ಅಮೃತಾ ಹೆಗಡೆ ಅಂಕಣ- ಅಂತೂ ಆತ ‘ವಿಶೇಷ’ನಿಂದ ‘ಸಾಮಾನ್ಯ’ನಾದ…

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

31

ಆವತ್ತು ಪಿ.ಎ.ಡಿ.ಸಿ ಶಾಲೆಯ ಪುನರಾರಂಭದ ದಿನ.  ರಾತ್ರಿಯಿಡೀ ಯೋಚನೆ ಮಾಡಿ ಬೆಳಗ್ಗೆ ವಿನಯ್​ಮಾತಿಗೆ ನಾನು ಒಪ್ಪಿಕೊಂಡಿದ್ದೆ. ನಾನು ಮಾಡುತ್ತಿರುವುದು ತಪ್ಪೋ, ಸರಿಯೋ ಎಂಬುದರ ಕುರಿತು ಗೊಂದಲ ಹಾಗೆಯೇ ಇತ್ತು. ನನ್ನ ನಿರ್ಧಾರದ ಬಗೆಗಿನ ಭಯ ನನ್ನೊಳಗೆ ಗಾಢವಾಗಿ ಕವಿದಿತ್ತು. ಬೆಳಗಿನ ತಿಂಡಿಯೂ ನನಗ್ಯಾಕೋ ರುಚಿಸಲಿಲ್ಲ. ಬೆಳಗ್ಗೆ 10.15ರ ಸಮಯಕ್ಕೆ ಸರಿಯಾಗಿ ಸ್ಕೂಲ್​ಗೆ ಹೋದರೆ, ಪರಿಮಳಾ ಆಂಟಿ, ಅವರ ಕ್ಯಾಬಿನ್​ನಲ್ಲೇ ನಮಗೆ ಲಭ್ಯವಿರುತ್ತಾರೆ ಎಂಬುದು ಗೊತ್ತಿತ್ತು. ಹೀಗಾಗಿ ಅದೇ ಸಮಯಕ್ಕೆ ನಾವು ಸ್ಕೂಲ್​ಗೆ ಹೋದೆವು. 

ಸ್ಕೂಲ್​ನ ಗೇಟು ದಾಟಿ ಒಳಹೋಗುತ್ತಿದ್ದಂತೆ, ಅಥರ್ವ ದೊಡ್ಡ ದನಿಯಲ್ಲಿ ‘ ಇದು ಊಲ್​’ ( ಇದು ಸ್ಕೂಲ್​) ಎನ್ನುತ್ತಾ ತನ್ನಪ್ಪನಿಗೆ ತೋರಿಸತೊಡಗಿದ.  ಇವತ್ತಿನಿಂದ ತನ್ನಪ್ಪನೂ ಸ್ಕೂಲ್​ಗೆ ಬರುತ್ತಾನೆ ಎಂದುಕೊಂಡುಬಿಟ್ಟಿದ್ದನೋ ಏನೋ,  ’ಅಪ್ಪಾ.. ಅಮ್ಮ ಬೇದಾ, ಅಪ್ಪ ಬೇಕು’.  ಎಂದು ಮೂರ್ನಾಲ್ಕು ಬಾರಿ ಹೇಳಿದ್ದಲ್ಲದೇ,  ‘ಅಮ್ಮಾ ಹೋಇ’ (ಅಮ್ಮಾ ಹೋಗಿ) ಎಂದು ನನ್ನ ತಳ್ಳತೊಡಗಿದ್ದ. 

ನಮ್ಮ ಪುಣ್ಯಕ್ಕೆ ಪರಿಮಳಾ ಆಂಟೀ ಕ್ಯಾಬಿನ್​ನಲ್ಲಿಯೇ ಇದ್ದರು. ಯಾರದೋ ಜತೆ ಮಾತನಾಡುತ್ತಿದ್ದರು.  ನಾವು ಕಾರಿಡಾರ್​ನಲ್ಲಿಯೇ ಅವರ ಕ್ಯಾಬಿನ್​ಮುಂದೆಯೇ ನಿಂತು ಕಾದೆವು. ತಳಮಳ, ಚಡಪಡಿಕೆ ಅವರೇನನ್ನುತ್ತಾರೋ ಎಂಬ ಭಯ, ತಲೆಯ ತುಂಬಾ ತುಂಬಿಕೊಂಡಿತ್ತು.  ಇಡೀ ದೇಹದ ರಕ್ತವೆಲ್ಲ ತಲೆಯಕಡೆಯೇ ಹರಿಯುತ್ತಿದ್ದಂತೆ ಭಾಸವಾಗಿತ್ತು.  ತಲೆ ಭಾರವಾದಂತಾಗಿ, ಕೈಕಾಲಲ್ಲಿ ಶಕ್ತಿಯೇ ಇಲ್ಲದಂತನ್ನಿಸುತ್ತಿತ್ತು. ನಾವು ತೆಗೆದುಕೊಂಡ ನಿರ್ಧಾರದ ಮೇಲೆ ನನಗೇ ಸಂಪೂರ್ಣ ವಿಶ್ವಾಸವಿಲ್ಲದ್ದಕ್ಕೋ ಏನೋ , ಪರಿಮಳಾ ಆಂಟಿಯವರ ಮುಖ ನೋಡುತ್ತಿದ್ದಂತೆ ಹೃದಯ ಬಡಿತ ಹೆಚ್ಚತೊಡಗಿತ್ತು. ಆದರೆ ವಿನಯ್​ನಿರಾಳವಾಗಿದ್ದ.  ಹತ್ತು ನಿಮಿಷ ಕಳೆದಿರಬಹುದು. ಪರಿಮಳಾ ಆಂಟಿಯ ಕ್ಯಾಬಿನ್​ತೆರವಾಯ್ತು.  ’ನಮಸ್ತೆ ಆಂಟೀ’ ಶುಭಾಶಯ ಕೋರುತ್ತಾ ಒಳಹೋಗಿ, ವಿನಯ್​ನನ್ನು ಅವರಿಗೆ ಪರಿಚಯಿಸಿದೆ. ಅಥರ್ವನ ಹತ್ತಿರವೂ ಆಂಟೀಗೆ ನಮಸ್ತೆ ಹೇಳಿಸಿದೆ.  “ನಮತೇ ಆತೀ” ಎನ್ನುತ್ತಾ ಪರಿಪಳಾ ಆಂಟೀಯವರಿಗೆ ಕೈಮುಗಿದು, ನಮ್ಮಿಂದ ತಪ್ಪಿಸಿಕೊಂಡು  ಹೊರಗ್ಹೋಡಿ ಹೋದ ಅಥರ್ವ.

ನಮ್ಮ ನಿರ್ಧಾರವನ್ನು ಅವರ ಮುಂದಿಡುತ್ತಾ, ಅಥರ್ವನನ್ನ ಮೇನ್​ಸ್ಟ್ರೀಮ್​ಕಿಂಡರ್​ಗಾರ್ಡನ್​ಗೆ ಸೇರಿಸಬೇಕೆಂದುಕೊಂಡಿದ್ದೇವೆ ಎನ್ನುತ್ತಿದ್ದಂತೆ,  ‘ಅಥರ್ವ ಅಮ್ಮಾ, ನಿಮ್ಮಿಂದ ಇದನ್ನ ನಾನು ನಿರೀಕ್ಷಿಸಿರಲಿಲ್ಲ’ ತಟ್ಟನೆ ಅಂದುಬಿಟ್ಟರು ಅವರು.  ಆಗ ನನ್ನ ಮುಖ ಭಾವ ಹೇಗಿತ್ತೋ ತಿಳಿಯೆ. ನಾನೇನೂ ಮಾತನಾಡಲಿಲ್ಲ. ನನ್ನ ಬದಲು ವಿನಯ್​ಮಾತನಾಡಿದ. ” ಬೇಸಿಗೆ ರಜಾದಲ್ಲಿ ಸಮ್ಮರ್​ಕ್ಯಾಂಪ್​ಗೆ ಅಥರ್ವನನ್ನ ಹಾಕಿದ್ದೆವು. ಬಹಳ ಚೆನ್ನಾಗಿ ಅಲ್ಲಿಯ ಮಕ್ಕಳೊಂದಿಗೆ ಬೆರೆತು ಕಲಿತಿದ್ದಾನೆ. ಹೀಗಾಗಿ ನಾರ್ಮಲ್​ಸ್ಕೂಲ್​ಗೆ ಅವನನ್ನ ಸೇರಿಸೋಣ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ” ವಿನಯ್​ಮಾತಿನ್ನೂ ಮುಗಿದಿರಲಿಲ್ಲ, ಆಂಟಿ ಮಾತನಾಡತೊಡಗಿದರು. ‘ಇದೇ ನೀವು ಮಾಡುತ್ತಿರುವ ತಪ್ಪು. ಮಗುವಿನ ಬಾಯಲ್ಲಿ ಕೆಲವು ಪದಗಳು ಬಂದಿದ್ದೇ, ಸ್ಕೂಲ್​ಬಿಟ್ಟುಬಿಡುವ ಆಲೋಚನೆ ಮಾಡಿಬಿಡುತ್ತೀರ. ನೀವೊಬ್ಬರೇ ಅಂತಲ್ಲ ನಿಮಗಿಂತ ಮೊದಲು ಈ ತಪ್ಪು ಮಾಡಿ, ಪಶ್ಚಾತ್ಧಾಪ ಪಟ್ಟಿರುವ, ಇಂದಿಗೂ ಪಡುತ್ತಿರುವ ಹಲವಾರು ಪಾಲಕರಿದ್ದಾರೆ. ನೀವೂ ಅವರ ಸಾಲಿಗೆ ಸೇರುತ್ತಿದ್ದೀರ ಅಷ್ಟೆ.”  ಅವರ ಮುಖಭಾವ ಗಂಭೀರವಾಗಿತ್ತು. 

‘ಕಿವುಡು ಮಗುವಿನ ಸರ್ವತೋಮುಖ ಸುಧಾರಣೆಯಲ್ಲಿ ಈ ಶಾಲೆಯ ಮಹತ್ವ ಎಷ್ಟಿದೆ ಎಂಬುದು ನಿಮಗೇ ಗೊತ್ತಿದೆ.  ಹೊಸದಾಗಿ ನಾನೇನೂ ಇದರಬಗ್ಗೆ ನಿಮಗೆ ಹೇಳಬೇಕೆಂದೇನಿಲ್ಲ ಅಲ್ಲವೇ..?”  ಪ್ರಶ್ನಾರ್ಥಕವಾಗಿ ನಮ್ಮಿಬ್ಬರನ್ನ ನೋಡಿ, ಮತ್ತೆ ಮಾತನಾಡಿದರು ಆಂಟಿ.  “ಈಗಷ್ಟೇ ನಿಮ್ಮ ಮಗು ಮಾತನಾಡಲು ಕಲಿಯುತ್ತಿದ್ದಾನೆ.  ಎರಡನೇ ಹಂತವನ್ನಷ್ಟೇ ಮುಗಿಸಿದ್ದಾನೆ.  ಇನ್ನೂ ಮೂರು ಹಂತಗಳನ್ನು ಕಲಿಯುವುದು ಬಾಕಿ ಇದೆ. ಮಗು ಇಷ್ಟು ಮಾತನಾಡುತ್ತಿದ್ದಾನೆಂದರೆ, ಅದರಲ್ಲಿ ನಮ್ಮ ಸ್ಕೂಲ್​ನ ಪಾತ್ರ ಬಹಳಷ್ಟಿದೆ. ಮಗು ಕಲಿಯುವ ಪಥದಲ್ಲಿದೆ. ಪಿ.ಎ.ಡಿ.ಸಿ ಪದ್ದತಿಯಲ್ಲಿ ಕಲಿಯುತ್ತಿರುವ ಈ ಮಗುವನ್ನು ನಾರ್ಮಲ್​ಸ್ಕೂಲ್​ಗೆ, ಇಂಗ್ಲೀಷ್​ ಮಾಧ್ಯಮಕ್ಕೆ ಹಾಕಿ ಗೊಂದಲಗೊಳಿಸಬೇಡಿ.” ಎಚ್ಚರಿಸಿದರು ಆಂಟಿ. 

‘ಹೌದು ಆಂಟಿ ನೀವು ಹೇಳಿದ್ದು ಸರಿ.  ಅಥರ್ವ ಇಷ್ಟು ಮಾತನಾಡುತ್ತಿದ್ದಾನೆಂದರೆ ಖಂಡಿತವಾಗಿಯೂ ಅದಕ್ಕೆ ನಮ್ಮ ಪಿ.ಎ.ಡಿ.ಸಿಯೇ ಕಾರಣ.  ಅಥರ್ವ ಈ ಹಂತದಲ್ಲಿದ್ದಾಗಲೇ ನಾರ್ಮಲ್​ ಸ್ಕೂಲ್​ಗೆ ಹಾಕಿ ಅವನ ಸುಧಾರಣೆ ನೋಡಬೇಕು ಎಂಬುದು ನಮ್ಮ ಆಲೋಚನೆ.  ಈ ಯೋಚನೆ ತಪ್ಪೂ ಇರಬಹುದು.  ಒಂದುವೇಳೆ ಅಲ್ಲಿ ಸುಧಾರಣೆಯೇ ಕಾಣಲಿಲ್ಲವೆಂದರೆ, ಪುನಃ ಸ್ಕೂಲ್​ಗೆ ಬಂದು ಸೇರಿಕೊಳ್ಳುತ್ತೇನೆ. ದಯವಿಟ್ಟು ಒಂದು ಅವಕಾಶ ಕೊಡಿ ಆಂಟೀ ”  ಎಂದುಬಿಟ್ಟೆ ನಾನು.  ನಾಲ್ಕೈದು ಕ್ಷಣ, ನನ್ನ ಮಾತಿಗೆ ಉತ್ತರಿಸದ ಪರಿಮಳಾ ಆಂಟಿ  ” ಓಕೆ.  ಆಲ್​ದ ಬೆಸ್ಟ್​”  ಎಂದಷ್ಟೇ ಹೇಳಿ  ಮಾತು ಮುಗಿಸಿಯೇಬಿಟ್ಟರು.  ಪರಿಮಳಾ ಆಂಟಿ ಮುಖದಲ್ಲಿ ನಗುವಿರಲಿಲ್ಲ.  ಅವರಿಗೆ ನನ್ನ ಮೇಲೆ ಅಸಮಾಧಾನವಿದೆ ಎಂಬುದು ತಿಳಿದರೂ,  ನಾನೇನೂ ಮಾಡಲಾರದ ಅಸಹಾಯಕಿಯಾಗಿದ್ದೆ.  “ಬರ್ತೀವಿ ಆಂಟಿ” ಎನ್ನುತ್ತಾ ಅವರಿಗೆ ನಮಸ್ಕಾರ ಮಾಡಿ ಎದ್ದು ಹೊರಟೆವು. 

ನಮ್ಮ ಶಾಲೆಯ ಮುಖ್ಯ ಗೇಟ್​ನ ಬಳಿ ನಿಂತು, ಮತ್ತೊಮ್ಮೆ ಸ್ಕೂಲ್​ನ್ನು ತಿರುಗಿ ನೋಡಿದೆ.  ಮಕ್ಕಳ ಕಲರವ, ಅಮ್ಮಂದಿರ ದನಿ ಎರಡೂ ಮಿಶ್ರಣಗೊಂಡು ಶೃತಿಯಾಗಿ ಕೇಳಿಸುತ್ತಿತ್ತು.   ನಾನು ಮೊಟ್ಟ ಮೊದಲ ಬಾರಿ ಪಿ.ಎ.ಡಿ.ಸಿಯನ್ನ ನೋಡಿದ್ದು ನೆನಪಾಯ್ತು. ದೀಪಾ ಅಕ್ಕ ನನ್ನ ಕರೆದುಕೊಂಡು ಬಂದು ಈ ದೇಗುಲಕ್ಕೆ ಸೇರಿಸಿದ್ದು ನೆನಪಾಯ್ತು. ಒಂದು ಮುಕ್ಕಾಲು ವರ್ಷಗಳ ಕಾಲ ನಾನು – ಅಥರ್ವ ಇಬ್ಬರೂ ಇದೇ ಶಾಲೆಯಲ್ಲಿಯೇ  ಕಳೆದ, ಬೆಳೆದ ಸಮಯವೆಲ್ಲ ನೆನಪಾಯ್ತು.  ನನ್ನ ಮಗನ ಬದುಕ ಹಣತೆಗೆ ಮಾತಿನ ದೀಪ ಬೆಳಗಿದ ಈ ಶಾಲೆಗೆ ಮನಸ್ಪೂರ್ತಿ ಕೈಮುಗಿದು ಹೊರಟು ನಿಂತೆ.   

ಇಷ್ಟು ದಿನಗಳ ಕಾಲ ಹಿರಿಯರು ತೋರಿಸಿಕೊಟ್ಟ ದಾರಿಯಿತ್ತು. ಆ ದಾರಿಯಲ್ಲಿ ನಾನು ನನ್ನ ಮಗ ನಡೆಯುತ್ತಿದ್ದೆವು. ಇವತ್ತು ಇದನ್ನೇ ಪಾಠ ಮಾಡಬೇಕು. ಇದನ್ನೇ ಅವನಿಗೆ ಅರ್ಥ ಮಾಡಿಸಬೇಕು ಎಂದು ಹೇಳಲು ಶಿಕ್ಷಕಿಯರಿದ್ದರು.  ಈಗ ಆ ದಾರಿಯಿಂದೀಚೆ ಬಂದಾಗಿದೆ. ನಮ್ಮ ದಾರಿಯನ್ನ ನಾವೇ ಹುಡುಕಿಕೊಳ್ಳುವ ಜವಾಬ್ಧಾರಿ ನನ್ನ ಮೇಲಿದೆ ಎಂಬ ಅರಿವು ಜಾಗೃತವಾಯ್ತು.  ‘ಹೆಜ್ಜೆ ಎತ್ತಿ ಹೊರಗಿಟ್ಟಿದ್ದೇನೆ.  ಮುಂದೇನಾಗಲಿದೆಯೋ ತಿಳಿಯೆ.  ನಾವು ಕೈಗೊಂಡಿರುವ ನಿರ್ಧಾರದ ಬಗ್ಗೆ ಗೊಂದಲವಿದ್ದಿದ್ದೂ ಹೌದು ಆದರೆ, ಮಗನ ಭವಿಷ್ಯಕ್ಕೆ ಮುಳುವಾಗದಂತೆ ಮುಂಬರುವ ಸಮಯವನ್ನ ಜತನವಾಗಿ ಕಳೆಯಬೇಕು ಎಂಬುದಂತೂ ಸ್ಪಷ್ಟ. ಅದಕ್ಕಾಗಿ ನಾನೇನು ಮಾಡಬೇಕು..? ಪ್ರತಿ ಕ್ಷಣ ಮಗನಿಗಾಗಿಯೇ ಬದುಕಬೇಕು. ಸೋತು ಮರಳುವ ಸಂದರ್ಭ ತಂದುಕೊಳ್ಳಬಾರದು’. ಎಂದುಕೊಂಡೆ ಮನಸ್ಸಿನಲ್ಲಿ.  

ವಿನಯ್​ಮುಖ ನೋಡಿದೆ. ಗೆದ್ದ ಖುಷಿಯಿತ್ತು ಅವನಲ್ಲಿ.  ಕಳೆದುಹೋದ ಮಗ ಮರಳಿ ಸಿಕ್ಕ ನೆಮ್ಮದಿಯಿತ್ತು ಅವನ ಕಣ್ಣಲ್ಲಿ.  ತಾನೇ ನಡೆಯುತ್ತೇನೆ ಕೆಳಗಿಳಿಸಿ ಅಪ್ಪಾ ಎಂದು ಅಥರ್ವ ಕಿರುಚುತ್ತಿದ್ದರೂ ಅವನನ್ನ ಕೆಳಗಿಳಿಸದೆಯೇ ಮುದ್ದಾಡುತ್ತಾ, ದಣಿವಿಲ್ಲದಂತೆ ಮಾತನಾಡತ್ತಾ ಎತ್ತಿಕೊಂಡೇ ಹೆಜ್ಜೆ ಹಾಕುತ್ತಿದ್ದ ವಿನಯ್​.  ಸರಿಸುಮಾರು ಒಂದು ಮುಕ್ಕಾಲು ವರ್ಷ ಈ ಅಪ್ಪ ತನ್ನ ಮಗುವನ್ನು ಅದೆಷ್ಟು ಮಿಸ್​ಮಾಡಿಕೊಂಡಿರಬಹುದು ಎನ್ನಿಸಿತು ನನಗೆ.  ಅಪ್ಪ ಮಗನನ್ನ ಒಂದಷ್ಟು ಹೊತ್ತು ಹಾಗೇ ದೂರದಲ್ಲಿಯೇ ಗಮನಿಸಿ ಖುಷಿಪಟ್ಟೆ.

ಆವತ್ತಿನಿಂದ ಸರಿಯಾಗಿ ಮೂರು ತಿಂಗಳುಗಳ ಕಾಲ, ಮೈಸೂರಿನಲ್ಲಿಯೇ ಇದ್ದು ‘ಸ್ಕೈ ಸ್ಫೀಚ್​ಅಂಡ್​ಹಿಯರಿಂಗ್​ಕೇರ್​’ನಲ್ಲಿ ಅಥರ್ವನಿಗೆ ವಿಶೇಷ ಸ್ಪೀಚ್​ಮತ್ತು ಲಿಸನಿಂಗ್​ಥೆರಪಿ ಕೊಡಿಸಿದೆ. ಆ ಮೂರು ತಿಂಗಳುಗಳಲ್ಲಿ ಪ್ರತಿ ವಾರಾಂತ್ಯದಲ್ಲಿಯೂ ವಿನಯ್​ಬಂದಾಗ ಮೈಸೂರಿನ ಪ್ರವಾಸಿತಾಣಗಳಿಗೆಲ್ಲ ಭೇಟಿಕೊಟ್ಟೆವು. ನೋಡಿ ಬಂದ ಸ್ಥಳದ ಕುರಿತು ಅಥರ್ವನ ಬಳಿ ಮಾತನಾಡಿದೆವು. ಅರಮನೆ, ಬೃಂದಾವನ, ಶುಕವನ, ಚಾಮುಂಡಿಬೆಟ್ಟ, ಮೈಸೂರು ‘ಜೂ’ ದಲ್ಲಿ ಕಂಡ ಪ್ರಾಣಿ ಪಕ್ಷಿಗಳನ್ನು ಕಥೆಗಳಲ್ಲಿ ಸೇರಿಸಿ ಮತ್ತೆ ಮತ್ತೆ ನೆನಪಿಸುತ್ತಿದ್ದೆ.  ಪ್ರವಾಸಿ ತಾಣಕ್ಕೆ ಹೋಗಿಬಂದಮೇಲೆ ಅಪ್ಪ ಬಿಡಿಸಿಕೊಡುತ್ತಿದ್ದ ಆ ತಾಣದ ಚಿತ್ರಕ್ಕೆ ಮಗ ಬಣ್ಣ ಹಚ್ಚುತ್ತಿದ್ದ.  ಅಥರ್ವನ ಪಾಠಕ್ಕಾಗಿಯೇ ಪ್ರವಾಸ ಮಾಡಿದೆವು. 

ಮೂರು ತಿಂಗಳುಗಳ ಥೆರಪಿ ತರಗತಿ ಮುಗಿಯುತ್ತಿದ್ದಂತೆ, 2019ರ ಆಗಷ್ಟ್​ತಿಂಗಳ ಕೊನೆಯ ವಾರ,  ನಾವು ಅಧಿಕೃತವಾಗಿ ಮೈಸೂರು ಬಿಟ್ಟು ಬೆಂಗಳೂರಿಗೆ ವಾಪಾಸ್​ಬಂದೆವು.  ವಾಪಾಸ್​ಬಂದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ, ಅಥರ್ವನನ್ನ ಲಿಟಲ್​ಎಲ್ಲಿ ಕಿಂಡರ್​ಗಾರ್ಡನ್​ಶಾಲೆಯಲ್ಲಿ ನರ್ಸರಿಗೆ ಸೇರಿಸಿದ್ದು. ಕಿಂಡರ್​ಗಾರ್ಡನ್​ಗೆ ಸೇರಿಕೊಂಡ ತಕ್ಷಣ ಅಥರ್ವ ಒಂಟಿಯಾಗುತ್ತಾನೆ ಎಂಬ ಕೊರಗೊಂದಿತ್ತು ನನ್ನ ಮನಸ್ಸಿನಲ್ಲಿ.  “ಇಷ್ಟು ದಿನ ಆತ ಸ್ಕೂಲ್​ಗೆ ಹೋಗಿದ್ದು ಅಮ್ಮನೊಂದಿಗೆ.  ಅವನ ಎಲ್ಲ ಕಲಿಕೆಯಲ್ಲಿ ಅಮ್ಮ ಜತೆಯಾಗಿದ್ದೆ.  ಆದರೆ ಈ ಹೊಸ ಸ್ಕೂಲ್​ನಲ್ಲಿ ಆತ ಏನು ಕಲಿಯುತ್ತಾನೆ, ಅವರೇನು ಕಲಿಸುತ್ತಾರೆ, ಹೇಗೆ ಕಲಿಸುತ್ತಾರೆ, ಇವನು ಅವರಿಗೆ ಹೇಗೆ ಸ್ಪಂದಿಸುತ್ತಾನೆ ಎಂಬುದರ ಕುರಿತು ನಾನು ಆಗಾಗ ತಿಳಿದುಕೊಳ್ಳಲೇಬೇಕು. ದಯವಿಟ್ಟು ಸಹಕರಿಸಿ” ಎಂದು ಕಿಂಡರ್​ಗಾರ್ಡನ್​ನ ಮುಖ್ಯ ಶಿಕ್ಷಕಿ ಪೂರ್ಣಿಮಾ ಮ್ಯಾಮ್​ಹತ್ತಿರ ಕೋರಿಕೊಂಡಿದ್ದೆ.  ಅವರ ಒಪ್ಪಿಗೆಯ ಮೇರೆಗೆ ಅಥರ್ವನ ಕ್ಲಾಸ್​ಟೀಚರ್​ಸುಮತಿ ಮ್ಯಾಮ್​ಅವರನ್ನ ಎರಡು ಮೂರು ದಿನಗಳಿಗೊಮ್ಮೆ ಭೇಟಿಯಾಗಿ ವಿಷಯ ತಿಳಿದುಕೊಳ್ಳುತ್ತಿದ್ದೆ. ಅವರ ಸಲಹೆಯನ್ನೂ ನೋಟ್​ಮಾಡಿಕೊಳ್ಳುತ್ತಿದ್ದೆ. ಅಥರ್ವನಿಗೆ ಅರ್ಥವಾಗುವಂತೆ ಅವರು ನಿಧಾನವಾಗಿ ಮಾತನಾಡುತ್ತಾ, ತಮ್ಮ ಪಕ್ಕದಲ್ಲಿಯೇ ಇವನನ್ನು ಕೂರಿಸಿಕೊಂಡು ಪಾಠ ಮಾಡುತ್ತಾರೆ ಎಂಬ ಸಂಗತಿ ನನಗೆ ಸಮಾಧಾನ ತಂದಿತ್ತು.  

ಆವತ್ತಿನ ಸ್ಕೂಲ್​ಕಲಿಕೆಗೆ ಸಂಬಂಧಪಟ್ಟ ಹೋಮ್​ವರ್ಕ್​​ನ ನಂತರ, ಅಥರ್ವನಿಗೆ ಪಿ.ಎ.ಡಿ.ಸಿ ಮಾದರಿಯಲ್ಲಿ ಅದೇ ವಿಷಯಗಳನ್ನ ಪಾಠ ಮಾಡುತ್ತಿದ್ದೆ. ಪಿ.ಎ.ಡಿ.ಸಿ ಮಾದರಿಯಲ್ಲಿಯೇ ಅಥರ್ವನಿಗೆ ಇಂಗ್ಲೀಷ್​ನ್ನು ಪರಿಚಯಿಸಿದೆ.  ಸ್ಕೂಲ್​ನಲ್ಲಿ ಮಾತನಾಡಬಹುದಾದ ಹತ್ತಾರು ಚಿಕ್ಕ ಚಿಕ್ಕ ಇಂಗ್ಲೀಷ್​ವಾಕ್ಯಗಳನ್ನು, ಶಬ್ಧಗಳನ್ನು ಬರೆದು ಚಾರ್ಟ್​ಮಾಡಿಕೊಂಡು ಅವನಿಗೆ ಓದಿಸಿ, ಅದರ ಅರ್ಥವನ್ನೂ ಹೇಳಿ, ಮಾತಿನಲ್ಲಿ ಬಳಸಿ ಬಳಸಿ ಕಲಿಸಲು ಆರಂಭಿಸಿದೆ. 

ಪಿ.ಎ.ಡಿ.ಸಿ ಕಲಿಕಾ ಪದ್ಧತಿಯಲ್ಲಿ ಘಟನೆ ಬಹುಮುಖ್ಯ ಪಾತ್ರವಹಿಸುತ್ತದೆ. ಪಿ.ಎ.ಡಿ.ಸಿ ಶಾಲೆಯಲ್ಲಿ ಪ್ರತಿ ಬುಧವಾರ ಘಟನೆ ಪಾಠ ಮಾಡಲಾಗುತ್ತದೆ.  ಅದಕ್ಕೆ ನಾವೆಲ್ಲ ‘ಬುಧವಾರದ ಘಟನೆ’ ಅಂತ್ಲೇ ಕರೆಯುತ್ತೇವೆ.  ಪ್ರತಿ ವಾರ ಬೇರೆ ಬೇರೆ ವಿಷಯಗಳ ಮೇಲೆ ಈ ಘಟನೆ ಪಾಠ ನಡೆಯುತ್ತದೆ.  ಹಣ್ಣುಗಳು, ತರಕಾರಿಗಳು, ತಿಂಡಿ, ಬಿಸ್ಕೆಟ್​, ಹೀಗೆ ಮಕ್ಕಳು ಇಷ್ಟಪಡುವ ವಸ್ತುಗಳನ್ನೇ ಇಟ್ಟುಕೊಂಡು ಪಾಠ ಮಾಡಲಾಗುತ್ತದೆ.  ಇದೊಂದು ವಿಸ್ತ್ರತವಾಗಿರುವ ಪಾಠ ಎನ್ನಬಹುದು. ಸಾಂಪ್ರದಾಯಿಕ ಹಬ್ಬಗಳಿರಲಿ, ರಾಷ್ಟ್ರೀಯ ಹಬ್ಬಗಳಿರಲಿ. ಆಯಾ ಹಬ್ಬಗಳ ವಿಶೇಷಗಳನ್ನ ತಿಳಿಸಿಕೊಡುವ ಘಟನೆಪಾಠಗಳೂ ವಿಶೇಷವಾಗಿ ನಡೆಯುತ್ತವೆ. 

ಆಯಾ ಗುಂಪಿನ ಶಿಕ್ಷಕಿಯರು ಸ್ವತಃ ಪಾಠ ಮಾಡುವ ‘ಬುಧವಾರದ ಘಟನೆ’ಯಿಂದ ನಾನು ಸಾಕಷ್ಟು ಕಲಿತಿದ್ದೇನೆ. ಪ್ರತಿ ಕ್ರಿಯೆಯನ್ನೂ, ಪ್ರಕ್ರಿಯೆಯನ್ನೂ ಮಕ್ಕಳಿಗೆ ಹೇಗೆ ಬಿಡಿಸಿ ಬಿಡಿಸಿ ಹೇಳಿ ಅರ್ಥ ಮಾಡಿಸಬೇಕು ಎಂಬುದನ್ನ ಇಲ್ಲಿ ಅಮ್ಮಂದಿರಿಗೆ ಅರ್ಥೈಸಿಕೊಡಲಾಗುತ್ತದೆ.  

ದ್ರಾಕ್ಷಿ ಹಣ್ಣಿನ ಬಗ್ಗೆ ಘಟನೆ ಮಾಡುತ್ತಿದ್ದಾರೆ ಎಂದಿಟ್ಟುಕೊಳ್ಳಿ.  ಗುಂಪಿನಲ್ಲಿರುವ ಅಮ್ಮಂದಿರೆಲ್ಲ ಸೇರಿ ಹಣ ಒಟ್ಟುಗೂಡಿಸಿಕೊಂಡು, ((ಅದನ್ನೆಲ್ಲ ಮಕ್ಕಳ ಕೈಯಲ್ಲೇ ಲೆಕ್ಕ ಹಾಕಿಸಿ, ಇದು ಹಣ, ಅಂಗಡಿಯಿಂದ ದ್ರಾಕ್ಷಿ ಹಣ್ಣು ತರಲು ಹಣ ಬೇಕು ಎಂಬುದನ್ನು ಮಕ್ಕಳಿಗೆ ಅರ್ಥಮಾಡಿಸಲಾಗುತ್ತದೆ )  ಅಂಗಡಿಗೆ ಹೋಗಿ ಆ ಗುಂಪಿನಲ್ಲಿರುವ ಮಕ್ಕಳಿಗೆಲ್ಲ ಆಗುವಷ್ಟು ದ್ರಾಕ್ಷಿಹಣ್ಣುಗಳನ್ನು ತರುವುದು. ಅದನ್ನ ಮಕ್ಕಳಿಗೆಲ್ಲ ತೋರಿಸುತ್ತಾ ವಿವರಿಸುವ ಕೆಲಸ ಆಯಾ ಗುಂಪಿನ ಶಿಕ್ಷಕಿಯರದ್ದು.   “ಈ ಪ್ಲಾಸ್ಟಿಕ್​ಕವರ್​ನಲ್ಲಿ ಏನಿದೆ..? ಕಾಣಿಸುತ್ತಿದೆಯಾ..? ಹೌದು ಸ್ವಲ್ಪ ಸ್ವಲ್ಪ ಕಾಣಿಸುತ್ತಿದೆ. ದ್ರಾಕ್ಷಿ ಹಣ್ಣಿನ ಗೊಂಚಲುಗಳು ಇವೆ.  ಎಷ್ಟು ದ್ರಾಕ್ಷಿ ಗೊಂಚಲುಗಳು ಇವೆ..? ಗೊತ್ತಿದೆಯಾ ? ಇಲ್ಲ.  ಕವರ್​ನಿಂದ ದ್ರಾಕ್ಷಿ ಹಣ್ಣು ತೆಗೆಯೋಣವಾ ? ಹಾಂ. ಎರಡು ದ್ರಾಕ್ಷಿ ಗೊಂಚಲುಗಳು ಇವೆ.  ಕವರ್​ಒಳಗಿನಿಂದ ಆಂಟಿ ಏನನ್ನು ತೆಗೆದರು ? ದ್ರಾಕ್ಷಿ ಹಣ್ಣು ತೆಗೆದರು.  ದ್ರಾಕ್ಷಿ ಯಾವ ಬಣ್ಣ ? ಹಸಿರು ಬಣ್ಣ.  ದ್ರಾಕ್ಷಿ ಗೊಂಚಲಿನಲ್ಲಿ ಒಂದೇ ಹಣ್ಣು ಇದೆಯಾ ? ಇಲ್ಲ. ದ್ರಾಕ್ಷಿ ಗೊಂಚಲಿನಲ್ಲಿ ತುಂಬಾ ಹಣ್ಣುಗಳು ಇವೆ.  ದ್ರಾಕ್ಷಿ ಮರದಲ್ಲಿ ಬೆಳೆಯುತ್ತದಾ..?  ಇಲ್ಲ. ದ್ರಾಕ್ಷಿ ಬಳ್ಳಿಯಲ್ಲಿ ಬೆಳೆಯುತ್ತದೆ.  ದ್ರಾಕ್ಷಿ ಗೊಂಚಲುಗಳನ್ನು ಆಂಟಿಯರು ಎಲ್ಲಿಂದ ತಂದರು?  ಅಂಗಡಿಯಿಂದ ತಂದರು.”  ಎನ್ನುತ್ತಾ, ಪ್ರತಿಯೊಂದನ್ನೂ ಪ್ರಶ್ನೆ ಮಾಡಿ, ಮಕ್ಕಳಿಗೆ ಅರ್ಥ ಮಾಡಿಸಿ ಉತ್ತರ ಹೇಳಿಕೊಡುತ್ತಾ, ದ್ರಾಕ್ಷಿ ಹಣ್ಣುಗಳನ್ನು ಪಾತ್ರೆಗೆ ಹಾಕಿ, ತೊಳೆದು, ಮಕ್ಕಳಿಗೆ ತಿನ್ನಲು ಕೊಟ್ಟು ವಿವರಿಸಿ ಅದರ ರುಚಿಯ ಬಗ್ಗೆಯೂ ಪಾಠ ಮಾಡುತ್ತಾರೆ ಶಿಕ್ಷಕಿಯರು.  

ಮಕ್ಕಳಿಗೆ ಅರ್ಥವಾಗಿದೆಯಾ ಎಂಬುದನ್ನ ಖಾತ್ರಿ ಪಡಿಸಿಕೊಂಡು, ಅರ್ಥವಾಗಿಲ್ಲವೆಂದಾದರೆ ಮತ್ತೊಂದು ಬಾರಿ ವಿವರಿಸಿ ಅರ್ಥ ಮಾಡಿಸುವುದು ಅಮ್ಮಂದಿರ ಜವಾಬ್ದಾರಿ.  ಹೀಗೆ ಎಲ್ಲವನ್ನೂ ವಿವರಿಸುವುದರಿಂದ ಮಕ್ಕಳ ಕಿವಿಗೆ ಅದೆಷ್ಟು ತರಹದ ವಾಕ್ಯಗಳು ಬಿದ್ದವು..? ಎಷ್ಟೆಲ್ಲ ಕ್ರಿಯಾಪದಗಳು, ಶಬ್ಧಗಳು ಬಳಕೆಯಾದವು..? ಸಂದರ್ಭ ಸಹಿತ ಮಕ್ಕಳಿಗೆ ಆ ಎಲ್ಲ ಪದಗಳು ಸಿಕ್ಕಾಗ ಅವರು ಬಹುಬೇಗ ಭಾಷೆಯನ್ನ ಅರ್ಥಮಾಡಿಕೊಳ್ಳುತ್ತಾರೆ.  ಈ ಪದ್ಧತಿಯೇ ಇಂದಿಗೂ ನನ್ನ ಕೈಹಿಡಿದು ಮುನ್ನೆಡೆಸಿದೆ.  ನಾನು ಅಥರ್ವನೊಂದಿಗಿದ್ದಾಗ ಯಾವ ಕೆಲಸ ಮಾಡುತ್ತಿದ್ದರೂ ಇದೇ ಪದ್ಧತಿಯನ್ನೇ ಅನುಸರಿಸಿ ಅವನಿಗೆ ವಿವರಿಸಿದ್ದೇನೆ.   ಬೆಂಗಳೂರಿಗೆ ವಾಪಾಸ್ ಬಂದಮೇಲೆಯೂ ಈ ಘಟನೆ ಪಾಠ ಮುಂದುವರೆದಿತ್ತು.  ಪ್ರತಿ ದಿನ ಒಂದಲ್ಲಾ ಒಂದು ವಿಷಯವನ್ನಿಟ್ಟುಕೊಂಡು ಈ ಘಟನೆ ಪಾಠ ಮಾಡುತ್ತಿದ್ದೆ.  ಇಂದಿಗೂ ಅಥರ್ವನಿಗೆ ಇಂಗ್ಲೀಷ್​, ಹಿಂದಿ ಭಾಷೆಗಳ ಪಾಠಕ್ಕೂ ನಾನು ಇದೇ ಪದ್ಧತಿಯನ್ನೇ  ಅನುಸರಿಸುತ್ತಿದ್ದೇನೆ. 

ಕ್ರಾಫ್ಟ್​ಮಾಡಿಸಿ, ಚಿತ್ರ ಬಿಡಿಸಿ , ಕಥೆ ಹೇಳಿ ಪಾಠ ಮಾಡಿದೆ.  ‘ಆಟದೊಳಗೆ  ಪಾಠ’ ಅನ್ನುತ್ತಾರಲ್ಲ ಅದನ್ನೇ ಅನುಸರಿಸತೊಡಗಿದೆ.  ಆಯಾ ಸಂದರ್ಭದಲ್ಲಿ  ಅವನಿಗೆ ಏನಿಷ್ಟವೋ ಅದರಲ್ಲಿಯೇ ಪಾಠ ಸೇರಿಸಿಬಿಡುತ್ತಿದ್ದೆ.  ರಾತ್ರಿಯಾಗುತ್ತಿದ್ದಂತೆ, ಅವನಪ್ಪ ಕೂಡ ಅವನಿಗೆ ಸಿಗುತ್ತಿದ್ದ.  ಅಪ್ಪ ಮನೆಗೆ ಬರುತ್ತಿದ್ದಂತೆಯೇ ಅಥರ್ವ ಹೊಸ ಹುರುಪಿನಲ್ಲಿ ಕುಣಿದಾಡುತ್ತಿದ್ದ. ಪ್ರತಿ ರಾತ್ರಿ ಸ್ವಲ್ಪ ಹೊತ್ತು ಅಪ್ಪ ಮಗ ಇಬ್ಬರೂ ಕುಳಿತು ಕಾರ್ಟೂನ್ , ಎನಿಮೇಶನ್​ಮೂವೀಸ್​ನೋಡುತ್ತಿದ್ದರು.  ಅದರಲ್ಲಿ ಬರುವ ಸಂಭಾಷಣೆಗಳನ್ನೆಲ್ಲ ತಾನೂ ಹೇಳಿ, ಅಥರ್ವನ ಬಾಯಲ್ಲಿ ವಿನಯ್​ಹೇಳಿಸುತ್ತಿದ್ದ. ಅಪ್ಪನೊಂದಿಗಿನ ಈ ಕಾರ್ಟೂನ್​ಟೈಮ್​ನ್ನ ಅಥರ್ವ ಬಹಳ ಎಂಜಾಯ್​ಮಾಡುತ್ತಿದ್ದ. ಏನು ಕಾರಣವೋ ತಿಳಿಯೆ, ಅವನಪ್ಪನ ಬಳಿ ಅಥರ್ವ ಬಹುಬೇಗ ಕಲಿಯುತ್ತಿದ್ದ. ಆದರೆ ಮಲಗುವಾಗಿನ ಸ್ಟೋರಿ  ಟೈಮ್​ಗೆ ಮಾತ್ರ ಅಮ್ಮ ಬೇಕೇ ಬೇಕು. ಒಂದು ದಿನವೂ ಕಥೆಯಿಲ್ಲದೆ ಅಥರ್ವ ಮಲಗಿದ್ದೇ ಇಲ್ಲ. 

ಹೀಗೆ ಮನೋರಂಜನೆಯನ್ನೂ ಕೂಡ ಮಾತಿನ, ಭಾಷೆಯ, ಮಾಹಿತಿಯ ಇನ್​ಪುಟ್​ಥರ ಅವನಿಗೆ ನಾವು ಕೊಡುತ್ತಾ ಬಂದೆವು. ಪ್ರತಿ ವಾರಾಂತ್ಯದಲ್ಲಿಯೂ ಹೊಸ ಹೊಸ ಜಾಗಕ್ಕೆ ಆತನನ್ನ ಕರೆದೊಯ್ಯುವುದು ಮತ್ತು ಅದರ ಬಗ್ಗೆ ಮಾತನಾಡುವುದು. ಹೊಸ ಹೊಸ ಜನರನ್ನು ಭೇಟಿ ಮಾಡಿಸುವುದು ಅವರ ಒಡನಾಟವನ್ನ ನೆನಪಿಸುತ್ತಾ ವಿವರಿಸಲು ಹೇಳುವುದು.  ಇದನ್ನ ಸರಿ ಸುಮಾರು ವರ್ಷಗಳ ಕಾಲ ವಾರಾಂತ್ಯದ ರಜಾದಿನಗಳಲ್ಲಿ ಮಾಡಿದ್ದೇವೆ. 

ಬೆಂಗಳೂರಿಗೆ ವಾಪಾಸ್​ಬಂದು ಮೂರ್ನಾಲ್ಕು ತಿಂಗಳಿಗೆ ಅಥರ್ವ ಮನೆಯಲ್ಲಿ ಆಟ ಆಡುವಾಗ, ಅವನ ಪಾಡಿಗೆ ಅವನು ಒಬ್ಬನೇ ಮಾತನಾಡುತ್ತಿರುವುದನ್ನ ಗಮನಿಸಿದೆ. ಏಕಪಾತ್ರ ಅಭಿನಯದಂತೆ, ತನ್ನ ಶಾಲೆಯ ಸ್ನೇಹಿತರನ್ನ, ಟೀಚರ್​ನ್ನು ಕಲ್ಪಿಸಿಕೊಂಡು ಎಲ್ಲ ಪಾತ್ರಗಳ ಮಾತುಗಳನ್ನೂ ತಾನೇ ಆಡುತ್ತಿದ್ದ. ಅದರಲ್ಲಿ ಇಂಗ್ಲೀಷ್​ಕನ್ನಡ ಎರಡೂ ಮಾತುಗಳೂ ಸೇರಿರುತ್ತಿದ್ದವು. ನನಗೋ ಖುಷಿಯೋ ಖುಷಿ. ನಾನೂ ಚಿಕ್ಕವಳಿದ್ದಾಗ, ಇದೇ ರೀತಿ ಒಬ್ಬಳೇ ಮಾತನಾಡಿಕೊಂಡು ಆಟವಾಡುತ್ತಿದ್ದೆ ಎಂದು ನನ್ನಮ್ಮ ಯಾವಾಗಲೂ ಹೇಳುತ್ತಿರುತ್ತಾಳೆ.  ನನ್ನ ಬುದ್ದಿ ಇವನಿಗೂ ಬಂದಿದೆ ಅಂದುಕೊಂಡು ನಗುತ್ತಿದ್ದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಸಹಜ ಸಂಭಾಷಣೆ, ಕಾಲ್ಪನಿಕ ಮಾತುಕತೆ, ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆ ನೀಡುವ ಮಾತುಗಳು ಅಥರ್ವನಿಂದ ಬರುತ್ತಿದ್ದವು.  ಇದರಿಂದಲೇ ಅವನ ಮಾತು ಸಹಜವಾಗುತ್ತಿದೆ ಎಂಬ ವಿಶ್ವಾಸ ಮೂಡಿ, ನಾನೂ ಮಾನಸಿಕವಾಗಿ ಗಟ್ಟಿಯಾಗತೊಡಗಿದೆ. 

ಈ ಸಮಯದಲ್ಲಿ ನಾವು ಅತಿ ಹೆಚ್ಚು ಪುಸ್ತಕಗಳ ನೆರವು ಪಡೆದೆವು.  ಕಥೆ ಪುಸ್ತಕಗಳಲ್ಲದೆಯೇ, ಆಕ್ಟಿವಿಟಿ ಬುಕ್ಸ್​, ಇನ್​ಫಾರ್ಮೇಶನ್​ಬುಕ್ಸ್​ಗಳ ಮೊರೆಹೋದೆವು. ಆಕ್ಟಿವಿಟಿ ಪುಸ್ತಕಗಳನ್ನ ಅತಿಹೆಚ್ಚು ಇಷ್ಟಪಡುತ್ತಿದ್ದ ಅಥರ್ವನಿಗಾಗಿ, ಫ್ಲಿಪ್​ಕಾರ್ಟ್​, ಆಮೇಜಾನ್​ನಂಥ ಶಾಪಿಂಗ್​ ವೆಬ್​ಸೈಟ್​ಗಳಿಂದ ಅವನ ವಯಸ್ಸಿಗೆ ತಕ್ಕಂಥ ಸಾಕಷ್ಟು ಆಕ್ಟಿವಿಟಿ ಪುಸ್ತಕಗಳನ್ನ ಖರೀದಿಸಿ ಅದನ್ನ ಅವನಿಗೆ ಪಾಠಮಾಡತೊಡಗಿದೆ.  ಮಕ್ಕಳ ಸೆಕೆಂಡ್​ಹ್ಯಾಂಡ್​ಬುಕ್​ಗಳನ್ನ ಮಾರಾಟ ಮಾಡುವ ಅದೆಷ್ಟೋ ಪೇಜ್​ಗಳನ್ನ ಫೇಸ್​ಬುಕ್​ನಲ್ಲಿ ಗುರುತಿಸಿ, ಅವರಿಂದ ಸಾಕಷ್ಟು ದೇಶ ವಿದೇಶಗಳ ಕಥಾ ಪುಸ್ತಕಗಳನ್ನ ಕೊಂಡುಕೊಂಡೆ. ಬಳಸಲ್ಪಟ್ಟ ಮಕ್ಕಳ ಪುಸ್ತಕಗಳನ್ನು ಕೆ.ಜಿ ಲೆಕ್ಕದಲ್ಲಿ ಮಾರಾಟ ಮಾಡುವ ಅಂಗಡಿಗಳನ್ನು ಹುಡುಕಿಕೊಂಡು ಹೋಗಿ ಪುಸ್ತಕಗಳನ್ನು ಖರೀದಿಸಿದೆವು.     

ಪ್ರತಿ ಮಗುವಿನ ಕಲಿಕೆಯೂ ವಿಭಿನ್ನವೇ. ಒಂದು ಮಗುವಿನ ಹಾಗೆ ಇನ್ನೊಂದಿರೋದಿಲ್ಲ.   ಅವರ ಕಲಿಕೆ, ಆಸಕ್ತಿಯಲ್ಲಿ ವ್ಯತ್ಯಾಸವಿರುತ್ತದೆ. ಕಲಿಯಲು ಅವರು ತೆಗೆದುಕೊಳ್ಳುವ ಸಮಯದಲ್ಲಿಯೂ ವ್ಯತ್ಯಯವಿರುತ್ತದೆ. ಕೆಲವು ಮಕ್ಕಳು ನಿಧಾನವಿರಬಹುದು, ಕೆಲವು ವೇಗವಾಗಿ ಕಲಿಯಬಹುದು.  ಪ್ರತಿ ಮಗುವಿನ ಪಾಲಕರು ತಮ್ಮ ತಮ್ಮ ಮಗುವಿನ ಸಾಮರ್ಥ್ಯ ಆಸಕ್ತಿಯನ್ನು ಗಮನಿಸಿಯೇ ಅದರ ತಳಹದಿಯ ಮೇಲೆ ಅವರಿಗೆ ಪಾಠ ಮಾಡಬೇಕಾಗುತ್ತದೆ.  ಕೆಲ ಮಕ್ಕಳಿಗೆ ಡ್ರಾಯಿಂಗ್​ಇಷ್ಟ, ಇನ್ಕೆಲವಕ್ಕೆ ವಾಹನಗಳ ಮೇಲೆ ಅತೀವ ಆಸಕ್ತಿ,  ಕಥೆಗಳನ್ನ ಇಷ್ಟಪಡುವ ಮಕ್ಕಳಿದ್ದಾರೆ,  ಹಾಡುಗಳನ್ನೇ ಮೆಚ್ಚಿಕೊಳ್ಳುವ ಮಕ್ಕಳಿದ್ದಾರೆ. ಅಲ್ಲದೇ ಇದೆಲ್ಲವನ್ನೂ ಬದಿಗೊತ್ತಿ ಕೇವಲ ಆಟ ಆಡಿಸುತ್ತಲೇ ಪಾಠ ಮಾಡುವ ಅನಿವಾರ್ಯತೆಯೂ ಇರುತ್ತದೆ. ಅವರವರ ಆಸಕ್ತಿಗೆ ಅನುಗುಣವಾಗಿ ಪಾಠ ಮಾಡಿದರೆ, ಖುಷಿಯಿಂದ ಮಕ್ಕಳು ಕಲಿಯುತ್ತಾರೆ, ಎಂಬ ಸತ್ಯ ಅರ್ಥವಾಗತೊಡಗಿತ್ತು ನನಗೆ. ನಾನು ಅಥರ್ವನಿಗೆ ಒತ್ತಾಯ ಪೂರ್ವಕವಾಗಿ ಕಲಿಸೋದನ್ನ ಬಿಟ್ಟೆ.  ಅಥರ್ವಂಗೆ ಕಥೆಗಳು, ಕ್ರಾಫ್ಟ್​ಮತ್ತು ಗಣಿತ ಅತಿ ಇಷ್ಟ ಎಂಬುದನ್ನು ಪತ್ತೆಹಚ್ಚಿದೆ. ಅದರ ಸುತ್ತವೇ ನನ್ನ ಪಾಠ ಸುತ್ತುವರೆಯತೊಡಗಿತು. ಕಿಂಡರ್​ಗಾರ್ಡನ್​ಶಾಲೆಯ ಕಲಿಕೆ, ಹೋಮ್​ವರ್ಕ್​ಅಲ್ಲದೇ, ಅಥರ್ವನ ಜತೆ ದಿನಕ್ಕೆ ಮೂರರಿಂದ ನಾಲ್ಕು ತಾಸುಗಳ ಕಾಲ ನಾನು ಅವನೊಂದಿಗೇ ಇರುತ್ತಿದ್ದೆ.  ಕಲಿಕೆ ಸಮಯವೆಂದರೆ ಮೂರು ನಾಲ್ಕು ಗಂಟೆಗಳ ಕಾಲ ಅಥರ್ವನನ್ನ ನನ್ನೆದುರು ಕೂರಿಸಿಕೊಂಡು  ಪಾಠ ಮಾಡಿದ್ದೇನೆ ಎಂಬ ಅರ್ಥವಲ್ಲ. ಅದು ಸಾಧ್ಯವೂ ಇಲ್ಲ.  ಅವನ ಪ್ರತಿ ಚಟುವಟಿಕೆಯಲ್ಲಿಯೂ ನಾನೂ ಸೇರಿಕೊಂಡು ಆವತ್ತು ಹೇಳಿಕೊಡಬೇಕಾದ ವಿಷಯವನ್ನ ಅವನಿಗೆ ಮನದಟ್ಟು ಮಾಡಿಬಿಡುತ್ತಿದ್ದೆ. ಅವನು ಆಡುತ್ತಿರಲಿ, ತಿನ್ನುತ್ತಿರಲಿ, ಟಿ.ವಿ ನೋಡುತ್ತಿರಲಿ, ನಾನು ಅವನೊಂದಿಗಿರುತ್ತಿದ್ದೆ.  

 ದಿನಗಳು, ತಿಂಗಳುಗಳು ಕಳೆಯುತ್ತಿದ್ದಂತೆ ಅಥರ್ವನ ಮಾತುಗಳಲ್ಲಿ ಸುಧಾರಣೆಯಾಗುತ್ತಾ ಬಂದಿತ್ತು.  ಮಾತಿನ ಉಚ್ಛಾರವೂ ಸ್ಪಷ್ಟವಾಗತೊಡಗಿತ್ತು. ವಾಕ್ಯಗಳ ನಡುವೆ ‘ಮತ್ತು, ‘ಅದಕ್ಕಾಗಿ‘, ’ಏಕೆಂದರೆ’, ’ಹಾಗಾಗಿ’, ಎಂಬಂಥ  ಲಿಂಕಿಂಗ್​ಪದಗಳನ್ನೂ ಬಳಸಿ ವಾಕ್ಯ ಜೋಡಿಸಲು ಅಥರ್ವ ಕಲಿತಿದ್ದ.   2020ರ ಫೆಬ್ರವರಿ ತಿಂಗಳಿನಲ್ಲಿ ಲಿಟಲ್​ಎಲ್ಲಿ ಸ್ಕೂಲ್​ನ ಸ್ಕೂಲ್​ಡೇ ದಿನ ವೇದಿಕೆಯ ಮೇಲೆ ಹಾಡು ಹಾಡಿ, ಶ್ಲೋಕ ಹೇಳಿ,  ನಾಲ್ಕು ವಾಕ್ಯದಲ್ಲಿ ಇಂಗ್ಲೀಷ್​ಭಾಷಣ ಮಾಡಿ ಅಚ್ಛರಿ ಮೂಡಿಸಿಬಿಟ್ಟ ನಮ್ಮ ಪೋರ. 

ಸ್ಕೂಲ್​ಡೇ ಆಗಿದ್ದೇ ಆಗಿದ್ದು ಮಾರ್ಚ್ ಮೊದಲ ವಾರವೇ ಕೊರೊನಾ ನಮ್ಮ ದೇಶದಲ್ಲಿ ಅವಾಂತರ ಶುರು ಮಾಡಿತ್ತು.  ಇಡೀ ಜಗತ್ತೇ ದಿಗ್ಭ್ರಮೆಯಲ್ಲಿತ್ತು. ಆದರೆ ಅದೊಂಥರ ನನ್ನ ಮತ್ತು ಅಥರ್ವನ ಪಾಲಿನ ಗೋಲ್ಡನ್​ಟೈಮ್​ಅನ್ನಬಹುದು. ನನ್ನ ತವರಿನಲ್ಲಿ ಕೊರೊನಾ ಮೊದಲ ಅಲೆಯ ಲಾಕ್​ಡೌನ್​ಸಮಯವನ್ನ ಕಳೆದ ನಮಗೆ, ಜನರೊಂದಿಗೆ ಬೆರೆಯುವ ಅನಾಯಾಸ ಸಂದರ್ಭ ಒದಗಿಬಂದಿತ್ತು.  ಯಾರೂ ಎಲ್ಲಿಗೂ ಹೋಗದೆ ಮನೆಯೊಳಗೆ ಬಂಧಿಯಾಗಿದ್ದ ಆ ಸಂದರ್ಭದಲ್ಲಿ ನಾನು ನನ್ನ ಮಗ ತೋಟ ಸುತ್ತಿ, ಬೆಟ್ಟ ಹತ್ತಿ, ನೀರಾಟವಾಡಿ, ತವರಿನೆಲ್ಲರ ಜತೆ ಮಾತಾಡಿ, ಊರಿನ ಮಕ್ಕಳೊಂದಿಗೆ ಆಟವಾಡಿ ಸಮಯ ಕಳೆದೆವು.  ಮೂರು ತಿಂಗಳ ಆ ಸಮಯ, ಅಥರ್ವನಿಗೆ ಅತ್ಯಂತ ಸಹಜ ಆಡುಭಾಷೆಯನ್ನ ಕಲಿಸಿಬಿಟ್ಟಿತ್ತು. ನನ್ನ ಅಣ್ಣನ ಮಗ ಚಟಪಟಾಕಿ ಪುಟಾಣಿ ಸುಧನ್ವ ಅಥರ್ವನಿಗೆ ಜಗಳವಾಡೋದನ್ನೂ ಹೇಳಿಕೊಟ್ಟುಬಿಟ್ಟ. ಯಾವ ಥೆರಪಿಯೂ ಕೊಡಲಾರದ ನೈಸರ್ಗಿಕ ಪಾಠ ಅಲ್ಲಿ ಅಥರ್ವನಿಗೆ ಸಿಕ್ಕಿತ್ತು.    

ಕೊರೊನಾ ಸಂಕಟದಿಂದಾಗಿ, ಅನುಮತಿ ಸಿಗದೇ ಅದೆಷ್ಟೋ ಪ್ರೀಸ್ಕೂಲ್​ಗಳೆಲ್ಲ ಮುಚ್ಚಿದ್ದವಲ್ಲ.., ಅಥರ್ವನ ಲಿಟಲ್​ಎಲ್ಲಿ ಬ್ರಾಂಚ್​ಕೂಡ ಮುಚ್ಚಿಹೋಗಿತ್ತು. ಹೀಗಾಗಿ ಎಲ್​.ಕೆ.ಜಿ ವಿಷಯಗಳನ್ನು ಮನೆಯಲ್ಲಿಯೇ ಪಾಠ ಮಾಡಬೇಕಾದ ಅನಿವಾರ್ಯತೆ ಎದುರಾಯ್ತು. ಕ್ರೀಡಾಲಜಿ ಡಾಟ್​ಕಾಮ್​(www.kreedology.com) ಎಂಬ ವೆಬ್​ಸೈಟ್​ಬಗ್ಗೆ ತಿಳಿಯಿತು.  ಈ ವೆಬ್​ಸೈಟ್​ನಲ್ಲಿ ನರ್ಸರಿಯಿಂದ ಹಿಡಿದು ಯೂ.ಕೆ.ಜಿ ತನಕದ ಮಕ್ಕಳಿಗೆ ಬೇಕಾದ ಪುಸ್ತಕಗಳು, ಎಜುಕೇಶನಲ್​ಆಟಿಕೆಗಳು ಎಲ್ಲವೂ ಲಭ್ಯವಿದೆ.  ಇದೇ ವೆಬ್​ಸೈಟ್​ನಲ್ಲಿ  ಎಲ್​.ಕೆ.ಜಿ ಸಿಲಬಸ್​ಮತ್ತು ಪುಸ್ತಕಗಳನ್ನು ಖರೀದಿಸಿಕೊಂಡು ಮನೆಯಲ್ಲಿಯೇ ಅಥರ್ವನಿಗೆ ಪಾಠ ಮಾಡಿದೆ. ಹೋಮ್​ಸ್ಕೂಲಿಂಗ್​ಬಗ್ಗೆ ಯೂಟ್ಯೂಬ್​ನಲ್ಲಿಯೇ ತಿಳಿದುಕೊಂಡು, ಅಲ್ಲಿ ಸಿಕ್ಕ ಟಿಪ್ಸ್​ಗಳನ್ನ ಬರೆದಿಟ್ಟುಕೊಂಡು, ಅಥರ್ವನ ಆಸಕ್ತಿಗೆ ಸರಿಹೊಂದುವಂತೆ ಅದನ್ನೆಲ್ಲ ಮಾರ್ಪಡಿಸಿಕೊಂಡು ಪಾಠ ಮಾಡತೊಡಗಿದೆ.  

ಸ್ಕೂಲ್​ನಂತೆ ಮನೆಯಲ್ಲಿಯೂ ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ಹಲವು ಚಟುವಟಿಕೆಗಳ ಮೂಲಕ ಅವನಿಗೆ ವಿಷಯ ಅರ್ಥ ಮಾಡಿಸುತ್ತಿದ್ದೆ.  ಹೀಗಿದ್ದಾಗ, ಅಥರ್ವನ ಈ ಎಲ್ಲ ಚಟುವಟಿಕೆಗಳಿಗೆ ವೇದಿಕೆಯ ಚೌಕಟ್ಟು ಯಾಕೆ ಕೊಡಬಾರದು..? ಅನ್ನಿಸಿತು ನನಗೆ. ಇದೇ ಕಾರಣಕ್ಕೆ ‘ಫನ್​ವಿತ್​ಅಥರ್ವ’ ಎಂಬ ಹೆಸರಿನಲ್ಲಿ ಯೂಟ್ಯೂಬ್​ಚಾನೆಲ್​ಕೂಡ ಶುರು ಮಾಡಿದೆ.  ಯೂಟ್ಯೂಬ್​ಗಾಗಿ ವಿಡೀಯೋ ಮಾಡುವಾಗ ಅಥರ್ವ ಅತ್ಯಂತ ಗಮನಕೊಟ್ಟು ಮಾತನಾಡುತ್ತಿರುವುದನ್ನೂ ಗಮನಿಸಿದೆ.  ವೀಡಿಯೋದಲ್ಲಿ ಹೇಳಬೇಕಿರುವುದನ್ನು ಮತ್ತೆ ಮತ್ತೆ ಹೇಳಿಕೊಟ್ಟು ಹೇಳಿಸುವುದರಿಂದ ,ವಿಡಿಯೋಕ್ಕಾಗಿ ನಾನು ಹೇಳಿಕೊಡುವ ಮಾತುಗಳಿಂದ, ಅಥರ್ವನ ಮಾತಿನ ಸ್ಪಷ್ಟತೆಯಲ್ಲಿ, ವಾಕ್ಯ – ಶಬ್ಧಗಳ ಬಳಕೆಯಲ್ಲಿ ಸುಧಾರಣೆಯಾಗುತ್ತಿರುವುದನ್ನ ಗಮನಿಸಿದೆ.  ವೀಡಿಯೋ ರೆಕಾರ್ಡ್​ಮಾಡುವುದು ಕೂಡ ಅಥರ್ವನ ಪಾಲಿಗೆ ಮಾತಿನ ತರಬೇತಿಯಂತಾಯ್ತು. ಇದೇ ಕಾರಣಕ್ಕೆ ಅಥರ್ವನ ಯೂಟ್ಯೂಬ್​ಚಾನಲ್​ನ್ನ ಮುಂದುವರೆಸಿಕೊಂಡು ಬರುತ್ತಿದ್ದೇನೆ.  

ಒಂದೇ ಕಿವಿಯಲ್ಲಿ ಸಾಕಷ್ಟು ಸುಧಾರಣೆ ಇದ್ದರೂ ಕೂಡ, ಇನ್ನೊಂದು ಕಿವಿಗೆ ಕಾಕ್ಲಿಯರ್​ಇಂಪ್ಲಾಂಟ್​ಸರ್ಜರಿ ಮಾಡಿಸಲು ನಿರ್ಧರಿಸಿದೆವು ನಾವು.  ಒಂದು ಕಿವಿಗಿಂತ ಎರಡು ಕಿವಿ ಯಾವಾಗಲೂ ಒಳ್ಳೆಯದೇ.  ಒಂದರ ಬ್ಯಾಟರಿ ಮುಗಿದು ಹೋದಾಗ, ಬ್ಯಾಟರಿ ಬದಲಿಸಲು ಅವಕಾಶವಿಲ್ಲದಾಗ ಅಥವಾ ಒಂದು ಶ್ರವಣ ಯಂತ್ರ ಹಾಳಾಗಿಹೋದಾಗ ಮತ್ತೊಂದು ಕಿವಿ ಸಂದರ್ಭವನ್ನು ನಿಭಾಯಿಸುತ್ತದೆ. ಒಂದು ಮತ್ತೊಂದಕ್ಕೆ ಬೆಂಬಲವಾಗಿ ನಿಲ್ಲುತ್ತದೆ. ಕೇಳಿಸಕೊಳ್ಳುವುದರಲ್ಲಿಯೂ ಸ್ಪಷ್ಟತೆ ಬರುತ್ತದೆ,  ಎಲ್ಲ ದಿಕ್ಕುಗಳಿಂದಲೂ ಕೇಳಿಸಿಕೊಳ್ಳುವ ಅವಕಾಶ ಅವನಿಗೆ ಸಿಗುತ್ತದೆ  ಎಂಬ ಕಾರಣಕ್ಕಾಗಿ ಮತ್ತು ಆತನ ಭವಿಷ್ಯದ ದೃಷ್ಟಿಯಿಂದ ಎರಡು ಕಿವಿ ಆತನಿಗೆ ಬೇಕೆ ಬೇಕು ಎಂಬುದು ನನ್ನ ಆಸೆ.. ಅದಕ್ಕಾಗಿ ನಿರಂತರವಾಗಿ ನಾನು ಹಂಬಲಿಸುತ್ತಲೇ ಇದ್ದೆ.  ನನ್ನ ಈ ಕನಸಿಗೆ ಸಾಥ್​ಕೊಟ್ಟ ವಿನಯ್​,  ಮಗನಿಗೆ ಎರಡನೇ ಕಿವಿಯ ಉಡುಗೊರೆ ನೀಡಿದ್ದಾನೆ. 2021ರ ಫೆಬ್ರವರಿಯಲ್ಲಿ ಅಥರ್ವನ ಇನ್ನೊಂದು ಕಿವಿಗೂ ಕೂಡ ಕಾಕ್ಲಿಯರ್​ಇಂಪ್ಲಾಂಟ್​ಮಾಡಿಸಿದ್ದೇವೆ. ಈಗ ಅಥರ್ವ ತನ್ನೆರಡೂ ಕಿವಿಗಳಿಂದಲೂ ಚೆನ್ನಾಗಿ ಕೇಳಿಸಿಕೊಳ್ಳುತ್ತಿದ್ದಾನೆ.   ಮೊದಲಿಗಿಂತ ಸ್ಪಷ್ಟವಾಗಿ  ಮಾತನಾಡುತ್ತಾನೆ. 

ಹಾಂ. ಒಂದು ವಿಷಯವನ್ನ ನಾನಿಲ್ಲಿ ಹೇಳಲೇಬೇಕು. ಕಾಕ್ಲಿಯರ್​ಇಂಪ್ಲಾಂಟ್​ಆದಮೇಲಿನ 2 ವರ್ಷಗಳ ಕಾಲ ಆ ಮಗುವಿನ ಪಾಲಿಗೆ ತುಂಬಾ ಮುಖ್ಯ. ಆ ಸಮಯದಲ್ಲಿ ನಾವು ಅದೆಷ್ಟರ ಮಟ್ಟಿಗೆ ಮಕ್ಕಳ ತಲೆಯೊಳಗೆ ಶಬ್ಧಗಳನ್ನು, ವಾಕ್ಯಗಳನ್ನು ತುಂಬುತ್ತೀವೋ ಅಷ್ಟು ಒಳ್ಳೆಯದು. ಹಸಿ ಮಣ್ಣಿನ ಮುದ್ದೆಯ ಮೇಲೆ ಅಚ್ಚೊತ್ತಿದಂತೆ..! ಇದಕ್ಕೆ ಪಿ.ಎ.ಡಿ.ಸಿ ಶಾಲೆಯ ಪದ್ಧತಿಯೇ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. ಅಲ್ಲಿಯ ಕಲಿಕಾ ಪದ್ಧತಿಯ ಶಿಸ್ತಿಗೆ ನಮ್ಮನ್ನು ನಾವು ಒಪ್ಪಿಸಿಕೊಂಡುಬಿಟ್ಟರೆ ನಮ್ಮ ಮಕ್ಕಳಿಗೆ ನಾವು ಕಲಿಸಿಯೇ ಕಲಿಸುತ್ತೇವೆ.  ಅಲ್ಲಿ ಮಗುವಿಗೆ ಕಲಿಸದೇ ಬೇರೆ ದಾರಿಯೇ ಇಲ್ಲ.  ಇಂಪ್ಲಾಂಟ್​ಆದಮೇಲಿನ ಒಂದೆರಡು ವರ್ಷ ಇಂಥ ಕಠಿಣ ಶಿಸ್ತಿನ ವಾತಾವರಣ ಮಗುವಿಗೂ ಬೇಕು, ಮಗುವಿನ ಪಾಲಕರಿಗೂ ಬೇಕು.  ಸರ್ಜರಿಯ ನಂತರ ಒಂದು ವರ್ಷಗಳ ಕಾಲ ಪಿ.ಎ.ಡಿ.ಸಿಯಲ್ಲಿಯೇ ಅಥರ್ವನಿಗೆ ನಾನು ಕಲಿಸಿದ್ದರಿಂದಲೇ, ಗಟ್ಟಿ ತಳಪಾಯ ಅಥರ್ವನಿಗೆ ಸಿಕ್ಕಿದೆ.   ಮಗುವೊಂದಿಗಿರುವ ಪ್ರತಿ ಕ್ಷಣವನ್ನೂ ಪಾಠಕ್ಕೆ ಬಳಸಿಕೊಳ್ಳುವುದು ಹೇಗೆ ಎಂಬ ವಿಧಾನ ಅಲ್ಲಿಂದಲೇ ನನಗೆ ಅರ್ಥವಾಗಿದೆ.  

ಚಿಕ್ಕ ವಯಸ್ಸಿನಲ್ಲಿಯೇ ಕಾಕ್ಲಿಯರ್​ಇಂಪ್ಲಾಂಟ್ ಮಾಡಿಸಿಕೊಂಡು ಚೊಕ್ಕವಾಗಿ ಮಾತನಾಡುವ ಮಕ್ಕಳನ್ನು, ಅವರ ಪಾಲಕರನ್ನೂ ಮಾತನಾಡಿಸುವ ಕಾರ್ಯಕ್ರಮವನ್ನು ಕಾಕ್ಲಿಯರ್​ಕಂಪನಿಯವರು ಆಗಾಗ ನಡೆಸಿಕೊಡುತ್ತಿರುತ್ತಾರೆ.  ‘ಸೂಪರ್​ಹೀರೋ ಸಿರೀಸ್​’ ಎಂಬ ಹೆಸರಿನಲ್ಲಿ ನಮ್ಮ ದೇಶದ ಎಲ್ಲಾ ಭಾಷೆಗಳಲ್ಲಿಯೂ ಈ ಕಾರ್ಯಕ್ರಮ ನಡೆಯುತ್ತದೆ.  ಒಮ್ಮೆ ಇದೇ ಕಾರ್ಯಕ್ರಮದ ಕನ್ನಡ ಅವತರಣಿಕೆಯಲ್ಲಿ ಅಥರ್ವನಿಗೂ ‘ಸೂಪರ್​ಹೀರೋ’ ಆಗುವ ಅವಕಾಶ ನೀಡಿದ್ದರು. ಕಾಕ್ಲಿಯರ್​ಕಂಪನಿಯವರ ಫೇಸ್​ಬುಕ್​ಮತ್ತು ಇನ್​ಸ್ಟಾಗ್ರಾಮ್​ಪೇಜ್​ನಲ್ಲಿ ನಡೆದ ಲೈವ್​ಕಾರ್ಯಕ್ರಮದಲ್ಲಿ, ಆವತ್ತಿನ ಸೂಪರ್​ಹೀರೋ ಆಗಿದ್ದ ಅಥರ್ವ, ಚೆಂದವಾಗಿ ಮಾತನಾಡಿ ಅವರೆಲ್ಲರ ಮೆಚ್ಚುಗೆ ಗಳಿಸಿದ್ದ. ಅಲ್ಲಿ ಪಾಲ್ಗೊಂಡ  ನಮ್ಮಂಥ ಹಲವು ಪಾಲಕರಿಗೆ ಸ್ಪೂರ್ತಿಯಾದ.  ತಮ್ಮ ಮಗುವೂ ಇಂಪ್ಲಾಂಟ್​ನಂತರ ಇವನ ಹಾಗೆಯೇ ಮಾತನಾಡಬಹುದು ಎಂಬ ಆಶಾಭಾವ ತುಂಬಿದ.  ಇದಕ್ಕಿಂದ ಖುಷಿಯ ಸಂಗತಿ ನನ್ನ ಪಾಲಿಗೆ ಇನ್ನೇನಿರಬಹುದು ಹೇಳಿ ?. 

ಈಗ ನನ್ನ ಮಗನಿಗೆ 6 ವರ್ಷ.  ಶ್ರೀ ರಾಜೇಶ್ವರಿ ಮಾಂಟೆಸರಿ ಎಂಬ ಶಾಲೆಯಲ್ಲಿ, ಅವನದೇ ವಯಸ್ಸಿನ ಮಕ್ಕಳ ಜತೆ ಎಮ್​.3 (ಯೂ.ಕೆ.ಜಿ) ಹಂತದಲ್ಲಿ ಓದುತ್ತಿದ್ದಾನೆ.  ಹಾವ, ಭಾವ, ಮಾತು, ಆಲೋಚನೆ, ಚಟುವಟಿಕೆ ಎಲ್ಲವೂ ಸಾಮಾನ್ಯ ಮಕ್ಕಳಂತೆಯೇ ಇದೆ. ಅಥರ್ವ ಕಿವಿಯಲ್ಲಿ ಧರಿಸಿರುವ ಶ್ರವಣ ಸಾಧನ ಗಮನಿಸದಿದ್ದರೆ, ಅವನೊಬ್ಬ ಕಿವುಡು ಮಗು ಎಂಬ ವಿಷಯ ಯಾರಿಗೂ ತಿಳಿಯದಷ್ಟರ ಮಟ್ಟಿಗೆ ಅಥರ್ವ ಸಾಮಾನ್ಯ ಮಗುವಾಗಿದ್ದಾನೆ.

ಅಥರ್ವ ಒಬ್ಬ ಶಿಲ್ಪ. ಅವನನ್ನ ಕಡೆದ ಶಿಲ್ಪಿಗಳು ನಾವು. ಒಂದು ಶಿಲ್ಪ ಸಿದ್ಧಗೊಳ್ಳುವಾಗ  ಶಿಲೆಯು ಆ ಶಿಲ್ಪಿಯ ಕೈಯ್ಯಲ್ಲಿ ಅದೆಷ್ಟು ಉಳಿಪೆಟ್ಟು ತಿಂದಿರುತ್ತೋ ನಮಗೆ ತಿಳಿಯದು, ಹಾಗೇ ಅಥರ್ವನೆಂಬ ಶಿಲೆಯನ್ನು ಶಿಲ್ಪವಾಗಿಸುವ ಹಾದಿಯಲ್ಲಿ ನಾನು ಅವನಿಗೆ ಸಾಕಷ್ಟು ಪೆಟ್ಟು ಕೊಟ್ಟಿದ್ದೇನೆ. ನೋಯಿಸಿದ್ದೇನೆ. ಕಣ್ಣೀರು ಹಾಕಿಸಿದ್ದೇನೆ.  ಸಹಜವಾಗಿ ಆಡಿಕೊಂಡು, ಮನೆಯವರೆಲ್ಲರಿಂದ ಮುದ್ದು ಮಾಡಿಸಿಕೊಂಡು ಬೆಳೆಯಬೇಕಾದ ಸಮಯದಲ್ಲಿ ಅವನು ಶಾಲೆಯಲ್ಲಿದ್ದ.  ಆಟವಾಡುವ ಸಮಯದಲ್ಲಿ ಅವನು ಪಾಠ ಓದುತ್ತಿದ್ದ.  ಅಮ್ಮನ ಒತ್ತಾಯಕ್ಕೆ ಕಟ್ಟುಬಿದ್ದು ಗಂಟಲಿನಿಂದ ಮಾತು ಹೊರಡಿಸುವ ಹಠ ಸಾಧನೆಯಲ್ಲಿದ್ದ. ಅವನೆಲ್ಲ ಕಷ್ಟಕ್ಕೆ ಬಹುಬೇಗ ಪ್ರತಿಫಲ ಸಿಕ್ಕಿದ್ದು ಈಗ ಇತಿಹಾಸ. 

ಅಥರ್ವನ ಈ ಪರಿವರ್ತನೆಗೆ ಕಾರಣೀಕರ್ತರು ಹಲವರು. ಈ ಹಾದಿಯಲ್ಲಿ  ಸಹೃದಯರ ಸಹಾಯ ಹಸ್ತ ನಮಗೆ ಸಿಕ್ಕಿದೆ, ಹಿರಿಯರ ಆಶೀರ್ವಾದ ದಕ್ಕಿದೆ,  ಪಿ.ಎ.ಡಿ.ಸಿ ಶಾಲೆಯ ಕಲಿಕಾ ಪದ್ಧತಿ ನಮ್ಮ ಕೈ ಹಿಡಿದಿದೆ, ಸ್ಕೈ ಸ್ಫೀಚ್​ಅಂಡ್​ಹಿಯರಿಂಗ್​ಕೇರ್​ಸಂಸ್ಥೆಯ ಸಿಬ್ಬಂದಿಗಳೆಲ್ಲರ ಸಲಹೆ – ಸಹಕಾರ ದೊರೆತಿದೆ, ಹಾಗೆಯೇ  ಸದಾ ನಮ್ಮನ್ನು ಪ್ರೋತ್ಸಾಹಿಸುತ್ತಲೇ ಇರುವ ನಮ್ಮ ಕುಟುಂಬ ನಮ್ಮೊಂದಿಗೆ ಬೆನ್ನೆಲುಬಿನಂತಿದೆ.  ಅಥರ್ವನಿಗೆ ಮಾತು ಕಲಿಸುವ ಛಲವನ್ನು ನಮ್ಮಲ್ಲಿ ತುಂಬಿದ ತಮ್ಮೆಲ್ಲರಿಗೂ ಹೃದಯದಳಾದ ಕೃತಜ್ಞತೆಗಳು.

ಜೀವನದ ದೀರ್ಘ ಹಾದಿಯಲ್ಲಿ ಅಥರ್ವ ಈಗಷ್ಟೇ ಹೆಜ್ಜೆ ಇಡಲು ಆರಂಭಿಸಿದ್ದಾನೆ. ಮುಂದೆ ಅವನು ಸಾಧಿಸುವುದು ಬೆಟ್ಟದಷ್ಟಿದೆ. ಅದೆಲ್ಲದಕ್ಕೂ ತಮ್ಮೆಲ್ಲರ ಆಶೀರ್ವಾದ, ಹಾರೈಕೆ ಬೇಡುತ್ತಾ ಅಥರ್ವ ಬೆಳೆದು ಬಂದ ಈ ಕಥೆಯನ್ನ ಇಲ್ಲಿಗೆ ಮುಕ್ತಾಯಗೊಳಿಸುತ್ತೇನೆ. 

ಧನ್ಯವಾದಗಳು. 

| ಮುಕ್ತಾಯ |

‍ಲೇಖಕರು Admin

December 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Sudha Adukal

    ಮುಗಿಯುವಾಗ ಒಂಥರಾ ನಿರಾಳವಾಯಿತು. ನಿಮ್ಮ ಬರಹ ಅದೆಷ್ಟು ಪ್ರಭಾವಿಸಿತ್ತು ಅಂದರೆ ನಾನೇ ಅಥರ್ವನನ್ನು ಬೆಳೆಸುತ್ತಿದ್ದೆನೋ ಎಂಬಷ್ಟು. ಅಥರ್ವ ಚೆನ್ನಾಗಿ ಬೆಳೆಯಲಿ. ವಿಜ್ಞಾನಿಯಾಗಿ ಇಂತಹ ಮಕ್ಕಳ ಅಭಿವೃದ್ಧಿಗೆ ಹೊಸ ಸಂಶೋಧನೆಗಳನ್ನು ಮಾಡಲಿ. ಶುಭಾಶಯಗಳು ಅಮೃತಾ ಮತ್ತು ವಿನಯ್

    ಪ್ರತಿಕ್ರಿಯೆ
  2. H N Ananda

    Superb narration. The parents deserve all the kudos for their efforts. One of the best narrations I have read. Thanks Amrutha.

    ಪ್ರತಿಕ್ರಿಯೆ
  3. Venkat

    ಹೃದಯಸ್ಪರ್ಶಿ ಬರಹ ; ಅಂಕಣ ಚೆನ್ನಾಗಿ ಮೂಡಿ ಬಂದಿತು . ಧನ್ಯವಾದಗಳು

    ಪ್ರತಿಕ್ರಿಯೆ
  4. ಲಲಿತಾ ಸಿದ್ಧಬಸವಯ್ಯ

    ಒಂದೂ ಬಿಡದೆ ಎಲ್ಲಾ ‌ಕಂತುಗಳನ್ನು ಓದಿದೆ. ಅನೇಕ ಕಡೆ ತಡೆದರೂ ಕಣ್ಣುಗಳು ತುಂಬುತ್ತಿದ್ದವು. ನಿಮ್ಮ ಸಹನೆ, ಪ್ರೀತಿ‌ ಮತ್ತು ಮಗನನ್ನು ಸಾಮಾನ್ಯನನ್ನಾಗಿಸಲು ಪಟ್ಟ ಶ್ರಮ ಶ್ರದ್ಧೆ ಎಲ್ಲವೂ ಅನುಕರಣೀಯ. ಅಥರ್ವನಿಗೆ ಆಯುರಾರೋಗ್ಯಗಳು ವೃದ್ಧಿಸಿ ಯಶಸ್ವಿ ಜೀವನ ಅವನದ್ದಾಗಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: