
ರೂಪ ಹಾಸನ
ಅದೋ ಕಿವಿಗೊಟ್ಟು ಕೇಳು
ದೂರದಲ್ಲೆಲ್ಲೋ ಕಂದ
‘ಅಮ್ಮಾ’ ಎಂದು ಆರ್ತವಾಗಿ
ಚೀರುತಿರುವ ಸಂಕಟದ ದನಿ…
ತೆರೆತೆರೆಯಾಗಿ ಮೊರೆಯಪ್ಪಳಿಸಿ
ವಿಲಗುಟ್ಟುತ್ತದೆ ಕರುಳು.
ಆ ‘ಅಮ್ಮಾ’ ನಾನಲ್ಲವೆಂದು
ಪ್ರತಿ ಬಾರಿ
ಕಿವಿ ಮುಚ್ಚಿಕೊಂಡರೂ
ಜೀವ ದೃಢ ಮಾಡಿಕೊಂಡರೂ
ಬೆರಳ ಸಂದುಗಳ ಹಾದು
ಭಲ್ಲೆಯಲಿ ಇರಿದಂತೆ
ಗಢಚಿಕ್ಕಿ ಅಪ್ಪಳಿಸುವ
ಎದೆಝಲ್ಲೆನಿಸುವ ಕೂಗು.

ಕರುಳ ನೆಲವ ಬಗೆ ಬಗೆದು
ಆಳದ ತೇವಕ್ಕೆ
ಬೆಂಕಿಯಿಕ್ಕಿದಂತೆ
ಒಳಗು ಸಂತೈಸಲಾಗದೇ
ಆ ಸಂಕಟದ ತಂತು ಹಿಡಿದು
ಓಡಲೆಳಸುತ್ತದೆ ಜೀವ….
ನಿಂತಲ್ಲಿ ನಿಲ್ಲಲಾರದೇ ಒದ್ದಾಟ ವಿಲವಿಲ.
‘ಆ ಕಂದ ನಿನ್ನದೇ ಆಗಿದ್ದರೇ? ನಿಲ್ಲುತ್ತಿದ್ದೆಯಾ?’
ನಾಟಿಸುತ್ತದೆ ಎದೆಗೇ ಚೂರಿ
ಕಟುಕ ಮನಸು.
ಒಳಗೇ ದಹಿಸುವ ಪ್ರಾಣ
ಕೈಯಲ್ಲಿ ಹಿಡಿದು
ಕ್ಷಣರ‍್ಧದಲ್ಲಿ ಮೊರೆಯೆಡೆಗೆ
ಬಿಟ್ಟಿದ್ದು ಎಲ್ಲಬಿಟ್ಟು ಓಡಿದರೆ…
ತಡೆಯುತ್ತವೆ ನೂರು ಪಾಪಿ ಕೈಗಳು…
ಒಳಗೊಂದು ಪಾದ
ಹೊರಗೋಡುವ
ಮನಸಿನ ಸಾವಿರ ಪಾದ!
ತಾಯಾಗುವುದು ಸುಲಭ
ಅಮ್ಮನಾಗುವುದೆಷ್ಟೊಂದು ಕಷ್ಟ!






ಕವಿತೆ ಇಷ್ಟವಾಯಿತು ರೂಪಾ ಮ್ಯಾಮ್. ನೂರು ಪಾಪಿ ಕೈಗಳು ತಡೆದರೂ ಮಗುವಿನಾಕ್ರಂದನವ ತಲುಪುವ ಅಮ್ಮನ ಮಡಿಲು ಮನಸ್ಸು ತಲುಪುತ್ತದೆ.
ಪಕೃತಿ ಸಹಜವಾಗಿ ಹೆಣ್ಣು ತಾಯಿಯಾಗಬಹುದು, ಅಮ್ಮನಾಗುವುದು ಕಷ್ಟ. ಅಮ್ಮ, ಹೆಣ್ಣು ಎಲ್ಲವನ್ನೂ ಪೊರೆವ ಮನಸ್ಥಿತಿ. ಹೆರದೆಯೂ ಅಮ್ಮನಾಗಬಲ್ಲಳು. ಕವನ ಎಲ್ಲರ ಮನಮುಟ್ಟುತ್ತದೆ.
ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು ಕಾವ್ಯ ..