ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮೃತಮತಿ ಪ್ರಲಾಪ

ಭಾರ್ಗವಿ ಏನ್ ಎ

ಹಣೆಬರಹವೇ ಇಲ್ಲದ ಕಳೇಬರವೊಂದು
ಕೊಳೆತು, ನಾರುತ್ತಿದೆ ಅಂತಃಪುರದ
ಕೋಣೆಯಲಿ…
ಹೊರಬಂದ ಆತ್ಮವದು ರೋದಿಸುತ್ತಿದೆ! ಕೂತು
ತನ್ನೊಡಲ ಪಕ್ಕದಲಿ….
ಮುನಿಸು ತಾಳದೆ ಹೊರಟುನಿಂತಿತು
ಒಡಲಿಲ್ಲದ ‘ಹೆಣ್ಣು’…
ಕರ್ತಾರನ ಸನಿಹ.. ನ್ಯಾಯ ತೀರ್ಮಾನಕೆ..
ಸ್ವಾರ್ಥದಲಿ ಪರಮಾರ್ಥ ರೂಪಿಸಲೇಕೆನ್ನ
ಬಲಿಯು?..
ಚಕ್ರವರ್ತಿಯ ಪಟ್ಟ ‘ಪುರುಷಮತಿಗೆ’
ವಕ್ರರೂಪದ ಕೂಪ ‘ಅಮೃತಮತಿಗೆ’
ಮರೆಸಿತೆ ಕರತಲಗಳ ಕಲರವ…

ಮುನ್ನಿರುಳು ಎನಗಿತ್ತ ವಚನವ..
ಹಸಿವಿಲ್ಲದಾ ಭೋಗ, ಕಸವಾದ ಭಾಗ್ಯ..
‘ಕಳಾನಿಧಿ’ಯಲ್ಲ ಕಳಂಕಿತೆ ಯ ಭಾವ
ಸಿಕ್ಕ ಭಾಗ್ಯವನೇ ಬೊಗಸೆಯಲಿ…
ಹಿಡಿದು ರಮಿಸುವಾ ಮುನ್ನಾ…
ಬಿರುಗತ್ತಿ ಸೀಳಿದೆಯೆನ್ನ ಬೆನ್ನಾ…
ಕುಟಿಲತೆಯ ಕತೆಯಲ್ಲಿ
ಜಟಿಲತೆಯ ಎಣೆದು.. ನಡೆದಿದೆ ಮನದಲಿ
ಕೊಲೆಯ ಹುನ್ನಾರ…
‘ಗಾನ’ ರೂಪದ ‘ವಿಧಿ’ಗೆನ್ನ ವಿಳಾಸ ನೀಡಿ…
‘ರಾಗ’ದಿಂ ಅನುರಾಗದ ಕೂಪ ಮಾಡಿ…
ಹರಿವ ನೀರ ಹಿಡಿದು ‘ನೀರ್ಗಲ್ಲ’ ಮಾಡಿದೆ…
ನೀರಾಗಿ ಹರಿದ ನಿರ್ಮಲೆಯು ನಾನಲ್ಲ…
ಮಾಸ್ತಿಕಲ್ಲಾಗಿ ನಾ ನಿಲ್ಲಲಿಲ್ಲ…
ಆಸೆಗಳ ಬಸರು ಹಡೆಯುವ ಮುನ್ನಾ..
ನಿನ್ನಿಚ್ಛೆಯಾ ಪಾಶ ಭಿಗಿಯಿತೆನ್ನ…
ಕುರೂಪವೆನ್ನ ಮೇಲೆರಗಿ ಕುರುಳು ಹಿಡಿದಿತ್ತು…

ಕುರುಳಿಗೆ ಕರುಳಿಲ್ಲ, ಕಣ್ಣೀರು ಬರಲಿಲ್ಲ…
ನೀ ಎನ್ನ ಕಣ್ ತೆರದು ನೋಡಲೇ…. ಇಲ್ಲ…
ನೋವುಗಳೋ, ಒಲವುಗಳೋ…
ಮೈಯಮೇಲಿದೆ ಅದರ ಕುರುಹು..
ಯಾವ ಪುರುಷನ ‘ಯಶಸ್ತಿಲಕ’ ಕೆ..
ಬಸಿದೆ ಎನ್ನ ರಕುತ…
ಮುನ್ನವೇ ಕೇಳಿದ್ದರೆ ಎನ್ನೊಡಲ
ಬಸಿದು ಕೊಡುತಿದ್ದೆ ನಗುತಾ…
ಇನ್ನೆಷ್ಟು ಬೇಕು ಹೆಣ್ಣುಗಳ ಬಲಿದಾನ..
ನಿಮ್ಮ ಸಾಧನೆ ಎನಗೆ ಹಿರಿದಲ್ಲ…
ಕಾಡು , ಮೇಡುಗಳಲೆದರೂ…
‘ಸೀತೆ ‘ ಸತಿಸಾದ್ವಿ ಎನ್ನಲಿಲ್ಲ…
ಸೈರಂದ್ರಿ ಸುಖವನರಿತಿಲ್ಲ…
ಪುರುಷೋತ್ತಮ ನೀನು… ಪರಕಾಮಿನಿ ನಾನು…
ಈ ಮೋಸದ ಹುನ್ನಾರ ಅರಿತಿಲ್ಲ ನಾನು..
ವೈರಾಗ್ಯದಲಿ – ಅನುರಾಗವ ಬೆಸೆದೆ.. ಅದರೊಳು
ಅಭಾಗ್ಯಳನ್ನೇಕೆ ಹೊಸೆದೆ?..
ದಶಮುಖ – ದುರ್ಯೋದನರಿಗಿರುವ ಕರುಣ..

ನನಗಿಲ್ಲದಿರುವುದು ಬಹು ಧಾರುಣ…
ನಿನ್ನ ಸೃಷ್ಟಿಯೇ ನಾನು,, ನಿನ್ನ ಮಾನಸಪುತ್ರಿ..
ಎಲ್ಲಿಯೂ ಸಿಗಲಿಲ್ಲ ನನಗಿದಕೆ ಖಾತ್ರಿ..
ಆತ್ಮನಿರ್ಭರಳಿವಳು, ಆತ್ಮದುರ್ಬಲರಲ್ಲಿ…
ಕೇಳುತಿಹಳು…
ಬದುಕಿನಾ ಕತ್ತಲಲಿ ಕನಲಿ, ಕೂತಿದ್ದ ನನಗೇಕೆ ಬಳಿದೆ..
ಬಿಳಿಯಬಣ್ಣ

‍ಲೇಖಕರು Admin

23 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading