ಅಮೃತಾ ಹೆಗಡೆ ಅಂಕಣ- ‘ಅಮ್ಮ’ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

25

ಮಗನ ಬಾಯಲ್ಲಿ ‘ಅಮ್ಮಾ’ ಎನ್ನಿಸಿಕೊಳ್ಳಬೇಕು ಎಂಬ ತುಡಿತ ಹೆಚ್ಚತೊಡಗಿತ್ತು. ಆ ಪದ ಕೊಡುವ ಸುಖಕ್ಕಾಗಿ ಮನಸ್ಸು ಹಾತೊರೆಯತೊಗಿತ್ತು. ಆದರೆ ಅದಿನ್ನೂ ಕೈಗೆಟುಕದಷ್ಟು ದೂರವೇ ಉಳಿದಿತ್ತು. 

ಕಾಕ್ಲಿಯರ್​ ಇಂಪ್ಲಾಂಟ್​ಸರ್ಜರಿಗೂ ಮುಂಚೆ ನನ್ನ ಮಗ ಅಥರ್ವ, ಅ, ಊ, ಅಮ್​, ಓ ಅನ್ನೋ ನಾಲ್ಕು ಸ್ವರಗಳನ್ನು ಹಾಗೂ ಮ, ಪ ಎಂಬ ಎರಡು ವ್ಯಂಜನಗಳನ್ನು ಹೇಳುತ್ತಿದ್ದ. ಆದರೂ ಅವನ ಬಾಯಿಯಲ್ಲಿ ‘ಅಮ್ಮಾ’ ಎನ್ನಿಸಿಕೊಳ್ಳಲು ನನ್ನಿಂದ ಸಾಧ್ಯವಾಗಿರಲಿಲ್ಲ. ಅವನ ಪಾಡಿಗೆ ಅವನು ಅಮ್​ಮ್​ಮ್​, ಪಬಬಬ, ದದದದದ, ಹನ್ನಾಹನ್ನಾ, ಎಂಬ ಅರ್ಥವಿಲ್ಲದ ಹಲವು ಶಬ್ಧಗಳನ್ನು ಹೊರಡಿಸುತ್ತಿದ್ದುದು ಹೌದಾದರೂ, ಅದನ್ನೆಲ್ಲ ಯಾವುದೋ ಉದ್ದೇಶಕ್ಕೆ ಅವನು ಹೇಳುತ್ತಿರಲಿಲ್ಲ.

ಯಾವುದೇ ಮಾತು, ಶಬ್ಧ ಕೇಳಿಸಿಕೊಂಡು ಅವನು ಹೇಳುತ್ತಿರುವುದಲ್ಲ ಎಂಬುದು ನನಗೂ ಗೊತ್ತಿತ್ತು. ಅಮ್​ಮ್​ಮ್​ ಅನ್ನೋ ಪದ ಬಾಯಿಯಲ್ಲಿ ಬರುತ್ತಿದ್ದರೂ, ಅಮ್ಮ ಎಂದು ನನ್ನ ಕರೆಯಬೇಕೆಂಬುದು ಅವನಿಗೆ ತಿಳಿಯುತ್ತಿರಲಿಲ್ಲ. ‘ನಾನು ನಿನ್ನ ಅಮ್ಮ, ಅಮ್ಮನನ್ನು ತೋರಿಸು, ಅಮ್ಮಾ ಅನ್ನು ಎಂದು ಸಾವಿರ ಬಾರಿ ಹೇಳಿದರೂ ಅದವನಿಗೆ ಅರ್ಥವಾಗಿರಲೇ ಇಲ್ಲ. ಆಗಷ್ಟೇ ‘ಕಾಕ್ಲಿಯರ್​ಇಂಪ್ಲಾಂಟ್​’ ಆಗಿತ್ತಲ್ಲ, ಶಬ್ಧಗಳು ಅವನ ಕಿವಿಯೊಳಗೆ ಹೋಗುತ್ತಿವೆ ಎಂಬುದೂ ನನಗೂ ಖಾತರಿಯಿದ್ದ ಕಾರಣ, ಇವತ್ತಲ್ಲ ನಾಳೆ ನನ್ನ ಮಗ ನನ್ನನ್ನು ಅಮ್ಮಾ ಎಂದು ಕರೆದೇ ಕರೆಯುತ್ತಾನೆ ಎಂಬ ವಿಶ್ವಾಸವಿತ್ತು. ಅದಕ್ಕಾಗಿ ಪ್ರಯತ್ನ ಶುರು ಹಚ್ಚಿಕೊಂಡೆ. 

ಮೊದಲು ‘ಅ’ ಸ್ವರವನ್ನು ರಾಗವಾಗಿ ಹೇಳಿಸಿದೆ. ನಂತರ ’ಅಮ್​’ ಹೇಳಿಸಿದೆ. ಅವರೆಡನ್ನೂ ಒಟ್ಟಿಗೇ ಹೇಳಿದೆ. ‘ಅ…ಅಮ್​’ ಅವನೂ ನಾನು ಹೇಳಿಕೊಟ್ಟಂತೆ ಹೇಳಿದ್ದ. ‘ಅಮ್ಮಾ’ ಎಂದೆ ರಾಗವಾಗಿ. ಅಮ್​ಅಮ್ ​ಅಂದ ಮತ್ತೊಮ್ಮೆ. ಊಹೂಂ ನೀನು ಹೇಳಿದ್ದು ಸರಿಯಾಗುತ್ತಿಲ್ಲ. ‘ಅಮ್ಮಾ’ ಅನ್ನು ಎಂದು ಹಲವು ಬಾರಿ ಅವನ ಮುಂದೆ ಕುಳಿತು ಹೇಳಿದೆ. ಅವನ ಕೈ ಎತ್ತಿ ನನ್ನನ್ನು ನಾನೇ ತೋರಿಸಿಕೊಳ್ಳುತ್ತಾ ‘ಅಮ್ಮಾ’ ಎನ್ನುತ್ತಲೇ ಇದ್ದೆ. ಎರಡು ದಿನಗಳ ಪ್ರಯತ್ನದ ನಂತರ, ಅವನೂ ಒಮ್ಮೆ ‘ಅಮ್ಮಾ’ ಎಂದ. ‘ಅಮ್ಮಾ..’ ಎಂದು ನನ್ನ ತೋರಿಸುತ್ತಾ ಹೇಳಿದ. ಅಂತೂ ಅವನ ಕಿವಿಗೆ ಪ್ರೋಸೆಸರ್​ಬಿದ್ದು, ಹದಿನೈದು ದಿನಗಳು ಕಳೆಯುತ್ತಿದ್ದಂತೆ, ‘ಅಮ್ಮಾ..’ ಹೇಳಿಸಿದ್ದೆ. ಆದರೆ  ನಾನು ಹೇಳು ಅಂದಾಗ ಮಾತ್ರ, ನನ್ನ ತೋರಿಸಿ ‘ಅಮ್ಮಾ’ ಅನ್ನಬೇಕು ಎಂಬುದಷ್ಟೇ ಅರ್ಥವಾಗಿತ್ತು ಅವನಿಗೆ. 

ಅಂತೂ ಅಮ್ಮಾ ಅನ್ನುವ ಪದ ಬಾಯಲ್ಲಿ ಬಂದಿತ್ತಾದರೂ, ನನಗೆ ಸಮಾಧಾನವಿರಲಿಲ್ಲ. ಏಕೆಂದರೆ, ನನ್ನ ತೋರಿಸಿ ಅಮ್ಮಾ ಅನ್ನಬೇಕು ಎಂಬುದಷ್ಟೇ ಅವನಿಗೆ ಅರ್ಥವಾಗಿತ್ತೇ ವಿನಃ, ನನ್ನ ‘ಅಮ್ಮಾ’ ಎಂದು ಕರೆಯಬೇಕು ಎಂಬುದು ಅವನಿಗೆ ಅರ್ಥವಾಗುತ್ತಿರಲಿಲ್ಲ. ಹಾಗಾದರೆ ಅವನಿಂದ ನಾನು ಬಾಯ್ತುಂಬಾ ಅಮ್ಮಾ ಎಂದು ಕರೆಸಿಕೊಳ್ಳುವುದು ಯಾವಾಗ..? ಅವನು ನನ್ನ ಅಮ್ಮಾ ಎಂದು ಕರೆಯುವಂತೆ ಹೇಗೆ ಅರ್ಥಮಾಡಿಸುವುದು..? ತಿಳಿಯುತ್ತಿರಲಿಲ್ಲ. ಚಡಪಡಿಸಿದೆ. 

ಅಥರ್ವನ ಕಿವಿಯಲ್ಲಿರುವ ಇಂಪ್ಲಾಂಟ್​ಆಕ್ಟಿವೇಟ್​ಆಗಿ ಆಗ 1 ತಿಂಗಳು ತುಂಬುತ್ತಾ ಬಂದಿತ್ತು. ‘ಅ, ಇ, ಊ, ಮ್​, ಶ್​, ಸ್​’ ಎಂಬ ಶಬ್ಧಗಳ ವ್ಯತ್ಯಾಸವನ್ನ ಗುರುತು ಹಚ್ಚತೊಡಗಿದ್ದ. ಶಬ್ಧಗಳ ದಿಕ್ಕನ್ನು ಪತ್ತೆ ಹಚ್ಚುತ್ತಿದ್ದ. ಪ್ರಾಣಿ ಪಕ್ಷಿಗಳ ವಾಹನ ಶಬ್ಧಗಳನ್ನು ಗುರುತಿಸುತ್ತಿದ್ದ. ಕಾಲಿಂಗ್​ ಬೆಲ್​, ಮಿಕ್ಸಿ, ಕುಕ್ಕುರ್​ ಶಬ್ಧಗಳ ವ್ಯತ್ಯಾಸವನ್ನೂ ಕಂಡುಹಿಡಿಯತೊಡಗಿದ್ದ. ಅ ದಿಂದ ಅಂ ಅಃ ತನಕ ಎಲ್ಲ ಸ್ವರಗಳನ್ನ ಹೇಳಲು ಶುರು ಮಾಡಿದ್ದ. ನಾನು ಏನೇ ಹೇಳಿಕೊಟ್ಟರೂ ಅವನ್ನೆಲ್ಲ ಸ್ವರಗಳಲ್ಲಿ  ಹೇಳತೊಡಗಿದ. ‘ಇದು ಕಿವಿ’ ಎಂದು ಹೇಳಿಕೊಟ್ಟರೆ, ‘ಇಉ ಇಇ’ ಎನ್ನತೊಡಗಿದ್ದ. ‘ಇದು ತಲೆ’ ಎಂದು ಹೇಳಿಕೊಟ್ಟರೆ ‘ಇಉ ಅಎ’ ಎಂದು ಹೇಳುತ್ತಿದ್ದ.  ಹೀಗೆ ನಾನು ಹೇಳಿಕೊಡುವ ಎಲ್ಲ ಮಾತುಗಳೂ ಸ್ವರಗಳಲ್ಲಿಯೇ ವಾಪಾಸ್​ಬರತೊಡಗಿದ್ದವು. 

ದಿನಗಳು ಕಳೆದಂತೆ ಅವನಲ್ಲಾಗುತ್ತಿರುವ ಸುಧಾರಣೆ ನನ್ನ ಅನುಭವಕ್ಕೆ ಬರತೊಡಗಿತ್ತು. ಆದರೆ, ನಾನು ಹೇಳಿಕೊಡುವ ಎಲ್ಲ ಮಾತುಗಳ ಜತೆಗೆ ಅಮ್ಮಾ ಅನ್ನುವುದೂ ಸೇರಿಹೋಗಿತ್ತೇ ವಿನಃ, ನನ್ನ ಮಗ ನನ್ನನ್ನು ಇನ್ನೂ `ಅಮ್ಮಾ’ ಎಂದು ಕರೆದಿರಲೇ ಇಲ್ಲ. ನಾನು ಹೇಳಿಸಿದಾದ ಮಾತ್ರ ‘ಅಮ್ಮಾ’ ಅನ್ನುತ್ತಿದ್ದ,  ಅಮ್ಮನನ್ನು ತೋರಿಸು ಎಂದರೆ ನನ್ನನ್ನೇ ತೋರಿಸುತ್ತಿದ್ದ.  ಆದರೆ ಕರೆಯುತ್ತಿಲ್ಲ.  ಅಮ್ಮನ ಅವಶ್ಯಕತೆ ಅವನಿಗಿದ್ದಾಗ, ಮೊದಲಿನಂತೆ ಜೋರಾಗಿ ಅತ್ತುಬಿಡುತ್ತಿದ್ದನೇ ಹೊರತು, ಅಮ್ಮಾ ಎಂಬ ಎರಡಕ್ಷರದ ಆ ಕರೆ ಬರುತ್ತಿರಲೇ ಇಲ್ಲ. ಇದೇ ಕಾರಣಕ್ಕೇ ಅಮ್ಮಾ ಎಂಬ ಪದ ಅವನ ಬಾಯಲ್ಲಿ ಬಂದರೂ ನನಗೆ ಸಮಾಧಾನವಿರಲಿಲ್ಲ.   

ಈ ನಡುವೆ ಒಂದು ಭಯ ನನ್ನ ಕಾಡತೊಡಗಿತ್ತು. ಕೇಳಿಸಿಕೊಂಡು ನಾನು ಹೇಳಿದ್ದೆಲ್ಲವನ್ನ ತನಗೆ ಬಂದ ರೀತಿಯಲ್ಲಿ ವಾಪಾಸ್​ಹೇಳಲು ಕಲಿತಿದ್ದ ಅಥರ್ವ ‘ಗಿಳಿ’ಯಾಗಿಬಿಟ್ಟರೆ..? ಎಂಬ ಭಯವದು. ನಾನು ನಮ್ಮ ಶಾಲೆಯಲ್ಲಿಯೇ ಕೆಲವು ಮಕ್ಕಳನ್ನ ಗಮನಿಸಿದ್ದೆ. ಅವರಿಗೆ ನಾವು ಕೇಳಿದ ಪ್ರಶ್ನೆಯನ್ನು ಯೋಚಿಸಿ ಉತ್ತರ ಕೊಡಲು ಬರುತ್ತಿರಲಿಲ್ಲ ಬದಲಾಗಿ ನಾವು ಕೇಳಿದ ಪ್ರಶ್ನೆಯನ್ನೇ ನಮಗೆ ವಾಪಾಸ್​ಹೇಳಿಬಿಡುತ್ತಿದ್ದರು. ‘ನಿನ್ನ ಹೆಸರು ಏನು?’ ಎಂದು ಕೇಳಿದರೆ ಅದಕ್ಕೆ ಉತ್ತರ ಕೊಡುವ ಬದಲಾಗಿ, ‘ನಿನ್ನ ಹೆಸರು ಏನು..?’ ಎಂದು ವಾಪಾಸ್​ಹೇಳಿಬಿಡುವ ಸಮಸ್ಯೆಯದು.  ಗಿಳಿಯ ಥರ ನಾವು ಹೇಳಿದ್ದನೇ ಮರಳಿ ಹೇಳುವುದು. ಯೋಚನಾ ಶಕ್ತಿಯ ಕೊರತೆಯಿದ್ದಾಗ ಒದಗುವ ತೊಂದರೆ ಇದು ಎಂಬುದು ನನಗೆ ಗೊತ್ತಿತ್ತು. ಅಂಥ ಸಮಸ್ಯೆ ಬಂದರೆ, ಅದಕ್ಕೂ ವಿಶೇಷವಾಗಿ ಥೆರಪಿ ನೀಡಬೇಕಾಗುತ್ತದೆ. ‘ಗಿಳಿ ಪಾಠ’ದಂತಾಗದಂತೆ ನೋಡಿಕೊಳ್ಳಬೇಕು ಎಂದು ನಮ್ಮ ಶಾಲೆಯ ಎಲ್ಲ ಶಿಕ್ಷಕಿಯರೂ ಎಲ್ಲ ತಾಯಂದಿರಿಗೆ ಮೇಲಿಂದ ಮೇಲೆ ಎಚ್ಚರಿಸುತ್ತಲೇ ಇರುತ್ತಾರೆ. ಈ ಸಮಸ್ಯೆ ನನ್ನ ಮಗನಿಗೆ ಬಾರದಿದ್ದರೆ ಸಾಕಪ್ಪಾ ಎಂದೆನಿಸುತ್ತಿತ್ತು.  ಅಮ್ಮಾ ಎನ್ನಲು ಬರುತ್ತಿದ್ದರೂ, ನನ್ನ ಅಮ್ಮಾ ಎಂದು ಕರೆಯದಿದ್ದಾಗ ಈ ಭಯ ನನ್ನ ಕಾಡುತ್ತಿತ್ತು. 

ಆವತ್ತು ಎಂದಿನಂತೆ ಸಂಜೆ ವಾಕಿಂಗ್ ಹೊರಟೆವು. ಅಂಗಡಿಯಲ್ಲಿ ಅಥರ್ವನಿಗೆ ಇಷ್ಟವಿರುವ ದೊಡ್ಡ ಚಾಕಲೇಟು, ಕ್ರೀಮ್​ ಬಿಸ್ಕೇಟ್​ಗಳನ್ನ ಕೊಂಡುಕೊಂಡೆ. ನಾನು ಅವುಗಳನ್ನೆಲ್ಲ ಬೇಕಂತಲೇ ಅವನಿಗೆ ತೋರಿಸಿಯೇ ಬ್ಯಾಗ್​ನೊಳಗೆ ಹಾಕಿದೆ. ಶುರುವಾಯ್ತು ಅಳು. ಅಲ್ಲಿಯೇ ಅವನ್ನೆಲ್ಲ ತನಗೆ ಕೊಡು ಎಂದು ಹಟ ಹಿಡಿದ. ಬ್ಯಾಗ್ ತೋರಿಸಿ ತೋರಿಸಿ ಅತ್ತ. ಅವನನ್ನ ಆವತ್ತು ಮತ್ತೆಲ್ಲಿಯೂ ಸುತ್ತಿಸದೇ, ಮನೆಗೆ ವಾಪಾಸ್​ಕರೆದುಕೊಂಡು ಬಂದೆ. ಮನೆಯೊಳಗೆ ಬಂದಿದ್ದೇ, ಬ್ಯಾಗ್​ನಿಂದ ಚಾಕಲೇಟು ತೆಗೆದು ಅವನಿಗೆ ಕಾಣಿಸುವಂತೆ ಮೇಲೆ ಎತ್ತಿಟ್ಟು ಎದ್ದುಹೋದೆ., ಅಳು ಜೋರಾಯಿತು. ಅಥರ್ವ ನನ್ನ ಹಿಂದೆ ಹಿಂದೆಯೇ ಬಂದು ಅಳುತ್ತಿದ್ದ. ನನ್ನ ಕೈಹಿಡಿದು ಜಗ್ಗಿ ಹಾಲ್​ಗೆ ಕರೆತಂದು ನಾನು ಇಟ್ಟಿದ್ದ ಚಾಕಲೇಟು ತೋರಿಸುತ್ತಾ ಬಾಯಲ್ಲಿ ಏನೇನೋ ಬಡಬಡಿಸುತ್ತಾ ಅಳುತ್ತಿದ್ದ. ದೈನ್ಯವಾಗಿ ಕೊಡು ಎನ್ನುವಂತೆ ಮುಖಭಾವ ಮಾಡಿ ನನ್ನ ಕಾಲುಗಳನ್ನು ಅಪ್ಪಿಕೊಂಡ. ನನಗೇನೂ ಅರ್ಥವೇ ಆಗಿಲ್ಲ ಎಂಬಂತೆ ನಿಂತುಕೊಂಡೆ.

‘ಅಮ್ಮಾ.. ಕೊಡು’ ಹೇಳು ಅಂದೆ. ‘ಅಮ್ಮಾ.. ಒಉ’ ಅಂದ. ಆ ಚಾಕಲೇಟು ತೆಗೆದು ಅದರಲ್ಲಿ ಸ್ವಲ್ಪ ಮಾತ್ರ ಮುರಿದು ಅವನ ನಾಲಿಗೆಗೆ ನೆಕ್ಕಿಸಿ ಮತ್ತೆ ಮೇಲಿಟ್ಟೆ. ಅಳು ಜೋರಾಯ್ತು. ನಾನು ಏನನ್ನೋ ಓದುವಂತೆ ನಟನೆ ಮಾಡುತ್ತಾ, ಪುಸ್ತಕ ಹಿಡಿದು ಕುಳಿತೆ. ಅವನು ಅಳುತ್ತಾ, ನನ್ನ ಮುಖವನ್ನ ತನ್ನ ಕಡೆ ತಿರುಗಿಸಲು ಯತ್ನಿಸುತ್ತಿದ್ದ. ನಾನು ಸೆಟೆದು ಕುಳಿತೆ. ನನ್ನ ಮುಖ ತನ್ನತ್ತ ತಿರುಗಿಸಲು ಪ್ರಯತ್ನಿಸುತ್ತಾ ಅಳುತ್ತಲೇ ‘ಅಮ್ಮಾ..’ ಅಂದ. ನಾನು ಥಟ್ಟನೆ ಅವನತ್ತ ತಿರುಗಿ ನಕ್ಕು, ಮೇಲಿದ್ದ ಚಾಕಲೇಟಿನಿಂದ ಅತಿ ಚಿಕ್ಕ ತುಂಡು ಮುರಿದು ಅವನ ಬಾಯಲ್ಲಿಟ್ಟು ಮತ್ತೆ ಕುಳಿತುಕೊಂಡೆ. ಅವನಿಗೆ ದೊಡ್ಡ ಚಾಕಲೇಟು ಪೂರ್ತಿ ಬೇಕಿತ್ತು. ಮತ್ತೆ ಕಿರುಚಿದ. ಅತ್ತು ಅತ್ತು ಸುಸ್ತಾದರೂ ಅವನ ಪ್ರಯತ್ನ ಬಿಡಲಿಲ್ಲ. ನನ್ನ ಗಮನ ಸೆಳೆಯಲು ಮಳ್ಳನ ಹಾಗೆ ನಕ್ಕ. ನನ್ನ ಮಡಿಲಮೇಲೆ ಬಂದು ಕುಳಿತ. ನನ್ನ ಮಡಿಲಲ್ಲಿ ಮಲಗಿ ನನ್ನ ಮುಖ ಮುಟ್ಟಿದ. ಏನು ಮಾಡಿದರೂ ಅವನನ್ನ ನಾನು ನೋಡತ್ತಿರಲಿಲ್ಲ. ಮತ್ತೊಮ್ಮೆ ‘ಅಮ್ಮಾ..’ ಅಂದ. ತಕ್ಷಣ ತಿರುಗಿ ಇನ್ನೊಂದು ಚೂರು ಚಾಕಲೇಟು ಕೊಟ್ಟೆ. ಈಗ ಅವನಿಗೆ ಅರ್ಥವಾಗಿತ್ತು. ‘ಅಮ್ಮಾ’ ಎಂದರೆ ಮಾತ್ರ ಚಾಕಲೇಟು ಸಿಗುತ್ತದೆ ಎಂದು. ‘ಅಮ್ಮಾ…’ ಅಂದಾಗಲೆಲ್ಲ ನಾನು ಚಾಕಲೇಟು ಚೂರು ಮುರಿದುಕೊಟ್ಟೆ. ಅದೇ ಆಟವಾಯ್ತು. ಅಂತೂ ಆವತ್ತಿನ ‘ಅಮ್ಮಾ’ ಪಾಠ ಮುಗಿಯುವಷ್ಟರಲ್ಲಿ ರಾತ್ರಿ 9 ಮೀರಿತ್ತು. 

ಮರುದಿನವೂ ಅದೇ ಚಟುವಟಿಕೆ ಮುಂದುವರೆದಿತ್ತು. ಆದರೆ ಮತ್ತೊಂದು ಗೊಂದಲ ಕಾಡುವುದಕ್ಕೆ ಶುರುವಾಯ್ತು. ಏಕೆಂದರೆ, ತನಗೆ ಚಾಕಲೇಟು ಬೇಕೆನಿಸಿದಾಗ ಮಾತ್ರ ಅಮ್ಮಾ ಅನ್ನ ತೊಡಗಿದ ! ಅಯ್ಯೋ ಈಗೇನು ಮಾಡುವುದು..? ನಿನಗೆ ಅಮ್ಮನ ಅವಶ್ಯಕತೆಯಿದ್ದಾಗಲೆಲ್ಲ ಅಮ್ಮಾ ಅನ್ನಬೇಕು ಎಂಬುದನ್ನ ಹೇಗೆ ಅರ್ಥಮಾಡಿಸಲಿ..? ಶೈಲಜಾರನ್ನು ಕೇಳಿದೆ. ‘ಪರವಾಗಿಲ್ಲ, ನಿಧಾನವಾಗಿ ಅರ್ಥವಾಗುತ್ತೆ ಅವನಿಗೆ. ಪ್ರತಿಬಾರಿಯೂ ಅವನು ನಿಮ್ಮ  ಗಮನಸೆಳೆಯಲು ಪ್ರಯತ್ನಪಟ್ಟಾಗ ‘ಅಮ್ಮಾ’ ಎನ್ನಲು ಅವನಿಗೆ ನೆನಪಿಸುತ್ತಾ ಹೋಗಿ. ಅವನಿಗೆ ಅಭ್ಯಾಸವಾಗುತ್ತೆ’ ಎಂದರು ಅವರು. ಹಾಗೇ ಮಾಡಿದೆ.  ಅವನಿಗೆ ನನ್ನ ಅವಶ್ಯಕತೆಯಿದ್ದಾಗ ಅಭ್ಯಾಸ ಬಲದಿಂದ ಮೊದಲಿನಂತೆ ಅತ್ತು ನನ್ನ ಗಮನಸೆಳೆಯಲು ಪ್ರಯತ್ನಿಸಿದ್ದ. ಆದರೆ ಅವನು ‘ಅಮ್ಮಾ’ ಅಂದಂತೂ ನಾನು ಸ್ಪಂದಿಸುತ್ತಿರಲಿಲ್ಲ. ನಾಲ್ಕೈದು ದಿನ ಈ ಅಮ್ಮಾ ಚಟುವಟಿಕೆ ನಡೆಯುತ್ತಲೇ ಇತ್ತು. 

ಪಕ್ಕದಲ್ಲಿಯೇ ಇರುವ ಓನರ್​ ಅಜ್ಜಿ ಕೂಡ ನನ್ನ ಕರೆದು ಹೇಳಿದರು. ‘ಆ ಮಗಿನಾ ಯಾಕವ್ವ ಅಳುಸ್ತೀಯಾ..? ಇತ್ತೀಚ್ಗೆ ಯಾಕೋ ಸಾಣೆ ಅಳ್ತವ್ನಲ.. ಯಾಕವ್ವ..? ಉಸಾರಿಲ್ವ..?’ ಅಂತ. ‘ಹಾಗೆನಿಲ್ಲ ಆಂಟಿ’ ಅಂದೆ ಚುಟುಕಾಗಿ. ಮತ್ತೇನು ಹೇಳಲಿ ನಾನು…?  

ಅವನು ನನ್ನ ಅಮ್ಮಾ ಎಂದು ಕರೆಯಬೇಕು ಎಂಬುದು ಅವನಿಗೆ ಅರ್ಥವಾಗಲಿ ಎಂಬ ಕಾರಣಕ್ಕೆ, ಈ ದಾರಿ ಹಿಡಿದಿದ್ದೆ ನಾನು. ಮನೆಯಲ್ಲಿ ಮತ್ಯಾರೂ ಇಲ್ಲದ ಕಾರಣ, ಅಥರ್ವನಿಗೆ ನಾನೇ ಅನಿವಾರ್ಯ. ನೀರು, ತಿಂಡಿ ಬೇಕು ಎಂದು ಅಳುವಾಗ ಕರುಳು ಕಿತ್ತುಬರವಷ್ಟು ನೋವಾಗುತ್ತಿತ್ತು. ಆದರೆ, ಅವನ ಬಾಯಲ್ಲಿ `ಅಮ್ಮಾ’ ಬರುವವರೆಗೂ ಅವನನ್ನ ಹಾಗೇ ಅಳಲು ಬಿಡುತ್ತಿದ್ದೆ. ಅವನನ್ನು ಅಳಲು ಬಿಟ್ಟು, ನಾನೂ ಅತ್ತಿದ್ದಿದೆ. ಅಂತೂ ಈ ಚಟುವಟಿಕೆಯಿಂದಲೇ ನನ್ನ ಮಗ ನನ್ನ ‘ಅಮ್ಮಾ’ ಎಂದು ನನ್ನ ಕರೆಯಲು ಶುರು ಮಾಡಿದ್ದ. ಹೀಗಾಗಿ, ಯಾರಾದರೂ ನಿನ್ನ ಮಗ ಅಮ್ಮಾ ಎಂದಿದ್ದು ಯಾವಾಗ..? ಎಂದು ಕೇಳಿದರೆ, ಹೇಳುವುದು ಬಹಳ ಕಷ್ಟ. ಏಕೆಂದರೆ ಅವನಿಂದ ಅಮ್ಮಾ ಎನ್ನಿಸಿಕೊಂಡಿರುವುದು  ಒಂದು ಉದ್ದದ ಪ್ರಕ್ರಿಯೆ.  

ಅಂತೂ ಅಮ್ಮ ಬೇಕಾದಾಗಲೆಲ್ಲ. ಅಮ್ಮಾ.. ಅಮ್ಮಾ ಅನ್ನಲು ಶುರುಮಾಡಿದ್ದ. ಈ ಶಬ್ಧಕ್ಕೀಗ ಅರ್ಥವಿತ್ತು. ಒಂದು ಭಾವನೆ ಇತ್ತು.   ಯಾವ ಸುಶ್ರಾವ್ಯ ಸಂಗೀತ ಕೇಳಿದರೂ ಸಿಗದ ಸಮಾಧಾನವೊಂದು ಆ ಒಂದು ಪದದಲ್ಲಿ ನನಗೆ ಸಿಗತೊಡಗಿತ್ತು. ‘ಅಮ್ಮಾ..’ ಎಂದು  ನಾನೂ ನನ್ನಮ್ಮನನ್ನು ಕರೆಯುತ್ತೇನೆ, ಎಲ್ಲರೂ ಅವರವರ ತಾಯಂದಿರನ್ನು ಕರೆಯುತ್ತಾರೆ. ಆದರೆ ಆ ಪದದ ನಿಜವಾದ ಅರ್ಥವಾಗಬೇಕು ಅಂದರೆ,  ನಮಗೆ ಆ ಪದವಿ ಸಿಗಬೇಕು. ನೈಸರ್ಗಿಕವಾಗಿ ನನಗೆ ಆ ಪದವಿಯೇನೋ ಸಿಕ್ಕಿತ್ತು. ಆದರೆ ಮಗುವಿನ ಬಾಯಲ್ಲಿ ಅಮ್ಮಾ ಅನ್ನಿಸಿಕೊಳ್ಳಲು ಸಾಧ್ಯವಾಗದೇ ಚಡಪಡಿಸಿದ್ದೆ. 

ನನ್ನ ಮಗ ಅರ್ಥಪೂರ್ಣವಾಗಿ ‘ಅಮ್ಮಾ’ ಎನ್ನಲು ಎಂದು ಶುರು ಮಾಡಿದನೋ ಅಂದಿನಿಂದ ಆ ಪದದೊಳಗಿನ ಅಂತಃಶಕ್ತಿಯ ಅರಿವು ಅನುಭವಕ್ಕೆ ಬಂದಿತ್ತು. ಮೊದಮೊದಲು ಅವನು ಅಮ್ಮಾ ಎಂದು ಕರೆಯತೊಡಗಿದಾಗ, ನನ್ನ ಮೈ ರೋಮಗಳು ಎದ್ದು ನಿಲ್ಲುತ್ತಿದ್ದವು.  ಬೇಕಂತಲೇ ಸುಮ್ಮನಿದ್ದು ಅವನಿಂದ ಮತ್ತಿನ್ನೆರಡು ಸಲ ಆ ಪದವನ್ನ ಕೇಳಿಸಿಕೊಂಡು ಸುಖಪಟ್ಟು ‘ಹೂಂ’ ಎನ್ನುತ್ತಿದ್ದೆ. ಆ ಖುಷಿಯನ್ನ ಅದ್ಹೇಗೆ ವರ್ಣಿಸಲಿ..? ತಿಳಿಯುತ್ತಿಲ್ಲ ನನಗೆ. ವರ್ಣನೆಗೆ ನಿಲುಕದ ಅನುಭವ ಅದು. 

ಅಮ್ಮ ಎಂಬ ಮಾತಿಗಿಂತ 
ಬೇರೆ ಮಂತ್ರ ಎಲ್ಲಿದೆ ?
ಅದು ನೀಡುವ ಶಾಂತಿ ಕಾಂತಿ 
ಯಾವ ತಾರೆ ರವಿಗಿದೆ ?

ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರು ಬರೆದ ಈ ಹಾಡಿನ ಪ್ರತಿ ಸಾಲುಗಳ ಸ್ವಷ್ಟ ಭಾವಾರ್ಥವಾಗಿತ್ತು ನನಗೆ. ಇದರ ಅಕ್ಷರ ಅಕ್ಷರಗಳಲ್ಲಿರುವ ಭಾವಲೇಪ ಹೃದಯಕ್ಕೆ ತಾಕಿತ್ತು. ನನ್ನ ಪಾಲಿಗಂತೂ ಇದೊಂದು ಕಷ್ಟಪಟ್ಟು ಗಳಿಸಿಕೊಂಡ ಸಂಪತ್ತಾಗಿತ್ತು. 

ಕಿವುಡು ಮಕ್ಕಳ ತಾಯಿಯರಾದ ನಮಗೆ ಒಂದೊಂದು ಸ್ವರ, ವ್ಯಂಜನಗಳೂ ಕೂಡ ಒಂದೊಂದು ಹಬ್ಬ. ‘ಇವತ್ತು ನನ್ನ ಮಗ ‘ಊ’ ಅಂದ ಕಣೇ, ನಿನ್ನೆ ನನ್ನ ಮಗಂಗೆ ಅಮ್​ ಬಂತು ಗೊತ್ತಾ..? ಈಗಷ್ಟೇ ನನ್ನ ಮಗಳು ‘ಪ’ ಅಂದ್​ಬಿಟ್ಳು, ಅಂತೂ ನನ್ ಮಗನ್​ ಬಾಯಲ್ಲಿ ‘ಕ’ ಹೇಳಿಸಿಬಿ​ಟ್ಟೆ ಕಣೇ’ ಎಂಬ ಸಂಭ್ರಮಗಳೆಲ್ಲ ನಮ್ಮನಮ್ಮಲ್ಲಿ ಅತೀ ಸಾಮಾನ್ಯ. 

ಮನೆಯಲ್ಲಿ ನಾನೊಬ್ಬಳೇ ಅವನಿಗೆ ಪಾಠ ಮಾಡುವುದಕ್ಕಿಂತ, ಇನ್ನೊಬ್ಬರಿದ್ದರೆ ಬೇಗೆ ಕಲಿಸಬಹುದೋ ಏನೋ ಅನ್ನಿಸತೊಡಗಿತ್ತು ನನಗೆ.  ಹೀಗಾಗಿ ನನ್ನ ಅಮ್ಮನಿಗೆ ಒಂದು ವಾರ ಬಿಡುವು ಮಾಡಿಕೊಂಡು ಬರಲು ಹೇಳಿದ್ದೆ. ಅವರೂ ಮೊಮ್ಮಗನ ಕಲಿಕೆ ನೋಡಲು ತುದಿಗಾಲಲ್ಲಿ ಇದ್ದರೋ ಏನೋ, ಹೇಳಿದ ತಕ್ಷಣ ಒಪ್ಪಿಕೊಂಡು ಮೈಸೂರಿಗೆ ಬಂದರು. ಅಮ್ಮ ಬಂದಮೇಲೆ ಅವರನ್ನೂ ಬಳಸಿಕೊಂಡು, ಹಲವು ಪ್ರಯೋಗಗಳನ್ನು ಮಾಡಿದ್ದೆ. ಅಥರ್ವನ ಮುಂದೆ ನಾನು ಅಮ್ಮ ಇಬ್ಬರೂ ಕುಳಿತುಕೊಂಡು, ಅವನಿಗೆ ತಿಳಿಯುವಂತೆ ನಿಧಾನವಾಗಿ ಮಾತನಾಡಿದೆವು. ನಾನು ನನ್ನ ಅಮ್ಮನನ್ನು ಮಾತು ಮಾತಿಗೆ ಅಮ್ಮಾ ಎಂದು ಕರೆದೆ, ಅವರು ಓ.. ಎಂದು ಪ್ರತಿಕ್ರಿಯಿಸಿದರು. ಅಥರ್ವ ನಮ್ಮೊಂದಿಗೆ ಇದ್ದಾನೆ ಎಂದರೆ, ಅವನಿಗೆ ಅರ್ಥವಾಗುವಂಥ ಮಾತುಗಳನ್ನಾಡಿ, ಅವನನ್ನೂ ನಮ್ಮೊಂದಿಗೆ ಸೇರಿಸಿಕೊಂಡು ಮಾತನಾಡಿದೆವು. ನನ್ನ ಅಮ್ಮ ಬಂದಮೇಲೆ, ಅಮ್ಮಾ.. ಎಂಬ ಪದ ಇನ್ನಷ್ಟು ಬಳಕೆಗೆ ಬಂದಿತ್ತು. ಅವರನ್ನು ಅಥರ್ವನಿಗೆ ‘ಆಯಿ’ ಎಂದು ಪರಿಚಯಿಸಿದ್ದೆ.  ನಿರಾಯಾಸವಾಗಿ ಅಥರ್ವ ನನ್ನಮ್ಮನನ್ನು ‘ಆಯಿ’ ಎಂದು ಬಾಯ್ತುಂಬಾ ಕರೆಯತೊಡಗಿದ್ದ. ನನ್ನಮ್ಮನ ಖುಷಿ ಆನಂದಬಾಷ್ಪವಾಗಿ ಹರಿಯುತ್ತಿತ್ತು. 

ಕಳೆದ ಬಾರಿ, ಅಮ್ಮ ಮೈಸೂರಿಗೆ ಬಂದಾಗ, ಇಲ್ಲಿಯೇ ಇರುವ ಸಂಬಂಧಿಕರ ಮನೆಗಳಿಗೆಲ್ಲ ಕರೆದೊಯ್ದಿದ್ದೆ. ಈ ಬಾರಿ ನನ್ನಮ್ಮನ ಲಿಸ್ಟ್​ನಲ್ಲಿದ್ದ ಹೊಸ ಹೆಸರೊಂದು ಇತ್ತು. ‘ಈ ಸಾರಿಯಾದರೂ ಸುಬ್ಬು ಮನೆಗೆ ಹೋಗಲೇ ಬೇಕು ಕಣೇ. ಸಂಬಂಧದಲ್ಲಿ ನನಗೆ ಅಕ್ಕನ ಮಗ, ನಿನಗೆ ಅಣ್ಣ. ನಿನಗೂ ಅವನ ಪರಿಚಯ ಮಾಡಿಸಿಕೊಡ್ತೀನಿ’ ಅಂದರು. ಸಂಬಂಧದ ಲೆಕ್ಕಾಚಾರದಲ್ಲಿ ದೂರದ ಸಂಬಂಧ. ಅಮ್ಮ ಹೇಳಿದ ತಕ್ಷಣ ‘ಯಾಕೆ ಹೀಗೆ ದೂರ ದೂರದ ಸಂಬಂಧವನ್ನೆಲ್ಲ ಬಳಸುತ್ತಾರೋ ಇವರು’ ಅಂದುಕೊಂಡಿದ್ದಂತೂ ಹೌದು. ಆದರೂ ಅಪರೂಪಕ್ಕೊಮ್ಮೆ ಬಂದಿರುವ ನನ್ನಮ್ಮನ ಮನ ನೋಯಿಸಲು ಇಷ್ಟವಿಲ್ಲದೆ. ಸುಬ್ಬಣ್ಣನ ನಂಬರ್​ಪಡೆದುಕೊಂಡು ಫೋನಾಯಿಸಿದೆ.  

ನಾನು ನನ್ನ ಪರಿಚಯ ಹೇಳಿಕೊಳ್ಳುತ್ತಿದ್ದಂತೆ ಅತ್ತಕಡೆಯಿಂದ ಧ್ವನಿ ಬದಲಾಗಿ, ಆತ್ಮೀಯತೆಯ ಧಾಟಿ ಬಂತು. ಖಂಡಿತ ಮನೆಗೆ ಬನ್ನಿ, ಇವತ್ತೇ ನಮ್ಮ ಮನೆಗೆ ಊಟಕ್ಕೇ ಬನ್ನಿ ಎಂಬ ಆಹ್ವಾನವೂ ಬಂತು. ಅಷ್ಟೇ ಅಲ್ಲದೇ, ನಮ್ಮ ಮನೆ ಎಲ್ಲಿದೆ ಎಂಬುದನ್ನ ಬಾಯ್ಮಾತಲ್ಲೇ ಕೇಳಿ ತಿಳಿದುಕೊಂಡು, ತಮ್ಮ ಕಾರು ತಂದು ನನ್ನ ಮನೆಯ ಮುಂದೆ ನಿಲ್ಲಿಸಿಯೇ ಬಿಟ್ಟರು ಸುಬ್ಬಣ್ಣ. ಅವರ ಮನೆಗೆ ಅದೇ ಮೊದಲಬಾರಿಗೆ ನಾವು ಹೋಗಿದ್ದಾದರೂ, ಹಿಂದೆಂದೂ ಅವರನ್ನ ನೋಡಿರದಿದ್ದರೂ, ಆ ಹೊಸ ‘ಅಣ್ಣ- ಅತ್ತಿಗೆ’ ನನಗೆ ಅಪರಿಚಿತರು ಎಂಬ ಭಾವವೇ ಬರಲಿಲ್ಲ. ಅವರಿಂದ ಸಿಕ್ಕ ಆತ್ಮೀಯತೆಯೇ ಹಾಗಿತ್ತು. ಆ ಭೇಟಿಯ ನಂತರ, ನಾನು ಮತ್ತು ಅಥರ್ವ ಅವರ ಮನೆಯವರಂತೆಯೇ ಆಗಿಬಿಟ್ಟಿದ್ವಿ. ಅಮ್ಮ ಪರಿಚಯಿಸಿದ ಅಣ್ಣ- ಅತ್ತಿಗೆ ಮಾತ್ರ ನನ್ನ ಪಾಲಿಗೆ ಸ್ವಂತವಾಗಿಬಿಟ್ಟರು. ಅವರು ನಮಗೆ ನೀಡಿದ ಕಾಳಜಿ, ಪ್ರೀತಿ, ಸಹಾಯ, ಮಾನಸಿಕ ಧೈರ್ಯ, ನೈತಿಕ ಬೆಂಬಲ ಮಾತ್ರ ಗಣನೆಗೆ ನಿಲುಕದಂಥದ್ದು.

ಹದಿನೈದು ದಿನಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಸುಬ್ಬಣ್ಣ-ಅತ್ತಿಗೆ  ಮನೆಗೆ ಅಥರ್ವನನ್ನ ಕರೆದೊಯ್ದು, ಅವರನ್ನೂ ಅವನ ಪಾಠಕ್ಕೆ ಉಪಯೋಗಿಸಿಕೊಂಡಿದ್ದೆ. 

ಇಂಥ ಅನುಭವಗಳು, ಮೈಸೂರಿನಂಥ ಊರಿನಲ್ಲಿ ಮಾತ್ರ ಸಾಧ್ಯ ಎಂಬುದು ನನ್ನ ಭಾವನೆ. ಅಲ್ಲಿ ಉಳಿದುಕೊಂಡ ಅದೆಷ್ಟೋ ನನ್ನಂಥ ತಾಯಿಯರ ಅಭಿಪ್ರಾಯವೂ ಹೀಗೆಯೇ ಇದೆ. ಯಾಕೋ ಗೊತ್ತಿಲ್ಲ ಗಡಿಬಿಡಿ, ಒತ್ತಡ, ಬದುಕ ಬಂಡಿಯ ಜಂಜಾಟದ ನಡುವೆಯೂ ಆತ್ಮೀಯತೆಯ ಕೊಂಡಿ ಬೆಸೆದುಕೊಂಡು, ಇವರೂ ನಮ್ಮವರೇ ಎಂದುಕೊಳ್ಳುವ ಜನರು ಮೈಸೂರಿನಲ್ಲಿ ಬಹಳ ಸಿಗುತ್ತಾರೆ. ನಾನು ನನ್ನ ಕುಟುಂಬದಿಂದ ದೂರವಿದ್ದೇನೆ ಎಂಬ ಯಾವ ಭಾವವೂ ಕಾಡಂತೆ ನೋಡಿಕೊಂಡಿದೆ ಆ ಊರು. ನನಗೆ ನೈತಿಕ ಪ್ರೋತ್ಸಾಹ ನೀಡಿ, ಅಥರ್ವನನ್ನ ಪ್ರೀತಿಯಿಂದ ಆದರಿಸಿದ ಕುಟುಂಬಗಳಲ್ಲಿ ಜನತಾ ನಗರದ ಸಂಧ್ಯಾ- ಮಹೇಶ್ ಕುಟುಂಬವೂ ಒಂದು. ಅವರ ಒಡನಾಟದಿಂದಲೇ ‘ಆಂಟಿ-ಅಂಕಲ್​’ ಎಂಬ ಜೋಡಿ ಪದವನ್ನ ಕಲಿತ. ಅವರ ಮಕ್ಕಳಿಬ್ಬರಿಗೆ ‘ಅಣ್ಣಾ’ ಎಂದ. ಈ ಎಲ್ಲ ಪದಗಳ ಉಚ್ಛಾರದಲ್ಲಿ ಸ್ಪಷ್ಟತೆ ಇರದಿದ್ದರೂ ಅವನು ಹೇಳುತ್ತಿದ್ದಾನೆ ಎಂಬುದೇ ನಮಗೆಲ್ಲ ಖುಷಿಕೊಡುತ್ತಿತ್ತು. 

ಕಿವುಡು ಮಕ್ಕಳ ಪಾಲಿಗಂತೂ ಮೈಸೂರೆಂಬುದು ವಾಕ್​ಶಕ್ತಿ ನೀಡುವ ಪುಣ್ಯನಗರಿ ಎಂದು ದೀಪಾ ಅಕ್ಕ ಹೇಳಿದ್ದು ನೂರಕ್ಕೆ ನೂರು ಸತ್ಯ. ಏಕೆಂದರೆ ಸಲಹೆ, ಮಾರ್ಗದರ್ಶನ ನೀಡುವುದಕ್ಕಾಗಿ ಪಿ.ಎ.ಡಿ.ಸಿ ಮತ್ತು ‘ಆಯಿಶ್​’ನಂಥ ಇನ್​ಸ್ಟಿಟ್ಯೂಟ್​ಗಳೂ ಇವೆ. ಶ್ರವಣದೋಷದ ಮಕ್ಕಳಿಗೆ ಮಾತುಕಲಿಸಿದ ಅನುಭವಿ ತಾಯಂದಿರು ಮೈಸೂರಿನ ಭೋಗಾದಿ ಸುತ್ತಮುತ್ತ  ಗಲ್ಲಿಗಲ್ಲಿಗೆ ಸಿಗುತ್ತಾರೆ. ನನ್ನ ಮಗನಿಗೆ ಸ್ಪೀಚ್​ಮತ್ತು ಲಿಸನಿಂಗ್​ಥೆರಪಿ ನೀಡುತ್ತಿದ್ದ ಥೆರಪಿಸ್ಟ್​ ‘ಶೈಲಜಾ ಶುಕ್ಲಾ’ ಇರುವುದು ಕೂಡ ನನ್ನ ಮನಗೆ ತೀರ ಹತ್ತಿರವೇ. ಯಾವ ಸಮಯದಲ್ಲಿಯೂ ನಾನು ಅವರೆಲ್ಲರಿಂದ ಸಲಹೆ ಪಡೆಯಬಹುದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮಕ್ಕಳ ಕಲಿಕೆಗೆ ಬೇಕಾದ ವಾತಾವರಣ ಇಲ್ಲಿದೆ. ಬಹುತೇಕ ಇಲ್ಲಿಯ ಸ್ಥಳೀಯರಿಗೂ ಕಿವುಡು ಮಕ್ಕಳನ್ನು ನೋಡಿ ಗೊತ್ತಿರುವ ಕಾರಣ, ಸಾಮಾನ್ಯ ಮಕ್ಕಳ ಹಾಗೆ ಇವರನ್ನೂ ಪರಿಗಣಿಸುತ್ತಾರೆ. ಮಗುವಿಗೆ ಮಾತು ಕಲಿಸಲು ಬದ್ಧರಾಗಿ ನಿಂತಿರುವ ಹೆತ್ತವರಿಗೆ ದಾರಿದೀಪ ನೀಡಲು ಬೇಕಾದ ಎಲ್ಲ ವ್ಯವಸ್ಥೆಯೂ ಮೈಸೂರಿನಲ್ಲಿತ್ತು. ಈಗಲೂ ಇದೆ. 

‘ಅಮ್ಮಾ’ ಎಂಬ ಪದದ ಅರ್ಥವಾಗಿ ಅದರ ಬಳಕೆ ಶುರುವಾಗುತ್ತಿದ್ದಂತೆ, ಅಥರ್ವನ ಬಾಯಲ್ಲಿ ಬಂದ ಎರಡನೇ ಶಬ್ಧವೇ ‘ಮೊಬಾಯ್​’!  ಮೊಬಾಯ್​ಎಂದರೆ ಮೊಬಾಯ್ಲ್​ಎಂದರ್ಥ. ಮೊಬಾಯ್ಲ್​ಎಂಬ ಮಾಯಾ ಪರದೆಯನ್ನ ನೋಡಲು ಕಾತರಿಸುತ್ತಿದ್ದ ಅಥರ್ವನಿಗೆ ಅದೊಂದು ದೂರದ ನಕ್ಷತ್ರ. ಅವನೊಳಗೆ ಮೊಬಾಯ್ಲ್​ಬಗ್ಗೆ ತೀವ್ರ ಕುತೂಹಲವಿದ್ದ ಕಾರಣ, ನಾನು ಹೇಳಿಕೊಡದಿದ್ದರೂ ಅದರ ಉಚ್ಛಾರ ಕಲಿತುಬಿಟ್ಟಿದ್ದ ! ಹೀಗೆಯೇ ಕೆಲವು ದಿನಗಳ ನಂತರ, ಮೊದಲ ಬಾರಿ ‘ಅಂಪಾ’ ಎಂದಿದ್ದ. ಅಂಪಾ ಎಂದರೆ ಅಪ್ಪ ಎಂದರ್ಥ. ‘ಅಂಪಾ’ ದಿಂದ ‘ಅಪ್ಪಾ’ ಆಗಲು ಎರಡು ತಿಂಗಳ ಸಮಯ ಬೇಕಾಯ್ತು. ಹೀಗೆ ದಿನೇ ದಿನೇ ಹಂತಹಂತವಾಗಿ ಅಥರ್ವನೊಳಗೆ ವಾಕ್​ಶಕ್ತಿಯ ಆವಾಹನೆ ಆಗತೊಡಗಿತ್ತು. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: