ಅಮೃತಾ ಹೆಗಡೆ ಅಂಕಣ- ಅಲ್ಲಿಂದ ಆ ವಿದಾಯ ತರವೇ..?

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

30

ಪೂರ್ಣಿಮಾ ಮ್ಯಾಮ್​ಮಾತು ತಲೆಯಲ್ಲಿ ಗುಯ್​ಗುಡುತ್ತಿತ್ತು. ‘ಹಿ ಈಸ್​ ಟೋಟಲಿ ನಾರ್ಮಲ್​ ಕಿಡ್’ ಅನ್ನೋ ಅವರ ನುಡಿಯನ್ನ ನೆನೆಸಿಕೊಂಡಷ್ಟೂ ಸಲವೂ ಎದೆಗೂಡೆಲ್ಲ ತಂಪು ತಂಪು. ಸಾರ್ಥಕ ಭಾವದ ಜತೆಯಲ್ಲಿಯೇ ಇರುವ ವಿವರಿಸಲಾರದ ಸಂತಸ ಮತ್ತೆ ಮತ್ತೆ ಕಣ್ಣಾಲೆಗಳಲ್ಲಿ ನೀರು ತುಂಬಿಸುತ್ತಿತ್ತು. ನನ್ನ ಈ ವಿಶೇಷ ಮಗುವಿಗೆ ಅವರು  ಸಾಮಾನ್ಯ ಮಗು ಎಂದು ಅಭಿಪ್ರಾಯಪಟ್ಟುಬಿಟ್ಟಿದ್ದರು. ಅದಕ್ಕಿಂತ ಖುಷಿ ಬೇಕೆ? ಬಯಸಿ ಬಯಸಿ, ಯಾವುದಕ್ಕಾಗಿ ದಿನರಾತ್ರಿ ಕಷ್ಟಪಟ್ಟು, ಹಾತೊರೆಯುತ್ತಿದ್ದೆನೋ ಅದೊಂದು ಮಾತು ಪೂರ್ಣಿಮಾ ಮ್ಯಾಮ್​ ಅವರಿಂದ ನಮಗೆ ಸಿಕ್ಕಿತ್ತು.    

10 ದಿನಗಳ ಸಮ್ಮರ್​ ಕ್ಯಾಂಪ್​ ಮುಕ್ತಾಯವಾಗಿ, ಸಮ್ಮರ್​ ಕ್ಯಾಂಪ್​ನ ಮುಕ್ತಾಯದ ದಿನ ಪ್ರೀಸ್ಕೂ​ಲ್​ನಲ್ಲಿ ನಡೆದ ಪುಟಾಣಿ ಕಾರ್ಯಕ್ರಮದಲ್ಲಿಯೂ ಅಥರ್ವ ಭಾಗವಹಿಸಿ, ಆವತ್ತು ಅಥರ್ವನನ್ನ ಸ್ಕೂಲ್​ನಿಂದ ವಾಪಾಸ್ ಕರೆತರಲು, ನಾನು ವಿನಯ್​ ಇಬ್ಬರೂ ಲಿಟಲ್​ ಎಲ್ಲಿ ಕಿಂಡರ್​ ಗಾರ್ಡನ್​ ಪ್ರೀಸ್ಕೂಲ್​ಗೆ ಹೋಗಿದ್ದಾಗ ನಮಗೆ ಸಿಕ್ಕ ಸರ್​ಪ್ರೈಸ್​ ಇದು.  

ಪೂರ್ಣಿಮಾ ಮ್ಯಾಮ್​ ನಮ್ಮನ್ನು ಕಂಡವರೇ, ಸ್ವಲ್ಪ ಮಾತನಾಡೋದಿದೆ ಬನ್ನಿ ಎಂದರು. ಅವರ ಕ್ಯಾಬಿನ್​ನ ಒಳಹೊಕ್ಕು, ಟೇಬಲ್​ ಮುಂದಿನ ಎರಡು ಕುರ್ಚಿಗಳ ಮೇಲೆ ಆಸೀನರಾದೆವು ನಾವು. ಪೂರ್ಣಿಮಾ ಮ್ಯಾಮ್​ ಅಥರ್ವನನ್ನ ಕರೆದುಕೊಂಡು ಬರುತ್ತಿದ್ದಂತೆ, ಅಥರ್ವ ಖುಷಿಯಲ್ಲಿ ‘ಅಮ್ಮಾ, ಅಪ್ಪಾ’ ಎನ್ನುತ್ತಾ ಓಡಿ ಬಂದು ನನ್ನ ನೋಡಿ ನಕ್ಕು ಅವನಪ್ಪನನ್ನು ತಬ್ಬಿಕೊಂಡ. ‘ನಿಮ್ಮ ಅಥರ್ವನನ್ನ ಈ 10 ದಿನಗಳ ಕಾಲ ನಾನು ಗಮನಿಸಿದ್ದೇನೆ.  ಅವನು ತುಂಬಾ ಜಾಣ. ‘ಅವನೊಬ್ಬ ವಿಶೇಷ ಮಗು, ಅವನ ಮಾತು ಯಾರಿಗೂ ಅರ್ಥವಾಗಲ್ಲ, ಅಮ್ಮನ ಸಹಾಯವಿಲ್ಲದೆ ನಾರ್ಮಲ್​ ಸ್ಕೂಲ್​ನಲ್ಲಿ ಇರ್ತಾನೋ ಇಲ್ಲವೋ ಗೊತ್ತಿಲ್ಲ, ನಾರ್ಮಲ್​ ಮಕ್ಕಳ ಜತೆ ಹೇಗೆ ಬೆರೆಯುತ್ತಾನೆ ಎಂಬುದು ತಿಳಿದಿಲ್ಲ’ ಎಂದಿದ್ದಿರಲ್ಲ ನೀವು, ಪ್ಲೀಸ್​ ಆ ಎಲ್ಲ ನಿಮ್ಮ ಅನುಮಾನಗಳಿಗೆ ಇವತ್ತೇ ನೀವು ಫುಲ್​ ಸ್ಟಾಪ್​ ಇಟ್ಟುಬಿಡಿ.’ ಎನ್ನುತ್ತಾ ಮೆಲುವಾಗಿ ನಕ್ಕರು ಪೂರ್ಣಿಮಾ ಮ್ಯಾಮ್. ಒಂದುಕ್ಷಣ ನಮ್ಮ ಕಿವಿಗಳನ್ನೇ ನಂಬುವುದಕ್ಕಾಗಲಿಲ್ಲ ನಮಗೆ.  

ಪೂರ್ಣಿಮಾ ಮ್ಯಾಮ್​, ತಮ್ಮ ಎದುರು ಕುಳಿತಿದ್ದ ನಮ್ಮಿಬ್ಬರನ್ನೂ ನೋಡುತ್ತಾ ಹೇಳುತ್ತಿದ್ದರು. ‘ಅಥರ್ವ ಎಲ್ಲರೊಂದಿಗೆ ಹೊಂದಿಕೊಂಡೇ ಕಲಿತಿದ್ದಾನೆ. ಇಲ್ಲಿರುವ ಎಲ್ಲ ಮಕ್ಕಳ ಜತೆ ಆಟವಾಡಿದ್ದಾನೆ. ಅವನ ಮಾತುಗಳು ನಮಗೆ ಅರ್ಥವಾಗಿವೆ. ಒಂದುವೇಳೆ ಗೊತ್ತಾಗಿಲ್ಲವೆಂದಾಗ ಅವನ ಬಳಿ ನಾವು ಇನ್ನೊಮ್ಮೆ ಹೇಳೋಕೆ ಹೇಳಿದರೆ, ಮೊದಲು ಹೇಳಿದ್ದನ್ನೇ ವಾಪಾಸ್​ ನಿಧಾನವಾಗಿ ಹೇಳಿ, ಆದಾಗ್ಯೂ ನಮಗೆ ಅರ್ಥವಾಗಿಲ್ಲವೆಂದರೆ ಅಭಿನಯಿಸುತ್ತಾ ಹೇಳಿ ನಮಗೆ ಅರ್ಥ ಮಾಡಿಸಿದ್ದಾನೆ. ‘ಹಿ ಈಸ್​ ಟೋಟಲಿ ನಾರ್ಮಲ್​ ಅಂಡ್ ಇಂಟಲಿಜಂಟ್ ಕಿಡ್​’.  ಇಲ್ಲಿಯವರೆಗೆ ನನಗೆ ಯಾವ ಡೆಫ್​ ಮಗುವನ್ನೂ ಹತ್ತಿರದಿಂದ ನೋಡಿ ಗಮನಿಸುವ ಅವಕಾಶ ಸಿಕ್ಕಿರಲಿಲ್ಲ ಅನ್ನೋದು ಸತ್ಯವಾದರೂ, ನಾರ್ಮಲ್​ ಮಕ್ಕಳ ಜತೆ ಹಲವಾರು ವರ್ಷಗಳಿಂದ ವಡನಾಟವಿದೆ ನನಗೆ. 

ನಿಮ್ಮ ಮಗನಲ್ಲಿ ಹಾಗೂ ಈ ವಯಸ್ಸಿನ ನಾರ್ಮಲ್​ ಮಕ್ಕಳಲ್ಲಿ ಅಂಥ ವ್ಯತ್ಯಾಸವನ್ನ ನಾನು ಗುರುತಿಸಿಲ್ಲ. ಖಂಡಿತ ಅವನಿಗೆ ನಾರ್ಮಲ್​ ಮಕ್ಕಳ ಅವಶ್ಯಕತೆ ಇದೆ ಅಂತ ನನಗೆ ಅನ್ನಿಸುತ್ತಿದೆ. ಇಂಟಿಗ್ರೇಟೆಡ್​ ಸ್ಕೂಲ್​ಕ್ಕಿಂತ ಹೆಚ್ಚಾಗಿ ಮೇನ್​ಸ್ಟ್ರೀಮ್​ ಪ್ರೀಸ್ಕೂಲ್​ ಅಗತ್ಯ ಅವನಿಗಿದೆ ಅನ್ನಿಸಿತು ನನಗೆ. ನೀವು ನಮ್ಮ ಸ್ಕೂಲ್​ಗೇ ಅವನನ್ನ ಸೇರಿಸಿ ಎಂದು ನಾನು ಹೇಳುತ್ತಿಲ್ಲ. ಯಾವ ಸ್ಕೂಲ್​ಗೆ ಬೇಕಾದರೂ ಅಥರ್ವನನ್ನು ಸೇರಿಸಿ, ಆದರೆ ಮೇನ್​ಸ್ಟ್ರೀಮ್​ ಸ್ಕೂಲ್​ಗೆ ನೀವು ಅವನನ್ನ ಸೇರಿಸಬೇಕು ಎಂಬುದು ನನ್ನ ಸಲಹೆ. ಆಲ್​ದ ಬೆಸ್ಟ್​’ ಅನ್ನುತ್ತಾ ಕೈ ಕುಲುಕಿದರು. ಕಿಲ ಕಿಲ ನಗುತ್ತಾ, ಭಾರಿ ಖುಷಿಯಲ್ಲಿ ಕ್ಯಾಂಪ್​ನ ಮುಕ್ತಾಯದ ದಿನ ಕೊಟ್ಟಿರುವ ಯಾವುದೋ ಕ್ರಾಫ್ಟ್​ ತೋರಿಸುತ್ತಾ, ತನ್ನಪ್ಪನಿಗೆ ಭರಪೂರ ವಿವರಿಸುತ್ತಾ ಇದ್ದ ಅಥರ್ವನ ತಲೆಯನ್ನೊಮ್ಮೆ ನೇವರಿಸಿ, ಬಾಯ್​ ಬಾಯ್​ ಅಥರ್ವ, ಸೀ ಯೂ ಸೂನ್​ ಎನ್ನುತ್ತಾ ನಮ್ಮನ್ನು ಕಳುಹಿಸಿಕೊಟ್ಟರು. 

ನಾನೂ ಗಮನಿಸುತ್ತಿದ್ದೆ, ಪ್ರತಿ ದಿನ ಸಮ್ಮರ್​ ಕ್ಯಾಂಪ್​ ಮುಗಿಸಿ ಮನೆಗೆ ಬಂದಾಗಲೂ  ಅಥರ್ವ ಹೊಸ ಹೊಸ ಶಬ್ಧಗಳನ್ನು ಉಪಯೋಗಿಸಿ ಮಾತನಾಡುತ್ತಿದ್ದ. ಅತ್ಯಂತ ಖುಷಿಯಲ್ಲಿ ಅಲ್ಲಿ ನಡೆದದ್ದೆಲ್ಲವನ್ನ ನನಗೆ ಹೇಳುತ್ತದ್ದ. ತನಕೆ ಪರಿಚಿತರಾದ ಹೊಸ ಸ್ನೇಹಿತರ ಹೆಸರುಗಳನ್ನ ಹೇಳುತ್ತಿದ್ದ.

ಪೂರ್ಣಿಮಾ ಮ್ಯಾಮ್​ನ ಬಳಿ ಮಾತನಾಡಿ ಬಂದಾಗಿನಿಂದ, ವಿನಯ್​ನ ಆಲೋಚನೆ ಕೂಡ ಬದಲಾಗಿತ್ತು. ‘ಅಮೃತಾ, ನೀವು ಬೆಂಗಳೂರಿಗೆ ವಾಪಾಸ್​ ಬಂದುಬಿಡಿ. ಇಲ್ಲಿ ಅವನನ್ನ ನಾರ್ಮಲ್​ ಸ್ಕೂಲಿಗೆ ಕಳುಹಿಸೋಣ. ನಾರ್ಮಲ್​ ಪ್ರೀಸ್ಕೂಲ್​ ಸ್ಕೂಲ್​ನ ವಾತಾವರಣ ಅವನಿಗೆ ಬಹಳ ಇಷ್ಟವಾದಂತಿದೆ. ನೀನು ಅವನಿಗೆ ಮನೆಯಲ್ಲಿ ಪಿ.ಎ.ಡಿ.ಸಿ ಪಾಠಗಳನ್ನ ಮಾಡು, ಬೆಳಗ್ಗೆ ಸ್ವಲ್ಪಹೊತ್ತು ಅವನು ಸ್ಕೂಲ್​ಗೆ ಹೋಗಿಬರಲಿ.’ ಸಮಯ ಸಿಕ್ಕಾಗೆಲ್ಲ ವಿನಯ್​ ನನ್ನ ಬಳಿ ಈ ವಿಷಯವನ್ನೇ ಮಾತನಾಡಲು ಶುರುವಿಟ್ಟುಕೊಂಡ.  

ಆದರೆ ನಾನು ಅವನ ಮಾತುಗಳನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲೇ ಇಲ್ಲ. ‘ಏನು ಮಾಡಲಿ..? ಅಥರ್ವ ಕಲಿಯುವುದು ಇನ್ನೂ ಸಾಕಷ್ಟಿತ್ತು. ಮಾತನಾಡುವುದು ಬೇಕಷ್ಟಿತ್ತು. ಇದೆಲ್ಲದಕ್ಕೂ ಪಿ.ಎ.ಡಿ.ಸಿ ಯ ಸಾಥ್​ನನಗೆ ಅವಶ್ಯವಿತ್ತು. ಇಲ್ಲಿಯ ತನಕ ಆಗಿರುವುದು ಕೇವಲ ಒನ್​ಲೈನ್​ಪಾಠವಷ್ಟೇ. ಇನ್ನೂ `ಟೂ ಲೈನ್​ಪಾಠ’ವಾಗಬೇಕು, ಚಿಕ್ಕ ಘಟನೆ, ದೊಡ್ಡ ಘಟನೆಯಂಥ ಮೂರು ಹಂತಗಳನ್ನೂ ಕಲಿಯುವುದು ಬಾಕಿ ಇತ್ತು. ಇದೆಲ್ಲದಕ್ಕೂ ಏನಿಲ್ಲವೆಂದರೂ ಎರಡು ವರ್ಷಗಳಂತೂ ಬೇಕಿತ್ತು. ‘ಇಲ್ಲ. ಇಲ್ಲ. ನಾನು ಮೈಸೂರಿಗೆ ಹೋಗಲೇ ಬೇಕು ವಿನಯ್​. ಪಿ.ಎ.ಡಿ.ಸಿಯಲ್ಲಿಯೇ ನಾನು ಅಥರ್ವನಿಗೆ ಕಲಿಸಬೇಕು. ಪ್ಲೀಸ್​ನನ್ನ ಗೊಂದಲಕ್ಕೀಡು ಮಾಡಬೇಡ’ ಎಂದು ಕೋರಿಕೊಂಡು, ಅವನನ್ನು ಸುಮ್ಮನಾಗಿಸಿಬಿಟ್ಟೆ.

ಪಿ.ಎ.ಡಿ.ಸಿಯ ಬೇಸಿಗೆ ರಜೆಗಳು ಮುಗಿಯುತ್ತಿದ್ದವು. ಇನ್ನೈದೇ ಐದು ದಿನಗಳು ಕಳೆಯುತ್ತಿದ್ದಂತೆ ಪಿ.ಎ.ಡಿ.ಸಿ ಶಾಲೆ ಆರಂಭವಾಗಲಿತ್ತು. ನಾನು ಮೈಸೂರಿಗೆ ಹೊರಡಲು ಅನುವಾಗುತ್ತಿದ್ದೆ. ಬೇಕಿದ್ದ ವಸ್ತುಗಳನ್ನೆಲ್ಲ ನೆನಪಿಸಿಕೊಂಡು ಬ್ಯಾಗ್​ತುಂಬಿಸುತ್ತಿದ್ದೆ. ಖಾಲಿ ಕುಳಿತಿದ್ದ ಬ್ಯಾಗ್​ನ ಒಡಲು ನಿಧಾನವಾಗಿ ತುಂಬುತ್ತಿತ್ತು. ‘ಅಮ್ಮಾ ಮೈಸೂಉ ಬೇದಾ, ಬೆಂಊಉ ಬೇಉ’ (ಅಮ್ಮಾ, ಮೈಸೂರು ಬೇಡ, ಬೆಂಗಳೂರು ಬೇಕು) ಅನ್ನುತ್ತಾ, ತುಂಬಿಸಿಟ್ಟ ಬ್ಯಾಗ್​ನೊಳಗಿಂದ ವಸ್ತುಗಳನ್ನು, ಬಟ್ಟೆಗಳನ್ನು ತೆಗೆದು ತೆಗೆದು ಹೊರಗ್ಹಾಕತೊಡಗಿದ್ದ ಅಥರ್ವ. ಸ್ವಲ್ಪ ಗದರಿ, ಹೆದರಿಸಿ ಬ್ಯಾಗ್​ ಮುಟ್ಟದಂತೆ ಅವನನ್ನು ತಡೆದಿದ್ದ ನನ್ನ ಮನಸ್ಸಿನ ಒಳಗೂ ಆಲೋಚನೆಗಳೆಲ್ಲ ತೂಗುಯ್ಯಾಲೆಯಂತಾಗಿದ್ದನ್ನು ಮಾತ್ರ ಕಂದನಿಗೆ ಹೇಳುವಂತಿರಲಿಲ್ಲ. 

ನೆನಪಾದರು ದೀಪಾ ಅಕ್ಕಾ. ಫೋನಾಯಿಸಿದೆ. ನನ್ನ ಗೊಂದಲಗಳೆಲ್ಲವನ್ನ ಸುಮ್ಮನೆ ಕೇಳಿಸಿಕೊಂಡ ನಂತರ ದೀಪಾ ಅಕ್ಕಾ ಮಾತನಾಡಿದರು. ‘ನೀವು ಅವನನ್ನ ಸಮ್ಮರ್​ ಕ್ಯಾಂಪ್​ಗೆ ಹಾಕಿದ್ದು, ಸ್ವಲ್ಪ ನಾರ್ಮಲ್​ ಮಕ್ಕಳ ಜತೆ ಆಡಲು ಅವಕಾಶ ಮಾಡಿಕೊಟ್ಟದ್ದು ಎಲ್ಲವೂ ಸರಿ. ಆದರೆ, ಕೇವಲ ಸಮ್ಮರ್​ ಕ್ಯಾಂಪ್​ ನೋಡಿಕೊಂಡು, ಅವನನ್ನ ನಾರ್ಮಲ್​ ಪ್ರೀಸ್ಕೂಲ್​ಗೆ ಸೇರಿಸುತ್ತೀವಿ ಅಂತಿದ್ದೀರಲ್ಲ ಅದು ತಪ್ಪು. ಈಗಷ್ಟೇ ಆತ ಮಾತು ಕಲಿಯತೊಡಗಿದ್ದಾನೆ. ಇನ್ನೂ ವಾಕ್ಯಗಳನ್ನ ಜೋಡಿಸಿ ಮಾತನಾಡಲು ಬಾರದು ಅವನಿಗೆ. ದೊಡ್ಡ ಘಟನೆಯ ತನಕ ಅಥರ್ವನಿಗೆ ನೀನು ಕಲಿಸದಿದ್ದರೆ, ಮುಂದೆ ಕಷ್ವವಾಗಲಿದೆ ಅಮೃತಾ. ನಮ್ಮ ಮಕ್ಕಳ ಕಲಿಕೆಗೆ, ಅವರ ಸರ್ವತೋಮುಖ ಅಭಿವೃದ್ಧಿಗೆ ಪಿ.ಎ.ಡಿ.ಸಿಯ ಕಲಿಕಾ ಪದ್ಧತಿಯೇ ಬೇಕು. ಕನ್ನಡ, ಗಣಿತ, ವಿಜ್ಞಾನ, ಸಮಾಜವಿಜ್ಞಾನ, ಎಲ್ಲವನ್ನೂ ಪಿ.ಎ.ಡಿ.ಸಿ ಪದ್ಧತಿಯಲ್ಲಿಯೇ ಮಕ್ಕಳಿಗೆ ಅರ್ಥ ಮಾಡಿಸಿದರೆ ಉತ್ತಮ. ಇಲ್ಲಿ ಸಂಪೂರ್ಣ ಕಲಿತು ಹೋದ ಮಕ್ಕಳು ಎಷ್ಟೆಲ್ಲ ಸಾಧನೆ ಮಾಡಿದ್ದಾರೆ ಅನ್ನೋದು ನಿನಗೇ ಗೊತ್ತಿದೆಯಲ್ಲ. ನಮ್ಮ ಕಿವುಡು ಮಕ್ಕಳ ತಳಪಾಯ ಗಟ್ಟಿಯಾಗುವುದೇ ಪಿ.ಎ.ಡಿ.ಸಿಯಲ್ಲಿ.  ತಳಪಾಯವೇ ಇಲ್ಲದೆ ಮನೆ ಕಟ್ಟಿದರೆ ಏನು ಗತಿ..?  ಪಿ.ಎ.ಡಿ.ಸಿ ಕಲಿಕೆಯ ಎಲ್ಲ ಹಂತಗಳೂ ಅತೀ ಮುಖ್ಯ. ದೊಡ್ಡ ಘಟನೆಯ ಹಂತ ಮುಗಿಯುತ್ತಿದ್ದಂತೆ, ನೀವು ಅವನನ್ನ ನಾರ್ಮಲ್​ ಸ್ಕೂಲ್​ಗೆ ಹಾಕಲೇಬೇಕು. ಆಗ ಯಾರೂ ನಿಮ್ಮನ್ನ ತಡೆಯೋದಿಲ್ಲ. ಆದರೆ ಈಗಲೇ ಬೇಡ. ಗಡಿಬಿಡಿ ಮಾಡಬೇಡಿ ನಾನು ಅವರ ಮಾತುಳನ್ನು ಕೇಳಿಸಿಕೊಳ್ತಾ ಹೂಂಗುಡುತ್ತಿದ್ದೆ.  ದೀಪಕ್ಕಾ ಹದವಾದ ದನಿಯಲ್ಲಿ ನನಗೆ ತಿಳಿಹೇಳುತ್ತಲೇ ಇದ್ದರು.

‘ನಮ್ಮ ಮಕ್ಕಳ ಮಾತುಗಳು ಅರ್ಥವಾಗದಿದ್ದರೆ, ನಾರ್ಮಲ್​ ಸ್ಕೂಲ್​ನಲ್ಲಿ ಅವರು ಮೂಲೆಗುಂಪಾಗುತ್ತಾರೆ. ಹೀಗೆ ಅರ್ಧದಲ್ಲಿ ಪಿ.ಎ.ಡಿ.ಸಿ ಸ್ಕೂಲ್​ಬಿಟ್ಟು ಹೋಗಿ, ಪರಿಪಾಟಲು ಪಡುತ್ತಿರುವ ಅದೆಷ್ಟೋ ತಾಯಂದಿರಿದ್ದಾರೆ. ಅವರಂತೆ ನೀನೂ ಆಗಬೇಡ. ನಮ್ಮ ಸ್ಕೂಲ್​ನಲ್ಲಿ ಸಿಗುವ ವಾತಾವರಣ ನಾರ್ಮಲ್​ ಸ್ಕೂಲ್​ನಲ್ಲಿ ಸಿಗೋದಿಲ್ಲ. ಮೈಸೂರಿನಲ್ಲಿದ್ದುಕೊಂಡು ನೀನು ಮಗುವಿಗೆ ಕೊಡುವಷ್ಟು ಸಮಯವನ್ನ ಬೆಂಗಳೂರಿಗೆ ವಾಪಾಸ್​ ಬಂದು ನಿನಗೆ ಕೊಡಲು ಸಾಧ್ಯವಾಗುವುದಿಲ್ಲ.ಸಂಸಾರ, ಮನೆ, ಕೆಲಸದಲ್ಲಿ ಮುಳುಗಿಹೋಗುವ ತಾಯಂದಿರಿಗೆ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತು ಗಮನ ಕೊಡಲು ಸಾಧ್ಯವಾಗುವುದಿಲ್ಲ. ನಾನು ಮೊದಲೇ ಹೇಳಿದ್ದೆ ನಿನಗೆ, ನಮ್ಮ ಮಕ್ಕಳಿಗೆ ನಾವು ಕೊಡುವ ಒಂದೊಂದು ನಿಮಿಷವೂ ಅತೀ ಮುಖ್ಯ ಎಂದು. ನಮ್ಮ ಕಿವುಡು ಮಕ್ಕಳಿಗೆ ತಾಯಿಯ ಸಂಪೂರ್ಣ ಸಮಯ ಬೇಕು. ಹೀಗಾಗಿ ಕುಟುಂಬದಿಂದ ದೂರವಿದ್ದುಕೊಂಡೇ ನಿನ್ನ ಮಗುವಿಗೆ ಪಾಠ ಮಾಡುವುದು ಒಳ್ಳೆಯದು. ಪಿ.ಎ.ಡಿ.ಸಿಯನ್ನು ಬಿಟ್ಟು ಬರುವ ಆಲೋಚನೆಯನ್ನ ಇಲ್ಲಿಗೇ ಮರೆತುಬಿಡು ಅಮೃತಾ’ ದೀಪಕ್ಕಾಗೆ ಅಥರ್ವನ ಮೇಲಿದ್ದ ಕಾಳಜಿ ಅವರಾಡಿದ ಪ್ರತಿ ಅಕ್ಷರದಲ್ಲಿಯೂ ಎದ್ದು ಕಾಣುತ್ತಿತ್ತು. 

ಹೌದು. ದೀಪಕ್ಕಾ ಹೇಳಿದ್ದು ಎಲ್ಲವೂ ಸತ್ಯವೇ.  ಸ್ಕೂಲ್​ಶುರುವಾಗುವುದಕ್ಕೂ ಎರಡು ದಿನ ಮುಂಚೆಯೇ ನಾನು ಮೈಸೂರಿಗೆ ಹೊರಡುವುದು ಒಳ್ಳೆಯದು. ಅಥರ್ವನನ್ನು ಮಾನಸಿಕವಾಗಿ ಸಿದ್ಧಗೊಳಿಸಿ, ಸ್ಕೂಲ್​ಗೆ ಕರೆದೊಯ್ಯಲು ಸಮಯ ಬೇಕು. ಆಲೋಚನೆಯ ಸುರುಳಿ ಬಿಚ್ಚಿಟ್ಟೆ.  ಆವತ್ತೇ ವಿನಯ್​ ಆಫೀಸ್​ನಿಂದ ಬಂದ ತಕ್ಷಣ ಹೇಳಿದೆ, ‘ನಾವು ನಾಳೆಯೇ ಮೈಸೂರಿಗೆ ಹೊರಟುಬಿಡ್ತೀವಿ, ನೀನು ಮೈಸೂರಿನ ತನಕ ಬಂದು ನಮ್ಮನ್ನ ಕಳಿಸಿಕೊಡುವುದು ಬೇಡ. ಇಲ್ಲಿಂದಲೇ ಬಸ್​ ಹತ್ತಿಸಿಕೊಟ್ಟರೆ ಸಾಕು’ ಎಂದು. ‘ಓಕೆ’ ಎಂಬ ಉತ್ತರದ ಹೊರತು ಮತ್ಯಾವ ಮಾತೂ ಆಡದೆ ಸುಮ್ಮನಿದ್ದುಬಿಟ್ಟ ವಿನಯ್​. ಮಾತನಾಡದ ವಿನಯ್​ ಹಿಂದೆ ಹಿಂದೆಯೇ ಹೋಗಿ ‘ನೀನು ಮೈಸೂರಿನಿಂದ ವಾಪಾಸ್​ ಬೆಂಗಳೂರಿಗೆ ಬರುವಾಗ ಅಥರ್ವ ತುಂಬಾ ಅಳುತ್ತಾನಲ್ವಾ.. ಅದಕ್ಕೋಸ್ಕರ ಬೇಡ  ಎಂದೆ’ ಎಂಬ ಸಮಜಾಯಿಷಿ ನೀಡಿದೆ. ಅದಕ್ಕೂ ವಿನಯ್​ ಹೂಂ ಅಂದನೇ ಹೊರತು ಮತ್ತೇನೂ ಮಾತನಾಡಲಿಲ್ಲ.  ನಾನು ಲಗೇಜ್​ನ್ನೆಲ್ಲ ಸಿದ್ಧಗೊಳಿಸುತ್ತಿದ್ದಂತೆ, ಅಥರ್ವನ ಗಲಾಟೆ ಜೋರಾಗಿತ್ತು.  “ಅಮ್ಮಾ.. ಅಪ್ಪ ಬೇಕು. ಮೈಸೂರು ಬೇಡ” ಎನ್ನುತ್ತಾ ಅಳತೊಡಗಿದ್ದ.  ಅವನ ಅಳುವನ್ನ ನೋಡಲಾರದೆ ಅಥರ್ವನನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಹೋಗಿದ್ದ ವಿನಯ್​, ನಾನು ನನ್ನ ಬ್ಯಾಗ್​ ಎಲ್ಲವನ್ನೂ ತುಂಬಿಸಿ ಸಿದ್ಧಗೊಳಿಸಿಟ್ಟು, ರಾತ್ರಿಯ ಊಟ ಅಣಿಮಾಡಿಟ್ಟ ಮೇಲೆಯೇ ವಾಪಾಸ್​ಬಂದ. 

ಚುಮು ಚುಮು ಬೆಳಕು ಮೂಡುವ ಮೊದಲೇ ನಾವು ಅಥರ್ವನೆತ್ತಿಕೊಂಡು ಮನೆಬಿಟ್ಟೆವು. ಅಥರ್ವ ಇನ್ನೂ ನಿದ್ದೆಯ ಮಂಪರಿನಲ್ಲಿಯೇ ಇದ್ದ. ಅಪ್ಪನ ಹೆಗಲಿಗೆ ತಲೆಕೊಟ್ಟು ನಿದ್ದೆ ಮಾಡಿದ್ದ. ಬಸ್​ಬಂದು ನಿಂತಿದ್ದೇ ನಿದ್ದೆಯಲ್ಲಿದ್ದ ಅಥರ್ವನನ್ನ ಅನಪ್ಪನ ಹೆಗಲಿನಿಂದ ನನ್ನ ಹೆಗಲಿಗೆ ವರ್ಗಾಯಿಸಿಕೊಂಡು ಬಸ್​ಏರಿದ್ದೆ.  ಕೆಳ ನಿಂತು ಕೈ ಮಾಡುತ್ತಿದ್ದ ವಿನಯ್​ ‘ಹುಷಾರು’ ಎಂದ.  ಅವನ ಕಣ್ಣಲ್ಲೂ ನೀರಿತ್ತೋ ಏನೋ ನೋಡುವ ಧೈರ್ಯ ನನಗೂ ಇರಲಿಲ್ಲ. 

ಅಥರ್ವನನ್ನ ಬಸ್​ನ ಸೀಟಿನ ಮೇಲೆ ಮಲಗಿಸಿದ್ದೇ, ಮತ್ತೆ ಮಲಗಿಬಿಟ್ಟ. ಅಬ್ಬಾ..! ಬಚಾವಾದೆ ಅಂದುಕೊಳ್ಳುತ್ತಿದ್ದಂತೆ ನನ್ನ ಕಣ್ಗಳನ್ನೂ ನಿದ್ದೆ ಎಳೆದಿತ್ತು. ಆದರೆ, ಬೆಳಗ್ಗೆ 9.30ರ ಸುಮಾರಿಗೆ ಬಸ್ಸು ಮೈಸೂರು ತಲುಪಿದಾಗ, ಅಥರ್ವನಿಗೆ ದೊಡ್ಡ ಎಚ್ಚರವಾಯ್ತು. ​ಬಸ್​ನೊಳಗಿಂದಲೇ ಮೈಸೂರಿನ ಸಬ್​ ಅರ್ಬ್​ನ್​ ಬಸ್​ಸ್ಟ್ಯಾಂಡ್​​ನ್ನ ಒಮ್ಮೆ ಗಮನಿಸಿದ ಅಥರ್ವನಿಗೆ ಅರ್ಥವಾಗಿಹೋಗಿತ್ತು, ಇದು ಮೈಸೂರು ಎಂದು.  ಬಸ್​ ಇಳಿಯುವುದೇ ಬೇಡ ಎಂದು ಕೂಗಾಡುತ್ತಾ ಜೋರಾಗಿ ಅಳಲು ಶುರುವಿಟ್ಟುಕೊಂಡ.  ಮೈಸೂರು ಬೇಡಾ  ಎಂದು ಅರಚಾಡತೊಡಗಿದ್ದ.  ಇದ್ದ ಬದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಅವನನ್ನೂ ಬ್ಯಾಗ್​ನ್ನೂ ಎತ್ತಿಕೊಂಡು, ಆಟೋ ಏರಿದ್ದೆ.  ದಾರಿಯ ತುಂಬಾ ಅಳುತ್ತಿದ್ದ ಅಥರ್ವನನ್ನ ಹೇಗೆ ಸಮಾಧಾನ ಮಾಡಬೇಕೋ ತಿಳಿಯದಂತಾಗಿತ್ತು. 

ತಿಂಗಳಿನಿಂದ ಬೀಗ ಹಾಕಿದ್ದ ಮನೆ. ಧೂಳಾಗದೇ ಇರುತ್ತದೆಯೇ..? ಮನೆಯನ್ನ ಮೊದಲು ಸ್ವಚ್ಛಗೊಳಿಸಬೇಕೋ, ಅಥರ್ವನನ್ನ ಸಮಾಧಾನ ಮಾಡಬೇಕೋ ತಿಳಿಯದಂತಾಗಿತ್ತು.  ಹೇಗ್ಹೇಗೋ ಅವನನ್ನೂ ಸಂಭಾಳಿಸುತ್ತಾ, ಮನೆಯನ್ನ ಅಣಿಗೊಳಿಸಿಕೊಂಡೆ.  ಮಗನಿಗೆ ತಿಂಡಿ ತಿನ್ನಿಸಲು ಪ್ರಯತ್ನಪಟ್ಟೆ. ಎರಡು ತುತ್ತು ಕೂಡ ತಿನ್ನದೇ, ಅಳುತ್ತಲೇ ಇದ್ದ. ‘ಅಪ್ಪ ಬೇಕು, ಬೆಂಗಳೂರು ಬೇಕು’ ಎಂದು ಹಲುಬುತ್ತಲೇ ಇದ್ದ. ಮಧ್ಯಾಹ್ನದ ಬಿಸಿಲಿನ ತಾಪ ಕಡಿಮೆಯಾಗತೊಡಗಿದಂತೆ, ಅಥರ್ವನ ಮೈ ಬಿಸಿ ಏರತೊಡಗಿತ್ತು.  ಸಂಜೆಯ ವೇಳೆಗೆ ಅಥರ್ವನಿಗೆ ತೀವ್ರ ಜ್ವರ ಬಂದುಬಿಟ್ಟಿತ್ತು. ಆಗಿಂದಾಗ್ಗೆ ಆಪಾಯಿಂಟ್​ಮೆಂಟ್​ ಬುಕ್​ ಮಾಡಿಕೊಂಡು, ಮಕ್ಕಳ ವೈದ್ಯರ ಕ್ಲಿನಿಕ್​ಗೂ ಹೋಗಿಬಂದೆ. ಜ್ವರದ ತಾಪಕ್ಕೆ ಅಥರ್ವ ಬಳಲಿದ್ದ.  ಜ್ವರದಲ್ಲಿ ಮಲಗಿದ್ದಾಗಲೂ ಅಪ್ಪ ಅಪ್ಪ ಅನ್ನತೊಡಗಿದ್ದ.  

ರಾತ್ರಿಯೇ ವಿನಯ್​ಗೆ ವಿಷಯ ತಿಳಿಸಿದ್ದೆ. ಮರುದಿನ ಬೆಳಗ್ಗೆ ಸೂರ್ಯ ಕಣ್ಬಿಡುವ ಹೊತ್ತಿಗೆ ವಿನಯ್​ ಮೈಸೂರಿನಲ್ಲಿ ಪ್ರತ್ಯಕ್ಷ. ಎರಡು ದಿನ ಆಫೀಸ್​ಗೆ ರಜಾ ಹಾಕಿಯೇ ಮೈಸೂರಿಗೆ ಬಂದಿದ್ದ. ಅಪ್ಪನ ಮುಖ ನೋಡುತ್ತಿದ್ದಂತೆ, ಅಥರ್ವ ಸ್ವಲ್ಪ ಗೆಲುವಾದ. ‘ಅಪ್ಪಾ, ಅಮ್ಮ ಬೇದಾ.  ಬೆಂಊಉ ಬೇಉ, ಹೋಅನಾ’ (ಅಪ್ಪಾ, ಅಮ್ಮ ಬೇಡ, ಬೆಂಗಳೂರು ಬೇಕು. ಹೋಗಣ್ವಾ..?) ಅಂತ ನನ್ನೆದುರಲ್ಲೇ ಅವನಪ್ಪನನ್ನು ಅಥರ್ವ ಕೇಳಿದ್ದು ಕೇಳಿ, ನಗಬೇಕೋ ಅಳಬೇಕೋ ತಿಳಿಯದಂತಾಗಿತ್ತು ನನಗೆ. ಸಧ್ಯದ ಮಟ್ಟಿಗೆ ಅಥರ್ವನ ಕಣ್ಣಿನಲ್ಲಿ ನಾನು ಅಪ್ಪ ಮಗನನ್ನು ಅಗಲಿಸಿದ್ದ ವಿಲನ್​ ಆಗಿದ್ದೆ. 

ಶಾಲೆ ಆರಂಭವಾಗುವುದಕ್ಕೆ ಇನ್ನು ಒಂದೇ ದಿನ ಬಾಕಿ ಇತ್ತು. ವಿನಯ್​ ಬಂದ ಕ್ಷಣದಿಂದ ಹೇಳುತ್ತಲೇ ಇದ್ದ. ‘ಅಮೃತಾ ನಿನ್ನ ಮನಸ್ಸು ಬದಲಾಯಿಸು.  ನಾವು ಬೆಂಗಳೂರಿಗೆ  ವಾಪಾಸ್​ ಹೋಗೋಣ’ ಎಂದು.  ಬೆಂಗಳೂರಿನಿಂದ ಮೈಸೂರಿಗೆ ಬಂದಷ್ಟು ಸುಲಭವಾಗಿ ಮೈಸೂರಿನಿಂದ ಎದ್ದು ಹೋಗುವುದು ನನ್ನಿಂದ ಸಾಧ್ಯವಿರಲಿಲ್ಲ. ‘ಇಲ್ಲ ವಿನಯ್​.  ಪಿ.ಎ.ಡಿ.ಸಿ ಸ್ಕೂಲ್​ ಬಿಟ್ಟು ಬರುವುದಕ್ಕೆ ನನಗೆ ಧೈರ್ಯವೇ ಸಾಲುತ್ತಿಲ್ಲ. ನಾನು ಬರಲಾರೆ. ಅಥರ್ವನಿಗೆ ಬಂದ ಜ್ವರ ವಾಸಿಯಾಗುತ್ತೆ. ಶಾಲೆ ಆರಂಭವಾದಮೇಲೆ, ನಿಧಾನವಾಗಿ ಅವ ಹೊಂದಿಕೊಳ್ಳುತ್ತಾನೆ. ಈ ಜ್ವರದ ಕಾರಣಕ್ಕೆ ನೀನು ಇಷ್ಟೊಂದು ಭಯಪಡಬೇಡ’ ಸಮಾಧಾನದ ದನಿಯಲ್ಲಿಯೇ ಹೇಳಿದೆ. ನಿದ್ದೆ ಹೋದ ಮಗನನ್ನ ಕಾಲ ಮೇಲೆ ಮಲಗಿಸಿಕೊಂಡು, ಅವನ ತಲೆ ನೇವರಿಸುತ್ತಾ ಕುಳಿತಿದ್ದ ವಿನಯ್​. ಅವನ ಕಣ್ಣುಗಳು ಎದುರಿನ ಗೋಡೆಯನ್ನೇ ದಿಟ್ಟಿಸುತ್ತಿದ್ದವು. ನನ್ನ ಮಾತಿಗೆ ತಕ್ಷಣಕ್ಕೆ ಅವನಿಂದ ಉತ್ತರ ಬರಲಿಲ್ಲ. ನಾನು ಅಥರ್ವನ ಕಂಕುಳಲ್ಲಿ ಥರ್ಮೋಮೀಟರ್​ ಇಟ್ಟು ಮೈಬಿಸಿಯನ್ನ ಅಳೆಯುತ್ತಿದ್ದೆ.  

‘ಕಾಕ್ಲಿಯರ್​ ಇಂಪ್ಲಾಂಟ್​ ಆಗಿ ಒಂದು ವರ್ಷದ ಮೇಲಾಯ್ತು. ಅವನ ರೆಸ್ಪಾನ್ಸ್​ ಕೂಡ ಚೆನ್ನಾಗಿದೆ. ಅವನಿಗೆ ಥೆರಪಿಸ್ಟ್​ ಕೊಡುತ್ತಿರುವ ವಿಶೇಷ ಸ್ಪೀಚ್​ ಅಂಡ್​ ಲಿಸನಿಂಗ್​ ಥೆರಪಿ ಕೂಡ ಮುಗಿದಿದೆ. ಮುಖ್ಯವಾಗಿ ಅಥರ್ವನಿಗೆ ಹೇಗೆ ಕಲಿಸಬೇಕು ಎಂಬುದು ಕೂಡ ನಿನಗೆ ಅರ್ಥವಾಗಿದೆ. ನೀನು ಕಲಿಸುವುದಕ್ಕೆ ನಿನಗೆ ಮೈಸೂರೇ ಬೇಕು ಎಂಬ ಹಟ ಯಾಕೆ? ಬೆಂಗಳೂರಿನಲ್ಲಿಯೂ ನೀನು ಕಲಿಸಬಹುದಲ್ಲ. ನಿನ್ನ ಜತೆ ಇಡೀ ದಿನ ಮತ್ಯಾರೂ ಮನೆಯಲ್ಲಿರೋದಿಲ್ಲ. ನೀನು ನಿನ್ನ ಮಗ ಇಬ್ಬರೇ. ನಾನಂತೂ ಬೆಳಗ್ಗೆ ಎಂಟಕ್ಕೆ ಮನೆ ಬಿಟ್ಟರೆ ರಾತ್ರಿ ಎಂಟರ ತನಕ ಆಫೀಸ್​ನಿಂದ ವಾಪಾಸ್ ಬರೋದಿಲ್ಲ. ಮೈಸೂರಿನಲ್ಲಿದ್ದುಕೊಂಡು ನೀನು ಹೇಗೆಲ್ಲ ಅಥರ್ವನಿಗೆ ಕಲಿಸಿದೆಯೋ ಹಾಗೇ ಬೆಂಗಳೂರಿನಲ್ಲಿಯೂ ಕಲಿಸು. ತೊಂದರೆ ಏನು ? ‘ವಿನಯ್​ ದೀರ್ಘ ಪ್ರಶ್ನೆ ಇಟ್ಟುಬಿಟ್ಟ. ಢೋಲಾಯಮಾನದ ಕತ್ತರಿಯ ಅಲುಗಿನ ನಡುವೆ ಕುಳಿತಿದ್ದೆ ನಾನು. ನನ್ನ ಕಣ್ಣುಗಳು ಆಗ ಸ್ವಲ್ಪ ತೇವಗೊಂಡವು.’ ಪಿ.ಎ.ಡಿ.ಸಿಯಲ್ಲಿ ಇದ್ದುಕೊಂಡು ಕಲಿಸುವುದಕ್ಕೂ, ನಾನೊಬ್ಬಳೇ ಮನೆಯಲ್ಲಿ ಅಥರ್ವನಿಗೆ ಕಲಿಸುವುದಕ್ಕೂ ವ್ಯತ್ಯಾಸವಿದೆ ವಿನಯ್​. ಪಿ.ಎ.ಡಿ.ಸಿಯಲ್ಲಿ ಕಿವುಡು ಮಗುವಿಗೆ ಕಲಿಸುವ ವಾತಾವರಣವಿದೆ. ಅನುಭವಿ ಶಿಕ್ಷಕಿಯರಿದ್ದಾರೆ, ನೂರಾರು ತಾಯಿಯರಿದ್ದಾರೆ. ಅವರೆಲ್ಲರ ಮಾರ್ಗದರ್ಶನದಲ್ಲಿ ನಾನು ನನ್ನ ಮಗನಿಗೆ ಕಲಿಸಬಹುದು. ಬಹು ಮುಖ್ಯವಾಗಿ ಇಂಥ ಮಕ್ಕಳ ಕಲಿಕೆಗಾಗಿಯೇ ಮಾಡಿರುವ ಕಲಿಕಾ ವಿಧಾನಗಳಿವೆ ಇಲ್ಲಿ. ಆ ವಿಧಾನವನ್ನ ಅಷ್ಟೇ ಪರಿಪಕ್ವವಾಗಿ ನಾನು ಮನೆಯಲ್ಲಿ ಕಲಿಸಲು ಸಾಧ್ಯವೇ ಇಲ್ಲ ವಿನಯ್​”. 

‘ಆಯ್ತು ನಿನ್ನ ಮಾತನ್ನು ನಾನು ಒಪ್ಪುತ್ತೇನೆ. ಪಿ.ಎ.ಡಿ.ಸಿಯಲ್ಲಿ ನೂರಾರು ಅನುಭವಿ ತಾಯಂದಿರಿದ್ದಾರೆ. ಅವರೆಲ್ಲರ ಅನುಭವದ ಮಾರ್ಗದರ್ಶ ನಿನಗೆ ಸಿಗುತ್ತೆ. ಆದರೆ, ಅಥರ್ವನಿಗೆ ಬೇಕಾಗಿರುವ ಸಾಮಾನ್ಯ ಮಕ್ಕಳನ್ನ ಇಲ್ಲಿ ಎಲ್ಲಿಂದ ಒದಗಿಸುತ್ತೀಯ ? ತಾಯಂದಿರು ತಾಯಂದಿರೇ.  ಅವರು ಮಕ್ಕಳಾಗಲು ಸಾಧ್ಯವಿಲ್ಲ. ನೀವೆಲ್ಲರೂ ಮಕ್ಕಳಿಗೆ ಪಾಠವನ್ನೇ ಮಾಡುತ್ತೀರ ಹೊರತು, ಮಕ್ಕಳಂತೆ ಅವರೊಂದಿಗೆ ಆಡುವುದಿಲ್ಲ.  ಪಿ.ಎ.ಡಿ.ಸಿಯಲ್ಲಿರುವ ಮಕ್ಕಳೆಲ್ಲ ಮಾತು ಕಲಿಯುತ್ತಿರುವ ಮಕ್ಕಳು. ಅವರವರ ಅಮ್ಮಂದಿರ ನಿಯಂತ್ರಣದಲ್ಲಿರುವ ಮಕ್ಕಳು. ಅವರ ನಡುವೆ ಕಲಿಕೆ ಒಂದು ಹಂತದ ತನಕ ಮಾತ್ರ ಸಹಾಯಕಾರಿ. ಈಗ ನಮ್ಮ ಈ ಕಾಕ್ಲಿಯರ್​ ಮಗುವಿಗೆ ಬೇಕಿರುವುದು ಸಾಮಾನ್ಯ ಶಾಲೆಯ ವಾತಾವರಣ, ಅಲ್ಲಿಯ ಮಾತುಕತೆ, ಸಹಜ ಜೀವನ. ಮಕ್ಕಳು ಮಕ್ಕಳೊಂದಿಗೆ ಬೆರೆತು ಆಡುವಾಗ ಬರುವ ಸಹಜ ಮಾತುಗಳು  ಅಥರ್ವನಿಗೆ ಅರ್ಥವಾಗಬೇಕು. ಒಂದೊಂದು ಮಗುವಿನ ಮಾತು, ಮಾತನಾಡುವ ಶೈಲಿ ಬೇರೆ-ಬೇರೆಯದಾಗಿರುತ್ತದೆ. ಆಯಾ ವಯಸ್ಸಿನ ಮಕ್ಕಳ ಜತೆ ಮಗು ಬೆಳೆಯಬೇಕು. ಅಂಥ ವಾತಾವರಣ ನಮ್ಮ ಮಗುವಿಗೂ ಸಿಗಬೇಕು’ ವಿನಯ್​ ಮಾತುಗಳನ್ನ ಮಧ್ಯದಲ್ಲಿಯೇ ತುಂಡರಿಸಿ, ನಾನು ಮಾತನಾಡತೊಡಗಿದೆ. 

‘ಇನ್ನೊಂದು ವರ್ಷ ಸಮಯ ಸಾಕು ನನಗೆ. ಅಷ್ಟರಲ್ಲಿ ಅಥರ್ವನ ಮಾತು ಇನ್ನೂ ಸ್ಪಷ್ಟವಾಗುತ್ತೆ. ಅಥರ್ವನ ಮಾತು ಸ್ಪಷ್ಟವಾಗದೇ ಅವನನ್ನ ನಾರ್ಮಲ್​ ಶಾಲೆಗೆ ನಾನು ಸೇರಿಸಲಾರೆ. ಅವನೇನು ಹೇಳುತ್ತಿದ್ದಾನೆ ಎಂಬುದು ಮಕ್ಕಳಿಗೆ ಅರ್ಥವಾಗುವಂತಿಲ್ಲವಲ್ಲ ವಿನಯ್​.  ಈಗಾಗಲೇ ಒನ್​ಲೈನ್​ ಪಾಠ ಮುಗಿದಿದೆ. ಟು ಲೈನ್​, ಚಿಕ್ಕ ಘಟನೆ ಮುಗಿಯಲಿ. ವಾಪಾಸ್ ಬೆಂಗಳೂರಿಗೆ ಬಂದುಬಿಡುತ್ತೇನೆ. ಆಮೇಲೆ ನೀನು ಹೇಳಿದ ಹಾಗೆ, ನಾರ್ಮಲ್​ ಶಾಲೆಗೆ ಸೇರಿಸೋಣ.’

‘ಇನ್ನೊಂದು ವರ್ಷ ತಡವಾಗಿ ನಾರ್ಮಲ್​ ಶಾಲೆಗೆ ಸೇರಿಸಬೇಕೆಂದರೆ, ಅವನ ವಯಸ್ಸಿನ ಪ್ರಕಾರ, ಎಲ್​.ಕೆ.ಜಿಗೆ ಸೇರಿಸಬೇಕಾಗುತ್ತದೆ. ಈ ವರ್ಷವೇ ಸೇರಿಸಿದರೆ ನರ್ಸರಿಗೆ  ಸೇರಿಸಬಹುದು. ಅವನದೇ ವಯಸ್ಸಿನ ಮಕ್ಕಳ ಜತೆ ಕಲಿಯುತ್ತಾನೆ. ಅದೇ ಒಳ್ಳೆಯದು. ಅಥರ್ವನ ಮಾತು ಯಾರಿಗೂ ಅರ್ಥವಾಗಲ್ಲ ಎಂಬುದೊಂದು ವಿಷಯ ನಿನ್ನ ತಲೆಯೊಳಗೆ ಕುಳಿತುಬಿಟ್ಟಿದೆ. ಮೊನ್ನೆಯಷ್ಟೇ ಪೂರ್ಣಿಮಾ ಮ್ಯಾಮ್​ಹೇಳಿದ್ದಾರಲ್ಲ.  ಅವನ ಮಾತು ಅರ್ಥವಾಗಿದೆ ಅಂತ. ಸಮ್ಮರ್​ ಕ್ಯಾಂಪ್​ಗೆ ಹೋಗಿ ಅಲ್ಲಿಯ ಮಕ್ಕಳೊಂದಿಗೆ ಬೆರತು ಆಡಿ, ಕಲಿತು ಬಂದಿದ್ದಾನಲ್ಲ ಮಗು. ಇನ್ನೂ ಯಾವ ಭಯ ನಿನಗೆ..?’

‘ಪಿ.ಎ.ಡಿ.ಸಿ ಬಿಟ್ಟುಹೋದಮೇಲೆ ಅವನಲ್ಲಿ ಸುಧಾರಣೆಯೇ ಆಗದಿದ್ದರೆ ..? ಎಂಬ ಭಯ ನನಗೆ. ಬೆಂಗಳೂರಿಗೆ ವಾಪಾಸ್​ ಬಂದಮೇಲೆ ಅಥರ್ವನ ಕಲಿಕೆ ನಿಧಾನವಾಗಿಬಿಟ್ಟರೆ..? ನಾರ್ಮಲ್​ ಸ್ಕೂಲ್​ ಮತ್ತು ನನ್ನ ಥೆರಪಿಯ ನಡುವೆ ಅವನಿಗೆ ಗೊಂದಲವಾಗಿಬಿಟ್ಟರೆ..? ಕೊನೆಗೆ ಅಲ್ಲಿಯೂ ಕಲಿಯುವುದಕ್ಕಾಗದೇ, ಇಲ್ಲಿಯೂ ವಾಪಾಸ್ ಬರುವುದಕ್ಕಾಗದೇ ಮಧ್ಯದಲ್ಲಿ ಸಿಕ್ಕಿ ನನ್ನ ಮಗನ ಭವಿಷ್ಯಕ್ಕೆ ತೊಂದರೆಯಾದರೆ..? ಎಂಬ ಗೊಂದಲ ಭಯ ಹುಟ್ಟಿಸುತ್ತಿವೆ ವಿನಯ್​’

‘ಅಂಥದ್ದೇನೂ ಆಗುವುದಿಲ್ಲ. ಯಾವ ಧೈರ್ಯದ ಮೇಲೆ ನೀನು ಒಂದುವರೆ ವರ್ಷದ ಮಗುವನ್ನು ಎತ್ತಿಕೊಂಡು ಮೈಸೂರಿಗೆ ಓಡಿ ಬಂದೆಯೋ, ಅದೇ ಧೈರ್ಯದ ಮೇಲೆಯೇ ಬೆಂಗಳೂರಿಗೆ ವಾಪಾಸ್​ ಬಾ. ನಮ್ಮ ಮಗುವಿನ ಸಾಮರ್ಥ್ಯ ನಮಗೆ ತಿಳಿದಿದೆ.  ಅವನು ಕಲಿಯುತ್ತಾನೆ.  ನೀನು ಕಲಿಸುತ್ತೀಯ.  ಒಂದು ಕ್ಷಣ ಕೂಡ ಪೋಲಾಗಂತೆ ನೋಡಿಕೊಂಡು ಕಲಿಸುವ ನಿನ್ನ ಆಸಕ್ತಿ ಅಲ್ಲಿಗೆ ಹೋದಾಗ ಕಡಿಮೆಯಾಗಲು ಸಾಧ್ಯವೇ ಇಲ್ಲ. ನಿನ್ನ ಪ್ರಯತ್ನಕ್ಕೆ ನನ್ನಿಂದಂತೂ ತೊಂದರೆಯಾಗೋದಿಲ್ಲ. ನಿನ್ನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಎಲ್ಲವನ್ನೂ ನಿಭಾಯಿಸೋಣ. ಮೈಸೂರು ಬಿಡುವ ಧೈರ್ಯಮಾಡು ಅಷ್ಟೆ.’

ವಿನಯ್​ನ ಈ ಮಾತುಗಳಿಗೆ ನಾನು ಮರುಮಾತನಾಡಲಿಲ್ಲ. ವಿನಯ್​ ದನಿ ಮೃದುವಾಯ್ತು. ‘ನೋಡು, ಎಲ್ಲ ಮಕ್ಕಳೂ ಒಂದೇ ಥರ ಇರೋದಿಲ್ಲ. ಅಥರ್ವ ಚೂಟಿ ಇದ್ದಾನೆ. ಅವನಿಗೆ  ಈ ವಿಶೇಷ ಪದ್ಧತಿಯಲ್ಲಿಯೇ ಪಾಠಮಾಡಬೇಕು ಎಂಬುದೇನೂ ಇಲ್ಲ. ಸಹಜವಾಗಿ ಸಾಮಾನ್ಯ ಮಗುವಿಗೆ ಹೇಗೆ ಪಾಠ ಮಾಡುತ್ತಾರೋ ಹಾಗೇ ಮಾಡಿಕೊಂಡು ಹೋದರೆ ಸಾಕು. ನಿನ್ನ ಒತ್ತಡವೂ ಕಡಿಮೆಯಾಗುತ್ತೆ. ಆಫೀಸ್​ನಿಂದ ಬಂದಮೇಲೆ ನಾನೂ ಕೂಡ ಅಥರ್ವನಿಗಾಗಿ ಸಮಯ ಕೊಡುತ್ತೇನೆ. ಶನಿವಾರ ಭಾನುವಾರ ಮತ್ತು ಆಫೀಸಿಗೆ ರಜಾ ಇದ್ದಾಗಲೆಲ್ಲ ಅಥರ್ವನ ಕಲಿಕೆಯಲ್ಲಿ ಭಾಗಿಯಾಗುತ್ತೇನೆ. ಇಬ್ಬರೂ ಸೇರಿ ನಮ್ಮ ಮಗನಿಗೆ ಕಲಿಸೋಣ. ಅವನಿಗೂ ಅಪ್ಪ, ಅಮ್ಮ ಇಬ್ಬರೂ ಸಿಕ್ಕಿದಂತಾಗುತ್ತೆ. ಅಲ್ವಾ..?’ ಈ ಬಾರಿ ಮಾತ್ರ ಕಣ್ಣೀರು ಉಕ್ಕುವುದನ್ನು ತಡೆಯಲು ನಾನು ಸೋತುಹೋದೆ. ಗೊಂದಲಗಳಲ್ಲಿ ಸಿಕ್ಕಿ ಒದ್ದಾಡತೊಡಗಿದೆ. ವಿನಯ್​ ಮಾತು ಮುಂದುವರಿಯುತ್ತಲೇ ಇತ್ತು. 

‘ಸಾಮಾನ್ಯ ಮಕ್ಕಳ ಮಧ್ಯದಲ್ಲಿದ್ದಾಗ ಅಥರ್ವ ಅದೆಷ್ಟು ಸಹಜವಾಗಿ ಕಲಿತಿದ್ದಾನೆ ಅನ್ನೋದು ನನಗಿಂತ ಚೆನ್ನಾಗಿ ನಿನಗೇ ಗೊತ್ತಿದೆ. ಪಿ.ಎ.ಡಿ.ಸಿ ಸ್ಕೂಲ್​ನ ಕಲಿಕಾ ಪದ್ಧತಿ ಚೆನ್ನಾಗಿಲ್ಲ ಎಂದು ಖಂಡಿತವಾಗಿ ನಾನು ಹೇಳುತ್ತಲೇ ಇಲ್ಲ. ಇಲ್ಲಿಯ ಕಲಿಕಾ ಪದ್ಧತಿ, ವಾತಾವರಣ, ಮಾತು ಕಲಿಸುವ ವಿಧಾನ ಎಲ್ಲವನ್ನೂ ಒಪ್ಪುತ್ತೇನೆ. ಆದರೆ, ಈಗ ನಮ್ಮ ಮಗುವಿಗೆ ಬೇಕಿರುವುದು ಪ್ರಾಕ್ಟಿಲ್​ ಎಕ್ಸ್​ಪೀರಿಯನ್ಸ್​. ಅವನಿಗೆ ಸಹಜ ವಾತಾವರಣ ಬೇಕು, ಸಾಮಾನ್ಯ ಶಾಲೆ ಬೇಕು. ಸಾಮಾನ್ಯ ಮಕ್ಕಳ ಒಡನಾಟಬೇಕು. ಈ ಶಾಲೆಯಲ್ಲಿ ಅದನ್ನ ಒದಗಿಸೋಕೆ ನಿನ್ನಿಂದ ಸಾಧ್ಯವಿಲ್ಲ. ನಿಮ್ಮ ಶಾಲೆಯಲ್ಲಿ, ಈ ಮನೆಯಲ್ಲಿ ಅದೆಷ್ಟೇ ನೀನು ಕಲಿಸಿ, ಪಾಠಮಾಡಿದರೂ ಅದೆಲ್ಲ ಕೃತಕವೇ.  ಸಹಜವಾಗಿ ಅವನು ಇಲ್ಲಿ ಕಲಿಯಲಾರ. ಅವನಿಗೆ ಆಸಕ್ತಿ ಇಲ್ಲವೆಂದಾಗ, ಶಿಕ್ಷೆ ಕೊಟ್ಟು ಕಲಿಸುತ್ತೀರ.  ಶಿಕ್ಷೆಯೇ ಶಿಕ್ಷಣವಲ್ಲ ಅಮೃತಾ. ಮಗುವಿಗೆ ಸ್ವಾತಂತ್ರ್ಯ ಕೊಟ್ಟು, ಅವನ ಆಸಕ್ತಿಯೊಳಗೆ ನಾವು ಹೋಗಿ, ನಮಗೆ ಬೇಕಿರುವುದನ್ನ ಕಲಿಸೋಣ.  ಬೆಂಗಳೂರಿನಲ್ಲಿ ಅವನು ನಾರ್ಮಲ್​ ಸ್ಕೂಲ್​ನಿಂದ ವಾಪಾಸ್​ ಬಂದಮೇಲೆ  ನೀನು ಅವನಿಗೆ ಅವನ ಆಸಕ್ತಿ ನೋಡಿಕೊಂಡು, ಯಾವುದೇ ಒತ್ತಡವಿಲ್ಲದೆ ನಿಮ್ಮ ವಿಶೇಷ ಕಲಿಕಾ ಪದ್ಧತಿಯಲ್ಲಿಯೇ ಕಲಿಸು. ಯಾರೂ ನಿನ್ನ ತಡೆಯೋದಿಲ್ಲ” 

‘ಆಯ್ತು. ನಿನ್ನ ಮಾತು ಒಪ್ಪಿ ನಾವು ಬೆಂಗಳೂರಿಗೆ ಬಂದು ಅಥರ್ವನನ್ನು ಕಿಂಡರ್​ ಗಾರ್ಡನ್​ ಸ್ಕೂಲ್​ಗೆ ಸೇರಿಸುತ್ತೇವೆ ಅಂತಿಟ್ಟುಕೊ. ಕೆಲವು ತಿಂಗಳು ಕಳೆದಮೇಲೆ ನಮಗೆ ಗೊತ್ತಾಗುತ್ತೆ.  ಮೈಸೂರು ಬಿಟ್ಟಿದ್ದು ತಪ್ಪಾಯ್ತು. ಇಲ್ಲಿ ಸುಧಾರಣೆಯಾಗುತ್ತಿಲ್ಲ ಎಂದು. ಆಗ ಏನು ಮಾಡುವುದು ?’ ನನ್ನದೊಂದು ಸವಾಲಿಟ್ಟೆ.  

‘ಅಂಥ ಸಂದರ್ಭ ಬಂದರೆ, ನಿಮ್ಮನ್ನು ಮತ್ತೆ ನಾನು ಮೈಸೂರಿಗೆ ಕಳುಹಿಸಿಕೊಡುತ್ತೇನೆ. ಮತ್ತೆ ಪಿ.ಎ.ಡಿ.ಸಿ ಸ್ಕೂಲ್​ಗೇ ಸೇರಿಕೊಂಡು ಕಲಿಸು. ಆಗ ಅಲ್ಲಿ ಎಷ್ಟು ವರ್ಷದ ತನಕ ಕಲಿಸುತ್ತೀಯೋ ಕಲಿಸು. ಅದಕ್ಕೆ ನನ್ನ ಅಡ್ಡಿ ಇರೋದಿಲ್ಲ. ಆದರೆ, ಈಗ ಒಂದು ಸಾರಿ ಪ್ರಯೋಗ ಮಾಡೋಣ. ಬೆಂಗಳೂರಿನಲ್ಲಿ ಎಲ್ಲ ಸಾಮಾನ್ಯ ಮಕ್ಕಳಂತೆ ಬದುಕುವ ಅವಕಾಶ ಕೊಟ್ಟು ನೋಡೋಣ ಅಷ್ಟೆ. ಒಪ್ಪಿಕೋ ಪ್ಲೀಸ್​’ ವಿನಯ್​ ದನಿ ಮಂದ್ರವಾಗಿತ್ತು.   

ಆಗ ಅಥರ್ವನ ಕಲಿಕೆಯ ಅವಧಿಯ ಅದಷ್ಟು ಸಮಯ ಹಾಳು ಮಾಡಿದಂತಾಗುವುದಿಲ್ಲವೇ..? ಎಂಬ ನನ್ನ ಪ್ರಶ್ನೆಗೆ ವಿನಯ್​ನಲ್ಲಿ ಉತ್ತರ ಸಿದ್ಧವಿತ್ತು. ‘ಇಲ್ಲ. ಯಾವುದೂ ಹಾಳಲ್ಲ. ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂಬ ಸಂಪೂರ್ಣ ನಂಬಿಕೆ ನನ್ನಲ್ಲಿದೆ. ನೀನು ಧೈರ್ಯ ಮಾಡು. ಅಷ್ಟೆ.’

ಮಧ್ಯರಾತ್ರಿಯ ತನಕ ನಡೆದ ಈ ಚರ್ಚೆ ಕೊನೆಗೊಂಡಿತ್ತಾದರೂ, ಬೆಳಕು ಹರಿಯುವ ತನಕ ನನ್ನ ಕಣ್ಗಳಿಗೆ ನಿದ್ದೆಯಿರಲಿಲ್ಲ. ಮರುದಿವೇ ಪಿ.ಎ.ಡಿ.ಸಿ ಪುನರಾರಂಭವಾಗಲಿತ್ತು.  ಬೆಳಗ್ಗೆಯೇ  ಹೋಗಿ ಪಿ.ಎ.ಡಿ.ಸಿ ಮುಖ್ಯ ಶಿಕ್ಷಕಿ ಪರಿಮಳಾ ಆಂಟಿಯವರ ಜತೆ ಈ ಬಗ್ಗೆ ಮಾತನಾಡಿ, ಪಿ.ಎ.ಡಿ.ಸಿ ಗೆ ವಿದಾಯ ಹೇಳೋಣ ಎಂದು ವಿನಯ್​ ನಿರ್ಧರಿಸಿಬಿಟ್ಟಿದ್ದ.  ಅದಕ್ಕಾಗಿ ನಾನು ಮಾನಸಿಕವಾಗಿ ಸಿದ್ಧಳಾಗುತ್ತಿದ್ದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: