ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ಕಲಿಸಿದ ಮರೆಯಲಾಗದ ಪಾಠಗಳು

ಎ ಆರ್ ಮಣಿಕಾಂತ್

ನಾನಾಗ ಆರನೇ ತರಗತಿಯಲ್ಲಿದ್ದೆ. ಅವತ್ತು ಶನಿವಾರ. ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಮನೆ ತಲುಪುವ ವೇಳೆಗೆ ಅಮ್ಮ ಎಲ್ಲಿಗೋ ಹೋಗಲು ತಯಾರಾಗಿ ನಿಂತಿದ್ದಳು. ನನ್ನನ್ನು ಕಂಡದ್ದೇ, ‘ಅರ್ಜೆಂಟ್…. ನಾಗಮಂಗಲಕ್ಕೆ ಹೋಗಬೇಕಾಗಿದೆ. ಬೇಗ ವಾಪಸ್ ಬಂದುಬಿದ್ದೇನೆ. ಹುಷಾರಾಗಿರು, ಯಾರ ಜೊತೆಯೂ ಜಗಳಕ್ಕೆ, ಕುಸ್ತಿಗೆ ಹೋಗಬೇಡ’ ಎಂದು ಎಚ್ಚರಿಸಿ, ಬಸ್ ಹಿಡಿಯಲು ಪಕ್ಕದೂರಿಗೆ ಹೋದಳು. ನಮ್ಮೂರಿಗೆ ಬಸ್ ಬರುವುದಿಲ್ಲ. ಹಾಗಾಗಿ, ಬಸ್‌ಗಾಗಿ ಪಕ್ಕದೂರಿಗೆ ನಡೆದು ಹೋಗಲೇಬೇಕಿತ್ತು.

ಅಮ್ಮ ವಾಪಸ್ ಬರುವವರೆಗೂ ಟೈಂಪಾಸ್ ಮಾಡುವುದರ ಹೊರತಾಗಿ ನನಗೆ ಬೇರೇನೂ ಕೆಲಸವಿರಲಿಲ್ಲ. ಮನೇಲಿದ್ದು ಮಾಡುವುದೇನು? ಊರಾಚೆಗಿರುವ ಮಾವಿನ ತೋಪಿಗೆ ಹೋಗಿ ರಸ್ತೆ ಬದಿಯಲ್ಲಿ ಬಿದ್ದಿರುವ ಮಾವಿನಕಾಯಿಗಳನ್ನು ಆಯ್ದು ತರುವ ಆಸೆಯಾಯಿತು. ಮುಂದಿನ ಐದೇ ನಿಮಿಷದಲ್ಲಿ ನಾನು ತೋಪಿನ ಬಳಿಯಿದ್ದೆ.

ಅವತ್ತು ನನ್ನ ಅದೃಷ್ಟವೋ, ದುರಾದೃಷ್ಟವೋ ಗೊತ್ತಿಲ್ಲ; ನಾನು ಮಾವಿನತೋಪು ತಲುಪಿದ ವೇಳೆಗೆ ಸರಿಯಾಗಿ, ರಸ್ತೆಯುದ್ದಕ್ಕೂ ಚಾಚಿಕೊಂಡಿದ್ದ ಕೊಂಬೆಯೊಂದರಿಂದ ನಾಲ್ಕು ಕಾಯಿಗಳು ರಸ್ತೆಯ ಒಂದು ಬದಿಗೆ ಬಿದ್ದಿದ್ದವು. ಅವು ಮಾವಿನ ತೋಪಿನಿಂದ ಆಚೆಗಿದ್ದ ಜಾಗದಲ್ಲಿ ಬಿದ್ದಿವೆ ಮತ್ತು ತಾವಾಗಿಯೇ ಬಿದ್ದಿವೆ. ಹಾಗಾಗಿ, ಅವುಗಳನ್ನು ಕೊಂಡೊಯ್ದರೆ ತಪ್ಪೇನಿಲ್ಲ ಎಂಬುದು ನನ್ನ ಭಾವನೆಯಾಗಿತ್ತು. ಅದೇ ಧೈರ್ಯದಿಂದ ಆ ಮಾವಿನಕಾಯಿಗಳನ್ನು ಆಯ್ದುಕೊಂಡೆ. ಅದೇ ಸಂದರ್ಭಕ್ಕೆ ತೋಟ ಕಾಯುತ್ತಿದ್ದ ಗೌಡರ ಮನೆಯ ಆಳುಮಗ, ಓಡೋಡಿ ಬಂದು ನನ್ನನ್ನು ಹಿಡಿದುಕೊಂಡು ಅಬ್ಬರಿಸಿದ; ಮಾವಿನ ಕಾಯಿ ಕದೀತೀಯಾ? ಗೌಡರಿಗೆ ಹೇಳ್ತಿನಿ, ಪಂಚಾಯ್ತಿ ಹಾಕ್ಸಿ ದಂಡ ಹಾಕಿಸ್ತೀನಿ ನಿನಗೆ..!

ಅಣ್ಣಾ, ನಾನು ಕದ್ದಿಲ್ಲ. ಇವು ರಸ್ತೆಯಂಚಿನಲ್ಲಿ ಬಿದ್ದಿದ್ದ ಮಾವಿನಕಾಯಿಗಳು, ಎಂದು ಹೇಳಿದರೂ ಆತ ನಂಬಲಿಲ್ಲ. ನನಗಿಂತ ಹಿರಿಯನೂ, ಬಲಿಷ್ಠನೂ ಆಗಿದ್ದ ಆತ, ನನ್ನ ಮುಂಗೈ ಹಿಡಿದುಕೊಂಡು ಒಂದರ್ಥದಲ್ಲಿ ಎಳೆದುಕೊಂಡೇ ಪಕ್ಕದೂರಿನ ಗೌಡರ ಮನೆಯತ್ತ ಹೆಜ್ಜೆ ಹಾಕಿದ.

ಮನೆಯಿಂದ ಹೊರಟಿದ್ದೇ ತಡವಾದ ಕಾರಣಕ್ಕೆ ಅಮ್ಮನಿಗೆ ಬಸ್ ಸಿಕ್ಕಿರಲಿಲ್ಲ. ಮತ್ತೊಂದು ಬಸ್‌ಗೆ ಆಕೆ ಕಾಯುತ್ತಿದ್ದಳು. ಅದೇ ಸಂದರ್ಭಕ್ಕೆ ಗೌಡರ ಮನೆಯ ಆಳು ಮಗ ನನ್ನನ್ನು ಎಳೆದುಕೊಂಡು ಹೋದ. ಈ ದೃಶ್ಯ ನೋಡಿ ಅಮ್ಮನಿಗೆ ಸಂಕಟವಾಯಿತೇನೊ. ಆಕೆ, ಸರಸರನೆ ನಮ್ಮ ಬಳಿ ಬಂದಳು. ‘ನನ್ನ ಮಗ ಏನು ತಪ್ಪು ಮಾಡಿದಾನಪ್ಪಾ’ ಎಂದು ಕೇಳಿದಳು. ನಡೆದಿದ್ದನ್ನು ನಾನೇ ವಿವರವಾಗಿ ಹೇಳಿದೆ. ಅವು ಆಕಸ್ಮಿಕವಾಗಿ ಬಿದ್ದ ಕಾಯಿಗಳೇ ಹೊರತು ನಾನು ಕಲ್ಲುಹೊಡೆದು ಬೀಳಿಸಿದ್ದವಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ‘ನೋಡಪ್ಪಾ, ಅವನು ತಪ್ಪು ಮಾಡಿಲ್ಲ. ರಸ್ತೇಲಿ ಬಿದ್ದಿರುವ ಕಾಯಿಗಳನ್ನು ಆಯ್ದುಕೊಂಡಿದ್ದಾನೆ. ಹಾಗಿದ್ರೂ ನೀನು ಅಷ್ಟು ದೂರದಿಂದ ಎಳ್ಕೊಂಡು ಬಂದಿದೀಯ. ಇದು ಸರಿಯಲ್ಲ. ಬಿಟ್‌ಬಿಡು ಅವನನ್ನ’ ಎಂದಳು ಅಮ್ಮ.

ಗೌಡರ ಆಳುಮಗ ನನ್ನನ್ನು ಬಿಡಲಿಲ್ಲ. ಬದಲಿಗೆ, ಅಮ್ಮನಿಗೇ ಒಂದು ಕೆಟ್ಟ ಪದ ಬಳಸಿ ಬೈದ. ನೀನು ಏನಾದ್ರೂ ಹೇಳೋದಿದ್ರೆ ಸಾಯಂಕಾಲ ಪಂಚಾಯ್ತಿಗೆ ಬಂದು ಹೇಳಮ್ಮ ಅಂದವನೇ ಮುಂದೆ ಹೆಜ್ಜೆಯಿಟ್ಟ. ಆಗಲೇ ಯಾರೂ ಊಹಿಸದಿದ್ದ ಘಟನೆ ನಡೆಯಿತು. ಗೌಡರ ಆಳುಮಗನ ವರ್ತನೆಯಿಂದ ಕ್ರುದ್ದಳಾಗಿದ್ದ ಅಮ್ಮ, ಅವನ ದಾರಿಗೆ ಅಡ್ಡ ನಿಂತು, ತನ್ನ ಶಕ್ತಿಯನ್ನೆಲ್ಲ ಬಿಟ್ಟು ಛಟೀರನೆ ಬಾರಿಸಿದಳು. ಮರುಕ್ಷಣವೇ ಅವನ ಕೆನ್ನೆ ಆಲೂಗೆಡ್ಡೆಯಂತೆ ಊದಿಕೊಂಡಿತು. ಇಂಥ ಹೊಡೆತವನ್ನು ಕನಸು ಮನಸಿನಲ್ಲೂ ಆತ ಊಹಿಸಿರಲಿಲ್ಲ. ಮತ್ತೇನೋ ಬೈಯಲು ಹೋದ. ಅವನ ಮೂತಿಗೆ ಇನ್ನೊಂದೇಟು ಹಾಕಿದ ಅಮ್ಮ-‘ರೋಡ್‌ ಸೈಡಲ್ಲಿ ಬಿದ್ದಿರುವ ಮಾವಿನಕಾಯಿ ತಗೊಂಡರೂ ದಬ್ಬಾಳಿಕೆ ಮಾಡಲು ಬರ್ತಿಯೇನೊ, ರೋಡೇನು ನಿಮ್ಮ ಅಪ್ಪಂದಾ? ಅದ್ಯಾವನಿಗೆ ದೂರು ಕೊಡ್ತೀಯ ಕೊಡು. ಅದೇನಾಗುತ್ತೆ ಅಂತ ನಾನೂ ನೋಡೇಬಿಡ್ತೀನಿ’ ಅಂದಳು. ಈ ಅನಿರೀಕ್ಷಿತ ಆಕ್ರಮಣದಿಂದ ಪೆಚ್ಚಾಗಿದ್ದ ಆಳುಮಗ, ತಲೆ ಬಗ್ಗಿಸಿಕೊಂಡು ಹೋಗಿಬಿಟ್ಟ.

ಈ ಘಟನೆಯಿಂದ ಗೌಡರು ಸಿಟ್ಟಾಗುತ್ತಾರೆ. ಗೂಂಡಾಗಳಂಥ ಜನರೊಂದಿಗೆ ಬಂದು ಹಲ್ಲೆ ಮಾಡುತ್ತಾರೆ ಎಂದೇ ಊರ ಜನರೆಲ್ಲಾ ಭವಿಷ್ಯ ನುಡಿದಿದ್ದರು. ಉಹುಂ, ಹಾಗೇನೂ ಆಗಲಿಲ್ಲ. ಪಂಚಾಯ್ತಿಯೂ ನಡೆಯಲಿಲ್ಲ. ನಾಲ್ಕು ದಿನಗಳ ನಂತರ ಅಮ್ಮ ನನ್ನನ್ನು ಎದುರು ನಿಲ್ಲಿಸಿಕೊಂಡು ಹೇಳಿದಳು: ನೀನು ತಪ್ಪು ಮಾಡಿಲ್ಲ ಅಂದರೆ, ಯಾರಿಗೂ ಹೆದರಬೇಕಾದ ಅಗತ್ಯವೇ ಇಲ್ಲ.

ಈ ಘಟನೆ ನಡೆದು ಸುಮಾರು 42 ವರ್ಷಗಳು ಕಳೆದುಹೋಗಿವೆ. ಆದರೆ ಈಗಲೂ ಯಾರಿಗಾದರೂ ತಿರುಗಿ ಮಾತಾಡಬೇಕಾದ ಸಂದರ್ಭದಲ್ಲಿ ಅಮ್ಮನ ಮಾತುಗಳು ನೆನಪಾಗುತ್ತವೆ; ನಮ್ಮದು ತಪ್ಪಿಲ್ಲವಾದರೆ, ವಾದಕ್ಕೆ ನಿಲ್ಲುವುದಾಗಲಿ, ಜಗಳ ಮಾಡುವುದಾಗಲಿ ಅಪರಾಧವಲ್ಲ…

******

ಅಪ್ಪನಿಗೆ, ತಾಲ್ಲೂಕಾಫೀಸಿನಲ್ಲಿ ಕ್ಲರ್ಕ್ ಕೆಲಸವಿತ್ತು. ಹಾಗಾಗಿ ಪಿತ್ರಾರ್ಜಿತವಾಗಿ ಬಂದಿದ್ದ ಜಮೀನಿನಲ್ಲಿ ಕೃಷಿ ಮಾಡಿಸುವ ಜವಾಬ್ದಾರಿ ಅಮ್ಮನದೇ ಆಗಿತ್ತು. ಹೊಲದ ಉಳುಮೆ, ಬೆಳೆಯ ಕಟಾವು, ಔಷಧಿ ಸಿಂಪಡಣೆ, ಕಳೆ ತೆಗೆಯುವುದು… ಇಂಥ ಕೆಲಸಗಳು ಇದ್ದಾಗ ಕೂಲಿಗೆ ಜನ ಬರುತ್ತಿದ್ದರು. ಅವರಿಗೆಲ್ಲಾ ಮನೆಯಲ್ಲಿಯೇ ಊಟ ಕೊಡಲಾಗುತ್ತಿತ್ತು. ಬಿರುಬಿಸಿಲಿನಲ್ಲಿ ಸಂಜೆಯವರೆಗೂ ಕೆಲಸ ಮಾಡಬೇಕಲ್ಲವೆ? ಕೆಲಸ ಮಾಡುವವರಿಗೆ ಸುಸ್ತಾಗದೇ ಇರಲಿ ಎಂಬ ಉದ್ದೇಶದಿಂದ ಕೆ.ಜಿ.ಗಟ್ಟಲೆ ತರಕಾರಿ ಹಾಕಿ ತುಂಬ ರುಚಿರುಚಿಯಾದ ಅಡುಗೆ ಮಾಡುತ್ತಿದ್ದಳು ಅಮ್ಮ.

ಈ ಸಂದರ್ಭದಲ್ಲಿ, ಚಿಕ್ಕಪ್ಪನೊಂದಿಗೇ ಊಟಕ್ಕೆ ಕೂರುವುದನ್ನು ನಾನು ಅಭ್ಯಾಸ ಮಾಡಿಕೊಂಡೆ! ಹೀಗೇಕೆ ಮಾಡುತ್ತಿದ್ದೆ ಅಂದರೆ, ನನಗೆ ಮಾತ್ರ ಪ್ರತ್ಯೇಕವಾಗಿ ಊಟ ಕೊಟ್ಟರೆ, ಹೆಚ್ಚು ಪ್ರಮಾಣದ ರಾಗಿಮುದ್ದೆ ಹಾಗೂ ಕಡಿಮೆ ಪ್ರಮಾಣದ ಅನ್ನ ಹಾಕುತ್ತಿದ್ದಳು ಅಮ್ಮ. ಬಾಲ್ಯದ ಆ ದಿನಗಳಲ್ಲಿ ನನಗೆ ರಾಗಿಮುದ್ದೆ ಸ್ವಲ್ಪವೂ ಇಷ್ಟವಿರಲಿಲ್ಲ. ತೃಪ್ತಿಯಾಗುವವರೆಗೂ ಅನ್ನವನ್ನೇ ತಿನ್ನುವಂಥಾ ಆರ್ಥಿಕ ಚೈತನ್ಯ ಆಗ ನಮ್ಮ ಕುಟುಂಬಕ್ಕೆ ಇರಲಿಲ್ಲ. ಚಿಕ್ಕಪ್ಪನ ಜೊತೆ ಊಟಕ್ಕೆ ಕೂತರೆ, ಅನ್ನದ ತಟ್ಟೆಗೆ ಇಬ್ಬರ ಲೆಕ್ಕದ ರೂಪದಲ್ಲಿ – ಜಾಸ್ತಿ ಅನ್ನ ಬೀಳುತ್ತಿತ್ತು. ಅವತ್ತಿನ ಸಂದರ್ಭದಲ್ಲಿ ನನಗೆ ಅನ್ನದ ಮೇಲಿನ ಮೋಹ ಎಷ್ಟಿತ್ತು ಅಂದರೆ- ತಟ್ಟೆಗೆ ಅನ್ನ ಬಿದ್ದ ತಕ್ಷಣವೇ ಅದರಲ್ಲಿ ಹೆಚ್ಚಿನ ಭಾಗವನ್ನು ನಾನೇ ಗಬಗಬನೇ ತಿಂದುಬಿಡುತ್ತಿದ್ದೆ. ನನ್ನೊಳಗಿದ್ದ ಬಕಾಸುರನನ್ನು ಅಮ್ಮ ಬಹಳ ಬೇಗ ಗಮನಿಸಿದಳು. ಅಡುಗೆ ಮನೆಯ ಒಂದು ಮರೆಯಲ್ಲಿ ನಿಂತು, ಹಾಗೆ ಮಾಡಬೇಡ ಎಂದು ಎಚ್ಚರಿಸಿದಳು. ಚಿಕ್ಕಪ್ಪನ ಜೊತೆ ಊಟಕ್ಕೆ ಕೂರಬೇಡ ಎಂದು ತಾಕೀತು ಮಾಡಿದಳು. ಉಹೂಂ, ನಾನು ಅಮ್ಮನ ಮಾತುಗಳನ್ನು ಕೇಳಲಿಲ್ಲ. ಚಿಕ್ಕಪ್ಪನ ಜೊತೆಗೇ ಊಟಕ್ಕೆ ಕೂರುವುದನ್ನು, ಅವರ ಪಾಲಿನ ಅನ್ನವನ್ನು ಗುಳುಂ ಮಾಡುವುದನ್ನು ಮುಂದುವರಿಸಿದೆ.

ಅಮ್ಮ, ಇದನ್ನೆಲ್ಲ ನೋಡುವಷ್ಟು ದಿನ ನೋಡಿದಳು. ಕಡೆಗೊಂದು ದಿನ ಬೆತ್ತ ತಗೊಂಡು ಸುಸ್ತಾಗುವವರೆಗೂ ಹೊಡೆದಳು. ಆನಂತರ ಸಿಟ್ಟಿನಿಂದ ಏದುಸಿರುಬಿಡುತ್ತಾ ಹೇಳಿದಳು: ಯಾವತ್ತೂ ಹಸಿದವರಿಗೆ ಮೊದಲು ಊಟ ಮಾಡಲು ಬಿಡಬೇಕು. ಇನ್ನೊಬ್ಬರ ಅನ್ನಕ್ಕೆ ಬಾಯಿ ಹಾಕಲು ಹೋಗಬಾರದು…

ಈಗ, ಒಂದೊಂದು ತುತ್ತು ಬಾಯಿಗೆ ಇಡುವಾಗಲೂ ನನಗೆ ನಾನೇ ಕೇಳಿಕೊಳ್ಳುತ್ತೇನೆ : ‘ಈ ಅನ್ನ ನನ್ನ ಪಾಲಿನದ್ದೇ ತಾನೆ?’

******

ಬಾಲ್ಯದಲ್ಲಿ ತುಂಟ ಹುಡುಗರ- ಅಲ್ಲಲ್ಲ, ಪುಂಡ ಹುಡುಗರ ಗೆಳೆತನವಿತ್ತು. ಅವರಲ್ಲಿ ಒಂದಿಬ್ಬರು ‘ದುಡ್ಡು ಸಂಪಾದಿಸುವ’ ಕೆಲಸಕ್ಕೆ ಕರೆದರು. ಎಲ್ಲರಿಗಿಂತ ಮೊದಲೇ ಎದ್ದು, ಹೊಂಗೆಮರಗಳು ಇರುವ ಜಮೀನುಗಳಿಗೆ ಹೋಗಿ, ಯಾರಿಗೂ ಗೊತ್ತಾಗದಂತೆ ಹೊಂಗೆ ಕಾಯಿಗಳನ್ನು ಬೀಳಿಸುವುದು. ನಂತರ ಅವನ್ನು ಎಲ್ಲರೂ ಹಿರಿಯರಿಗೆ ಗೊತ್ತಾಗದಂತೆ ಪಕ್ಕದ ಊರಲ್ಲಿರುವ ಸಾಬರಿಗೆ ಮಾರುವುದು. ಅದರಿಂದ ಸಿಗುವ ಹಣವನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳುವುದು… ಇದಿಷ್ಟೂ ನನ್ನ ಪುಂಡ ಗೆಳೆಯರು ಹೇಳಿಕೊಟ್ಟ ಪ್ಲಾನ್ ಆಗಿತ್ತು. ನಮ್ಮ ಕಾರ್ಯಾಚರಣೆಗೆ ತುತ್ತಾಗಲಿರುವ ಹೊಂಗೆ ಮರ, ಊರಿಂದ ಒಂದು ಮೈಲಿ ದೂರ ಇರುವುದರಿಂದ ಹಾಗೂ ನಾವು ಬೆಳಗ್ಗೆ ಬೆಳಗ್ಗೆಯೇ ಕದಿಯುವ ಕೆಲಸಕ್ಕೆ ಹೋಗುವುದರಿಂದ ಯಾರಿಗೂ ಸಿಕ್ಕಿಬೀಳುವ ಸಾಧ್ಯತೆಯೇ ಇಲ್ಲವೆಂದು ನಂಬಿಸಿದರು.

ಆದರೆ, ಗೆಳೆಯರು ಹೇಳಿದಂತೆ ಏನೂ ನಡೆಯಲಿಲ್ಲ. ಸೂರ್ಯೋದಯಕ್ಕೂ ಮೊದಲೇ ಎದ್ದುಹೋಗಿ ನಾವೆಲ್ಲಾ ಅರ್ಧಮೂಟೆಯಷ್ಟು ಹೊಂಗೆ ಬೀಜವನ್ನು ಸಂಗ್ರಹಿಸಿದೆವು. ಅದನ್ನು ಹೊತ್ತೊಯ್ಯಬೇಕು ಅನ್ನುವಷ್ಟರಲ್ಲಿ ಆ ಜಮೀನಿನ ಮಾಲೀಕರು ದಿಢೀ‌ರ್ ಪ್ರತ್ಯಕ್ಷರಾದರು. ಐದಾರು ಸಂದರ್ಭಗಳಲ್ಲಿ ಸ್ಕೂಲ್‌ನ ಹೆಡ್‌ಮಾಸ್ಟರ್ ಅವರಿಂದ ರ್ಯಾಂಕ್ ಸ್ಪೂಡೆಂಟ್ ಎಂದು ಕರೆಸಿಕೊಂಡಿದ್ದ ನಾನು ಪುಂಡರ ಗುಂಪಲ್ಲಿದ್ದುದನ್ನು ಕಂಡು ಅವರು ಶಾಕ್ ಆದರು. ಉಳಿದವರಿಗೆಲ್ಲಾ ಬಿದಿರು ಕಡ್ಡಿಯಿಂದ ಚೆನ್ನಾಗಿ ಬಾರಿಸಿದರು. ನನಗೆ ಮಾತ್ರ ಒಂದೇಟೂ ಹಾಕಲಿಲ್ಲ. ಬದಲಿಗೆ ನೇರವಾಗಿ ಮನೆಗೆ ಬಂದರು. ಅಮ್ಮನ ಎದುರು ನನ್ನನ್ನು ನಿಲ್ಲಿಸಿ- ‘ಆ ಪುಂಡ ಹುಡುಗರ ಜೊತೆ ಸೇರಿಕೊಂಡು ಹಾಳಾಗ್ತಾ ಇದ್ದಾನೆ. ಇವನಿಗೆ ನೀವೇ ಬುದ್ದಿ ಹೇಳಿ ಅಕ್ಕಾ’ ಎಂದು ಹೋಗಿಬಿಟ್ಟರು.

ಅವತ್ತು ಇಡೀ ದಿನ, ಅಮ್ಮ ಮಂಕಾಗಿ ಕೂತುಬಿಟ್ಟಳು. ನನಗೆ ಬೈಯ್ಯಲಿಲ್ಲ. ಹೊಡೆಯಲೂ ಇಲ್ಲ. ಆದರೆ ಸಂಜೆ ದೇವರ ಕೊಣೆಗೆ ಕರೆದೊಯ್ದು ಒಂದೇ ಒಂದು ಮಾತು ಹೇಳಿದಳು: ಥೂ ಅನ್ನಿಸಿಕೊಳ್ಳಲಿಕ್ಕೆ ಅರ್ಧಗಂಟೆ ಸಾಕು. ಆದರೆ ಹತ್ತು ಮಂದಿಯಿಂದ ಒಳ್ಳೆಯವನು ಅನ್ನಿಸಿಕೊಳ್ಳಲಿಕ್ಕೆ ಐವತ್ ವರ್ಷ ಬೇಕಾಗುತ್ತೆ ನೆನಪಿಟ್ಟೋ. ಸುತ್ತ ಇರುವ ಜನರಿಂದ ಥೂ ಅನ್ನಿಸ್ಕೊಂಡು ಬದುಕಬೇಕೋ ಅಥವಾ ಒಳ್ಳೆಯವನು ಅನ್ನಿಸ್ಕೋಬೇಕೋ ನೀನೇ ತೀರ್ಮಾನ ಮಾಡಿಕೋ…

ಅವತ್ತು ಅಮ್ಮ ಹೇಳಿದ್ದ ಮಾತುಗಳು, ಶಿಲಾಶಾಸನದ ಬರಹದಂತೆ ನನ್ನ ಮನಸ್ಸೆಂಬ ಬೋರ್ಡಿನ ಮೇಲೆ ಹಾಗೇ ಉಳಿದುಬಿಟ್ಟಿವೆ. ಹತ್ತು ಮಂದಿಯಿಂದ ಒಳ್ಳೆಯವನು ಅನ್ನಿಸಿಕೊಳ್ಳಲಿಕ್ಕೆ ಐವತ್ ವರ್ಷ ಬೇಕಾಗುತ್ತೆ. ಆದರೆ ಸುತ್ತಲೂ ಇರುವವರಿಂದ ಥೂ … ಅನ್ನಿಸಿಕೊಳ್ಳಲು ಎರಡೇ ನಿಮಿಷ ಸಾಕು!

******

ಅಪ್ಪ-ಅಮ್ಮ ಜಗಳವಾಡಿದ್ದನ್ನು ಯಾರೂ ನೋಡಿರಲಿಲ್ಲ. ಏಕೆಂದರೆ ಅವರು ಜಗಳ ಮಾಡುತ್ತಲೇ ಇರಲಿಲ್ಲ. ಗಾಂಧಿವಾದವನ್ನು ನಂಬಿದ್ದ ಅಪ್ಪ ‘ಅತೀ’ ಎಂಬಂಥ ಪ್ರಾಮಾಣಿಕತೆಯೊಂದಿಗೆ ಬಾಳಿದರು. ಅಪ್ಪನ ಪ್ರತಿ ಕೆಲಸವನ್ನು ಪ್ರೋತ್ಸಾಹಿಸಿದ್ದು ಅಮ್ಮನ ಹೆಚ್ಚುಗಾರಿಕೆ. ಈ ಇಬ್ಬರೂ ಒಮ್ಮೆ ಕೂಡ ಜಗಳ ಮಾಡಲಿಲ್ಲವಲ್ಲ; ಅದೇ ಕಾರಣಕ್ಕೆ ಬಂಧುಗಳ ಮಧ್ಯೆ ‘ಆದರ್ಶ ದಂಪತಿಗಳು’ ಎಂದು ಹೆಸರಾದರು. ಕೆಲವು ನೆಂಟರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಶ್ರೀರಾಮ-ಸೀತಾದೇವಿ ಎಂದೂ ಕರೆದುಬಿಟ್ಟರು.

ಆದರೆ, ಅದೊಂದು ದಿನ ನಡುರಾತ್ರಿಯಲ್ಲಿ ಏನೋ ಸದ್ದು ಕೇಳಿ ಎಚ್ಚರವಾಯಿತು. ನೋಡುತ್ತೇನೆ: ಅಪ್ಪ-ಅಮ್ಮ ಜಗಳವಾಡುತ್ತಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಈ ನಡುವೆ ತಾಳ್ಮೆ ಕಳೆದುಕೊಂಡ ಅಪ್ಪ ಒಂದೇಟು ಹಾಕಿಯೂಬಿಟ್ಟರು. ಇಂಥದೊಂದು ಸಂದರ್ಭವನ್ನು ನಿರೀಕ್ಷಿಸದಿದ್ದ ನಾನು ಜೋರಾಗಿ ಅಳತೊಡಗಿದೆ. ತಕ್ಷಣವೇ ಜಗಳ ನಿಲ್ಲಿಸಿದ ಅಮ್ಮ, ನನ್ನನ್ನು ಸಮಾಧಾನಿಸಿ ಮಲಗಿಸಿದಳು. ಮರುದಿನ ಆಫೀಸಿಗೆ ಹೋಗಲೆಂದು ಅಪ್ಪ ಬಸ್ ಹತ್ತಿ ಹೋಗಿಬಿಟ್ಟರು. ಅವರ ಹಿಂದೆಯೇ ಆಗ ನಾಲ್ಕು ವರ್ಷದವನಿದ್ದ ಕೊನೆಯ ಮಗನನ್ನು ಕಂಕುಳಲ್ಲಿ ಇಟ್ಟುಕೊಂಡು ಅಮ್ಮನೂ ಹೋಗಿಬಿಟ್ಟಳು. ಮಧ್ಯಾಹ್ನವಾಯಿತು. ಸಂಜೆಯೂ ಆಯಿತು. ಅಮ್ಮ ಬರಲಿಲ್ಲ. ಅಮ್ಮ ಏನಾಗಿಬಿಟ್ಟಳು?

ಯೋಚಿಸುತ್ತಾ ಹೋದಂತೆಲ್ಲಾ ಪ್ರಶ್ನೆಗಳು ಹೆಚ್ಚಿದವೇ ವಿನಾಃ ಉತ್ತರ ಸಿಗಲಿಲ್ಲ. ಆಗ ನಾನೇನು ಮಾಡಿದೆ ಗೊತ್ತೆ? ನಮ್ಮ ಊರಿನ ನಾಲ್ಕೂ ದಿಕ್ಕಿಗೆ ಇರುವ ಕೆರೆಗಳ ಬಳಿಗೆ ಹೋದೆ. ಕೆರೆದಂಡೆಯಲ್ಲಿ ನಿಂತು ಗಟ್ಟಿಯಾಗಿ ಅಮ್ಮಾ ಎಂದು ಕೂಗಿದೆ. ಉತ್ತರ ಬರಲಿಲ್ಲ. ತಕ್ಷಣವೇ ಕೆರೆಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಅಡ್ಡಾಡಿ ಅಲ್ಲಿ ಅಮ್ಮನ ಹೆಜ್ಜೆ ಗುರುತು ಇರಬಹುದಾ ಎಂದು ಹುಡುಕಿದೆ. ಉಹೂಂ, ಅಂಥ ಕುರುಹುಗಳು ಗೋಚರಿಸಲಿಲ್ಲ. ಕಡೆಗೆ ಅಯ್ಯೋ ದೇವರೇ, ಏನಾಗಿಹೋದಳು ಅಮ್ಮ? ಎಲ್ಲಿಗೆ ಹೋಗಿಬಿಟ್ಟ ಅವಳೊಂದಿಗಿದ್ದ ಪುಟ್ಟ ತಮ್ಮ ಎಂದೆಲ್ಲ ಯೋಚಿಸುತ್ತ, ಹೀಗೆ ದಿಢೀರನೆ ಜೊತೆಯಾದ ಕಷ್ಟ ನೆನೆದು ಬಿಕ್ಕಳಿಸುತ್ತಾ ಮನೆ ತಲುಪಿಕೊಂಡೆ.

ಕತ್ತಲಾಗುವ ವೇಳೆಗೆ ಆಯಾಸದಿಂದ ಹೆಜ್ಜೆಯಿಡುತ್ತಾ ಅಮ್ಮ ಬಂದೇಬಿಟ್ಟಳು. ಆಕೆಯ ಕಂಕುಳಲ್ಲಿ ತಮ್ಮನಿದ್ದ. ಆತ ಮಲಗಿದ್ದ. ಅಮ್ಮ- ಉಸ್ಸಪ್ಪಾ ಅನ್ನುತ್ತ ಕೂತುಬಿಟ್ಟಳು. ಹತ್ತು ನಿಮಿಷ ಸುಮ್ಮನಿದ್ದೆ. ಆನಂತರ ‘ಬೆಳಗ್ಗೆಯಿಂದ ಎಲ್ಲಾ ಕಡೆ ಹುಡುಕಿದೆ ಅಮ್ಮ. ನೀನು ಎಲ್ಲೂ ಸಿಗಲಿಲ್ಲ. ಎಲ್ಲಿ ಹೋಗಿಬಿಟ್ಟಿದ್ದೆ?’ ಎಂದು ವಿಚಾರಿಸಿದೆ. ಅಮ್ಮ, ನನ್ನನ್ನೇ ದಿಟ್ಟಿಸಿ ನೋಡುತ್ತಾ ಹೇಳಿದಳು: ‘ರಾತ್ರಿಯಿಂದ ಮನಸ್ಸು ಕೆಟ್ಟುಹೋಗಿತ್ತು. ಸತ್ತು ಹೋಗಬೇಕು ಅಂತ ಆಸೆ ಆಗುತ್ತಿತ್ತು. ಮನೆಯಲ್ಲೇ ಇದ್ದರೆ ಹುಚ್ಚು ಹಿಡಿಯುವುದು ಗ್ಯಾರಂಟಿ ಅನ್ನಿಸ್ತು. ಹಾಗಾಗಿ, ಸುಸ್ತಾಗುವವರೆಗೂ ನಡೆಯುತ್ತಾ ಹೋದೆ. ಕೋಪ, ಸಂಕಟ ಜೊತೆಯಾದಾಗ ಆವೇಶದ ಕೈಗೆ ಬುದ್ದಿ ಕೊಡಬಾರದು. ಕಷ್ಟಗಳು ಜೊತೆಯಾದಾಗ ಹೇಡಿಗಳ ಥರಾ ಸಾಯಲು ಹೋಗಬಾರದು. ಬದುಕಿ ಏನಾದರೂ ಸಾಧಿಸಬೇಕು. ಅದಕ್ಕಿಂತ ಮುಖ್ಯವಾಗಿ, ನಮ್ಮನ್ನೇ ನಂಬಿದವರನ್ನು ತಬ್ಬಲಿಗಳನ್ನಾಗಿ ಅನಾಥರನ್ನಾಗಿ ಮಾಡಿಹೋಗಬಾರದು…’

*****

ಈ ಘಟನೆ ನಡೆದು ಈಗ 40 ವರ್ಷ ಕಳೆದುಹೋಗಿದೆ. ಈಗ ನನ್ನದೂ ಒಂದು ಸಂಸಾರವಿದೆ. ಏನೇ ಲವ್ ಮ್ಯಾರೇಜು, ಅಂಡರ್‌ಸ್ಟ್ಯಾಂಡಿಂಗೂ, ಆದರ್ಶ ದಾಂಪತ್ಯ ಎಂದು ಕೊಚ್ಚಿಕೊಂಡರೂ ಐದಾರು ಸಂದರ್ಭಗಳಲ್ಲಿ ನಮ್ಮ ಮಧ್ಯೆಯೂ ಜಗಳವಾಗಿದೆ. ಅಂಥ ಸಂದರ್ಭದಲ್ಲಿ ಥತ್, ನನಗೆ ಯಾರೊಬ್ಬರ ಸಹವಾಸವೂ ಬೇಡ. ಎಲ್ಲರನ್ನೂ ಬಿಟ್ಟು ಎಲ್ಲಿಗಾದರೂ ಹೋಗಿಬಿಡಬೇಕು ಅನ್ನಿಸಿದೆ. ಆಗೆಲ್ಲ, ಅಮ್ಮ ಹೇಳಿದ್ದ ಅನುಭವದ ಮಾತುಗಳು ನೆನಪಾಗುತ್ತವೆ. ‘ಆವೇಶದ ಕೈಗೆ ಬುದ್ದಿ ಕೊಡಬೇಡ’ ಎಂದು ಅದೆಲ್ಲೋ ಒಂದು ಮೂಲೆಯಲ್ಲಿ ನಿಂತು ಅಮ್ಮ ಪಿಸುಗುಟ್ಟಿದಂತೆ ಭಾಸವಾಗುತ್ತದೆ. ಆನಂತರದಲ್ಲಿ ಮನಸ್ಸು ಹತೋಟಿಗೆ ಬರುತ್ತದೆ. ಎಲ್ಲರ ಮನೆಯ ದೋಸೆಯೂ… ಎಂಬ ಹಳೇ ಮಾತು ನೆನಪಾಗಿ, ಲೈಫ್ ಈಸ್ ಬ್ಯೂಟಿಫುಲ್ ಅನ್ನಿಸತೊಡಗುತ್ತದೆ.

ಹೀಗೆ ತನ್ನದೇ ಬದುಕಿನ ಒಂದೊಂದು ಪ್ರಸಂಗಗಳಿಂದ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊಟ್ಟವಳು ನನ್ನ ಅಮ್ಮ. ಆಕೆಯ ತವರುಮನೆಯಲ್ಲಿ ವಿಪರೀತ ಎಂಬಂಥ ಬಡತನವಿತ್ತು. ತವರು ಮನೆಗಿಂತ ಸ್ವಲ್ಪ ಅನುಕೂಲವಿರುವಂಥ ಕುಟುಂಬಕ್ಕೆ ಸೊಸೆಯಾಗಿ ಬಂದಳಲ್ಲ; ಆಗ ಅಮ್ಮ ಮಾಡಿದ ಮೊದಲ ಕೆಲಸ- ತುಂಬ ಚಿಕ್ಕವರಿದ್ದ ತಂಗಿ-ತಮ್ಮಂದಿರನ್ನು ಜೊತೆಗೇ ಕರೆತಂದದ್ದು. ಆ ಮಕ್ಕಳೊಂದಿಗೆ ಗಂಡನ ಅಕ್ಕ-ತಂಗಿಯರ ಮಕ್ಕಳನ್ನೂ ಜೊತೆಯಲ್ಲೇ ಉಳಿಸಿಕೊಂಡಿದ್ದು. ಈ ದೊಡ್ಡ ಮಕ್ಕಳ ಗುಂಪಿನ ಮಧ್ಯೆಯೇ ನಾವೂ ಬೆಳೆದೆವು. ಆ ಮೂಲಕ, ಒಂದಾಗಿ ಬಾಳುವುದರಲ್ಲಿಯೇ ಸುಖವಿದೆ ಎಂಬ ಪಾಠವನ್ನೂ ಬಾಲ್ಯದಲ್ಲಿಯೇ ಕಲಿತೆವು.

‍ಲೇಖಕರು Admin

1 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading