ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿತಾ ನಾಗಭೂಷಣ ಕವಿತೆಗಳು

ಸವಿತಾ ನಾಗಭೂಷಣ

ಹೋಗೋಗು…..

ಸುಡಲು ಒಂದು ದಿಮ್ಮಿ ಸಾಕು!
ಅದೆಷ್ಟು ಮರ ಕಡಿಯುತ್ತೀಯ ?
ಹೋಗೋಗು…

ಉಡಲು ಇಷ್ಟಗಲ ಬಟ್ಟೆ ಸಾಕು!
ಅದೆಷ್ಟು ನೆಲ ಕದಿಯುತ್ತೀಯ ?
ಹೋಗೋಗು…

ಉಣಲು ಒಂದು ಹಿಡಿ ಅಕ್ಕಿ ಸಾಕು
ಅದೆಷ್ಟು ನದಿ ಬತ್ತಿಸುತ್ತೀಯ ?
ಹೋಗೋಗು….

ಹೃದಯ ಬರಡಾದರೆ
ಕಣ್ಣು ಕುರುಡಾದರೆ
ಬರದೆ ಕಾಡಿಸುವುದು ಮಳೆಗಾಲ
ಬಂದೇ ತೀರುವುದು ಬರಗಾಲ

ನಾಕು ತಾಸೋ ನಲವತ್ತು ಗಂಟೆಯೋ
ನಾಕು ವರುಷವೋ ಏಸು ವರುಷವೋ
ಉಳಿಗಾಲ? ಕಾದು ಬರುವುದೆ ಕೊನೆಗಾಲ?

ಹೋಗೋಗು…..
ಗಿಡ ನೆಡು, ಬಾವಿ ತೋಡು,
ನೆನೆಯುವರು ಮಂದಿ ನಿನ್ನ ಅರೆಗಳಿಗೆ
ನಡೆದುಕೊಂಡಂತೆ ಅವರವರ ದೇವರಿಗೆ !

ಮುಂದೆ ಒಂದು ದಿನ…
——————

ಬಾಳೆ ಕತ್ತರಿಸಿ ಎಸೆದಂತೆ
ಕಟ್ಟಡಗಳನ್ನು ನೆಲ ಸಮಗೊಳಿಸಿ
ಕೆರೆಕಟ್ಟೆಗಳನಾಗಿಸಿ
ಮಳೆ ನೀರು ತುಂಬಿಡುವರು
ಹೊಂಡ ಗುಂಡಿ ಗಿಂಡಿ ಎನದೆ
ನೀರು ತುಂಬಿಡುವರು !

ಬಾಳೆ ಕತ್ತರಿಸಿ ಎಸೆದಂತೆ
ಕಟ್ಟಡಗಳನ್ನು ಕಿತ್ತೆಸೆದು
ಭತ್ತ , ರಾಗಿ, ಜೋಳ
ಹೂವು ಹಣ್ಣು ಬೆಳೆವರು !

ಬಯಲಲ್ಲಿ ಬಿಸಿಲಿಗೆ ಮೈಯೊಡ್ಡಿ
ಬದುಕು ಮಾಡುವರು!
ರಾತ್ರಿ ಚಂದ್ರನ ಹೊದ್ದು ಮಲಗಿ
ಕನಸು ಕಾಣುವರು!

ಸಾಗರಗಳು ಸಾವಿರ ಇದ್ದರೂ
ಸಲಹದಿದ್ದರೆ ಸುಡುಗಾಡು !

‍ಲೇಖಕರು avadhi

26 June, 2019

3 Comments

  1. prakash konapur

    ಎರಡೂ ಕವಿತೆಗಳು ಅತ್ಯಂತ ಸೊಗಸಾಗಿವೆ ಅರ್ಥಪೂರ್ಣವಾಗಿವೆ

  2. .ಮಹೇಶ್ವರಿ.ಯು

    ಸರಳ ಮಾತುಗಳಲ್ಲಿ ತಿಳಿಯಾದ ತತ್ವ.ಕವಿತೆಗಳು ಇಷ್ಟವಾದವು.

  3. Chaitra Shivayogimath

    ಅರ್ಥಪೂರ್ಣ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading