ಮಹಿಳೆ ಮನೆಯ ಅಡಿಗಲ್ಲು…

ಎಲ್ ಜಿ ಗೋಗೇರಿ

ಯಾವುದೇ ಒಂದು ಕಟ್ಟಡದ ನಿರ್ಮಾಣಕ್ಕೆ ಮೊದಲು ಅಡಿಗಲ್ಲು ಹಾಕುವುದು ವಾಡಿಕೆ. ತುಂಬಾ ವರ್ಷಗಳವರೆಗೆ ಆ ಕಟ್ಟಡ ಮಳೆ, ಗಾಳಿ, ಬಿಸಿಲು, ಭೂಕಂಪನಗಳಂತಹ ಪ್ರಕೃತಿ ವಿಕೋಪಗಳು ಏನೇ ಬಂದರೂ ಅವೆಲ್ಲವುಗಳನ್ನು ತಡೆದುಕೊಂಡು ಗಟ್ಟಿಮುಟ್ಟಾಗಿರಲಿ ಎಂದು ಕಟ್ಟಡ ಕಟ್ಟುವ ಮೊದಲು ತುಂಬಾ ಕಾಳಜಿ ವಹಿಸಿ, ಗುಂಡಿ ತೋಡಿ, ಆನಂತರದಲ್ಲಿ ಮನೆ ಕಟ್ಟತೊಡಗುತ್ತಾರೆ. ಮನೆ ನಿರ್ಮಾಣವಾದ ಮೇಲೆ ನೋಡುಗರಿಗೆ ಬಣ್ಣ ಸುಣ್ಣಗಳಿಂದ ಕಂಗೊಳಿಸುವ ಬಣ್ಣದ ಮನೆ ಅಂದವಾಗಿ ಕಂಡು ಹೊಗಳಿಸಿಕೊಳ್ಳುತ್ತದೆ. ಆದರೆ ಇಡೀ ಮನೆಯ ಭಾರವನ್ನು ಆ ʻಅಡಿಗಲ್ಲುʼ ಹೊತ್ತಿರುತ್ತದೆ. ಆದರೆ ಆ ಅಡಿಗಲ್ಲು ಯಾರಿಗೂ ಕಾಣದೆ ಭೂಮಿಯಲ್ಲಿಯೇ ದಫನ್‌ ಆಗಿರುತ್ತದೆ.

ಹಾಗೆ ಒಂದು ಮನೆ ಅಥವಾ ಮನೆತನ ಬೆಳೆಯಲು ಮುಖ್ಯವಾಗಿ ಆ ಮನೆಯ ಗೃಹಿಣಿಯೂ ಕಾರಣವಾಗಿರುತ್ತಾಳೆ. ಸಾಮಾನ್ಯವಾಗಿ ಅದರಲ್ಲೂ ಮಧ್ಯಮ ವರ್ಗದ ಮನೆಗಳಲ್ಲಿ ತಾಯಿ, ಹೆಂಡತಿ, ಸೊಸೆ, ಅತ್ತಿಗೆ ಅನ್ನುವ ಸ್ಥಾನದಲ್ಲಿರುವ ಹೆಣ್ಣು ತನ್ನ ಮನೆಯ ಸದಸ್ಯರ ಬೇಕು- ಬೇಡಗಳ ಬಗ್ಗೆ ಯೋಚಿಸುತ್ತಿರುತ್ತಾಳೆ. ಹೊತ್ತೊತ್ತಿಗೆ ಅವರ ಊಟೋಪಚಾರ, ಅವರ ಬಟ್ಟೆಬರೆಗಳ ಶುಚಿ, ಅವರ ಅಗತ್ಯತೆಗಳನ್ನು ಪೂರೈಸುವಳು. ಅವರ ಹೊರಗಿನ ಸಮಸ್ಯೆ- ಸವಾಲುಗಳ ಬಗ್ಗೆ ಆಲಿಸಿ, ತನಗೆ ತಿಳಿದ ಸಲಹೆ ಸಹಕಾರ ನೀಡುತ್ತಾಳೆ. ಎಡವಿದರೆ ಕೈಹಿಡಿದು ಮೇಲೆತ್ತುತ್ತಾಳೆ, ನೊಂದಾಗ ಸಮಾಧಾನ ಹೇಳಿ ತಪ್ಪಿದಾಗ ತಿದ್ದಿ ಬುದ್ಧಿ ಹೇಳುವಳು. ಹೀಗೆ ನಾನಾ ರೀತಿಯಲ್ಲಿ ತನ್ನ ಸ್ವಂತದ ಕನಸು ಆಸೆ ಆಕಾಂಕ್ಷೆಗಳೆಲ್ಲವನ್ನು ಬದಿಗಿಟ್ಟು, ಪ್ರೀತಿ ಮಮತೆ ಅನ್ನುವ ಅಡಿಗಲ್ಲುಗಳನ್ನು ಹಾಕಿ ತನ್ನ ಮನೆಯೂ ಒಂದು ಅಂದಚೆಂದದ ಮನೆಯಾದೀತು, ಸುಂದರ ಸಂಸಾರವಾದಿತು ಅನ್ನುವ ನಂಬಿಕೆ ಇಟ್ಟು ದಿನದೂಡುತ್ತಿರುತ್ತಾಳೆ. ಆ ಮನೆಯ ಏಳಿಗೆ ಮತ್ತು ಗೆಲುವಿಗಾಗಿ ಶ್ರಮಿಸುತ್ತಿರುತ್ತಾಳೆ.

ಕೆಲವೊಂದು ಮನೆಗಳಲ್ಲಿ ಇದೇ ಭಾವನೆ ಮನೆಗೆ ಯಜಮಾನನಾದ ಗಂಡಿಗೂ ಇರುತ್ತದೆ. ಆದರೆ ಹೆಚ್ಚಾಗಿ ಮನೆಯಲ್ಲಿ ಇರುವವಳು ಹೆಣ್ಣಲ್ಲವೆ, ಹೀಗಾಗಿ ಹೆಚ್ಚಿನ ಜವಾಬ್ದಾರಿ ಆ ಮನೆಯ ಗೃಹಿಣಿಗೆ ಹೆಚ್ಚಾಗಿರುತ್ತದೆ. ಎಲ್ಲರನ್ನೂ ಅನುಸರಿಸಿಕೊಂಡು. ಸಮಾನಾಂತರವಾಗಿ ಕಂಡು ಆದರ್ಶ ಕುಟುಂಬವೆನಿಸಿಕೊಂಡ ಅದೆಷ್ಟೋ ಕುಟುಂಬಗಳನ್ನು ನೋಡೆ ಇರುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಸಹ ಗಂಡಿನಷ್ಟೇ ಸಮಾನಾಂತರವಾಗಿ ಹೊರಗಡೆ ದುಡಿದು, ತನ್ನ ಸಂಸಾರವನ್ನು ಒಪ್ಪ ಓರಣವಾಗಿಟ್ಟುಕೊಂಡು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಳೆ ನಗರ ಜೀವನದಲ್ಲಿ.

ಆದರೆ ಅಂಥವರಿಗೆ ಮನೆಯ ಸದಸ್ಯರು ಸ್ವಲ್ಪ ಪ್ರೀತಿ ಮತ್ತು ಸ್ವಲ್ಪ ಕೃತಜ್ಞತಾಭಾವ ಮರಳಿ ಕೊಟ್ಟಾಗ ಅದೇ ಅವರಿಗೆ ಬಿರುದು ಸನ್ಮಾನ ವಿದ್ದಂತೆ. ಯಾಕಂದ್ರೆ ಹಣ್ಣು, ನೆರಳು ನೀಡುವ ಮರ ಯಾವತ್ತೂ ಪ್ರತಿಫಲ ಬಯಸುವುದಿಲ್ಲ. ಅದರಂತೆ ಕಲ್ಮಶವಿಲ್ಲದ ಸಂಬಂಧ, ಸುಖ ಹಂಚುವ ಮತ್ತು ಶುಭ ಬಯಸುವ ಹೃದಯಗಳು ಪ್ರತಿಫಲ ಕೇಳುವುದಿಲ್ಲ. ಇಂಥ ಭಾವನೆ ಉಳ್ಳವರು ನಿಸ್ವಾರ್ಥ ಸೇವೆ ಮತ್ತು ಇನ್ನೊಬ್ಬರ ಖುಷಿ ಸಂತಸದಲ್ಲಿ ತಮ್ಮ ಸಂತೋಷವನ್ನು ಕಾಣುತ್ತಾರೆ. ಆದರೆ ಯಾವುದೋ ಒಂದು ಗಳಿಗೆಯಲ್ಲಿ ಬೇಸರಿಸಿಕೊಂಡಾಗ, ದಣಿದು ಮೂಲೆ ಹುಡುಕಿದಾಗ… ಎದುರಿಗೆ ತನ್ನವರೆನಿಸಿಕೊಂಡವರ ಧೈರ್ಯ ಕೊಡುವ ಒಂದು ಮಾತು.. ಒಂದು ಭರವಸೆಯ ನಗು, ಮತ್ತೆ ಅವಳಿಗೆ ನೂರಾನೆಗಳ ಬಲವನ್ನು ಕೊಡುತ್ತದೆ. ಈ ಸತ್ಯವನ್ನು ಅರಿತು ಅವಳೊಂದಿಗೆ ನಾವೂ ಇರೋಣ ಅಲ್ಲವೇ..

‍ಲೇಖಕರು Admin

October 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: