್ತಿದ್ದರು.

* * ‌‌‌ * *
ಈ ಮಾತಿನಂಗಡಿಗೆ ಒಂದು ದಿನ ಓರ್ವ ಹೆಂಗಸು ಬಂದಳು. ಅಲ್ಲಿದ್ದ Price List ನೋಡಿ ತನಗೆ ಬೇಕಾದ ಮಾತುಗಳು ಆ ಪಟ್ಟಿಯಲ್ಲಿಲ್ಲದಿರುವುದನ್ನು ಕಂಡು ಹಿಂತಿರುಗುತ್ತಿದ್ದಳು. ಅಷ್ಟರಲ್ಲಿ, ‘ನಿಲ್ಲಿ, ಯಾಕೆ ವಾಪಾಸ್ ಹೋಗ್ತಿದ್ದೀರ? ಎಂದ ಮಾತಿನಂಗಡಿಯ ಮಾಲಿಕ. ‘ಇಲ್ಲ ನಿಮ್ಮ ಪಟ್ಟಿಯಲ್ಲಿ ನನಗೆ ಬೇಕಾದ ಮಾತುಗಳಿಲ್ಲ ಬಿಡಿ ‘ ಎಂದು ಆಕೆ ಹೇಳುತ್ತಿದ್ದಂತೆಯೇ ಮಾಲಿಕನಿಗೆ ಅವಮಾನವಾದಂತಾಯಿತು. ‘ಅದೇನು ಅಂತ ಹೇಳಿ. ಇದುವರೆಗೆ ಇಲ್ಲಿಗೆ ಬಂದ ಯಾವ ಗಿರಾಕಿಯನ್ನು ನಾನು ಮಾತುಗಳಿಲ್ಲದ ಕಾರಣಕ್ಕೆ ವಾಪಸ್ ಕಳಿಸಿಲ್ಲ. ಹೇಳಿ, ಯಾವ ಮಾತುಗಳು ಬೇಕು? ಎಂದು ಅಧಿಕಾರಯುತವಾಗಿ ಕೇಳಿದ.

‘ನಿಮ್ಮ ಬಳಿ ತಿರಸ್ಕಾರದ ಮಾತುಗಳಿವೆಯಾ ? ‘ ನಿಷ್ಠುರವಾಗಿ ಕೇಳಿದಳಾಕೆ. ಆತ ಕೊಂಚ ಗಲಿಬಿಲಿಗೊಂಡ. ‘ ಹೇಳ್ರಿ, ನಿಮ್ಮ ಬಳಿ ತಿರಸ್ಕಾರದ ಮಾತುಗಳಿವೆಯಾ?’ ಮತ್ತೆ ಕೇಳಿದಳು.

‘ಇದೇನು ? ನೀವು ಇಂತಹ ಪ್ರಶ್ನೆ ಕೇಳ್ತಿದೀರಿ. ಇಲ್ಲಿ ಆಗಾಗ ಪ್ರೀತಿಯ ಮಾತು ,ಸಾಂತ್ವನದ ಮಾತು, ಭರವಸೆಯ ಮಾತು ಕೇಳಿ ಬಂದವರಿದ್ದಾರೆ. ಅವರಿಗೆಲ್ಲ ನಾನು ‘ ಮಾತಿನ ಸೇವೆ’ ( Lip Service) ನೀಡಿ ಮುಖದಲ್ಲಿ ನಗು ತರಿಸಿ ಕಳಿಸಿದ್ದೇನೆ. ನೀವು ನೋಡಿದರೆ ಹೀಗೆ ತಿರಸ್ಕಾರದ ಮಾತುಗಳನ್ನ ಕೇಳ್ತಿದ್ದೀರಲ್ಲ ? ಯಾಕೆ‌ ಅಂತ ಕೇಳಬಹುದೆ ? ‘ ಎಂದು ಮಾಲಿಕ ಮರುಪ್ರಶ್ನೆ ಹಾಕಿದ.

‘ಪ್ರೀತಿಯ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ. ಯಾವಾಗಲೂ ಪ್ರೀತಿಯ ಮಾತಾಡುತ್ತಿದ್ದವನು ಮನದ ಆಳದಲ್ಲಿ ಇಟ್ಟುಕೊಂಡಿದ್ದ ತಿರಸ್ಕಾರದ ಕುರುಹನ್ನೂ ಕೊಡದೆ, ವಂಚಿಸಿ ಹೋದನೆಂದರೆ ಅವನ ಮನಸ್ಸಲ್ಲಿದ್ದ ಆ ತಿರಸ್ಕಾರವಾದರೂ ಎಂಥದ್ದಾಗಿತ್ತು ಎಂಬುದನ್ನು ತಿಳಿಯಲೇಬೇಕಿನಿಸಿದೆ. ಹೇಳಿ, ಮೋಹದ ಮಾತುಗಳ ಹಿಂದೆ ಅಡಗಿದ್ದ ಆ ಅಲಕ್ಷ್ಯ ವಾದರೂ ಎಂಥದ್ದು ?

‘ಅದೂ ತೀರ ವೈಯಕ್ತಿಕವಾದ ವಿಚಾರವಲ್ಲವೆ ಮೇಡಂ. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿ ಇರುತ್ತದೆ. ಅಂಥ ಮಾತುಗಳನ್ನೆಲ್ಲ ನಾನ್ಹೇಗೆ ಮಾರಲಿ ?’ ಎಂದು ನುಣುಚಿಕೊಳ್ಳಲು ಪ್ರಯತ್ನಿಸಿದ ಮಾಲಿಕ.

ಅದಕ್ಕೆ ಆಕೆ, ‘ ಹೌದಲ್ಲವೆ ? ಪ್ರೀತಿಯ ಮಾತುಗಳು ಜಗದಲ್ಲೆಲ್ಲ ಒಂದೇ ರೀತಿಯದ್ದು . ಅಲಂಕಾರಗಳು ಬದಲಿರಬಹುದಷ್ಟೆ. ಆದರೆ ತಿರಸ್ಕಾರ ಮಾತ್ರ ವೈವಿಧ್ಯಮಯವಾದುದೆ ? ಸುಮ್ಮನೆ ನನ್ನ ತಡೆದು ನಿಲ್ಲಿಸಿದಿರಿ. ಈಗ ನನಗೆ ಬೇಕಾದ ಮಾತುಗಳು ನಿಮ್ಮ ಅಂಗಡಿಯಲ್ಲಿ ಇಲ್ಲ ಎನ್ನಿತ್ತಿದ್ದೀರಿ’ ಎಂದವಳು ಹಿಂತಿರುಗಿ ಹೊರಟಳು.

ನಾಲ್ಕಾರು ಹೆಜ್ಜೆಯಿಡುವಷ್ಟರಲ್ಲಿ , ‘ನಾಳೆ ಬನ್ನಿ. ನಿಮಗೆ ಬೇಕಾದ ಮಾತುಗಳು ಸಿಗುತ್ತವೆ ‘ ಎಂಬ ವಿಶ್ವಾಸದ ಧ್ವನಿ ಕೇಳಿ ಬಂತು. ಯಾವುದೇ ಕಿಮ್ಮತ್ತು ಕೊಡದೆ, ಹಿಂತಿರುಗಿಯೂ ನೋಡದೆ ಹೋದಳಾಕೆ. ಆದರವನಿಗೆ ದೃಢವಾದ ನಂಬಿಕೆಯಿತ್ತು; ಆಕೆ ಬಂದೇ ಬರುತ್ತಾಳೆಂದು.

* * * * *

ಅವನ ನಂಬಿಕೆ ಹುಸಿಯಾಗಲಿಲ್ಲ. ಮರುದಿನ ಆಕೆ ಆಶಾಭಾವನೆಯಿಂದ ಮಾತಿನಂಗಡಿಗೆ ಬಂದಳು. ಅಂಗಡಿಯಾತ ತಕ್ಷಣ ಅವಳ ಬಳಿ ಓಡಿ ಬಂದು, ‘ತಪ್ಪು ತಿಳಿಯಬೇಡಿ. ನನ್ನನ್ನು ಕ್ಷಮಿಸಿ. ನಿಮ್ಮ ಮಾತುಗಳು ಇನ್ನೂ ಸಿದ್ಧವಾಗಿಲ್ಲ. ದಯವಿಟ್ಟು ನಾಳೆ ಬನ್ನಿ’ ಎಂದ. ಅವಳಿಗೆ ರೇಗಿಬಿಟ್ಟಿತು. ಆದರೆ ಆ ಮಾತುಗಳ ಬಗ್ಗೆ ವಿಪರೀತ ಅವಲಂಬಿತಳಾಗಿದ್ದ ಅವಳಿಗೆ ರೇಗಾಡುವುದು ಬೇಕಿರಲಿಲ್ಲ. ‘ಆಯ್ತು’ ಎಂದಷ್ಟೇ ಹೇಳಿ ವಾಪಸ್ಸಾದಳು. ಮರುದಿನ ಮತ್ತೆ ಬಂದಳು.‌ ಆಗಲೂ ಹಾಗೆ ಆಯಿತು. ಮತ್ತೆ ಮತ್ತೆ ಇದು ಹಾಗೇ ನಡೆಯಿತು.

ಒಂದು ದಿನ ಅಂಗಡಿಗೆ ಬಂದಾಕೆ ಏರು ಧ್ವನಿಯಲ್ಲಿ ‘ಯಾಕಯ್ಯ ಸುಳ್ಳು ಭರವಸೆ ಕೊಡ್ತೀಯಾ ? ಇಲ್ಲ ಅಂದ್ರೆ ಇಲ್ಲ ಅನ್ಬೇಕು . ಇದೆ ಅಂದ್ರೆ ಇದೆ ಅನ್ಬೇಕು . ಅದ್ನ ಬಿಟ್ಟು ಹೀಗೆ ಕಾಯಿಸೋದು ಯಾಕೆ ?’ ಎಂದು ಜೋರು ಮಾಡಿದಳು.

ಅದಕ್ಕೆ ಆತ ನಕ್ಕು , ‘ ತರಸ್ಕಾರದ ಮಾತುಗಳನ್ನೇ ಕೇಳಬೇಕೆಂಬ ನಿಮಗೂ, ಮಾತಿನ ಅಂಗಡಿ ಇಟ್ಟಿರುವ ನನಗೂ ಯಾವುದೇ ವ್ಯತ್ಯಾಸವಿಲ್ಲ. ನಾನೂ ಕೂಡ ಅವನ್ನೇ ಹುಡುಕುತ್ತಿದ್ದೇನೆ .‌ ‘ ಎಂದ.

‘ಏನಿದರರ್ಥ ? ‘ ಎಂದಳಾಕೆ.

ಅದಕ್ಕವನು :
“ನಿನ್ನ ಮಾತುಗಳೇ ಚೆಂದ ಕಣೋ’ ಎಂದು ಹತ್ತಿರವಾದವಳು, ಸದಾ ನನ್ನ ಮಾತುಗಳಿಗಾಗಿ ಹಾತೊರೆಯುತ್ತಿದ್ದವಳು , ದಿನವಿಡೀ ಕೂತು ನೀನು ಮಾತಾಡಿದರೂ ಕೇಳಬೇಕೆಂದೆನ್ನಿಸುತ್ತೆ ಕಣೋ ಎನ್ನುತ್ತಿದ್ದವಳು, ನನ್ನ ಸರಸದ ಮಾತಿಗೆ ತನ್ನ ನವಿರಾದ ಮಾತುಗಳನ್ನು ಜೋಡಿಸುತ್ತಿದ್ದವಳು ಒಂದು ಸಣ್ಣ ಸುಳಿವೂ ಕೊಡದೆ ನನ್ನನ್ನು ತಿರಸ್ಕರಿಸಿದ್ದೇಕೆ ಎಂದು ತಿಳಿದಿದ್ದರೆ ನಾನ್ಯಾಕೆ ಈ ‘ಮಾತಿನಂಗಡಿ’ ತೆರೆಯುತ್ತಿದ್ದೆ ಹೇಳಿ. ‘ಮಾತಿನರಮನೆ ಕಟ್ಟುವ ಅಭಿಯಂತರ ನೀನು’ ಎಂದವಳು ಹೇಳಿದಾಗೆಲ್ಲ ಅದನ್ನು ಪ್ರೀತಿಯ ಮಾತೇ ಅಂದುಕೊಂಡವನು ನಾನು. ಆದರೆ ಅದರ ಹಿಂದಿದ್ದ ವ್ಯಂಗ್ಯ ಈಗ ಅರ್ಥವಾಗುತ್ತಿದೆ. ನನ್ನ ಮಾತುಗಳಿಗೆಲ್ಲ ಕಿವಿಯಾಗುತ್ತಿದ್ದ ಆಕೆ ಇದ್ದಕ್ಕಿದ್ದಂತೆ ಒಂದು ದಿನ ನಾನು ಮಾತಾಡುತ್ತಿರುವಾಗಲೇ ಎದ್ದು ಹೋದಳು. ಮಾತಿನ ಮಧ್ಯೆ ವಿರಾಮ ಬಯಸಿ ಹೋಗಿದ್ದಾಳೆ ಅಂದುಕೊಂಡೆ. ಆದರೆ ಅವಳು ನನ್ನ ಮಾತುಗಳಿಗೇ ವಿರಾಮ ಬಯಸಿದ್ದಳೆಂಬ ಕಿಂಚಿತ್ ಊಹೆ ನನ್ನಲ್ಲಿರಲಿಲ್ಲ. ಕೆಲಕಾಲ ನನ್ನ ಮಾತೇ ನಿಂತು ಹೋದವು. ಮಹಾಮೌನಿಯಾದೆನೇನೋ ಎಂಬಂತೆ ವಿನಾಕಾರಣ ವರ್ತಿಸಿದೆ. ಅದು ಮುಖವಾಡ ಎಂದು ಅರಿವಾದದ್ದೇ ತಡ ಈ ಮಾತು ಮಾರುವ ಕೆಲಸಕ್ಕೆ ನಿಂತೆ.‌ ಜನರಿಗೆ ಎಂಥ ಮಾತುಗಳು ಬೇಕೆಂಬುದನ್ನು ಕರಗತ ಮಾಡಿಕೊಂಡೆ. ಮೊದಲು ನನ್ನ ನೋಡಿ ನಕ್ಕ ಜನ ಈಗ ಖಾಯಂ ಗಿರಾಕಿಗಳಾಗಿದ್ದಾರೆ ನೋಡಿ. ಅಂತೆಯೇ ನಿಮಗೂ ಮಾತು ಮಾರಬಹುದು ಅಂದುಕೊಂಡೆ.‌ ಸಮಯ ಕೇಳಿದೆ. ಆದರೆ ಪ್ರೀತಿಯ ಮಾತುಗಳನ್ನಾಡಿದಷ್ಟು ಸುಲಭವಾಗಿ ತಿರಸ್ಕಾರದ‌ ಮಾತುಗಳನ್ನಾಡಲು ಸಾಧ್ಯವಿಲ್ಲ ಎಂಬುದು ಈಗ ಅರಿವಾಯಿತು.” ಎಂದು ತನ್ನ ವೃತ್ತಾಂತವನ್ನ ಆ ಮಾಲಿಕ ವಿವರಿಸುತ್ತಿದ್ದಂತೆಯೇ ಆಕೆ ಅಂಗಡಿಯಿಂದ ಮಾರುದೂರ ಹೋಗಿ ನಿಂತಿದ್ದಳು.

* * * ‌‌‌ *

ಮತ್ತೆ ಕೆಲ‌ದಿನಗಳ ನಂತರ ಆ ಅಂಗಡಿಗೆ ಬಂದ ಆಕೆ ಅವನ ಬಳಿ ಬಂದು ‘ನೀವು ನನಗೆ ಪ್ರೀತಿಯ ಮಾತುಗಳನ್ನು ಮಾರುತ್ತೀರಾ ? ‘ ಎಂದಳು. ಅವನು ಮತ್ತೆ ಮೌನಿಯಾದ. ಮತ್ತೊಂದು ಬಾರಿ ತಿರಸ್ಕೃತನಾಗುವುದು ಅವನಿಗೆ ಬೇಕಿರಲಿಲ್ಲ…

ಆದರೂ ಆಕೆ ಆ ಅಂಗಡಿಯ ಬಳಿ ದಿನಾಲೂ ಬಂದು ಕೂರುತ್ತಿದ್ದಳು … ಅವನ ಬಳಿ ಮಾತುಗಳು ಖಾಲಿಯಾಗಿ ಒಂದು ದಿನ ಅಂಗಡಿ ಮುಚ್ಚಲು ಹೊರಟ. ಆಕೆ ಅದಕ್ಕೆ ಅವಕಾಶ ಕೊಡಲಿಲ್ಲ. ತಾನು ಮಾತಿನಂಗಡಿ ಮುನ್ನಡೆಸುವುದಾಗಿ ಹಠ ಹಿಡಿದಳು. ಅವನು ಒಪ್ಪಲೇಬೇಕಾಯಿತು…

ಈಗ ಅಂಗಡಿ ಲಾಭದಾಯಕವಾಗಿ ನಡೆಯುತ್ತಿದೆ. ಅವನ ಪಾಲು ಅವನದು ಮತ್ತಿವಳದು ಇವಳಿಗೆ ! ಈ ಪಾಲುದಾರಿಕೆಯಲ್ಲಿ ಎಂದೂ ಪ್ರೀತಿ ನುಸುಳಿಲ್ಲ ಎಂಬುದೇ ಸಮಾಧಾನಕರ ಸುದ್ದಿ. ಹಾಗಾಗಿಯೇ ಏನೋ ಯಾವ ಗಿರಾಕಿಗಳೂ ಇಲ್ಲದಿರುವಾಗ ಆ ಅಂಗಡಿಯಲ್ಲೊಂದು ‘ ಮಹಾಮೌನ’ ಹೊದ್ದುಕೊಂಡಿರುತ್ತೆ. . . Will that suffice ?

‍ಲೇಖಕರು avadhi

January 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

8 ಪ್ರತಿಕ್ರಿಯೆಗಳು

  1. Bindu

    Awesome !!!.ನಿಮ್ಮ ಪ್ರತಿ ಬರಹಗಳು ನನ್ನ ಆಲೋಚನೆಯ ದಿಕ್ಕನ್ನು ಬದಲಿಸುತ್ತವೆ

    ಪ್ರತಿಕ್ರಿಯೆ
    • Shivakumar mavali R M

      ಧನ್ಯವಾದಗಳು ನಿಮ್ಮ ಅನಿಸಿಕೆಗೆ…‌

      ಪ್ರತಿಕ್ರಿಯೆ
  2. ಮಠದ ಮೆಹಬೂಬ್

    ನನಗೂ ಒಂದಿಷ್ಟು ಮಾತುಗಳು ಬೇಕು, ದಯವಿಟ್ಟು ನಿಮ್ಮ ಅಂಗಡಿಯ ವಿಳಾಸ ತಿಳಿಸಿ .

    ಪ್ರತಿಕ್ರಿಯೆ
  3. Aishwarya H Shetty

    Wow sir
    ನಿಮ್ಮ ಬರಹಕ್ಕೆ ಬೆಲೆ ಕಟ್ಟಲಾಗದು..
    ನನಗೂ ಒಂದು ಯೋಚನೆ ಬಂದಿತು “ನಾನ್ಯಾಕೆ
    ಮಾತಿನ ಅಂಗಡಿ ತೆರೆಯಬಾರದು”ಎಂದು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: