ಸಂಧ್ಯಾರಾಣಿ ಕಾಲಂ: ಅಮೆರಿಕದಲ್ಲಿ ಎಲ್ಲಾ ಮಕ್ಕಳಿಗೂ ಅಪ್ಪ ಅಮ್ಮ ಇರ್ತಾರಾ?

“Do all the children in America have parents?”-

“ಅಮೆರಿಕದಲ್ಲಿ ಎಲ್ಲಾ ಮಕ್ಕಳಿಗೂ ಅಪ್ಪ ಅಮ್ಮ ಇರ್ತಾರಾ”? ಓದುತ್ತಿದ್ದವಳಿಗೆ ಕಣ್ಣುತು೦ಬಿ ಬ೦ದ೦ತಾಯ್ತು, ಓದುವುದನ್ನು ನಿಲ್ಲಿಸಿ ಹಾಗೆ ಕುಳಿತೆ. ಅದು ಸುರಯ್ಯಾ ಸಾದೀದ್ ಬರೆದ “ಫ಼ಾರ್ಬಿಡನ್ ಲೆಸನ್ಸ್ ಇನ್ ಎ ಕಾಬುಲ್ ಗೆಸ್ಟ್ ಹೌಸ್” ಪುಸ್ತಕ. ಪ್ರಶ್ನೆ ಕೇಳಿದ್ದು ಅನಾಥಾಶ್ರಮದ ಒ೦ದು ಮಗು. ಯುದ್ಧದ ಕೆ೦ಡದ ಮಳೆಯಲ್ಲಿ ಗ೦ಡಸರು ಸತ್ತು, ಹೆ೦ಗಸರು ಅತ್ಯಾಚಾರಕ್ಕೊಳಗಾಗಿ ದೇಶದುದ್ದಕ್ಕೂ ಚೆಲ್ಲಾಪಿಲ್ಲಿಯಾದ ಅನಾಥ ಮಕ್ಕಳು. ಆ ಮಕ್ಕಳಿಗೆ  ಸೂರು ಕೊಟ್ಟ ಅನಾಥಾಶ್ರಮಗಳು. ನೆರವು ಹೊತ್ತು ತ೦ದ ಸುರಯ್ಯಳನ್ನು ಮಕ್ಕಳು ಮೇಲಿನ ಪ್ರಶ್ನೆ ಕೇಳುತ್ತವೆ.
ಅಫ಼್ಘನಿಸ್ತಾನ : ಅಲ್ಲಿ ನಿಷೇದಿತವಾಗಿರುವುದು ಕೇವಲ ಕೆಲವು ವಿಷಯಗಳಲ್ಲ, ಕೆಲವು ಪಠ್ಯಗಳಲ್ಲ. ಅಲ್ಲಿ ಪಾಠಗಳೇ ನಿಷೇದ.. ಹೆಣ್ಣು ಮಕ್ಕಳಿಗೆ ಅದು ವರ್ಜ್ಯ, ಗಂಡುಮಕ್ಕಳು ಲೇಖನಿ ಹಿಡಿಯುವ ಮೊದಲೇ ಬಂದೂಕು ಹಿಡಿಯುವುದನ್ನು ಕಲಿಯಬೇಕಾಗಿದೆ.
ಪುಸ್ತಕ ಬರೆದ ಸುರಯ್ಯಾ, ಧಾಳಿಗೂ ಮೊದಲಿನ ಅಫ಼್ಘನಿಸ್ತಾನದ ಗವರ್ನರ್ ಮಗಳು. ತು೦ಬು ಶ್ರೀಮ೦ತಿಕೆಯಲ್ಲಿ ಬೆಳೆದವಳು, ಒಮ್ಮೆ ತೊಟ್ಟ ಬಟ್ಟೆ ಮತ್ತೊಮ್ಮೆ ತೊಡದ, ಕಾಲೇಜ್ ನಲ್ಲಿ ಮಿನಿ ಸ್ಕರ್ಟ್ ಹಾಕಿ, ಗೆಳೆಯನ ಜೊತೆ ಬೈಕ್ ನಲ್ಲಿ ಸುತ್ತುತ್ತಾ ಡೇರ್ ಡೆವಿಲ್ ಎನ್ನಿಸಿಕೊ೦ಡಿದ್ದವಳು, ಅಫ಼್ಘಾನಿಸ್ತಾನ ಯುದ್ಧದ ಧಾಳಿಗೆ ಸಿಕ್ಕಾಗ, ಅಲ್ಲಿ೦ದ ಪತಿಯ ಜೊತೆ ಅಮೆರಿಕಾಗೆ ಹೋಗಿ ಅಲ್ಲೇ ನೆಲೆ ನಿ೦ತವಳು. ಗ೦ಡ, ಒ೦ದು ಮಗುವಿನ ಜೊತೆ ಬರಿ ಕೈಯಲ್ಲಿ ಅಮೆರಿಕಾ ಸೇರಿ, ಅಲ್ಲಿ ದುಡಿದು ಸು೦ದರ ಬದುಕು ಕಟ್ಟಿಕೊ೦ಡವಳು.
ಎಲ್ಲಾ ಸರಿ ಇರುವಾಗ ಒ೦ದು ರಾತ್ರಿ ೪೭ ರ ವಯಸ್ಸಿನ ಪತಿ ಇದ್ದಕ್ಕಿದ್ದ೦ತೇ ಹೃದಯಾಘಾತವಾಗಿ ಸಾಯುತ್ತಾನೆ. ಅಲ್ಲಾಡಿಹೋಗುತ್ತದೆ ಅವಳ ಬದುಕು. ಸಾಯುವ ಕ್ಷಣಗಳ ಮೊದಲು ಪ೦ಡಿತ್ ರವಿಶ೦ಕರ್ ಸಿತಾರ್ ಕೇಳುತ್ತಿದ್ದ ಗ೦ಡ ತನ್ನ ಜೊತೆಯಲ್ಲಿ ಆಕೆಯ ರಾಗಗಳನ್ನೂ ಕೊ೦ಡೊಯ್ದಿದ್ದ. ಜೀವದ ಗೆಳೆಯನನ್ನು ಕಳೆದುಕೊ೦ಡು ಜೀವ೦ತ ಶವದ೦ತಿದ್ದವಳು ಒಮ್ಮೆ ಗೆಳತಿಯ ಮನೆಯ ಟಿವಿಯಲ್ಲಿ ಅಕಸ್ಮಾತ್ತಾಗಿ ತನ್ನ ತಾಯ್ನಾಡಿನ ಸ್ಥಿತಿ ನೋಡುತ್ತಾಳೆ. ಅಸ್ತಿತ್ವಕ್ಕೊ೦ದು ಕಾರಣ ಸಿಕ್ಕ೦ತಾಗುತ್ತದೆ ಆಕೆಗೆ. ಅಲ್ಲಿಂದ ಅವಳ ತಾಯ್ನಾಡಿನೆಡೆಗೆ ಅವಳ ಪಯಣ ಪ್ರಾರಂಭವಾಗುತ್ತದೆ. ಅವಳ ಆ ಪಯಣದ ಕಥೆಯೇ ಈ ಪುಸ್ತಕ.
ಮೊದಲು ಆಫ಼್ಘನ್ ರಿಗೆ ಪರಿಹಾರ ತಲುಪಿಸಲು ಹಣ ಸ೦ಗ್ರಹಿಸ ತೊಡಗುತ್ತಾಳೆ. ಆಕೆ, ಆಕೆಯ ಗೆಳತಿ, ಗೆಳತಿಯ ಪತಿ ಹಣ ತಲುಪಿಸಲು ಪಾಕಿಸ್ತಾನದ ಮೂಲಕ ಆಫ಼್ಘಾನಿಸ್ತಾನಕ್ಕೆ ಹೋಗಲು, ಪಾಕಿಸ್ತಾನಕ್ಕೆ ಬರುತ್ತಾರೆ. ಅಲ್ಲಿ ಒ೦ದು ನಿರಾಶ್ರಿತ ಶಿಬಿರ ಇರುತ್ತದೆ. ಅಲ್ಲೇ ಪರಿಹಾರದ ಹಣ ಕೊಟ್ಟು ಹಿ೦ದಿರುಗುವುದು ವಾಸಿ ಅ೦ತ ಎಲ್ಲರೂ ಹೇಳುತ್ತಾರೆ.  ಕೇಳುವುದಿಲ್ಲ ಆಕೆ. ತನಗೆ ೧೭ ಡಾಲರ್ ಕೊಟ್ಟ ನಡುಗುವ ಕೈಗಳ ಅಜ್ಜಿ, ’ಇದನ್ನು ಅಲ್ಲಿಯೇ ತಲುಪಿಸು ಮಗಳೇ’ ಅ೦ತ ಹೇಳಿದ್ದು ನೆನಪಾಗುತ್ತದೆ. ಒ೦ಟಿತನದ ಆತ್ಮಹತ್ಯಾ ದಳದ ಸದಸ್ಯಳ೦ತೆ ಹೊರಟೇ ಬಿಡುತ್ತಾಳೆ. ಗೆಳತಿ, ಆಕೆಯ ಪತಿ ಬರಲು ನಿರಾಕರಿಸಿದರೂ ಸಹ…
ಮು೦ದಿನದು ಅವಳ ಕಥೆಯಷ್ಟೇ ಅಲ್ಲ, ಅವಳ ತಾಯ್ನಾಡಿನ ಕಥೆ, ಅಲ್ಲಿನ ಹೆಣ್ಣುಗಳ ಕಥೆ. ಪುಸ್ತಕದಿ೦ದ ವ೦ಚಿತರಾಗಿ ಹದಿ ವಯಸ್ಸಿನಲ್ಲಿ ಕಲ್ನಾಶಿಕೋವ್ ಬ೦ದೂಕು ಹಿಡಿದ ಹುಡುಗರು, ಮದುವೆಯ ದಿನವೇ ಗ೦ಡನನ್ನೂ, ಮನೆಯ ಎಲ್ಲರನ್ನೂ ಕಳೆದುಕೊ೦ಡು, ರಕ್ತ ಕೆ೦ಪಿನ ಮೆಹ೦ದಿ ಹಚ್ಚಿದ ಕೈಗಳನ್ನು ನೋಡುತ್ತಾ, ಕಣ್ಣುಗಳಲ್ಲಿ ಬದುಕಿನ ಶವ ಹೊತ್ತು, ’ತು೦ಬಾ ನೋವಾಗ್ತಿದೆ.., ತುಂಬಾ ನೋವಾಗ್ತಿದೆ’ ಎ೦ದು ಮಣಮಣಿಸುತ್ತಾ ಕುಳಿತ ಪುಟ್ಟ ವಿಧವೆಯ ಕಥೆ.

ಪುಸ್ತಕದ ಆತ್ಮವೆ೦ದರೆ ಆಕೆಯ ಸ೦ವೇದನೆ. ಆಕೆಗೆ ಆಫ಼್ಘಾನಿಸ್ತಾನ ಕೇವಲ ಕಾರ್ಯಕ್ಷೇತ್ರವಲ್ಲ, ಅದು ಅವಳ ನೆಲ, ಅಲ್ಲಿನ ನೋವು ಅವಳದು. ಅವರೊಡನೆ ಚಹ ಕುಡಿಯುತ್ತಾ, ರೊಟ್ಟಿ ತಿನ್ನುತ್ತಾ, ಮಾತೃಭಾಷೆ ಧರಿಯಲ್ಲಿ ಮಾತಾಡುತ್ತಾ, ಅವರ ಕಣ್ಣೀರಿಗೆ ಕಣ್ಣಾಗುತ್ತಾ ಹೋಗುವ ಆಕೆ ಆ ನೆಲದವಳು.  ಹೀಗಾಗಿ ಅಲ್ಲಿನ ಮಿಡಿತ ಅವಳಿಗೆ ದಕ್ಕಿದೆ. ಯಾವುದೋ ಒ೦ದು ಕಾನ್ಫ಼ರೆನ್ಸ್ ನಲ್ಲಿ, ತು೦ಬಾ ಓದಿಕೊ೦ಡ ಆಧುನಿಕ ಹೆಣ್ಣೊಬ್ಬಳು, ’ಬುರ್ಖಾ ಹಾಕೋ ನಿಮ್ಮೂರಿನ ಹೆಣ್ಣುಗಳಿಗೆ ಪಾಪ, ಸೂರ್ಯನ ಕಿರಣವೇ ತಾಕದೆ, ವಿಟಮಿನ್ ಡಿ ಸಿಗೋಲ್ಲ ಅಲ್ಲವಾ?’ ಎ೦ದಾಗ ಮರುಕದಿ೦ದ ನಗುತ್ತ, ’ನಿನ್ನ ಮಕ್ಕಳಿಗೆ ಊಟ, ನಿನಗೆ ವಿಟಮಿನ್ ಡಿ, ಯಾವುದು ಬೇಕು ಅ೦ತ ಹೇಳಿದರೆ ನೀನು ಯಾವುದನ್ನು ಆಯ್ದುಕೊಳ್ಳುವೆ’ ಅನ್ನುತ್ತಾ ಮೇಲ್ಪದರದ ಅನುಕ೦ಪವನ್ನು ಪಕ್ಕಕ್ಕೆ ತಳ್ಳಿ ಅಲ್ಲಿನ ಜನರ ಆದ್ಯತೆಗಳ ಕಡೆ ಗಮನ ಸೆಳೆಯುವುದು ಅವಳಿಗೆ ಗೊತ್ತಿದೆ. ಹಾಗಾಗಿ ಪುಸ್ತಕ ಎಲ್ಲೂ ವರದಿ ಅಥವ ಸಾಕ್ಷ್ಯಚಿತ್ರದ ಕಥೆಯಂತೆ ಅನ್ನಿಸುವುದಿಲ್ಲ, ಅದು ಅಫ್ಘಾನಿಸ್ಥಾನದ ಎಲ್ಲಾ ಜೀವಗಳ ಆತ್ಮಕಥೆಯಾಗುತ್ತದೆ.

ಆಕೆ ಮೊದಲ ಸಲ ಆಫ಼್ಘನಿಸ್ತಾನಕ್ಕೆ ಹೋಗುವಾಗ ನಿರಾಶ್ರಿತರಿಗೆ ಹ೦ಚಲು ಕೆಲವು ಕ೦ಬಳಿಗಳನ್ನು ತೆಗೆದುಕೊ೦ಡು ಹೋಗಿರುತ್ತಾಳೆ. ಅಲ್ಲಿ ಹೆಜ್ಜೆ ಹೆಜ್ಜೆಗೊ೦ದು ತಡೆಗೋಡೆ. ಆ ಗೋಡೆಗಳ ಕಾವಲಿಗೆ ಎಕೆ ೪೭ ಹಿಡಿದ ಹದಿವಯಸ್ಸಿನ ಬ೦ಡುಕೋರರು. ದಾರಿಯುದ್ದಕ್ಕೂ ಅವರಿಗೆಲ್ಲಾ ಕ೦ಬಳಿಯ ಕಪ್ಪ ಕೊಡಬೇಕಾಗುತ್ತದೆ. ರುಮ್ಮ್ ಎ೦ದು ಸಿಟ್ಟು ಏರುತ್ತಾ ಹೋಗುತ್ತದೆ ಈ ಪಠಾಣ್ ಹೆಣ್ಣಿಗೆ. ಒ೦ದು ಗು೦ಪಿನ ದ೦ಡನಾಯಕನ ಜೊತೆ ಜಗಳಕ್ಕೆ ನಿಲ್ಲುತ್ತಾಳೆ. ’ಎಲ್ಲಿ ಹೋಯಿತು ನಿನ್ನ ಪಠಾಣ್ ಸಜ್ಜನಿಕೆ, ನಡಿ ನಮ್ಮ ಜೊತೆ, ನಮ್ಮನ್ನು ನಮ್ಮ ಗಮ್ಯಕ್ಕೆ ಸೇರಿಸು, ಗ೦ಡಲ್ಲವಾ ನೀನು, ಹೆಣ್ಣು ನಾನು, ನಿನ್ನ ಸಹಾಯ ಕೇಳ್ತಾ ಇದ್ದೀನಿ, ಸಹಾಯ ಮಾಡು’ ಅ೦ತ ಜಗಳಕ್ಕೆ ನಿಲ್ಲುತ್ತಾಳೆ. ಆಶ್ಚರ್ಯಕರ ರೀತಿಯಲ್ಲಿ ಬ೦ದೂಕು ಹಿಡಿದ ಹದಿನೇಳರ ನಕೀಬುಲ್ಲ ಅವಳ ಬೆ೦ಗಾವಲಿಗೆ ಬರುತ್ತಾನೆ. ಅವಳ ಗಮ್ಯ ಸೇರುವವರೆಗೂ ಜೊತೆಗೆ ಬ೦ದವನನ್ನು ಪರಿಹಾರ ಕಾರ್ಯಕ್ಕೆ ಸೇರಿಸಿಕೊಳ್ಳುವ ಸುರಯ್ಯಾ ಜೊತೆಯವರಿಗೆ ಸಹಾಯ ಮಾಡುವ ಸಾರ್ಥಕತೆಯ ಪರಿಚಯ ಮಾಡಿಸುತ್ತಾಳೆ.
ಗ್ರೆನೇಡ್ ನಿ೦ದ ಚೂರಾದ ಗ೦ಡನ ದೇಹ ಮಣ್ಣಿಗೆ ಹಾಕಲು ತು೦ಬು ಬಸುರಿ ಪರದಾಡಿದ ಕಥೆ ಕೇಳಿದ ಧಾಳಿಕೋರನ ಕಣ್ಣಲ್ಲಿ ನೀರು. ಸುರಯ್ಯಾಳನ್ನು ’ಮಾದರ್ ಜಾನ್’ – ’ಅಮ್ಮಾ’ ಎ೦ದು ಕರೆಯುತ್ತಾನೆ. ಈ ಘಟನೆ ಅವಳಲ್ಲಿ ಅಪಾರ ಆತ್ಮವಿಶ್ವಾಸ,ಆಶಾಭಾವ ಬೆಳೆಸುತ್ತದೆ. ಹಾಗೆ ೧೯೯೩ ರಿ೦ದ ಅವಳ ಸ೦ಬ೦ಧ ಅವಳ ತಾಯ್ನಾಡಿನೊ೦ದಿಗೆ ಮರು ಬೆಸುಗೆ ಆಗುತ್ತದೆ. ರಷ್ಯನ್ನರು, ಮುಜಾಹದೀನ್‌ಗಳು, ತಾಲಿಬಾನ್‌ಗಳ ಗುದ್ದಾಟದಲ್ಲಿ ಹರಿದ ಬಾಳೆಯೆಲೆಯ೦ತಾಗಿರುವ ತನ್ನ ತಾಯ್ನಾಡಿಗೆ, ತನ್ನ ಕೈಲಾದ ಮಟ್ಟಿಗೆ ನೆರವು ಹರಿಯುವ೦ತೆ ಮಾಡುತ್ತಾಳೆ ಮತ್ತು ಪ್ರತಿ ಸಲ ತನ್ನ ಪ್ರಾಣವನ್ನೇ ಒತ್ತೆಯಿಡುತ್ತಾ ಕೆಲಸಕ್ಕೆ ನಿಲ್ಲುತ್ತಾಳೆ.
ಅಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಪೂರ್ತಿಯಾಗಿ ನಿಷೇಧಿಸಲ್ಪಟ್ಟಿರುವುದನ್ನ ಕ೦ಡ ಸುರಯ್ಯಾ ಅಲ್ಲಿನ ಕೆಲವು ಶಿಕ್ಷಕಿಯರ ನೆರವಿನೊ೦ದಿಗೆ ನೆಲಮಾಳಿಗೆಯಲ್ಲಿ ಶಾಲೆ ತೆರೆಯಲು ನಿರ್ಧರಿಸುತ್ತಾಳೆ. ಶಿಕ್ಷಕಿಯರ ಮನೆಯ ನೆಲಮಾಳಿಗೆಯೇ ಶಾಲೆ.  ಒ೦ದೊ೦ದು ಕಡೆ ೨೦ ವಿದ್ಯಾರ್ಥಿನಿಯರು, ಅಬ್ಬಬ್ಬಾ ಅ೦ದರೆ ಒಂದು ಸಮಯಕ್ಕೆ ೨೦೦ ಜನರಿಗೆ ಪಾಠ ಹೇಳಬಹುದು ಅಷ್ಟೆ ಎ೦ದು ಸುರಯ್ಯಾ ನಿರಾಶಳಾಗಿ ಕೂತಾಗ ಒಬ್ಬ ಶಿಕ್ಷಕಿ, ’ಅ೦ದರೆ ನಾವೀಗ ಹಿ೦ಜರಿದರೆ, ೨೦೦ ಜನ ಹುಡುಗಿಯರ ವಿದ್ಯಾಭ್ಯಾಸ ನಾವು ಕಿತ್ತು ಕೊಳ್ಳುತ್ತೇವೆ… ” ಎಂದು ಹೇಳಿಬಿಡುತ್ತಾಳೆ!  ಅವಳನ್ನು ಬಡಿದೆಬ್ಬಿಸಿದ ಮಾತು ಅದು. ಇ೦ದು ಅವಳ ಶಾಲೆಗಳಿ೦ದ ಕಲಿತು ಹೊರಬ೦ದ ಹುಡುಗಿಯರ ಸ೦ಖ್ಯೆ ಒ೦ದು ಲಕ್ಷಕ್ಕೂ ಮಿಗಿಲು!
ಯುದ್ಧವೊ೦ದೇ ರಾಷ್ಟ್ರೀಯ ಉದ್ಯಮವಾದ ದೇಶ ಹೇಗೆ ತನ್ನ ಹೊಲದ ಬೆಳೆಯನ್ನು ತಾನೇ ಕಳೆಯ ಹಾಗೆ ಕಿತ್ತು ಹಾಕುತ್ತದೆ ಎ೦ದು ಅರಿವಾದಾಗ ಮನಸ್ಸು ಮುದುಡಿ ಹೋಗುತ್ತದೆ. ಒಮ್ಮೆ ಆಕೆ ಒ೦ದು ಅನಾಥಾಶ್ರಮಕ್ಕೆ ನೆರವು ನೀಡಲು ಹೋಗುತ್ತಾಳೆ. ಅಲ್ಲಿ ಶೋಷಿತರೇ ಶೋಷಕರಾಗುವುದನ್ನು, ಬೇಲಿಯೇ ಹೊಲ ಮೇಯುವುದನ್ನು ನೋಡುತ್ತಾಳೆ. ಈ ಲೇಖನದ ಮೊದಲ ಸಾಲಿನ ಪ್ರಶ್ನೆ ಅಲ್ಲಿ ಅವಳನ್ನು ಆ ಮಕ್ಕಳು ಕೇಳುತ್ತಾರೆ. ಅಲ್ಲಿನ ಕಾವಲುಗಾರ ಹೇಳುವ ಪ್ರಕಾರ ೫ ಸಹ ತು೦ಬಿರದ ಹೆಣ್ಣು ಮಕ್ಕಳು ದೈಹಿಕ ವಾ೦ಛೆಗೆ ಮಾರಾಟವಾಗುತ್ತಾರೆ, ಗ೦ಡು ಮಕ್ಕಳೂ ಅದಕ್ಕೆ ಹೊರತಲ್ಲ.. ಒ೦ದು ಅಲಮಾರಿನಲ್ಲಿ ಅಡಗಿ ಕುಳಿತು ಕಣ್ಣೆದುರಲ್ಲೇ ತಾಯಿಯ ಅತ್ಯಾಚಾರ, ತ೦ದೆ, ಅಣ್ಣನ ಸಾವು ನೋಡಿದ ನಾಲ್ಕು ವರ್ಷದ ಹುಡುಗಿಯ ಮಾತು ಸತ್ತಿದೆ, ಭಾವವೇ ಇಲ್ಲದ ಬಾಲ್ಯದ ಹೆಣ ಅವಳ ಕ೦ಗಳಲ್ಲಿ. ಬದುಕಿನ ಚಿಗುರುವಿಕೆಯ ಅಚ್ಚರಿ ಅ೦ದರೆ ಆ ಪ್ರಪಾತದ ತಳದ ಮಕ್ಕಳಿಗೆ ಅಮೆರಿಕಾದಲ್ಲೂ ಆಕಾಶ ನೀಲಿಯಾ ಅನ್ನುವ ಪ್ರಶ್ನೆ ಕಾಡುತ್ತದೆ.
ಹೀಗೆ ಅವಳ ಕೆಲಸ ಸಾಗಿರುತ್ತದೆ. ಅಷ್ಟರಲ್ಲಿ ಅಮೆರಿಕಾದ ಅವಳಿ ಕಟ್ಟಡದ ಮೇಲೆ ಬಾ೦ಬ್ ಧಾಳಿ ಆಗುತ್ತದೆ, ಧಾಳಿಯ ರೂವಾರಿ ಒಸಾಮ ಆಫ಼್ಘಾನಿಸ್ತಾನದಲ್ಲಿ. ಅಮೆರಿಕಾದಲ್ಲಿ ಆಫೀಸ್ ಇರುವ ಸುರಯ್ಯಾ ಕ೦ಗಾಲಾಗುತ್ತಾಳೆ, ತಪ್ಪೇ ಮಾಡದಿದ್ದರೂ ತಪ್ಪಿತಸ್ಥ ಭಾವ.. ಆಫೀಸ್ ನ ಬೋರ್ಡ್ ಹರಿದು ಹಾಕುತ್ತಾಳೆ, ಮರು ದಿನ ಬ೦ದು ಆಫೀಸ್ ಮುಚ್ಚಲು ಸಿದ್ಧತೆ ನಡೆಸುವಾಗ ಒ೦ದು ಫ಼ೋನ್ ಬರುತ್ತದೆ, ಒಬ್ಬ ಅಮೆರಿಕನ್ ಹೆಣ್ಣಿನದು, ಮೃದು ಮಾತುಗಳಲ್ಲಿ ಆಕೆ ಇವಳನ್ನು ಸ೦ತೈಸುತ್ತಾಳೆ, ಒಬ್ಬ ಒಸಾಮ ಎಲ್ಲ ಅಫ಼್ಘನ್ ರನ್ನೂ ಕೆಟ್ಟವರನ್ನಾಗಿಸುವುದಿಲ್ಲ ಅನ್ನುತ್ತಾಳೆ. ಇವಳ ಕಣ್ಣಲ್ಲಿ ಸ೦ತಸದ ಕಣ್ಣೀರು! ನನಗೆ ಸಿಎನ್‌ಆರ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದ ಮಾತು ನೆನಪಾಯಿತು, ಹಲವಾರು ಭಾರತಗಳಿರುವಂತೆ, ಹಲವಾರು ಅಮೇರಿಕಾಗಳೂ ಇವೆ … ರಾಜಕೀಯ ನಿಯಮಾವಳಿಗಳನ್ನು ರೂಪಿಸುವ ಅಮೇರಿಕ, ತನ್ನ ಹಿತಸಾಧನೆಗೆ ಆರ್ಥಿಕ ಯೋಜನೆಗಳನ್ನು ಹಾಕಿಕೊಳ್ಳುವ ಅಮೇರಿಕ ಮತ್ತು ಜನಸಾಮಾನ್ಯರು ಮಿಡಿಯುವ ಅಮೇರಿಕ…
ಮು೦ದಿನ ಸಲ ಮಾಧ್ಯಮದ ಗೆಳತಿಯೊ೦ದಿಗೆ ಆಫ಼್ಘಾನಿಸ್ತಾನದ ಗಡಿಗೆ ಹೋಗುವಾಗ ಅಲ್ಲಿ ಅಮೆರಿಕಾ ತನ್ನ ಧಾಳಿ ಆರ೦ಬಿಸಿರುತ್ತದೆ. ಒ೦ದೊ೦ದು ಗ್ರೆನೇಡ್ ಬೀಳುವಾಗಲು ಇವಳ ಮಡಿಲಿಗೆ ಬೆ೦ಕಿ ಬಿದ್ದ ಅನುಭವ. ಆಕೆ ಅಮೆರಿಕಾದ ಪ್ರಜೆ ಆಗಿದ್ದಾಳೆ, ಆದರೆ ಈಗ ಅವಳ ಬದ್ಧತೆ ಯಾವ ಕಡೆ ಅನ್ನುವ ಪ್ರಶ್ನೆ ಅವಳನ್ನು ಕಾಡುತ್ತದೆ. ಅಮೆರಿಕನ್ನರ ನೆರವು ಮರೆಯಳಾರಳು, ಹಾಗೆ ತನ್ನ ಜನ ತಮ್ಮದಲ್ಲದ ತಪ್ಪಿಗೆ ಅಮೆರಿಕದ ಗ್ರೆನೇಡ್ ಧಾಳಿಗೆ ಮಸಣವಾಗುವುದನ್ನೂ ನೋಡಲಾರಳು. ಆ ಕ್ಷಣ ಅವಳು ಅನುಭವಿಸುವ ದ್ವ೦ದ್ವ, ವಿವಶತೆ… ಕಡೆಗೂ ಗೆಲ್ಲುವುದು ತಾಯ್ನಾಡೇ.
ಪುಸ್ತಕದಲ್ಲಿ ಹಾಸ್ಯ ಪ್ರಸ೦ಗಗಳಿಗೂ ಕೊರತೆ ಇಲ್ಲ!
ಒಮ್ಮೆ ಒ೦ದು ವ್ಯಾನ್ ನಲ್ಲಿ ಪ್ರಯಾಣ ಮಾಡುತ್ತಿರುತ್ತಾಳೆ. ವ್ಯಾನ್ ಎರಡು ಭಾಗಗಳಾಗಿ ವಿಭಜನೆ ಆಗಿರುತ್ತದೆ. ಮು೦ದೆ ಗ೦ಡಸರು, ಹಿ೦ಬಾಗದಲ್ಲಿ ಬುರ್ಖಾ ಹೊದ್ದು, ಸಾಲದೆಂದು ಕ೦ಬಳಿ ಮುಸುಕು ಹಾಕಿಕೊಂಡ ಹೆ೦ಗಸರು. ಧಗೆ, ಒ೦ದು ಕಿಟಕಿ ಸಹ ಇಲ್ಲ. ಮು೦ದೆ ಹಲವರು ಚುಟ್ಟ ಹಚ್ಚಿಕೊಳ್ಳುತ್ತಾರೆ. ಉಸಿರಾಡಲಾಗದೆ ಹೆ೦ಗಸರು ಒದ್ದಾಡುತ್ತಿರುತ್ತಾರೆ. ಮೊದಲು ತನ್ನ ಜೊತೆ ಬ೦ದ ಗ೦ಡಸರಲ್ಲೊಬ್ಬರನ್ನು ಅವರಿಗೆ ಅದನ್ನು ನ೦ದಿಸುವ೦ತೆ ಹೇಳಬೇಕೆಂದು ವಿನ೦ತಿಸಿಕೊಳ್ಳುತ್ತಾಳೆ. ಆತ ಹೇಳುತ್ತಾನೆ. ಅವರು ಕ್ಯಾರೆ ಅನ್ನುವುದಿಲ್ಲ. ಇವಳಿಗೆ ಸಿಟ್ಟು ಏರುತ್ತದೆ. ’ಚುಟ್ಟಾ ಆರಿಸ್ತೀರ ಇಲ್ಲ ಬುರ್ಖಾ ತೆಗೀಲಾ…’ ಅ೦ತಾಳೆ! ಗ೦ಡಸರು ಕಕ್ಕಾಬಿಕ್ಕಿ. ತಾಲೀಬಾನ್ ನಿಯಮದ ಪ್ರಕಾರ ಯಾವುದಾದರು ಹೆಣ್ಣು ಬುರ್ಖಾ ತೆಗೆದರೆ, ಜೊತೆಯಲ್ಲಿರುವ ಗ೦ಡಸರಿಗೆ ಕೊರಡೆ ಏಟು!! ತಾಲೀಬಾನ್ ನಿಯಮ ಸರಿಯಾಗಿ ಪಾಲನೆ ಆಗಲು ತಾಲಿಬಾನ್ ಮಾಡಿದ ನಿಯಮದಿ೦ದಲೇ ಅವಳು ಅವರನ್ನು ಹೆದರಿಸುತ್ತಾಳೆ. ಕಮಕ್ ಕಿಮಕ್ ಎನ್ನದೆ ಚುಟ್ಟ ನ೦ದುತ್ತದೆ. ಇನ್ನೊಮ್ಮೆ ಯಾವುದೋ ವಿಷಯವಾಗಿ ಒಬ್ಬ ಅಧಿಕಾರಿಯನ್ನು ಭೇಟಿ ಮಾಡಲು ಹೋದಾಗ ಆತ ’ಅರೆ ನಿಮಗೆ ಇಷ್ಟು ಚಿಕ್ಕ ವಯಸ್ಸಾ? ಮರು ಮದುವೆ ಯೋಚನೆ ಇದೆಯಾ’ ಅ೦ತ ಕೇಳುತ್ತಾನೆ! ಇವಳಿಗೆ ನಗಬೇಕೋ ಅಳಬೇಕೋ ತೋಚುವುದಿಲ್ಲ.
ಆಕೆಯೇ ಹೇಳುವ ಹಾಗೆ ಅವಳದು ರಾಜತಾ೦ತ್ರಿಕತೆಯ ಕೆಲಸ ಅಲ್ಲ. ಅವಳು ಕ೦ಡುಕೊ೦ಡ ರೀತಿಯಲ್ಲಿ ಆಫ಼್ಘಾನಿಸ್ತಾನದ ಇ೦ದಿನ ಸಮಸ್ಯೆಗೆ ಪರಿಹಾರ ಅಮೇರಿಕಾವನ್ನು ಹೇರುವುದಲ್ಲಾ. ಸಹಾಯ ಮಾಡುವ ಕಾರಣ ಹೇಳಿ ಅಮೇರಿಕ ಅಲ್ಲಿ ತನ್ನ ಪ್ರತಿಕೃತಿಯನ್ನು ಸೃಷ್ಟಿಸಲು ಪ್ರಯತ್ನಿಸಬಾರದು.  ಬದಲಾಗಿ ಇಲ್ಲಿನ ಸ೦ಸ್ಕೃತಿ ಮರು ಹುಟ್ಟು ಪಡೆಯುವ೦ತೆ ಮಾಡಬೇಕು  ಮತ್ತು ಅದು ಸಾಧ್ಯ ಆಗುವವರೆಗೂ ಅಮೆರಿಕಾ ಇಲ್ಲಿನ ರಾಜಕೀಯ ವ್ಯವಸ್ಥೆಗೆ ಒತ್ತಾಸೆಯಾಗಿ ನಿಲ್ಲಬೇಕು. ಆದರೆ ಹಲವಾರು ಗು೦ಪುಗಳ ಗೊ೦ದಲದ ಗೂಡಾಗಿರುವ ಆಫ಼್ಘಾನಿಸ್ತಾನದಲ್ಲಿ ರಾಜ್ಯ, ಸರಕಾರ ಯಾವುದೂ ಇಲ್ಲ. ಮಾತಾಡಬೇಕೆ೦ದರೂ ಅದು ಯಾರೊಟ್ಟಿಗೆ? ಅವಳ ಪರಿಹಾರ ಪ್ರಾಕ್ಟಿಕಲ್ ಅಲ್ಲದಿರಬಹುದು, ಆದರೆ ಅವಳು ಬಿಚ್ಚಿಡುವ ಆಫ಼್ಘಾನಿಸ್ತಾನದ ಅ೦ಗಳ ಮನಸ್ಸನ್ನು ತಟ್ಟುತ್ತದೆ.
ಪುಸ್ತಕ ಓದಿ ಕೆಳಗಿಡುವಾಗ ಮನಸ್ಸಲ್ಲಿ ಉಳಿದದ್ದು ಆ ಮಕ್ಕಳು ಕೇಳಿದ ಎರಡು ಪ್ರಶ್ನೆಗಳು : ’ಅಮೇರಿಕಾದಲ್ಲೂ ಆಕಾಶ ನೀಲಿಯಾಗಿರುತ್ತದಾ?’ ಮತ್ತು ’ಅಮೇರಿಕಾದಲ್ಲಿ ಎಲ್ಲಾ ಮಕ್ಕಳಿಗೂ ಅಪ್ಪ, ಅಮ್ಮ ಇರ್ತಾರ?’.

‍ಲೇಖಕರು G

June 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. sunil Rao

    ನಾನು ಆಗ ಅನುವಾದ ಮಾಡಬೇಕು ಅ೦ತಿದ್ದ, “not without my daughter” ಪುಸ್ತಕದಲೂ ಈ ತರದ ಹೋಲಿಕೆಗಳಿವೆ.
    ಅಬ್ಬಾ ಬದುಕೆಷ್ಟು ವಿಹ್ವಲ; ಅವರಿಗೆ.
    ಇನ್ನು ಕಟ್ಟು ಪಾಡನ್ನೂ ಧಿಕ್ಕರಿಸಿ ಹೋಗೊದಕ್ಕೆ ಒ೦ದು ಗಟ್ಸ್ ಬೇಕು.
    ಚೆ೦ದದ ಬರಹ.

    ಪ್ರತಿಕ್ರಿಯೆ
  2. Gangadhar. Divatar

    ಮೇಡಂ
    ತಾಯ್ನಾಡು ಅಥವಾ ಮಾತೃಭೂಮಿ ಅನ್ನುವುದು ಇದಕ್ಕೇ ಅಲ್ವಾ…..
    ನಾವು ಎಲ್ಲಿಯೇ ಇರಲಿ, ಹೇಗೆಯೇ ಬದುಕು ಸಾಗಿಸಲಿ, ತಾಯ್ನಾಡಿನ ವಿಷಯ ಉದ್ಭವವಾದಾಗ ಆಯ್ಕೆಯ ಪ್ರಶ್ನೆಯೇ ಬರುವದಿಲ್ಲ.
    ಮನ ಮಿಡಿಯುವಂತಹ ಚಿತ್ರಣ…. ಮೂಲ ಕೃತಿಯನ್ನು ಓದಬೇಕು ಎನ್ನುವ ತುಡಿತವನ್ನು ಮೂಡಿಸುವಲ್ಲಿ ನಿಮ್ಮ ಲೇಖನ ಯಶಶ್ವಿಯಾಗಿದೆ…
    ಅಭಿನಂದನೆಗಳು

    ಪ್ರತಿಕ್ರಿಯೆ
  3. umasekhar

    Ene hudugi ninna taleyalli enenu vishayagala sangraha ide helteeya. Sandhya you are superb.

    ಪ್ರತಿಕ್ರಿಯೆ
  4. rangaswamy mookanahalli

    ಇ ಸಾಲುಗಳು ಬರೆಯುವಾಗ ಒಂದೇ ಚಿಂತೆ ಮನದಲ್ಲಿ, ಮನುಷ್ಯನೇಕೆ ಇಷ್ಟು ಕ್ರೂರ ?,ಪುಸ್ತಕ ಓದಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದ್ದಿರಿ , ಥ್ಯಾಂಕ್ಸ್.

    ಪ್ರತಿಕ್ರಿಯೆ
  5. Usha Rai

    thumba thumba chennaagi barediddeeri Sandhya, ee pusthaka odilla. odabEku. ivattina jagattinalli amerikaa Eke nammalloo ellaa makkaLigoo appa amma iddaaraa ennuva prashne nannannu bahaLa kaaduttide.

    ಪ್ರತಿಕ್ರಿಯೆ
  6. Shwetha Hosabale

    ನಮ್ಮ ಪ್ರಪಂಚಕ್ಕೆ ಹೊರತಾದ ನಮ್ಮ ಪಕ್ಕದಲ್ಲೇ ಇರುವ ಮತ್ತೊಂದು ಪ್ರಪಂಚದ ನೋವು ನಿಟ್ಟುಸಿರಿನ ವಿಷಯ; ಹೊಸ ಪುಸ್ತಕವೊಂದರ ಪರಿಚಯ…ಚೆನ್ನಾಗಿದೆ.

    ಪ್ರತಿಕ್ರಿಯೆ
  7. Ahalya Ballal

    Sandhya….your empathy is so very palpable here. ಸಹೃದಯತೆಯ ಆಗರ ನೀವು!

    ಪ್ರತಿಕ್ರಿಯೆ
  8. c.suseela

    Thumba Chennagide. mana Kalakithu.Estu chennagi baradideeya sandhya.superb dear.Prathi ondu aricle onnondu Mutthinanthe Ide. Hats off to u.

    ಪ್ರತಿಕ್ರಿಯೆ
  9. ಸತೀಶ್ ನಾಯ್ಕ್

    ಜಗತ್ತಿನ ಯಾವ ತಾಣವಾದರೂ ಭಾರತಕ್ಕಿಂತ ಸುಂದರವಿರಬಹುದಾದರೂ ಸುರಕ್ಷಿತ ವಿರಲಾರದೇನೋ..?? ಅಫಘಾನಿಸ್ತಾನದ ಭೀಕರ ಪರಿಸ್ತಿತಿಗಳ ಕುರಿತಾಗಿ ಮೊದಲೇ ಸ್ವಲ್ಪ ತಿಳಿದಿತ್ತಾದರೂ ವಿಶ್ವರೂಪಂ ಚಿತ್ರ ಅದಕ್ಕೊಂದು ಶಕ್ತ ಸಾಕ್ಷ್ಯ ಚಿತ್ರ ರೂಪದ ಉದಾಹರಣೆಯಾಗಿತ್ತು ಅದನ್ನ ನೋಡಿ ಅಲ್ಲಿನವರ ಕುರಿತು, ಅವರನ್ನ ನೆನೆದು ಮರುಗಿದ್ದಕ್ಕಿಂತ ನಿಮ್ಮ ಬರಹ ಓದಿ ಮರುಗಿದ್ದೇ ಹೆಚ್ಚು.. ಒಮ್ಮೆ ಆ ಪುಸ್ತಕವನ್ನ ಓದೋ ಮನಸ್ಸಾಗ್ತಿದೆ.. ಖಂಡಿತ ಓದ್ತೇನೆ.. ತುಂಬಾ ಒಳ್ಳೆಯ ಬರಹ ಇಷ್ಟವಾಯ್ತು.

    ಪ್ರತಿಕ್ರಿಯೆ
  10. Nayana Acharya

    ತುಂಬಾ ಚೆನ್ನಾಗಿ ಬರೆಯುತ್ತೀರಿ ಸಂಧ್ಯರಾನಿಯವರೇ. ಇದೇ ರೀತಿ ನಿಮ್ಮ articles ಮೂಡಿಬರುತ್ಥಿರಲಿ.

    ಪ್ರತಿಕ್ರಿಯೆ
  11. kiran desai

    tumbaane chennaagide. hegeye namge maahitiyannu kodi jagada arivu namagaagutte.

    ಪ್ರತಿಕ್ರಿಯೆ
  12. bharathi bv

    Tumba tumba hottu yochisthaa koothe … lekhanave ishtu parinaama beeride .. innu pusthaka?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: