ಕೆ ನಲ್ಲತಂಬಿ ಸರಣಿ- ಹಿಮದ ಬೆಲೆ

ಮೂಲ: ಎಸ್ ರಾಮಕೃಷ್ಣ 

ಕನ್ನಡಕ್ಕೆ: ಕೆ ನಲ್ಲತಂಬಿ 

3

ಇಂದು ಮನೆಮನೆಗಳಲ್ಲಿ ರೆಫ್ರಿಜಿರೇಟರ್-ನಲ್ಲಿ ಐಸ್ ತಯಾರಿಸಿಕೊಳ್ಳುತ್ತೇವೆ; ಗಲ್ಲಿ ಗಲ್ಲಿಗಳಲ್ಲಿ ಐಸ್ಕ್ರೀಮ್ ಅಂಗಡಿಗಳಿವೆ. ಐಸ್ ಗೆಡ್ಡೆಗಳ ಹಿಂದೆಯೂ ಸಹ ಕರಗದ ಇತಿಹಾಸ ಒಂದಿದೆ. ಗೊತ್ತೇ? 

175 ವರ್ಷಗಳ ಹಿಂದೆ, ಒಬ್ಬ ಸಾಮಾನ್ಯ ಮನುಷ್ಯ ಐಸ್ ಗೆಡ್ಡೆಯನ್ನು ಕೊಂಡುಕೊಳ್ಳಬೇಕೆಂದರೆ, ಅವನು ಡಾಕ್ಟರ್ ಸರ್ಟಿಫಿಕೇಟ್ ತೆಗೆದುಕೊಂಡು ಹೋಗಬೇಕು. ಐಸ್ ಗೆಡ್ಡೆಗಳು ಅಷ್ಟು ಸುಲಭವಾಗಿ ದೊರಕದು. ವೈದ್ಯರಿಗೆ, ಪ್ರಭುಗಳಿಗೆ ಮಾತ್ರ ಐಸ್ ವಿನಿಯೋಗ ಮಾಡಲಾಗುತ್ತಿತ್ತು. ಅದೂ ಸಹ ಅಮೇರಿಕದಿಂದ ಆಮದು ಮಾಡಿಕೊಂಡ ಐಸ್. 

ಭಾರತಕ್ಕೆ ಐಸ್ ಪರಿಚಯವಾದುದರ ಹಿಂದೆ ಬಹಳ ದೊಡ್ಡ ಕಥೆ ಇದೆ. ಚೆನ್ನೈಯಲ್ಲಿ ವಾಸಿಸುವ ಹಲವರಿಗೆ ಸಮುದ್ರ ತೀರದ ಹೆದ್ದಾರಿಯಲ್ಲಿರುವ ‘ವಿವೇಕಾನಂದರ್ ಇಲ್ಲಮ್’ ತಿಳಿದಿರಬಹುದು. ಆ ಜಾಗವನ್ನು ಇಂದು ‘ಐಸ್ ಹೌಸ್’ ಎಂದು ಕರೆಯುತ್ತಾರೆ. ಅದೇನು ಐಸ್ ಹೌಸ್? ಅಲ್ಲಿ ಯಾರು ಐಸ್ ಮಾರಾಟ ಮಾಡಿದ್ದು? ಯಾವಾಗ ಆ ವ್ಯಾಪಾರ ನಡೆಯಿತು? 

ಭಾರತಕ್ಕೆ ಐಸ್ ಗೆಡ್ಡೆಗಳು ಪರಿಚಯವಾದುದರ ಪರಿಣಾಮ…. ಅದು ಬರೀ ತಂಪಿಗೆ ಸಂಬಂಧಪಟ್ಟದ್ದಾಗಿ ಮಾತ್ರ ಉಳಿಯಲಿಲ್ಲ. ಅದು ಭಾರತೀಯರ ಮನಸ್ಥಿತಿಯನ್ನು ಬಹಳ ಬದಲಾಯಿಸಿತು. ಆ ಬದಲಾವಣೆಯ ಅತಿರೇಖವೇ ಇಂದು ತಂಪು ನೀಡುವ ಸಾಧನಗಳಿಲ್ಲದೇ ಹೆಚ್ಚಿನ ಸಂಖ್ಯೆಯ ಭಾರತೀಯರಿಂದ ನಿದ್ರೆ ಮಾಡಲು ಸಾಧ್ಯವಿಲ್ಲ. ಕಾರ್ಯಾಲಗಳಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ತಂಪಿಲ್ಲದ ಪಾನೀಯಗಳನ್ನು ಕುಡಿಯಲು ಆಗುತ್ತಿಲ್ಲ. ತಂಪಾಗಿಲ್ಲದ ಎಲ್ಲವನ್ನೂ ದ್ವೇಷಿಸುವ ಪರಿಸ್ಥಿತಿಗೆ ಬದಲಾಗಿದೆ. 

ಪರಂಗೀಯರಿಗೆ ತೋರಿದಂತೆಯೇ ನಮಗೂ ಭಾರತದ ಬಿಸಿಲು ಉರಿಯುಂಟುಮಾಡುತ್ತದೆ. ಈ ಮನಸ್ಥಿತಿಯ ಬದಲಾವಣೆಯ ಬೇರು, ಅಮೇರಿಕಾದಿಂದ ಕಲ್ಕತ್ತಾಗೆ ಐಸ್ ದಿಮ್ಮಿಗಳು ಬಂದಿಳಿದ ಸೆಪ್ಟಂಬರ್ 14, 1833 ರಿಂದ ಪ್ರಾರಂಭವಾಯಿತು. 

ಅಮೇರಿಕದ ಬಾಸ್ಟನ್ (Boston) ನಗರದಲ್ಲಿ ಪ್ರಕೃತಿದತ್ತವಾಗಿ ಸೃಷ್ಟಿಯಾದ ಹಿಮದ ಬಂಡೆಗಳನ್ನು ಕತ್ತರಿಸಿ ತೆಗೆದು ಭಾರತಕ್ಕೆ ಕಳುಹಿಸಿ, ವರ್ಷಕ್ಕೆ ಎರಡು ಲಕ್ಷ ಡಾಲರ್ ಹಣ ಸಂಪಾದಿಸಿದ ಫ್ರೆಡರಿಕ್ ಟೂಡರಿನ (Frederic Tudor) ಕಥೆ, ಭಾರತದ ಇತಿಹಾಸದಲ್ಲಿ ಮರೆಯಲಾಗದ ಒಂದು. ಜನವರಿ ತಿಂಗಳು ಅಮೇರಿಕದಲ್ಲಿರುವ ಕೊಳಗಳು, ಕೆರೆಗಳು ಹೆಪ್ಪುಗಟ್ಟಿ ಮಂಜಿನ ಗೆಡ್ಡೆಗಳಾಗುತ್ತವೆ. ವೃಥಾ ಬಿದ್ದಿರುವ ಆ ಮಂಜಿನ ಗೆಡ್ಡೆಗಳನ್ನು ಕಡಿದು ತೆಗೆದು ಹಡಗಿನಲ್ಲಿ ವಿದೇಶಗಳಿಗೆ ಕಳುಹಿಸಿ, ಒಂದು ಹೊಸ ವ್ಯಾಪಾರವನ್ನು ಪ್ರಾರಂಭಿಸಬಹುದಲ್ಲ ಎಂಬ ಆಲೋಚನೆ, ಟೂಡರಿಗೆ ಉಂಟಾಯಿತು.

ವೆಸ್ಟ್ ಇಂಡೀಸ್ ದ್ವೀಪಗಳಿಗೆ ಐಸ್ ಕಳುಹಿಸುವ ಧಂದೆಯನ್ನು ಪ್ರಾರಂಭಿಸಿದನು. ಆದರೇ, ಅವನು ಅಂದುಕೊಂಡಂತೆ ಐಸ್ ದಿಮ್ಮಿಗಳು ಕರಗಿ ಹೋಗದಂತೆ ಹಡಗಿನಲ್ಲಿ ಸಾಗಿಸಲು ಸಾಧ್ಯವಾಗಲಿಲ್ಲ. 100 ಟನ್ ಐಸ್ ದಿಮ್ಮಿಗಳನ್ನು ಹಡಗಿನಲ್ಲಿ ಕಳುಹಿಸಿದರೆ, ಹೋಗಿ ತಲುಪುವಾಗ ಅದರಲ್ಲಿ 80 ಟನ್ ಕರಗಿಹೋಗಿರುತ್ತಿತ್ತು. ಆದ್ದರಿಂದ, ಮಂಜಿನ ದಿಮ್ಮಿಗಳು ಕರಗದಿರುವಂತೆ ಒಣಹುಲ್ಲು ಸುತ್ತಿ ಮರದ ಪೆಟ್ಟಿಗೆಯಲ್ಲಿ ಕಳುಹಿಸುವುದಕ್ಕೆ  ತೊಡಗಿದನು. ಹಾಗೂ ಅರ್ಧ ಐಸ್ ಕರಗಿಹೋಗುತ್ತಿತ್ತು. 

1830ನೇಯ ಇಸವಿಯಲ್ಲಿ ಐಸ್ ದಿಮ್ಮಿಗಳನ್ನು ಮಾರುವುದಕ್ಕೆ ಬದಲಾಗಿ ಕಾಫೀ ವ್ಯಾಪಾರದಲ್ಲಿ ತೊಡಗಿ ಕೊಂಡ ಟೂಡರ್ ದೊಡ್ಡ ನಷ್ಟವನ್ನು ಎದುರುಗೊಳ್ಳಬೇಕಾಯಿತು. ಎರಡು ಲಕ್ಷಕ್ಕೂ ಹೆಚ್ಚಿನ ಡಾಲರ್ ಅವನಿಗೆ ಸಾಲವಾಯಿತು. ಆ ಸಾಲವನ್ನು ಹಿಂತಿರುಗಿಸಿ ಕೊಡಲಾಗದ ಅವನ ಮೇಲೆ ಸಾಲಗಾರರು ಮೊಕದ್ದಮೆ ಹೂಡಿದರು. ಜೈಲು ಸೇರಬೇಕಾಯಿತು. ಅದರಿಂದ ತಾತ್ಕಾಲಿಕವಾಗಿ ಹೊರಬಂದ ಟೂಡರ ಬಳಿ ಅವನ ಗೆಳೆಯನಾದ ಸ್ಯಾಮುವೇಲ್ ಆಸ್ಟಿನ್ (Samuel Austin) ತಾನು ಭಾರತದಿಂದ ಆಮದು ಮಾಡಿಕೊಳ್ಳಲು ಒಂದು ಹಡಗನ್ನು ಇಟ್ಟಿರುವುದಾಗಿಯೂ ಅದು ಅಮೇರಿಕದಿಂದ ಭಾರತಕ್ಕೆ ಖಾಲಿಯಾಗಿ ಹೋಗುವುದರಿಂದ ಅದನ್ನು ಟೂಡರ್ ಬಳಸಿಕೊಳ್ಳಬಹುದೆಂದು ನೆರವಾದನು.  

ಆಸ್ಟಿನ್-ಅನ್ನು ಒಬ್ಬ ಪಾಲುದಾರನಾಗಿ ಸೇರಿಸಿಕೊಂಡು, ಭಾರತಕ್ಕೆ ಐಸ್ ಕಳುಹಿಸುವ ವ್ಯಾಪಾರವನ್ನು ಮತ್ತೆ ತೊಡಗಿದನು. ಅವನ ಅಪ್ಪ ವಕೀಲರು. ಅಣ್ಣ ವಿಲಿಯಮ್ ಟೂಡರ್ ಒಬ್ಬ ಸಾಹಿತಿ. ಹಾರ್ವರ್ಡಿನಲ್ಲಿ ಕಲಿತ ಟೂಡರ್, ಚಿಕ್ಕ ವಯಸ್ಸಿನಲ್ಲಿಯೇ ವ್ಯಾಪಾರದಲ್ಲಿ ತೊಡಗಿಕೊಂಡನು. 

ಅವನು, ತನ್ನ 23ನೇಯ ವಯಸ್ಸಿನಲ್ಲಿ, ಒಂದು ಹಡಗು ತುಂಬ ಐಸ್ ದಿಮ್ಮಿಗಳನ್ನು ರಫ್ತು ಮಾಡಲು ಯತ್ನಿಸಿದಾಗ, ಅದು ಎಂತಹ ಮುಟ್ಟಾಳು ಕೆಲಸ ಎಂದು ಊರೆಲ್ಲಾ ಗೇಲಿಮಾಡಿ ನಕ್ಕಿತು. ಬಂದರಿನಲ್ಲಿ ಮಂಜಿನ ದಿಮ್ಮಿಗಳನ್ನು ಹಡಗಿನಲ್ಲಿ ಹತ್ತಿಸಲು ಸಹ ಯಾರು ಮುಂದಾಗಲಿಲ್ಲ. ಆದರೆ, ಐಸ್ ವ್ಯಾಪಾರದಿಂದ ತುಂಬ ಹಣ ಸಂಪಾಧಿಸಬಹುದೆಂದು ಟೂಡರ್ ದೃಢವಾಗಿ ನಂಬಿದನು. ಒಂದು ಹಡಗು ತುಂಬ ಐಸ್ ದಿಮ್ಮಿಗಳನ್ನು ತುಂಬಿ ಕಳುಹಿಸಿ, 4,500 ಡಾಲರ್ ಸಂಪಾಧಿಸಿ ತೋರಿಸಿದನು. 

ಆದರೇ, ಕೆಲವೊಮ್ಮೆ ಐಸ್ ದಿಮ್ಮಿಗಳನ್ನು ಹೊತ್ತುಕೊಂಡು ಹೋಗುವ ಹಡಗುಗಳು ದಾರಿಯಲ್ಲಿಯೇ ಮುಳುಗಿ, ಸಾವುಗಳು ಉಂಟಾದವು. ಮಂಜಿನ ದಿಮ್ಮಿಗಳೊಂದಿಗೆ ತುಂಬಿ ಕಳುಹಿಸಿದ ಹಣ್ಣುಗಳೂ ಕೊಳೆತು ಹೋದವು. ಆದ್ದರಿಂದ ಅವನ ಸಾಲದ ಹೊರೆ ಹೆಚ್ಚಾಯಿತು. ಅದರಿಂದ ಪಾರಾಗಲು ಸಾಧ್ಯವಾಗದೆ ಸೆರೆ ವಾಸವನ್ನೂ ಅನುಭವಿಸ ಬೇಕಾಯಿತು. 

ಸಾಲದಿಂದ ಹೊರ ಬರಲು ಒಂದೇ ದಾರಿ ಭಾರತಕ್ಕೆ ಐಸ್ ಕಳುಹಿಸುವುದು ಎಂದುಕೊಂಡ ಟೂಡರ್, ಅದರಿಂದ ಸುಲಭವಾಗಿ ಹಣ ಸಂಪಾಧಿಸಬಹುದೆಂದು ನಿರ್ಧರಿಸಿದನು. ಆ ಕಾಲದಲ್ಲಿ ಮಂಜಿನ ಬಂಡೆಗಳನ್ನು ಕತ್ತರಿಸುವುದು ಬಹಳ ಕಷ್ಟವಾದ ಕೆಲಸ, ಅದನ್ನು ಕ್ರಮವಾಗಿ ಚೌಕಾಕಾರಕ್ಕೆ ಕತ್ತರಿಸಿ, ಒಣಹುಲ್ಲು ಸುತ್ತಿ ಕಳುಹಿಸಿದರೆ, ಅದನ್ನು ಒಳ್ಳೆಯ ಬೆಲೆಗೆ ಮಾರಬಹುದು ಎಂದು ಟೂಡರ್ ಯೋಜನೆ ಹಾಕಿದನು. 

ಅದರಂತೆ ಬಾಸ್ಟನ್ ಪ್ರದೇಶದಲ್ಲಿರುವ ಕೆರೆಗಳು ಹೆಪ್ಪುಗಟ್ಟಿದ ಮಂಜನ್ನು ಕತ್ತರಿಸಿ ಹಡಗಿನಲ್ಲಿ ಹತ್ತಿಸಿ ಕಳುಹಿದನು. 180 ಟನ್ ತುಂಬುವಷ್ಟು ಅನುಕೂಲವಿದ್ದ ಕ್ಲಿಪ್ಪರ್ ಟುಸ್ಕಾನಿ (Clipper Tuscany) ಹಡಗು, ಅಮೇರಿಕದಿಂದ 1833, ಮೇ 7ರಂದು ಭಾರತಕ್ಕೆ ಹೊರಟಿತು. 16,000 ಮೈಲಿಗಳನ್ನು ಪಯಣಿಸಿ ಅದು ಕಲ್ಕತ್ತಾವನ್ನು ತಲುಪಬೇಕು. ಅದಕ್ಕೆ ನಾಲ್ಕು ತಿಂಗಳಾಗುತ್ತಿತ್ತು. ಅಲ್ಲಿಯವರೆಗೆ ಐಸ್ ದಿಮ್ಮಿಗಳು ಕರಗದಿರಲು, ಕ್ರಮವಾದ ರಕ್ಷಣೆಯ ವಸತಿ ಮಾಡಲಾಗಿತ್ತು. ಅದರ ಕ್ಯಾಪ್ಟನಾಗಿದ್ದವರು ಲಿಟಲ್ ಫೀಲ್ಡ್ (Little Field). ವಿಲಿಯಮ್ ರೋಜರ್ಸ್ (William Rogers) ಹಡಗಿನ ಜತೆಯಲ್ಲಿ ಬಂದ ಟೂಡರಿನ ಸೇಲ್ಸ್ ರೆಪ್ರೆಸೆಂಟೆಟಿವ್.   

1833 ನೇಯ ಇಸವಿ ಸೆಪ್ಟಂಬರ್ ತಿಂಗಳು ಕಲ್ಕತ್ತಾ ಬಂದು ತಲುಪಿದ ಟೂಡರಿನ ಹಡಗಿನಲ್ಲಿದ್ದ ಐಸ್  50 ಟನ್-ಗೂ ಹೆಚ್ಚಾಗಿ ದಾರಿಯಲ್ಲಿಯೇ ಕರಗಿಹೋಗಿತ್ತು. ಬಂಗಾಳದ ಜನ ಆಗತಾನೇ ಮೊದಮೊದಲು ಐಸ್ ದಿಮ್ಮಿಗಳನ್ನು ನೋಡಿದರು. ಅವರಿಂದ ನಂಬಲು ಸಾಧ್ಯವಾಗಲಿಲ್ಲ. ಮುಟ್ಟಿದರೆ ಕೊರೆಯುವ ಆ ಮಾಯ ವಸ್ತುವನ್ನು ವಿಸ್ಮಯದಿಂದ ನೋಡಿದರು. 

ಕಲ್ಕತ್ತಾ ಬಂದರಿನಲ್ಲಿ ಐಸ್-ಗೆ ತೆರಿಗೆ ವಿಧಿಸಬೇಕೋ, ಬೇಡವೋ ಎಂಬ ವಿವಾದ ನಡೆಯಿತು. ಐಸ್-ಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಕೋರಿಕೆ ಮುಂದಿಡಲಾಯಿತು. ಅದನ್ನು ಗವರ್ನರ್ ವಿಲಿಯಮ್ ಬೆಂಟಿಕ್ (William Bentick) ಒಪ್ಪಿಕೊಂಡರು. ಅದರೊಂದಿಗೆ, ಐಸ್ ದಿಮ್ಮಿಗಳನ್ನು ಹೊತ್ತು ಬರುವ ಹಡಗಿನಿಂದ ರಾತ್ರಿ ಸಮಯ ಸರಕುಗಳನ್ನು ಇಳಿಸಿಕೊಳ್ಳಲು ವಿಶೇಷ ಅನುಮತಿ ನೀಡಲಾಯಿತು. 

‘ಭಾರತದ ಬಿಸಿಲಿನ ದಗೆಗೆ ಬೆಂದುಹೋದ ಪರಂಗಿಯರಿಗೆ, ಆ ಐಸ್ ಗೆಡ್ಡೆ ದೇವರು ನೀಡಿದ ಅಪರೂಪದ ಬಹುಮತಿಯಾಗಿ ಕಂಡಿತು’ ಎಂದು ಬರೆಯುತ್ತಾರೆ ಹಾರ್ಡಿಂಗ್ (Hardinge) ಎಂಬ ಅಧಿಕಾರಿ. ಐಸ್ ದಿಮ್ಮಿಗಳ ಆಮದು, ಆ ಕಾಲದಲ್ಲಿ ಕಲ್ಕತ್ತಾ ನಗರದಲ್ಲಿ ಬಿಸಿಬಿಸಿ ಸುದ್ಧಿಯಾಗಿತ್ತು. 

ನೋಬಲ್ ಪ್ರಶಸ್ತಿ ಪಡೆದ ಲೇಖಕ ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಸ್ (Gabriel García Márquez) ತನ್ನ ‘One Hundred Years of Solitude’ ಎಂಬ ಕಾದಂಬರಿಯಲ್ಲಿ ಐಸ್ ಗೆಡ್ಡೆಯನ್ನು ಮೊದಮೊದಲು ನೋಡಲು ಹೋಗುವ ಸಂದರ್ಭವನ್ನು ವಿವರಿಸಿದ್ದಾರೆ. ಅದರಲ್ಲಿ, ಐಸ್ ಗೆಡ್ಡೆಯನ್ನು ಮುಟ್ಟುವ ಬಾಲಕ ‘ಅದು ಒಂದು ವಿಸ್ಮಯ, ಈ ಶತಮಾನದ ಅನ್ವೇಷಣೆ’ ಎಂದು ಹೇಳುತ್ತಾನೆ. ಕಲ್ಕತ್ತಾವಿಗೆ ಐಸ್ ಬಂದಾಗ ಬಂಗಾಳದ ಜನಗಳ  ಮನಸ್ಥಿತಿಯೂ ಹಾಗೆಯೇ ಇತ್ತು. 

ವೈದ್ಯರಿಗೆ ಮತ್ತು ಅನುಕೂಲಸ್ಥರಿಗೆ ಮಾತ್ರವೇ ಐಸ್ ಕೊಂಡುಕೊಳ್ಳಲು ಅನುಮತಿ ನೀಡಲಾಗಿತ್ತು. ಐಸ್ ಗೆಡ್ಡೆಗಳನ್ನು ಹೇಗೆ ಸುರಕ್ಷಿತವಾಗಿಡುವುದು ಎಂದು ಜನಗಳಿಗೆ ತಿಳಿಯಲಿಲ್ಲ. ಅದನ್ನು ಹೇಗೆ ಬಳಸಬೇಕೆಂದೂ ಗೊತ್ತಿರಲಿಲ್ಲ. ಐಸ್ ಗೆಡ್ಡೆಗಳನ್ನು ಮಣ್ಣಿನಲ್ಲಿ ಮೊಳಕೆ ಹಾಕಿದರೆ ಐಸ್ ಮರ ಬೆಳೆಯುತ್ತದೆಯೇ ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದರು. 

ತಂಪು ಪಾನೀಯ, ಮಧು, ರುಚಿ ಬೆರಸಿದ ಹಾಲಿನ ಕೆನೆ, ಹಣ್ಣಿನ ರಸ ಮುಂತಾದುವುಗಳಿಗೆ ಐಸ್ ಬೆರಸಿ ಬಳಸಲು ಪ್ರಾರಂಭವಾಯಿತು. ಅದಕ್ಕಿಂತಲ್ಲೂ ಬೇಯಿಸಿದ ಆಹಾರಗಳನ್ನು ಎರಡು ದಿನಗಳವರೆಗೆ ಹಾಳಾಗದಂತೆ ಐಸ್ ಗೆಡ್ಡೆಗಳು ಮಾಡಿದ ಅದ್ಭುತ ಬ್ರಿಟೀಷ್ ಕುಟುಂಬಗಳನ್ನು ಸಂತೋಷದಲ್ಲಿ ಮುಳುಗಿಸಿತು. ಜ್ವರ ಮತ್ತು ಹೊಟ್ಟೆ ನೋವುಗಳನ್ನು ನಿವಾರಿಸಲು ಡಾಕ್ಟರ್-ಗಳು ಐಸ್ ಅನ್ನು ಬಳಸುವಂತೆ ಸಲಹೆ ಮಾಡಿದರು.  

‍ಲೇಖಕರು Admin

July 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Ashok

    ​ತಣ್ಣನೆ ಐಸ್ ಇಂಡಿಯಾ ದೇಶಕ್ಕೆ ಬಂದ ಚರಿತ್ರೆಯ ಕುರಿತು ​ಈ ತನಕ ಅರಿಯದಿದ್ದವರಿಗೆಲ್ಲ ಉಪಯುಕ್ತವೆನಿಸುವ ಮಾಹಿತಿಪೂರ್ಣ ಬರಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: