ಅಮೃತಾ ಹೆಗಡೆ ಅಂಕಣ- ಆತ ಅಕ್ಷರಶಃ ಕಿವುಡರಿಗೆ ಕಿವಿ ಅಂಟಿಸಿಯೇಬಿಟ್ಟ…

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

22

ಆತ ಐದು ವರ್ಷದ ಪುಟ್ಟ ಹುಡುಗ. ಅವನ ಅಪ್ಪ ಹುಟ್ಟು ಕಿವುಡ. ಕಿವುಡತನವಿದ್ದರೂ ಅಕ್ಷರ ಕಲಿತು ತನ್ನದೇ ಸ್ವಂತ ಔಷಧ ಅಂಗಡಿ ನಡೆಸುತ್ತಿರುವ ಸ್ವಾವಲಂಬಿ. ಆದರೆ, ತನ್ನ ಅಂಗಡಿಗೆ ಬರುವ ಗ್ರಾಹಕರೊಂದಿಗೆ ಆತ ಮಾತನಾಡಲಾರ, ಗ್ರಾಹಕರು ಏನೇ ಹೇಳಿದರೂ  ಕೇಳಿಸಿಕೊಳ್ಳಲಾರ. ತನ್ನಪ್ಪನ ಈ ಪರಿಸ್ಥಿತಿ ನೋಡುತ್ತಲೇ ಬೆಳೆದ ಆ ಹುಡುಗನಿಗೆ ತನ್ನಪ್ಪನ ಮೇಲೆ ಕನಿಕರವಿತ್ತು. ಆ ಹುಡುಗನ ಶಾಲೆಯ ಶಿಕ್ಷಕಿ ಒಮ್ಮೆ ಎಲ್ಲ ಮಕ್ಕಳಿಗೆ ಒಂದು ಪ್ರಶ್ನೆ ಕೇಳಿದ್ದರು. ನೀವೆಲ್ಲ ದೊಡ್ಡವರಾದ ಮೇಲೆ ಏನಾಗಲು ಬಯಸುತ್ತೀರಾ..?’ ಎಂಬ ಪ್ರಶ್ನೆಯದು.  ಈ ಪುಟ್ಟ ಹುಡುಗ ಆ ಪ್ರಶ್ನೆ ಕೇಳಿದ್ದೇ ‘ನಾನು ಕಿವುಡರಿಗೆ ಕಿವಿ ಅಂಟಿಸುವ ಕೆಲಸ ಮಾಡುತ್ತೇನೆ’ ಎಂದುಬಿಟ್ಟ. ಈ ಉತ್ತರ ಕೇಳಿ ಅಲ್ಲಿರುವವರೆಲ್ಲ ನಕ್ಕಿದ್ದರು.  

ಆದರೆ ಆ ಮಾತು ಸುಳ್ಳಾಗಲೇ ಇಲ್ಲ. ಇದೇ ಮಗು ದೊಡ್ಡವನಾದ ಮೇಲೆ ವೈ​ದ್ಯನಾಗಿ, ಸಂಶೋಧಕನಾಗಿ ಜಗತ್ತಿನ ಎಲ್ಲ ಕಿವುಡರಿಗೆ ಶಬ್ಧ ಜಗತ್ತನ್ನೇ ಪರಿಚಯಿಸುವ ಕೆಲಸ ಮಾಡಿಬಿಟ್ಟ. ‘ಕಾಕ್ಲಿಯರ್​ಇಂಪ್ಲಾಂಟ್​’ ಎಂಬ ಅದ್ಭುತವನ್ನೇ ಸಂಶೋಧಿಸಿ, ಅಕ್ಷರಷಃ ಕಿವುಡರಿಗೆ ಕಿವಿ ಅಂಟಿಸಿಯೇಬಿಟ್ಟ. ಕಿವುಡರ ಲೋಕಕ್ಕೆ ಹೊಸ ಆಶಾ ಕಿರಣ ತಂದ ಆ ಮಹಾನ್​ಪುರುಷನ ಹೆಸರು ‘ಗ್ರೇಮ್ ​ಕ್ಲಾರ್ಕ್​’. ಆಷ್ಟ್ರೇಲಿಯಾದ ಮೆಲ್​ಬರ್ನ್ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್​ ಆಗಿದ್ದ ಅವರಿಗೀಗ ೮೬ರ ಹರೆಯ. ಗ್ರೇಮ್​ ಕ್ಲರ್ಕ್ ಹುಟ್ಟಿದ್ದು 16 ಆಗಷ್ಟ್​1935 ರಲ್ಲಿ. ಇವರ ತಂದೆ ಕೊಲಿನ್​ಕ್ಲಾರ್ಕ್. ಹುಟ್ಟೂ ಕಿವುಡರಾಗಿದ್ದ ಕೊಲಿನ ಕ್ಕಾರ್ಕ್​ಅವರೇ ‘ಕಾಕ್ಲಿಯರ್​ ಇಂಪ್ಲಾಂಟ್​’ ಎಂಬ ಅದ್ಭುತದ ಸೃಷ್ಟಿಗೆ ಸ್ಪೂರ್ತಿ. 

1969 ರಲ್ಲಿ ಗ್ರೇಮ್ ​ಕ್ಲಾರ್ಕ್ ಬಯೋನಿಕ್​ ಇಯರ್​ ಎಂಬ ವಿಷಯದ ಮೇಲೆ ತಮ್ಮ ಪಿ.ಹೆಚ್​.ಡಿ ಥಿಸೀಸ್​ ಬರೆದು ಮುಗಿಸಿದ್ದರು. ಆದರೆ ಗ್ರೇಮ್​ಕ್ಲಾರ್ಕ್​ರ ಈ ಸಂಶೋಧನೆಯ ದಾರಿಯೇನೂ ಸುಗಮವಾಗಿರಲಿಲ್ಲ. ಇಂಥ ಒಂದು ಪ್ರಯತ್ನಕ್ಕೆ ಕೈ ಹಾಕಿದಾಗ ಅವರಿಗೆ ಬಂದ ಪ್ರೋತ್ಸಾಹಕ್ಕಿಂತ ಅಡೆತಡೆಗಳೇ ಹೆಚ್ಚು. ನಿಮ್ಮ ಈ ಸಂಶೋಧನೆಯಿಂದ ಓರ್ವ ವ್ಯಕ್ತಿ ಕೇಳಿಸಿಕೊಳ್ಳಲು ಸಾಧ್ಯವೇ ಇಲ್ಲ. ನಿಮ್ಮ ಪ್ರಯತ್ನ ವ್ಯರ್ಥ ಎಂಬ ಅಭಿಪ್ರಾಯಗಳ ಸುರಿಮಳೆಯೇ ಅವರ ಮೇಲೆ ಸುರಿದಿತ್ತು. ಇದೇ ಕಾರಣಕ್ಕೆ ಈ ಸಂಶೋಧನೆಗಾಗಿ ಅವರಿಗೆ ಎಲ್ಲಿಯೂ ಹಣ ದೊರಕಲೇ ಇರಲಿಲ್ಲ. ಮತ್ತು ಈ ಸಂಶೋಧನೆಗೆ ಬೇಕಾದ ಟೀಮ್​ ಕೂಡ ಇರಲಿಲ್ಲ.  

ಹೀಗಾಗಿ ಅವರೇನು ಮಾಡಿದ್ದರು ಗೊತ್ತಾ…?  ಆಗಿನ ಕಾಲದಲ್ಲಿಯೇ ತಮ್ಮ ಈ ಸಂಶೋಧನೆಯ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ಅರ್ಥಮಾಡಿಸಿ, ಜನರ ಬಳಿ ಸಹಾಯ ಕೋರಿದರು. ಆಗಿನ ಕಾಲದ ಮೆಲ್​ಬರ್ನ್​ನ ಟಿ.ವಿ ಸ್ಟೇಶನ್​, ಗ್ರೇಮ್ ​ಅವರಿಗೆ ಸಹಾಯ ಮಾಡಿತ್ತು. ಅದಲ್ಲದೆ  ಗ್ರೇಮ್​ಕ್ಲಾರ್ಕ್​, ಅಕ್ಷರಷಃ ಡೊನೇಶನ್​ ಡಬ್ಬ ಹಿಡಿದು ಮೆಲ್​ಬರ್ನ್​​ನ ಬೀದಿ ಬೀದಿ ಅಲೆದಿದ್ದರು. ಕ್ರೌಡ್​ಫಂಡಿಂಗ್​ನಿಂದ 1974 – 1976 ರವರೆಗೆ ಈ ಸಂಶೋಧನೆಗೆ ಬೇಕಾದ ಹಣವನ್ನು ಒಟ್ಟುಗೂಡಿಸುವ ಕೆಲಸ ಮಾಡಿದ್ದರು ಗ್ರೇಮ್​ ಕ್ಲಾರ್ಕ್​. ಸಾರ್ವಜನಿಕರ ಸಹಾಯದಿಂದ ಹಣ ಒಟ್ಟುಗೂಡಿಸಿಕೊಂಡ ಗ್ರೇಮ್​ 1976ರಲ್ಲಿ ಮೆಲ್​ಬರ್ನ್ ವಿಶ್ವವಿದ್ಯಾಲಯದಲ್ಲಿಯೇ ತಮ್ಮ ಸಂಶೋಧನೆಯನ್ನು ಪ್ರಾರಂಭಿಸಿದ್ದರು. 

ಕಾಕ್ಲಿಯರ್​ ಇಂಪ್ಲಾಂಟ್​ ಸಿದ್ಧಗೊಂಡಮೇಲೆ ಅದನ್ನ ಯಾರ ಮೇಲೆ ಪ್ರಯೋಗಿಸುವುದು? ಈ ಪ್ರಯೋಗಕ್ಕಾಗಿ ಯಾರಾದರೂ ಕಿವುಡರು ಮುಂದಾಗಬೇಕಲ್ಲ..?! ಇಂಥಹದ್ದೊಂದು ಕಷ್ಟ ಎದುರಾಯ್ತು. ಆದರೆ, ಇಂಥ ಒಂದು ಅದ್ಭುತದ ಪ್ರಯೋಗಕ್ಕಾಗಿ ಧೈರ್ಯವಾಗಿ ಮುಂದೆ ಬಂದವರೇ ‘ರಾಡ್​ ಸಾಂಡ್ರೆಸ್​’. ತೀವ್ರ ಶ್ರವಣ ದೋಷ ಹೊಂದಿದ್ದ ರಾಡ್​ ಸಾಂಡ್ರೆಸ್​ಎಂಬ ವಯಸ್ಕ ಕಿವುಡ ವ್ಯಕ್ತಿಗೆ ೧೯೭೮ರ ಆಗಷ್ಟ್​೧ ರಂದು ಗ್ರೇಮ್​ ಕ್ಲಾರ್ಕ್​ ಸ್ವತಃ ಸರ್ಜರಿ ಮಾಡಿ, ಕಾಕ್ಲಿಯರ್​ ಇಂಪ್ಲಾಂಟ್​ ಅಳವಡಿಸಿ, ಯಶಸ್ವಿಯೂ ಆದರು. ರಾಡ್​ ಸಾಂಡ್ರೆಸ್​ ಶಬ್ಧ ಪ್ರಪಂಚವನ್ನು ಅಪ್ಪಿಕೊಂಡರು. ಮೊಟ್ಟ ಮೊದಲಬಾರಿ ತನ್ನ ಹೆಂಡತಿಯ ದನಿಯನ್ನು ಕೇಳಿಸಿಕೊಂಡು ಖುಷಿಯ ಕಂಬನಿ ಹರಿಸಿದ್ದರು ರಾಡ್ ಸಾಂಡ್ರೆಸ್​. ತಮ್ಮ ಪ್ರಯತ್ನ ಅಭೂತಪೂರ್ವವಾಗಿ ಯಶಸ್ವಿಯಾಗಿದ್ದು ಕಂಡು ಸ್ವತಃ ಗ್ರೇಮ್​ಕ್ಲಾಕ್​ ಕಣ್ಣಲ್ಲಿಯೂ ಆನಂದ ಭಾಷ್ಪ ಸುರಿದಿತ್ತು. ಒಂದು ವರ್ಷದ ಥೆರಪಿಯ ನಂತರ ‘ರಾಡ್​ ಸಾಂಡ್ರೆಸ್​’ ಇಂಪ್ಲಾಂಟ್​ನಿಂದ ಕೇಳಿಸಿಕೊಂಡು ಮಾತನಾಡಿದರು…!   

ಹೀಗೆ ಮಲ್ಟಿ ಚಾನೆಲ್​ ಕಾಕ್ಲಿಯರ್​ ಇಂಪ್ಲಾಂಟ್​ ಎಂಬ ದಿವ್ಯಶಕ್ತಿಯನ್ನು ಕಿವುಡ ಪ್ರಪಂಚಕ್ಕೆ ಧಾರೆ ಎರೆದ ಈ ಮಹಾನ್​ಚೇತನ, ಇಂದು ಈ ಕ್ಷೇತ್ರದಲ್ಲಾಗುತ್ತಿರುವ ಅಭಿವೃದ್ಧಿ ಕಂಡು ತನ್ನ ಸಾಧನೆಯ ಸಾರ್ಥಕ್ಯ ಕಾಣುತ್ತಿದ್ದಾರೆ. ಜಗತ್ತಿನಾದ್ಯಂತ ಕಿವುಡ ಮಕ್ಕಳು ಈ ಕಾಕ್ಲಿಯರ್​ ಇಂಪ್ಲಾಂಟ್​ನಿಂದಾಗಿ ಸಾಮಾನ್ಯರಂತೆ ಬೆಳೆಯುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದಾರೆ. ಒಂದು ಸರ್ವೆ ಪ್ರಕಾರ ಈಗ ಜಗತ್ತಿನಾದ್ಯಂತ ಸುಮಾರು 7 ಲಕ್ಷಕ್ಕೂ ಹೆಚ್ಚು ಕಾಕ್ಲಿಯರ್​ ಇಂಪ್ಲಾಂಟ್​ ಫಲಾನುಭವಿಗಳಿದ್ದಾರೆ..! 

ಅಬ್ಬಾ..! ಎಂಥ ಸಾಧನೆ..! ಕಿವುಡರಿಗೆ ಶಬ್ಧ ಜಗತ್ತನ್ನೇ ತಂದುಕೊಟ್ಟು, ಕಿವುಡ ಮಕ್ಕಳ ಭವಿಷ್ಯದ ದಾರಿಗೆ ದೀಪವಾಗಿರುವ ಗ್ರೇಮ್​ಕ್ಲಾರ್ಕ್​ ನನಗೆ ದೇವರಂತೆ ಕಂಡರು.  ಆಗಷ್ಟೇ  ಸ್ಕೂಲ್​ನಿಂದ ಬಂದು ಅಥರ್ವನನ್ನು ಮಲಗಿಸಿ, ಮೊಬೈಲ್​ಹಿಡಿದು ಕುಳಿತಿದ್ದ ನಾನು ಯೂಟ್ಯೂಬ್​ನಲ್ಲಿ  ಗ್ರೇಮ್​ಕ್ಲಾರ್ಕ್​ರ ಜೀವನಗಾಥೆಯ ವಿಡಿಯೋ ನೋಡಿ ಪುಳಕಗೊಂಡಿದ್ದೆ. ಆಗಲೇ ಸ್ಕ್ಯಾನ್​ ಸೆಂಟರ್​ನಿಂದ ಫೋನ್​ಬಂದಿತ್ತು. ‘ರಿಪೋರ್ಟ್​ ಸಿದ್ಧವಾಗಿದೆ ಬನ್ನಿ’ ಎಂಬ ಕರೆ ಅದು. ಸ್ಕ್ಯಾನ್​ ಮಾಡಿಸಿದ ಎರಡು ದಿನಗಳ ನಂತರ ರಿಪೋರ್ಟ್ ಸಿದ್ಧಗೊಂಡಿತ್ತು.

ಆವತ್ಯಾಕೋ ಅಥರ್ವನಿಗೆ ನಿದ್ದೆಯೋ ನಿದ್ದೆ. ಸ್ಕೂಲ್​ನಿಂದ ಬಂದಿದ್ದೇ ಬಟ್ಟೆ ಕೂಡ ಬದಲಾಯಿಸದೇ ಮಲಗಿಬಿಟ್ಟಿದ್ದ ನನ್ನ ಕಂದ. ಸ್ಕ್ಯಾನಿಂಗ್​ ಸೆಂಟರ್​ಗೆ ಹೋಗಿ ರಿಪೋರ್ಟ್​ ತರುವ ಕೆಲಸವಿತ್ತಲ್ಲ.. ‘ಅಥರ್ವ ಮಲಗಿಯೇಬಿಟ್ಟಿದ್ದಾನೆ ಏನು ಮಾಡುವುದು..?’ ಯೋಚಿಸುತ್ತಿದ್ದಂತೆ, ಪುಷ್ಕರ್​ ಅಮ್ಮ ಸೌಮ್ಯ ನೆನಪಾದಳು. ಅವಳಿಗೆ ಫೋನಾಯಿಸಿದೆ. ‘ಸ್ಕ್ಯಾನ್​ ರಿಪೋರ್ಟ್​ ತರಲು ಹೋಗುವುದಿದೆ. ಅಥರ್ವನನ್ನ ನಿಮ್ಮ ಮನೆಯಲ್ಲಿ ಮಲಗಿಸ್ಲಾ..?’ ಕೇಳುತ್ತಿದ್ದಂತೆ, ಒಪ್ಪಿಕೊಂಡಳು ಸೌಮ್ಯ. ನಿಧಾನವಾಗಿ ಅವನನ್ನೆತ್ತಿಕೊಂಡು ಹೋಗಿ ಸೌಮ್ಯಾ ಹಾಸಿಟ್ಟಿದ್ದ ಹಾಸಿಗೆಯ ಮೇಲೆ ಮಲಗಿಸಿದೆ. ಕಿಟಕಿಯ ಪರದೆ ಸರಿಸಿ ಭದ್ರಗೊಳಿಸಿ ಕೋಣೆಯಲ್ಲಿ ಕತ್ತಲೆ ಮಾಡಿ ಜೋಪಾನ ಮಾಡಿದಳು ಆಕೆ. ಆಚೆ ಕೋಣೆಯಲ್ಲಿಯೇ  ಅಥರ್ವನದೇ ವಯಸ್ಸಿನ ಅವಳ ಮಗ ಪುಷ್ಕರ್​ ಕೂಡ ಗಾಢ ನಿದ್ದೆಯಲ್ಲಿದ್ದ. ‘ನೀನು ಆರಾಮಾಗಿ ಹೋಗಿ ಬಾ. ಅಥರ್ವ ಎದ್ದರೆ ನಾನಿರ್ತೀನಲ್ಲ. ಟೆನ್ಶನ್ ​ಏನೂ ಮಾಡ್ಕೋಬೇಡ’ ಧೈರ್ಯಕೊಟ್ಟಳು ಗೆಳತಿ.  ನಾನು ನೆಮ್ಮದಿಯಾಗಿ ಹೊರಟೆ. 

ಮನಸ್ಸಿನೊಳಗೆ ಏಕಿಂಥ ಕಸಿವಿಸಿಯೋ ? ತಿಳಿಯುತ್ತಿಲ್ಲ. ಆಪರೇಶನ್​ ಬೇಕೋ, ಬೇಡವೋ, ಸರ್ಜರಿ ಮಾಡಿಸಲು ಕಾಕ್ಲಿಯ ನರ ಯೋಗ್ಯವಿದೆಯೋ ಇಲ್ಲವೋ ಎಂಬುದೆಲ್ಲ ತಿಳಿಯುವುದೇ ಈ ಸ್ಕ್ಯಾನ್​ ರಿಪೋರ್ಟ್​ನಿಂದ. ಕಾಕ್ಲಿಯ ನರವೇ ಇಲ್ಲದಿದ್ದರೆ ಏನು ಗತಿ..? ‘ಇಲ್ಲ. ಇಲ್ಲ. ಹಾಗೆಲ್ಲ ಆಗಲ್ಲ. ಅಂಥ ಋಣಾತ್ಮಕ ಯೋಚನೆಗಳನ್ನೆಲ್ಲ ಮಾಡುವುದೇ ಬೇಡ’ ಮತ್ತೆ ಮತ್ತೆ ಸಮಾಧಾನ ಮಾಡಿಕೊಂಡೆ.  

ಸ್ಕ್ಯಾನಿಂಗ್​ ಸೆಂಟರ್​ಗೆ ಹೋಗಿ ಅಥರ್ವನ ಹೆಸರು ಹೇಳುತ್ತಿದ್ದಂತೆ, ಸ್ಕ್ಯಾನ್​ ರಿಪೋರ್ಟ್​ಮತ್ತು ಸ್ಕ್ಯಾನ್​ನ ಎಲ್ಲ ವಿವರಗಳಿರುವ ಸಿ.ಡಿ ಎರಡನ್ನೂ ಕೊಟ್ಟರು ರಿಸೆಪ್ಶನಿಸ್ಟ್​. ‘ಮ್ಯಾಡಮ್​. ನಿಮಗೆ ಈ ರಿಪೋರ್ಟ್​ಒಳಗೆ ಏನಿದೆ ಎಂಬುದು ಗೊತ್ತಾಗುತ್ತಾ..? ನನಗೆ ಹೇಳುತ್ತೀರಾ..?’ ನಿಧಾನವಾಗಿ ರಿಸೆಪ್ಶನ್​ನಲ್ಲಿ ಕುಳಿತಿದ್ದ ಆ ಯುವತಿಯನ್ನ ಕೇಳಿದೆ. ‘ಇಲ್ಲ ಮ್ಯಾಮ್​, ಸಾರಿ. ಡಾಕ್ಟರ್​ ಹತ್ತಿರ ಕೇಳಿದ್ರೆ ಹೇಳ್ತಾರೆ. ನಿಮ್​ ಡಾಕ್ಟರ್​ನ್ನೇ ಕೇಳಿ.’  ಯಾಂತ್ರಿಕ ನಗುವಿನೊಂದಿಗೆ, ರೊಬೋಟ್​ನ ಥರಹ ಹೇಳಿಬಿಟ್ಟಳು ಅವಳು. ಅವಳಿಗೇನು ಗೊತ್ತು..? ನನ್ನೆದೆಯಲ್ಲಿ ಎದ್ದಿರುವ ಕೋಲಾಹಲ..? 

ವಾಪಾಸ್​ಬರುವಾಗ ಆಟೋದಲ್ಲಿಯೇ ರಿಪೋರ್ಟ್ ತೆಗೆದು ಓದಿದೆ. ಅರ್ಥವಾಗದೆ ಮತ್ತೆ ರಿಪೋರ್ಟ್​​ನ್ನ ಯಥಾವತ್​ ಮಡಿಸಿ ಕವರ್​ನ ಒಳಗೆ ಇಡುತ್ತಿದ್ದಂತೆ ವಿನಯ್​ ಕಾಲ್​ ಮಾಡಿದ. ಆ ದಿನದ ಅವನ ಐದನೇ ಕರೆ ಅದು. ದಿನಕ್ಕೆ ಒಂದೇ ಬಾರಿ ಫೋನ್​ ಮಾಡುತ್ತಿದ್ದ ಅವನು ಆವತ್ತು ಐದನೇ ಬಾರಿ ಫೋನ್​ ಮಾಡಿದ್ದ. ‘ರಿಪೋರ್ಟ್​ಸಿಕ್ತಾ..? ಏನು ಬರೆದಿದ್ದಾರೆ ಗೊತ್ತಾಗುತ್ತಾ ನಿಂಗೆ..?’ ‘ಹಾಂ. ಓದಿದೆ. ಮುಕ್ಕಾಲುಪಾಲು ಅರ್ಥವಾಗಿಲ್ಲ ವಿನಯ್​, ಆದರೆ ಎಲ್ಲವೂ ಸರಿಯಾಗಿಯೇ ಇದೆ ಅಂತ ನನಗೆ ಅನ್ನಿಸ್ತಿದೆ.  ಇವತ್ತೇ ಈ ರಿಪೋರ್ಟ್​​ನ್ನ ಪ್ರವೀಣ್​ಸರ್​ಗೆ ಕೊಡ್ತೀನಿ. ಅವರು ಏನು ಹೇಳ್ತಾರೋ ಕೇಳಿ ನಿಂಗೆ ತಕ್ಷಣ ಕಾಲ್​ ಮಾಡ್ತೀನಿ’ ಸಮಾಧಾನವಾಗಿಯೇ ಹೇಳಿದ್ದೆ. ‘ಹಾಂ. ಎಲ್ಲ ನಾರ್ಮಲ್​ಇರುತ್ತೆ ಅಮೃತಾ. ನೀನು ಚಿಂತೆ ಮಾಡಬೇಡ. ಅಷ್ಟರ ಮಟ್ಟಿಗೆ ನಾವು ದುರಾದೃಷ್ಟವಂತರಲ್ಲ  ಅನ್ಸುತ್ತೆ ನಂಗೆ. ಧೈರ್ಯವಾಗಿರು’ ಅವನು ನನಗೆ ಧೈರ್ಯ ಕೊಡುತ್ತಿದ್ದಾನಾದರೂ, ಅವನು ನನಗಿಂತ ಹೆಚ್ಚು ತವಕ, ಚಿಂತೆಯಲ್ಲಿದ್ದಾನೆಂಬುದು ಅವನ ದನಿಯಲ್ಲೇ ನನಗೆ ತಿಳಿಯುತ್ತಿತ್ತು. 

ಸ್ಕ್ಯಾನ್​ ರಿಪೋರ್ಟ್​ ಮತ್ತು ಸಿ.ಡಿ ಎರಡನ್ನೂ ಆವತ್ತೇ ಪ್ರವೀಣ್​ ಸರ್​ ಮನೆಗೆ ತಲುಪಿಸಲು ಹೋದಾಗ, ಅವರಿನ್ನೂ ಹಾಸ್ಪಿಟಲ್​ನಿಂದ ಮನೆಗೆ ವಾಪಾಸ್ಸಾಗಿರಲಿಲ್ಲ. ಅವರಿಗೆ ಫೋನ್​ನಲ್ಲಿಯೇ ರಿಪೋರ್ಟ್ ಮನೆಗೆ ತಲುಪಿಸಿದ್ದನ್ನು ಹೇಳಿ, ನಾನು ಮರಳಿ ಬಂದಿದ್ದೆ. ಚಡಪಡಿಕೆ ಕಾಡುತ್ತಲೇ ಇತ್ತು. ರಾತ್ರಿ 8 ರ ಸುಮಾರಿಗೆ ಫೋನ್​ ರಿಂಗಣಿಸಿತು. ನಾನು ಎಣಿಸಿದಂತೆಯೇ ಪ್ರವೀಣ್​ ಸರ್​ ಕಾಲ್​ಮಾಡಿದ್ದರು. ಕರೆಯನ್ನು ರಿಸೀವ್​ಮಾಡುವಾಗ ಕೈ ನಡುಗುತ್ತಿತ್ತು. 

‘ರಿಪೋರ್ಟ್ ನೋಡಿದೆ. ಕಾಕ್ಲಿಯ ನರ ನಾರ್ಮಲ್​ ಇದೆ. ಸರ್ಜರಿ ಮಾಡಲು ಯಾವುದೇ ಸಮಸ್ಯೆ ಇಲ್ಲ. ಸಿ.ಡಿಯನ್ನ ಡಾಕ್ಟರ್​ಗೆ ಕೊಡ್ತೀನಿ. ಅವರೂ ಒಮ್ಮೆ ಪರೀಕ್ಷಿಸುತ್ತಾರೆ. ವಾರದೊಳಗೆ ಸರ್ಜರಿಯ ಕೊಟೇಶನ್​ ಕೊಡ್ತೀವಿ’ ಅಂದುಬಿಟ್ಟರು. ಅಲ್ಲೇ ಮೂಲೆಯಲ್ಲಿಟ್ಟುಕೊಂಡಿದ್ದ ದೇವರ ಫೋಟೋಕ್ಕೆ ಭಕ್ತಿಯಿಂದ ಕೈಮುಗಿದೆ. ಆಡುತ್ತಾ ಕುಳಿತಿದ್ದ ಅಥರ್ವನನ್ನ ಎತ್ತಿ ಎರಡು ಸುತ್ತು ಸುತ್ತಿಸಿ, ಅವನನ್ನ ನಗಿಸಿ ಮುದ್ದಾಡಿದೆ. ಖುಷಿಗೆ ಕಣ್ಣಾಲೆಗಳು ಒದ್ದೆಯಾಗಿದ್ದವು. ನಗು ನಿಯಂತ್ರಣಕ್ಕೆ ಸಿಗುತ್ತಿರಲಿಲ್ಲ. ನನ್ನ ಸಂಭ್ರಮ ನೋಡುತ್ತಿದ್ದ  ಅಥರ್ವನಿಗೆ ಅಮ್ಮ ಯಾಕೆ ಖುಷಿ ಪಡುತ್ತಿದ್ದಾರೆಂಬ ಕಾರಣ ತಿಳಿಯದಿದ್ದರೂ, ಅವನೂ ನನ್ನೊಂದಿಗೆ ಸಂಭ್ರಮ ಪಟ್ಟ. ಸ್ವಲ್ಪ ಸಾವರಿಸಿಕೊಂಡು ವಿನಯ್​ಗೆ ಕಾಲ್​ ಮಾಡಿದೆ.  ಸಂಗತಿ ತಿಳಿದ ವಿನಯ್​ನ ನೆಮ್ಮದಿಯ ನಿಟ್ಟುಸಿರು ನನಗೂ ತಾಕಿತ್ತು. 

ಮರುದಿನದಿಂದ ನನ್ನ ಲಹರಿಯೇ ಬದಲಾಗಿತ್ತು. ಸ್ಕೂಲ್​ನಲ್ಲಿ ಕೂಡ ನನ್ನ ಸಹಪಾಠಿ ತಾಯಿಯರೆಲ್ಲ ‘ಏನ್​ ಅಥರ್ವ ಅಮ್ಮಾ, ಭಾರಿ ಖುಷಿಯಾಗಿದ್ದೀರ..? ನಿಮ್​ಮನೆಯವ್ರು ಬಂದಿದಾರಾ..? ಹೇಗೆ..?’ ಕಿಚಾಯಿಸಿದರು. ಅವರೆಲ್ಲರಿಗೆ ನನ್ನ ಸಂತಸಕ್ಕೆ ಕಾರಣ ತಿಳಿಸಿದೆ. ಅವರೆಲ್ಲ ನನ್ನ ಅಭಿನಂದಿಸಿದರು.

ಪ್ರವೀಣ್​ ಸರ್​ ಹೇಳಿದಂತೆ, ಒಂದು ವಾರದೊಳಗೆ ಸರ್ಜರಿ ಕೊಟೇಶನ್​ ಕೂಡ ನನ್ನ ಕೈ ಸೇರಿತ್ತು. ಅಜಮಾಸು 7 ಲಕ್ಷದ ಕೊಟೇಶನ್​ ಅದು.  ಕೊಟೇಶನ್​ ಪ್ರತಿ, ಅಥರ್ವನ ಆಧಾರ ಕಾರ್ಡ್​, ಫೋಟೋ ಎಲ್ಲವನ್ನೂ ಜತೆಗಿಟ್ಟು ಬೆಂಗಳೂರಿಗೆ ಕೊರಿಯರ್​ ಮಾಡಿದೆ. ಪ್ರಧಾನ ಮಂತ್ರಿ ಸಹಾಯನಿಧಿ ಮತ್ತು ಮುಖ್ಯಮಂತ್ರಿ ಸಹಾಯ ನಿಧಿಗಾಗಿ ಅರ್ಜಿ ಹಾಕುವುದಕ್ಕಾಗಿ, ಆಫೀಸಿಗೆ ನಾಲ್ಕು ದಿನ ರಜಾ ಹಾಕಿ ಊರಿಗೆ ಹೊರಟೇಬಿಟ್ಟಿದ್ದ ವಿನಯ್​. ಕೊಟೇಶನ್​ ಕೈ ಸೇರಿದ ಒಂದೇ ವಾರದೊಳಗೆ ವಿನಯ್​ ಸಹಾಯ ನಿಧಿಗಾಗಿ ಅರ್ಜಿ ಹಾಕಿಯೂ ಮುಗಿಸಿದ್ದ. ಫಂಡ್ ಕೈಸೇರಿದ ತಕ್ಷಣ ಆಪರೇಶನ್​ ದಿನಾಂಕವನ್ನ ಗೊತ್ತುಪಡಿಸುವ ತರಾತುರಿಯಲ್ಲಿದ್ದ ವಿನಯ್​, ಉಳಿದ ಹಣ ಹೊಂದಿಸುವ ದಾರಿಯ ಹುಡುಕಾಟ ಪ್ರಾರಂಭಿಸಿದ್ದ.

ನಮ್ಮ ಶಾಲೆಯ ಕೆಲವು ಮಕ್ಕಳಿಗೆ ಪ್ರಧಾನಮಂತ್ರಿ ನಿಧಿ ಮತ್ತು ಮುಖ್ಯಮಂತ್ರಿ ನಿಧಿ ಎರಡೂ ಸಹಾಯಧನಗಳೂ ದೊರೆತಿದ್ದವು. ಹೀಗಾಗಿ ಈ ಎರಡೂ ಸಹಾಯ ಧನಗಳು ನಮಗೂ ಸಿಕ್ಕರೆ ಅನುಕೂಲ ಎಂಬ ಆಕಾಂಕ್ಷೆ ನನ್ನದು. ಊರಿನಲ್ಲಿ ನಾಲ್ಕು ದಿನ ಉಳಿದು, ಅರ್ಜಿ ಸಲ್ಲಿಸಲು ಬೇಕಾದ ಇನ್​ಕಮ್​ ಸರ್ಟಿಫಿಕೇಟ್​ ಮಾಡಿಸಿ, ಎಂ.ಪಿ ಹಾಗೂ ಎಮ್​.ಎಲ್​.ಎ ಕಚೇರಿಯಲ್ಲಿ ಅವರು ಕೇಳಿದ ಎಲ್ಲ ಕಾಗದ ಪತ್ರಗಳನ್ನೂ ಕೊಟ್ಟು ಸಹಾಯನಿಧಿಗಾಗಿ ಅರ್ಜಿ ಸಲ್ಲಿಸಿ ವಾಪಾಸ್​ ಬಂದಿದ್ದ ವಿನಯ್​. ಎಲ್ಲವೂ ಅಂದುಕೊಂಡಂತೆ ನಡೆದರೆ 2018ರ ಫೆಬ್ರವರಿಯಲ್ಲಿಯೇ ಅಥರ್ವನಿಗೆ ಕಾಕ್ಲಿಯರ್​ ಇಂಪ್ಲಾಂಟ್​ ಮಾಡಿಸಬಹುದು ಎಂಬುದು ನಮ್ಮ ಲೆಕ್ಕಾಚಾರ.  

ನಮ್ಮ ಗುಂಪಿನ ಇನ್ನೂ ಕೆಲವು ತಾಯಂದಿರು ತಮ್ಮ ಮಕ್ಕಳಿಗೆ ಇಂಪ್ಲಾಂಟ್​ ಮಾಡಿಸುವ ನಿರ್ಧಾರಕ್ಕೆ ಬಂದು, ಅವರೂ ಕೂಡ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ನಮ್ಮೆಲ್ಲರದು ಒಂದೇ ಆಕಾಂಕ್ಷೆ. ಫಂಡ್​ ಯಾವಾಗ , ಎಷ್ಟು ಬರುವುದು..? ಎಂಬ ಆಲೋಚನೆ. ‘ಅವರಿಗೆ ಎಷ್ಟು ಕಾದರೂ ಫಂಡ್​ ಬರಲೇ ಇಲ್ಲವಂತೆ! ಇವರಿಗೆ ಫಂಡ್​ಕೇವಲ 1 ಲಕ್ಷ ಬಂದಿದೆಯಂತೆ..! ಮತ್ಯಾರಿಗೋ ಫಂಡ್​ಸಿಗೋಕೆ 6 ತಿಂಗಳಾಗಿತ್ತಂತೆ..! ಎಂಬ ಅಂತೆ-ಕಂತೆಗಳದೇ ಮಹಾಪೂರ. ಕಾಕ್ಲಿಯರ್​ ಇಂಪ್ಲಾಂಟ್​ ಮಾಡಿಸುವ ತಯಾರಿಯಲ್ಲಿದ್ದ ನಮ್ಮ ಗುಂಪಿನ ತಾಯಂದಿರೆಲ್ಲ ಒಂದು ಕಡೆ ಸೇರಿದರೆ ಸಾಕು ಇದೇ ಮಾತು. ಫಂಡ್​ಸಿಗದೇ ಹೋದರೆ..? ಸರ್ಜರಿಗೆ ಇನ್ನೂ ತಡವಾಗಿಬಿಟ್ಟರೆ..? ಈಗಲೇ ಎರಡರ ಸಮೀಪವಿರುವ ನನ್ನ ಮಗನ ಆಪರೇಶನ್​ ಇನ್ನಷ್ಟು ಮುಂದೂಡಿಬಿಟ್ಟರೆ..? ಎಂಬ ಆತಂಕದ ಸುಳಿ ತಲೆಯಲ್ಲಿ !

ಇಂಪ್ಲಾಂಟ್​ ಮಾಡಿಸುವ ನಿರ್ಧಾರ ಗಟ್ಟಿಯಾದಾಗಿನಿಂದ ಈಗಾಗಲೇ ಇಂಪ್ಲಾಂಟ್​ ಮಾಡಿಸಿಕೊಂಡು, ಚೆಂದವಾಗಿ ಮಾತನಾಡುತ್ತಿದ್ದ ಮಕ್ಕಳನ್ನ ಮಾತನಾಡಿಸುವುದೆಂದರೆ, ಅದೇನೋ ಪುಳಕ ನನಗೆ. ಆ ಮಕ್ಕಳು ಸಿಕ್ಕರೆ ಸಾಕು, ಅವರ ಬಳಿ ಓಡೋಡಿ ಹೋಗಿ ಏನಾದರೂ ಮಾತನಾಡಿಸುತ್ತಿದ್ದೆ. ‘ಬೆಳಗ್ಗೆ ಏನು ತಿಂದೆ..? ಉಪ್ಪಿಟ್ಟು ತಿಂದೆಯಾ..? ಉಪ್ಪಿಟ್ಟು ತಿನ್ನಲು ಹೇಗಿತ್ತು..? ಯಾರು ಉಪ್ಪಿಟ್ಟು ಮಾಡಿದರು..?’ ಹೀಗೆ ನಾನಾ ಪ್ರಶ್ನೆ ಕೇಳಿ ಅವರಿಂದ ಉತ್ತರ ಪಡೆದು ಬಂದರೆ, ಒಂದು ರೀತಿಯ ನೆಮ್ಮದಿ. ಆಗ ನಮ್ಮ ಸ್ಕೂಲ್​ನಲ್ಲಿದ್ದ  ಸ್ವಾತ್ಮಾ, ಪದವಿ, ಆರವ್​, ಶ್ರೇಯಸ್​, ಸೌಮಿತ್​, ಸಚಿತ್​ಹೀಗೆ ಇನ್ನೂ ಹಲವು ಮಕ್ಕಳು ಅದ್ಭುತವಾಗಿ ಮಾತನಾಡುತ್ತಿದ್ದರು. 4 ರಿಂದ 6 ವರ್ಷದೊಳಗಿನ ಈ ಎಲ್ಲ ಮಕ್ಕಳಿಗೆ ಇಂಪ್ಲಾಂಟ್​ ಸರ್ಜರಿಯಾಗಿ ಆಗಲೇ ಎರಡರಿಂದ ಮೂರು ವರ್ಷಗಳು ಕಳೆದಿದ್ದರಿಂದ, ಅವರೆಲ್ಲ ಸಾಮಾನ್ಯ ಮಕ್ಕಳಂತೆಯೇ ಮಾತನಾಡುತ್ತಿದ್ದರು. ಅವರಲ್ಲಿಯೇ ಸ್ವಲ್ಪ ದೊಡ್ಡ ಮಕ್ಕಳಾದ ಪದವಿ ಮತ್ತು ಶ್ರೇಯಸ್​ಇಬ್ಬರೂ ಸ್ನೇಹಿತರು. ಮಧ್ಯಾಹ್ನ ಊಟದ ನಂತರ ಅವರಿಬ್ಬರೂ ಒಂದೆಡೆ ಕುಳಿತು ಅದೇನೋ ಸುದ್ದಿ ಹೇಳುತ್ತಿದ್ದರು. ದಿನವೂ ಅವರ ಬಳಿ ನಿಂತು ಆ ಮಕ್ಕಳನ್ನ ನೋಡುತ್ತಾ ಮೈಮರೆಯುತ್ತಿದ್ದೆ ನಾನು. 

ನಾವು ಚಿಕ್ಕಮಕ್ಕಳ ಗುಂಪಿನವರಾಗಿರುವುದರಿಂದ, ನಮಗೆ ದೊಡ್ಡ ಮಕ್ಕಳ ಗುಂಪಿನೊಂದಿಗೆ ಒಡನಾಟ ಕಮ್ಮಿ. ರಚ್ಚೆ ಹಿಡಿಯುವ ಈ ಮಕ್ಕಳಿಗೆ ಸ್ವರ ಹೇಳಿಸುವುದಕ್ಕೂ ಹರಸಾಹಸಪಡುತ್ತಿದ್ದ ನಮಗೆ, ದೂರದಲ್ಲಿ ಕಾಣುವ ಆ ದೊಡ್ಡ ಮಕ್ಕಳೇ ನಮಗೆ ಸ್ಪೂರ್ತಿ. ಹೀಗಾಗಿ ಆ ಮಕ್ಕಳ ತಾಯಂದಿರು ಮಾತಿಗೆ ಸಿಕ್ಕರಂತೂ, ನಿಧಿ ಸಿಕ್ಕ ಖುಷಿ ನಮಗೆ.  ನೀವು ಮನೆಯಲ್ಲಿ ಹೇಗೆ ಕಲಿಸುತ್ತೀರಾ..? ಇಂಪ್ಲಾಂಟ್ ಆದ ತಕ್ಷಣ ಹೇಗೆ ತರಬೇತಿ ಕೊಟ್ರಿ..? ಇಂಪ್ಲಾಂಟ್​ಆಗಿ ಎಷ್ಟು ದಿನಕ್ಕೆ ಅರ್ಥಪೂರ್ಣ ಶಬ್ಧ ಮಾತು ಬಂತು..? ಅಮ್ಮಾ ಅಂದಿದ್ದು ಯಾವಾಗ..? ಇಂಗ್ಲೀಷ್​ಕಲಿಸುತ್ತಿದ್ದೀರಾ..? ಅದನ್ನ ಹೇಗೆ ಪ್ರಾರಂಭ ಮಾಡಿದರಿ..? ನಿಮ್ಮ ಮಗುವಿನ ಮಾತಿನಷ್ಟೇ ಸ್ಪಷ್ಟತೆ ಬರಬೇಕು ಅಂದರೆ ನಾವೆಲ್ಲ ಏನೇನು ಮಾಡಬೇಕು..? ಅನ್ನೋ ಪ್ರಶ್ನೆಗಳ ಸುರಿಮಳೆಯನ್ನೇ ಗರಿಯುತ್ತಿದ್ದೆವು. ಪಾಪ ಅವರೆಲ್ಲ ನಾವು ಕೇಳುವ ಪ್ರಶ್ನೆಗಳಿಗೆಲ್ಲ ಸಮಾಧಾನವಾಗಿಯೇ ಉತ್ತರಿಸಿ ಹೋಗುತ್ತಿದ್ದರು. 

ಅವರು ಹೇಳಿದ್ದರಲ್ಲಿ ನನಗೆ ಬೇಕಿನಿಸಿದ್ದನ್ನು ನೋಟ್​ ಮಾಡಿ ಇಟ್ಟುಕೊಳ್ಳುತ್ತಿದ್ದೆ. ಸ್ನೇಹಮಯಿಯಾಗಿದ್ದ ಸೌಮಿತ್​ ಅಮ್ಮ ನನಗೆ ಆಗಾಗ ಧೈರ್ಯ ನೀಡುತ್ತಿದ್ದರು. ‘ಚಿಂತೆ ಮಾಡಬೇಡಿ ಅಥರ್ವ ಅಮ್ಮ, ನಿಮ್ಮ ಮಗನೂ ನನ್ನ ಮಗನ ಹಾಗೇ ಮಾತಾಡ್ತಾನೆ. ನಾವು ಎಷ್ಟು ಪ್ರಯತ್ನ ಹಾಕ್ತೀವೋ ಅಷ್ಟು ಬೇಗ ನಮ್ಮ ಮಕ್ಕಳಿಗೆ ಮಾತು ಬರುತ್ತೆ. ಪ್ರಯತ್ನ ಮುಖ್ಯ ಕಣ್ರಿ. ನೀವೂ ಮಾಡ್ತಿರಾ ಬಿಡಿ.’ ಮೆಲುದನಿಯಲ್ಲಿಯೇ ಸಲಹೆ  ಕೊಟ್ಟು, ಧೈರ್ಯ ತುಂಬುತ್ತಿದ್ದರು. 

ಇನ್ನು ಆಗಷ್ಟೇ ಆಪರೇಶನ್​ಮುಗಿಸಿ, ಸ್ವಿಚ್​ ಆನ್​ಮಾಡಿಸಿಕೊಂಡು ಬಂದ ಮಕ್ಕಳ ತಾಯಂದಿರ ಬಳಿ, ಆಪರೇಶನ್​ನ ಅನುಭವಗಳನ್ನು ಕೇಳುತ್ತಿದ್ದೆ. ಏನೇನೆಲ್ಲ ತಯಾರಿ ಮಾಡಿಕೊಂಡು ಹಾಸ್ಪಿಟಲ್​ಗೆ ಹೋದ್ರಿ..? ಎಷ್ಟು ತಾಸು ಆಪರೇಶನ್​ ಮಾಡಿದ್ರು..? ಮಗು ಚೇತರಿಸಿಕೊಳ್ಳೋಕೆ ಎಷ್ಟು ದಿನಗಳು ಬೇಕು..? ಸ್ವಿಚ್​ ಆನ್​ ಮಾಡಿದ ತಕ್ಷಣ ಮಗುವಿನ ಪ್ರತಿಕ್ರಿಯೆ ಹೇಗಿತ್ತು  ಎಂಬೆಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದೆ.

ಕಾಕ್ಲಿಯರ್​ ಇಂಪ್ಲಾಂಟ್​ ಬಗ್ಗೆ ಎಷ್ಟು ತಿಳಿದುಕೊಂಡರೂ ಕಮ್ಮಿಯೇ. ಯಾಕೋ ಆ ವಿಷಯವನ್ನ ಅದೆಷ್ಟು ತಿಳಿದುಕೊಂಡರೂ ತೀರದ ದಾಹ. ಅಥರ್ವ ಮನೆಯಲ್ಲಿ ಮಲಗಿದ್ದ ಸಮಯದಲ್ಲೆಲ್ಲ ಯೂಟ್ಯೂಬ್​, ಗೂಗಲ್​ ಗಳನ್ನೆಲ್ಲ ಜಾಲಾಡಿ ಕಾಕ್ಲಿಯರ್​ ಇಂಪ್ಲಾಂಟ್​ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಪಡುತ್ತಿದ್ದೆ. ಇಂಪ್ಲಾಂಟ್ ಆದ ಮಕ್ಕಳ ಥೆರಪಿಗಳ ಬಗ್ಗೆ, ಅವರ ಎಲ್ಲ ಡೆವೆಲಪ್​ಮೆಂಟ್​ ಬಗ್ಗೆ ಇದ್ದ ಲೇಖನ, ವಿಡಿಯೋಗಳನ್ನೆಲ್ಲ ನೋಡಿ, ಓದಿ ಅದರ ಲಿಂಕ್​ಗಳನ್ನೆಲ್ಲ ಒಂದೆಡೆ ಸೇವ್​ ಮಾಡಿಕೊಳ್ಳತೊಡಗಿದ್ದೆ. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sudha Adukala

    ನಿಮ್ಮ ಲೇಖನಕ್ಕಾಗಿ ಕಾಯುತ್ತಿರುತ್ತೇನೆ. ನಾನೂ ಮೇಜರ್ ಶಾರ್ಟ್ ಸೈಟ್ ಇರುವ ಮಗುವಿನ ಅಮ್ಮ. ಅದಕ್ಕೆ…..

    ಪ್ರತಿಕ್ರಿಯೆ
  2. krishna

    Nimma lekhana eshtu upayuktavaagide endu helalu padagale illa. Nimma paristhitiyalli iddaraste gottagalu sadhya. Thank you so much !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: