ಅಮೃತಾ ಹೆಗಡೆ ಅಂಕಣ – ಆದರೆ.. ಅಳು..? ಮಗು ಅತ್ತಿಲ್ಲವಲ್ಲ..?

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

‘ಸರ್‌.. ಇಲ್ಲಿಗೆ ಬಂದಿರೋ ಮಕ್ಕಳೆಲ್ಲ ಕಿವಿಗೆ ಏನೋ ಹಾಕಿಕೊಂಡಿದ್ದಾರಲ್ಲ, ಯಾವ ಮಷಿನ್‌ ಅದು..?’ ಕೇಳಿಯೇ ಬಿಟ್ಟೆ ಡಾಕ್ಟರ್‌ ಹತ್ತಿರ. ಆಗಷ್ಟೇ ಚೆಕ್‌ ಅಪ್‌ ಮುಗಿಸಿಕೊಂಡು ಕ್ಯಾಬಿನ್‌ ಇಂದ ಹೊರಹೋಗುತ್ತಿರುವ ಅಪರಿಚಿತ ಮಗುವನ್ನ ನೋಡುತ್ತಾ ಬರಬರುತ್ತಲೇ ಪ್ರಶ್ನೆ ಕೇಳಿದ ನನ್ನ ನೋಡಿ ಏನಂದುಕೊಂಡರೋ ಆ ಡಾಕ್ಟರ್‌. ಉದ್ದ ಕ್ಯೂನಲ್ಲಿದ್ದ ಎಲ್ಲ ಪೇಶಂಟ್ಸ್‌ ಪರೀಕ್ಷಿಸಿ, ಸುಸ್ತಾಗಿದ್ದಕ್ಕೋ ಏನೋ, ‘ಅವರೆಲ್ಲ ಕಾಕ್ಲಿಯರ್‌ ಇಂಪ್ಲಾಂಟ್ ಆಗಿರೋ ಮಕ್ಕಳು ಮೇಡಮ್‌’ ಅಂದು ಸುಮ್ಮನಾದರು. ನನಗೋ ಅವರ ಬಳಿ ಕೇಳುವುದು ಬೆಟ್ಟದಷ್ಟಿತ್ತು.

ಆಗಷ್ಟೇ ಆ ಪ್ರಪಂಚದ ಅನುಭವವಾಗುತ್ತಿರುವಾಗ, ಪ್ರಶ್ನೆಗಳು ಸಹಜ ತಾನೇ..? ಕಾಕ್ಲಿಯರ್‌ ಇಂಪ್ಲಾಂಟ್‌ ಅಂದರೇನು..? ಅದ್ಯಾವ ತರಹದ ಮಷಿನ್‌..? ಯಾಕೆ ಆ ಮಕ್ಕಳಿಗೆ ಹಾಕಿದ್ದಾರೆ..? ಅವರಿಗೆಂಥೆಂಥ ಸಮಸ್ಯೆಗಳಿದ್ದವು..? ತಲೆಯೊಳಗೆ ಮಷಿನ್‌ ಇದೆ ಅಂದರೆ ಅದೆಷ್ಟು ದೊಡ್ಡ ಆಪರೇಶನ್‌ ಇರಬಹುದು..? ಆಪರೇಶನ್‌ ಮಾಡಿಸಿಬಿಟ್ಟರೆ, ಅವರು ಎಲ್ಲರಂತೆ ಕೇಳಿಸಿಕೊಂಡು ಮಾತನಾಡ್ತಾರಾ..? ಎಂಬೆಲ್ಲ ಪ್ರಶ್ನೆಗಳು ರಾಶಿ ಬಿದ್ದಿದ್ದವು ಮನಸ್ಸಿನಲ್ಲಿ. ಆದರೆ ಆ ಡಾಕ್ಟರ್‌, ಒಮ್ಮೆಯೂ ಕಣ್ಣೆತ್ತಿ ನೋಡದೇ ಕೊಟ್ಟ ಚುಟುಕು ಉತ್ತರ ನನ್ನ ಪ್ರಶ್ನೆಗಳನ್ನೆಲ್ಲ ಅಲ್ಲಿಗೇ ಮೊಟಕುಗೊಳಿಸಿಬಿಟ್ಟಿತ್ತು.

ಇಂಟರ್ನ್‌‌ಶಿಪ್‌ ಹುಡುಗ ಸರ್ಫ್‌ರಾಝ್‌ ಕೊಟ್ಟ ಫೈಲ್‌ನ್ನ ಸಂಪೂರ್ಣ ಪರೀಕ್ಷಿಸಿದ ಡಾಕ್ಟರ್‌, ಅಥರ್ವನನ್ನ ಬೆಡ್‌ ಮೇಲೆ ಮಲಗಿಸಿ ಕಿವಿಯೊಳಗೆ ಟಾರ್ಚ್‌ ಬಿಟ್ಟು ಪರೀಕ್ಷಿಸಿ, ಏನೋ ಹೇಳಿದರು. ಹುಡುಗ ಅದನ್ನ ಫೈಲ್‌ನಲ್ಲಿ ಬರೆದುಕೊಂಡ. ನಮ್ಮ ಹ್ಯಾಪಿ ಕಿಡ್‌ ಅಥರ್ವನಿಗೋ ಬೆಡ್‌ ಕಂಡಿದ್ದೇ ಖುಷಿಯಾಗಿ ಹೋಗಿತ್ತು. ಬೆಳಗಿನಿಂದ ಇನ್‌ಸ್ಟಿಟ್ಯೂಟ್‌ನಲ್ಲಿ ಕಾಲ ಕಳೆದು ಸುಸ್ತಾಗಿದ್ದ ಅವನು ಬೆಡ್‌ಮೇಲೆ ಉರುಳಾಡುತ್ತಾ ಆಡಲು ಶುರುವಿಟ್ಟುಕೊಂಡ. ಚಿಕ್ಕ ಮಗುವಾಗಿದ್ದರೂ ಪರೀಕ್ಷೆಗೆ ಯಾವ ಅಡ್ಡಿಯನ್ನೂ ಮಾಡದೇ ಟೆಸ್ಟ್‌ ಮಾಡಿಸಿಕೊಂಡಿದ್ದನ್ನ ನೋಡಿ ಡಾಕ್ಟರ್‌ಗೆ ಖುಷಿಯಾಗಿರಬೇಕು.

ಡಾಕ್ಟರ್‌ ಮುಖದಲ್ಲಿ ನಗು ಮೂಡಿತ್ತು. ಅವರು ನಕ್ಕಿದ್ದು ನೋಡಿ, ನಮಗೂ ಒಳಗೊಳಗೇ ಖುಷಿ. ‘ಮಗು ತುಂಬಾ ನಾರ್ಮಲ್‌ ಇದೆ, ಯಾವ ತೊಂದರೆಯೂ ಇಲ್ಲ, ಏನೂ ಚಿಂತೆ ಮಾಡಬೇಡಿ, ಇನ್ನೂ ಸ್ವಲ್ಪ ದಿನದಲ್ಲಿಯೇ ಅವನು ಮಾತನಾಡ್ತಾನೆ’ ಅಂತ ಡಾಕ್ಟರ್ ಹೇಳಿಯೇ ಹೇಳುತ್ತಾರೆ ಅನ್ನೋ ನಂಬಿಕೆ ನನ್ನದು. ಹೀಗೆ ನಾನು ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತಲೇ ಇದ್ದಾಗ, ವಿನಯ್‌ ಡಾಕ್ಟರ್‌ ಹತ್ತಿರ ಕೇಳಿಯೇಬಿಟ್ಟಿದ್ದ. ‘ನಮ್ಮ ಮಗುವಿಗೆ ಯಾವ ತೊಂದರೆಯೂ ಇಲ್ಲ ಅಲ್ವಾ ಸರ್‌..?’ ಪ್ರಶ್ನೆಗೆ ಡಾಕ್ಟರ್‌ ಉತ್ತರಿಸಲಿಲ್ಲ. ಬದಲಾಗಿ ‘ಮಗುವಿಗೆ ನೆಗಡಿ ಇದೆಯಾ..?’ ಎಂದರು.

ನಾನು ‘ಇಲ್ಲ ಸರ್‌’ ಅಂದೆ. ಕಿವಿಯೊಳಗೆ ಸ್ವಲ್ಪ ಇನ್‌ಫೆಕ್ಷನ್‌ ಕಾಣಿಸ್ತಿದೆ ಡ್ರಾಪ್ಸ್‌ ಕೊಡ್ತೀನಿ. ಒಂದು ವಾರಕ್ಕೆ ಮೆಡಿಸಿನ್‌ ಕೊಡ್ತೀನಿ. ನೆಕ್ಸ್ಟ್‌ ವೀಕ್‌ ಮತ್ತೆ ಬನ್ನಿ’. ಅನ್ನುತ್ತಾ ಸರ್ಫರಾಝ್‌ನ ಕೈಯ್ಯಲ್ಲಿದ್ದ ಫೈಲ್‌ ತೆಗೆದುಕೊಂಡು ಅದರಲ್ಲಿ ಏನೋ ಬರೆದು, ನಮ್ಮ ಕೈಗೆ ಪ್ರಿಸ್ಕ್ರಿಪ್ಶನ್‌ ಕೊಡುತ್ತಾ ಡಾಕ್ಟರ್‌ ‘ನೆಕ್ಸ್ಟ್‌’ ಅಂತ ಕೂಗಿದ್ದರು. ನಾವಿಬ್ಬರೂ ಮುಖ ಮುಖ ನೋಡಿಕೊಂಡ್ವಿ. ಸರ್ಫರಾಝ್‌ ಬನ್ನಿ ಸಾರ್‌ ಅಂತ ಹೊರಕ್ಕೆ ಕರೆದ. ನಾವು ಅವನ ಜತೆಗೆ ಕ್ಯಾಬಿನ್‌ ಇಂದ ಹೊರಗೆ ಬಂದ್ವಿ.

ಮನಸ್ಸಿನಲ್ಲಿ ಗೊಂದಲವೋ ಗೊಂದಲ. ಇವತ್ತೇ.. ನಮ್ಮ ಮಗು, ಯಾವ ತೊಂದರೆಯೂ ಇಲ್ಲದ ನಾರ್ಮಲ್‌ ಮಗು ಎಂಬ ಫಲಿತಾಂಶ ಪಡೆದುಕೊಂಡು, ನನ್ನ ಚಿಕ್ಕಮ್ಮನಿಗೆ ಫೋನಾಯಿ ಸಿ ‘ನಿಮ್ಮ ಅನುಮಾನವೆಲ್ಲ ಸುಳ್ಳು’ ಎಂದು ಹೇಳುವ ತವಕದಲ್ಲಿದ್ದ ನನಗೆ ನಿರಾಶೆಯಾಗಿತ್ತು. ವಿನಯ್‌ ಕಯ್ಯಲ್ಲಿದ್ದ ಅಥರ್ವನನ್ನ ನಾನು ಎತ್ತಿಕೊಳ್ತಾ.. ಗೊಣಗಿದೆ ‘ಏನಿವರು.. ಏನೂ ಸರಿಯಾಗಿ ಹೇಳಿಲ್ವಲ್ಲ..’ ನಾವು ನಮ್ಮೊಳಗೇ ಮಾತನಾಡಿಕೊಳ್ತಿದ್ದಾಗಲೇ ಸರ್ಫ್‌ರಾಝ್‌ ನಮ್ಮ ಬಳಿ ಬಂದ. ‘ಸರ್‌… ಮಗೂ ಕಿವಿಯೊಳಗೆ ಇನ್‌ಫೆಕ್ಷನ್‌ ಇರೋದ್ರಿಂದ ಮುಂದಿನ ಟೆಸ್ಟ್‌ಗಳನ್ನೆಲ್ಲ ಮಾಡೋಕಾಗಲ್ಲ. ಸೋ.. ಡಾಕ್ಟರ್‌ ಹೇಳಿದಂತೆ ಮೆಡಿಸಿನ್‌ ಕೋರ್ಸ್‌ ಕಂಪ್ಲೀಟ್‌ ಆದ್ಮೇಲೆ ಬನ್ನಿ’ ಅನ್ನುತ್ತಾ.. ಅವನ ಕ್ಲಾಸ್‌ ಮೇಟ್‌ ಒಬ್ಬನಿಗೆ ಕೈಮಾಡಿ, ಮಲಯಾಳಂಲ್ಲಿ ಏನೋ ಹೇಳಿದ. ಲಂಚ್‌ ಬ್ರೇಕ್‌ ಸಮಯವಾಗಿರುವ ಕಾರಣ, ಈ ಸ್ಟುಡೆಂಟ್ಸ್‌ ಎಲ್ಲ ಊಟಕ್ಕೆ ಹೋಗುವ ತರಾತುರಿಯಲ್ಲಿದ್ದರು ಎಂಬುದನ್ನ ನಾವು ಅರ್ಥಮಾಡಿಕೊಂಡೆವು.

ಆದರೆ ಇಲ್ಲಿಯವರೆಗೆ ನಮ್ಮ ಜತೆಗೇ ಇದ್ದ ಸರ್ಫರಾಝ್‌ನ್ನ ಅಷ್ಟು ಸುಲಭವಾಗಿ ಕಳಿಸಿಬಿಡುವುದಕ್ಕೆ ನಾವಿನ್ನೂ ಸಿದ್ಧರಿರಲಿಲ್ಲ. ಯಾಕೆಂದರೆ ನಮ್ಮ ಪಾಲಿಗೆ ಅವನು ನಮ್ಮ ಅನುಮಾನಗಳನ್ನ ಪರಿಹರಿಸಬಲ್ಲ ಏಕೈಕ ಸೋರ್ಸ್‌ ಆಗಿದ್ದ. ‘ಹಾಗಾದ್ರೆ, ನಿಮ್ಮ ಪ್ರಕಾರ ಮಗೂಗೆ ಸಮಸ್ಯೆ ಇದೆ ಅಂತೀರಾ..? ಕೇಳಿದೆ ನಾನು’ ‘ಮೇಡಮ್‌ ಈಗ್ಲೇ ನಾನೇನೂ ಹೇಳೋಕಾಗಲ್ಲ ನೆಕ್ಸ್ಟ್‌ ವೀಕ್‌ ನಿಮಗೆ ಗೊತ್ತಾಗುತ್ತೆ’ ಅಂಥ ಗಡಿಬಿಡಿಯಲ್ಲಿಯೂ ಕನ್ನಡ ಶಬ್ಧಗಳನ್ನೇ ಹುಡುಕಿ ಹುಡುಕಿ ನನಗೆ ವಿವರಿಸ್ತಾ ಇದ್ದ ಅವನ ಕಣ್ಣುಗಳು ಮಾತ್ರ ಸಹಪಾಠಿಗಳನ್ನ ಹುಡುಕ್ತಾ ಇದ್ರೆ, ಕಾಲುಗಳು ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಎಷ್ಟಂದ್ರೂ ಕಾಲೇಜು ಸ್ಟೂಡೆಂಟ್ಸ್‌, ಹುಡುಗು ಬುದ್ದಿಯ ವಿದ್ಯಾರ್ಥಿಗಳು, ನಮ್ಮಂಥವರನ್ನ ದಿನಕ್ಕೆ ನೂರು ಜನರನ್ನ ಕಾಣುವ ಅವರಿಗೆ ನಮ್ಮ ಆತಂಕವನ್ನ ಬಗೆಹರಿಸುವ ತಾಳ್ಮೆ ಎಲ್ಲಿಂದ ಬರಬೇಕು..? ಅಂತೂ ಊಟಕ್ಕೆ ಹೋಗಲು ತವಕಿಸುತ್ತಿದ್ದ ಅವನನ್ನ ನಾವು ಕಳಿಸಿಕೊಟ್ಟೆವು.

ಬೆಳಗ್ಗೆ ಸ್ವಲ್ಪ ರಾಗಿ ಸಿಹಿಗಂಜಿ ತಿಂದಿದ್ದ ಮಗು ಅಥರ್ವನಿಗೆ ಹಸಿವಾಗದೇ ಇರುತ್ತದೆಯೇ..? ಹಸಿವೂ ಆಗಿತ್ತು, ನಿದ್ದೆಯೂ ಬಂದಿತ್ತು. ನಾವು ಹಸಿವೂ ಗೊತ್ತಾಗಂಥ ಸ್ಥಿತಿಯಲ್ಲಿದ್ವಿ ಅಂತ ಮಗೂಗೆ ಊಟ ಮಾಡಿಸದೇ ಇರುವುದು ಹೇಗೆ..? ಕ್ಯಾಂಪಸ್‌ನಲ್ಲಿಯೇ ಇರುವ ಕ್ಯಾಂಟೀನ್‌ನಲ್ಲಿ ನಾವೂ ಊಟ ಮಾಡಿ, ಮಗುವಿಗೂ ಏನೋ ತಿನ್ನಿಸಿದೆವು. ಮತ್ತೆ ರಿಸೆಪ್ಶನ್‌ಗೆ ಬಂದು, ಮುಂದಿನ ವಾರಕ್ಕೆ ನಮ್ಮ ಹೆಸರು ಕಾಯ್ದಿರಿಸಿ ಕ್ಯಾಬ್‌ ಬುಕ್‌ ಮಾಡಿದ್ದೆವು.

ಯಾವೆಲ್ಲ ಅನುಮಾನಗಳು ಸುಳ್ಳಾಗಲಿ ಅಂತ ನಾವು ಬಯಸುತ್ತಿದ್ದೆವೋ ಆ ಅನುಮಾನಗಳ ಸುತ್ತ ಇನ್ನೂ ಒಂದಷ್ಟು ಗೊಂದಲಗಳು ಸುತ್ತಿಕೊಂಡಿದ್ದವು. ನಾವೆಲ್ಲ ಕ್ಯಾಬ್‌ ಹತ್ತಿ ಐದು ನಿಮಿಷದೊಳಗೆ ಪುಟ್ಟ ಅಥರ್ವ ನಿದ್ದೆ ಮಾಡಿಬಿಟ್ಟಿದ್ದ. ಮಟ ಮಟ ಮಧ್ಯಾಹ್ನ ಲಿಂಗರಾಜಪುರಂ, ಹೆಣ್ಣೂರು ರಸ್ತೆಯಿಂದ ರಾಜರಾಜೇಶ್ವರಿ ನಗರಕ್ಕೆ ಹೋಗಬೇಕಿತ್ತು ನಾವು. ಒಂದೂವರೆ ಗಂಟೆ ತೋರಿಸ್ತಾ ಇತ್ತು ಗೂಗಲ್‌ ಮ್ಯಾಪ್‌. ಕಣ್ಣುಮುಚ್ಚಿದರೆ ನಿದ್ದೆಯೂ ಬರುತ್ತಿಲ್ಲ. ತಲೆಯ ತುಂಬಾ ಅಸಂಬಂದ್ಧ ಯೋಚನೆಗಳು. ಅಪ್ಪನ ಕಾಲ ಮೇಲೆ ತನ್ನ ಕಾಲುಗಳನ್ನಿಟ್ಟು, ನನ್ನ ಮಡಿಲಿನ ಮೇಲೆ ತಲೆ ಇಟ್ಟು ಚೆಂದದ ನಿದ್ದೆ ಮಾಡುತ್ತಿದ್ದ ಮಗನ ಮುಖ ನೋಡಿದೆ.

ಮೂಗು, ಬಾಯಿ, ಕಣ್ಣುಗಳು, ಕಿವಿಗಳು ಎಲ್ಲವೂ ಯಾವೊಂದು ಸಣ್ಣ ಊನವೂ ಇಲ್ಲದೆ ಅತ್ಯಂತ ಸಹಜವಾಗಿದೆ ಅನ್ನಿಸಿತ್ತು. ಪುಟ್ಟ ಕಿವಿಗಳಂತೂ ಹೂವಿನ ಎಸಳುಗಳಂತೆ ಕಂಡವು. ‘ಅಮ್ರೂ.. ನಾನು ಹೇಳಿರ್ಲಿಲ್ವಾ..? ಕಿವಿಯೊಳಗೆ ಏನೋ ಸಮಸ್ಯೆ ಇರುತ್ತೆ ಅಂತ. ನೋಡಿದ್ಯಾ.. ಡಾಕ್ಟರ್‌ ಇನ್‌ಫೆಕ್ಷನ್‌ ಇದೆ ಅಂದ್ರು. ಮೆಡಿಸಿನ್‌ ಹಾಕಿದ್ರೆ ಎಲ್ಲ ಸರಿಹೋಗುತ್ತೆ ಕಣೇ..’ ಅಂದ ವಿನಯ್‌. ‘ಆದ್ರೂ.. ಇನ್ನೂ ಏನೇನೂ ಟೆಸ್ಟ್‌ಗಳು ಇವೆಯಂತಲ್ಲ.. ಆ ಹುಡುಗ ಹೇಳ್ತಿದ್ದ’ ಉಸುರಿದೆ ನಾನು. ‘ಇರಲಿ ಬಿಡು, ಅಂಥ ದೊಡ್ಡದೇನೂ ಸಮಸ್ಯೆ ಇರಲ್ಲ ಅಂತ ಅನ್ಸುತ್ತಪ್ಪ ನನಗೆ ‘ ವಿನಯ್‌ ಕನ್‌ಕ್ಲೂಡ್‌ ಮಾಡಿದ್ದ.

ಮುಂದಿನ ಟೆಸ್ಟ್‌ಗಳ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಹುಡುಕುತ್ತಿದ್ದ ವಿನಯ್‌ ಮೊಬೈಲ್‌ನಲ್ಲಿ ಮುಳುಗಿದ. ನನಗ್ಯಾಕೋ ಅದ್ಯಾವುದೂ ಬೇಕಿರಲಿಲ್ಲ. ನಮ್ಮ ಅನುಮಾನಗಳ ಬಗ್ಗೆ, ಚಿಕ್ಕಮ್ಮನ ಸಲಹೆಯ ಬಗ್ಗೆ, ಹೀಗೆ ನಾವು ಮಗುವನ್ನ ಟೆಸ್ಟ್‌ ಮಾಡಿಸುತ್ತಿರುವ ಬಗ್ಗೆ ಯಾವ ಸುಳಿವನ್ನೂ ನಾವು ಊರಿನಲ್ಲಿರುವ ನನ್ನ ಅಪ್ಪ, ಅಮ್ಮ, ಅತ್ತೆ, ಮಾವರಿಗೆ ಹೇಳಿರಲೇ ಇಲ್ಲ. ಇವತ್ತೇ ಹೇಳಬೇಕಾ..? ಅಥವಾ ಸಂಪೂರ್ಣ ಫಲಿತಾಂಶ ಬಂದ ಮೇಲೆಯೇ ಹೇಳಬೇಕಾ..? ಯೋಚಿಸುತ್ತಿದ್ದೆ.

ಮನಸ್ಸು ಹಿಂದಕ್ಕೆ ಓಡುತ್ತಿತ್ತು. ಆವತ್ತು 2016 ರ ಜನವರಿ 10ನೇ ತಾರೀಖು. ನನಗೆ ಒಂಬತ್ತು ತಿಂಗಳು ತುಂಬಿ ಹತ್ತನೇ ದಿನ. ಡಾಕ್ಟರ್‌ ಕೊಟ್ಟಿದ್ದ ಡಿಲೆವರಿ ಡೇಟ್‌ ಮುಗಿದಿತ್ತು. ಶಿರಸಿಯ ನನ್ನತ್ತೆ ಮನೆಯಲ್ಲಿ ಕಳೆದ ಹತ್ತು ದಿನಗಳಿಂದ ಹೆರಿಗೆ ನೋವಿಗಾಗಿ ಕಾಯುತ್ತಲೇ ಇದ್ದ ನನಗೆ, ಡೇಟ್‌ ಮುಗಿದರೂ ಹೆರಿಗೆ ನೋವು ಬರುವ ಯಾವ ಸೂಚನೆಯೂ ಇರಲಿಲ್ಲ. ನನ್ನ ಅತ್ತೆಯ ಜೊತೆ ಆಸ್ಪತ್ರೆಗೆ ಹೋಗಿ ಡಾಕ್ಟರ್‌ ಹತ್ತಿರ ಹೇಳಿದ್ದೆ. ‘ಇಲ್ಲ ಸರ್‌.. ನನಗೆ ಈ ಹೊಟ್ಟೆಯ ಭಾರ ತಡೆಯೋಕಾಗ್ತಾ ಇಲ್ಲ ದಯವಿಟ್ಟು ನನಗೆ ಹೆರಿಗೆ ಮಾಡಿಸಿ’ ಕೈಜೋಡಿಸಿದ್ದೆ. ನನ್ನ ಕೂಲಂಕುಷವಾಗಿ ಪರೀಕ್ಷಿಸಿದ್ದ ಡಾ. ಜಿ.ಎಂ ಹೆಗಡೆಯವರು ‘ಆಯ್ತ. ನೋವು ಬರಲು ಇನ್‌ಜೆಕ್ಷನ್‌ ಕೊಡ್ತೀವಿ, ಹೆರಿಗೆಯಾಗುತ್ತೆ’ ಅಂದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ. ಇಷ್ಟು ದಿನ ಹೊಟ್ಟೆಯೊಳಗಿದ್ದ ನನ್ನ ಮಗು ಅಂತೂ ನನ್ನ ಕಣ್ಮುಂದೆ ಬರಲಿದೆ ಅನ್ನೋದನ್ನ ಯೋಚಿಸಿಯೇ ರೋಮಾಂಚನವಾಗಿತ್ತು.

ನಾನು ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿರುವ ಸುದ್ದಿ ನನ್ನ ತವರಿಗೆ ಹರಡಿ, ನನ್ನ ಸೋದರತ್ತೆಗೂ ತಲುಪಿತ್ತು. ನನ್ನ ಸೋದರತ್ತೆ ಯಮುನಾ ಕುಲಕರ್ಣಿ ಕುಮಟಾದಿಂದ ನನಗಾಗಿ ಓಡಿಬಂದಿದ್ದರು. ಅವರು ಬಂದ ಸ್ವಲ್ಪ ಹೊತ್ತಿನಲ್ಲಿಯೇ ನನಗೆ ಹೆರಿಗೆ ನೋವು ಬರುವ ಇಂಜೆಕ್ಷನ್‌ ಕೊಟ್ಟಿದ್ದರು. ರಾತ್ರಿ ಯಾವ ಸಮಯದಲ್ಲಿ ನೋವು ಆರಂಭವಾದರೂ ಹೇಳಿ ಅಂತ ನೈಟ್‌ ಡ್ಯೂಟಿ ನರ್ಸ್ ಹೇಳಿ ಹೋಗಿದ್ದರು. ನಾನು ನನ್ನ ಯಮುನಾ ಅತ್ತೆ ಆ ರಾತ್ರಿಯಿಡೀ ಕಾದಿದ್ದೇ ಕಾದಿದ್ದು. ತಳ ಹೊಟ್ಟೆಯಲ್ಲಿ ಮಿಂಚು ಹರಿದಂತೆ ಒಂದೊಂದು ಬಾರಿ ಅನುಭವಾಗುತ್ತಿತ್ತಷ್ಟೇ. ಊಹೂಂ. ಬೆಳಗಿನ ತನಕ ನೋವಿನ ಪತ್ತೆಯೇ ಇಲ್ಲ.

ಮರುದಿನ ಬೆಳಗ್ಗೆ 10 ಗಂಟೆಗೆ ಬಂದು ನನ್ನ ಪರೀಕ್ಷಿಸಿದ್ದ ಡಾಕ್ಟರ್‌ ಡ್ರಿಪ್‌ ಕೊಡಲು ತಮ್ಮ ಜತೆಗಿದ್ದ ನರ್ಸ್‌‌ಗೆ ಸೂಚಿಸಿದ್ದರು. ಡ್ರಿಪ್‌ನ ನಾಲ್ಕು ಹನಿಗಳು ದೇಹದೊಳಗೆ ಸೇರಿದ್ದೇ ಸೇರಿದ್ದು ಸಣ್ಣ ಹೆರಿಗೆ ನೋವು ಶುರುವಾಗಿತ್ತು ನನಗೆ. ಅಬ್ಬ..! ಎಂಥ ಅಸಹನೀಯ ನೋವು ಅದು..! ಸಮುದ್ರದ ಅಲೆಗಳ ಹಾಗೆ ಒಮ್ಮೆ ಉಬ್ಬರ ಒಮ್ಮೆ ಇಳಿತ. ನೋವು ಹೆಚ್ಚುತ್ತಿದ್ದಂತೆ, ಹೆರಿಗೆ ಕೋಣೆಗೆ ನಾನು ರವಾನೆಯಾದೆ. ಹುಟ್ಟಿದಾಕ್ಷಣ ಮಗು ಅಳುತ್ತದೆಯಂತೆ..! ಮಗು ಅತ್ತರಷ್ಟೇ ಅದು ಆರೋಗ್ಯವಾಗಿದೆ ಎಂಬ ಅರ್ಥವಂತೆ..! ಮಗು ಅತ್ತರಷ್ಟೇ ಅದರ ಎಲ್ಲ ನರನಾಡಿಗಳೂ ಚುರುಕಾಗುತ್ತವಂತೆ..!

ನನ್ನ ನೋವಿನ ಉಬ್ಬರ ಹೆಚ್ಚಾಗುತ್ತಲೇ ಸಾಗುತ್ತಿತ್ತು. ಇಡೀ ಶರೀರ ಬೆವೆತು ಒದ್ದೆಯಾಗಿತ್ತು. ಕಣ್ಮುಚ್ಚಿ ನೋವನ್ನ ಸಹಿಸಿಕೊಳ್ತಾ ಡಾಕ್ಟರ್‌ ಸೂಚನೆಯನ್ನೆಲ್ಲ ಪಾಲಿಸ್ತಾ ಇದ್ದೆ. ತೀವ್ರಗೊಳ್ಳುತ್ತಿರುವ ನೋವಿನ ಉತ್ತುಂಗದಲ್ಲಿದ್ದಾಗಲೇ, ಒಮ್ಮೆಲೇ ನೋವಿನಿಂದ ಬಿಡುಗಡೆ ಸಿಕ್ಕಿತ್ತು. ಹೊಟ್ಟೆಯಲ್ಲ ಸಡಿಲವಾದಂತಾಯಿತು, ನಿರಾಳವಾದಂತಾಯಿತು. ಆದರೆ.. ಮಗುವಿನ ಅಳು..? ಕೇಳಿಸಲೇ ಇಲ್ಲವಲ್ಲ. ಮಗು ಬದುಕಿಲ್ಲವೇ..? ಒಮ್ಮೆ ಮನಸ್ಸಿಗೆ ಈ ಅನುಮಾನದ ಸಿಡಿಲು ಬಡಿದಿತ್ತು. ‘ಡಾಕ್ಟರ್‌… ಮಗು ಹುಟ್ಟಿತಾ..? ಅಂತ ಕೇಳಿದ್ದೆ. ‘ಹೌದಮ್ಮ… ಮಗ.. ಮಗ ಹುಟ್ಟಿದ್ದಾನೆ ನಿಮಗೆ’ ಅಂದ್ರು ಡಾಕ್ಟರ್‌. ಅದಾಗಲೇ.. ಪಕ್ಕದಲ್ಲಿದ್ದ ಟೇಬಲ್‌ ಮೇಲೆ ನನ್ನ ಮಗುವನ್ನ ಸ್ವಚ್ಛ ಮಾಡಿ, ಬಟ್ಟೆ ಸುತ್ತಿ, ತೂಕವನ್ನ ಪರೀಕ್ಷಿಸುತ್ತಿದ್ದರು ನರ್ಸ್‌.

ಮುದ್ದು ಗೊಂಬೆಯ ಹಾಗಿದ್ದ ಕಂದನ ಮುಖ ನೋಡಿದೆ, ಒಂಬತ್ತು ತಿಂಗಳು ಹೊತ್ತಿದ್ದ ಆ ಮಗುನಿನ ಶಬ್ಧ ಕೇಳಲು ತವಕಿಸುತ್ತಿದ್ದ ನನ್ನ ಕಿವಿಗಳಿಗೆ ಅದರ ಅಳು ಕೇಳಿಸಲೇ ಇರಲಿಲ್ಲ. ತನ್ನ ಗಂಟಲಿನಿಂದ ನಿಧಾನ ಶಬ್ಧ ಹೊರಡಿಸುತ್ತಿದ್ದ ಅಷ್ಟೇ. ಮಗುವನ್ನ ಹತ್ತಿರ ತಂದು ನನಗೆ ತೋರಿಸಿದ್ದರು, ಗುಲಾಬಿ ಬಣ್ಣದ ಮುದ್ದೆಯಾಗಿದ್ದ ಅಥರ್ವ ಕಣ್ಣರಳಿಸಿಕೊಂಡು ಎಲ್ಲವನ್ನೂ ನೋಡುತ್ತಿದ್ದ. ಅದ್ಯಾವುದೋ ಅವರ್ಣನೀಯ ಭಾವ ಎದೆ ತುಂಬಿಕೊಳ್ಳುತ್ತಿತ್ತು. ಅಮ್ಮನನ್ನ ಹೆಚ್ಚು ನರಳಾಡಿಸದೇ ಸಲೀಸಾಗಿ ಗರ್ಭದಿಂದ ಈಚೆ ಬಂದಿದ್ದ ಆ ಮಗು ದೇವತೆಯೇ ಸರಿ ಅನ್ನಿಸಿಬಿಟ್ಟಿತ್ತು. ಆದರೆ.. ಅಳು..? ಮಗು ಅತ್ತೇ ಇಲ್ಲವಲ್ಲ..??

ಫೋನ್‌ ರಿಂಗಾಯಿತು. ಸ್ವಲ್ಪ ಬೆಚ್ಚಿ, ಬ್ಯಾಗ್‌ನ್ನ ತಡಕಾಡಿ ಫೋನ್‌ತೆಗೆದೆ. ಅವನ ತಲೆಯ ಹತ್ತಿರವೇ ಫೋನ್‌ ರಿಂಗ್‌ ಆಗಿದ್ದರೂ ಆತನ ಸಕ್ಕರೆ ನಿದ್ದೆಗೆ ಯಾವ ಭಂಗವೂ ಬಂದಿರಲಿಲ್ಲ. ‘ನನ್ನಮ್ಮನ ಕರೆ! ವಿಷಯ ಗೊತ್ತಾಗಿರಬಹುದೇ?’ ಎನ್ನುತ್ತಾ.. ವಿನಯ್‌ ಮುಖ ನೋಡಿದೆ. ಅವನು ರಿಸೀವ್‌ ಮಾಡು ಅನ್ನುವಂತೆ ಸನ್ನೆ ಮಾಡಿದ್ದ.

‍ಲೇಖಕರು Avadhi

June 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: