ಅಮೆರಿಕ – ದೊಡ್ಡಣ್ಣನ ನಾಡಿನ ಪ್ರಜೆಗಳು


(ನಿನ್ನೆಯಿಂದ)

10

ಅಮೆರಿಕದಲ್ಲಿನ ಕ್ಯಾಲಿಫೋರ‍್ನಿಯಾ
ಕ್ಯಾಲಿಫೋರ‍್ನಿಯಾ ಅಮೆರಿಕದ ಪಶ್ಚಿಮ ಭಾಗದ ಫೆಸಿಫಿಕ್ ಸಾಗರದ ತೀರದಲ್ಲಿರುವ ಒಂದು ಮುಖ್ಯವಾದ ರಾಜ್ಯ. ಪೂರ್ವ ಭಾಗದ ಫೆಸಿಫಿಕ್ ತೀರದಲ್ಲಿ ನ್ಯೂಯಾರ್ಕ್ ರಾಜ್ಯವನ್ನು ಪೂರ್ವ ಭಾಗದ ಪ್ರಮುಖ ರಾಜ್ಯವೆಂದು ಗುರುತಿಸುವಂತೆ ಕ್ಯಾಲಿಫೋರ್ನಿಯಾವನ್ನು ಪಶ್ಚಿಮ ಭಾಗದ ಸಮುದ್ರ ತೀರದ ಪ್ರಮುಖ ರಾಜ್ಯವೆಂದು ಗುರುತಿಸುತ್ತಾರೆ.
ಈ ರಾಜ್ಯದಲ್ಲಿ 58 ಜಿಲ್ಲಾ ಕೇಂದ್ರಗಳಿವೆ. ಇದರ ರಾಜಧಾನಿ ಸಾಕ್ರಮೆಂಟೋ; ಇಲ್ಲಿನ ಮುಖ್ಯ ಪಟ್ಟಣಗಳು ಸ್ಯಾನ್ ಫ್ರಾನ್ಸಿಸ್ಕೋ, ಸ್ಯಾಂಡಿಯಾಗೋ, ಲಾಸ್ ಏಂಜಲೀಸ್ ಮುಂತಾದವು. ಅಮೆರಿಕದಲ್ಲಿ ಒಂದು ರಾಜ್ಯದ ರಾಜಧಾನಿ ಆ ರಾಜ್ಯದ ಮುಖ್ಯ ಪಟ್ಟಣವೇ ಆಗಿರಬೇಕೆಂಬುದೇನೂ ಇಲ್ಲ. ರಾಜಧಾನಿಯಲ್ಲಿ ರಾಜ್ಯಾಡಳಿತ ಕೇಂದ್ರಗಳು ಇರುತ್ತವಷ್ಟೆ. ಈ ಬೇ ಪ್ರದೇಶದಲ್ಲಿ ಹಲವು ಬಹುರಾಷ್ಟ್ರೀಯ ಕಂಪನಿಗಳ ಕಛೇರಿಗಳು ಇವೆ.
ಭಾರತದಲ್ಲಿರುವ ಹಲವು ಬಹುರಾಷ್ಟ್ರೀಯ ಕಂಪನಿಗಳ ಕೇಂದ್ರ ಕಛೇರಿಗಳು ಇಲ್ಲಿದ್ದು ಈ ಪ್ರದೇಶ ಸಾಕಷ್ಟು ಹೆಸರುವಾಸಿಯಾಗಿದೆ. ಕೌಂಟಿಗಳನ್ನು ಒಳಗೊಂಡಿರುವ ಪಟ್ಟಣಗಳು, ಉತ್ತರ ಕ್ಯಾಲಿಫೋರ‍್ನಿಯಾ, ದಕ್ಷಿಣ ಕ್ಯಾಲಿಫೋರ‍್ನಿಯಾ, ಬೇ ಪ್ರದೇಶದಲ್ಲಿರುವ ಪಟ್ಟಣಗಳು, ಸಾಕ್ರಮೆಂಟೋ ಮೆಟ್ರೊಪಾಲಿಟನ್ ಪ್ರದೇಶದಲ್ಲಿರುವ ನಗರಗಳು ಈ ರೀತಿ ಕ್ಯಾಲಿಫೋರ‍್ನಿಯಾವನ್ನು ಸ್ಥೂಲವಾಗಿ ವಿಂಗಡಿಸಿದ್ದಾರೆ.

ಈ ಪ್ರದೇಶದಲ್ಲಿ ಹೆಚ್ಚಾಗಿ ಭಾರತೀಯರು ಮತ್ತು ಏಷಿಯನ್ನರು ಇದ್ದಾರೆ. ಫ್ರೀಮಾಂಟ್, ಸನ್ನಿವೇಲ್‌ನಂತಹ ಕೆಲವು ನಗರಗಳಂತೂ ಹೆಚ್ಚು ಕಡಿಮೆ ಸಂಪೂರ್ಣವಾಗಿ ಭಾರತೀಯರಿಂದಲೇ ತುಂಬಿದೆ. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಇಲ್ಲಿ ಹೆಬ್ಬಾಗಿಲು ತೆರೆದಿರುವ ಹಲವು ನೂರು ಬಹುರಾಷ್ಟ್ರೀಯ ಕಂಪನಿಗಳ ಮುಖ್ಯ ಕೇಂದ್ರಗಳು. ಭಾರತೀಯರು ಮತ್ತು ಏಷಿಯನ್ನರು ಇಲ್ಲಿ ಹೆಚ್ಚಾಗಿ ನೆಲಸುವುದಕ್ಕೆ ಇಷ್ಟಪಡಲು ಕಾರಣ ಇಲ್ಲಿನ ಹವಾಮಾನ ಕೂಡ.
ಪೂರ್ವದೆಡೆಗೆ ಸಾಗುತ್ತಾ ಸಾಗುತ್ತಾ ಮಂಜಿನ, ಚಳಿಯ ವಾತಾವರಣ ಹೆಚ್ಚುತ್ತಾ ಹೋಗುತ್ತದೆ. ಇಲ್ಲಿ ಚಳಿಗಾಲದಲ್ಲಿ ಬಿಟ್ಟರೆ ಮಂಜು ಅಷ್ಟಾಗಿ ಕಾಡುವುದಿಲ್ಲ. ಬೇಸಗೆಯಲ್ಲಂತೂ ಕರ್ನಾಟಕದ ಬೆಂಗಳೂರಿನ ಹವೆಯಿದ್ದಂತೆಯೇ ಇರುತ್ತದೆ. ನಾವು ಇಲ್ಲಿಗೆ ಬಂದದ್ದು ಮೇ, ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ. ಇದು ಅಮೆರಿಕದ ದಟ್ಟ ಬೇಸಿಗೆಯ ದಿನಗಳು.
ಜೂನ್ ತಿಂಗಳಿಂದ ಆಗಸ್ಟ್ ತಿಂಗಳ ಮಧ್ಯ ಭಾಗದವರೆಗೂ ಇಲ್ಲಿ ಶಾಲೆಗಳಿಗೆ ಬೇಸಿಗೆ ರಜೆ ಇರುತ್ತದೆ. ಈ ದಿನಗಳಲ್ಲಿ ಅಮೆರಿಕದ ನಡುಭಾಗದಲ್ಲಿ ತೀಕ್ಷ್ಣ ಸೂರ್ಯ ರಶ್ಮಿ ರಾಚುತ್ತಿದ್ದರೆ, ಈ ಕ್ಯಾಲಿಫೋರ‍್ನಿಯಾ ಭಾಗದಲ್ಲಿ ಸೆಕೆಯ ಹಬೆ ಅಷ್ಟಾಗಿ ತಟ್ಟದು. ಬಹು ಮಹಡಿ ಕಟ್ಟಡಗಳಲ್ಲಿದ್ದರೆ ದಿನದ ಯಾವುದೋ ಒಂದೆರಡು ಗಂಟೆ ಅಷ್ಟು ಬೇಕೆನಿಸಿದರೆ ಹವಾನಿಯಂತ್ರಣವನ್ನು ಹಾಕಿಕೊಳ್ಳಬಹುದು. ಸ್ವತಂತ್ರವಾದ ಮನೆಗಳಾದರೆ ಸುತ್ತಲೂ ಕಾದುಬಿಡುವುದರಿಂದ ಸ್ವಲ್ಪಮಟ್ಟಿಗೆ ಸೆಕೆ ಹೆಚ್ಚು.
ಬಿಸಿಲಿನಲ್ಲಿದ್ದರೆ ತಟ್ಟುವ ಬಿಸಿ ನೆರಳಿಗೆ ಬಂದ ತಕ್ಷಣ ತಂಪೆನಿಸಿಬಿಡುತ್ತದೆ; ಏಕೆಂದರೆ ಇಲ್ಲಿ ಬೀಸುವ ಗಾಳಿ ಸದಾ ತಂಪಾಗಿಯೇ ಇರುತ್ತದೆ. ಕಡಲ ತೀರದ ಪ್ರದೇಶವಾದರೂ ಅಂಟು ಸೆಕೆ ಇಲ್ಲಿ ಕಾಡುವುದಿಲ್ಲ. ಎಲ್ಲೆಲ್ಲಿ ನೋಡಿದರೂ ಬಣ್ಣ-ಬಣ್ಣದ ಹೂವುಗಳು, ಗಿಡ-ಮರಗಳ ತುಂಬಾ ಅರಳಿ ನಿಂತು ನಗುನಗುತ್ತಿರುತ್ತವೆ.
ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಹೊಗೆಯನ್ನು ಕಂಡುಹಿಡಿಯುವ ಸಾಧನಗಳನ್ನು, ಬೆಂಕಿ ಕಂಡಾಕ್ಷಣ ನೀರೆರೆಚುವ ಸಾಧನಗಳನ್ನೂ ಎಲ್ಲ ಪ್ರಮುಖ ಜಾಗಗಳಲ್ಲೂ ಅಳವಡಿಸಿರುತ್ತಾರೆ. ಹೊಗೆಯ ಒಂದಿಷ್ಟು ಸುಳಿವು ಸಿಕ್ಕೊಡನೆ ಹೊಗೆಯನ್ನು ಕಂಡು ಹಿಡಿಯುವ ಸಾಧನಗಳು ಚೀರಾಡಲು ಮೊದಲು ಮಾಡಿ, ಮನೆಯ ಮಂದಿಯನ್ನೆಲ್ಲಾ ಅದಕ್ಕೆ ಕಾರಣ ಹುಡುಕುವಂತೆ ಮಾಡುತ್ತವೆ.

ನೂರಕ್ಕೆ ತೊಂಭತ್ತೊಂಭತ್ತು ಬಾರಿ ಅದು ಒಗ್ಗರಣೆಯ ಬಾಣಲಿಯೋ, ಹೆಚ್ಚು ಕಾದು ಹೊಗೆಯೇಳುವ ಕಾವಲಿಯೋ ಆಗಿರುತ್ತದೆ. ವಸತಿ ಸಂಕೀರ್ಣಗಳಲ್ಲಿ ಒಂದು ಅಳತೆ ಮೀರಿ ಹೊಗೆ ಬಂದಾಗ ಕಾರಿಡಾರುಗಳಲ್ಲೂ ಚೀರಾಟ ಶುರುವಾಗುತ್ತದೆ. ಒಂದೈದು ನಿಮಿಷದಲ್ಲಿ ನಿಲ್ಲದಿದ್ದರೆ ವಸತಿ ಸಂಕೀರ್ಣದ ಕಛೇರಿಯ ಸಿಬ್ಬಂದಿ ಬಂದು ವಿಚಾರಿಸಿಕೊಂಡು ಹೋಗುತ್ತಾರೆ. ಅದನ್ನೂ ಮೀರಿ ಈ ಚೀರಾಟ ಮುಂದುವರಿದರೆ ಮೊದಲ ಸಂಕೇತ ಅಗ್ನಿಶಾಮಕ ಕಛೇರಿಗೆ ಹೋಗಿ, ಅವರು ಐದು ನಿಮಿಷದಲ್ಲಿ ಸ್ಥಳದಲ್ಲಿ ಅವರ ರಕ್ಷಣಾ ಪರಿಕರಗಳೊಂದಿಗೆ ಮನೆಯೆದುರು ಹಾಜರಾಗುತ್ತಾರೆ.
ಮರದ ಮನೆಗಳಾದ್ದರಿಂದ ಈ ರೀತಿಯ ಕಾಳಜಿ ಸಹಜವಾದದ್ದು ಹಾಗೂ ಅಗತ್ಯವಾದದ್ದು. ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಿಸಿಕೊಂಡು ಹಲವು ಮನೆಗಳು ಸುಟ್ಟು ಹೋಗುತ್ತಿರುವ ದೃಶ್ಯಗಳನ್ನು ಆಗಾಗ ದೂರದರ್ಶನದಲ್ಲಿ ಬಿತ್ತರಿಸುವುದನ್ನು ನೋಡುತ್ತಿರುತ್ತೇವೆ. ಎಷ್ಟೋ ಬಾರಿ ಇದು ಮಾನವ ನಿರ್ಮಿತ ವಿಕೋಪದ ಪರಿಣಾಮ.
ಇಲ್ಲಿನ ಒಂದೊಂದು ಸಂಸ್ಥೆಯ (ಕಮ್ಯೂನಿಟಿ/ಸೊಸೈಟಿ)ವಿಭಾಗದಲ್ಲಿರುವ ಮನೆಗಳು ಒಂದೇ ರೀತಿಯಾಗಿ ಇರುತ್ತವೆ. ಎಲ್ಲ ಮನೆಗಳ ಹೊರ ಆಕಾರ, ಬಾಗಿಲು ಇರುವ ದಿಕ್ಕು ಅದರ ವಿನ್ಯಾಸ, ಕಾರ್ ಗ್ಯಾರೇಜಿನ ಸ್ಥಳ, ಮನೆಯ ಮುಂದಿನ ಆವರಣ, ಹೊರಮೈಬಣ್ಣ, ವಿನ್ಯಾಸ ಎಲ್ಲವೂ ಹೆಚ್ಚು ಕಡಿಮೆ ಒಂದೇ ಮಾದರಿಯದಾಗಿರುತ್ತದೆ. ಗಾಢ ಬಣ್ಣಗಳನ್ನು ಗೋಡೆಗಳಿಗೆ ಹಚ್ಚುವುದಕ್ಕೆ ಯಾರೂ ಉಪಯೋಗಿಸುವುದಿಲ್ಲ. ಬಲು ತೆಳುವಾದ ಛಾಯೆಯ ಬಣ್ಣಗಳು, ಇವು ಕೂಡ ಆ ಪ್ರದೇಶದಲ್ಲಿರುವ ಇತರ ಎಲ್ಲ ಮನೆಗಳ ಬಣ್ಣಗಳೊಂದಿಗೆ ಹೊಂದಿಕೆಯಾಗುವಂತೆ ಇರುತ್ತದೆ.
ಹಾಗಾಗಿ ತಿರುಗಾಡುವಾಗ ನಮಗೆ ಯಾವುದಾದರೂ ಕಛೇರಿಯ ನೌಕರರಿಗೆ ಆ ಕಾಲೋನಿಯಲ್ಲಿ ನಿರ್ಮಿಸಿದ ಒಂದೇ ರೀತಿಯ ಮನೆಗಳಂತೆ ಕಂಡರೆ ಅಚ್ಚರಿಯೇನಿಲ್ಲ. ಇಲ್ಲಿ ವಸತಿ ಸಮುಚ್ಛಯವನ್ನು ಒಂದು ಕಛೇರಿ ನಡೆಸುತ್ತಿದ್ದರೆ ಅದನ್ನು ಅಪಾರ್ಟ್ಮೆಂಟ್ ಎನ್ನುತ್ತಾರೆ. ಅದೇ ವಸತಿ ಸಮುಚ್ಛಯದಲ್ಲಿನ ಮನೆಗಳನ್ನು ಕೊಂಡು ಅವರೇ ಇದ್ದರಾಗಲೀ, ಬಾಡಿಗೆಗೆ ಕೊಟ್ಟಿದ್ದರಾಗಲೀ ಅದು ಕಾಂಡೊಮೋನಿಯಂ (ಆಡು ಭಾಷೆಯಲ್ಲಿ ಕಾಂಡೋ) ಎನಿಸಿಕೊಳ್ಳುತ್ತದೆ.
ಒಂದಕ್ಕೊಂದು ಅಂಟಿಕೊಂಡಿರುವ ಮನೆಗಳ ಸಾಲು ಸಾಲೇ ಇದ್ದರೆ ಅವು ಪಟ್ಟಣದ ಗೃಹ ಮಂಡಳಿಗಳ ನಿರ್ಮಾಣದ ಮನೆಗಳಾಗಿರುತ್ತವೆ. ಕೆಲವೆಡೆ ಕೆಳಗೆರಡು, ಮೇಲೆರಡು ಮನೆಗಳಂತೆ ನಾಲ್ಕು ನಾಲ್ಕು ಮನೆಗಳು ಅಂಟಿಕೊಂಡಿರುವಂತಹ ವಸತಿ ಸಮುಚ್ಛಯಗಳಿರುತ್ತವೆ. ಇವುಗಳೆಲ್ಲಾ ಗೃಹ ಸಮುಚ್ಛಯಗಳಾದರೆ, ಸ್ವಂತ ಜಾಗದಲ್ಲಿ ಕಟ್ಟಿಕೊಂಡಿರುವಂತಹ ಒಂಟಿ ಮನೆಗಳೂ ಸಾಕಷ್ಟು ಕಾಣಸಿಗುತ್ತವೆ.
ಮೂರ‍್ನಾಲ್ಕು ಸಾವಿರದಿಂದ ಹತ್ತಾರು ಸಾವಿರ ಚದುರಡಿಗಳ ಜಾಗದಲ್ಲಿ ಹಿಂದೆ ಮುಂದೆ ಸಾಕಷ್ಟು ಜಾಗವನ್ನಿಟ್ಟುಕೊಂಡು ಕಟ್ಟಿರುವ ಮನೆಗಳಿವೆ. ಇಂತಹ ಮನೆಗಳಲ್ಲಿ ದೊಡ್ಡ ದೊಡ್ಡ ಹಣ್ಣಿನ ಮರಗಳಿರುವುದು ಸಾಮಾನ್ಯದ ವಿಷಯ. ಈಗೆಲ್ಲಾ ವಸತಿ ಸಮುಚ್ಛಯದ ಕಡೆಗೆ ಆಸಕ್ತಿ ವಾಲುತ್ತಿರುವುದರಿಂದ ಇಂತಹ ಮನೆಗಳು ಸ್ವಲ್ಪ ಹಿಂದೆ ಕಟ್ಟಿದಂಥವುಗಳು.
ಇತ್ತೀಚೆಗೆ ಬೆಳೆಯುತ್ತಿರುವ ವಿಸ್ತರಣಗಳಲ್ಲಿ ಮಾತ್ರ ಒಂದೆರಡು ವರ್ಷಗಳಲ್ಲಿ ಕಟ್ಟಿದ, ಕಟ್ಟುತ್ತಿರುವ ಹೊಸಮನೆಗಳನ್ನು ನೋಡಬಹುದು. ನಿರ್ಮಾಣಗೊಂಡಿರುವ ಊರಿನ ಭಾಗದಲ್ಲಿ ಇಪ್ಪತ್ತು, ಇಪ್ಪತ್ತೈದರಿಂದ ಎಂಭತ್ತು, ನೂರು ವರುಷಗಳ ಹಳೆಯ ಮನೆಗಳೂ ಇಲ್ಲಿ ಕಾಲಕ್ಕೆ ಸೆಡ್ಡು ಹೊಡೆದು ಆನಂದವಾಗಿ ನಿಂತಿವೆ. ಆ ಮನೆಯೊಳಗೆ ಹೋಗಿ ನೋಡಿದರೆ, ಅಷ್ಟು ಹಳೆಯ ಮನೆಯೆಂದು ಕೊಳ್ಳಲು ಸಾಧ್ಯವೇ ಇಲ್ಲ.
ಆಧುನಿಕ ಕಾಲದ ಎಲ್ಲ ಅನುಕೂಲತೆಗಳನ್ನೂ ಹೊಂದಿ, ಕಾಲದಿಂದ ಕಾಲಕ್ಕೆ ನವೀಕರಣಗೊಂಡು ಸಿಂಗಾರಗೊಂಡ ಮುದುಕಿಯಂತಲ್ಲದೆ, ಸುಂದರಿಯಂತೆಯೇ ಕಾಣುತ್ತವೆ!! ಇಂತಹ ಮನೆಗಳಲ್ಲಿ ಮುಂಭಾಗದಲ್ಲೊಂದು ಹೂಗಳ ಕೈತೋಟ, ಒಂದೆರಡು ಹಣ್ಣಿನ ಗಿಡ ಅಥವಾ ಮರಗಳು, ಹಿಂಭಾಗದಲ್ಲೂ ಒಂದಷ್ಟು ಗಿಡ ಮರಗಳು, ತೋಟದಲ್ಲಿ ಆರಾಮಾಗಿ ಕುಳಿತು ತಿನ್ನಲು ಮೇಜು, ಒಂದಷ್ಟು ಕುರ್ಚಿಗಳು, ಬಹಳ ಕಡೆ ಅದರ ಮೇಲೊಂದು ಕೊಡೆ, ಕೆಲವು ಮನೆಗಳಲ್ಲಿ ಒಂದು ಸಣ್ಣ ಈಜುಕೊಳ ಇಂತಹ ಅನುಕೂಲಗಳು ಇರುತ್ತವೆ. ಇಂತಹ ಮನೆಗಳು ಹೆಚ್ಚಾಗಿ ಮೂರಕ್ಕಿಂತ ಹೆಚ್ಚು ಕೋಣೆಯುಳ್ಳವಾಗಿರುತ್ತವೆ.
ಕೆಲವು ದೊಡ್ಡ ಅಡುಗೆ ಮನೆಗಳಲ್ಲಿ ‘ಕಿಚನ್ ಐಲ್ಯಾಂಡ್’ ಎಂದು ಕರೆಸಿಕೊಳ್ಳುವ ದೊಡ್ಡ ಮೇಜಿನಂತಹ ಜಾಗವಿರುತ್ತದೆ. ಕೆಲವೆಡೆ ಅದರಲ್ಲೇ ಒಂದು ಕೈ ತೊಳೆಯುವ ತೊಟ್ಟಿಯೂ ಇರುತ್ತದೆ. ಇದು ಊಟ ಮಾಡಲು, ತರಕಾರಿ ಹೆಚ್ಚಲು, ಮಾಡಿದ ಅಡುಗೆಗಳನ್ನು ಜೋಡಿಸಿಡಲು ಹೀಗೆ ಹಲವು ಉಪಯೋಗಕ್ಕೆ ಬರುವ ಜಾಗ. ಒಂದಕ್ಕಿಂತ ಹೆಚ್ಚು ಸ್ನಾನದ ಮನೆಯಂತೂ ಕಡ್ಡಾಯವಾಗಿರುತ್ತದೆ.
ಮನೆಯ ನೆಲದ ಹೆಚ್ಚಿನ ಭಾಗವನ್ನು, ಶೌಚಾಲಯವನ್ನೂ ಸೇರಿ ಕಾರ್ಪೆಟ್ ಅಲಂಕರಿಸಿರುತ್ತದೆ ಇಲ್ಲವೇ ಮರದ ಹಾಸಿರುತ್ತದೆ. ನಮ್ಮ ಪಾಲಿಗೆ ಇವೆಲ್ಲಾ ಒಂದು ದೊಡ್ಡ ಐಷಾರಾಮಿ ಬಂಗಲೆಗಳೇ. ಮನೆಕೆಲಸದವರು ಸಿಗುವುದಿಲ್ಲವಾದ್ದರಿಂದ ಬಟ್ಟೆ ಒಗೆಯಲು ಮತ್ತು ಪಾತ್ರೆ ತೊಳೆಯಲು ಯಂತ್ರದ ಸಹಾಯ ಇಲ್ಲಿ ಸಾಮಾನ್ಯ. ಮನೆ ಗುಡಿಸಲಂತೂ ವ್ಯಾಕ್ಯೂಮ್ ಕ್ಲೀನರ್‌ಗಳೇ. ಯಾವಾಗಲಾದರೂ ಇಡೀ ಮನೆಯ ಧೂಳು ತೆಗೆದು, ಪೂರಾ ಮನೆಯನ್ನು, ಕಾರ್ಪೆಟ್‌ಗಳನ್ನು, ಕಪಾಟುಗಳನ್ನು ಶುಚಿಗೊಳಿಸಲು ಏಜೆನ್ಸಿಯ ಮೂಲಕ ಕೆಲಸದವರು ಸಿಗುತ್ತಾರೆ. ಇಂತಹ ಕೆಲಸಕ್ಕೆ ಕೆಲವು ನೂರು ಡಾಲರ್‌ಗಳನ್ನು ವ್ಯಯಿಸಬೇಕಷ್ಟೆ.
ಹಾಗಾಗಿ ಈ ಸೇವೆಗಳು ಅತ್ಯಗತ್ಯ ಬಿದ್ದಾಗ ಮಾತ್ರ. ಕೆಲವು ವಸತಿ ಸಮುಚ್ಛಯಗಳಲ್ಲಿ ಒಂದು ನಿಗದಿತ ಜಾಗದಲ್ಲಿ ಕೆಲವು ಬಟ್ಟೆ ಒಗೆಯುವ ಯಂತ್ರಗಳನ್ನು ಇರಿಸಿರುತ್ತಾರೆ. ನಮ್ಮಲ್ಲಿ ನಲ್ಲಿ ನೀರಿಗೆ ಕಾಯುವ ಹಾಗೆ ಇಲ್ಲಿ ಬಟ್ಟೆ ಒಗೆಯುವುದಕ್ಕೆ ಸರತಿಯಲ್ಲಿ ಬಂದು ಒಬ್ಬರಾದ ಮೇಲೊಬ್ಬರು ತಮ್ಮ ಕೆಲಸವನ್ನು ಮುಗಿಸಿಕೊಳ್ಳಬೇಕು. ಎಲ್ಲರ ಮನೆಯಲ್ಲೂ ಬಿಸಿನೀರಿನ ಮತ್ತು ತಣ್ಣೀರಿನ ನಲ್ಲಿಗಳು ಇದ್ದೇ ಇರುತ್ತವೆ. ಇಲ್ಲಿನ ಚಳಿಗೆ ಇದು ಅತ್ಯಗತ್ಯವಾದ ವಿಷಯವೇ.
ಇಲ್ಲಿ ಸಮತಟ್ಟಾದ ನೆಲವಿಲ್ಲ. ಈ ಪ್ರದೇಶವೆಲ್ಲಾ ಅಲ್ಲಲ್ಲಿ ಸಣ್ಣ ಗುಡ್ಡಗಳಂತಹ ದಿಣ್ಣೆಗಳಿಂದ ಕೂಡಿದೆ. ಈ ದಿಣ್ಣೆಗಳೂ ಪಟ್ಟಣಗಳಿರುವ ಕಡೆ ವಸತಿ ಪ್ರದೇಶಗಳಾಗಿವೆ. ಊರ ಹೊರಗಿದ್ದರೆ ಹುಲ್ಲುಗಾವಲುಗಳಾಗಿ ದನ-ಕರುಗಳನ್ನು ಮೇಯಿಸಲು, ಇಲ್ಲವೇ ಹೈನುಗಾರಿಕೆ ಮಾಡಲು ಗುತ್ತಿಗೆಗೆ ಪಡೆಯುತ್ತಾರೆ. ಬೇಸಿಗೆಯಲ್ಲಿ ಇವುಗಳ ಮೇಲಿನ ಹಸಿರು ಹುಲ್ಲು ಹಳದಿ ಮಿಶ್ರಿತ ಕಂದು ಬಣ್ಣಕ್ಕೆ ತಿರುಗಿ ಬೋಳುಗುಡ್ಡೆಯಂತೆ ಕಾಣುತ್ತವೆ.
ಅಲ್ಲಲ್ಲಿ ಈ ಹುಲ್ಲುಗಳು ಹೊತ್ತಿಕೊಂಡು ಕಾಡ್ಗಿಚ್ಚು ಹರಡಿ ಸಾವಿರಾರು ಎಕರೆ ಜಾಗಗಳು ಸುಟ್ಟು ಕರಕಲಾಗುವುದುಂಟು. ಒಂದು ಕಡೆ ಬೆಂಕಿ ಕಾಣಿಸುತ್ತಿದೆಯೆಂದಾಕ್ಷಣ ಜನವಸತಿಯಿರುವ ಪ್ರದೇಶವಾಗಿದ್ದರೆ ಅಲ್ಲಿನ ನಿವಾಸಿಗಳು ಮನೆ ಬಿಟ್ಟು ಬೇರೆಡೆ ಆಶ್ರಯ ಪಡೆಯುತ್ತಾರೆ. ಅಮೆರಿಕದ ಎಲ್ಲ ಮನೆಗಳೂ ಮರದ ಮನೆಗಳೇ. ಹಾಗಾಗಿ ಈ ಮರದ ಮನೆಗಳು ಸಾಲು ಸಾಲಾಗಿ ತಕ್ಷಣ ಉರಿದು ಹೋಗುವ ಸಂಭವ ಹೆಚ್ಚು.
ಇದು ಪ್ರಾಕೃತಿಕ ವಿಕೋಪದ ಪರಿಣಾಮ. ಇಲ್ಲಿನ ಭೌಗೋಳಿಕ ವಿವರ, ಇಲ್ಲಿನ ಮನೆಗಳ ವಿನ್ಯಾಸ ಇವುಗಳ ಕಿರು ಪರಿಚಯವಾದ ಮೇಲೆ ಇಲ್ಲಿ ನಾನು ಕಂಡ ಕೆಲವು ಭಾರತೀಯರಲ್ಲಿ ಒಂದಿಬ್ಬರ ಜೊತೆಗಿನ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಈ ಪ್ರದೇಶದ ಬಗ್ಗೆ, ಇಲ್ಲಿನ ಭಾರತೀಯರ ಜೀವನದ ರೀತಿ-ನೀತಿಗಳನ್ನು ತಿಳಿದುಕೊಳ್ಳುವ ನಮ್ಮ ಉತ್ಸಾಹಕ್ಕೆ ನನ್ನ ಮಗಳ ಮನೆಯೊಂದೇ ಅಲ್ಲದೆ ಇನ್ನೂ ಕೆಲವು ಸಂಬಂಧಿಕರನ್ನು, ಸ್ನೇಹಿತರನ್ನು ಭೇಟಿಯಾಗಲು ಅವಕಾಶ ಸಿಕ್ಕು, ಅಲ್ಲಿನ ನಮ್ಮ ಜನರ ಜೀವನ ಶೈಲಿಯನ್ನು ನೋಡಲು ಅವಕಾಶವಾಯಿತು.
ಇಲ್ಲಿ ಸಮಾರಂಭಗಳನ್ನು ಹೇಗೆ ನಡೆಸುತ್ತಾರೆ ಎನ್ನುವ ಕುತೂಹಲವೊಂದಿತ್ತು. ಅದಕ್ಕೆ ಒಮ್ಮೆ ತಾನಾಗಿಯೇ ಅವಕಾಶ ಒದಗಿ ಬಂತು. ನಾವಿರುವಾಗಲೇ ನನ್ನ ಮಗಳು, ಅಳಿಯನ ಆತ್ಮೀಯ ಸ್ನೇಹಿತರ ಮನೆಯ ಗೃಹಪ್ರವೇಶವಿದ್ದು, ಅವರು ನಮ್ಮನ್ನೂ ಪ್ರೀತಿಯಿಂದ ಸಮಾರಂಭಕ್ಕೆ ಆಹ್ವಾನಿಸಿದರು. ಇದೊಂದು ಸದವಕಾಶವೆಂದು ನಾವೂ ಅವರ ಮನೆಯ ಗೃಹ ಪ್ರವೇಶಕ್ಕೆ ಹೋಗಿದ್ದೆವು.
ಅವರದ್ದು ಗುಜರಾತಿ-ಪಂಜಾಬಿ ಜೋಡಿ. ಇಲ್ಲಿ ಇಂತಹ ಧಾರ್ಮಿಕ ಸಂದರ್ಭಗಳಲ್ಲಿ ತಮ್ಮ ರೀತಿಯಲ್ಲಿಯೇ ಮಾಡಿಸುವವರು ಬೇಕೆಂದೇನೂ ಇಲ್ಲ. ನಾವೆಲ್ಲರೂ ಭಾರತೀಯರು ಎನ್ನುವುದೊಂದೇ ಭಾವ! ತಮಗೆ ಅನುಕೂಲವಾದ ಮತ್ತು ಇಷ್ಟವಾಗುವ ರೀತಿಯಲ್ಲಿ ಪೌರೋಹಿತ್ಯ ವಹಿಸುವವರನ್ನು ಕರೆಸಿಕೊಳ್ಳುತ್ತಾರೆ. ಇಂತಹ ಪುರೋಹಿತರನ್ನು ವ್ಯವಸ್ಥೆ ಮಾಡಿಕೊಡುವ ದೇವಾಲಯಗಳು ಮತ್ತು ಸಂಸ್ಥೆಗಳು ಇಲ್ಲಿ ಸಾಕಷ್ಟಿವೆ.
ಗೃಹ ಪ್ರವೇಶದ ಜೊತೆಗೆ ಅವರಿಗೆ ಹೋಮ ಮತ್ತು ಸತ್ಯನಾರಾಯಣ ಪೂಜೆ ಮಾಡುವ ಇಚ್ಛೆಯಿತ್ತಂತೆ. ಅದಕ್ಕೆ ಹಿಂದಿ ಮತ್ತು ಇಂಗ್ಲಿಷನ್ನು ತಕ್ಕಮಟ್ಟಿಗೆ ಬಲ್ಲ ತರೀಕೆರೆಯ ಕಡೆಯ ಕನ್ನಡ ಪುರೋಹಿತರು! ಅತಿಥೇಯರಿಗೆ ಈ ಕ್ರಮ ಹೊಸತಾದ್ದರಿಂದ ನಾವೇ ಖುಷಿಯಿಂದ ಸತ್ಯನಾರಾಯಣ ಪ್ರಸಾದವನ್ನು ತಯಾರಿಸಿಕೊಂಡು ಹೋಗಿದ್ದೆವು. ಮನೆಯ ಮುಂದೆ ಹೊಸಿಲಿಗೆ ರಂಗೋಲಿ ಹಾಕಿದೆವು. ಕೆಲವೆಡೆ ದುಭಾಷಿ ಕೆಲಸವನ್ನು ಮಾಡಿದೆವು.
ಪುರೋಹಿತರು ಮುಂಬಾಗಿಲಿಗೆ, ಹೊಸಲಿಗೆ ಪೂಜೆಯನ್ನು ಮಾಡಿಸಿ, ತಾವೇ ತಂದಿದ್ದ ತೆರೆಯನ್ನು ಅಡ್ಡವಾಗಿಟ್ಟುಕೊಂಡು ಗೃಹಪ್ರವೇಶವನ್ನು ಮಾಡಿಸಿದರು. ಹೊಗೆಯನ್ನು ಪೊಲೀಸಿನವರಂತೆ ಕಾಯುವ ಆ ದೇಶದಲ್ಲೂ ಕಾರ್ಪೆಟ್ಟಿನ ಮೇಲೆಯೇ ಒಂದು ಸಣ್ಣ ಪೀಠವನ್ನು ಇಟ್ಟುಕೊಂಡು ಅದರ ಮೇಲೆ ಒಂದು ಟ್ರೇನಲ್ಲಿ ಒಂದು ಕೊಬ್ಬರಿ ಬಟ್ಟಲನ್ನೆ ಹೋಮಕುಂಡವಾಗಿ ಮಾಡಿಕೊಂಡು ಜಾಸ್ತಿ ಹೊಗೆಯಾಡದಂತೆ ಅಗ್ನಿಯನ್ನು ಸ್ಥಾಪಿಸಿಕೊಂಡು ಕ್ಲುಪ್ತವಾಗಿ ಗಣಪತಿ ಹೋಮ, ವಾಸ್ತು ಹೋಮ, ನವಗ್ರಹ ಹೋಮ ಎಲ್ಲವನ್ನೂ ಅರ್ಧ-ಮುಕ್ಕಾಲು ಗಂಟೆಯಲ್ಲೆ ಮಾಡಿಸಿಬಿಟ್ಟರು.
ಒಂದು ಕಟ್ಟು ಗುಲಾಬಿ ಹೂವು, ಇನ್ನೊಂದು ಕಟ್ಟು ಸೇವಂತಿಕೆಯಂಥ ಹೂವು ಅಷ್ಟರಲ್ಲೆ ಅವರು ಸಂಪೂರ್ಣ ಕಾರ್ಯಕ್ರಮವನ್ನು ಸಲೀಸಾಗಿ ನೆರವೇರಿಸಿದರು. ಅವರ ಚಾತುರ್ಯಕ್ಕೆ ಭೇಷ್! ಎಂದುಕೊಂಡೆ. ಇಂಗ್ಲಿಷ್‌ನಲ್ಲಿ ಅನುವಾದಿಸಿದ ಸತ್ಯನಾರಾಯಣ ಪೂಜೆಯ ಕತೆಯನ್ನು ಗಂಡ-ಹೆಂಡತಿಯರಿಂದಲೇ ಓದಿಸಿದರು. ಎಲ್ಲವನ್ನೂ ಸಾಂಗೋಪಾಂಗವಾಗಿ ಮುಗಿಸಿದ ನಂತರ “ಯಾರಾದರೂ ಆರತಿ ಹಾಡನ್ನು ಹಾಡುವವರಿದ್ದಾರಾ” ಎಂದು ಕೇಳಿದರು. ಅಲ್ಲಿದ್ದವರ‍್ಯಾರಿಗೂ ಹಾಡಿನ ಗಂಧ ಗಾಳಿ ಗೊತ್ತಿದ್ದಂತೆ ಅನ್ನಿಸಲಿಲ್ಲ.
‘ಭಾಷೆ ಅರ್ಥವಾಗದಿದ್ದರೂ ಭಾವಕ್ಕೇನು ಕೊರತೆ’ ಎಂದುಕೊಂಡು ದಾಸರ ಪದವೊಂದನ್ನು ಹಾಡಿಯೇ ಬಿಟ್ಟೆ. ಇಲ್ಲದಿದ್ದರೆ ಅದನ್ನೂ ಅವರೇ ಹಾಡಿಬಿಡುತ್ತಿದ್ದರೇನೋ!! ನನ್ನ ಕುಟುಂಬದವರು ಮತ್ತು ಪುರೋಹಿತರನ್ನು ಬಿಟ್ಟರೆ ಬೇರಾರಿಗೂ ಕನ್ನಡ ಬಾರದು. ಆದರೂ ನಂತರ ಅಲ್ಲಿದ್ದ ಪ್ರತಿಯೊಬ್ಬರೂ ‘ಹಾಡು ಅರ್ಥವಾಗದಿದ್ದರೂ  ಅದರಲ್ಲಿ ಏನೂ ತುಂಬಾ ಹಿತವಾದದ್ದು ಇತ್ತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಅದು ನನ್ನ ಭಾಷೆಯ ಶಕ್ತಿ’ ಎಂದು ಗರ್ವ ಪಟ್ಟುಕೊಂಡೆ.

ಸಾಪಾದ ಭಕ್ಷ್ಯ ಅವರಿಗೆ ‘ಸೂಜಿ ಕಾ ಹಲ್ವ’ ಆಗಿತ್ತು. ‘ಬಹುತ್ ಸ್ವಾದಿಷ್ಟ್ ಹೈ’ ಎನ್ನುತ್ತಾ ಚಪ್ಪರಿಸಿ ಸವಿದರು. ಆ ಹೊಸ ಗೆಳೆಯರು ನಮಗೆ ಅದೆಷ್ಟು ಹತ್ತಿರವಾಗಿಬಿಟ್ಟರೆಂದರೆ, ನಾವು ಭಾರತಕ್ಕೆ ಹಿಂತಿರುಗುವ ಮುನ್ನ ಒಂದೆರಡು ದಿನವಾದರೂ ಅವರ ಮನೆಯಲ್ಲಿ ತಂಗಬೇಕು ಎನ್ನುವ ಪ್ರೀತಿಪೂರ್ವಕ ಒತ್ತಾಯವನ್ನು ಮಾಡಿದರು. ನನ್ನ ಆರೋಗ್ಯದ ಸಮಜಾಯಿಷಿ ಹೇಳಿ ತಪ್ಪಿಸಿಕೊಳ್ಳಬೇಕಾಯಿತು.
ಹೀಗೆ ಅಲ್ಲಿಲ್ಲಿ ಸಂಬಂಧಿಕರ, ಸ್ನೇಹಿತರ ಭಾರತೀಯ ಕುಟುಂಬಗಳನ್ನು ಭೇಟಿಯಾಗುತ್ತಿದ್ದ ದಿನಗಳಲ್ಲಿ ಒಂದು ದಿನ ಮಗಳು “ಅಮ್ಮಾ ನನ್ನ ಸ್ನೇಹಿತರೊಬ್ಬರು ನಿನ್ನನ್ನು ನೋಡಕ್ಕೆ ಇವತ್ತು ಬರ್ತಿದಾರೆ” ಎಂದಳು. “ಅವರು ನನಗೆ ಹೇಗೆ ಪರಿಚಯ” ಎಂದೆ. “ನಿನ್ನ ಪರಿಚಯ ಇಲ್ಲ ಅವರು ಕನ್ನಡ ಸಾಹಿತ್ಯವನ್ನು ಓದುತ್ತಿರುತ್ತಾರೆ. ತೇಜಸ್ವಿಯವರ ಕಟ್ಟಾ ಅಭಿಮಾನಿ. ಹೀಗೆ ಮಾತು ಬಂದಾಗ ಯಾವಾಗಲೋ ಹೇಳಿದ್ದೆ. ನಮ್ಮ ತಾಯಿಗೂ ತೇಜಸ್ವಿಯವರ ಬರಹಗಳೆಂದರೆ ಇಷ್ಟ ಅಂತ. ಅದಕ್ಕೇ ಅವರು ನಿನ್ನನ್ನು ನೋಡಬೇಕಂತೆ” ಎಂದಳು.
ಹೀಗೆ ಕನ್ನಡ ಭಾಷೆಗಾಗಿ ಇನ್ನೊಂದು ದೇಶದಲ್ಲಿ ಅಪರಿಚಿತರೊಬ್ಬರನ್ನು ಪರಿಚಯ ಮಾಡಿಕೊಳ್ಳುವ ಅವಕಾಶ ತುಂಬಾ ಹೆಮ್ಮೆಯೆನಿಸಿತು; ಹಾಗೆಯೇ ಇಲ್ಲೂ ಕನ್ನಡ ಸಾಹಿತ್ಯವನ್ನು ಓದುವವರಿದ್ದಾರೆ ಎಂಬ ಸಮಾಧಾನವೂ, ಸಂತೋಷವೂ ಆಯಿತು. ರಾತ್ರಿ ಗಂಡ-ಹೆಂಡತಿ ಇಬ್ಬರೂ ಬಂದರು. ಚಿಕ್ಕಮಗಳೂರಿನ ಕಳಸಾಪುರದ ಕಡೆಯವರು. ಅವರಿಂದಲೇ ಮಿಲ್ಪಿಟಾಸ್ ಮತ್ತು ಸ್ಯಾನ್ ಹೊಸೆಯ ಗ್ರಂಥಾಲಯಗಳಲ್ಲಿ ಹಲವು ಕನ್ನಡ ಪುಸ್ತಕಗಳಿರುವ ವಿಷಯವೂ ತಿಳಿಯಿತು. ತೇಜಸ್ವಿಯೊಬ್ಬರೇ ಅಲ್ಲದೆ ಇನ್ನೂ ಸಾಕಷ್ಟು ಲೇಖಕರ ಕೃತಿಗಳ ಬಗ್ಗೆ ನಮಗೆ ತಿಳಿದಷ್ಟನ್ನು ಹರಟಿ, ಒಟ್ಟಿಗೆ ಊಟ ಮಾಡಿ ಪರಸ್ಪರ ಸಂತೋಷಗೊಂಡೆವು.
ನನ್ನ ಈ ಲೇಖನದ ಕರಡು ಪ್ರತಿಯನ್ನು ತಿದ್ದುವಲ್ಲೂ ಈ ಸ್ನೇಹಿತೆ ನನ್ನ ಮಗಳೊಂದಿಗೆ ನೆರವಾದರು. ಈಗಲೂ ನಮ್ಮ ಸ್ನೇಹ ‘ಫೇಸ್‌ಬುಕ್’ನಲ್ಲಿ ಮುಂದುವರಿಯುತ್ತಿದೆ.
ದೊಡ್ಡಣ್ಣನ ನಾಡಿನ ಪ್ರಜೆಗಳು
ಅಮೆರಿಕನ್ನರ ಜೀವನ ಶೈಲಿ, ಆಲೋಚನಾ ಧಾಟಿ ಹಲವು ವಿಷಯಗಳಲ್ಲಿ ನಮಗಿಂತಲೂ ಭಿನ್ನ. ಸಾಧಾರಣವಾಗಿ ಅವರು ಬೇರೆಯವರ ವಿಚಾರದಲ್ಲಿ ಆಸಕ್ತಿ, ಕುತೂಹಲ ತೋರುವುದಿಲ್ಲ. ಇತರರ ವೈಯಕ್ತಿಕ ಆದ್ಯತೆಗಳನ್ನು ಗೌರವಿಸುತ್ತಾರೆ. ಸಮಯವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಾರೆ.
ಇತರರನ್ನು ಮೇಲೆ ಬಿದ್ದು ಮಾತಾಡಿಸುತ್ತಾ ತಮ್ಮ ಕತೆ ಪುರಾಣಗಳನ್ನು ಬಿಚ್ಚದಿದ್ದರೂ, ಯಾರೇ ಎದುರಿಗೆ ಸಿಕ್ಕರೂ, ಪರಿಚಯದವರೇ ಆಗಬೇಕೆಂದೇನೂ ಇಲ್ಲ; ನಗುತ್ತಾ ‘ಗುಡ್ ಮಾರ‍್ನಿಂಗ್’ ಎಂದು ಕೈ ಮೇಲೆತ್ತಿ ಶುಭೋದಯವನ್ನು ಕೋರುತ್ತಾ ಮುಂದೆ ಸಾಗುತ್ತಾರೆ.
ಪ್ರತಿಯೊಂದು ಸಣ್ಣ ವಿಷಯಕ್ಕೂ ಮುಖದಲ್ಲಿ ನಗೆಯನ್ನು ತುಂಬಿಕೊಂಡು ರಾಗವಾಗಿ ‘ಥ್ಯಾಂಕ್ಯೂ ನಿಮ್ಮ ಈ ದಿನ ಅಮೋಘವಾಗಿರಲಿ’ ಎಂದು ಹಾರೈಸುತ್ತಾ ಸಂಭಾಷಣೆಯನ್ನು ಮುಕ್ತಾಯಗೊಳಿಸುತ್ತಾರೆ. ಹಾಗೆಯೇ ಬೇರೆಯವರಿಂದಲೂ ಅದನ್ನೇ ನಿರೀಕ್ಷಿಸುತ್ತಾರೆ. ಈ ರೀತಿ ಶುಭ ಕೋರದವರು ಅವರ ಮಟ್ಟಿಗೆ ಸ್ನೇಹಪರ ವ್ಯಕ್ತಿತ್ವ ಹೊಂದಿಲ್ಲದವರು ಮತ್ತು ಒರಟರು. ‘ಪ್ಲೀಸ್ ಮತ್ತು ಥ್ಯಾಂಕ್ಯೂ’ಗಳು ದಿನಕ್ಕೆ ಅದೆಷ್ಟು ಬಾರಿ ಅವರ ಸಂಭಾಷಣೆಯಲ್ಲಿ ಬರುತ್ತದೋ ಎಣಿಕೆಗೆ ಮೀರಿದ್ದು.

ಚಿತ್ರಕೃಪೆ: ಗೂಗಲ್


ಒಂದು ಸಣ್ಣ ವಿಷಯವನ್ನು ಕೇಳಬೇಕಾದರೂ ಸಂಭಾಷಣೆ ‘ಎಕ್ಸ್ ಕ್ಯೂಸ್‍ಮಿ’ ಇಂದಲೇ ಆರಂಭವಾಗುತ್ತದೆ. ನಿಜಕ್ಕೂ ಅವರಿಂದ ತಪ್ಪಾಗಿದೆಯೆಂದು ಅವರಿಗರಿವಾದರೆ ‘ಸಾರಿ’ ಕೇಳಲು ಹಿಂತೆಗೆಯುವುದಿಲ್ಲ. ಆದರೆ ಬಡಪೆಟ್ಟಿಗೆ ಆ ವಿಷಯ ಮುಕ್ತಾಯಗೊಳಿಸಲು ಸುಮ್ಮನಂತೂ ಹೇಳುವುದಿಲ್ಲ. ಅವರ ವರ್ತನೆ ತನ್ನಿಂದ ತಪ್ಪಾಗದಿದ್ದರೂ ಇನ್ನೊಬ್ಬರ ತಪ್ಪು ತಿಳುವಳಿಕೆಗೆ ಕಾರಣವಾಗಿದೆ ಎಂದೆನಿಸಿದರೆ ‘ಸಾರಿ ನಿಮಗೆ ಹಾಗನ್ನಿಸಿದ್ದರೆ ಮಾತ್ರ’ ಎಂದು ನಿಯಮಕ್ಕೊಳಪಡಿಸಿ ಕ್ಷಮೆಯಾಚಿಸುತ್ತಾರೆ.
ತಾವಾಗಿಯೇ ಯಾರ ಬಳಿಯೂ ಕೆದಕಿ ಮಾತನಾಡದಿದ್ದರೂ, ಏನಾದರೂ ಸಹಾಯ, ವಿವರಣೆ ಕೇಳಿದರೆ ಖಂಡಿತ ತಮಗೆ ಕೈಲಾದ್ದಷ್ಟನ್ನು, ತಿಳಿದಷ್ಟನ್ನು ಮಾಡುತ್ತಾರೆ, ಹೇಳುತ್ತಾರೆ. ಇತರರು ಮಾಡಿದ, ತಮಗೆ ಅದರಿಂದ ಸಂತೋಷವಾದ ಒಂದು ಸಣ್ಣ ವಿಷಯಕ್ಕೂ ‘ಎ ಗ್ರೇಟ್ ಜಾಬ್’ ಎನ್ನುತ್ತಾ ಕಣ್ಣರಳಿಸಿ ಸಂತಸ ತೋರುತ್ತಾರೆ.
ಇಲ್ಲಿ ನಮ್ಮಲ್ಲಿನಂತೆ ಮಕ್ಕಳ ಸಂಖ್ಯೆಗೆ ನಿಯಂತ್ರಣವಿಲ್ಲ. ಗಂಡ, ಹೆಂಡತಿ, ಮೂರ‍್ನಾಲ್ಕು ಮಕ್ಕಳು ಪ್ರೇಕ್ಷಣೀಯ ಸ್ಥಳಗಳಲ್ಲಿ, ಮಾಲ್‌ಗಳಲ್ಲಿ ಒಟ್ಟೊಟ್ಟಿಗೆ ತಿರುಗುತ್ತಿರುವುದು ಸಾಮಾನ್ಯವಾದ ವಿಷಯ. ಆದರೆ ಕೈಮಗುವನ್ನು, ತುಂಬಾ ನಡೆಯಲಾಗದ ಪುಟ್ಟ ಮಕ್ಕಳನ್ನು, ಚಲಿಸುವ ತೊಟ್ಟಿಲಿನಲ್ಲಿ ಹಾಕಿ ಬೆಲ್ಟನ್ನು ಬಿಗಿದು ಕರೆದೊಯ್ಯುವರೇ ಹೊರತು ಎತ್ತಿಕೊಳ್ಳುವುದು, ಮೈಮೇಲೆ ಕೂರಿಸಿಕೊಳ್ಳುವುದು ಇಂತಹ ಮಧುರ ಚಿತ್ರಗಳನ್ನು ಹೆಚ್ಚಾಗಿ ಕಾಣುವುದಿಲ್ಲ.
ಹುಟ್ಟಿದ ಮಗುವನ್ನು ಆಸ್ಪತ್ರೆಯಿಂದ ಕರೆತರುವಾಗಲೂ ಕಾರಿನಲ್ಲಿ ಅದಕ್ಕಾಗೇ ಕಾದಿರಿಸಿದ ಆಸನದಲ್ಲಿ ಹಸುಗೂಸನ್ನು ಕಟ್ಟಿ ಭದ್ರಪಡಿಸಿ ಕರೆತರಬೇಕೇ ಹೊರತು ಮಡಿಲಿನಲ್ಲಿ ಇಟ್ಟುಕೊಂಡು ಬರುವಂತಿಲ್ಲ. ಮಗು ಇನ್ನೂ ಕೆಲವು ತಿಂಗಳದ್ದಿರುವಾಗಲೇ ಬೇರೆಯ ಕೋಣೆಯಲ್ಲಿ ಮಲಗಿಸುವುದು; ಕಾರಿನಲ್ಲೂ ಅದರ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡುವುದು ಇಲ್ಲಿನ ರೀತಿ ನೀತಿ.
ಸ್ಯಾನ್‌ಫ್ರಾನ್ಸಿಸ್ಕೋದ ಬೀದಿಯೊಂದರ ಪಾದಚಾರಿ ರಸ್ತೆಯಲ್ಲಿ ಇಂತಹ ತಳ್ಳುಗಾಡಿಯಲ್ಲಿದ್ದ ಮಗುವೊಂದು ಪದೇ ಪದೇ ಅದರಿಂದ ಇಳಿದು ಅದರ ಅಪ್ಪನ ಕಾಲುಗಳನ್ನು ತಬ್ಬಿಕೊಂಡು ಎತ್ತಿಕೊಳ್ಳುವಂತೆ ಕೈಚಾಚುತ್ತಿದ್ದ; ಪ್ರತಿಸಲವೂ ಅದರ ತಂದೆ ಮತ್ತೆ ಅದನ್ನು ಅದರ ಗಾಡಿಯಲ್ಲಿ ಕೂರಿಸಲು ಮಾಡುತ್ತಿದ್ದ ಪ್ರಯತ್ನ ನೋಡಿದಾಗ ಏಕೋ ಸಂಕಟವಾಯಿತು. ಮಕ್ಕಳು ಎಲ್ಲಿದ್ದರೂ ಮಕ್ಕಳೇ ತಾನೆ! ತಾಯ್ತಂದೆಯರ ಹಿತವಾದ ಅಪ್ಪುಗೆಯನ್ನು ಬಯಸುವುದು ಸಹಜವೇ ಅಲ್ಲವೇ!.

ಚಿತ್ರಕೃಪೆ: ಗೂಗಲ್


ಅಮೆರಿಕದ ಮಕ್ಕಳು ಹುಟ್ಟುವಾಗಲೇ ಹೆಸರನ್ನು ಇಟ್ಟುಕೊಂಡೇ ಹುಟ್ಟುತ್ತವೆ. ಹೆಣ್ಣು ಸಂತಾನವನ್ನು ಅಪೇಕ್ಷಿಸದೇ ಇರುವ ಮನೋಭಾವ ಇಲ್ಲಿ ಇಲ್ಲದಿರುವುದರಿಂದ ಹುಟ್ಟುವ ಮೊದಲೇ ತಿಳಿದುಕೊಳ್ಳಬೇಕೆನ್ನುವ ಇಚ್ಛೆ ಇದ್ದರೆ ಮಗುವಿನ ಲಿಂಗದ ಬಗ್ಗೆ ತಿಳಿಸಿ ಹೆಸರನ್ನು ಹುಡುಕಿಟ್ಟುಕೊಳ್ಳಲು ಅನುವು ಮಾಡಿಕೊಡುತ್ತಾರೆ.
ಆಸ್ಪತ್ರೆಯಿಂದ ಬರುವಾಗಲೇ ಯಾವುದೇ ತಿಥಿ, ವಾರ, ನಕ್ಷತ್ರಗಳ ಗೋಜಿಲ್ಲದೆ, ಪುರೋಹಿತರ ಮಂತ್ರಘೋಷಗಳಿಲ್ಲದೆ, ಹೆಸರನ್ನೂ, ಸಾಮಾಜಿಕ ರಕ್ಷಣಾ ಸಂಖ್ಯೆಯನ್ನೂ ಜೊತೆಗೇ ಪಡೆದುಕೊಂಡು ಬರುತ್ತವೆ. ಹೆಣ್ಣು ಗರ್ಭಿಣಿಯಾದಾಗ ಭಾರತೀಯ ಪದ್ಧತಿಯ ಸೀಮಂತಕ್ಕೆ ಬದಲಾಗಿ ಇಲ್ಲಿ ‘ಜೆಂಡರ್ ರಿವೀಲಿಂಗ್’ ಹಾಗೂ ‘ಬೇಬಿ ಷೋವರ್’ ಪಾರ್ಟಿ ಇರುತ್ತದೆ. ಸಂತಸ ಪಡುವುದಕ್ಕೆ ಯಾವ ರೀತಿಯಾದರೇನು?! ಒಟ್ಟಿನಲ್ಲಿ ಎಲ್ಲೆಡೆ ಒಂದು ಹೊಸ ಜೀವದ ಆಗಮನವನ್ನು ಎಲ್ಲರೂ ಒಂದಲ್ಲ ಒಂದು ರೀತಿಯಿಂದ ಸ್ವಾಗತಿಸಿ ಸಂಭ್ರಮಿಸುವುದು ಸಹಜವೇ.
ಅಮೆರಿಕದ ಜನರು ಚಾರಣ ಪ್ರಿಯರು. ವಾರಾಂತ್ಯದಲ್ಲಿ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೇಷಿಸುತ್ತಾ ಪಯಣಿಸುವುದು ನೆಚ್ಚಿನ ಹವ್ಯಾಸ. ಕೆಲವು ಸಾಹಸಿ ಯುವಕರಂತೂ ಬೈಕ್‌ಗಳ ಮೇಲೆ ತಿಂಗಳುಗಟ್ಟಲೇ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗುತ್ತಾ ಹೊಸ ಹೊಸ ಅನುಭವಗಳನ್ನು ಪಡೆಯಲು ಉತ್ಸುಕರಾಗಿರುತ್ತಾರೆ.
ಕೆಲವು ಪರ್ವತಗಳ ಚಾರಣ ಮಾಡಬೇಕೆಂದು ಉದ್ದೇಶವಿರುವ ಕೆಲವರು ಅದಕ್ಕಾಗಿ ವರ್ಷಗಟ್ಟಲೆ ಸಾಧನೆ ಮಾಡುತ್ತಿರುತ್ತಾರೆ. ಕಾರು ಬಿಟ್ಟರೆ, ಸೈಕಲ್ ಇಲ್ಲಿನ ಜನಪ್ರಿಯ ವಾಹನ. ಪರಿಸರ ಹಾಗೂ ವ್ಯಾಯಾಮದ ದೃಷ್ಟಿಯಿಂದ ಸೈಕಲ್ ಸವಾರಿ ಮಾಡುವ ಹಲವರು ಇಲ್ಲಿ ಕಾಣಸಿಗುತ್ತಾರೆ. ಶಿಸ್ತು ಮತ್ತು ಶುಭ್ರತೆ ಇಲ್ಲಿನ ನಿಯಮ.
ಇಂತಹ ಶ್ರೀಮಂತ ದೇಶದಲ್ಲೂ ‘ಹೋಮ್ ಲೆಸ್’ ಜನರಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಂಡು ಹೋಗುಬರುವವರ ಹತ್ತಿರ ಬೇಡುತ್ತಿರುತ್ತಾರೆ.  ಇವರ ಪುನರ್ವಸತಿಗಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸಾಕಷ್ಟು ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇಲ್ಲಿ, ಊಟ, ಬಟ್ಟೆ, ವೈದ್ಯಕೀಯ ಸೌಲಭ್ಯ ಇಂತಹ ಹಲವು ಸೌಲಭ್ಯಗಳನ್ನು ಒದಗಿಸಿದ್ದರೂ, ಅಲ್ಲಿನ ನಿಯಮಗಳಿಗೆ ಒಳಗಾಗಲು ಇಚ್ಛೆಯಿಲ್ಲದೆ, ಕೆಲವು ಭಿಕ್ಷುಕರು ಅಲ್ಲಿಗೆ ಹೋಗಲು ಇಚ್ಛಿಸುವುದಿಲ್ಲ.
ಅಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಇವರು ತಮ್ಮಿಚ್ಛೆಯಂತೆ ಖರ್ಚು ಮಾಡಲು ಕೈಯಲ್ಲಿ ಹಣವಿರುವುದಿಲ್ಲ. ಧೂಮಪಾನ, ಮದ್ಯ, ಡ್ರಗ್ಸ್ ಇಂತಹ ದುರ್ವ್ಯಸನಗಳ ದಾಸರಾಗಿರುವವರಿಗೆ ಅಲ್ಲಿನ ನಿಯಮಗಳಿಗೆ ಬದ್ಧರಾಗಿ ಇರಲು ಸಾಧ್ಯವಿಲ್ಲದೆ ಅವರು ಪೊಲೀಸರ ಕಣ್ಣು ತಪ್ಪಿಸಿ ಅಲ್ಲಿಲ್ಲಿ ಭಿಕ್ಷೆ ಬೇಡುತ್ತಿರುತ್ತಾರೆ.

ಚಿತ್ರಕೃಪೆ: ಗೂಗಲ್


ಕೆಲವರು ಹಣವನ್ನು ಕೇಳಿದರೆ, ಒಬ್ಬಿಬ್ಬರು ಭಾರತೀಯ ತಿನಿಸಿನ ಅಂಗಡಿಯ ಮುಂದೆ ನಿಂತರೆ ಅಲ್ಲಿ ಸಿಕ್ಕುವ ಒಂದೆರಡು ಸಮೋಸವನ್ನೊ ಅಥವಾ ಅಲ್ಲಿನ ಸ್ಥಳೀಯ ತಿನಿಸಿನ ಅಂಗಡಿಯ ಮುಂದೆ ನಿಂತರೆ ಅಲ್ಲಿನ ತಿನಿಸುಗಳನ್ನೋ ಕೊಡಿಸಿ ಎಂದು ಅವರ ಇಚ್ಛೆಯನ್ನು ತಿಳಿಸಿ ಕೇಳುವವರನ್ನೂ ನಾವು ನೋಡಿದೆವು. ನಮ್ಮಲ್ಲಿ ತಮಾಷೆಗೆ ಭಿಕ್ಷುಕರು ‘ಬಿಸಿ ಬಿಸಿ ಅನ್ನ ಆಗಿದ್ರೆ ಹಾಕು ತಾಯಿ, ಹಬ್ಬಕ್ಕೆ ಸಿಹಿ ಮಾಡಿದ್ರೆ ಹಾಕು ತಾಯಿ’ ಅಂತ ಕೇಳ್ತಾರೆ ಎಂದು ತಮಾಷೆಗೆ ಹೇಳುವಂತೆ ಕೇಳುತ್ತಾರಲ್ಲಾ ಅನ್ನಿಸಿತು.
ದುಡಿಯಲಿಚ್ಛಿಸುವವರಿಗೆ ಎಲ್ಲೆಡೆಯೂ ದುಡಿಮೆಯಿದೆ. ಬೇಡಲಿಚ್ಛಿಸುವವರಿಗೆ ಎಂಥ ಸಿರಿವಂತ ದೇಶದಲ್ಲೂ ಜಾಗವಿದೆ!! ಎಲ್ನೋಡಿ ಕಾರ್.. ಕಾರಿಂದೇ ದರ್ಬಾರ್.. ಇಲ್ಲಿನ ಸಂಚಾರದ ಮುಖ್ಯ ವ್ಯವಸ್ಥೆ ಕಾರು.
ಊರಿನೊಳಗಿನ ಸಂಚಾರಕ್ಕೆ ಮೆಟ್ರೋ, ಬಸ್ಸು, ಲೋಕಲ್ ರೈಲುಗಳ ವ್ಯವಸ್ಥೆ ಇದ್ದರೂ, ಅವುಗಳ ಸಂಖ್ಯೆ ಹಾಗೂ ಉಪಯೋಗಿಸುವವರು ವಿರಳ. ಇನ್ನೂ ಆಟೋಗಳನ್ನಂತೂ ಕಾಣುವುದೇ ಇಲ್ಲ. ಕೆಲವು ದೊಡ್ಡ ನಗರಗಳಲ್ಲಿ ರಸ್ತೆಯಲ್ಲಿ ಓಡಾಡುವ ಟ್ರಾಮನ್ನೂ ಕಾಣಬಹುದು. ಆದರೆ ಕಾರುಗಳ ಅಬ್ಬರದಲ್ಲಿ ಮಿಕ್ಕೆಲ್ಲಾ ವಾಹನಗಳ ಬೆಡಗೂ ಮಂಕಾಗಿವೆ.
ಬೈಕನ್ನು ಎಲ್ಲೋ ಬೆರಳೆಣಿಕೆಯಷ್ಟು ಜನ ಉಪಯೋಗಿಸುತ್ತಾರೆ. ಸಾಂತಾಕ್ರೂಸ್‌ನಲ್ಲಿ ಒಂದು ಹಳೆಯ ಲ್ಯಾಂಬ್ರೆಟ್ಟಾ ಮಾದರಿಯ ಸ್ಕೂಟರನ್ನು ನೋಡಿದಾಗ ಯಾವುದೋ ವಿಶೇಷವನ್ನು ಕಂಡಂತೆ ಅಚ್ಚರಿಯಿಂದ ಕಣ್ಣರಳಿಸುತ್ತಾ ನೋಡುವಂತಾಯಿತು. ಕೆಲವು ಪರಿಸರ ಪ್ರಿಯರು ಮತ್ತು ವ್ಯಾಯಾಮದ ಮನೋಭಾವದವರು ಸೈಕಲ್ಲಿನಲ್ಲಿ ಸಾಗುವುದನ್ನು ಅಲ್ಲಲ್ಲಿ ಕಾಣಬಹುದು.
ದಿನವೂ ಕೆಲಸಕ್ಕೆ ಹೋಗುವವರು ಹೋಗುವಾಗ, ಬರುವಾಗ ಗಂಟೆಗಳವರೆಗೂ ಪಯಣಿಸುತ್ತಾ ಸಾಗುವುದು ಇಲ್ಲಿನ ಸಾಮಾನ್ಯ ವಿಷಯ. ಮನೆಯಿಂದ ಹೊರಟ ತಕ್ಷಣ, ದಿನವೂ ಹೋಗುವ ಜಾಗವೇ ಆದರೂ, ಮೊಬೈಲ್‌ನಲ್ಲಿ ಜಿ.ಪಿ.ಎಸ್. ಹಾಕಿಕೊಂಡು ಬೆಲ್ಟನ್ನು ಬಿಗಿದುಕೊಂಡು ಕುಳಿತರೆಂದರೆ, ಗಮ್ಯಸ್ಥಾನ ತಲುಪುವವರೆಗೆ ಅವರ ಗಮನ ಸಂಪೂರ್ಣವಾಗಿ ರಸ್ತೆ ಮತ್ತು ಜಿ.ಪಿ.ಎಸ್. ಅಷ್ಟೆ. ಸಂಚಾರಿ ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಾರೆ.
ಹಾಗಾಗಿ ಇಲ್ಲಿ ಅಪಘಾತಗಳ ಸಂಖ್ಯೆ ತೀರಾ ಕಡಿಮೆ. ಒಂದು ಅನುಕೂಲತೆಯೆಂದರೆ ದಾರಿಯಲ್ಲಿ ಸಾಗುತ್ತಾ ಅಡ್ಡ ಬರುವ ದ್ವಿಚಕ್ರ, ತ್ರಿಚಕ್ರ ವಾಹನಗಳನ್ನಾಗಲೀ, ಪಕ್ಕದಲ್ಲೇ ಮೈಮೇಲೆ ಏರಿದಂತೆ ಬರುವ ಬಸ್ಸು, ಟ್ರಕ್ಕುಗಳನ್ನಾಗಲೀ, ಹಾದಿಯ ಮಧ್ಯೆ ಆಹಾರವನ್ನು ಹುಡುಕುತ್ತಾ ಬರುವ ದನ, ಕುರಿ, ಕೋಳಿಗಳನ್ನಾಗಲೀ, ರಸ್ತೆಯ ಮಧ್ಯವೇ ರಾಜಾರೋಷವಾಗಿ ದಾಟುತ್ತಾ ವಾಕಿಂಗ್ ಮಾಡುವ ಪಾದಚಾರಿಗಳನ್ನಾಗಲೀ ನಿಭಾಯಿಸಬೇಕಿಲ್ಲ.
ಕೆಲವು ಮುಖ್ಯ ರಸ್ತೆಗಳಲ್ಲಿ ಇಬ್ಬರಿಗಿಂತ ಹೆಚ್ಚು ಜನ ಕಾರಿನಲ್ಲಿದ್ದರೆ, ಅವರಿಗಾಗಿಯೇ ನಿರ್ದಿಷ್ಟ ಅವಧಿಯಲ್ಲಿ, ಒಂದು ನಿರ್ದಿಷ್ಟ ಪಥದಲ್ಲಿ ಸಾಗಬಹುದಾದ ವ್ಯವಸ್ಥೆಯಿದೆ. ಇದನ್ನು ಕಾರ್ ಪೂಲ್ ಲೇನ್ ಎಂದು ಕರೆಯುತ್ತಾರೆ. ಚಾಲಕ ಕಾರಿನ ಎಡಬದಿಯಲ್ಲಿ ಮತ್ತು ಬಲ ತಿರುವುಗಳು ಇಲ್ಲಿನ ನಿಯಮ. ಕೆಲವೆಡೆ ಬಲಬದಿಗೆ ಮುಕ್ತ ಸಂಚಾರವಿದೆ. ಎಲ್ಲ ರಸ್ತೆಗಳಿಗೆ ವೇಗ ಮಿತಿಯಿರುತ್ತದೆ.  ಅದೆಷ್ಟೇ ವಾಹನಗಳಿದ್ದರೂ, ಎಲ್ಲರೂ ತಮ್ಮ ವಾಹನಗಳ ನಡುವೆ ಸಾಕಷ್ಟು ಅಂತರದ ಮಿತಿಯನ್ನು ಕಾಯ್ದುಕೊಂಡು ಚಲಿಸುತ್ತಾರೆ.
ವಾಹನದಲ್ಲಿ ಸಾಗುತ್ತಿರುವಾಗ ಯಾವುದಾದರೂ ಐದು ವಾಹನಗಳು ಹಿಂದಿನಿಂದ ಅನುಸರಿಸುತ್ತಿರುವುದು ಕಂಡುಬಂದರೆ, ತಮ್ಮ ವಾಹನವನ್ನು ಪಕ್ಕಕ್ಕೆ ಸರಿಸಿಕೊಂಡು ಹಿಂದಿರುವ ವಾಹನಗಳು ಮುಂದೆ ಸಾಗಲು ಅನುವು ಮಾಡಿಕೊಡಬೇಕು; ಅವರ ವೇಗಕ್ಕೆ ತಡೆಯೊಡ್ಡಬಾರದು. ರಸ್ತೆಯಲ್ಲಿ ಸಾಗುತ್ತಿರುವ ಯಾವುದೇ ವಾಹನಗಳ ಹಾರ್ನ್ ಸದ್ದು ಕೇಳುವುದೇ ಇಲ್ಲ.

ಚಿತ್ರಕೃಪೆ: ಗೂಗಲ್


ಮುಖ್ಯ ರಸ್ತೆಯ ನಿರ್ದಿಷ್ಟ ಸ್ಥಳಗಳಲ್ಲಿ, ಪಾದಚಾರಿಗಳ ರಸ್ತೆ ದಾಟುವಿಕೆಗೆ ಜಾಗಗಳಿರುತ್ತವೆ.  ಅಲ್ಲಿನ ಪಾದಚಾರಿ ಪಥದಲ್ಲಿ ಒಂದು ಕಂಬವಿದ್ದು, ರಸ್ತೆ ದಾಟುವವರು ಅದರಲ್ಲಿರುವ ಒಂದು ಗುಂಡಿಯನ್ನು ಒತ್ತಿ ನಿಂತರೆ, ಸಂಚಾರಿ ದೀಪ ಕೆಂಪಾಗಿ ತಿರುಗುವ ವೇಳೆಗೆ ಪಾದಚಾರಿಗಳಿಗೆ ರಸ್ತೆ ದಾಟುವ ಸೂಚನೆ ಸಿಗುತ್ತದೆ. ಅವರು ಸುರಕ್ಷಿತವಾಗಿ ದಾಟಿದ ನಂತರ ಮತ್ತೆ ಸಂಚಾರ ಎಂದಿನಂತೆಯೇ ವೇಗವಾಗಿ ಸಾಗುತ್ತಿರುತ್ತದೆ.
ಹತ್ತರಿಂದ ಹನ್ನೆರಡು ಗಂಟೆಯ ಹಾದಿಯನ್ನು ಕಾರಿನಲ್ಲೇ ಕ್ರಮಿಸಲು ಇಚ್ಛಿಸಿದರೂ, ಅದಕ್ಕೂ ಮೀರಿದ ಪಯಣಕ್ಕೆ ವಿಮಾನಯಾನ ಅಪೇಕ್ಷಣೀಯ. ಕಾರಿನಂತೆಯೇ ಇಲ್ಲಿ ವಿಮಾನಯಾನವೂ ಅತ್ಯಂತ ಸಹಜವಾಗಿದೆ. ಊರಿನಿಂದ ಊರಿಗೆ ಬಸ್ಸಿನ, ರೈಲುಗಾಡಿಯ ಪಯಣ ಸ್ವಲ್ಪ ಮಟ್ಟಿಗೆ ವಿರಳವೆಂದೇ ಹೇಳಬಹುದು. ನಮ್ಮಲ್ಲಿನ ರಸ್ತೆ, ಹಾದಿ, ಮಾರ್ಗ, ದಾರಿ, ಪೇಟೆ, ಬಜಾರುಗಳ ಬದಲಾಗಿ ಇಲ್ಲಿ ಸ್ವಲ್ಪ ವೃತ್ತಾಕಾರದ ರಸ್ತೆಗಳಿಗೆ ‘ಸರ್ಕಲ್’, ‘ಕೋರ್ಟ್’; ನೇರವಾದ ರಸ್ತೆಗಳಿಗೆ ‘ಸ್ಟ್ರೀಟ್’, ‘ಅವೆನ್ಯೂ’, ‘ಬುಲೇವರ್ಡ್’ ಇಂತಹ ಹೆಸರುಗಳಿಂದ ಕರೆಯುತ್ತಾರೆ. ಪ್ರತಿಯೊಂದು ಹೈವೇಗಳಲ್ಲೂ ಮಧ್ಯ-ಮಧ್ಯದಲ್ಲಿ ಬೇರೆ, ಬೇರೆ ಸ್ಥಳ, ಊರುಗಳಿಗೆ ತಲುಪಿಸುವ ‘ಎಕ್ಸಿಟ್’ಗಳಿರುತ್ತವೆ.
ಪೂರ್ವದಿಂದ ಪಶ್ಚಿಮದೆಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಗಳು ಬೆಸ ಸಂಖ್ಯೆಗಳನ್ನೂ, ಉತ್ತರದಿಂದ ದಕ್ಷಿಣಕ್ಕೆ ಸಾಗುವ ರಾಷ್ಟ್ರೀಯ ಮುಖ್ಯರಸ್ತೆಗಳು ಸಮ ಸಂಖ್ಯೆಗಳನ್ನೂ ಹೊಂದಿರುತ್ತವೆ. ಅದೇ ರಾಜ್ಯದಲ್ಲಿ ಮಾತ್ರ ಸುತ್ತುವ ಮುಖ್ಯರಸ್ತೆಗಳಿಗೆ ಎರಡು ಅಂಕೆಗಳ, ಪೂರ್ವ-ಪಶ್ಚಿಮಕ್ಕಾದರೆ ಬೆಸ, ಉತ್ತರ-ದಕ್ಷಿಣಕ್ಕಾದರೆ ಸಮ ಸಂಖ್ಯೆಗಳು ಇರುತ್ತವೆ. ಅದೇ ಕೌಂಟಿಯಲ್ಲಿ ಮಾತ್ರ ಸಾಗುವ ಮುಖ್ಯ ರಸ್ತೆಗಳಿಗೆ ಮೂರು ಅಂಕೆಯ ಸಂಖ್ಯೆಗಳಿರುತ್ತದೆ. ಅವುಗಳು ಕೂಡಾ ಈ ಸರಿ ಬೆಸ ಸಂಖ್ಯೆಗಳನ್ನು ಅಂತೆಯೇ ಪಾಲಿಸುತ್ತವೆ.
ಈ ವ್ಯವಸ್ಥೆಯಿಂದ ಒಂದು ರಸ್ತೆಯಲ್ಲಿ ಸಾಗುತ್ತಿರುವಾಗ ಆ ರಸ್ತೆಯು ಸಾಗುತ್ತಿರುವ ದಿಕ್ಕು ಮತ್ತು ಸ್ವರೂಪ ಯಾರನ್ನೂ ಕೇಳದೆಯೇ ತಿಳಿಯುತ್ತದೆ. ಹಾಗಾಗಿ ಹಲವು ರಾಜ್ಯಗಳ ಮೂಲಕ ಪ್ರಯಾಣಿಸುತ್ತಿರುವಾಗ ಈ ಒಂದು, ಎರಡು ಮತ್ತು ಮೂರು ಅಂಕೆಯ, ಸರಿ-ಬೆಸಗಳ ಹಲವು ರಸ್ತೆಗಳಲ್ಲಿ ಸಾಗುತ್ತಿರುತ್ತೇವೆ.
(ಮುಂದುವರಿಯುವುದು)

‍ಲೇಖಕರು avadhi

October 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: