ಎಂದೂ ಮರೆಯದ ಕಾಶ್ಮೀರದ ʻಆ ದಿನಗಳು!’

ಹುಟ್ಟಿದ್ದುಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಎತ್ತ ಕಣ್ಣು ಹಾಯಿಸಿದರೂ ನಯನ ಮನೋಹರ ದೃಶ್ಯ, ಸ್ವರ್ಗಸದೃಶ ಹಿಮಚ್ಛಾದಿತ ಪರ್ವತ ಶಿಖರಗಳು, ಡಲ್‌ ಸರೋವರದಲ್ಲಿ ಮೌನವಾಗಿ ಸಾಗುವ ಶಿಖಾರಗಳು, ಝಗಮಗಿಸುವ ಸವಲತ್ತಿನ ಹೌಸ್‌ಬೋಟುಗಳು, ಚಿನಾರ್‌ ಮರದ ಹೊಂಬಣ್ಣ, ‘ಆಹಾ’ ಪರಿಮಳದ ಕೇಸರಿ, ಟ್ಯೂಲಿಪ್‌, ಪಶ್ಮೀನಾ, ಫೂಲ್ಕಾರಿ ಹೀಗೆ ಒಂದೋ ಎರಡೋ..! ಆದರೆ, ಕಾಶ್ಮೀರ ಎಂದರೆ ಕೇವಲ ಇವಿಷ್ಟೆಯಾ?

ವಿಮಾನ ಹತ್ತಿ ಸೀದಾ ಶ್ರೀನಗರದಲ್ಲಿಳಿದು ಅಲ್ಲಿ ಸುಖಾಸುಮ್ಮನೆ ಹೌಸ್‌ಬೋಟಲ್ಲಿ ಕಾಲು ಚಾಚಿ ಕಾಲ ಕಳೆದು, ಗುಲ್‌ಮಾರ್ಗ್‌, ಸೋನ್‌ಮಾರ್ಗ್‌, ಪೆಹಲ್ಗಾಂ ಹೀಗೆ ಸುಮ್ಮನೆ ಸುತ್ತಾಡಿ ಖುಷಿಯಾಗಿ ಕಾಲ ಕಳೆದು ಬರುವುದು ಒಂದಾದರೆ, ಅದಕ್ಕೂ ಹೊರತಾಗಿ ರಸ್ತೆ ಮಾರ್ಗದಲ್ಲೇ ಅಲ್ಲಿನ ಹಳ್ಳಿಹಳ್ಳಿಯ ಒಳಹೊಕ್ಕು ನೋಡುವುದು ಇನ್ನೊಂದು. ಈ ಕಾಶ್ಮೀರವೆಂಬ ಭಾರತದ ಶಿರೋಭಾಗ, ಅದೆಷ್ಟು ಸುಂದರವೋ, ಅಷ್ಟೇ ನಿಗೂಢವೂ ಹೌದು ಎಂದು ಒಳಹೊಕ್ಕಷ್ಟೂ ಗಾಢವಾಗಿ ಅನಿಸತೊಡಗಿದೆ.

ವರ್ಷದ ೩೬೫ ದಿನಗಳೂ ಅತ್ಯಂತ ಸುರಕ್ಷಿತವಾಗಿರುವ ಹಾಗೂ ಆಗಾಗ ಪಕ್ಕದ ರಾಜ್ಯಗಳ ಜೊತೆಗೆ ಸಣ್ಣಪುಟ್ಟ ಕೋಳಿ ಜಗಳ ಮಾಡಿಕೊಂಡು ಹಾಯಾಗಿರುವ ದಕ್ಷಿಣದ ನಾವುಗಳು ನಾಲ್ಕೋ, ಹತ್ತೋ ದಿನಕ್ಕೆ ಅಲ್ಲಿ ಹೋಗಿ ʻಕೋರಾ ಕಾಗಜ್‌ ಥಾ ಯೇ ಮನ್‌ ಮೇರಾ…ʼ ವನ್ನು ನೆನಪಿಸಿಕೊಂಡೋ, ʻಯೇ ಚಾಂದ್‌ಸ ರೋಶನ್‌ ಚೆಹೆರಾ…ʼ  ಅಂತ ಹಾಡಿಕೊಂಡೋ ಮೈಮರೆಯಬಹುದು. ಆದರೆ, ಕಾಶ್ಮೀರ ಇವೆಲ್ಲವನ್ನು ದಾಟಿಕೊಂಡು ಮುಂದೆ ಹೋಗಿಬಿಟ್ಟಿದೆ, ಬಹಳ ದೂರ. ಇಲ್ಲಿನ ಬೇರುಗಳು ಆಳಕ್ಕಿಳಿಯುತ್ತಾ ದಾರಿ ತಪ್ಪಿವೆ. ತನ್ನ ಇತಿಹಾಸವನ್ನು, ಸಂಸ್ಕೃತಿಯನ್ನು ಒಳಮೈಯಲ್ಲಿ ಹಿಡಿದಿಟ್ಟಿದೆಯಾದರೂ, ಇದರ ಬೇರು ಇದೇ ಎಂದು ಹೇಳಲು ಯಾರೆಂದರೆ ಯಾರೂ ಇಲ್ಲ!

ಮೊದಲೊಮ್ಮೆ ಹೋಗಿ ಕುರುಡ ಆನೆ ಮುಟ್ಟಿದಂತೆ ಮುಟ್ಟಿ ಬಂದಿದ್ದೆ ಅನಿಸಿದ್ದು ಮೊನ್ನೆ ಹೋದಾಗ. ಆದರೂ ʻರೇಶಿಮೆ ಪಕ್ಕ ನಯ, ಮುಟ್ಟಲಾರೆ ಭಯʼ ಎಂಬ ಪರಿಸ್ಥಿತಿಯೂ ಇದೆ. ನನ್ನೂರು, ನೆಂಟರಿಷ್ಟರ ಊರು ಬಿಟ್ಟರೆ, ತಿರುಗಾಡಲು ಹೋದ ಪರವೂರುಗಳು ಎಷ್ಟೇ ಚೆಂದವಿದ್ದರೂ ಇಲ್ಲಿಗೆ ಇನ್ನೊಮ್ಮೆ ಬರಬೇಕು ಅಂತ ಆ ಕ್ಷಣದಲ್ಲಿ ಅನಿಸಿದರೂ, ಒಮ್ಮೆ ಹೋದ ಸ್ಥಳಕ್ಕೆ ಯಾವ ಕೆಲಸವೂ ಇಲ್ಲದೆ ಸುಮ್ಮನೆ ಅಂತ ಮತ್ತೊಮ್ಮೆ ಕಾಲಿಟ್ಟದ್ದು ಕಡಿಮೆ. ಆದರೆ ಕಾಶ್ಮೀರ ಹಾಗಲ್ಲ. ಪ್ರತೀ ಬಾರಿ ಹೋದಾಗಲೂ ʻಇದು ಇದಲ್ಲ ಇದಲ್ಲ, ಇದಿಷ್ಟೇ ಅಲ್ಲʼ ಅಂತನಿಸಿ, ಇಲ್ಲಿ ಇದಕ್ಕೂ ಮೀರಿದ್ದು ಬೇರೆಯೇ ಇನ್ನೇನೋ ಇದೆ, ಅದಿನ್ನೂ ಸಿಕ್ಕಿಲ್ಲ ಎಂಬ ಭಾವ.

ಹೇಗೆ ಪಾಣಿಪತ್‌ ದಾಟಿಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ಶಾಲೆಯ ಇತಿಹಾಸದ ತರಗತಿಗಳೂ, ಕದನಗಳ ಪಾಠಗಳೂ ನೆನಪಾಗುತ್ತದೆಯೋ, ಕುರುಕ್ಷೇತ್ರ ಎಂಬ ಬೋರ್ಡೋಂದು ಪ್ರತಿ ಸಲವೂ ಮಹಾಭಾರತ ಯುದ್ಧವೇ ಕಣ್ಣಮುಂದೆ ಕಟ್ಟಿ ತರುತ್ತದೋ, ಅಮೃತಸರದ ಜಲಿಯನ್ ‌ವಾಲಾ ಭಾಗ್‌ ಹೆಸರು ಕೇಳಿದರೆ ಕನಸಲ್ಲೂ ಎದ್ದು ೧೯೧೯ ಎಂದು ಹೇಳುವಷ್ಟು ಮನಸ್ಸಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿದೆಯೋ ಹಾಗೆಯೇ, ಕಾಶ್ಮೀರ ಎಂದಾಕ್ಷಣ ೧೯೯೦ ನೆನಪಾಗದೆ ಇರದು.

ಶ್ರೀನಗರದ ಹಳೇ ಪೇಟೆಯುದ್ದಕ್ಕೂ ಕಾಣುವ ಇಂದಿಗೂ ಅನಾಥವಾಗಿ ಪಾಳುಬಿದ್ದ ಧೂಳು ಹಿಡಿದ ಕಟ್ಟಡಗಳು, ಅನಂತನಾಗ್‌ ಸುತ್ತಮುತ್ತಲ ಹಳ್ಳಿಗಳ ರಸ್ತೆ ಬದಿಯಲ್ಲಿ ಮೂಕವಾಗಿ ತಮ್ಮ ಕಥೆ ಹೇಳುವ ಅರಮನೆಯಂಥ ಭೂತ ಬಂಗಲೆಗಳು ಗತಗಾಲದ ವೈಭವವನ್ನು ಭಾಷೆ, ಅಕ್ಷರದ ಹಂಗಿಲ್ಲದೆ ನೇರವಾಗಿ ಹೃದಯಕ್ಕೆ ದಾಟಿಸಿ ಬಿಡುತ್ತದೆ. ಅಷ್ಟೇ ಅಲ್ಲ, ಇಲ್ಲಿ ಹಾದಿಯುದ್ದಕ್ಕೂ ಸಿಗುವ ಊರುಗಳು, ದಿನನಿತ್ಯ ಓದಿ ಕೇಳಿ ಗೊತ್ತಿರುವುದರಿಂದಲೋ ಏನೋ ಸ್ವಲ್ಪ ಹೆಚ್ಚೇ ಒಳಗಿಳಿಯುತ್ತದೆ.

ಅನಂತನಾಗ್‌ ಎಂಬ ಹೆಸರು ಕೇಳುವಾಗ ನೆನಪಾಗುವ ದಿನನಿತ್ಯದ ಸುದ್ದಿಗಳು, ಪುಲ್ವಾಮಾ ದಾಟುವಾಗ ಕಣ್ಣಮುಂದೆ ಬರುವ ದೃಶ್ಯಗಳು, ಉರಿ ಎಂಬ ಬೋರ್ಡು ಕಾಣುವಾಗ ನೆನಪಾಗುವ ಹೆಡ್ ‌ಲೈನುಗಳು, ದಾರಿಯುದ್ದಕ್ಕೂ ಸಿಗುವ ನಮ್ಮನ್ನು ಕಾಯುವ ಯೋಧರು.. ಒಂದೇ ಎರಡೇ, ಕನೆಕ್ಟ್‌ ಆಗಲು ನೂರೆಂಟು ಧಾರೆ.

ಅವರು ಖೀರ್‌ ಭವಾನಿ ದೇವಸ್ಥಾನದಲ್ಲಿ ಕೂತು ಹೇಳಿದ ಒಂದೇ ಒಂದು ಮಾತು ಸಾಕಿತ್ತು. ʻಎಷ್ಟೇ ಕಷ್ಟ ಪಟ್ಟರೂ ೩೦ ವರ್ಷದ ಹಿಂದಿನ ಆ ಘಟನೆಯನ್ನು ಮಾತ್ರ ಮರೆಯಲಾಗುತ್ತಿಲ್ಲ ನೋಡಿ. ನನ್ನ ಬೇರು ಇಲ್ಲಿದೆ. ಅಪ್ಪನೂ ಮಾಡಿಕೊಂಡು ಬಂದ ಈ ಕೆಲಸವನ್ನು ಮುಂದುವರಿಸುವುದಷ್ಟೆ ನನ್ನ ಅನ್ನ. ಬಿಟ್ಟು ಹೋಗಲಾರೆ. ಆದರೆ, ಹೆಂಡತಿ ಮಕ್ಕಳನ್ನೆಲ್ಲ ಇಲ್ಲೇ ಇಟ್ಟುಕೊಳ್ಳುವ ಪರಿಸ್ಥಿತಿ ಮಾತ್ರ ಇನ್ನೂ ನಿರ್ಮಾಣವಾಗಿಲ್ಲ ನೋಡಿ. ಭಯ ಇನ್ನೂ ಇದೆ’ ಎಂದು ನಿಟ್ಟುಸಿರು ಬಿಟ್ಟಿದ್ದರು.

‘ಮಕ್ಕಳೆಲ್ಲಿದ್ದಾರೆ’ ಎಂದೆ. ‘ಜಮ್ಮು’ ಎಂದರು. ‘ರಜೆಯಲ್ಲಿ ಒಂದು ತಿಂಗಳ ಮಟ್ಟಿಗೆ ಇಲ್ಲಿ ಬರುತ್ತಾರೆ ಹೆಂಡತಿಯೂ, ಮಕ್ಕಳೂ, ಅಷ್ಟೇ. ಬೇರೆ ಸಮಯದಲ್ಲಿ ನಾನೇ ಆಗಾಗ ಹೋಗುತ್ತಿರುತ್ತೇನೆ’ ಎಂದರು. ‘ಈ ನೆಲದಲ್ಲೇ ನೆಮ್ಮದಿಯಿಂದ ಶಾಲೆಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿಲ್ಲವಲ್ಲ. ಏನು ಮಾಡೋಣ ಹೇಳಿ. ಇಲ್ಲಿ ಅಳಿದುಳಿದ, ಹಾಗೂ ಉದ್ಯೋಗಕ್ಕಾಗಿ ಕೆಲವು ಹಿಂದೂ ಕುಟುಂಬಗಳಿವೆ ನಿಜವಾದರೂ, ಯಾರ ಮಕ್ಕಳೂ ಇಲ್ಲಿಲ್ಲ’ ಎಂದರು.

ಈಗೀಗ ಪರಿಸ್ಥಿತಿ ಸುಧಾರಿಸಿದೆ. ನಾವು ಧೈರ್ಯವಾಗಿ ಓಡಾಡುತ್ತೇವೆ. ಮೊದಲಾದರೆ, ‘ನೀವು ಊಹಿಸಿಯೂ ನೋಡಲಾಗದಂಥ ಪರಿಸ್ಥಿತಿ ಇತ್ತು. ಮನೆ ಬಾಗಿಲಿಗೆ ವಾಹನ ಕರೆಸಿಕೊಂಡು ತಲೆಬಗ್ಗಿಸಿ ಹೋಗಿ ಬರುವ ಪರಿಸ್ಥಿತಿಯೂ ಇತ್ತು’ ಎಂದರು.

ಆದರೆ ಒಂದು ನೆಮ್ಮದಿ ಎಂದರೆ, ಎಷ್ಟೇ ಗಲಭೆಗಳಾಗಲಿ, ಕಲ್ಲು ಬೀಳಲಿ, ಈ ಖೀರ್ ‌ಭವಾನಿ ದೇವಸ್ಥಾನದ ಕಾಂಪೌಂಡಿನೊಳಕ್ಕೆ ಇದುವರೆಗೆ ಏನೂ ಆಗಿಲ್ಲ. ಎಲ್ಲವೂ ಹೊರಗಡೆ. ಅದೊಂದು ನೆಮ್ಮದಿ ತರುವ ವಿಚಾರ. ಹಾಗಾಗಿ, ಇದರೊಳಗೆ ಕೂತರೆ ನಮಗೆ ಸುರಕ್ಷಿತತೆಯ ಭಾವ. ತಾಯಿ ಭವಾನಿ ನಮ್ಮನ್ನು ಕಾಪಾಡುತ್ತಾಳೆ ಎಂಬ ನಂಬಿಕೆ, ಆಕೆಯ ಶಕ್ತಿಯೇ ಅದು. ಎಷ್ಟಾದರೂ, ಇದು ಹನುಮಂತ ಸ್ಥಾಪಿಸಿದ ಸ್ಥಾನ. ರಾವಣ ಪೂಜಿಸಿದ ಮಾತೆ. ರಾವಣನ ಮರಣದ ನಂತರ, ʻತನಗಿನ್ಯಾರು ಗತಿ, ನನ್ನನ್ನೆಲ್ಲಾದರೂ ಕರೆದುಕೊಂಡು ಹೋಗುʼ ಎಂದಾಗ, ಬ್ರಹ್ಮಚಾರಿಯಾದ ಹನುಮಂತನ ಜೊತೆಗೆ ನೀರಿನ ರೂಪ ತಾಳಿ ಬಂದ ಭವಾನಿಯಲ್ಲವೇ ಎಂದರು.

ಅವರು ಇನ್ನೂ ಒಂದು ವಿಚಾರವನ್ನೂ ಹೇಳಲು ಮರೆಯಲಿಲ್ಲ. ತಾಯಿ ಭವಾನಿಯೆಂದರೆ, ಈ ಊರಿನ ಮುಸ್ಲಿಮರಿಗೂ ಗೌರವವಿದೆ. ಅವರ ಮನೆಯ ಹಸು ಕರು ಹಾಕಿದರೆ, ಮೊದಲ ಹಾಲನ್ನು ತಂದು ತಾಯಿಗೆ ಅರ್ಪಿಸಿಯೇ ಹೋಗುತ್ತಾರೆ. ನಾವೂ ಅವರನ್ನು ಸ್ನೇಹದಿಂದಲೇ ಕಾಣುತ್ತೇವೆ ಎನ್ನುತ್ತಾರೆ.

****

ನಮ್ಮ ಬೆಂಗಳೂರಿನ ವೃಷಭಾವತಿಯ ಹಾಗೆ ಊರಿನ ಎಲ್ಲವನ್ನೂ ತನ್ನ ಮೈಮೇಲೆ ಹಾಕಿಕೊಂಡು ತಣ್ಣಗೆ ಹರಿಯುತ್ತಿದ್ದ ಝೇಲಂ ನದಿಯ ದಂಡೆಯ ಮೇಲೆ ನಿಂತು ನೋಡುತ್ತಿದ್ದೆವು. ಒಂದೊಂದಾಗಿ ದೋಣಿಗಳು ಹಾದುಹೋದವು. ಆ ಬದಿಯಿಂದ ನದಿಗೆ ಅಂಟಿಕೊಂಡಂತಿದ್ದ ಪಾಶ್ಚಾತ್ಯ ಶೈಲಿಯ ಕಟ್ಟಡಗಳು, ಸೇತುವೆ, ಸೇತುವೆಯ ಅಡಿಯಿಂದಾಗಿ ಸಾಗುವ ದೋಣಿಗಳೂ ಎಲ್ಲವೂ ಥೇಟ್‌ ಫ್ಲಾರೆನ್ಸಿನ ಆರ್ನೋ ನದಿ ಪರಿಸರದಂತೆ ಕಂಡಿತು, ಸ್ವಲ್ಪ ಗಲೀಜಾಗಿದೆ ಅನ್ನೋದೊಂದು ಬಿಟ್ಟರೆ.

ನದಿಗುಂಟ ಇದ್ದ ಆ ಗೋಡೆಯುದ್ದಕ್ಕೂ ನಡೆದರೆ ಸ್ವಲ್ಪ ಆ ಬದಿಯಲ್ಲಿ ಕಾಳೀ ಮಾತೆಯ ಸ್ಥಾನವಿದೆ. ದೇವಸ್ಥಾನದ ರಚನೆಯಿಲ್ಲದಿರುವುದರಿಂದ ಹೀಗೆ ಹೇಳುವುದು ಉಚಿತವೇನೋ. ಗೋಡೆಗೆ ಬಳಿದ ಕೇಸರಿ ಗುರುತನ್ನಷ್ಟೆ ಹಿಂದೂಗಳು ಕಾಳೀ ಸ್ಥಾನವೆಂದು ತಲೆತಲಾಂತರದಿಂದ ನಂಬುತ್ತಾ, ಅಲ್ಲಿ ಬಂದು ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.

ಸಣ್ಣಗೆ ಕತ್ತಲೂ ಆವರಿಸುತ್ತಿದ್ದುದರಿಂದ, ಹಾಗೂ ಅದು ಹಳೇ ಶ್ರೀನಗರದ ʻಹೆಸರಾಂತʼ ಗಲ್ಲಿಯೂ ಆದ್ದರಿಂದ ನಮಗೆ ಯಾರೆಂದರೆ ಯಾರೂ ಇಲ್ಲದ ಆ ಜಾಗದಿಂದ ಕಾಳಿಯ ಸ್ಥಾನವಿದ್ದಲ್ಲಿಗೆ ಹೋಗಬಹುದೋ ಬೇಡವೋ ಎಂದು ಗೊಂದಲವಾಗಿ ಸುಮ್ಮನೆ ನಿಂತು ಝೇಲಂ ನೋಡುತ್ತಿದ್ದೆವು.

ಅಪರಿಚಿತ ಪ್ರದೇಶದಲ್ಲಿ ಯಾವುದೇ ಕಣ್ಣುಗಳು ನಮ್ಮನ್ನು ಗಮನಿಸುತ್ತಿವೆ, ಕಣ್ಣಿಡುತ್ತಿವೆಯೋ ಎಂದು ಅನುಮಾನವಾಗುವಾಗ ನಮ್ಮ ಜಾಗ್ರತೆ ನಾವು ಮಾಡಿಕೊಳ್ಳೋಣ ಅಂತ ಯಾರಿಗೇ ಆದರೂ ಅನಿಸುವುದು ಸಹಜ. ಆಗ ನಮ್ಮ ಪರಿಸ್ಥಿತಿಯೂ ಅದೇ ಆಗಿತ್ತು. ಆದರೂ ಇದರದ್ದೊಂದು ಸರಿಯಾದ ಫೋಟೋ ಬೇಕಿತ್ತಲ್ಲಾ ಎಂದು ನನ್ನ ಕಣ್ಣು ಆ ಕಡೆಗೇ ನೋಡುತ್ತಿತ್ತು. ಅಷ್ಟರಲ್ಲಿ ಪುಣ್ಯಕ್ಕೆ ಅವರೊಬ್ಬರು ನಮ್ಮ ಬಳಿ ಬಂದರು.

ಅವರು ನಮ್ಮನ್ನು ನೋಡಿದೊಡನೆಯೇ ಬಹುಶಃ ನಿರ್ಧರಿಸಿ ಬಿಟ್ಟಿದ್ದರು! ʻಬನ್ನಿ ನನ್ನ ಹಿಂದೆʼ ಎಂದರು. ನಾವು ಮಿಕಮಿಕ ನೋಡುತ್ತಿದ್ದಂತೆ, ಇನ್ನೂ ಮುಂದುವರಿದು, ʻನಿಮ್ಮ ಕಾಳೀ ಮಾತೆ ಇಲ್ಲಿದ್ದಾಳೆ ನೋಡಿ. ಬನ್ನಿ ತೋರಿಸುತ್ತೇನೆʼ ಎಂದರು. ʻಅಲ್ಲಿಗೆ ಹೋಗಬಹುದೋ ಇಲ್ಲವೋ ಎಂದು ಯೋಚಿಸುತ್ತಿದ್ದೆವುʼ ಎಂದೆವು. ʻಹೋಗದೆ ಏನು ಹೇಳಿ. ಇಲ್ಲಿಗೆ ಪಂಡಿತರು ಬರುತ್ತಾರೆ, ಪೂಜೆ /ಶ್ರಾದ್ಧ ಮಾಡುತ್ತಾರೆ. ಅಲ್ಲಿಂದಲೇ ನಿಮ್ಮನ್ನು ನೋಡುತ್ತಿದ್ದೆ. ನಿಮ್ಮ ಗೊಂದಲ ಅರ್ಥವಾಯ್ತು. ಅದಕ್ಕೇ ಹೇಳಿ ಬಿಡುವ ಅಂತ ಬಂದೆʼ ಎಂದರು. ನಾವು ಮುಗುಳ್ನಕ್ಕು ಅವರನ್ನು ಹಿಂಬಾಲಿಸಿದೆವು.

ನೋಡಿ, ಆ ಗೋಡೆಯಲ್ಲೊಂದು ಕೇಸರಿ ಗುರುತು ಕಾಣುತ್ತಿದೆಯಲ್ಲಾ, ಅದೇ ನಿಮ್ಮದು. ಈ ಕಾಂಪೌಂಡಿನ ಆ ಬದಿಯಲ್ಲಿ ಕಾಣುತ್ತಿದೆಯಲ್ಲಾ, ಅದು ಖಾನ್‌ಖಾ ಇ ಮೌಲಾ. ನಮ್ಮ ಪವಿತ್ರ ಸ್ಥಳ. ಅದು ನಮಗೆ, ಇದು ನಿಮಗೆʼ ಎಂದು ನಕ್ಕರು. ಅವರು ತೋರಿಸಿದ ಖಾನ್‌ಖಾ ಇ ಮೌಲಾದಿಂದಲೇ ಆಗಷ್ಟೇ ಬಂದಿದ್ದೆವು! ಇಸ್ಲಾಂನಲ್ಲಿ ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶವಿಲ್ಲವಲ್ಲ ಎಂದುಕೊಂಡು ನಾನು ಒಳಗೆ ಹೋಗುವ ಪ್ರಯತ್ನ ಮಾಡಲಿಲ್ಲ. ಅಲ್ಲಿದ್ದ ಧರ್ಮಗುರುಗಳು, ನಮ್ಮ ಪೂರ್ವಾಪರಗಳನ್ನೆಲ್ಲಾ ವಿಚಾರಿಸಿ, ಮಸೀದಿಯೊಳಗೆ ಬಿಡದಿದ್ದರೂ, ಹೊರಗಡೆಯಿಂದ ಮಸೀದಿ ಸುತ್ತಿ ಫೋಟೋ ತೆಗೆಯಲು ಅವಕಾಶ ನೀಡಿದ್ದರು. ಆಗಲೇ ಹಿಂಬದಿಯಲ್ಲಿ ತಂತಿ ಬೇಲಿ ಹಾಕಿ, ಗೇಟಿಗೆ ಬೀಗ ಜಡಿದು ಹಾಕಿದ್ದ ಆ ಕೇಸರಿ ಗೋಡೆ ನಮಗೆ ಕಾಣಿಸಿದ್ದು.

ಖಾನ್‌ಖಾ ಇ ಮೌಲಾ ೧೪ನೇ ಶತಮಾನದ ಇತಿಹಾಸ ಪ್ರಸಿದ್ಧ ಮಸೀದಿ. ಇದು ಕಾಶ್ಮೀರದಲ್ಲಿ ನಿರ್ಮಾಣವಾದ ಮೊದಲ ಮಸೀದಿ. ಪಕ್ಕನೆ ನೋಡಿದರೆ ಇದು ಮಂದಿರವೋ, ಮಸೀದಿಯೋ, ಚರ್ಚೋ ಎಂದು ಅನುಮಾನ ಬರುವ ಹಾಗೆ ಇದರ ವಾಸ್ತುಶಿಲ್ಪ. ಬಣ್ಣ ನೋಡಿ ಮಸೀದಿ ಎನ್ನಬಹುದು. ಮರದ ಕೆತ್ತನೆಗಳಿರುವ ಮಸೀದಿಯ ಸಭಾಂಗಣ, ಕಂಬಗಳು, ಕಿಟಕಿ ಬಾಗಿಲುಗಳು, ಪಿರಮಿಡ್‌ ಆಕಾರದ ಛಾವಣಿ, ಎಲ್ಲವೂ ಹಿಂದೂ/ ಬೌದ್ಧ ಸಾಂಪ್ರದಾಯಿಕ ಶೈಲಿಯನ್ನು ನೆನಪಿಸುತ್ತವೆ.

ಆದರೆ ಕೇವಲ ವಾಸ್ತುಶಿಲ್ಪವೊಂದನ್ನೇ ಆಧರಿಸಿ ತಕ್ಷಣ ಒಂದು ನಿರ್ಧಾರಕ್ಕೆ ಬಂದು ಬಿಡಲಾಗುವುದಿಲ್ಲ. ಕಾಶ್ಮೀರ ಶತಶತಮಾನಗಳ ಕಾಲ ಹಲವಾರು ಸಂಸ್ಕೃತಿಗಳಿಂದ ಪ್ರಭಾವಿಸಿಕೊಂಡು ಕಾಲಕಾಲಕ್ಕೆ ಬದಲಾಗುತ್ತಾ ಸಾಗಿದೆ. ೧೪ನೇ ಶತಮಾನದ ಹೊತ್ತಿಗೆ ಕಾಶ್ಮೀರಕ್ಕೆ ಇಸ್ಲಾಂ ಬಂದು ಪ್ರಚಾರ ಪ್ರಬಲವಾದರೂ, ಆ ಕಾಲದಲ್ಲಿ ನಿರ್ಮಾಣವಾದ ಮಸೀದಿಗಳು ಅಂದಿನ ಹಿಂದೂ/ಬೌದ್ಧ ಶೈಲಿಗಳಿಂದ ಪ್ರೇರಿತವಾಗಿರಬಹುದು ಎಂಬ ವಾದವೂ ಇದೆ. ಜೊತೆಗೆ ಪಿರಮಿಡ್‌ ಆಕಾರದ ಛಾವಣಿ ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ನಿರ್ಮಿತವಾದದ್ದು ಎಂಬುದೂ ಗಮನಾರ್ಹ ಪಾಯಿಂಟೇ.

ಸುಲ್ತಾನ್‌ ಸಿಕಂದರ್‌ ಬುಟ್ಶಿಕಾನ್ ೧೩೮೯-೧೪೧೩ರ ಆಸುಪಾಸಿನಲ್ಲಿ ಸೂಫಿ ಸಂತ ಮೀರ್‌ ಸಯ್ಯದ್‌ ಆಲಿ ಹಂದಾನಿಯ ನೆನಪಿನಲ್ಲಿ ಇದನ್ನು ನಿರ್ಮಿಸಿದನು ಎಂದು ಇತಿಹಾಸ ಹೇಳುತ್ತದೆ.‌ ಇದಾದ ಮೇಲೆ ೧೪೮೦ರಲ್ಲಿ ಹಾಗೂ ೧೭೩೧ರಲ್ಲಿ ಬೆಂಕಿ ಅವಘಡಗಳಿಂದಾಗಿ ಇದು ಹೊತ್ತಿ ಉರಿದರೂ, ಕಾಲಕಾಲಕ್ಕೆ ಇದರ ಪುನಶ್ಚೇತನ ಕಾರ್ಯ ನಡೆದು ಇನ್ನೂ ವಿಸ್ತಾರಗೊಂಡಿದೆ.

ಈ ಮಸೀದಿಯ ನಿರ್ಮಾಣದ ಇತಿಹಾಸದ ಬಗ್ಗೆ ಹಲವು ವಿವರಗಳಿದ್ದರೂ, ಇಂದಿಗೂ ಇಂಥದ್ದೇ ಎಂಬ ನಿರ್ಧಿಷ್ಟ ದಾಖಲೆಗಳಿಲ್ಲ. ಜೊತೆಗೆ ಈ ವಾದಕ್ಕೆ ಕೊನೆಯೂ ಇಲ್ಲ. ಆದರೂ ಕಾಲಕಾಲಕ್ಕೆ ಹಲವು ಪುಸ್ತಕಗಳಲ್ಲಿ ಈ ಮಸೀದಿಗೂ ಕಾಳೀ ಮಂದಿರಕ್ಕೂ ಇದ್ದ ಸಂಬಂಧದ ಬಗ್ಗೆ ಸೂಕ್ಷ್ಮವಾಗಿ ಪ್ರಸ್ತಾಪವಾಗಿವೆ. ಅವುಗಳ ಪ್ರಕಾರ, ೧೪ನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಇಸ್ಲಾಂ ಕಟ್ಟಿ ಬೆಳೆಸುವಲ್ಲಿ ಹಾಗೂ ಅವರ ಕಾನೂನು ಬಳಕೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಕಂದರ್‌ ಬುಟ್ಶಿಕಾನ್ ಕಾಳೀ ದೇವಾಲಯದ ಆವರಣದಲ್ಲೇ ಈ ಮಸೀದಿಯನ್ನು ನಿರ್ಮಿಸಿದ ಎಂದು ಹೇಳಲಾಗುತ್ತದೆ. ಹಾಗಾಗಿ, ದೇವಸ್ಥಾನಕ್ಕೆ ಸಂಬಂಧಿಸಿದ ನೀರಿನ ಚಿಲುಮೆಯೊಂದು ಮಸೀದಿಯೊಳಗಿದೆ ಎಂಬ ನಂಬಿಕೆ ಇಂದಿಗೂ ಹಿಂದೂಗಳಲ್ಲಿದೆ.

ಹಂದಾನಿಯ ಹೆಜ್ಜೆ ಗುರುತು ಈ ಕಾಳಿ ದೇವಾಲಯದ ಆವರಣದಲ್ಲಿತ್ತು ಎಂಬ ಕಾರಣಕ್ಕಾಗಿ ಈ ಆವರಣದಲ್ಲೇ ಮಸೀದಿ ನಿರ್ಮಾಣವಾಯಿತು ಎಂಬ ಉಲ್ಲೇಖವೂ ಇದೆ. ಎಂ ಕೆ ಕಾ ಅವರ ʻಕಶ್ಮೀರ್‌ ಅಂಡ್‌ ಇಟ್ಸ್‌ ಪೀಪಲ್ಸ್‌ʼ ಕೃತಿಯೂ ಸೇರಿದಂತೆ ಕಾಶ್ಮೀರದ ಇತಿಹಾಸದ ಕುರಿತ ಹಲವು ಮಹತ್ವದ ಕೃತಿಗಳು ಇದಕ್ಕೆ ಪುಷ್ಠಿ ನೀಡುತ್ತದೆ.

ಅಲ್ಲದೆ ಸಿಕಂದರನ ಕಾಲದಲ್ಲಿ ಕಾಶ್ಮೀರದಲ್ಲಿ ಸಾಕಷ್ಟು ಪಂಡಿತರ ಇಸ್ಲಾಂ ಮತಾಂತರಕ್ಕೂ, ದೇವಾಲಯ ಧ್ವಂಸಕ್ಕೂ ಪುರಾವೆಗಳು ದೊರೆಯುತ್ತದೆ. ಮತಾಂತರಗೊಳ್ಳದ ಪಂಡಿತ ಮಂದಿಗೆ ಇದೇ ಮಸೀದಿಯ ಪಕ್ಕದಲ್ಲೇ ಝೇಲಂ ತೀರದಲ್ಲಿ ಕಾಳಿಯನ್ನು ಪೂಜಿಸಲು ಅವಕಾಶ ನೀಡಿದರು ಎಂಬ ವಿವರಣೆಗಳಿವೆ. ಇದೆಲ್ಲವನ್ನೂ ತಳ್ಳಿ ಹಾಕುವ ಇನ್ನೊಂದು ಪಂಗಡವೂ, ಮಸೀದಿ ನಿರ್ಮಾಣಕ್ಕೂ ಮೊದಲು ಕಾಳೀ ದೇವಾಲಯ ಇಲ್ಲಿತ್ತು ಎನ್ನುವುದಕ್ಕೆ ಯಾವ ಪುರಾವೆಗಳಿವೆ ಎಂದು ಮರು ಪ್ರಶ್ನಿಸುತ್ತಾರೆ.

ಏನೇ ಇರಲಿ. ಝೇಲಂ ನದೀತೀರಕ್ಕೆ ಮಾತೆಯ ದರ್ಶನಕ್ಕೆಂದು ಈಗಲೂ ಇಲ್ಲಿ ಅಳಿದುಳಿದ ಮಂದಿ ಬರುತ್ತಾರೆ. ದರ್ಶನ ಪಡೆದು ಮರಳುತ್ತಾರೆ. ನಮಗೆ ಬೀಗ ಹಾಕಿದ ಗೇಟಿನಿಂದ ಕಂಡ ದೃಶ್ಯಕ್ಕಿಂತ ಬೇರೆಯದೇ ದಾರಿ ತೋರಿದ ಜುನೈದ್‌ಗೆ ಶರಣು. ಅಂತಿಮವಾಗಿ ಹಿಸ್ಟ್ರೀ ಈಸ್‌ ಆಲ್ವೇಸ್‌ ಮಿಸ್ಟ್ರೀಯೇ!

****

ಅನಂತನಾಗ್‌ ಜಿಲ್ಲೆಯ ಮಟ್ಟನ್‌ ಎಂಬ ಆ ಪುಟ್ಟ ಊರಿನ ಮುಂದೆ ಹಾದು ಹೋಗುವಾಗ ಗಮನ ಸೆಳೆದ ಆ ಮನೆಯೊಂದರ ಮುಂದೆ ಕಾರು ನಿಲ್ಲಿಸಿದೆವು. ಅದ್ಭುತ ಮನೆಯದು. ಮರದಿಂದಲೇ ಭಾಗಶಃ ನಿರ್ಮಾಣವಾದ ಆ ಮನೆಯೊಂದು ತನ್ನ ಗತಕಾಲದ ವೈಭವವನ್ನು ಮೌನವಾಗಿ ಹೇಳುತ್ತಾ ನಿಂತಿತ್ತು.

ಮುರಿದ ಬಾಗಿಲು, ಧೂಳು ಹಿಡಿದ ಬೀಗ, ಜರಿದುಬಿದ್ದ ಗೋಡೆ, ಮನೆಯೊಂದಿಗೇ ಅಂಟಿದಂತಿದ್ದ ಅವರದ್ದೇ ಖಾಸಗಿ ಮಂದಿರ… ಎಲ್ಲವನ್ನು ಸುಮ್ಮನೆ ನೋಡುತ್ತಾ ನಿಂತಿದ್ದೆ. ಒಂದೆರಡು ಕ್ಲಿಕ್‌ ಅಷ್ಟೇ, ಅಲ್ಲೇ ಇದ್ದ ಅಂಗಡಿಯಾತ ನನ್ನ ನೋಡಿ ಹತ್ತಿರ ಬಂದು, ʻಈ ಊರಲ್ಲಿ ಇಂಥ ಪಂಡಿತರ ಮನೆಗಳು ಬಹಳ ಇವೆ, ನಿಮಗೆ ಫೋಟೋ ತೆಗೆಯಬೇಕಾದರೆʼ ಎಂದ. ʻಓಹ್! ಅವರು ತಮ್ಮ ಮನೆ ನೋಡಲು ಇಲ್ಲಿಗೆ ಬರೋದಿಲ್ವಾ? ಎಂದೆ. ‌ʻಯಾವಾಗಲೋ ಎಷ್ಟೋ ವರ್ಷಕ್ಕೊಮ್ಮೆ ಬರುತ್ತಾರೆ, ನೋಡಿಕೊಂಡು ಹೋಗುತ್ತಾರೆʼ ಎಂದ. ಮುಂದೆ ಅವನೂ ಮಾತನಾಡಲಿಲ್ಲ. ನಾನೂ. ಪುಟ್ಟ ಪುಟ್ಟ ಊರೂ ಕೂಡಾ ತನ್ನೊಳಗೆ ಎಂತೆಂಥ ಕಥೆಗಳನ್ನು ಬಚ್ಚಿಟ್ಟಿರುತ್ತದೆ!

ಕಟ್ಟಕಡೆಯದಾಗಿ, ಭಾರತದ ದಕ್ಷಿಣ ತುದಿಯ ಧನುಷ್ಕೋಟಿಯ ಪ್ರಕೃತಿ ವಿಕೋಪದಲ್ಲಿ ಧ್ವಂಸವಾದ ಕಟ್ಟಡಗಳ ಹಿನ್ನೆಲೆಯಲ್ಲಿ, ತೀರದಲ್ಲಿ ಕುಳಿತು ಯಾವಾಗಲೂ ಶಾಂತವಾಗಿ ಕಾಣುವ ಸಮುದ್ರ ದಿಟ್ಟಿಸುವುದೂ, ಉತ್ತರ ತುದಿಯ ಈ ಕಾಶ್ಮೀರದಲ್ಲಿ ಸುತ್ತಲೂ ಇರುವ ಪಾಳುಬಿದ್ದ ಆಸ್ತಿಪಾಸ್ತಿಗಳೆಡೆಯಲ್ಲಿ ಮೌನವಾಗಿರುವ ಹಿಮಪರ್ವತಗಳನ್ನು ದಿಟ್ಟಿಸುವುದೂ ಒಂದೇ. ಎರಡು ವೈರುಧ್ಯಗಳು ಅಷ್ಟೇ. ಆ ಬಿಡದೇ ಕಾಡುವ ಭಾವ ಮಾತ್ರ ಅಂತಿಮವಾಗಿ ವೈರಾಗ್ಯವೇ!

‍ಲೇಖಕರು ರಾಧಿಕ ವಿಟ್ಲ

December 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: