ಗಿರಿಜಾ ಶಾಸ್ತ್ರಿ
ರಾಕೀ ಪರ್ವತದ ಪ್ರವಾಸ ಕಥನವನ್ನು ಓದಿ ಮೆಚ್ಚಿಕೊಂಡ ನನ್ನ ಹಿತೈಷಿಗಳಾದ ಹಿರಿಯರೊಬ್ಬರು ‘ಅಲ್ಲೂ ಸೀರೆಯಲ್ಲೇ ಮಿಂಚಿದ್ದೀರಾ?’ ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು.
ನನಗೆ ಸೀರೆಯೇ ಇಷ್ಟ. ನಾನು ಈ ಜನ್ಮದಲ್ಲಿ ಎಂದೂ ಪ್ಯಾಂಟ್ ತೊಟ್ಟವಳಲ್ಲ. ಚೂಡಿದಾರವಾದರೂ ಕೇವಲ ಕೆಳಗೆ ಹಾಲು ತರಕಾರಿ ತರುವುದಕ್ಕೆ ವಾಕಿಂಗ್ ಹೋಗುವುದಕ್ಕೆ ಅಷ್ಟೇ.
ಅಮೇರಿಕೆಯ ಡ್ರೆಸ್ ಕೋಡ್ ನ್ನು ನಾವೇ ಏಕೆ ಮೈಮೇಲೆ ಎಳೆದುಕೊಳ್ಳಬೇಕು? ಇನ್ನು ಪ್ಯಾಂಟ್ ಇಲ್ಲದಿದ್ದರೆ ಲಂಗಗಳು! ನನ್ನ ದೇಹಕ್ಕೆ ಒಪ್ಪದ, ಹಾಳತವಲ್ಲದ ಆ ಜಮಾಲ್ ಸಿಂಗಿ ಲಂಗಗಳನ್ನು ಹಾಕಿಕೊಂಡರೆ ನಾನು ಕೋಡಂಗಿಯಾಗಿಯೇ ಕಂಡೇನು.

ನಯಾಗರಾ ಧಾರೆಯ ಹಿನ್ನೆಲೆಯಲ್ಲಿ
ಅಮೇರಿಕಾಕ್ಕೆ ಹೊರಡುವ ತಯಾರಿಯಲ್ಲಿದ್ದ ನನಗೆ ‘ಒಳ್ಳೆಯ ಡ್ರೆಸ್ ಗಳನ್ನು ಹೊಲಿಸಿಕೋ, ಮಕ್ಕಳಿಗೂ ಖುಷಿಯಾಗ ಬೇಕು ನೋಡು’ ಎಂದು ನನ್ನ ಗೆಳತಿಯೊಬ್ಬಳು ಸಲಹೆ ನೀಡಿದ್ದಳು. ಅದನ್ನು ಕೇಳಿದ ಗಂಡ ‘ಯಾಕೆ ನಿನ್ನ ಹತ್ತಿರ ಸಾಕಷ್ಟು ಡ್ರೆಸ್ ಗಳಿಲ್ಲವಾ? ಎಂದಾಗ, ‘ಡ್ರೆಸ್ ಎಂದರೆ ಜೀನ್ಸ್ ಪ್ಯಾಂಟ್ ಷರ್ಟುಗಳು’ ಎಂದು ಸ್ಪಷ್ಟಪಡಿಸಿದೆ. ‘ ಸರಿ ಬೇಕಾದರೆ ತೆಗೆದುಕೋ’ ಎಂದ. ‘ಏನೂ ಬೇಡ, ಅಮೇರಿಕಾ ಮೆರವಣಿಗೆಗೆ ಸಾಕಾಗುವಷ್ಟು ಹೊಸ ಸೀರೆಗಳು ಇವೆ, ಅಮೇರಿಕಾದವರೇನಾದರೂ ಪ್ಯಾಂಟ್ ಧರಿಸದ ಮಹಿಳೆಯರಿಗೆ ಪ್ರವೇಶವಿಲ್ಲ ಎಂದು ಹೇಳಿದ್ದಾರಾ?’ ಎಂದ ನನ್ನ ಪಾಟಿಸವಾಲಿಗೆ ಕ್ಯಾರೇ ಅನ್ನದೇ ಪುಸ್ತಕ ದಲ್ಲಿ ಮುಖ ಹುದುಗಿಸಿದ್ದ.
ಚಳಿ ಇದೆ ನಿಜ ಅದಕ್ಕಾಗಿ ಪ್ಯಾಂಟನ್ನೇ ಧರಿಸಬೇಕಿಲ್ಲ. ಅದನ್ನು ಧರಿಸುವುದರ ಮೂಲಕ ನಮ್ಮ ಕೀಳರಿಮೆಯನ್ನು ಗೆಲ್ಲುವ ಉದ್ದೇಶವೇನಾದರೂ ಇದೆಯೋ ತಿಳಿಯದು. ಫಿಲಡೆಲ್ಫಿಯಾ ವಿಮಾನ ನಿಲ್ದಾಣದಲ್ಲಿ ಆಂಧ್ರಪ್ರದೇಶದ ಮಹಿಳೆಯೊಬ್ಬರು ಸೀರೆಯನ್ನು ಉಟ್ಟಿದ್ದು ಕಂಡಾಗ ಚೂಡಿದಾರ್ ಹಾಕಿದ ನನಗೆ ‘ಅಯ್ಯೋ ಪ್ರಯಾಣಕ್ಕೂ ನಾನು ಸೀರೆಯನ್ನೇ ಉಟ್ಟುಕೊಂಡು ಬರಬಹುದಿತ್ತು’ ಎನಿಸಿದ್ದು ಸುಳ್ಳಲ್ಲ.
ಪ್ಯಾಂಟ್ ಅನುಕೂಲಕರ ಎಂದು ಹೇಳುವವರುಂಟು. ಮುಂಬಯಿ ಲೋಕಲ್ ರೈಲುಗಳಲ್ಲಿ ಸೀರೆಯಲ್ಲೇ ೩೪ ವರುಷ ಓಡಾಡಿದ ನನಗೆ, ಇನ್ನು ಪ್ರಪಂಚದ ಯಾವ ಮೂಲೆಯಲ್ಲಾದರೂ ಸೀರೆ ಮ್ಯಾನೇಜ್ ಮಾಡುವುದು ಅಷ್ಟು ಕಷ್ಟವಲ್ಲ ಎನಿಸುತ್ತದೆ.
ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ ನಂತಹವರು ಸೀರೆಯಲ್ಲಿ ಯುದ್ಧಗಳನ್ನೇ ಮಾಡಿರುವವರಂತೆ! ಒನಕೆ ಓಬವ್ವ ಸೀರೆ ಉಟ್ಟು ಕೊಂಡೇ ಶತ್ರುಗಳನ್ನು ಸದೆ ಬಡಿಯಲಿಲ್ಲವೇ? ಇನ್ನು ಸೀರೆ ಉಟ್ಟು, ಅಮೇರಿಕಾದ ರಸ್ತೆಗಳಲ್ಲಿ ಕುಡಿದು ನೀರೂ ಅಳ್ಳಾಡದ ಹಾಗೆ ಸುಖವಾಗಿ ಕಾರುಗಳಲ್ಲಿ ತಿರುಗುವುದು ಏನು ಮಹಾ?
ರಾಕೀ ಪರ್ವತದ ಶಿಖರದ ಹೊಟೇಲ್ ಒಂದರಲ್ಲಿ ಕಾಫಿ ಕುಡಿಯುತ್ತಿದ್ದೆವು. ಒಬ್ಬ ಅಮೇರಿಕನ್ ಮಹಿಳೆ ನನ್ನ ಬಳಿ ಓಡಿಬಂದು “very Lovely dress, very beautiful- Indian?’ ಎಂದಾಗ ಹಿಗ್ಗಿ ಅವಳ ಕೈಕುಲುಕಿದೆ.
ಪ್ರತಿ ಶನಿವಾರ ಸುತ್ತಾಡಲು ಎಲ್ಲಿಯಾದರೂ ಮಗ ಕರೆದುಕೊಂಡು ಹೋಗುತ್ತಿದ್ದ. ಆಗ ನಾನು ನನ್ನ ಸೀರೆ ಮೆರವಣಿಗೆಯೊಂದಿಗೆ ಹೊರಡಲು ಸಿದ್ಧವಾದಾಗೆಲ್ಲಾ ನಮ್ಮ ಮನೆಯೊಡತಿ ಸ್ಯಾಂಡೀ ಬಂದು ‘you have dressed up beautifully’ ಎಂದು ಉದ್ಗಾರ ತೆಗೆಯುತ್ತಿದ್ದಳು.
ಮೊನ್ನೆ ಕೊಲರಾಡೋ ಸ್ಪ್ರಿಂಗ್ಸ್ ಬಳಿಯಿರುವ ೧೪೦೦೦ ಅಡಿ ಎತ್ತರದ ಪೈಕ್ ಪೀಕ್ ಎನ್ನುವ ಪರ್ವತಕ್ಕೆ ಪ್ರವಾಸ ಹೊರಟಿದ್ದೆವು. ಯಥಾಪ್ರಕಾರ ಸ್ಯಾಂಡೀ ಪ್ರತ್ಯಕ್ಷವಾದಳು. Oh Lovely saree ಎಂದಳು. ನೀನು ಯಾವಾಗಲೂ ಸೀರೆಯನ್ನೇ ಉಡುತ್ತೀಯಾ? ಹೀಗೆ ಎಷ್ಟು ಸೀರೆಗಳನ್ನು ತಂದಿರುವೆ? ಪುಣೆಗೆ ಹೋದಾಗ ತೆಗೆದುಕೊಂಡು ಒಂದು ಸೀರೆ ನನ್ನ ಬಳಿಯೂ ಇದೆ’ ಎಂದಳು.
‘ಒಂದು ಎಂಟು ಹತ್ತು ಸೀರೆ ತಂದಿರುವೆ ಎಂದು ಹೇಳಿದೆ’ ‘ಓ ಅಷ್ಟೊಂದಾ?! ಎಂದಳು. ‘ಅಯ್ಯೋ ಪುಣ್ಯಾತಗಿತ್ತಿ ನಮ್ಮ ಹೆಂಗಸರ ಕಪಾಟುಗಳಲ್ಲಿ ಇದರ ‘ಅಪ್ಪನಂತಹ’ ಕ್ಷಮಿಸಿ ‘ಅಮ್ಮನಂತಹ’ ನೂರಾರು ಸೀರೆಗಳು ಇಡಿಕಿರಿದಿರುತ್ತವೆ ಇದೇನು ಮಹಾ?’ ಎಂದು ಮನಸ್ಸಿನಲ್ಲೇ ಹೇಳಿಕೊಂಡೆ. ‘ನಿನ್ನ ಸೀರೆಗಳು ತುಂಬಾ ಚೆನ್ನಾಗಿವೆ you look beautiful’ ಎಂದಳು. ಇದುವರೆಗೂ ನನ್ನ ದೇಶದಲ್ಲಿ ನನಗೆ ಇಂಥ ಪ್ರಶಸ್ತಿಯನ್ನು ಯಾರೂ ಕೊಟ್ಟಿರಲಿಲ್ಲ.
ನಾವು ಪ್ರವಾಸ ಹೋದಲ್ಲೆಲ್ಲ ನನ್ನ ಸೀರೆ ಮತ್ತು ಬಿಂದಿಯನ್ನು ಗಮನಿಸಿಯೇ ಅನೇಕ ವಿದೇಶೀ ಮಹಿಳೆಯರು ನನ್ನ ಬಳಿ ಬಂದು ‘oh Indian? I had been to Delhi…. Mumbai,. Southern India. I love that country, very nice people’ ಎಂದೆಲ್ಲಾ ಉದ್ಗಾರ ತೆಗೆದಾಗ ಖುಷಿಯಾಗಿದೆ. ಇಲ್ಲಿನ ಶಿಸ್ತು, ಸ್ವಚ್ಛತೆ, ಅವರ ಮುಚ್ಚು ಮರೆಯಿಲ್ಲದ ನಡಾವಳಿ ನೋಡಿ ಅಸೂಯೆಯೂ ಆಗಿದೆ.
ಸೀರೆಯಿಂದಾಗಿ ನನಗೆ ಎಲ್ಲಿಯೂ ಅನಾನುಕೂಲವಾಗಲಿಲ್ಲ. ಒಳಗೆ ಥರ್ಮಲ್ ಪ್ಯಾಂಟ್ ಮತ್ತು ಥರ್ಮಲ್ ಬನಿಯನ್ ಧರಿಸಿಕೊಂಡು ಅದರಮೇಲೆ ಸೀರೆ ಉಟ್ಟುಕೊಂಡು ಮೇಲೆ ಜರ್ಕಿನ್ ಹಾಕಿಕೊಂಡರೆ, ಭಾರತೀಯ ಉಡುಗೆಗೆ ಶೋಭಾಯಮಾನವಾದ, ಆಸ್ಟ್ರೇಲಿಯನ್ನರು ಸೆಕ್ಸೀ ಎಂದು ಪರಿಗಣಿಸಲಾದ ಆ ಬೆತ್ತಲೆ ಸೊಂಟ ಯಾರಿಗೆ ತಾನೇ ಕಾಣಿಸುತ್ತದೆ?
ಅಲ್ಲದೇ ಯಾವ ಬಟ್ಟೆಯಿಂದ ದೇಹವನ್ನು ಬಂದೋಬಸ್ತ್ ಮಾಡಿದರೆ ತಾನೇ ಅದಕ್ಕೆ ಹಿಮಗಾಳಿಯನ್ನು ತಡೆಯುವ ತಾಖತ್ತಿದೆ.? ಅದರ ಮುಂದೆ ಯಾರ ‘ಜೋರು’ ನಡೆಯುತ್ತದೆ? ಮುಖ್ಯ ಮೈಮುಚ್ಚಿಕೊಳ್ಳಬೇಕು- ನಮಗೆ ಯಾವುದು ಹಿತವೋ ಅಂತಹ ಉಡುಪಿನಿಂದ.
ಸೀರೆ ಒಂಭತ್ತು ಗಜದಿಂದ ಇಂದು ಆರು ಗಜಕ್ಕೆ ಇಳಿದಿರಬಹುದು. ಆದರೆ ನಿಜವಾಗಿ ಇಂದಿಗೂ ದೇಸಿಯಾಗಿರುವುದು ಅದೇ. ಪುರುಷರು ಧೋತ್ರ ಕಳಚಿ ಯಾವುದೋ ಯುಗವಾಯಿತು. ಅದು ಇಂದು ಕೇವಲ ಛದ್ಮವೇಷ ಸ್ಪರ್ಧೆಯ ಭಾಗವಾಗಿದೆ. ಶುಭ ಸಂದರ್ಭಗಳಲ್ಲಿ ಅಗತ್ಯಕ್ಕನುಗುಣವಾಗಿ ಪುರೋಹಿತರು ಬಂದು ಪಂಚೆ ಉಡಿಸಬೇಕು ಅಷ್ಟೇ. ಇಂದಿನ ಹೆಣ್ಣು ಮಕ್ಕಳು ಸೀರೆಯನ್ನು ಹೆಚ್ಚು ಉಡದಿರಬಹುದು ಆದರೆ ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಅವರಿಗೆ ತರುವುದು ದುಬಾರಿಯಾದ ಕಾಂಜೀವರಂ ಇಲ್ಲವೇ ಪೈಠಣಿ ಸೀರೆಗಳನ್ನೇ.
ಮದುವೆಗಳಲ್ಲಿ ವರನ ದುಬಾರಿ ವಿದೇಶೀ ಸೂಟ್ ಗೆ ಪರ್ಯಾಯವಾಗಿರುವುದು ವಧುವಿನ ಕಾಂಜೀವರಂ ಸೀರೆಯೇ ಹೊರತು, ದುಬಾರಿ ಪ್ಯಾಂಟ್ ಅಲ್ಲ. ವರನಿಗೆ ಪಂಚೆ ಉಡಿಸಬಹುದು. ಆದರೆ ಅದು ಛದ್ಮವೇಷವೇ. ಕಚ್ಚೆ ಪಂಚೆ, ತಲೆಯಮೇಲೆ ಪೇಟಾ, ಕಣ್ಣಿಗೆ ಕಾಡಿಗೆ, ದೃಷ್ಟಿ ಬೊಟ್ಟು, ಛತ್ರಿ, ಊರುಗೋಲು. ಹೆಗಲ ಮೇಲೊಂದು ಬುತ್ತಿಯ ಗಂಟು ಥೇಟ್ ಕೋಡಂಗಿಯೇ. ಆದರೆ ವಧು ಮಾತ್ರ ಎಂದಿಗಿಂತ ಸುಂದರವಾಗಿ ಕಾಣುತ್ತಾಳೆ. ಏಕೆಂದರೆ ಅವಳ ಉಡುಪಿನಲ್ಲಿ ವ್ಯತ್ಯಾಸವಾಗಿಲ್ಲ.
‘ಅಮೇರಿಕಾಕ್ಕೆ ಹೋದರೂ ಸೀರೆಯನ್ನೇ ಉಡುತ್ತಾಳೆ ಅಡಗೂಲಜ್ಜೀ’ ಎಂದು ಛೇಡಿಸುವ ನನ್ನ ಗೆಳತಿಯರಿಗೆ ನಾನು ಕೊಡುವ ಉತ್ತರವೆಂದರೆ, ‘ಅಮೇರಿಕಾಗೇನು ನಾನು ಚಂದ್ರ ಲೋಕಕ್ಕೆ ಹೋದರೂ ಉಡುವುದು ಸೀರೆಯನ್ನೇ ! ಸೆಕ್ಸಿಯಾದರೂ ಅಂದುಕೊಳ್ಳಲಿ ಸಂಪ್ರದಾಯ ಎಂದು ಬೇಕಾದರೂ ಗ್ರಹಿಸಲಿ.
ಎಂ ಆರ್ ಕಮಲ ಪ್ರತಿಕ್ರಿಯೆ-
ಪ್ರೀತಿಯ ಗಿರಿಜಾ,
ಅಮೆರಿಕಾಗೆ ಹೋದರೆ ಬೇರೆ ಬಟ್ಟೆ ಧರಿಸಬೇಕು ಎಂಬುದು ಅಲ್ಲಿಯವರಂತೆ ಆಗಬೇಕು, ಕಾಣಬೇಕು ಎಂಬ ಸೋಗಲಾಡಿತನಕ್ಕೆ ಮಾತ್ರವಲ್ಲ ಕಣೆ, ಪ್ರತಿ ಹೆಣ್ಣಿಗೂ ಎಲ್ಲ ಬಗೆಯ ಉಡುಪುಗಳನ್ನು ಧರಿಸುವ ಆಸೆ ಸಾಮಾನ್ಯವಾಗಿ ಇರುತ್ತದೆ. ಇಲ್ಲಿ ನೆರೆಹೊರೆಯವರು, ನೆಂಟರಿಷ್ಟರು ಏನಂದುಕೊಳ್ಳುತ್ತಾರೋ ಎಂಬ ಆತಂಕ.
ಎಲ್ಲರೂ ನನ್ನ, ನಿನ್ನಂತೆ ನಮಗನಿಸಿದ ಹಾಗೆ ಇರುತ್ತೇವೆ ಎಂದು ಹೇಳುವಷ್ಡು ಗಟ್ಟಿ ಇರುವುದಿಲ್ಲ. ಹಾಗಾಗಿ ಹೊರಗೆ ಹೋದಾಗ ಹಿಂದೆ ಆಸೆಪಟ್ಟಿದ್ದ ಉಡುಪು ಧರಿಸುತ್ತಾರೆ ಅಷ್ಟೇ.. ನೀನು ಬರೆದ ಚಂದದ ಲೇಖನಕ್ಕೆ ಇನ್ನೊಂದು ಆಯಾಮ ಇದೆ. ಗಮನಿಸು.
ಕಮಲ






ತುಂಬಾ ಚೆನ್ನಾಗಿದೆ. ಲೇಖಕಿಯ ಮಾತುಗಳನ್ನು ಒಪ್ಪಿಕೊಂಡರೂ, ಕಮಲ ಅವರ ಅನಿಸಿಕೆಯೂ ಯೋಚಿಸಬಹುದಾದ್ದೆ.