ಅಮೆರಿಕ ಎಂಬ ಸಮುದ್ರ ರಾಜನ ಗೆಳೆಯ

3

ಚಿತ್ರ-ವಿಚಿತ್ರ ಸಮುದ್ರ ಪ್ರಪಂಚ

189 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಸಮುದ್ರ ಪ್ರಪಂಚದಲ್ಲಿ ಸುಮಾರು 31000ಕ್ಕೂ ಮಿಕ್ಕು ಜಲಚರಗಳು ವಾಸವಾಗಿವೆ. ಸಮುದ್ರದಲ್ಲಿ ವಾಸಿಸುವ ಹಲವು ನೂರು ಬಗೆಯ ಜಲಚರಗಳನ್ನು ಒಂದೇ ತಾಣದಲ್ಲಿ ನೋಡ ಸಿಗುವುದು ಇಲ್ಲಿನ ಪ್ರಮುಖ ಆಕರ್ಷಣೆ. ಮಕ್ಕಳಿಗಾಗಿ ಹಲವು ಬಗೆಯ ಮನರಂಜನಾ ಆಟಗಳೂ ಇವೆ.

ವಾರಾಂತ್ಯದಲ್ಲಿ ಮಕ್ಕಳನ್ನು ಕರೆದುಕೊಂಡು ಬರುವ ಪ್ರವಾಸಿಗರ ಸಂಖ್ಯೆ ಅತಿ ಹೆಚ್ಚು. ಮಕ್ಕಳು ಇಲ್ಲಿನ ಆಟಗಳಲ್ಲಿ ಭಾಗವಹಿಸಬೇಕಾದರೆ ಕನಿಷ್ಟ ಪಕ್ಷ 42 ಇಂಚು ಎತ್ತರವಿರಬೇಕು; ಕೆಲವು ಆಟಗಳಲ್ಲಿ ಭಾಗವಹಿಸಲು 48 ಇಂಚು ಎತ್ತರವಿರಬೇಕು. ಅದಕ್ಕಿಂತ ಪುಟ್ಟ ಮಕ್ಕಳು ಪೋಷಕರ ಜೊತೆಯಲ್ಲಿ ಕೆಲವು ಆಟಗಳಲ್ಲಿ ಭಾಗವಹಿಸಲಡ್ಡಿಯಿಲ್ಲ.

ಹಲವು ಆಕರ್ಷಕ, ರೋಮಾಂಚಕ ಆಟಗಳಲ್ಲಿ ಹಿರಿಯರು ಕೂಡ ಭಾಗವಹಿಸುತ್ತಾರೆ. ನೆಲದಿಂದ ನೂರಾರು ಅಡಿ ಎತ್ತರದಲ್ಲಿ, ಚಿತ್ರ-ವಿಚಿತ್ರ, ಅಡ್ಡಾದಿಡ್ಡಿ ಕೋನಗಳಲ್ಲಿ ತಿರುಗಿಕೊಂಡು, ಮೇಲೆ ಕೆಳಗೆ ತಿರುಗಿಸಿ ಸುತ್ತಿಸುವ ಆಟಗಳ ರೋಮಾಂಚಕ ಅನುಭವಗಳನ್ನು ಕೆಲವು ಆಟಗಳು ನೀಡಿದರೆ, ಕೆಲವು ಆಟಗಳು ನೀರಿನಲ್ಲಿ ದೋಣಿಯಲ್ಲಿ ರಭಸದಿಂದ ಸಾಗುವ, ಮೇಲಿನಿಂದ ಒಮ್ಮೆಲೇ ಪ್ರಪಾತಕ್ಕೆ ಜಾರುವ, ಉಸಿರನ್ನು ಕೆಲಕಾಲ ನಿಲ್ಲಿಸುವ ಅನುಭವವನ್ನು ನೀಡುತ್ತದೆ.

ಪ್ರೇಕ್ಷಕರನ್ನು ಸುತ್ತ ತಿರುಗಿಸುತ್ತಾ ಮೇಲೆ ಕೊಂಡೊಯ್ಯುತ್ತಾ ಇಡಿಯ ಸಮುದ್ರ ಪ್ರಪಂಚವನ್ನು ಒಂದಷ್ಟು ಕಾಲ ಸಿಂಹಾವಲೋಕನ ಮಾಡಿಸುವ ಪ್ರದರ್ಶನವಿದೆ. ಅಂತೆಯೇ ಹಗ್ಗದ ಮೇಲೆ ತೊಟ್ಟಿಲುಗಳಲ್ಲಿ ಕೂತು ಸಾಗುತ್ತಾ ಸಮುದ್ರ ಪ್ರಪಂಚದ ನೋಟವನ್ನು ನಮ್ಮದಾಗಿಸಿಕೊಳ್ಳಬಹುದಾದ ಅವಕಾಶವೂ ಇದೆ.

ಸಮುದ್ರದೊಳಗೆ ಜಲಚರಗಳ ಮಧ್ಯೆ ಸಾಗುವ, ಪರ್ವತ ಶ್ರೇಣಿಗಳಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ಮಂಜಿನ ಪರ್ವತಗಳಿಗೆ ಇನ್ನೇನು ತಾಕಿಬಿಡುತ್ತೇವೇನೋ ಎಂಬಂತೆ ಸಾಗುವಂತಹ 3ಡಿ ಅನುಭವವನ್ನು ನೀಡುವ ಮತ್ತು ಇಂತಹ ಹಲವು ನೈಜತೆಗೆ ಹತ್ತಿರವಾದ ಅನುಭವಗಳನ್ನು ನೀಡುವಂತಹ ಹಲವು ಬಗೆಯ ಆಟಗಳಿದ್ದು ಅಂತಹ ರೋಮಾಂಚಕಾರಿ ಅನುಭವಗಳನ್ನು ನಮ್ಮದಾಗಿಸಿಕೊಳ್ಳುವ ಅವಕಾಶಗಳು ಇಲ್ಲಿವೆ.

ತಿಮಿಂಗಿಲಗಳ ಆಟದ ಒಂದು ನೋಟ

ಮೇಲಿನವೆಲ್ಲವೂ ನಾವೂ ಭಾಗವಹಿಸಿ ದಟ್ಟ ಅನುಭವವನ್ನು ನಮ್ಮದಾಗಿಸಿಕೊಳ್ಳುವಂತಹ ತಾಣಗಳಾದರೆ, ಸಮುದ್ರ ಪ್ರಪಂಚದ ಪ್ರಮುಖ ಆಕರ್ಷಣೆ ಇಲ್ಲಿನ ಡಾಲ್ಫಿನ್, ತಿಮಿಂಗಿಲ, ನೀರು ನಾಯಿ, ಮತ್ತು ಕೆಲವು ಸಾಕುಪ್ರಾಣಿಗಳು ನೀಡುವ ಮನರಂಜನಾ ಪ್ರದರ್ಶನಗಳು. ನಿರ್ದಿಷ್ಟ ವೇಳೆಗಳಲ್ಲಿ ಈ ಪ್ರದರ್ಶನಗಳು ನಡೆಯುತ್ತವೆ.

ಆ ವೇಳಾಪಟ್ಟಿಯನ್ನು ಅನುಸರಿಸಿಕೊಂಡು ಪ್ರದರ್ಶನ ನಡೆಯುವ ಗ್ಯಾಲರಿಯಂತಹ ಒಂದು ರಂಗಸ್ಥಳದಲ್ಲಿ ನಮ್ಮ ಜಾಗವನ್ನು ಆರಿಸಿಕೊಂಡು ಕುಳಿತುಕೊಳ್ಳಬೇಕು. ಜಲಚರಗಳ ಪ್ರದರ್ಶನವಾದ್ದರಿಂದ ಮೊದಲ ಮೂರ‍್ನಾಲ್ಕು ಸುತ್ತಿನ ಆಸನಗಳನ್ನು ನೀರು ಬೀಳಬಹುದಾದ ಪ್ರದೇಶವೆಂದು ಗುರುತಿಸಿರುತ್ತಾರೆ.

ಪ್ರಾಣಿಗಳು ಎರಚುವ ನೀರಿನ ಪ್ರೋಕ್ಷಣೆಯ ಸ್ನಾನವನ್ನು ಆನಂದಿಸಲು ಇಚ್ಛಿಸುವವರು, ಹೆಚ್ಚಾಗಿ ಮಕ್ಕಳು ಇಲ್ಲಿ ಕುಳಿತುಕೊಂಡು ಒಂದೊಂದು ಬಾರಿ ನೀರು ಎರಚಿದಾಗಲೂ ಆನಂದದಿಂದ ಕಿರುಚುತ್ತಾ ಸಂತೋಷ ಪಡುತ್ತಿರುತ್ತಾರೆ. ಮಿಕ್ಕವರು ಹಿಂದಿನ ಆಸನಗಳಲ್ಲಿ ಕುಳಿತುಕೊಳ್ಳುತ್ತಾರೆ. ಗಾಲಿ ಕುರ್ಚಿಯಲ್ಲಿ ಬರುವವರಿಗೆ ಬೇರೆಯೇ ಪಥವಿದ್ದು ಎತ್ತರದ ಜಾಗದಲ್ಲಿ ತಮ್ಮದೇ ಕುರ್ಚಿಯಲ್ಲಿ, ಅಥವಾ ಅಲ್ಲಿ ಅವರಿಗಾಗಿ ಕಾದಿರಿಸಿದ ಆಸನಗಳಲ್ಲಿ ಕುಳಿತು ನೋಡುವ ಅವಕಾಶವೂ ಇದೆ.

ಡಾಲ್ಫಿನ್‌ಗಳನ್ನು ಪಳಗಿಸಿ ಅವುಗಳಿಂದ ಹಲವು ಬಗೆಯ ಕಸರತ್ತನ್ನು ಮಾಡಿಸುತ್ತಾರೆ. ಅವುಗಳನ್ನು ವಿಶೇಷವಾಗಿ ಮನರಂಜನೆಯನ್ನು ನೀಡುವಂಥ ಆಟಗಳನ್ನು ಆಡುವಂತೆ ಪಳಗಿಸಿರುತ್ತಾರೆ. ಪ್ರದರ್ಶನದ ಮೊದಲು ನಿರೂಪಕರು ಆ ಪ್ರಾಣಿಗಳ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಸುತ್ತಾ ಆಟವನ್ನು ಆರಂಭಿಸುತ್ತಾರೆ. ಒಂದೊಂದು ಆಟದ ಮಧ್ಯದಲ್ಲೂ ಅನೇಕ ಮಾಹಿತಿಗಳನ್ನು ನೀಡುತ್ತಾ, ಹಾಡುತ್ತಾ ಪ್ರದರ್ಶನಕ್ಕೆ ಒಂದು ವಿಶೇಷ ಕಳೆ ಕಟ್ಟುತ್ತಾರೆ.

ನೀರುನಾಯಿಯೊಂದಿಗಿನ ಆಟದ ಒಂದು ದೃಶ್ಯ

ಇದೇ ರೀತಿ ಪೆಟ್ ಶೋನಲ್ಲಿ ನಾಯಿ, ಬೆಕ್ಕು, ಹಂದಿ, ಹಕ್ಕಿ-ಪಕ್ಷಿಗಳಿಂದ ಹಲವು ತಮಾಷೆಯ ಆಟವಾಡಿಸುತ್ತಾ ಮನರಂಜನೆಯನ್ನು ನೀಡುತ್ತಾರೆ. ನೀರು ನಾಯಿಯ ಪ್ರದರ್ಶನದಲ್ಲಿ ಅವುಗಳಿಂದ ಕೆಲವು ಚಿತ್ರ-ವಿಚಿತ್ರ ಮನರಂಜನಾ ಆಟಗಳನ್ನು ಆಡಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವೆಂದರೆ ತಿಮಿಂಗಿಲಗಳನ್ನು ಪಳಗಿಸಿ ಅವುಗಳನ್ನು ಆಟವಾಡಿಸುವುದು.

ಒಮ್ಮೆ ಬಾಯಿ ತೆರೆದರೆ ಹತ್ತು ಜನರನ್ನು ಬೇಕಾದರೂ ಒಟ್ಟಿಗೆ ನುಂಗುವ ಸಾಮರ್ಥ್ಯವಿರುವ ಅವುಗಳನ್ನು ಪಳಗಿಸಿ ತನ್ನಿಚ್ಛೆಯಂತೆ ಕುಣಿಸುವ ಪರಿ ನಿಜಕ್ಕೂ ಆಶ್ಚರ್ಯಕರ. ಆಟದಲ್ಲಿ ಭಾಗವಹಿಸುವ ಎಲ್ಲ ಪ್ರಾಣಿಗಳಿಗೂ ಅವು ಆಟವನ್ನು ಆಡುವ ಮೊದಲು ಮತ್ತು ಮುಗಿಸಿದ ನಂತರ ಅವುಗಳ ಇಷ್ಟದ ಆಹಾರವನ್ನು ಅವುಗಳ ಬಾಯಿಗೆ ಎಸೆಯುತ್ತಿರುತ್ತಾರೆ. ಒಂದು ರೀತಿ ಲಂಚ ಕೊಟ್ಟು ಕುಣಿಸುವ ಪರಿ.

ಇವೆಲ್ಲವನ್ನೂ ಮನರಂಜನೆಗಾಗಿಯೇ ಮಾಡಿದ್ದರೂ, ಆ ರಂಜನೆಯ ಆಳದಲ್ಲಿ ಎಲ್ಲೋ ಆ ಮೂಕ ಪ್ರಾಣಿಗಳ ನರಳುವಿಕೆ ಧ್ವನಿಸುತ್ತಿತ್ತು. ಖಂಡಿತವಾಗಿಯೂ ನಾವು ಸುಲಭವಾಗಿ ಸಿಗದ ಪ್ರಾಣಿಗಳನ್ನು ಒಂದೆಡೆ ಜೀವಂತವಾಗಿ ನೋಡಲು ಸಿಕ್ಕುವ ಅವಕಾಶವಿದು.

ಆದರೆ ತನಗಿಂತ ಎಷ್ಟೋ ಬಲಶಾಲಿಯಾದ ಪ್ರಾಣಿಗಳನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಅವುಗಳಿಗೆ ತಿನಿಸಿನ ಆಕರ್ಷಣೆ ತೋರಿಸುತ್ತಾ ಮನರಂಜನೆಗಾಗಿ ಅವುಗಳನ್ನು ತನ್ನಿಚ್ಛೆಯಂತೆ ಪಳಗಿಸಿ ಕುಣಿಸುವ ಮಾನವನ ಸಾಮರ್ಥ್ಯಕ್ಕೆ ‘ಭೇಷ್!’ ಎನ್ನಬೇಕೋ, ಇಲ್ಲವೇ ಈ ಪ್ರಾಣಿಗಳಿಂದ ಮನರಂಜನೆಯನ್ನು ನೀಡಿ ತಾನು ಗಿಟ್ಟಿಸಿಕೊಳ್ಳುವ ಚಾತುರ್ಯವನ್ನು ಮೆಚ್ಚಿಕೊಳ್ಳಬೇಕೋ, ಇಲ್ಲವೇ ಪ್ರಾಣಿಗಳ ಅಸ್ಮಿತೆಯನ್ನು ಕಸಿದುಕೊಂಡು ಅವುಗಳನ್ನು ಅಡಿಯಾಳಾಗಿ ಮಾಡಿಕೊಂಡಿರುವ ಸ್ವಾರ್ಥಕ್ಕೆ ಮರುಗಬೇಕೋ ಎನ್ನುವುದು ನನಗೆ ಪ್ರಶ್ನೆಯಾಗೇ ಉಳಿಯಿತು..!!

ಜಗತ್‌ ಪ್ರಸಿದ್ಧ ಮೃಗಾಲಯ ಸಫಾರಿಯ ನೋಟ..

ಸ್ಯಾಂಡಿಯಾಗೋದ ಮೃಗಾಲಯ ಜಗತ್‌ ಪ್ರಸಿದ್ಧವಾದುದೆಂದು ಹೇಳುತ್ತಾರೆ. 1972ರಲ್ಲಿ 1800 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದ ವನ್ಯಮೃಗಗಳ ಉದ್ಯಾನವನವು 2010ರಲ್ಲಿ ಮೃಗಾಲಯ ಸಫಾರಿಯೆಂದು ಪುನರ್‌ ನಾಮಕರಣಗೊಂಡಿತು. ಇದರ ಕೆಲವು ಭಾಗಗಳನ್ನು ನಡೆದು ಕ್ರಮಿಸಬಹುದಾದರೆ, ಮಿಕ್ಕವನ್ನು ನೋಡಲು ವಾಹನದ ಅಗತ್ಯವಿದೆ.

ಹೋಗುತ್ತಿರುವ ಮಂದಿಯ ಸಂಖ್ಯೆ, ಅವರ ವೆಚ್ಛವನ್ನು ಭರಿಸುವ ಸಾಮರ್ಥ್ಯ, ಅಗತ್ಯತೆಗಳಿಗೆ ತಕ್ಕಂತೆ ಬೇರೆ ಬೇರೆ ರೀತಿಯ ವಾಹನಗಳ ವ್ಯವಸ್ಥೆ ಇದೆ. ಸಾಮಾನ್ಯವಾಗಿ ಎಲ್ಲರೂ ಹೋಗುವುದು ಟ್ರಾಂಗಳಲ್ಲಿ. ಮೃಗಾಲಯವನ್ನು 12-13 ಭಾಗಗಳಾಗಿ ವಿಂಗಡಿಸಿದ್ದಾರೆ. ಇಷ್ಟೆಲ್ಲಾ ರಂಗಸಜ್ಜಿಕೆಯ ನಂತರ ಮೃಗಾಲಯವನ್ನು ಪ್ರವೇಶಿಸಿದರೆ, ಮೈಸೂರು ಮೃಗಾಲಯವನ್ನು ನೋಡಿದವರಿಗೆ ಸ್ವಲ್ಪಮಟ್ಟಿಗೆ ನಿರಾಸೆಯಾಗುವುದಂತೂ ಖಂಡಿತ! ನಡೆಯುವುದೇ ಹೆಚ್ಚು; ನೋಡಲು ಸಿಗುವ ಪ್ರಾಣಿಗಳೇ ಕಡಿಮೆ ಎನ್ನುವ ಭಾವನೆಯುಂಟಾಗುತ್ತದೆ.

ಗಾಜಿನ ಗೋಡೆಯ ಹಿಂದಿರುವ ಹುಲಿಗಳು

ಪ್ರಾಯಶಃ ವಿಶಾಲವಾದ ಪ್ರದೇಶದಲ್ಲಿ ಪ್ರಾಣಿಗಳನ್ನು ಬಿಟ್ಟಿರುವುದರಿಂದಲೂ ಹೀಗನ್ನಿಸುತ್ತದೆಯೋ ಏನೋ! ಎಷ್ಟೋ ಎಕರೆಗಳ ಯಾವುದೋ ಒಂದು ಮೂಲೆಯಲ್ಲಿ, ಮರದ ಮರೆಯಲ್ಲೋ, ಗಿಡಗಳ ಹೊದರಿನಲ್ಲೋ ಕಾಣ ಸಿಗುವ ಕೆಲವೇ ಕೆಲವು ಸಿಂಹ, ಹುಲಿ, ಆನೆ, ಚಿರತೆ, ಜಿರಾಫೆ, ಪಾಂಡಾ ಇವುಗಳನ್ನು ಹುಡುಕಲು ನಾವು ಸ್ವಲ್ಪ ಜಾಸ್ತಿ ಸಮಯವನ್ನೇ ತೆಗೆದುಕೊಳ್ಳುತ್ತೇವೆ.

ಆ ವಾತಾವರಣ ಪ್ರಾಣಿಗಳ ದೃಷ್ಟಿಯಿಂದ ಅವುಗಳಿಗೆ ಸ್ವಲ್ಪ ಆರಾಮದಾಯಕವೋ ಏನೋ.. ಅವುಗಳ ಪರಿಸರದ ಭ್ರಾಂತಿಯೇನಾದರು ಅವುಗಳಿಗೆ ದೊರಕುತ್ತದೆಯೋ ಏನೋ ಕಾಣೆ; ಆದರೆ ಬಂಧಿಯಾಗಿರುವುದು ಅರಮನೆಯಲ್ಲಾದರೂ, ಸೆರೆಮನೆಯಲ್ಲಾದರೂ ಅಷ್ಟೇ!! ಅರಮನೆಯಲ್ಲಿ ಒಂದಷ್ಟು ನಿರಾಳವಾಗಿ ಕಾಲಾಡಬಹುದು; ಸೆರೆಮನೆಯಲ್ಲಿ ಆ ಒಂದು ಕೋಶದಲ್ಲಿ ಮಾತ್ರ ಓಡಾಡಲು ಆಸ್ಪದ.  ಬಂಧನವೆನ್ನುವ ಭಾವನೆಯೇ ಒಂದು ಜೀವಿಯ ಮಾನಸಿಕ ಸ್ವಾತಂತ್ರ್ಯಕ್ಕೆ ತೊಡಿಸಿದ ಬೇಲಿಯಲ್ಲವೇ?!

ಸಫಾರಿ ಪ್ರಯಾಣದಲ್ಲಿ ಕಂಡ ಜಿರಾಫೆಗಳು

ಎಷ್ಟೋ ವಿಶೇಷವಾದ ಪ್ರಾಣಿಗಳನ್ನು ನೋಡಿದೆವೆಂದೇನೂ ಅನಿಸಲಿಲ್ಲ; ನಂತರ ಸಫಾರಿಯಲ್ಲಿ ಟ್ರಾಂನಲ್ಲಿ ಕುಳಿತು ಸಾಗಿದ ಹಾದಿಯಲ್ಲಿ ಇಕ್ಕೆಲಗಳಲ್ಲೂ ಇನ್ನೂ ವಿಸ್ತಾರವಾದ ಪ್ರದೇಶಗಳಲ್ಲಿ ಹರಡಿಕೊಂಡ ಹಲವು ಬಗೆಯ ಪ್ರಾಣಿಗಳನ್ನು, ಸಸ್ಯ ಪ್ರಭೇದಗಳನ್ನೂ ಕಂಡೆವು. ಟ್ರಾಂನಲ್ಲಿ ಬರುತ್ತಿದ್ದ ಮೃಗಾಲಯದ ಮಾರ್ಗದರ್ಶಕ ಆ ಪ್ರಾಣಿಗಳ ಬಗ್ಗೆ ವಿಶೇಷ ಮಾಹಿತಿಗಳನ್ನು ನೀಡುತ್ತಿದ್ದ. ಪ್ರಾಣಿ ಪ್ರಬೇಧಗಳ ವೈಶಾಲ್ಯತೆಯಲ್ಲದಿದ್ದರೂ, ಸ್ಥಳ ವೈಶಾಲ್ಯತೆಯಿಂದಾಗಿ ಈ ಮೃಗಾಲಯ ಜಗತ್ಪ್ರಸಿದ್ಧವಾಗಿರಬಹುದು!!

ಸಾಂತಾ ಮೋನಿಕಾ ಸಮುದ್ರದ ಸೇತುವೆ

ಬೆಳಗ್ಗೆ ತಿಂಡಿ ತಿಂದು ಸ್ಯಾಂಡಿಯಾಗೋವನ್ನು ಬಿಟ್ಟವರು, ಹನ್ನೊಂದು ಗಂಟೆಯ ವೇಳೆಗೆ ಲಾಸ್ ಏಂಜಲೀಸ್‌ನ ಸಾಂತಾ ಮೋನಿಕಾ ಸಮುದ್ರ ತೀರವನ್ನು ಸೇರಿದೆವು. ಅಗಾಧವಾದ ಪೆಸಿಫಿಕ್ ಮಹಾಸಾಗರ ಮತ್ತು ವಿಶಾಲವಾದ ಮರಳು ತೀರ.

ವಿಶೇಷತೆಯೆಂದರೆ ಆ ಮರಳ ತಡಿಯಲ್ಲೂ ವೀಲ್ ಚೇರನ್ನು, ಸಮುದ್ರವನ್ನು ಸಾಕಷ್ಟು ಹತ್ತಿರದಿಂದ ನೋಡಲು ಸಾಧ್ಯವಾಗುವಂತೆ ತಳ್ಳಿಕೊಂಡು ಹೋಗಲು ಅನುವಾಗುವಂತೆ ಕಬ್ಬಿಣದ ಒಂದು ಹಾದಿಯನ್ನು ನಿರ್ಮಿಸಿರುವುದು. ಇದರಿಂದ ನಾನು ಸಮುದ್ರವನ್ನು ಬಹಳ ಹತ್ತಿರದಿಂದ ವೀಕ್ಷಿಸಲು ಸಾಧ್ಯವಾಯಿತು.

ಇಲ್ಲೊಂದೇ ಅಲ್ಲ; ನಾವು ನೋಡಿದ ಎಲ್ಲ ಪ್ರೇಕ್ಷಣೀಯ ಸ್ಥಳಗಳಲ್ಲೂ ಆ ಜಾಗದವರೇ ಸಾಕಷ್ಟು ಗಾಲಿ ಕುರ್ಚಿಯ ವ್ಯವಸ್ಥೆಯನ್ನು ಮಾಡಿರುತ್ತಾರೆ. ಸರತಿಯಲ್ಲಿ ನಿಂತು ಈ ಕುರ್ಚಿಯನ್ನು ಪಡೆದುಕೊಳ್ಳಬಹುದು. ಸರತಿಯಲ್ಲಿ ನಿಲ್ಲುವ ವೇಳೆ ಉಳಿಸಲು ಕೆಲವರು ನಮ್ಮ ಹಾಗೆ ತಮ್ಮದೇ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರೆ.

ಗಾಲಿ ಕುರ್ಚಿಯಲ್ಲಿ ಕುಳಿತಿರುವವರಿಗೆ ಮತ್ತು ಜೊತೆಯವರಿಗೆ ಎಲ್ಲ ಪ್ರದರ್ಶನಗಳಲ್ಲೂ ಪ್ರಥಮ ಆದ್ಯತೆ. ಕೆಲವು ಕಡೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಗಳು ಸಹಾ ದೊರೆಯುತ್ತವೆ. ಇದನ್ನು ಯಾರ ಸಹಾಯವಿಲ್ಲದೆ ಕುರ್ಚಿಯಲ್ಲಿ ಕುಳಿತವರೇ ನಿಭಾಯಿಸಬಹುದು. ಇಂತಹ ಬ್ಯಾಟರಿ ಚಾಲಿತ ಗಾಲಿ ಕುರ್ಚಿಗಳನ್ನು ಪಾದಚಾರಿ ರಸ್ತೆಗಳಲ್ಲಿ ಸಹಾ ಆಗಾಗ ಕಾಣುತ್ತೇವೆ.

ಸಮುದ್ರದ ಮರಳ ತಡಿಯಲ್ಲಿ ಗಾಲಿ ಕುರ್ಚಿ ಸಾಗಲು ನಿರ್ಮಿಸಿರುವ ಹಾದಿ

ಕಾರಿನ ಮೇಲೆ ಅಂಗವಿಕಲರ ಚಿನ್ಹೆಯನ್ನು ಹಾಕಿಕೊಂಡಿರುವ ಕಾರುಗಳಿಗೆ, ಕಾರಿನ ನಿಲುಗಡೆ ಜಾಗದಲ್ಲಿ ಪ್ರವೇಶ ದ್ವಾರಕ್ಕೆ ಅತಿ ಹತ್ತಿರದಲ್ಲಿ ನಿಲುಗಡೆಯ ವ್ಯವಸ್ಥೆ ಇರುತ್ತದೆ. ಆ ನಿಲುಗಡೆಯ ಜಾಗವನ್ನು ಬೇರೆ ಯಾರಾದರೂ ಯಾವುದೇ ಕಾರಣಕ್ಕೆ ಅತಿಕ್ರಮಿಸಿದರೂ 250 ಡಾಲರ್‌ಗಳ ದಂಡ ತಪ್ಪಿದ್ದಲ್ಲ. ಬರಿಯ ಕಾರಿನ ನಿಲುಗಡೆಯಲ್ಲಷ್ಟೇ ಅಲ್ಲದೆ, ಇಂತಹ ಪ್ರೇಕ್ಷಣೀಯ ಸ್ಥಳಗಳಲ್ಲಿ ಇರುವ ಸಾರ್ವಜನಿಕ ಶೌಚಾಲಯಗಳಲ್ಲೂ ಅಲ್ಲಿ ಬರುವ ಪ್ರವಾಸಿಗರ ಸಂಖ್ಯೆಗೆ ತಕ್ಕಂತೆ ಒಂದೆರಡು ಶೌಚಾಲಯ ಕೋಶಗಳನ್ನು ಗಾಲಿ ಕುರ್ಚಿಯೊಂದಿಗೆ ಒಳಗೆ ಆರಾಮವಾಗಿ ತಳ್ಳುವಷ್ಟು ದೊಡ್ಡದಾದ ಕೋಶಗಳನ್ನು ನಿರ್ಮಿಸಿರುತ್ತಾರೆ.

ಕೆಲವೆಡೆ ಕುಟುಂಬ ಶೌಚಾಲಯಗಳ ಸೌಲಭ್ಯಗಳೂ ಇರುತ್ತದೆ. ಪುಟ್ಟ ಮಕ್ಕಳನ್ನು ಸಂಭಾಳಿಸುವವರಿಗೆ ಇದು ಅನುಕೂಲಕರ. ಪ್ರೇಕ್ಷಣೀಯ ಸ್ಥಳಗಳಲ್ಲೇನಾದರೂ ಎರಡೋ ಮೂರೋ ಅಂತಸ್ತು ಇದ್ದರೆ ಖಂಡಿತವಾಗಿಯೂ ಲಿಫ್ಟಿನ ವ್ಯವಸ್ಥೆ ಇರುತ್ತದೆ. ಕೆಲವೇ ಮೆಟ್ಟಿಲು ಹತ್ತುವಂತ ಕಡೆ ಗಾಲಿ ಕುರ್ಚಿ ತಳ್ಳುವ ಇಳಿಜಾರು ರಸ್ತೆಯನ್ನು ನಿರ್ಮಿಸಿರುತ್ತಾರೆ.

ಇಷ್ಟೊಂದು ಅನುಕೂಲತೆಗಳನ್ನು ಒದಗಿಸಿರುವುದರಿಂದ, ಇಲ್ಲಿ ಅಂಗವಿಕಲತೆ ಯಾರಿಗೂ ಶಾಪವೆನಿಸುವುದಿಲ್ಲ. ಅವರು ಸಮಾಜದ ಮುಖ್ಯವಾಹಿನಿಯೊಂದಿಗೆ ಎಲ್ಲ ಸ್ತರಗಳಲ್ಲೂ ಬೆರೆಯಲು, ಸೇರಲು ಅವಕಾಶವಿರುವುದರಿಂದ, ಅಂಗವಿಕಲತೆಯ ಕೀಳರಿಮೆ ಅವರನ್ನು ಹೆಚ್ಚಾಗಿ ಬಾಧಿಸುವುದಿಲ್ಲ. ಇಲ್ಲಿನ ಜನರೂ ಅವರ ಬಗ್ಗೆ ಅತಿಯಾದ ಕರುಣೆ ತೋರುವುದಾಗಲೀ, ಇಲ್ಲವೇ ಅವರಿಗೆ ಸಿಗುವ ಕೆಲವು ಸೌಲಭ್ಯಗಳ ಬಗ್ಗೆ ಈರ್ಷೆಯ ಮಾತುಗಳನ್ನಾಗಲೀ ಆಡದೆ, ತೋರದೆ ಅವರನ್ನು ತಮ್ಮಲ್ಲೊಬ್ಬರಾಗಿ ಕಂಡು ತಮ್ಮ ಕೈಲಾದ ಸಹಾಯ ಮಾಡುವುದರಿಂದ ಮನದಲ್ಲಿ ಮುಜುಗರ ಉಂಟಾಗುವುದಿಲ್ಲ. ಇಲ್ಲಿಗೆ ಬಂದ ಮೇಲೆ ನನಗೂ 25 ವರ್ಷಗಳ ಹಿಂದಿನ ಜೀವನದ ನಿರಾಳತೆಯ ಅನುಭವವಾಯಿತು.

ಸಾಗರ ತೀರ.. ದೂರದಿಂದ ಕಾಣುತ್ತಿರುವ ಸಾಂತಾಮೋನಿಕಾ ಪಿಯರ್

ಸಾಂತಾ ಮೋನಿಕಾ ಬೀಚ್‌ನಲ್ಲಿ ಒಂದಷ್ಟು ಸಮಯ ಕಳೆದಮೇಲೆ ಅಲ್ಲಿನ ಸಮುದ್ರ ಸೇತುವೆಯ ಮೇಲಿನಿಂದ ಸಮುದ್ರವನ್ನು ವೀಕ್ಷಿಸಲು ತೆರಳಿದೆವು. ಸಮುದ್ರ ತೀರದಿಂದ ಸಮುದ್ರದೊಳಗೆ ಒಂದು ಅರ್ಧ, ಮುಕ್ಕಾಲು ಕಿಲೋ ಮೀಟರ್‌ನಷ್ಟು ದೂರದವರೆಗೂ ಈ ಸೇತುವೆ ನಿರ್ಮಾಣವಾಗಿದೆ. ಸಾಕಷ್ಟು ವಿಶಾಲವಾಗಿದ್ದು, ಹಾದಿಯ ಎರಡೂ ಬದಿಯಲ್ಲೂ ಅಂಗಡಿ ಮುಂಗಟ್ಟುಗಳು, ಹೊಟೆಲ್‌ಗಳು, ಸ್ಟುಡಿಯೋಗಳು, ಕುರುಕು ತಿನಿಸುಗಳ ಅಂಗಡಿಗಳು, ಉಡುಗೊರೆಯಾಗಿ, ನೆನಪಿನ ಕಾಣಿಕೆಯಾಗಿ  ನೀಡಬಹುದಾದಂತ ಸಾಮಾನುಗಳ ಅಂಗಡಿಗಳು, ಮಕ್ಕಳ ಆಟಿಕೆಗಳ ಮಳಿಗೆಗಳು ಹಾದಿಯುದ್ದಕ್ಕೂ ಇವೆ.

ಮಧ್ಯೆ-ಮಧ್ಯೆ ಮಕ್ಕಳಿಗಾಗಿ ವಿವಿಧ ಮನರಂಜನೆಯ ಆಟಗಳು, ಜೈಂಟ್‌ವೀಲ್ ಇಂತಹ ರಂಜನೆಯ ಸ್ಥಳಗಳೂ ಇವೆ. ಇದಲ್ಲದೆ ಹಾವನ್ನು ಆಟವಾಡಿಸುವ, ವಿವಿಧ ಚಮತ್ಕಾರಗಳನ್ನು, ಕಸರತ್ತನ್ನು ತೋರುವ ಜನರಿಂದಲೂ ತುಂಬಿದೆ. ಈ ಹಾದಿಯನ್ನು ಸಾಂತಾ ಮೋನಿಕಾ ಪಿಯರ್ ಎಂದು ಕರೆಯುತ್ತಾರೆ.

ಇದೇ ಈ ಸಮುದ್ರ ತೀರದ ಆಕರ್ಷಣೆಯಾಗಿದ್ದು, ಬೋರ್ಡ್ವಾಕ್ ಎಂದರೆ ಈ ಸೇತುವೆಯ ಇಕ್ಕೆಲಗಳನ್ನೂ ನೋಡುತ್ತಾ ನಡೆಯುವುದೇ ಒಂದು ಮೋಜಿನ ವಿಷಯ. ನಮ್ಮಲ್ಲಿನ ಜಾತ್ರೆಗಳ ನೆನಪು ಬಂದರೆ ಅಚ್ಚರಿಯೇನಿಲ್ಲ. ಎಲ್ಲಕಡೆಯೂ ಮನರಂಜನೆಯನ್ನು ಬಯಸುವುದು ಮನುಷ್ಯನ ಸಹಜ ಸ್ವಭಾವ ಅಲ್ಲವೇ?!

ಹೀಗೇ ನಾವೂ ಈ ಹಾದಿಯನ್ನು ಸಾಗುತ್ತಾ, ಅಲ್ಲಲ್ಲಿ ನಿಂತು ಸಾಗರವನ್ನು ವಿವಿಧ ಕೋನಗಳಿಂದ ನೋಡುತ್ತಾ, ಕೆಲವು ನೆನಪಿನ ಕುರುಹುಗಳನ್ನು ಕೊಂಡುಕೊಂಡು, ಮಕ್ಕಳು ಸ್ಟುಡಿಯೋಗಳಲ್ಲಿ ವಿಶೇಷ ಪರಿಣಾಮಗಳ ಚಿತ್ರಗಳನ್ನು ತೆಗೆಸಿಕೊಂಡು, ಮನರಂಜನೆಯ ಆಟಗಳ ಮುಂದೆ ಒಂದಷ್ಟು ಹೊತ್ತು ಕಳೆದು ಊಟಕ್ಕೆ ಒಂದು ಕಡೆ ಸೇರಿದೆವು.

ಇಂತಹ ಸ್ಥಳಗಳಲ್ಲಿ ಪ್ರವಾಸಿಗರು ಕುಳಿತು ಊಟ ಮಾಡಲು ಎಲ್ಲ ಕಡೆಯಲ್ಲೂ ಒಂದಷ್ಟು ಕುರ್ಚಿ, ಮೇಜುಗಳ ಅನುಕೂಲವಿರುತ್ತದೆ. ಕಸ ಗುಡಿಸುವವರು ಆಗಾಗ ಬಂದು ಜಾಗವನ್ನು ಶುಚಿಗೊಳಿಸುತ್ತಾ ಇರುತ್ತಾರೆ. ಹತ್ತಿರದಲ್ಲೇ ಕೆಲವು ರೆಸ್ಟೋರೆಂಟುಗಳೂ ಇದ್ದು, ನಮಗೆ ಅಲ್ಲಿಂದ ಏನಾದರೂ ಬೇಕಿದ್ದಲ್ಲಿ ಅದನ್ನೂ ಕೊಂಡು ತಂದು ತಿನ್ನಬಹುದು.

ಶಾಖಾಹಾರಿ ಆಹಾರಗಳು ಅಷ್ಟಾಗಿ ಸಿಗುವುದಿಲ್ಲ. ಅದೇ ಬೇಕೆನ್ನುವವರು ತಮ್ಮ ತಮ್ಮ ವ್ಯವಸ್ಥೆಯನ್ನು ಮಾಡಿಕೊಂಡು ಹೋಗುವುದು ಒಳಿತು. ಇಲ್ಲವಾದರೆ, ಶಾಖಾಹಾರಿ ಪೀಜಾ಼, ಬ್ರೆಡ್ ಟೋಸ್ಟ್, ತರಕಾರಿಗಳ ಮತ್ತು ಹಣ್ಣುಗಳ ಸಲಾಡ್ ತಿಂದು ತೃಪ್ತರಾಗಬೇಕು. ಹಣ್ಣುಗಳ ಮತ್ತು ತರಕಾರಿಗಳ ಸಲಾಡ್‌ಗಳಲ್ಲಿ ಇಲ್ಲಿನದೇ ವಿಶಿಷ್ಟವಾದ ಕೆಲವು ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಸೇರಿಸಿರುವುದರಿಂದ ಒಂದು ರೀತಿಯಲ್ಲಿ ವಿಶೇಷವಾಗಿರುತ್ತದೆ. ನಮ್ಮೊಂದಿಗೆ ತಂದಿದ್ದ ಸರಕಿನೊಂದಿಗೆ ಒಂದಷ್ಟು ಇಲ್ಲಿನ ಪೀಜಾ಼, ಸಲಾಡ್‌ಗಳನ್ನು ತಿಂದು ನಮ್ಮ ಊಟ ಮುಗಿಸಿ ‘ಹಾಲಿವುಡ್’ ಕಡೆಗೆ ತೆರಳಿದೆವು.

 

(ಮುಂದುವರಿಯುವುದು)

‍ಲೇಖಕರು avadhi

October 11, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: