ಅಮ್ಮನ ಪೆಟ್ಟಿಗೆ

ನಿರುಪಮಾ ಉಚ್ಚಿಲ್

ಸುಮಾರು ಎಪ್ಪತ್ತರ ದಶಕದಲ್ಲಿ ನಾವು ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವಾಗ ಹಿಂದಿ ಪಠ್ಯ ಪುಸ್ತಕದಲ್ಲಿ ಒಂದು ಕವಿತೆ ಇತ್ತು. ಅದರ ಶೀರ್ಷಿಕೆ ‘ನಾನೀ ಕಾ ಸಂದೂಕ್’. ಕನ್ನಡದಲ್ಲಿ ಅದರ ಭಾವಾನುವಾದ ಸ್ವಲ್ಪ ಈ ರೀತಿ ಆಗುತ್ತದೆ.

ಅಜ್ಜಿಯ ಪೆಟ್ಟಿಗೆ 

ಅಜ್ಜಿಯ ಪೆಟ್ಟಿಗೆ ವಿಶಿಷ್ಟ ವಾದುದು
ಹೊಗೆಯಿಂದ ಅತಿ ಕಪ್ಪಾದುದು
ಹಿಂಭಾಗದಲ್ಲಿ ತೆರೆಯಲ್ಪಡುವುದು
ಮುಂಭಾಗದಲ್ಲಿ ಬೀಗ ನೇತಾಡುತ್ತಿರುವುದು 

ಕವಿತೆಯ ಪ್ರಥಮ ನಾಲ್ಕು ಸಾಲುಗಳ ಭಾವಾನುವಾದ. ಅಮ್ಮನ ಪೆಟ್ಟಿಗೆಯ ವಿಷಯ ಬರೆಯಲು ಆರಂಭಿಸುವಾಗ ನನಗೆ ಆ ಕವಿತೆಯ ನೆನಪಾಯಿತು. ಆದರೆ ಅಜ್ಜಿಯ ಪೆಟ್ಟಿಗೆಯಂತೆ ಅಮ್ಮನ ಪೆಟ್ಟಿಗೆಯಲ್ಲಿ ವಿಶಿಷ್ಟತೆ ಏನೂ ಇರಲಿಲ್ಲ. ಹೊಗೆಯಿಂದ ಕಪ್ಪಾಗಿಯೂ ಇರಲಿಲ್ಲ. ಪೆಟ್ಟಿಗೆ ಯಾವುದೇ ರೀತಿಯ ನ್ಯೂನತೆ ಇಲ್ಲದೆ ಸರಿಯಾಗಿತ್ತು. ಅಮ್ಮನ ಕಬ್ಬಿಣದ ಪೆಟ್ಟಿಗೆಯಲ್ಲಿ ಏನೋ ಆಕರ್ಷಣೆ ನಮಗೆ ಮಕ್ಕಳಿಗೆ. 

ಪೆಟ್ಟಿಗೆ ಅಂತ ಬರೆದರೂ ನಾನು ಹೇಳುತ್ತಿರುವದು ಒಂದು ಪೆಟ್ಟಿಗೆಯ ವಿಷಯವಲ್ಲ. ಮೂರು ಪೆಟ್ಟಿಗೆಗಳ ವಿಷಯ. ಆ ಪೆಟ್ಟಿಗೆಗಳು ನಾವು ಅರ ಎಂದು ಕರೆಯುವ ಒಳಗಿನ ಕೋಣೆಯಲ್ಲಿ ಗೋಡೆಯ ಬದಿಯಲ್ಲಿ ಒಂದರ ಮೇಲೊಂದು ಪೇರಿಸಿ ಇಟ್ಟಿದ್ದವು. ಮೇಲಿದ್ದ ಪೆಟ್ಟಿಗೆ ಚಿಕ್ಕದಾಗಿದ್ದರೆ ಕೆಳಗಿನ ಎರಡು ಪೆಟ್ಟಿಗೆಗಳು ಅದಕ್ಕಿಂತ ದೊಡ್ಡದಾಗಿದ್ದು ಆಕೃತಿಯಲ್ಲಿ ಸಮಾನಾಗಿದ್ದವು. 

ಅಮ್ಮ ತನ್ನ ಅಮೂಲ್ಯವಾದ ವಸ್ತುಗಳನ್ನು ಕೆಳಗಿನ ಎರಡು ಪೆಟ್ಟಿಗೆಗಳಲ್ಲಿ ಇಡುತ್ತಿದ್ದರು. ನಮ್ಮ ದಿನನಿತ್ಯದ ಬಟ್ಟೆಗಳನ್ನು ಒಂದು ಮರದ ಕಪಾಟಿನಲ್ಲಿ ಇಡುತ್ತಿದ್ದೆವು. ನಮಗಾರಿಗೂ ಅಮ್ಮನ ಪೆಟ್ಟಿಗೆಯನ್ನು ಮುಟ್ಟುವ ಅನುಮತಿ ಇರಲಿಲ್ಲ. ನಾನು ಈ ಮೊದಲೇ ಹೇಳಿದಂತೆ ಏನೋ ಆಕರ್ಷಣೆ ಇತ್ತು ಅಮ್ಮನ ಪೆಟ್ಟಿಗೆಯಲ್ಲಿ. ಅಮ್ಮ ಪೆಟ್ಟಿಗೆ ತೆರೆದ ಕೂಡಲೇ ನಾವು ಮಕ್ಕಳು ಪೆಟ್ಟಿಗೆಯನ್ನು ಮುತ್ತುತ್ತಿದ್ದೆವು.

ಅಮ್ಮ ಮೇಲಿನ ಪೆಟ್ಟಿಗೆಯನ್ನು ಕೆಳಗಿಳಿಸಿ ಎರಡನೆಯ ಪೆಟ್ಟಿಗೆಯನ್ನು ತೆರೆಯುವಾಗ ನಾವು ಹಾಜರ್. ಆ ಪೆಟ್ಟಿಗೆಯಲ್ಲಿ ಸುಂದರವಾದ ಒಂದು ಬೀಸಣಿಗೆ ಇತ್ತು. ಜಪಾನಿನ ಮಹಿಳೆಯರ ಕೈಯಲ್ಲಿ ಇರುವಂತಹ ಬೀಸಣಿಗೆ. ‘Love in Tokyo’ ಹಿಂದಿ ಚಿತ್ರ ತುಂಬಾ ಪ್ರಸಿದ್ಧವಾಗಿಸಿತ್ತು. ನಾವು ಮಂಗಳೂರಿನ ದೊಡ್ಡಪ್ಪನ ಮನೆಗೆ ಹೋಗಿದ್ದಾಗ ನಾವು ಆ ಸಿನಿಮಾ ನೋಡಿದ್ದೆವು. ದೊಡ್ಡಮ್ಮನ ಗೆಳತಿಯೂ, ಸಹ ಶಿಕ್ಷಕಿಯೂ ಆಗಿದ್ದ ಭಾಮಾ ಟೀಚರ್ ನಮ್ಮೆಲ್ಲರನ್ನು ಕರೆದುಕೊಂಡು ಹೋಗಿ ಸಿನಿಮಾ ತೋರಿಸಿದ್ದರು. ಅದರ ‘ಸಯೊನಾರಾ… ಸಯೊನಾರಾ…’ ಹಾಡು ತುಂಬಾ ಪ್ರಸಿದ್ಧವಾಗಿತ್ತು. 

ಚಿತ್ರದ ನಾಯಕಿ ಜಪಾನಿ ಮಹಿಳೆಯಂತೆ ಬಿಗಿಯಾದ ಉಡುಪು ಧರಿಸಿ ಬೀಸಣಿಗೆಯನ್ನು ತೆರೆಯುತ್ತಾ ಮುಚ್ಚುತ್ತಾ ಪುಟ ಪುಟನೆ ನಡೆಯುತ್ತಾ ಹಾಡುತ್ತಾ ಓಡುತ್ತಾ ಹೋಗುವುದು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿತ್ತು.

ಅಮ್ಮ ಪೆಟ್ಟಿಗೆಯಲ್ಲಿ ಅಮ್ಮನ ಸಾಮಾನುಗಳನ್ನು ಹುಡುಕುತ್ತಾ ಇರುವಾಗ ನಾವು ಬೀಸಣಿಗೆಯನ್ನು ಬೇಗ ತೆಗೆದು ಅದನ್ನು ಅರ್ಧ ಚಂದ್ರಾ ಕೃತಿಯಲ್ಲಿ ಅರಳಿಸಿ ಮುಚ್ಚಿ, ಅರಳಿಸಿ ಮುಚ್ಚಿ ಮುಖಕ್ಕೆ ಅಡ್ಡ ಹಿಡಿದು ಸಯೊನಾರಾ ಹಾಡುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಚಿತ್ರದ ನಾಯಕಿಯನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೆವು. ನಾವು ನಾಲ್ವರು ಅಕ್ಕ ತಂಗಿಯರು ಬೀಸಣಿಗೆಯನ್ನು ಕೈಯಿಂದ ಕೈಗೆ ಬದಲಾಯಿಸುತ್ತಾ ಸ್ವಲ್ಪ ಹೊತ್ತು ಅದರೊಟ್ಟಿಗೆ ಆಡಿ ಅಮ್ಮನ ಅಣತಿಯಂತೆ ಅದನ್ನು ಸ್ವಸ್ಥಾನದಲ್ಲಿ ಇರಿಸುತ್ತಿದ್ದೆವು.

ಅಮ್ಮ ಪೆಟ್ಟಿಗೆ ಮುಚ್ಚುವಾಗ ಅದು ಒಳಗಿರಬೇಕು. ಕಸೂತಿ ಮಾಡಿದ ನೀಲಿ ಬಣ್ಣದ ಸುಂದರವಾದ ಟೇಬಲ್ ಕ್ಲಾತ್ ಒಂದನ್ನು ಅಮ್ಮ ಪೆಟ್ಟಿಗೆಯಲ್ಲಿ ಭದ್ರವಾಗಿ ಇಟ್ಟಿದ್ದರು. ಅದನ್ನು ತೆಗೆದು ಎಂಬ್ರಾಯ್ಡರಿ ಮೇಲೆ ಕೈಯಾಡಿಸಿ ಅದರ ಸೌಂದರ್ಯವನ್ನು ಆಸ್ವಾದಿಸಿ ಅದನ್ನು  ಅದರ ಸ್ಥಾನದಲ್ಲಿ ಇಡುತ್ತಿದ್ದೆವು. ನಮಗೆ ಸ್ವಂತ ಮನೆಯಾದರೆ ಆ ಟೇಬಲ್‌ ಕ್ಲಾತನ್ನು ಉಪಯೋಗಿಸುವುದು ಎಂದು ಅಮ್ಮ ಹೇಳುತ್ತಿದ್ದರು. ಆದರೆ ಅಮ್ಮನ ಆ ಆಸೆ ಕೈಗೂಡಲಿಲ್ಲ. ತುಂಬಾ ವರ್ಷಗಳ ನಂತರ ಅಮ್ಮ ಅದನ್ನು ಟೇಬಲ್ ಮೇಲೆ ಹಾಸಲಿಕ್ಕೆ ಉಪಯೋಗಿಸಿದ್ದರು.

ನೆಹರೂ ಮನೆತನದ ಅಭಿಮಾನಿಯಾದ ಅಮ್ಮನ ಪೆಟ್ಟಿಗೆಯಲ್ಲಿ ನೆಹರೂ ಕುಟುಂಬದ ಎರಡು ಫೋಟೋ ಆಲ್ಬಂಗಳು ಇದ್ದವು. ನೆಹರೂರವರ ಬಾಲ್ಯದಿಂದ ತೊಡಗಿ ಮರಣದ ವರೆಗಿನ ಫೋಟೋಗಳಿದ್ದವು. ನೆಹರೂರವರ ಪ್ರಮುಖ ರಾಜಕೀಯ ಘಟನೆಗಳ ಚಿತ್ರಗಳಿದ್ದ ಆ ಪುಸ್ತಕ ನಮ್ಮೆಲ್ಲರ ಪ್ರಿಯ ಪುಸ್ತಕವಾಗಿತ್ತು.

ಒಂದೇ ರೀತಿಯ ಎರಡು ಕಪ್ಪು ಬಿಳುಪು ಪುಸ್ತಕಗಳು. ಒಂದು ಆಲ್ಬಂ ಹಿಂದಿಯಲ್ಲಿದ್ದರೆ ಇನ್ನೊಂದು ಆಂಗ್ಲ ಭಾಷೆಯಲ್ಲಿತ್ತು. ಚಿತ್ರಗಳ ಕೆಳಗೆ ಅದರ ವಿವರಣೆಗಳಿದ್ದವು. ಗಾಂಧೀಜಿಯವರ ಶವಯಾತ್ರೆ, ನೆಹರೂರವರ ಅಂತಿಮ ಯಾತ್ರೆ ಎಲ್ಲವೂ ಇದ್ದ ಆ ಪುಸ್ತಕವನ್ನು ನಾವು ಅಮ್ಮನ ಪೆಟ್ಟಿಗೆಯಿಂದ ತೆಗೆದು ನೋಡುತ್ತಿದ್ದೆವು. ಚಿತ್ರದ ಕೆಳಗೆ ಬರೆದಿರುವ ಘಟನೆಗಳು ಹಾಗೂ ಅದರಲ್ಲಿರುವ ವ್ಯಕ್ತಿಗಳ ಹೆಸರನ್ನು ಓದುತ್ತಿದ್ದೆವು.

ಗಾಂಧೀಜಿಯವರ ಶವ ಯಾತ್ರೆಯ ನಂತರ ನೆಹರೂರವರು ಏಕಾಂಗಿಯಾಗಿ ಶೂನ್ಯದತ್ತ ದಿಟ್ಟಿಸುವ ಚಿತ್ರವನ್ನು ನಾನು ಭಾವುಕಳಾಗಿ ನೋಡುತ್ತಿದ್ದೆ. ಅದರ ಕೆಳಗೆ ಹಿಂದಿಯಲ್ಲಿ ‘ಬಾಪು ಕೆ ಬಿನಾ’, ಆಂಗ್ಲ ಪುಸ್ತಕದಲ್ಲಿ ‘Without Bapu’ ಎಂದು ಬರೆದಿತ್ತು. ಚಿತ್ರ ನೋಡಿ ಅದನ್ನು ಪುನಃ ಪೆಟ್ಟಿಗೆಯಲ್ಲಿ ಇರಿಸುತ್ತಿದ್ದೆವು.

ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಅಭಿಮಾನಿಯಾಗಿದ್ದ ಅಮ್ಮ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ ಫೋಟೋಗಳನ್ನು ಕತ್ತರಿಸಿ ಪೆಟ್ಟಿಗೆಯಲ್ಲಿ ತೆಗೆದಿರಿಸುತ್ತಿದ್ದರು. ಒಮ್ಮೆ ಇಂದಿರಾಗಾಂಧಿಯವರು ಮಂಗಳೂರಿಗೆ ಬಂದಿದ್ದಾಗ ಅಮ್ಮ ಪುಷ್ಪ ದೊಡ್ಡಮ್ಮನನ್ನು ಕರೆದುಕೊಂಡು ನೆಹರೂ ಮೈದಾನಿಗೆ ಹೋಗಿ ಅವರನ್ನು ನೋಡಿ ಭಾಷಣ ಕೇಳಿ ಖುಷಿಯಿಂದ ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು.

ಇದೇ ರೀತಿಯ ಆರಾಧನಾ ಮನೋಭಾವವನ್ನು ಅಮ್ಮ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಹೊಂದಿದ್ದರು. ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಹೆಗ್ಗಡೆಯವರ ‘ಮಂಜು ವಾಣಿ’ಯನ್ನು ಅಮ್ಮ ಆಸಕ್ತಿಯಿಂದ ಓದುತ್ತಿದ್ದರು.

ನಂತರ ಸಮಯ ಸಿಕ್ಕಿದಾಗ ಅವುಗಳನ್ನು ಕತ್ತರಿಸಿ ಒಂದು ಚೀಲದಲ್ಲಿ ಹಾಕಿ ಪೆಟ್ಟಿಗೆಯಲ್ಲಿ ಇಡುತ್ತಿದ್ದರು. ‘ಮಂಜು ವಾಣಿ ‘ಸಾಧಾರಣ ಎರಡು ವರ್ಷಗಳ ಕಾಲ ಪ್ರಕಟವಾಗಿತ್ತು ಎಂದು ನೆನಪು. ಅದು ತುಂಬಾ ಜನಪ್ರಿಯ ಲೇಖನವಾಗಿತ್ತು. ಪ್ರಕಟಣೆ ಮುಗಿಯುತ್ತಾ ಬರುವಾಗ ಹೆಗ್ಗಡೆಯವರು ಅದನ್ನು ಸಂಗ್ರಹಿಸಿ ಇಟ್ಟವರಿಗೆ ಅಥವಾ ಬರೆದಿಟ್ಟವರಿಗೆ ಬಹುಮಾನ ಫೋಷಣೆ ಮಾಡಿದ್ದರು.

ಅಮ್ಮ ತಮ್ಮ ಸಂಗ್ರಹವನ್ನು ವೀರೇಂದ್ರ ಹೆಗ್ಗಡೆಯವರಿಗೆ ತೋರಿಸಿ ಬಹುಮಾನ ಪಡೆಯಲು ಉತ್ಸುಕರಾಗಿದ್ದರು.  ಪೆಟ್ಟಿಗೆಯಿಂದ ತೆಗೆದು ಅದನ್ನು ಸರಿಯಾಗಿ ಜೋಡಿಸಿಟ್ಟಿದ್ದರು. ಆದರೆ ಅದರಲ್ಲಿ ಕೆಲವು ಲೇಖನಗಳು ತಪ್ಪಿ ಹೋಗಿದ್ದುದರಿಂದ ಅಮ್ಮ ಧರ್ಮಸ್ಥಳಕ್ಕೆ ಹೋಗಿ ಹೆಗ್ಗಡೆಯವರನ್ನು ಭೇಟಿ ಮಾಡುವ ನಿರ್ಧಾರವನ್ನು ಹಿಂತೆಗೆದುಕೊಂಡರು. ಮೊದಲೊಮ್ಮೆ ಧರ್ಮಸ್ಥಳಕ್ಕೆ ಹೋಗಿದ್ದಾಗ ಹೆಗ್ಗಡೆಯವರನ್ನು ಭೇಟಿಯಾಗಲು ಅವರ ಮನೆಗೂ ಹೋಗಿದ್ದರು. 

ಆ ದಿನ ಹೆಗ್ಗಡೆಯವರು ಅವರ ಮನೆಯಲ್ಲಿ ಇರಲಿಲ್ಲ. ಮರುದಿವಸ ಬೆಳಿಗ್ಗೆ ಅವರನ್ನು ದೇವಸ್ಥಾನದಲ್ಲಿ ಕಂಡು ಅವರಿಗೆ ಕೈ ಮುಗಿದು ಅಮ್ಮ ಪುಳಕಿತರಾಗಿದ್ದರು. ಉದಯವಾಣಿ ಪತ್ರಿಕೆಯನ್ನು ತರಿಸಿ ಓದುತ್ತಿದ್ದೆವು. ದೀಪಾವಳಿಯ ವಾರ್ಷಿಕ ವಿಶೇಷಾಂಕವನ್ನು ಅಮ್ಮ ತಪ್ಪದೆ ತರಿಸಿ ಪೆಟ್ಟಿಗೆಯಲ್ಲಿ ಇರಿಸುತ್ತಿದ್ದರು.

ನಾವು ಮಕ್ಕಳು ಓದಲು ಕೇಳಿದರೆ ಅಮೂಲ್ಯವಾದ ವಸ್ತುವನ್ನು ಕೊಡುವಂತೆ ನಮ್ಮ ಕೈಯಲ್ಲಿ ಇಡುತ್ತಿದ್ದರು.  ನಾವು ಓದಿ ಪುನಃ ಪೆಟ್ಟಿಗೆಯಲ್ಲಿ ಇಡುತ್ತಿದ್ದೆವು. ಚಿಕ್ಕಂದಿನಲ್ಲಿ ಓದಿದ ಕೆಲವು ಕತೆಗಳು ಇನ್ನೂ ಹಚ್ಚ ಹಸಿರಾಗಿ ಮನದಲ್ಲಿ ಉಳಿದಿವೆ. ಅಮ್ಮ ಪೆಟ್ಟಿಗೆಯಲ್ಲಿ ಜೋಪಾನವಾಗಿಟ್ಟಿದ್ದ ಇನ್ನೊಂದು ವಸ್ತುವೆಂದರೆ ಪದ್ಯಗಳ ಸಂಗ್ರಹವಿದ್ದ ಒಂದು ನೋಟ್ ಬುಕ್.

ಅಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಪಡೆದ ಸಮಯದ ಪುಸ್ತಕವದು. ಅದರಲ್ಲಿರುವ ಪದ್ಯಗಳನ್ನು ಅಮ್ಮ ರಾಗದಿಂದ ಹಾಡುತ್ತಿದ್ದರು. ನಮಗೂ ಕಲಿಸುತ್ತಿದ್ದರು.

1969 ರಲ್ಲಿ ಗಾಂಧೀಜಿಯವರ ಜನ್ಮ ಶತಾಬ್ದಿ ದೇಶದೆಲ್ಲೆಡೆ ವಿಜೃಂಭಣೆಯಿಂದ ಜರುಗಿತ್ತು. ಶಾಲಾ ಕಾಲೇಜುಗಳಲ್ಲೂ ಆಚರಣೆ ಮಾಡಲಾಗಿತ್ತು. ಆಮ್ನನ ಪುಸ್ತಕದಲ್ಲಿದ್ದ ಗಾಂಧೀಜಿಯವರ ಕುರಿತಾದ ಒಂದು ಹಾಡನ್ನು ಅಮ್ಮ ಅನುಪಮ (ನನ್ನ ಅವಳಿ ಸೋದರಿ) ಳಿಗೆ ಕಲಿಸಿ ಶತಮಾನೋತ್ಸವದ ಸಮಾರಂಭದಲ್ಲಿ ಹಾಡುವಂತೆ ಪ್ರೇರೇಪಿಸಿದ್ದರು. ಆ ಪದ್ಯದ ಪ್ರಥಮ  ಸಾಲುಗಳು ಹೀಗಿವೆ :

ಗಾಂಧಿಯು ತೋರಿದ ದಾರಿಯಿಂ ನಡೆದರೆ
ದೂರಕೆ ಹೋಗದು ರಾಮರಾಜ್ಯ
ಹರಿಜನರೇಳ್ಗೆಗೆ ಹಿಂದು ಮುಸ್ಲಿಮರ
ಐಕ್ಯತೆಗಾಗಿ ಹೋರಾಡಿದ
ಕಲಿಯುವ ನಾವು ಗಾಂಧಿಯ ಗೀತೆಯ
ಹಾಡುವ ನಾವು ಪಾಡುವ

ಶಿಕ್ಷಕರ ತರಬೇತಿ ಪಡೆದ ಅಮ್ಮ, ಶಿಕ್ಷಕಿಯಾಗಿ ಕೆಲಸ ಮಾಡಿದ್ದು ಕೆಲವೇ ಸಮಯ. ಮದುವೆಗಿಂತ ಮೊದಲು ಉದ್ಯಾವರ ಭಗವತಿ ಶಾಲೆಯಲ್ಲಿ ಕೆಲವು ತಿಂಗಳುಗಳು, ಮದುವೆಯ ನಂತರ ಕೋಟೆಕಾರು ಶಾಲೆಯ ಟೀಚರೂ, ಅಮ್ಮನ ನಾದಿನಿಯೂ ಅಗಿದ್ದ ಪುತ್ತಮ್ಮ ಟೀಚರ ಬದಲಿಗೆ ಕೆಲವು ತಿಂಗಳುಗಳು. ಎರಡು ವರ್ಷಗಳ ಅಂತರದಲ್ಲಿ ಎರಡು ಬಾರಿ ಅವಳಿ ಮಕ್ಕಳನ್ನು ಹೆತ್ತದ್ದು ಅಮ್ಮನ ವೃತ್ತಿ ಜೀವನಕ್ಕೆ ಮುಳುವಾಯಿತು. ಆ ನೋವು ಅವರನ್ನು ಕೊನೆಯವರೆಗೂ ಬಾಧಿಸುತ್ತಿತ್ತು.

ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ನನಗೆ ಅಮ್ಮ ಖ್ಯಾತ ಕನ್ನಡ ಕಾದಂಬರಿಗಾರ್ತಿ ತ್ರಿವೇಣಿಯವರ ‘ತಾವರೆಯ ಕೊಳ’ ಕಾದಂಬರಿಯನ್ನು ಬಹುಮಾನವಾಗಿ ನೀಡಿದ್ದರು. 

ಮನೆಯಲ್ಲಿ ಎಲ್ಲರೂ ಓದಿಯಾದ ಮೇಲೆ ಅಮ್ಮ ಅದನ್ನು ತನ್ನ ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಟ್ಟಿದ್ದರು. ಅದು ನಂತರ ಹೊರಗೆ ಬಂದದ್ದೇ ಎಷ್ಟೋ ವರ್ಷಗಳ ಅನಂತರ. 

ಮಂಗಳೂರಿನ ಸೆಂಟ್ರಲ್ ಮಾರ್ಕೆಟಿನ ಪ್ರವೇಶ ದ್ವಾರದಲ್ಲಿರುವ ಪುಸ್ತಕದ ಅಂಗಡಿಯಿಂದ ಅಮ್ಮ ಹೆಚ್ಚಾಗಿ ಕತೆ, ಕಾದಂಬರಿ, ಮ್ಯಾಗಜೀನ್ ಗಳನ್ನು ಖರೀದಿಸಿ ತರುತ್ತಿದ್ದರು. ಪಪ್ಪನ ಸಂಗ್ರಹದಲ್ಲಿಯೂ ಅನೇಕ ಪುಸ್ತಕಗಳಿದ್ದವು. ರವೀಂದ್ರನಾಥ ಟಾಗೋರ್ ರ ‘ಗೋರಾ’, ಶರತ್ಚಂದ್ರ ಚಟರ್ಜಿಯವರ ‘ಶೇಷ ಪ್ರಶ್ನೆ’, ತ.ರಾ.ಸು ರವರ ‘ನಾಗರಹಾವು’, ‘ಸರ್ಪಮತ್ಸರ’. ಮತ್ತು ‘ಮಾಡಿ ಮಡಿದವರು’, ಶಾಪದ ವಜ್ರ’ ಇತ್ಯಾದಿ.

ಯಕ್ಷಗಾನ ಪ್ರಿಯರಾಗಿದ್ದ ಅಮ್ಮ ಉದಯವಾಣಿ ಪೇಪರಿನಲ್ಲಿ ಪ್ರಕಟವಾಗುತ್ತಿದ್ದ ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು, ಪಾತ್ರಧಾರಿಗಳ ಚಿತ್ರಗಳನ್ನು ಕತ್ತರಿಸಿ ಇಡುತ್ತಿದ್ದರು. ಆಗಿನ ಕಾಲದಲ್ಲಿ ಜನಪ್ರಿಯರಾಗಿದ್ದ ಪ್ರಸಿದ್ಧ ಸ್ತ್ರೀ ಪಾತ್ರಧಾರಿಗಳಾಗಿದ್ದ ಪಾತಾಳ ವೆಂಕಟರಮಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಕುಣಿತವಿಲ್ಲದೆ ತನ್ನ ವಾಕ್ಚಾತುರ್ಯದಿಂದ ಪ್ರೇಕ್ಷಕರ ಮನವನ್ನು ಗೆದ್ದ ಕುಂಬ್ಳೆ ಸುಂದರ ರಾವ್, ಉತ್ತಮ ಕಲಾವಿದರಾದ ಅರುವ ಕೊರಗಪ್ಪ ರೈ, ಹಾಸ್ಯ ಕಲಾವಿದರಾದ ಮಿಜಾರು ಅಣ್ಣಪ್ಪ. ಪ್ರಸಿದ್ಧರಾದ ಮಂಡೆಚ್ಚ ಭಾಗವತರು, ಸಾಮಗರು ಮಂತಾದ ಯಕ್ಷಗಾನ ಕಲಾವಿದರ ಬಗ್ಗೆ ಅರಿಯುವಲ್ಲಿ ಅಮ್ಮನ ಪಾತ್ರ ಬಹಳವಿತ್ತು.

ವರ್ಣರಂಜಿತ ಉಡುಗೆ ತೊಡುಗೆಗಳ, ಹಾಡು, ನೃತ್ಯ, ಕುಣಿತಗಳ ಯಕ್ಷ ಲೋಕದ ಪರಿಚಯ ಅಮ್ಮ ಮಾಡಿಕೊಟ್ಟಿದ್ದರು. ಅಮ್ಮನ ಪೆಟ್ಟಿಗೆಯಲ್ಲಿದ್ದ ಇನ್ನೊಂದು ಚಿತ್ರವೆಂದರೆ ಸಿನೆಮಾ ತಾರೆ ಕಲ್ಪನಾ ಅವರದ್ದು. ಅವರು ಅಮ್ಮನ ಮೆಚ್ಚಿನ ನಟಿಯಾಗಿದ್ದರು. ಹಾಗಾಗಿ ಅಮ್ಮನ ಒಟ್ಟಿಗೆ ನಮಗೂ  ಕಲ್ಪನಾ ಅವರ ಉತ್ತಮ ಚಿತ್ರಗಳನ್ನು ನೋಡುವ ಸುವರ್ಣಾವಕಾಶ ಒದಗಿ ಬಂದಿತ್ತು. ಬೆಳ್ಳಿಮೋಡ, ಗೆಜ್ಜೆ ಪೂಜೆ, ಶರಪಂಜರ, ಸುಭದ್ರಾ ಕಲ್ಯಾಣ ಮುಂತಾದ ಸಿನೆಮಾಗಳನ್ನು ನೋಡಿ ಆನಂದಿಸಿದ್ದೆವು.

ಕೆಳಗಿನ ಮೂರನೆಯ ಪೆಟ್ಟಿಗೆಯಲ್ಲಿ ಅಮ್ಮ ತನ್ನ ಕೆಲವು ರೇಷ್ಮೆ ಸೀರೆಗಳನ್ನು ಹಾಗೂ ಕೆಲವು ಚಿನ್ನದ ಆಭರಣಗಳನ್ನು ಇಡುತ್ತಿದ್ದರು. ಅಮ್ಮನ ಮದುವೆಯ ಕೆಂಪು ಬಣ್ಣದ ಬುಟ್ಟಾ ಹೂವಿನ ಸಂದರವಾದ ಬನಾರಸ್ ರೇಷ್ಮೆ ಸೀರೆ, ಕಡು ನೀಲಿ ಅಂಚುಳ್ಳ ನೀಲಿ ಬಣ್ಣದ ಒಡಲಲ್ಲಿ ನಕ್ಷತ್ರಗಳಿದ್ದ ಅಮ್ಮನ ಸೀಮಂತದ  ಬನಾರಸ್ ರೇಷ್ಮೆ ಸೀರೆ. ಒಂದೆರಡು ಇತರ ರೇಷ್ಮೆ ಸೀರೆಗಳು. 

ನಾವು ಚಿಕ್ಕವರಿರುವಾಗ ಅಮ್ಮ ಮದುವೆ ಸಮಾರಂಭಗಳಿಗೆ ತನ್ನ ಮದುವೆ ಸೀರೆಯನ್ನು ಇಲ್ಲವೇ ಸೀಮಂತದ ಸೀರೆಗಳನ್ನು ಉಡುತ್ತಿದ್ದರು. ಸೀರೆ ಉಟ್ಟು ಆಭರಣ ಧರಿಸಿ ಹೊರಡುವಾಗ ನಾವು ಅಮ್ಮನನ್ನು ಮೆಚ್ಚುಗೆಯಿಂದ ನೋಡುತ್ತಿದೆವು. ಹಿಂದಿರುಗುವಾಗ ಮದುವೆ ಮನೆಯಲ್ಲಿ ಸಿಕ್ಕಿದ ಮಲ್ಲಿಗೆ ಹೂವನ್ನು ಮುಡಿದು ಅದರ ಪರಿಮಳ ಬೀರುತ್ತಾ, ಮೈಯಲ್ಲಿ ಚಿಮುಕಿಸಲ್ಪಟ್ಟ ಪನ್ನೀರಿನ ಪರಿಮಳ ಬೀರುತ್ತಾ ಬರುತ್ತಿದ್ದರು. ಅಮ್ಮ ಸೀರೆ ಬದಲಿಸಿದ ಕೂಡಲೇ ನಾವು ಅದನ್ನು ಉಟ್ಟು ಕನ್ನಡಿಯಲ್ಲಿ ನೋಡಿ ಆನಂದಿಸುತ್ತಿದ್ದೆವು. ನಂತರ ಅಮ್ಮ ಸೀರೆಯನ್ನು ಸ್ವಲ್ಪ ಹೊತ್ತು ಬಿಸಿಲಿಗೆ ಹಾಕಿ ತೆಗೆದು ಮಡಚಿಪುನಃ ಪೆಟ್ಟಿಗೆಯಲ್ಲಿ ಇಡುತ್ತಿದ್ದರು.

ಮೇಲಿನ ಚಿಕ್ಕ ಪೆಟ್ಟಿಗೆಯಲ್ಲಿ ಅಮ್ಮ ಚಿಲ್ಲರೆ ನಾಣ್ಯಗಳನ್ನು ಇಡುತ್ತಿದ್ದರು. ಮುಂಬೈಯಲ್ಲಿ ಉದ್ಯೋಗದಲ್ಲಿದ್ದ ಪಪ್ಪ ಬರೆಯುತ್ತಿದ್ದ ಪತ್ರಗಳನ್ನು ಅಮ್ಮ ಅದೇ ಪೆಟ್ಟಿಗೆಯಲ್ಲಿ ಇಡುತ್ತಿದ್ದರು. ಒಂದೆರಡು ಸಲ ನಾನು ಚಿಲ್ಲರೆ ಹಣವನ್ನು ಲಪಟಾಯಿಸಲು ಪೆಟ್ಟಿಗೆ ತೆರೆದಿದ್ದೆ. ಆದರೆ ಕಬ್ಬಿಣದ ಪೆಟ್ಟಿಗೆಯ ‘ಕಿರ್ರ್’ ಶಬ್ದ ಅಡಿಗೆ ಕೋಣೆಯಲ್ಲಿದ್ದ ಅಮ್ಮನಿಗೆ ಕೇಳಿ ಓಡಿ ಬಂದಿದ್ದರು.

ಅಮ್ಮನ ಮುಖದಲ್ಲಿದ್ದ ಅಸಮಾಧಾನವನ್ನು ನೋಡಿ ಹಣವನ್ನು ವಾಪಾಸ್ ಪೆಟ್ಟಿಗೆಗೆ ಹಾಕಿದ್ದೆ. ಮತ್ತೆ ಯಾವತ್ತೂ ಆ ದುಷ್ಕೃತ್ಯಕ್ಕೆಕೈ ಹಾಕಲಿಲ್ಲ. ಕೆಲವು ಸಲ ಆ ಪೆಟ್ಟಿಗೆಯಲ್ಲಿ ನನ್ನ ಶೋಧನಾ ಕಾರ್ಯ ನಡೆಯುತ್ತಿತ್ತು. ಹಾಗೆ ಹುಡುಕುವಾಗ ಒಮ್ಮೆ ಪಪ್ಪ ಅಮ್ಮನಿಗೆ ಬರೆದ ಪತ್ರ ಸಿಕ್ಕಿತು. ಕುತೂಹಲದಿಂದ ಮೆಲ್ಲಗೆ ಕವರನ್ನುತೆರೆದು ಪತ್ರವನ್ನು ಹೊರಕ್ಕೆಳೆದೆ. ತೆರೆದು ನೋಡಿದೆ. ಪಪ್ಪ ಅಮ್ಮನನ್ನು ‘ಪ್ರಿಯೆ’ ಎಂದು ಸಂಬೋಧಿಸಿದ್ದರು. ಅದನ್ನು ಸದ್ದಿಲ್ಲದೆ ಮಡಚಿ ಕವರಿನೊಳಗೆ ಇಟ್ಟು ಮೊದಲಿದ್ದ ಜಾಗದಲ್ಲೇ ಇಟ್ಟೆ. ಹಾಗೆ ನನ್ನ ಶೋಧನಾ ಕಾರ್ಯ ಮುಂದುವರಿಸಿದೆ. 

ಕವನ ಬರೆದಂತೆ ಕಾಣುವ ಒಂದು ಪತ್ರ ಸಿಕ್ಕಿತು. ಪತ್ರವನ್ನು ತೆರೆದೆ. ಅದು ಕವನವೇ ಆಗಿತ್ತು. ಶೀರ್ಷಿಕೆ ಓದಿದೆ. ‘ಚಂದನ ವಿರಹ ಗೀತೆ’.  ಕೆಳಗಿರುವ ಕವನವನ್ನು ಓದಲು ಪ್ರಾರಂಭಿಸುವಳೇ ಇದ್ದೆ, ಅಷ್ಟರಲ್ಲಿ ಧಾವಿಸಿ ಬಂದ ಅಮ್ಮ ನನ್ನ ಕೈಯಿಂದ ಪತ್ರವನ್ನು ಸೆಳೆದುಕೊಂಡು ಪೆಟ್ಟಿಗೆಯಲ್ಲಿ ಇಟ್ಟು ಪೆಟ್ಟಿಗೆ ಮುಚ್ಚಿಬಿಟ್ಟರು. ಪೆಟ್ಟಿಗೆಯಲ್ಲಿರುವ ಯಾವುದೇ ಪತ್ರವನ್ನು ಓದಬಾರದು ಎಂದು ತಾಕೀತು ಮಾಡಿದರು. ಅನಂತರ ನಾನು ಆ ರೀತಿಯ ದುಸ್ಸಾಹಸಕ್ಕೆ ಮನಸ್ಸು ಮಾಡಲೇ ಇಲ್ಲ.

ವರ್ಷಗಳು ಉರುಳಿದವು. ಅಮ್ಮನ ಮಕ್ಕಳು ಬೆಳೆದು ದೊಡ್ಡವರಾದರು. ಅವರಿಗೆ ಮದುವೆಯೂ ಆಯಿತು. ಮಕ್ಕಳೂ ಆದವು. ಮಕ್ಕಳು ರಜೆಯಲ್ಲಿ ಅಜ್ಜಿ ಮನೆಗೆ ಬಂದವರು ಅಜ್ಜಿಯ ಪೆಟ್ಟಿಗೆಯಲ್ಲಿ ಜೋಪಾನವಾಗಿರಿಸಿದ್ದ ಬೀಸಣಿಗೆಯನ್ನು ನೋಡಿ ಬಿಟ್ಟರು. ಅದರೊಡನೆ ಆಟ ಆಡಲು ಬಯಸಿದಾಗ ಅಜ್ಜಿ ಯಾವುದೇ ತಕರಾರು ಮಾಡದೆ ಪ್ರೀತಿಯ ಮೊಮ್ಮಕ್ಕಳಿಗೆ ಕೊಟ್ಟು ಬಿಟ್ಟರು.

ಮೊಮ್ಮಕ್ಕಳು ಅದರೊಡನೆ ಆಟ ಆಡಿ ಅದನ್ನು ಹರಿದು ಬಿಟ್ಟರು. ನೆಹರೂ ಮನೆತನದ ಪೋಟೋ ಆಲ್ಬಂನಲ್ಲಿದ್ದ ಪೋಟೋಗಳು ಬಿ. ಎಡ್. ಮಾಡುತ್ತಿದ್ದ ನನ್ನ ತಂಗಿಯರ ವಿವಿಧ ಚಟುವಟಿಕೆಗಳ ಪುಸ್ತಕಗಳನ್ನು ಅಲಂಕರಿಸಿದವು. ಆರೋಗ್ಯದಲ್ಲಿ ಏರುಪೇರಾದ ಮೇಲೆ ಅಮ್ಮ ಮತ್ತು ಪಪ್ಪ ತಮ್ಮ ಕೊನೆಯ ವರ್ಷಗಳನ್ನು ಅನುಪಮನ ಮನೆಯಲ್ಲಿ ಕಳೆದಿದ್ದರು. ಏಳೆಂಟು ವರ್ಷಗಳ ಹಿಂದೆ ಹತ್ತು ತಿಂಗಳುಗಳ ಅಂತರದಲ್ಲಿ ನಮ್ಮನ್ನು ಅಗಲಿದರು.

ಮೊದಲು ತೀರಿ ಹೋದ ಅಮ್ಮ ಪೆಟ್ಟಿಗೆಯಲ್ಲಿ ಇಟ್ಟಿದ್ದ ತಮ್ಮ ಮದುವೆಯ ಬನಾರಸ್ ರೇಷ್ಮೆ ಸೀರೆ ಉಟ್ಟು ಮಲ್ಲಿಗೆ ಹೂ ಮುಡಿದು ಅಂತಿಮ ಪಯಣ ಮಾಡಿದ್ದರು. ನಂತರದ ದಿನಗಳಲ್ಲಿ ಅಮ್ಮನ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಕೆಲವು ಕಾಗದಪತ್ರಗಳು ದೊರೆತವು. ‘ಚಂದನ ವಿರಹ ಗೀತೆ’ ಅಮ್ಮ ಮತ್ತು ಪಪ್ಪ ಮದುವೆಯಾದ ವರ್ಷದಲ್ಲಿ ಪಪ್ಪನ ಗೆಳೆಯ ಶ್ರೀಧರಣ್ಣ ಬರೆದ ಕವನ. ಅದು 1957 ಜೂನ್‌ನಲ್ಲಿ ಬರೆದದ್ದು. ಇನ್ನೊಂದು ಕವನ ಅದೇ ವರ್ಷದ ಜುಲೈ ತಿಂಗಳಲ್ಲಿ ಬರೆದಿದ್ದರು.

ಶ್ರೀಧರಣ್ಣ ತನ್ನ ಪ್ರೀತಿಯ ಗೆಳೆಯ ಚಂದ ಯಾ ಚಂದುವಿಗೆ (ನಮ್ಮ ಪಪ್ಪನ ಹೆಸರು ಚಂದಪ್ಪ) ಬರೆದ ಐದು ಪುಟಗಳ ಸುಂದರವಾದ ‘ಮೇಘ ಸಂದೇಶ-ಕಾರ್ಗಾಲ’ ಎಂಬ ಕವನ. ಎರಡು ಕೂಡಾ ವಿರಹ ಗೀತೆಗಳು.

ಮದುವೆಯಾದ ಕೆಲವು ದಿನಗಳಲ್ಲಿ ನವ ವಧುವಾದ ನಮ್ಮಮ್ಮನನ್ನು ಊರಲ್ಲಿ ತನ್ನಮ್ಮನೊಂದಿಗೆ ಬಿಟ್ಟು ಪಪ್ಪ ಉದ್ಯೋಗ ನಿಮಿತ್ತ ಮುಂಬಯಿಗೆ ತೆರಳಿದ್ದರು. ನವ ವಿವಾಹಿತರ ವಿರಹವನ್ನು ಬಣ್ಣಿಸುವ ಆ ಎರಡು ಕವನಗಳು ಪಪ್ಪನ ಗೆಳೆಯನ ಕವಿ ಹೃದಯವನ್ನು ಬಿಂಬಿಸುತ್ತದೆ. ಅಮ್ಮನ ಕೈ ಬರಹದಲ್ಲಿದ್ದ ಇನ್ನೆರಡು ಕವನಗಳು ದ.ರಾ ಬೇಂದ್ರೆಯವರ ಪ್ರಸಿದ್ಧ ಕವನಗಳಾದ ಉತ್ತರ ಧ್ರುವದಿಂದ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ! ಮತ್ತು ನನ್ನ ಕರಣ ನಿನಗೆ ಶರಣ, ಸಕಲ ಕಾರ್ಯ ಕಾರಣ!.

‘ಮೇಘ ಸಂದೇಶ’ ಕವನದಲ್ಲಿ ಚಂದೂ ಮಿಯಾ ಬಾಲ್ಕನಿಯಲ್ಲಿ ನಿಂತು ಕಾರ್ಗಾಲದ ಮೋಡದೊಡನೆ ಮಾತನಾಡುತ್ತಾರೆ. ಕವನದ ಕೆಲವು ಆಯ್ದ ಭಾಗಗಳು ಇಂತಿವೆ:

ಮುಂಗಾರು ಮೋಡವಿದುವು
ತೆಂಕಣಿಂದ ಬಂದಿತು
ತನ್ನ ಮನದ ದೇವಿಯಿದನು
ಕಂಡು ಸಂದೇಶವಿತ್ತು
ಕಳುಹಿಸಿರುವಳೇನೋ ಎಂಬ
ಶಂಕೆ ಮನದಿ ಮೂಡಿತು
ದೂರ ತೆಂಕನಾಡಿನಲ್ಲಿ
ಕಡಲ ತೀರದೂರಿನಲ್ಲಿ
ಬೆಟ್ಟವೊಂದು ತಲೆಯೆತ್ತಿ
ನಿಮಿರಿ ನಿಂತಿದೆ!
ಬಳಿಯೆ ಹರಿಯುತಿಹುದು ತೊರೆಯು
ಸುತ್ತುಮುತ್ತು ಹಸಿರು ಬಯಲು
ಚೆಲುವೆ ರೂಪವೆತ್ತಿ ನಿಂತು
ನಾಡೆ ಚೆಲುವಿಯಾಗಿದೆ!
ಅದರ ನಡುವೆಯೆನ್ನ ಮನೆಯ
ಹುಡುಗಿ ಕೊರಗುತಿರುವಳಲ್ಲಿ
ಕೊರಗಿ ಮರುಗಿ ನವೆಯುತಿಹಳು
ನನ್ನ ಬರವ ಕಾಯುತ!
ಆವ ವೇಳೆ ಕಂಡೆ ನೀನು?
ಬಾವಿ ಬಳಿಯಿದ್ದಳೇನು?
ನನ್ನ ನೆನೆದು ಅತ್ತಳೇನು?
ದಿನವೆಣಿಸಿ ಕಾಯುತ್ತಿಹಳೆ!

ಅಮ್ಮ ಮತ್ತು ಪಪ್ಪನ ವಿವಾಹ ನಂತರದ ಮೊದಲ ದಿನಗಳು ಪ್ರೇಮಮಯವೂ ಕಾವ್ಯಮಯವೂ ಆಗಿರಬಹುದೇ? ದ.ರಾ.ಬೇಂದ್ರೆಯವರ ಕವನಗಳನ್ನು ಪಪ್ಪನಿಗೆ ಪತ್ರದೊಂದಿಗೆ ಅಮ್ಮ ಕಳುಹಿಸಿರಬಹುದೇ? ಗೆಳೆಯನ ಪತ್ರವನ್ನು ಪಪ್ಪ ಅಮ್ಮನಿಗೆ ಕಳುಹಿಸಿರಬಹುದೇ? ಅಮ್ಮನ ಪೆಟ್ಟಿಗೆಯು ನಿಜವಾಗಿಯೂ ರೋಚಕ ವಿಷಯಗಳನ್ನೊಳಗೊಂಡಿತ್ತು.

‍ಲೇಖಕರು Avadhi

May 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: