ಅಮೃತಾ ಹೆಗಡೆ ಅಂಕಣ- ’ಮಾಮಾ’ ಕಟ್ಟಿದ ಮಾತಿನ ಶಾಲೆ

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

10

ಇಲ್ಲಿಯ ತನಕ ನಮ್ಮ ಪಾಲಿಗೆ ’ಮೈಸೂರು’  ಎಂಬುದೊಂದು ಸುಂದರ ನಗರಿ. ಚೆಂದದ ಪ್ರವಾಸಿತಾಣ.  ಊಟಿಗೆ ಹೋಗುವಾಗ ಒಮ್ಮೆ, ಮಡಿಕೇರಿಗೆ ಹೋಗುವಾಗೊಮ್ಮೆ ಮೈಸೂರು ಸುತ್ತಿದ್ದೆವು. ಹಾಗೆ ಪ್ರವಾಸಿಗರಾಗಿ ಮೈಸೂರು ಸುತ್ತುವಾಗಲೂ, ಅಥರ್ವನಿಗಾಗಿ ಎರಡು ಮೂರು ಬಾರಿ ಮೈಸೂರಿನ ಆಯಿಶ್​ಗೆ ಬಂದು ಹೋದಾಗಲೂ,  ಕನಸುಮನಸಲ್ಲಿಯೂ ನಾವು ನೆನೆಸಿರಲಿಲ್ಲ ಮುಂದೊಂದು ದಿನ ಮೈಸೂರು ಎಂಬುದೊಂದು ನಮ್ಮ ಜೀವನದ ಭಾಗವಾಗಿಬಿಡುತ್ತದೆ ಎಂಬ ವಿಚಾರವನ್ನ. ಆದರೆ ಈ ಬಾರಿಯ ಮೈಸೂರು ಪ್ರಯಾಣ ಮಾತ್ರ ತೀರ ಹೊಸತಾಗಿತ್ತು. ಹೊಸ ಗುರಿಯೆಡೆಗೆ ಹೊರಟ ಈ  ಪ್ರಯಾಣದ ಆಯಾಮವೇ ಬದಲಾಗಿತ್ತು.

ಇಂದಿನ ಪ್ರಯಾಣಕ್ಕೆ ದೀಪಾಅಕ್ಕಾರ ಸಾಥ್​ ಬೇರೆ ಸಿಕ್ಕಿತ್ತಲ್ಲ, ಮುಂದೆ ನಾನು ಇಡಲಿರುವ ಹೆಜ್ಜೆಗಳನ್ನ ಇನ್ನಷ್ಟು ಗಟ್ಟಿಗೊಳಿಸುವ ಕೆಲಸವನ್ನು ಸ್ವತಃ ಅವರೇ ಸ್ವೀಕರಿಸಿದ್ದರು. ರೈಲು ಪ್ರಯಾಣದ ಅವಧಿಯಲ್ಲಿ ಮೈಸೂರಿನಲ್ಲಿರುವ ‘ಪಿ.ಏ.ಡಿ.ಸಿ’ ಎಂಬ ಕಿವುಡು ಮಕ್ಕಳ ವಿಶೇಷ ಶಾಲೆಯ ಬಗ್ಗೆ ಹೇಳುತ್ತಾ, ನನ್ನಲ್ಲಿ ಆತ್ಮವಿಶ್ವಾಸದ ಬೀಜ ಬಿತ್ತುತ್ತಾ ಇದ್ದರು ದೀಪಾ ಅಕ್ಕಾ. 

ಪಿ.ಎ.ಡಿ.ಸಿ ಸ್ಕೂಲ್​ ಶುರುವಾಗಿದ್ದು ಯಾವಾಗ ? ಕೇಳಿದ್ದೆ ನಾನು.  ಒಮ್ಮೆ ದೀಪಾ ಅಕ್ಕಾ ದೀರ್ಘ ಶ್ವಾಸ ತೆಗೆದುಕೊಂಡರು. ‘ಪಿ.ಎ.ಡಿ.ಸಿ ಸ್ಕೂಲ್​ನ ಹಿಂದೆ ದೊಡ್ಡ ಕಥೆಯೇ ಇದೆ. ಈ ಶಾಲೆಯನ್ನ ಹುಟ್ಟುಹಾಕಿದ್ದು ನಮ್ಮೆಲ್ಲರ ಪ್ರೀತಿಯ ಶ್ರೀನಿವಾಸ್​ ಮಾಮಾ. ಅವರ ಪ್ರಯತ್ನ ಇಲ್ಲದಿದ್ರೆ ಈ ಶಾಲೆ ಹುಟ್ಟುತ್ತಲೇ ಇರಲಿಲ್ಲ’ ಅಂದರು.

ನಾನು ಆ ಕಥೆಯನ್ನ ಕೇಳಲು ಉತ್ಸುಕಳಾದೆ. ‘ನಾವೆಲ್ಲ ಅವರನ್ನ ಶ್ರೀನಿವಾಸ್​ ಮಾಮಾ ಅಂತಲೇ ಕರೀತಿದ್ವಿ. ವಿಂಗ್​ ಕಮಾಂಡರ್​ ಕೆ.ಕೆ. ಶ್ರೀನಿವಾಸನ್​ ಎಂಬ ಮಹಾನುಭಾವರು ಅವರು’  ದೀಪಕ್ಕಾರ ಮುಖದಲ್ಲಿ ಧನ್ಯತಾ ಭಾವವಿತ್ತು. ‘ವಿಂಗ್ ಕಮಾಂಡರ್​ ಅಂದರೆ ಅವರು ಮಿಲಿಟರಿಯವರಾ…?’ ಆಶ್ಚರ್ಯದಿಂದ ಕೇಳಿದೆ. ‘ಹೌದು ಅಮೃತಾ, ಇಂಡಿಯನ್​ ಏರ್​ ​ ಫೋರ್ಸ್​​ನಲ್ಲಿ ವಿಂಗ್​ ಕಮಾಂಡರ್​ ಆಗಿದ್ದವರು. 

1961 ಇಂಡೋ ಚೈನೀಸ್​ ವಾರ್​, 1965ರ ಇಂಡೋ ಪಾಕಿಸ್ತಾನ್​ ಯುದ್ಧ, 1971ರ ಇಂಡೋ ಪಾಕಿಸ್ತಾನ್​ ಬಾಂಗ್ಲಾದೇಶ್​ ಸಮರದಲ್ಲಿ ಹೋರಾಡಿದ್ದ ಯೋಧರು ಅವರು.’ ಯುದ್ಧದ ಇಸವಿಯನ್ನೂ ನೆನಪಿಟ್ಟುಕೊಂಡು ಕರಾರುವಕ್ಕಾಗಿ ಹೇಳುತ್ತಿದ್ದ ದೀಪಕ್ಕಾ ಅವರ ತಿಳುವಳಿಕೆಯನ್ನ ಮನದಲ್ಲಿಯೇ ಮೆಚ್ಚಿದ್ದೆ. 

‘ವಾಯುಸೇನೆಯಲ್ಲಿ ಅಷ್ಟುದೊಡ್ಡ ಅಧಿಕಾರಿಯಾಗಿದ್ದ ಅವರು, ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ್ದೇ ತಮ್ಮ ಕಿವುಡು ಮಗನಿಗೋಸ್ಕರ.’ ಎಂದಿದ್ದೇ ‘ಒಂದ್​ ನಿಮಿಷ  ಇರು’ ಎನ್ನುತ್ತಾ ಎದ್ದು ನಿಂತು ಒಬ್ಬ ಹೆಣ್ಮಗಳನ್ನ ಕರೆದರು. ಅವಳ ಕೈಯ್ಯಲ್ಲೊಂದು ಅಳುತ್ತಿದ್ದ ಪುಟಾಣಿ ಕೂಸಿತ್ತು. ಅವರನ್ನ ತಮ್ಮ ಸೀಟ್​ನಲ್ಲಿ ಕೂರಿಸಿ, ತಾವು ನಿಂತರು. ನಾನೂ ಎದ್ದು ನಿಂತೆ. ನನ್ನ ಜಾಗದಲ್ಲಿ ಅವಳ ತಾಯಿಯೋ, ಅತ್ತೆಯೋ ಆಗಿರಬಹುದಾದ ವೃದ್ಧರು ಕುಳಿತರು. 

ದೀಪಕ್ಕಾ, ಶ್ರೀನಿವಾಸ ಮಾಮಾ ಅವರ ವೃತ್ತಿಗೆ ರಾಜಿನಾಮೆ ಕೊಟ್ಟ ವಿಚಾರ ಹೇಳುತ್ತಿದ್ದರಲ್ಲ, ನನ್ನ ಮನಸ್ಸೂ ಕೂಡ ನನ್ನ ವೃತ್ತಿಜೀವನದ ನೆನಪಿನತ್ತ ಹೊರಳಿತ್ತು. ಮಗುವಿಗೆ ಎರಡು ವರ್ಷವಾಗುತ್ತಿದ್ದಂತೆ, ಯಾವುದಾದರೊಂದು ಒಳ್ಳೆಯ ‘ಡೇ ಕೇರ್​’ ಹುಡುಕಿ, ಅಥರ್ವನನ್ನು ಸೇರಿಸಿಯೋ ಅಥವಾ ಊರಿಂದ ಯಾರನ್ನಾದರೂ ಕರೆಸಿಕೊಂಡೋ ನಾನು ಪುನಃ ನನ್ನ ವೃತ್ತಿಜೀವನವನ್ನು ಆರಂಭಿಸಬೇಕು ಎಂಬುದು ನನ್ನ ಲೆಕ್ಕಾಚಾರವಾಗಿತ್ತು.

ನಾನು ಮೊದಲು ಕೆಲಸ ಮಾಡುತ್ತಿದ್ದ ನ್ಯೂಸ್​ ಚಾನಲ್​ನ ನನ್ನ ಸಹೋದ್ಯೋಗಿಗಳು ಆಗಾಗ ಫೋನ್​ಮಾಡಿ, ‘ಮತ್ತೆ ಜಾಯ್ನ್​ ಆಗ್ತೀರಾ..? ಅಪಾರ್ಚುನಿಟಿ ಇದೆ’ ಅಂದಾಗ ನನಗೋ ಖುಷಿಯ ಸ್ವರ್ಗಕ್ಕೆ ಎರಡೇ ಗೇಣು..! ‘ಮಗೂಗೆ ಎರಡು ವರ್ಷವಾಗಲಿ ಮತ್ತೆ ಕೆಲಸಕ್ಕೆ ಜಾಯ್ನ್​ ಆಗ್ತೀನಿ’ ಅಂತ ಉತ್ತರಿಸುತ್ತಿದ್ದ ನನಗೆ, ಇನ್ನಾರೇ ಆರು ತಿಂಗಳಿಗೆ ಪುನಃ ನಾನು ಕೆಲಸ ಆರಂಭಿಸುತ್ತೇನೆ ಎಂಬುದನ್ನ ನೆನೆಸಿಕೊಂಡೇ ಖುಷಿಯಾಗಿತ್ತು.

ಈ ಬಾರಿ, ಪ್ರಿಂಟ್​ ಮೀಡಿಯಾ ಟ್ರೈ ಮಾಡಬೇಕು ಎಂಬ ಆಸೆ ಮನದಲ್ಲಿ. ಅದಕ್ಕೋಸ್ಕರ ರೆಸ್ಯೂಮ್​ ಕೂಡ ಸಿದ್ಧಗೊಳಿಸಿಟ್ಟಿದ್ದೆ. ವಿನಯ್​ ಕೂಡ ಆಫೀಸ್​ ಸಮಯವನ್ನ ಹೊಂದಿಸಿಕೊಳ್ತೀನಿ. ಹೇಗಾದರೂ ಮ್ಯಾನೇಜ್​ ಮಾಡೋಣ ಅಂದಿದ್ದ. ‘ಅಮೃತಾ.. ಎಲ್ಲಿದ್ದೀಯಾ…? ಏನು ಯೋಚನೆ ಮಾಡ್ತಾ ಇದ್ದೀಯಾ…?’ ದೀಪಾ ಅಕ್ಕಾ ಎಚ್ಚರಿಸಿದರು. ‘ಏನಿಲ್ಲ ಅಕ್ಕಾ. ನೀವು ಹೇಳಿ’ ಅಂದೆ. ಇಬ್ಬರೂ ಈಗ ನಿಂತಿದ್ದೆವು. 

‘ಶ್ರೀನಿವಾಸ ಮಾಮಾ ರತ್ನಾ ಐಯ್ಯಂಗಾರ್​  ಅವರನ್ನ ಮದುವೆಯಾಗಿ 10 ವರ್ಷಗಳ ನಂತರ 1970 ರಲ್ಲಿ ಹುಟ್ಟಿದ್ದ ರಾಜಾ, ಹುಟ್ಟು ಕಿವುಡು ಮಗುವಾಗಿದ್ದ. ಆ ಮಗುವಿಗೆ ಕಿವುಡು ಸಮಸ್ಯೆಯಿದೆ ಎಂಬುದು ತಿಳಿಯುತ್ತಿದ್ದಂತೆ ಅದೆಷ್ಟೋ ವೈದ್ಯರನ್ನ ಭೇಟಿಯಾಗಿ, ಕಿವುಡನ್ನು ಹೋಗಲಾಡಿಸುವ ಔಷಧದ ಬಗ್ಗೆ ವಿಚಾರಿಸಿದ್ದರು ಮಾಮಾ. ಆದರೆ ರಾಜಾಗಿದ್ದ ಈ ಹುಟ್ಟು ಕಿವುಡುತನವನ್ನ ಯಾವ ಔಷಧದಿಂದಲೂ ಹೋಗಲಾಡಿಸಲು ಸಾಧ್ಯವೇ ಇಲ್ಲ ಅನ್ನೋದು ತಿಳಿದಮೇಲೆ, ತಮ್ಮ ಈ ಕಿವುಡು ಮಗು ಎಲ್ಲರಂತೆ ಮಾತನಾಡಬೇಕು, ಎಲ್ಲ ಮಕ್ಕಳಂತೆ ಶಾಲೆಗೆ ಹೋಗಬೇಕು, ಸಾಮಾನ್ಯರಂತೆ ಬದುಕಬೇಕು ಎಂಬ ಕನಸು ಕಂಡರು. ಮತ್ತು ಆ ಕನಸಿನ ಸಾಕಾರಕ್ಕೆ ಅವನಿಗೆ ಮಾತು ಕಲಿಸೋ ಪ್ರಯತ್ನ ಶುರು ಮಾಡಿದ್ರು. ಆಗಲೇ ಅವರಿಗೆ ಗೊತ್ತಾಯ್ತು, ಮದ್ರಾಸ್​ನಲ್ಲಿ ಬಾಲವನ ಎಂಬ ಶಾಲೆ ಇದೆ, ಅಲ್ಲಿ ಕಿವುಡು ಮಕ್ಕಳಿಗೆ ಮಾತುಕಲಿಸುತ್ತಾರೆ ಎಂಬ ವಿಷಯ’. 

‘ಮ್ಯಾಡಮ್​, ಯಾರ್​ಬಗ್ಗೆ ಮಾತಾಡ್ತಾ ಇದ್ದೀರಾ ನೀವು..?’ ನಮ್ಮ ಪಕ್ಕದಲ್ಲಿ ನಿಂತಿದ್ದ ಸಹಪ್ರಯಾಣಿಕನೊಬ್ಬ ಕುತೂಹಲದಿಂದ ಕೇಳಿದ್ದ.  ಆಗಲೇ ನನಗೆ ತಿಳಿದಿದ್ದು, ನಮ್ಮ ಮಾತುಗಳನ್ನ ನಮ್ಮ ಸುತ್ತಮುತ್ತ ಇದ್ದ ಆರೆಂಟು ಜನ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಾ ಇದ್ದಾರೆ ಎಂಬ ವಿಷಯ. ದೀಪಕ್ಕಾ ಅದೆಷ್ಟು ರಸವತ್ತಾಗಿ ವಿವರಿಸುತ್ತಿದ್ದರೆಂದರೆ, ನಮ್ಮ ಹತ್ತಿರವಿದ್ದ ಎಲ್ಲ ಪ್ರಯಾಣಿಕರು ತಮ್ಮ ವೈಯಕ್ತಿಕ ಮಾತುಕತೆಗಳನ್ನೆಲ್ಲ ಬಿಟ್ಟು, ದೀಪಾರನ್ನೇ ಆಲಿಸಲು ಆರಂಭಿಸಿಬಿಟ್ಟಿದ್ದರು. ಒಂದೆರಡೇ ವಾಕ್ಯದಲ್ಲಿ ಪ್ರಶ್ನೆ ಕೇಳಿದವರಿಗೆಲ್ಲ ಉತ್ತರಿಸಿದ ದೀಪಾಅಕ್ಕಾ ನನ್ನೆಡೆ ತಿರುಗಿ ಮಾತು ಮುಂದುವರೆಸಿದರು.  

‘ಆ ‘ಬಾಲವನ’ ಎಂಬ ಶಾಲೆಯಲ್ಲಿ ‘ವುಡ್​ಫೋರ್ಡ್ ಓರಲ್​’ ಎಂಬ ಪದ್ಧತಿಯನ್ನ ಅನುಸರಿಸುತ್ತಿದ್ದರು.  ಕಿವುಡು ಮಕ್ಕಳಿಗೆ ಮಾತುಕಲಿಸುವ ವಿಶೇಷ ಪದ್ಧತಿ ಅದು. ಅದೇ ಶಾಲೆಯಲ್ಲಿ ರಾಜಾ ಎರಡು ವರ್ಷ ಅಭ್ಯಾಸ ಮಾಡಿದ. ಆದರೆ ಅಲ್ಲಿ ಪೋಷಕರಿಗೆ ಪ್ರವೇಶವಿರಲಿಲ್ಲ. ಶಿಕ್ಷಕರೇ ಕಿವುಡು ಮಕ್ಕಳಿಗೆ ಪಾಠ ಮಾಡ್ತಾ ಇದ್ರು.

ಡೈರಿಯಲ್ಲಿ ಶಿಕ್ಷಕರು ಬರೆದು ಕಳಿಸಿದ ಮನೆಪಾಠವನ್ನ ಯಥಾವತ್ತಾಗಿ ಮಕ್ಕಳಿಗೆ ಹೇಳಿಕೊಡುವುದು ಪೋಷಕರ ಜವಾಬ್ಧಾರಿಯಾಗಿತ್ತೇ ಹೊರತು, ಶಾಲೆಯೊಳಗೆ ಏನು ನಡೆಯುತ್ತೆ ಅನ್ನೋದು ಕಿವುಡು ಮಕ್ಕಳ ತಂದೆತಾಯಿಯರಿಗೆ ತಿಳಿಯುತ್ತಿರಲಿಲ್ಲ. ಶಿಕ್ಷಕರು ಸೂಚಿಸಿದಷ್ಟನ್ನು ಮಕ್ಕಳಿಗೆ ಕಲಿಸದಿದ್ದರೆ, ಆ ಮಗುವನ್ನು ಶಾಲೆಯೊಳಗೆ ಕರೆದುಕೊಳ್ಳುತ್ತಲೇ ಇರಲಿಲ್ಲವಂತೆ, ಅವರು ಹೇಳಿದಷ್ಟು ಕಲಿತ ಮೇಲೆಯೇ ಶಾಲೆಗೆ ಪ್ರವೇಶ..! ಇಂಥ ಕಠಿಣ ನಿಯಮಗಳಿದ್ದ ಶಾಲೆಯಾಗಿತ್ತು ಅದು” ಎಂದರು.  ಅಬ್ಬಾ ಅನ್ನಿಸಿತು ನನಗೆ. 

ರೈಲು ಮಂಡ್ಯ ಸ್ಟೇಶನ್​ನಲ್ಲಿ ನಿಂತಿತ್ತು. ಹಲವಾರು ಜನ ಇಳಿದು, ಕೆಲವೇ ಕೆಲವು ಜನ ಹತ್ತಿದರು. ನಮ್ಮ ಬೋಗಿ ಸ್ವಲ್ಪ ನಿರಾಳವಾಯಿತು. ನಮ್ಮಿಬ್ಬರಿಗೂ ಈಗ ಮತ್ತೆ ಕುಳಿತುಕೊಳ್ಳೋಕೆ ಸೀಟ್​ ಸಿಕ್ಕಿತ್ತು. ಆರಾಮಾಗಿ ಕುಳಿತೆವು.  ಅಲ್ಲಿದ್ದವರೆಲ್ಲ, ರೈಲಿನೊಳಗೆ ಮದ್ದೂರು ವಡೆ ಖರೀದಿಸಿ, ತಿನ್ನುತ್ತಿದ್ದರು. ರೈಲು ಹೊರಟಾಗ, ಬೋಗಿಯೊಳಗೆಲ್ಲ ವಡೆಯದೇ ಘಮಲು ತುಂಬಿತ್ತು. ಕಿಟಕಿಯನ್ನು ಸ್ವಲ್ಪ ತೆರೆದು, ರೈಲೊಳಗೆ ನುಗ್ಗಿದ ಹೊಸ ಗಾಳಿಯನ್ನ ಉಸಿರಾಡುತ್ತ ಹೇಳಿದರು ದೀಪಾಅಕ್ಕಾ’ ಎರಡೇ ಎರಡು ವರ್ಷಕ್ಕೇ, ರಾಜಾನನ್ನು ಅವನ ಕಲಿಕೆ ನಿಧಾನ ಎಂಬ ಕಾರಣ ಕೊಟ್ಟು ’ಬಾಲವನ’ ಶಾಲೆಯಿಂದ ಹೊರಹಾಕಲಾಗಿತ್ತು.

ಈ ಘಟನೆ ನಡೆದಿದ್ದೇ, ವಿಂಗ್​ ಕಮಾಂಡರ್​ ಹುದ್ದೆಗೆ ರಾಜಿನಾಮೆ ಕೊಟ್ಟು, ತಮ್ಮ ಹೆಂಡತಿ ಮತ್ತು ಮಗುವನ್ನು ಮದ್ರಾಸ್​ನಿಂದ ಮೈಸೂರಿಗೆ ಕರೆದುಕೊಂಡು ಬಂದರು ಕೆ.ಕೆ ಶ್ರೀನಿವಾಸನ್​ ತಮ್ಮ ಪತ್ನಿ ರತ್ನಾ, ಮೂಲತಃ ಮೈಸೂರಿನವರೇ ಆಗಿದ್ದ ಕಾರಣ, ಮೈಸೂರಿನಲ್ಲಿಯೇ ಮನೆ ಮಾಡಿ, ಗಂಡ ಹೆಂಡತಿ ಇಬ್ಬರೂ ಸೇರಿ ಛಲದಿಂದ ರಾಜಾಗೆ ಮಾತು ಕಲಿಸಿದ್ರು’ ನಾನಂತೂ ದೀಪಾಅಕ್ಕಾ ಮಾತುಗಳನ್ನೇ ಕೇಳುತ್ತಾ ಮೈಮರೆತಿದ್ದೆ. 

ನನ್ನ ಪಕ್ಕದಲ್ಲಿ ಕೂತಿದ್ದರಲ್ಲ ಅಜ್ಜಿ, ಅವರು ಮಾತನಾಡಿದರು ‘ನೋಡಮ್ಮ.. ಎಂಥಾ ದೊಡ್ಡ ತ್ಯಾಗ ಅವರದ್ದು..! ಕಿವುಡು ಮಗನಿಗೋಸ್ಕರ ತಮ್ಮ ಕೆಲಸವನ್ನೇ ಬಿಟ್ಟು ಬಂದ ಆ ಮಹಾನುಭಾವಂಗೆ ದೊಡ್ಡ ನಮಸ್ಕಾರ’ ಅಂದರು. ಅವರ ಆ ಮಾತು ನನಗೆ ಅನಿರೀಕ್ಷಿತವಾಗಿತ್ತು. ನಾನು ಅಜ್ಜಿಯ ಮುಖ ನೋಡಿ ಹೌದು ಅಂದೆ.   ದೀಪಾಅಕ್ಕಾ ಅವರತ್ತ ನೋಡುತ್ತಾ ಹೇಳಿದರು ‘ಅಮ್ಮಾ.. ಶ್ರೀನಿವಾಸ ಮಾಮಾ ಅವರದ್ದು ತ್ಯಾಗ ಅಲ್ಲ. ಅದನ್ನವರು ತಮ್ಮ ಕರ್ತವ್ಯ ಅಂತ ನಂಬಿದ್ದರು. ಹುಟ್ಟಿಸಿದ ಮಗುವಿಗೆ ಭವಿಷ್ಯ ಕೊಡೋದು ಹೆತ್ತವರ ಕರ್ತವ್ಯ ಅಲ್ವಾ..?’ ‘ಹಾ ಹೌದು ಕಂಡ್ರಿ. ನೀವು ಹೇಳಿದ್ದು ಸರಿ’ ಎಂದ ಆ ಅಜ್ಜಿ ದೀಪಾರನ್ನ ಕಣ್ಣಲ್ಲೇ ಒಪ್ಪಿದರು.   

ದೀಪಕ್ಕಾ ನನ್ನತ್ತ ತಿರುಗಿ ಗಟ್ಟಿಯಾಗಿ ಹೇಳಿದರು. ‘ತಮ್ಮ ಮಗು ಮಾತನಾಡಬೇಕು..! ಎಂಬುದೊಂದೇ ಅವರ ಜೀವನದ ಗುರಿಯಾಗಿತ್ತು ಅಮೃತಾ,  ಅದನ್ನೊಂದನ್ನು ಬಿಟ್ಟು ಬೇರೆ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಅವರು.  ಕಿವುಡು ಮಗುವಿಗೆ ಮಾತು ಕಲಿಸೋದು ಹೇಗೆ ಎಂಬುದನ್ನು ತಿಳಿಯುವುದಕ್ಕಾಗಿಯೇ ದೇಶ ದೇಶ ಸುತ್ತಿದರು. ಲಂಡನ್​, ಅಮೇರಿಕ ಎಲ್ಲೆಡೆ ಸುತ್ತಾಡಿ ಮಾಹಿತಿ ಪಡೆದು, ಅದನ್ನೆಲ್ಲ ರಾಜಾನ ಮೇಲೆ ಪ್ರಯೋಗಿಸಿ, ರಾಜಾಗೆ ಮಾತು ಕಲಿಸಿದರು. 

ಕಲಿಕೆಯಲ್ಲಿ ಅತೀ ಚುರುಕಾಗಿದ್ದ ರಾಜಾ ಸಾಮಾನ್ಯ ಶಾಲೆಗೆ ಸೇರಿ, ಸಾಮಾನ್ಯ ಮಗುವಿನಂತೆಯೇ ಅಭ್ಯಾಸ ಮಾಡಿದ್ದ. ಮುಂದೆ ರಾಜಾ ಇಂಜಿನಿಯರಿಂಗ್​ನ್ನೂ ಓದಿದ. ಈಗ ರಾಜಾ ಇರುವುದು ಅಮೇರಿಕದಲ್ಲಿ..!’ ದೀಪಾಅಕ್ಕಾರ ಕಣ್ಣುಗಳು ಹೊಳೆದವು. ನಾನು ನನ್ನ ಒದ್ದೆ ಕಣ್ಣುಗಳನ್ನು ಒರೆಸಿಕೊಂಡೆ.  

‘ಆಮೇಲೆ ಶ್ರೀನಿವಾಸನ್​ರತ್ನಾ ದಂಪತಿ ತಮ್ಮಂತೆಯೇ ಕಷ್ಟದಲ್ಲಿರುವ ತಂದೆತಾಯಿಯರಿಗೆ, ರಾಜಾನಂಥ ಕಿವುಡು ಮಕ್ಕಳಿಗೆ ಸಹಾಯ ಮಾಡೋಕೆ ನಿರ್ಧಾರ ಮಾಡಿದರು. ತಾವಿದ್ದ ಬಾಡಿಗೆ ಮನೆಯಲ್ಲಿಯೇ ಸಣ್ಣಪ್ರಮಾಣದಲ್ಲಿ ‘ವುಡ್​ಫೋರ್ಡ್​ಓರಲ್​’ ಪದ್ಧತಿಯಲ್ಲಿಯೇ ಕಿವುಡು ಮಕ್ಕಳಿಗೆ ಮಾತು ಕಲಿಸುವ ತರಗತಿಗಳನ್ನು ಆರಂಭ ಮಾಡಿದರು. ಆದರೆ ಇಲ್ಲೊಂದು ವಿಶೇಷವಿತ್ತು. ಒಂದು ಕಿವುಡು ಮಗುವಿಗೆ ಮಾತು ಕಲಿಸೋಕೆ, ಒಬ್ಬ ಶಿಕ್ಷಕರು ಬೇಕು ಅನ್ನೋದನ್ನ ಅನುಭವದಿಂದಲೇ ಅರ್ಥಮಾಡಿಕೊಂಡಿದ್ದರು ಮಾಮ.  ಪ್ರತಿಯೊಬ್ಬ ಮಗುವಿಗೂ ಒಬ್ಬೊಬ್ಬ ಶಿಕ್ಷಕರನ್ನ ಎಲ್ಲಿಂದ ತರುವುದು..? ಹೀಗಾಗಿ ಮಗುವಿನ ಜತೆ ಅದರ ಅಮ್ಮನನ್ನೂ ತರಗತಿಗೆ ಕರೆದರು.

ಮಗುವಿಗೆ ತಾಯಿಯೇ ಶಿಕ್ಷಕಿ..! ಮಾತು ಕಲಿಸುವ ತರಬೇತಿಯನ್ನು ಅಮ್ಮಂದಿರಿಗೆ  ನೀಡಿದರೇ ಉತ್ತಮ, ಮಗುವಿಗೆ ಮಾತು ಕಲಿಸುವ ಹಸಿವಿರುವುದು ತಾಯಿಗೆ ಮಾತ್ರ. ಎಂಥ ಅನಕ್ಷರಸ್ತ ಅಮ್ಮನಾದರೂ ಮಗುವಿಗೆ ಮಾತು ಕಲಿಸಿಯೇ ಕಲಿಸುತ್ತಾಳೆ. ಮಾತು ಕಲಿಸೋಕೆ ಯಾವುದೇ ಪದವಿ ಅಮ್ಮನಿಗೆ ಬೇಕಿಲ್ಲವಲ್ಲ’  ನನ್ನ ಮುಖ ನೋಡಿ ನಕ್ಕರು ದೀಪಾಅಕ್ಕಾ. ಶ್ರೀನಿವಾಸ ಮಾಮಾ ಅವರ ಈ ಸಾಧನೆಯ ಕಥೆ ನನ್ನಲ್ಲಿ ಅದ್ಯಾವುದೋ ಅವ್ಯಕ್ತ ಭಾವವನ್ನು ಹುಟ್ಟುಹಾಕಿತ್ತು. ಗುಟುಕು ನೀರು ಕುಡಿದೆ. 

ಮಾಮಾ ಅವರ ಕಥೆ ಮುಂದುವರಿಯುತ್ತಿತ್ತು. ‘ಮೊಟ್ಟ ಮೊದಲು ಈ ಶಾಲೆ ಆರಂಭವಾಗಿದ್ದು ಶ್ರೀನಿವಾಸ್​ಮಾಮಾ ಅವರ ಬಾಡಿಗೆ ಮನೆಯಲ್ಲಿಯೇ.  ನಾಲ್ಕೇ ನಾಲ್ಕು ಜನ ಕಿವುಡು ಮಕ್ಕಳೊಂದಿಗೆ ಆರಂಭವಾಗಿದ್ದ ತರಬೇತಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ನಿಧಾನವಾಗಿ ಜಾಸ್ತಿ ಆಗುತ್ತಿತ್ತು. ಹೀಗಾಗಿ ಮಾಮಾ ಮೈಸೂರಿನ ಸರಸ್ವತಿಪುರಂನಲ್ಲಿ ಸ್ವಂತ ಮನೆಯನ್ನು ಕಟ್ಟಿಸಿದ ನಂತರ, ಅವರ ಮನೆಯ ಗರಾಜ್​ ಮತ್ತು ಮೊದಲ ಮಹಡಿಯನ್ನು ಶಾಲೆಗಾಗಿ ಬಿಟ್ಟುಕೊಟ್ಟರು. ಹೀಗೆ 1980 ರಲ್ಲಿ ಅಧಿಕೃತವಾಗಿ ‘ಹೆಲೆನ್​ ಕೆಲ್ಲರ್​ ಇಂಟಿಗ್ರೇಟೆಡ್​ ಪ್ರೀ ಸ್ಕೂಲ್​” ಹೆಸರಿನಲ್ಲಿ ಕಿವುಡು ಮಕ್ಕಳ ಶಾಲೆ ಆರಂಭವಾಯಿತು. ನಾಲ್ಕಾರು ಪಾಲಕರೊಂದಿಗೆ ಮಾಮಾ ’ಪೇರೆಂಟ್ಸ್​ ಅಸೋಸಿಯೇಶನ್​ ಆಫ್​ ಡೆಫ್​ ಚಿಲ್ಡ್ರನ್​’ ಎಂಬ ಸಂಘವನ್ನೂ ಕಟ್ಟಿದರು.’  ದೀಪಾಅಕ್ಕಾ ಅವರ ಮಾತು ಕೇಳುತ್ತಿದ್ದ ಎಲ್ಲರ ಮುಖದಲ್ಲಿಯೂ ಮಂದಹಾಸ ಮೂಡಿತು. 

‘ಯಾರ ಮಗೂಗೆ ಕಿವುಡು ಇರೋದು..? ನಿಮ್ಮ ಮಗೂಗಾ..?’ ತನ್ನ ಕಂದನನ್ನು ನಿದ್ದೆ ಮಾಡಿಸಿ, ನಿರಾಳವಾಗಿದ್ದ ಆ ಹೆಣ್ಮಗಳು ನನ್ನ ಕೇಳಿದಳು., ನಾನು ಅವಳತ್ತ ತಿರುಗಿ ‘ಹೂಂ’ ಅಂದೆ’. ನನ್ನ ಮಗು ಕೂಡ ಇಲ್ಲೇ ಎಲ್ಲಾದರೂ ಇರಬಹುದು ಎಂಬಂತೆ ಕಣ್ಣಲ್ಲೇ ಹುಡುಕುತ್ತಿದ್ದ ಅವಳನ್ನ ನೋಡಿದ ದೀಪಕ್ಕಾ ‘ಈಗ ನಾವು ಆ ಸ್ಕೂಲ್​ನ ನೋಡೋಕೆ ಹೋಗ್ತಿದ್ದೀವಿ. ಇವತ್ತು ಮಗೂನ್ನ ಕರ್ಕೊಂಡ್​ ಬಂದಿಲ್ಲ’ ಅನ್ನುತ್ತಾ ಶಾಲೆ ಹುಟ್ಟಿದ ಕಥೆಯನ್ನ ಮುಂದುವರೆಸಿದರು.   

‘ಬಾಯಿಂದ ಬಾಯಿಗೆ ಪ್ರಚಾರ ಪಡೆಯುತ್ತಿದ್ದ ’ಹೆಲೆನ್​ ಕೆಲ್ಲರ್​ ಇಂಟಿಗ್ರೇಟೆಡ್​ ಪ್ರೀ ಸ್ಕೂಲ್​’ಗೆ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ,  ಶ್ರೀನಿವಾಸ ಮಾಮಾ ಅವರ ಮನೆಯಲ್ಲಿ ಶಾಲೆ ನಡೆಸುವುದು ಕಷ್ಟವಾಯಿತು. ಹೀಗಾಗಿ ಪೇರೆಂಟ್ಸ್​ ಅಸೋಸಿಯೇಶನ್​, ಶಾಲೆ ಕಟ್ಟುವುದಕ್ಕಾಗಿ ಜಾಗ ಮಂಜೂರು ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ವನ್ನ ಕೋರಿತು. ಅಸೋಸಿಯೇಶನ್​ನ ಸತತ ಪ್ರಯತ್ನದಿಂದ ಮೈಸೂರಿನ ಭೋಗಾದಿ ಎರಡನೇ ಹಂತದಲ್ಲಿರುವ ಜನತಾ ನಗರದಲ್ಲಿ ಜಾಗ ಮಂಜೂರಾಯಿತು.

ಹಲವಾರು ದಾನಿಗಳ ಸಹಾಯದಿಂದ ಮೂರು ತರಗತಿ ಕೊಠಡಿಗಳನ್ನು ಕಟ್ಟಿಸಿದ ಮಾಮಾ, 1993ರ ಡಿಸೆಂಬರ್​ರಂದು ಶಾಲೆಯ ಅಧಿಕೃತ ಕಟ್ಟಡವನ್ನು ಉದ್ಘಾಟಿಸಿದರು.’ ‘ನಾವೀಗ ಹೋಗುತ್ತಿರುವುದು ಅಲ್ಲಿಗೆ ಅಲ್ವಾ..?’ ಕೇಳಿದೆ ನಾನು. ‘ಹಾ… ಹೌದು. ಇನ್ನರ್ಧಗಂಟೆಯೊಳಗೇ ಮೈಸೂರು ತಲುಪುತ್ತೆ ರೈಲು. ಕಿಟಕಿಯಾಚೆ ಗಮನಿಸುತ್ತಾ ಹೇಳಿದರು ದೀಪಾಅಕ್ಕ. 

ಅದಾಗಲೇ ರೈಲು ಶ್ರೀರಂಗಪಟ್ಟಣ ದಾಟಿತ್ತು. ಮೈಸೂರು ಹತ್ತಿರ ಬಂದಂತೆ ಕುಳಿತ ಜನರೆಲ್ಲರಲ್ಲಿಯೂ ಚಟುವಟಿಕೆ ಶುರುವಾಗಿತ್ತು. ಮೊಬೈಲ್​ನೋಡುತ್ತಿದ್ದವರೆಲ್ಲ ಮೈಬೈಲ್​ನಿಂದ ಕಣ್ಣೆತ್ತಿ ಒಮ್ಮೆ ಕಿಟಕಿಯಾಚೆ ನೋಡಿದರು, ಕುಳಿತಿದ್ದವರೆಲ್ಲ ಸ್ವಲ್ಪ ಮೈ ಮುರಿದು ಶರೀರ ಸಜ್ಜುಗೊಳಿಸುತ್ತಿದ್ದರು. ಇನ್ಕೆಲವರು ಕೆಳಗಿಟ್ಟ, ಮೇಲಿಟ್ಟ ತಮ್ಮ ಬ್ಯಾಗ್​ಗಳನ್ನೆಲ್ಲ ತೆಗೆದು ಅಣಿಗೊಳಿಸುತ್ತಿದ್ದರು. ನಿಂತಿದ್ದವರೆಲ್ಲ ನಿಂತಲ್ಲೆ ಚಡಪಡಿಸುತ್ತಿದ್ದರು, ಅಜ್ಜಿ,ತಾಯಂದಿರು ನಿದ್ದೆ ಮಾಡಿದ್ದ ಮಕ್ಕಳನ್ನು ಏಳಿಸುತ್ತಿದ್ದರು.

ಕೆಲವು ಜನ ಮತ್ತೆ ಟಾಯ್​ಲೆಟ್​ನ ಮುಂದೆ ಕ್ಯೂ ನಿಂತರು. ಬೋಗಿಯೊಳಗಿರುವ  ಜನರೆಲ್ಲ ಮೈಸೂರಲ್ಲಿ ಇಳಿಯಲು ಚುರುಕಾಗಿದ್ದರು. ಮೈಸೂರು ಹತ್ತಿರ ಹತ್ತಿರವಾಗುತ್ತಿದ್ದಂತೆ ನನ್ನೊಳಗೂ ತವಕದ ಅಲೆಗಳೆದ್ದವು. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: